ಮಂಗಳವಾರ, ಜನವರಿ 18, 2022
15 °C

'ಪ್ರಜಾವಾಣಿ’ ವರ್ಷದ ಸಾಧಕ ರವಿತೇಜ: ಹಾನಬಾಳ್‌ ಚಿಕ್ಕಿಗೆ ಬ್ರಾಂಡ್ ರೂಪ, 32 ಸ್ವಾದ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರಿನ ಕಾರ್ಪೊರೇಟ್ ಕಂಪನಿಗಳಲ್ಲಿ ದೊಡ್ಡ ಉದ್ಯೋಗದಲ್ಲಿದ್ದ ಸಕಲೇಶಪುರ ತಾಲ್ಲೂಕಿನ ಹಾನಬಾಳ್ ಗ್ರಾಮದ ರವಿತೇಜ ಈಗ 25 ತಮ್ಮ ಹುಟ್ಟೂರಿನಲ್ಲಿ ‘ಹಾನಬಾಳ್ ಚಿಕ್ಕಿ’ ಎಂಬ ಕೈಗಾರಿಕೆ ತೆರೆದು ಉದ್ಯಮಿಯಾಗಿದ್ದಾರೆ.

ಎಲೆಕ್ಟ್ರಾನಿಕ್ ಆ್ಯಂಡ್ ಕಮ್ಯುನಿಕೇಷನ್‌ನಲ್ಲಿ ಡಿಪ್ಲೊಮಾ ಮುಗಿಸಿದ ರವಿತೇಜ, ಬೆಂಗಳೂರಿನತ್ತ ಮುಖ ಮಾಡಿದರು. ವಿದ್ಯಾಭ್ಯಾಸ ಮುಂದುವರಿಸುವ ಜೊತೆಗೆ ಹಂತ–ಹಂತವಾಗಿ ವೃತ್ತಿಯಲ್ಲಿ ಮೇಲೆ ಬಂದರು. ಬಾಷ್ ಕಂಪನಿಯಲ್ಲಿ ವ್ಯವಸ್ಥಾಪಕರಾಗುವ ಮಟ್ಟಕ್ಕೆ ಬೆಳೆದರು. ವಿ ಗಾರ್ಡ್ ಇಂಡಸ್ಟ್ರೀಸ್‌ನಲ್ಲೂ ರಾಜ್ಯಮುಖ್ಯಸ್ಥರಾಗಿ ಕೆಲಸ ಮಾಡಿದ್ದಾರೆ.

ಸ್ವಂತ ಕಂಪನಿ ತೆರೆಯಬೇಕೆಂದು ಮನದೊಳಗೆ ಮೊಳೆತಿದ್ದ ಕನಸನ್ನು ಕಡ್ಲೆ ಮಿಠಾಯಿ (ಚಿಕ್ಕಿ) ತಯಾರಿಸುವ ಕೈಗಾರಿಕೆಯನ್ನು ತೆರೆಯುವ ಮೂಲಕ ಸಾಕಾರಗೊಳಿಸಿದರು.

90ರ ದಶಕದ ಮಕ್ಕಳಿಗೆ ಬಲು ಇಷ್ಟದ ತಿನಿಸಾಗಿದ್ದ ಚಿಕ್ಕಿಯನ್ನು ಇಂದಿನ ಜಮಾನಕ್ಕೂ ವಿಭಿನ್ನವಾಗಿ ಪರಿಚಯಿಸುವ ಪ್ರಯತ್ನವನ್ನು ರವಿತೇಜ ಮಾಡಿದ್ದಾರೆ. ಕಡ್ಲೆ (ಶೆಂಗಾ) ಮತ್ತು ಬೆಲ್ಲ ಬಳಸಿ ತಯಾರಿಸುವ ಚಿಕ್ಕಿಗೆ ಮಾವು, ಹಲಸು, ಕಾಫಿ ಸೇರಿ 32 ರೀತಿಯ ರುಚಿ ನೀಡಿದ್ದಾರೆ.

‘ಶೆಂಗಾ ಮತ್ತು ಬೆಲ್ಲ ಬಳಸಿ ತಯಾರಿಸುವ ಚಿಕ್ಕಿ ಆರೋಗ್ಯಕರ ತಿನಿಸು. ಅದಕ್ಕೆ ಬ್ರ್ಯಾಂಡ್ ರೂಪ ನೀಡಿದ್ದರಿಂದ ಸಾಕಷ್ಟು ಬೇಡಿಕೆ ಬಂದಿದೆ. ಈ ಕಾರ್ಖಾನೆ ಜೊತೆಗೆ ಕೃಷಿಯಲ್ಲೂ ತೊಡಗಿಕೊಂಡಿದ್ದೇನೆ. ನೇರವಾಗಿ 25 ಜನರಿಗೆ ಉದ್ಯೋಗ ನೀಡಲು ಸಾಧ್ಯವಾಗಿದೆ. ಪರೋಕ್ಷವಾಗಿ ಹಲವರಿಗೆ ಉದ್ಯೋಗ ಸಿಕ್ಕಿದೆ. ವರ್ಷಕ್ಕೆ ₹1 ಕೋಟಿಗೂ ಹೆಚ್ಚು ವಹಿವಾಟು ನಡೆಸುತ್ತಿದ್ದು, ಅದರಲ್ಲಿ ಶೇ 10ರಿಂದ ಶೇ 15ರಷ್ಟು ಲಾಭ ಸಿಗುತ್ತಿದೆ’ ಎಂದು ರವಿತೇಜ ಹೇಳುತ್ತಾರೆ.‌

ಹೆಸರು: ರವಿತೇಜ
ವೃತ್ತಿ: ನವೋದ್ಯಮಿ (ಹಾನಬಾಳ್‌ ಚಿಕ್ಕಿ ಕಂಪನಿ)
ಸಾಧನೆ: ಹಾನಬಾಳ್ ಚಿಕ್ಕಿಗೆ ಬ್ರ್ಯಾಂಡ್ ರೂಪು ನೀಡಿ ಉದ್ಯಮಿಯಾದರು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು