ಬುಧವಾರ, 7 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive: ರಾಷ್ಟ್ರಕವಿ ಗೋವಿಂದ ಪೈಗಳ ‘ಗಿಳಿವಿಂಡು’!

ಸಾಹಿತ್ಯ – ಸಂಸ್ಕೃತಿಗೆ ತೆರೆದುಕೊಳ್ಳದ ನೆಲೆವೀಡು
Last Updated 16 ಸೆಪ್ಟೆಂಬರ್ 2020, 15:51 IST
ಅಕ್ಷರ ಗಾತ್ರ
PV Web Exclusive: ರಾಷ್ಟ್ರಕವಿ ಗೋವಿಂದ ಪೈಗಳ ‘ಗಿಳಿವಿಂಡು’!
ADVERTISEMENT
""

ಬಹುಶಃ ಎರಡು ರಾಜ್ಯಗಳು (ಕೇರಳ– ಕರ್ನಾಟಕ) ಒಂದಾಗಿ ‘ಮಹಾಕವಿ’ಯೊಬ್ಬರ ನಿವಾಸವನ್ನು ಸಾಹಿತ್ಯಿಕ– ಸಾಂಸ್ಕೃತಿಕ ಸಮುಚ್ಚಯವಾಗಿ ಅಭಿವೃದ್ಧಿಪಡಿಸಿದ ಉದಾಹರಣೆ ಇನ್ನೊಂದು ಇರಲಿಕ್ಕಿಲ್ಲ. ಕನ್ನಡ ಸಾರಸ್ವತ ಲೋಕದ ಮೊದಲ ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ ಅವರಿಗೆ ಈ ಮಾನ– ಸಮ್ಮಾನ ಸಿಕ್ಕಿದೆ!

ಆದರೆ,ಬಹುಭಾಷಾ (ಕನ್ನಡ– ಮಲಯಾಳಂ) ಸಾಮರಸ್ಯಕ್ಕೆ ಸಾಕ್ಷಿಯಾಗಿರುವ ಈ ಕವಿಮನೆ ‘ಗಿಳಿವಿಂಡು’ ಎಂದು ಹೊಸ ರೂಪ ಪಡೆದು, ಉದ್ಘಾಟನೆಗೊಂಡು ಮೂರು ವರ್ಷ ಕಳೆದರೂ (2017 ಜ. 19) ತನ್ನ ಉದ್ದೇಶ ಈಡೇರಿಸಿಕೊಂಡಿಲ್ಲ. ಅರ್ಥಾತ್‌, ಭಾಷೆ, ಸಾಹಿತ್ಯ, ಸಂಸ್ಕೃತಿ, ಧರ್ಮಗಳ ಸೌಹಾರ್ದತೆಗೆ ಹೆಸರಾಗಿದ್ದ ಪೈಯವರ ಮನೆಯನ್ನು ರಾಷ್ಟ್ರೀಯ ಸ್ಮಾರಕವಾಗಿ ಪರಿವರ್ತಿಸಿ, ಸಾಂಸ್ಕೃತಿಕ ಶ್ರದ್ಧಾಕೇಂದ್ರವನ್ನಾಗಿ ರೂಪಿಸುವ ಯೋಜನೆ ಇನ್ನೂ ಪೂರ್ಣಗೊಂಡಿಲ್ಲ. ಓದು, ಅಧ್ಯಯನ, ಸಂಶೋಧನೆ, ಸಾಹಿತ್ಯ, ಸಂಸ್ಕೃತಿಯ ಚಟುವಟಿಕೆಗೆ ತೆರೆದುಕೊಂಡಿಲ್ಲ.

ಸೆ. 6ರಂದು ಪೈ ಅವರ 57ನೇ ಪುಣ್ಯತಿಥಿ ಕಳೆಯಿತು. ಪೈ ಎಂದಾಕ್ಷಣ ನಮ್ಮೆದೆಯಲ್ಲಿ ಎಂದೆಂದಿಗೂ ಗುಣುಗುಣಿಸುವ ಹಾಡು ‘ತಾಯೆ ಬಾರ, ಮೊಗವ ತೋರ, ಕನ್ನಡಿಗರ ಮಾತೆಯೆ, ಹರಸು ತಾಯೆ, ಸುತರ ಕಾಯೆ. ನಮ್ಮ ಜನ್ಮದಾತೆಯೆ...’. ಅವರು ಬದುಕು– ಬರಹದ ಪರಿಣಾಮವಾಗಿ, ಅವರಿಗೆ ಸೂರು ನೀಡಿದ್ದ ಅಚ್ಚ ಕನ್ನಡದ ನೆಲ ‘ಮಂಜೇಶ್ವರ’ ಸಾರಸ್ವತ ಭೂಪಟದಲ್ಲಿ ಚಿರಸ್ಥಾಯಿ ಸ್ಥಾನ ಪಡೆದುಕೊಂಡಿದೆ.

ಮಂಜೇಶ್ವರದಲ್ಲಿರುವ ಅಜ್ಜನ ಮನೆಯಲ್ಲಿ (ತಾಯಿಯ ತಂದೆ) 1883ರಲ್ಲಿ ಹುಟ್ಟಿದ ಗೋವಿಂದ ಪೈ, ಅಲ್ಲಿ ಆರು ವಸಂತಗಳನ್ನು ಕಳೆದಿದ್ದಾರೆ. ಗೋವಿಂದ ಪೈ ನಿಧನರಾಗುವ ವೇಳೆಗೆ (1963) ಮಂಜೇಶ್ವರವನ್ನೊಳಗೊಂಡ ಕಾಸರಗೋಡು ಕೇರಳದ ಪಾಲಾಗಿತ್ತು. ಕರ್ನಾಟಕದಿಂದ ಹರಿದ ಸೆರಗು ಕಾಸರಗೋಡು ಮತ್ತೆ ಕರ್ನಾಟಕಕ್ಕೆ ಸೇರಬೇಕೆಂಬ ಅಲ್ಲಿನ ಕನ್ನಡಿಗರ ಹೋರಾಟ ಫಲ ನೀಡಲೇ ಇಲ್ಲ. ಕೇರಳ ಸರ್ಕಾರ 1984ರಲ್ಲಿ ಕಾಸರಗೋಡನ್ನು ಜಿಲ್ಲೆಯಾಗಿ ಘೋಷಿಸುವ ಮೂಲಕ, ಮತ್ತೆ ಕರ್ನಾಟಕಕ್ಕೆ ಸೇರುವ ಕನ್ನಡಿಗರ ಆಸೆಯೂ ಕಮರಿತ್ತು.

ಪೈ ಅವರ ನಿವಾಸವನ್ನು ಅಭಿವೃದ್ಧಿಪಡಿಸಲು ಕೇರಳ– ಕರ್ನಾಟಕ ಸರ್ಕಾರದ ಪ್ರತಿನಿಧಿಗಳನ್ನೊಳಗೊಂಡ ‘ಮಂಜೇಶ್ವರ ಗೋವಿಂದ ಪೈ ಸ್ಮಾರಕ ಸಮಿತಿ’ಯನ್ನು 1976ರಲ್ಲೇ ರಚಿಸಲಾಗಿತ್ತು. 14 ಮಂದಿಯ ಈ ಸಮಿತಿಯಲ್ಲಿ ತಲಾ ಏಳು ಮಂದಿಯಂತೆ ಕೇರಳ– ಕರ್ನಾಟಕದ ಪ್ರತಿನಿಧಿಗಳಿರಬೇಕು ಎಂಬ ನಿಯಮವಿದೆ. ಸಮಿತಿಗೆ ಕಾಸರಗೋಡು ಜಿಲ್ಲಾಧಿಕಾರಿ ಅಧ್ಯಕ್ಷ. ಆದರೆ, ಸರ್ಕಾರಿ ಯೋಜನೆ, ಅದರಲ್ಲೂ ಸಾಂಸ್ಕೃತಿಕ -ಭಾಷಿಕ ಯೋಜನೆಗಳು ಮುಂಚೂಣಿಯಲ್ಲಿ ನಿಂತು ಮುನ್ನಡೆಸುವ ನಾಯಕನಿಲ್ಲದೆ ಹೋದರೆ ನನೆಗುದಿಗೆ ಬೀಳುತ್ತವೆ ಎನ್ನುದಕ್ಕೆ ಈ ಯೋಜನೆಯೂ ಹೊರತಾಗಿರಲಿಲ್ಲ.

ಪೈ ಅವರ ನಿವಾಸವನ್ನು ಅಭಿವೃದ್ಧಿಪಡಿಸುವ ಯೋಜನೆ ಮೂರು ದಶಕಗಳಿಗೂ ಹೆಚ್ಚು ಕಾಲದಿಂದ ಕುಂಟುತ್ತಾ, ಏಳುಬೀಳುಗಳೊಂದಿಗೆ, ಟೀಕೆಗಳಿಗೆ ಆಹಾರವಾಗಿತ್ತು. ಹೀಗಾಗಿ, ಆ ಸಾಹಿತ್ಯ ತಪೋವನ, ಸಾಹಿತಿಗಳ ಯಾತ್ರಾಸ್ಥಳವಾಗಿದ್ದ ನಿವಾಸ ಜೀರ್ಣಾವಸ್ಥೆಗೆ ತಲುಪಿತ್ತು. ಸಮಿತಿ ಅಸಹಾಯಕವಾಗಿತ್ತು. ಆದರೆ, ಈ ಸಮಿತಿಯಲ್ಲಿ ಶಿವರಾಮ ಕಾರಂತ, ಕು.ಶಿ ಹರಿದಾಸ ಭಟ್ಟ ಅವರ ನಂತರದ ಹಲವು ವರ್ಷಗಳಿಂದ ಕರ್ನಾಟಕದ ಪ್ರತಿನಿಧಿಗಳು ಯಾರೂ ಇರಲಿಲ್ಲ ಎನ್ನುವುದು ವಿಪರ್ಯಾಸ.

ಮಂಜೇಶ್ವರದಲ್ಲಿ ಗೋವಿಂದ ಪೈ ಅವರ ಹೆಸರಿನಲ್ಲಿ ಸ್ಮಾರಕ ನಿರ್ಮಿಸಲು ಕುಟುಂಬಸ್ಥರು ಅವರ ಮನೆ ಇದ್ದ 72 ಸೆಂಟ್ಸ್ ಜಾಗವನ್ನು ಸರ್ಕಾರಕ್ಕೆ ಬಿಟ್ಟುಕೊಟ್ಟಿದ್ದರು. ಆ ಜಾಗದ ಸಮೀಪದಲ್ಲಿದ್ದ 1.10 ಎಕರೆಯನ್ನು ಗೋವಿಂದ ಪೈ ಸ್ಮಾರಕ ಕಾಲೇಜು ನಿರ್ಮಿಸಲು ನೀಡಿದ್ದರು. ಅಲ್ಲಿ ಪೈಯವರ ಸ್ಥಾಪನೆಯಾದ ಕಾಲೇಜು ಬಳಿಕ ಸ್ಥಳಾಂತರಗೊಂಡ ಕಾರಣ ಆ ಜಾಗವೂ ಸರ್ಕಾರದ ಪಾಲಾಯಿತು. ಈಗ ಒಟ್ಟು ಲಭ್ಯ ಇರುವ 1.82 ಎಕರೆ ಜಾಗದಲ್ಲಿ ಸ್ಮಾರಕದ ಸಂಕೀರ್ಣ ತಲೆಎತ್ತಿದೆ.

ಪೈಗಳ 122ನೇ ಜನ್ಮ ದಿನಾಚರಣೆಯಲ್ಲಿ (2004) ಭಾಗವಹಿಸಿದ್ದ ವೀರಪ್ಪ ಮೊಯಿಲಿ (ಆಗ ಕೇಂದ್ರ ಸಚಿವರು) ಪೈ ನೆಲೆಸಿದ್ದ ಮನೆಯ ಶಿಥಿಲಾವಸ್ಥೆ ಕಂಡು ಅಭಿವೃದ್ಧಿಪಡಿಸಲು ನಿರ್ಧರಿಸಿದ್ದರು. ಪೈ ಇನ್ನಿಲ್ಲವಾದ ನಂತರ ನಿರ್ಲಕ್ಷ್ಯಕ್ಕೆ ಒಳಗಾಗಿ ಸಂಪೂರ್ಣ ಜೀರ್ಣಾವಸ್ಥೆ ತಲುಪಿದ್ದ ಅವರು ಬದುಕಿದ ಮನೆಯನ್ನು ಮರು ರೂಪಿಸಬೇಕು ಎಂದು ರಚನೆಗೊಂಡದ್ದು, ವೀರಪ್ಪ ಮೊಯಿಲಿ ನೇತೃತ್ವದ ಸಾಹಿತ್ಯ– ಸಾಂಸ್ಕೃತಿಕ ವಲಯದವರನ್ನೊಳಗೊಂಡ ‘ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ ಟ್ರಸ್ಟ್’. ಈ ಟ್ರಸ್‌ ತಕ್ಷಣದಿಂದಲೇ ಕಾರ್ಯಪ್ರವೃತ್ತವಾಯಿತು. ಕರ್ನಾಟಕ ಸಮಿತಿ ಅಧ್ಯಕ್ಷ ಬಿ.ವಿ. ಕಕ್ಕಿಲ್ಲಾಯ, ಸಾಹಿತಿ ಡಾ. ರಮಾನಂದ ಬನಾರಿ, ಎಂ.ಜೆ. ಕಿಣಿ ಮುಂತಾದವರು ಮೊಯಿಲಿ ನೇತೃತ್ವದ ಟ್ರಸ್ಟ್‌ನಲ್ಲಿದ್ದರು.ಸಮಿತಿ ಮತ್ತು ಟ್ರಸ್ಟ್‌ನ ಪರಿಶ್ರಮದಿಂದ ಫಲವಾಗಿ 125ನೇ ಜನ್ಮದಿನಾಚರಣೆಯಂದು (2008 ಮಾರ್ಚ್ 23) ‘ಗಿಳಿವಿಂಡು’ (1930ರಲ್ಲಿ ಪ್ರಕಟಗೊಂಡ, 46 ಪದ್ಯಗಳಿರುವ ‘ಗಿಳಿವಿಂಡು’ (ಗಿಳಿಗಳ ಹಿಂಡು) ಪೈಗಳ ಕೃತಿಗಳ ಪೈಕಿ ಒಂದು) ಯೋಜನೆಗೆ ಶಿಲಾನ್ಯಾಸ ನಡೆದಿತ್ತು.

ಮೊಯಿಲಿ ಕೇರಳ– ಕರ್ನಾಟಕ ಸರ್ಕಾರಗಳ ನಡುವೆ ಸಮನ್ವಯ ಸಾಧಿಸಿ, ಅನುದಾನ ಸಿಗುವಂತೆ ಮಾಡಿದರು. ಸ್ಥಳೀಯ ಶಾಸಕರಾಗಿದ್ದ ಸಿ.ಎಚ್‌. ಕುಂಞಂಬು, ಅಂದಿನ ಕಾಸರಗೋಡು ಜಿಲ್ಲಾಧಿಕಾರಿ ಸಗೀರ್‌ ಅಹಮ್ಮದ್ ಕೂಡಾ ಸಾಕಷ್ಟು ಕಾರ್ಯಗಳಲ್ಲಿ ಸಹಕರಿಸಿದರು. ಎರಡೂ ಸರ್ಕಾರಗಳು, ಭಾರತ್‌ ಪೆಟ್ರೋಲಿಯಂ ಕಂಪನಿ, ಎಂಆರ್‌ಪಿಎಲ್‌, ಒಎನ್‌ಜಿಸಿ ಮುಂತಾದ ಕಂಪನಿಗಳಿಂದಲೈ ಧನ ಸಹಾಯ ಬಂತು. ಉದ್ಯಮಿ ದಯಾನಂದ ಪೈ ಸಹಿತ ಅನೇಕ ದಾನಿಗಳನ್ನು ಹಣ ಕೊಟ್ಟರು. ವಿದ್ವಾಂಸರಾದ ಬಿ. ಎ. ವಿವೇಕ ರೈ, ಗೋವಿಂದ ಪೈ ಬಂಧು ವೆಂಕಟೇಶ್‌ ಪೈ, ಪ್ರೊ ಎಂ.ಎಚ್‌. ಕೃಷ್ಣಯ್ಯ ಮುಂತಾದವರೂ ನೆರವಾದರು. ಧರ್ಮರಾಜ್‌ ಅವರನ್ನು ಮುಖ್ಯ ವಾಸ್ತುಶಿಲ್ಪಿಯಾಗಿ ನೇಮಿಸಿಕೊಂಡು ಇಡೀ ಸಂಕೀರ್ಣದ ರೂಪುರೇಷೆ ರಚಿಸಲಾಯಿತು. ಆರ್ಥಿಕ ಅಡೆತಡೆಗಳಿಂದ ಯೋಜನೆ ಏಳುಬೀಳುಗಳನ್ನು ಕಂಡರೂ ಮೊಯಿಲಿ ಸೇರಿದಂತೆ ಎಲ್ಲರ ಶ್ರಮದಿಂದ ಪೈ ಮನೆ ಪುನರ್‌ ನಿರ್ಮಾಣಗೊಂಡಿದೆ. ತನ್ನ ಪಾರಂಪರಿಕ ಸೊಗಸು ಉಳಿಸಿಕೊಂಡಿದೆ.

ಮಂಜೇಶ್ವರ ಗೋವಿಂದ ಪೈಗಳ ನಿವಾಸವೂ ಒಳಗೊಂಡಂತೆ, ವಿವಿಧ ವಿಭಾಗಗಳಿರುವ ಒಟ್ಟು ಸ್ಮಾರಕ ಸಮುಚ್ಚಯಕ್ಕೆ ‘ಗಿಳಿವಿಂಡು’ ಹೆಸರಿಡಲಾಗಿದೆ. ಬಹು ಆಯಾಮದ ಸಾಂಸ್ಕೃತಿಕ ಚಟುವಟಿಕೆಗೆ ವೇದಿಕೆ ಒದಗಿಸುವ ಉದ್ದೇಶದಿಂದ ಈ ಕೇಂದ್ರಕ್ಕೆ ಇದು ಅರ್ಥಪೂರ್ಣ ನಾಮಕರಣ. ಸಂಶೋಧನೆ ಮತ್ತು ಅಧ್ಯಯನಗಳ ಕೇಂದ್ರಕ್ಕೆ ‘ನಲಂದ’ ಎಂಬ ಹೆಸರಿಡಲಾಗಿದೆ. ಅಭ್ಯಾಸ ಮತ್ತು ಸಂಶೋಧನೆಗೆ ವಿಪುಲವಾದ ಅವಕಾಶಗಳನ್ನು ಒದಗಿಸಬಲ್ಲ ‘ನಲಂದ’ವು ಅಧ್ಯಯನಶೀಲರಿಗೆ ಕಡಲತಡಿಯ ಮಹಾನ್‌ ಸಾಹಿತ್ಯಿಕ ಕೇಂದ್ರ ಆಗಬೇಕೆಂಬ ಆಶಯದಿಂದ ಸಜ್ಜಾಗಿ ನಿಂತಿದೆ. ಪ್ರಾಚೀನ ಭಾರತದ ನಲಂದ, ವಿಶ್ವಕ್ಕೆ ಅಮೂಲ್ಯ ಕೊಡುಗೆಯನ್ನಿತ್ತ ಒಂದು ಅಪೂರ್ವ ವಿಶ್ವವಿದ್ಯಾಲಯ, ಅದೇ ಹೆಸರಿನ ಈ ತಾಣವೂ ಅರ್ಥಪೂರ್ಣವಾಗಬೇಕೆಂಬುದು ಆಶಯ. ಗೋವಿಂದ ಪೈಯವರು ಬಾಳಿ ಬದುಕಿದ ಮನೆ ಒಳ-ಹೊರಗೆ ಸಾಂಪ್ರದಾಯಿಕ‌ ಸೊಬಗಿನೊಂದಿಗೆ ನಿರ್ಮಾಣಗೊಂಡಿದೆ.

ಗ್ರಂಥ ಭಂಡಾರ ‘ಸಾರಸ್ವತ’ದಲ್ಲಿ ಗೋವಿಂದ ಪೈಯವರ ಕೃತಿಗಳು ಲಭ್ಯವಿವೆ. ತೆಂಕುತಿಟ್ಟು ಯಕ್ಷಗಾನದ ಆದ್ಯ ಕವಿ ಪಾರ್ತಿಸುಬ್ಬನ ಸ್ಮರಣೆಗಾಗಿ ಯಕ್ಷಗಾನ ಮ್ಯೂಸಿಯಂ ವ್ಯವಸ್ಥೆಗೊಳಿಸಲಾಗಿದೆ. ರಂಗ ಪ್ರದರ್ಶನಕ್ಕೆ ಅನುಕೂಲವಾಗಲು ‘ಭವನಿಕ’ ಎಂಬ ರಂಗ ಮಂದಿರ ನಿರ್ಮಾಣಗೊಂಡಿದೆ. ವಸತಿ ಕಟ್ಟಡ ‘ವೈಶಾಖೀ’, ‘ಸಾಕೇತ’ ಮುಂತಾದವುಗಳು ಸ್ಥಳೀಯ ಸಂಸದರಾಗಿದ್ದ ಕರುಣಾಕರನ್‌ ಹಾಗೂ ಶಾಸಕರಾಗಿದ್ದ ಸಿ.ಎಚ್‌. ಕುಞಂಬು ಅವರ ನಿಧಿಯಿಂದ ನಿರ್ಮಾಣಗೊಂಡಿದೆ. ಬಹುಮುಖ ಉಪಯೋಗಕ್ಕೆ ಲಭ್ಯವಿರುವ ರಂಗಮಂದಿರ ಒಂದು ಲಲಿತಾ ಕಲಾ ಸೌಧವಾಗಿದೆ. ಪೈಯವರ ಜೀವಿತ ಕಾಲದಲ್ಲಿ ಉಪಯೋಗಿಸುತ್ತಿದ್ದ ಅಮೂಲ್ಯ ವಸ್ತುಗಳನ್ನೂ ಸಂಗ್ರಹಿಸಿಡಲಾಗಿದೆ.

‘ಉಭಯ ರಾಜ್ಯಗಳ ಮುಖ್ಯಮಂತ್ರಿಗಳಾಗಿದ್ದ ಪಿಣರಾಯಿ ವಿಜಯನ್‌ ಮತ್ತು ಸಿದ್ದರಾಮಯ್ಯ 2017ರ ಜ. 19ರಂದು ‘ಗಿಳಿವಿಂಡು’ ಅನ್ನು ಲೋಕಾರ್ಪಣೆ ಮಾಡಿದ್ದಾರೆ. ಯೋಜನೆಗೆ ಈವರೆಗೆ ₹ 5 ಕೋಟಿ ವೆಚ್ಚವಾಗಿದೆ. ಉದ್ಘಾಟನೆ ವೇಳೆ ನೀಡಿದ್ದ ಭರವಸೆಯಂತೆ ಸಿದ್ದರಾಮಯ್ಯ ಅವರು ಕರ್ನಾಟಕ ಸರ್ಕಾರದ ವತಿಯಿಂದ ₹ 1 ಕೋಟಿ ನೀಡಿದ್ದಾರೆ. ಆದರೆ, ಕೇರಳ ಸರ್ಕಾರ ಘೋಷಿಸಿದ್ದ ₹ ಕೋಟಿ ಇದೇ ವರ್ಷ ಏಪ್ರಿಲ್‌ನಲ್ಲಿ ಮಂಜೂರಾಗಿದೆ. ಆದರೆ, ಎಚ್‌.ಡಿ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದಾಗ ಘೋಷಿಸಿದ್ದ ₹ 1 ಕೋಟಿ ಬಂದಿಲ್ಲ’ ಎಂದು ಯೋಜನೆಯ ನಿರ್ದೇಶಕ ಕೆ. ತೇಜೋಮಯ ತಿಳಿಸಿದರು.

‘ಕರ್ನಾಟಕ ನೀಡಿದ ಹಣ ಟ್ರಸ್ಟ್‌ಗೆ ಬಂದಿದೆ. ಆದರೆ, ಕೇರಳದ ಹಣ ಸಮಿತಿಗೆ ಹೋಗಿದೆ. ‘ಗಿಳಿವಿಂಡು’ನಲ್ಲಿ ಇನ್ನೂ ಕೆಲವು ಕೆಲಸಗಳು ಬಾಕಿ ಇವೆ. ‘ಗಿಳಿವಿಂಡು’ಗೆ ಈಗ ಬೀಗ ಹಾಕಲಾಗಿದೆ. ಟ್ರಸ್ಟ್‌ ವತಿಯಿಂದ ನೇಮಿಸಿದ್ದ ಆಡಳಿತಾಧಿಕಾರಿ ಎರಡು ವರ್ಷ ಕೆಲಸ ಮಾಡಿದ್ದಾರೆ. ಆದರೆ, ಪ್ರತಿ ತಿಂಗಳು ₹ 30 ಸಾವಿರ ವೇತನ ಕೊಡುವುದು ಕಷ್ಟವಾದ ಕಾರಣ ಅವರನ್ನು ಕೈಬಿಟ್ಟಿದ್ದೇವೆ. ಸ್ಥಳೀಯ ಪಂಚಾಯತ್‌ ವತಿಯಿಂದ ಕಾವಲುಗಾರನನ್ನು ಹೊರತುಪಡಿಸಿರೆ ಇಡೀ ಸಮುಚ್ಚಯದಲ್ಲಿ ಯಾರೂ ಇಲ್ಲ’ ಎಂದೂ ಅವರು ವಿವರಿಸಿದರು.

ಭಾಷಾ ಪ್ರವೀಣ: 80 ವರ್ಷಗಳ ತುಂಬು ಜೀವನ ಕಂಡ ಮಂಜೇಶ್ವರ ಗೋವಿಂದ ಪೈ ಅವರುತುಳುನಾಡ ಇತಿಹಾಸ, ಶಾಸನಗಳ ವ್ಯಾಖ್ಯಾನ, ಇತಿಹಾಸ ವಿಚಾರಗಳಲ್ಲಿ ತನ್ನ ವಿದ್ವತ್ತನ್ನು ಮೆರೆದವರು. ಕನ್ನಡ, ಕೊಂಕಣಿ ಮತ್ತು ಇಂಗ್ಲಿಷ್‌ ಹೊರತುಪಡಿಸಿ ತುಳು, ಸಂಸ್ಕೃತ, ಮಲಯಾಳಂ, ತಮಿಳು, ತೆಲುಗು, ಮರಾಠಿ, ಬಂಗಾಲಿ, ಪರ್ಷಿಯನ್‌, ಪಾಲಿ, ಉರ್ದು, ಗ್ರೀಕ್‌, ಜಪಾನಿ ಸೇರಿದಂತೆ 25 ಭಾಷೆಗಳಲ್ಲಿ ಓದುವ ಮತ್ತು ಬರೆಯುವ ಸಾಮರ್ಥ್ಯ ಹೊಂದಿದ್ದರು. 1949ನಲ್ಲಿ ಮದ್ರಾಸ್‌ ಸರ್ಕಾರ ಪೈ ಅವರಿಗೆ ‘ರಾಷ್ಟ್ರಕವಿ’ ಪ್ರಶಸ್ತಿ ನೀಡಿ ಗೌರವಿಸಿತ್ತು. 1951ರಲ್ಲಿ ಮುಂಬೈಯಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು.

ಪೈ ಅವರ ಪ್ರಮುಖ ಕೃತಿಗಳು: ‘ಗೊಮ್ಮಟ ಜಿನಸ್ತುತಿ’, ‘ಗಿಳಿವಿಂಡು’, ‘ನಂದಾದೀಪ’, ‘ಹೃದಯರಾಗ’ ಮುಂತಾದ ಕವನ ಸಂಕಲನಗಳು, ‘ಗೊಲ್ಗೊಥಾ’ ಮತ್ತು ‘ವೈಶಾಖಿ’ಯಂತಹ ಖಂಡಕಾವ್ಯ, ‘ಹೆಬ್ಬೆರಳು’, ‘ಚಿತ್ರಭಾನು’ (ನಾಟಕ), ‘ಬಾಹುಬಲಿ ಗೊಮ್ಮಟೇಶ್ವರ ಚರಿತ್ರೆ’ (ಜೈನ ಸಾಹಿತ್ಯ), ‘ಭಗವಾನ್ ಬುದ್ಧ’ (ಬೌದ್ಧ ಸಾಹಿತ್ಯ) ಸೇರಿದಂತೆ ಅನೇಕ ಪುಸ್ತಕಗಳನ್ನು ರಚಿಸಿದ ಹಿರಿಮೆ ಪೈ ಅವರದ್ದು.

PV Web Exclusive: ರಾಷ್ಟ್ರಕವಿ ಗೋವಿಂದ ಪೈಗಳ ‘ಗಿಳಿವಿಂಡು’!
‘ಗಿಳಿವಿಂಡು’ವಿನಲ್ಲಿರುವ ಗೋವಿಂದ ಪೈ ಅವರ ಪ್ರತಿಮೆ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT