ಮಂಗಳವಾರ, ಜನವರಿ 31, 2023
27 °C

ನಿನ್ನೊಲುಮೆಯಿಂದಲೇ ಪ್ರಶಸ್ತಿ - ಒಲುಮೆ ಕವಿಗೆ ಒಲಿದವಳಿಗೂ ಸಮ್ಮಾನ

ಶರತ್‌ ಹೆಗ್ಡೆ Updated:

ಅಕ್ಷರ ಗಾತ್ರ : | |

ನಿನ್ನೊಲುಮೆಯಿಂದಲೇ ಬಾಳು ಬೆಳಕಾಗಿರಲು ಚಂದ್ರಮುಖಿ ನೀನೆನಲು ತಪ್ಪೇನೆ?...

ಕೆ.ಎಸ್‌. ನರಸಿಂಹಸ್ವಾಮಿ ಅವರ ಕಾವ್ಯದ ಅದ್ಭುತ ಸಾಲುಗಳಲ್ಲಿ ಇದೂ ಒಂದು. ಈ ಸಾಲು, ಕವಿಯ ಬಾಳು ಬೆಳಗಿಸಿದ ಶಕ್ತಿಯನ್ನು ಗುರುತಿಸುವಲ್ಲೂ ಯಶಸ್ವಿಯಾಗಿದೆ. ಕವಿಗೇನೋ ಪ್ರಶಸ್ತಿ, ಪುರಸ್ಕಾರಗಳಿವೆ. ಆದರೆ, ಕವಿಯನ್ನು ‘ಸಹಿಸಿಕೊಂಡ’ ಅವರ ಪತ್ನಿಗೇನಿದೆ? ಆ ಚಿಂತನೆ ಮೊಳೆತಾಗಲೇ ಹುಟ್ಟಿಕೊಂಡದ್ದು ‘ನಿನ್ನೊಲುಮೆಯಿಂದಲೇ’ ಹೆಸರಿನ ಪ್ರಶಸ್ತಿ. 

ಹೀಗೊಂದು ಆಲೋಚನೆ ಹೊಳೆದಾಗ ನರಹಳ್ಳಿ ಬಾಲಸುಬ್ರಹ್ಮಣ್ಯ, ಕಿಕ್ಕೇರಿ ಕೃಷ್ಣಮೂರ್ತಿ ಸಹಿತ ಹಲವು ಸಮಾನ ಮನಸ್ಕರು ಸೇರಿ ಅದನ್ನು ಅನುಷ್ಠಾನಕ್ಕೆ ತರುವ ಕಾರ್ಯಕ್ಕೆ ಮುಂದಾದರು. ಅದರ ಪರಿಣಾಮವೇ ಕೆ.ಎಸ್.ನರಸಿಂಹಸ್ವಾಮಿ ಟ್ರಸ್ಟ್‌ನ ಅಡಿ ಕೆಎಸ್‌ನ ಅವರ ಪತ್ನಿ ವೆಂಕಮ್ಮ ಅವರ ಹೆಸರಿನಲ್ಲಿ ಪ್ರಶಸ್ತಿಯನ್ನು ನೀಡುವ ಪರಿಪಾಟ ಆರಂಭವಾಗಿರುವುದು. 

ಏನಿದು ನಿನ್ನೊಲುಮೆಯಿಂದಲೇ?

ಕೆ.ಎಸ್‌.ನ. ಅವರೇ ಹಲವಾರು ಬಾರಿ ‘ನಾನೊಬ್ಬ ಕುಟುಂಬ ಕವಿ. ಏಕೆಂದರೆ ಹೆಚ್ಚಿನ ಪ್ರೇಮ ಕವಿತೆಗಳೆಲ್ಲ ಮದುವೆಯಾದ ಬಳಿಕ ಬರೆದಿರುವಂಥವು. ಇವು ಕುಟುಂಬಕ್ಕೆ ಅನ್ವಯಿಸುವ ಕವಿತೆಗಳು’ ಎಂದಿದ್ದರಂತೆ. ಕುಟುಂಬವೆಂದರೆ ಅವರ ಪ್ರಕಾರ ವಿಶ್ವವೇ ಒಂದು ಕುಟುಂಬ. ದೇವರು ತಂದೆ. ಭೂಮಿ ತಾಯಿ, ಮನುಷ್ಯ ಮಗ. ಇದು ಅವರ ಭಾವ ವೈಶಾಲ್ಯ ಎಂದು ನೆನಪಿಸಿದರು ಕವಿ ಬಿ.ಆರ್‌. ಲಕ್ಷ್ಮಣರಾವ್‌. 

‘ಕವಿಗೆ ಪತ್ನಿಯ ಒಲುಮೆಯೇ ಆಧಾರ. ಇದುವರೆಗೆ ಕವಿಯ ಪತ್ನಿಯ ಹೆಸರಿಗೆ ಯಾವ ಪ್ರಶಸ್ತಿಯೂ ಇರಲಿಲ್ಲ. ಈಗ ಪ್ರೇಮಕವಿಯ ಪತ್ನಿಯ ಹೆಸರಿನ ಪ್ರಶಸ್ತಿಯನ್ನು ಹಾಲಿ ಕವಿಯ ಪತ್ನಿಗೆ ನೀಡುತ್ತಿರುವ ಉದಾಹರಣೆ ದೇಶದಲ್ಲಿ ಬೇರೆಲ್ಲಿಯೂ ಇಲ್ಲ. ಅಂಥ ಅಪರೂಪದ ಪ್ರಶಸ್ತಿ ಇದು’ ಎನ್ನುತ್ತಾ ಕೆಎಸ್‌ನ ಒಡನಾಟ, ವೆಂಕಮ್ಮ ಅವರ ಜೀವನ ಪ್ರೀತಿಯನ್ನು ನೆನಪಿಸಿಕೊಂಡರು ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಕಿಕ್ಕೇರಿ ಕೃಷ್ಣಮೂರ್ತಿ.

ಪ್ರಶಸ್ತಿಗೆ ‘ಮೈಸೂರು ಮಲ್ಲಿಗೆ’ಯ ಕವಿಯ ಪತ್ನಿಯ ಹೆಸರು. ನನಗೆ ‘ಜಾಜಿ ಮಲ್ಲಿಗೆ ಕವಿ’ ಅಂತ ಕರೀತಾರೆ. ಈಗ ಮೈಸೂರು ಮಲ್ಲಿಗೆ ಕವಿ ಪತ್ನಿಯ ಹೆಸರಿನ ಪ್ರಶಸ್ತಿ, ಜಾಜಿ ಮಲ್ಲಿಗೆ ಕವಿಯ ಪತ್ನಿಗೆ ಸಲ್ಲುತ್ತಿದೆ. ಇದಕ್ಕಿಂತ ಖುಷಿ ಬೇರೇನಾದರೂ ಇದೆಯೇ ಎಂದು ಪ್ರಶ್ನಿಸಿದರು ಕವಿ ಸತ್ಯಾನಂದ ಪಾತ್ರೋಟ. ಅವರ ಪತ್ನಿ ಸಮತಾ ಪಾತ್ರೋಟ ಅವರು 2020–21ನೇ ಸಾಲಿನ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. 

‘ಕವಿ ಹೆಂಡ್ತಿಗೂ ಪ್ರಶಸ್ತಿ ಕೊಡ್ತಾರಂತ ಗೊತ್ತಿರ್ಲಿಲ್ರೀ. ನಂಗಂತೂ ಬಾಳ ಸಂತೋಷ ಆಗೇದ. ನನಗಿಂತಲೂ ನನ್ನ ಸ್ನೇಹಿತೆಯರು, ಹಿತೈಷಿಗಳಿಗೆ ತುಂಬಾ ಖುಷಿ ಆಗೇದ’ ಎಂದರು ಸಮತಾ ಪಾತ್ರೋಟ.

2021-22 ನೇ ಸಾಲಿನ ಪ್ರಶಸ್ತಿಗೆ ಗಿರಿಜಾ ಲಕ್ಷ್ಮಣರಾವ್ (ಕವಿ ಲಕ್ಷ್ಮಣರಾವ್‌ ಅವರ ಪತ್ನಿ) ಅವರು ಪಾತ್ರರಾಗಿದ್ದಾರೆ. ‘ನಾನು ಈ ಪ್ರಶಸ್ತಿಗೆ ಆಯ್ಕೆಯಾದದ್ದು ತುಂಬಾ ಹೆಮ್ಮೆ ಅನಿಸುತ್ತಿದೆ. ವೆಂಕಮ್ಮ ಅವರ ಹೆಸರಿನ ಪ್ರಶಸ್ತಿ ನನ್ನ ಪಾಲಿಗೆ ಆಶೀರ್ವಾದ ಎಂದೇ ಭಾವಿಸುತ್ತೇನೆ’ ಎಂದು ಖುಷಿ ಹಂಚಿಕೊಂಡರು ಗಿರಿಜಾ. 

ಚಂದ್ರಶೇಖರ ಕಂಬಾರ ಅವರ ಪತ್ನಿ ಸತ್ಯಭಾಮಾ, ಎಸ್‌.ಜಿ. ಸಿದ್ದರಾಮಯ್ಯ ಅವರ ಪತ್ನಿ ಪ್ರೇಮಲೀಲಾ, ಜಿ.ಎಸ್‌. ಸಿದ್ದಲಿಂಗಯ್ಯ ಅವರ ಪತ್ನಿ ರಮಾ ಕುಮಾರಿ ಅವರಿಗೆ ಈ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಪ್ರಶಸ್ತಿಯು ₹10 ಸಾವಿರ ನಗದು, ರೇಷ್ಮೆಸೀರೆ ಮತ್ತು ಪ್ರಶಸ್ತಿ ಫಲಕವನ್ನು ಒಳಗೊಂಡಿದೆ. ಈ ಬಾರಿಯ ಪ್ರಶಸ್ತಿ ಪ್ರದಾನ ಸಮಾರಂಭ ಡಿ. 10ರಂದು ಸಂಜೆ 4 ಗಂಟೆಗೆ ಬೆಂಗಳೂರಿನ ಶೇಷಾದ್ರಿ ರಸ್ತೆಯ (ಜೈನ್ ಯುನಿವರ್ಸಿಟಿ) ಸಿ.ಎಂ.ಎಸ್ ಬಿಸಿನೆಸ್ ಸ್ಕೂಲ್‌ನಲ್ಲಿ ನಡೆಯಲಿದೆ. ಸಮಾರಂಭದಲ್ಲಿ ಕೆ.ಎಸ್‌.ನ ಗೀತಗಾಯನವನ್ನೂ ಆಸ್ವಾದಿಸಬಹುದು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು