ಮಂಗಳವಾರ, ಮೇ 26, 2020
27 °C

ಈ ದುರಿತ ಕಾಲದಲಿ ಪರಸ್ಪರ ಪ್ರೀತಿಸೋಣ ಮತ್ತು ಸದಾ ಪ್ರೀತಿಸುತ್ತಲೇ ಇರೋಣ

ಫರ್ಝಾನ ಅಶ್ರಫ್ ಯು.ಟಿ. Updated:

ಅಕ್ಷರ ಗಾತ್ರ : | |

ಶಾಲೆ/ಕಾಲೇಜು, ಕೆಲಸ, ಸುತ್ತಾಟದ ನೆಪಗಳಲ್ಲಿ ದಿನದ ಬಹುಕಾಲ ಮನೆಗಳಿಂದ ಹೊರಗೆ ಉಳಿಯುತ್ತಿದ್ದವರು ಈಗ ಲಾಕ್‌ಡೌನ್‌ನಿಂದಾಗಿ ಅನಿವಾರ್ಯವಾಗಿ ಮನೆಯೊಳಗೆ ಇರಬೇಕಿದೆ. ಸತತವಾಗಿ ಮನೆಯೊಳಗೆ ಉಳಿಯಬೇಕಾದ ಈ ಕಾಲಘಟ್ಟದಲ್ಲಿ ಸಾಂಸರಿಕ ಬಂಧ ಬಿಗಿಯಾಗಿಸಲು, ಮಾನವೀಯತೆ ಅರಳಲು ನಮ್ಮ ವರ್ತನೆ ಹೇಗಿರಬೇಕು. ಫರ್ಝಾನ ಅಶ್ರಫ್ ಅವರ ಈ ಬರಹದಲ್ಲಿ ಸಾಕಷ್ಟು ಇಣುಕುನೋಟಗಳಿವೆ. ಇದನ್ನು ಅನುಸರಿಸಿದರೆ ಲಾಕ್‌ಡೌನ್‌ ಸಹನೀಯವಾದೀತು.

---

ಪ್ರಿಯರೇ,

ಭಾರತ ಕೊರೊನಾ ಸೋಂಕಿನ ಮೂರನೇ ಹಂತಕ್ಕೆ ತಲುಪುತಿರುವ ಈ ಹೊತ್ತಿನಲ್ಲಿ, ಕೂಡಿಹಾಕಲ್ಪಟ್ಟ ನಾವೆಲ್ಲಾ ಎಷ್ಟು ಸ್ವಯಂನಿರ್ಬಂಧ ಮಾಡಿಕೊಂಡರೂ ಸಾಲದು. ಆದರೆ ದೈಹಿಕ ಆರೋಗ್ಯ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಒತ್ತೆಸೆರೆಯಾಗಲ್ಪಟ್ಟ ನಾವು ಈ ಸೆರೆಯಿಂದ ಬಿಡುಗಡೆಯಾಗುವಾಗ ಮಾನಸಿಕವಾಗಿಯೂ ಆರೋಗ್ಯವಾಗಿರಬೇಕೆಂದರೆ ಕೆಲ ಬದಲಾವಣೆಗಳನ್ನು ಮಾಡಲೇಬೇಕು. ಕಾಲಕ್ಕೆ ತಕ್ಕ ಕೋಲವ ಕಟ್ಟಲೇ ಬೇಕು. ಈ ನಿಟ್ಟಿನಲ್ಲಿ ಮನೆಯೊಳಗೆ ಕೂಡಿಹಾಕಲ್ಪಟ್ಟಾಗ ಮೂಡಿಬಂದ ಕೆಲವೊಂದು ವಿಚಾರಗಳು.

ಮೊತ್ತಮೊದಲಿಗೆ ನಮ್ಮನಮ್ಮ ಮನೆಗಳಲ್ಲಿ ಪುಟ್ಟ ದೇವತೆಗಳಿವೆಯಲ್ಲಾ. ಅವುಗಳ ಹಣೆಮೇಲೆ ಸುರುಳಿಯಾಡುವ ಆ  ಮುಂಗುರುಳುಗಳನ್ನ ಕತ್ತರಿಸಿ ಬಿಡಿ. ಅದನ್ನು ಹಿಂದೆ ಸರಿಸುವ ಕಾರಣಕ್ಕಾಗಿ ಅವರು ಬಹಳಷ್ಟು ಬಾರಿ ಮುಖದ ಮೇಲೆ ಕೈಯಾಡಿಸುತ್ತಾರೆ. ಯಾವ ಬ್ಯೂಟಿಷಿಯನ್ ಅಗತ್ಯವೂ ಬೇಡ. ಕೊಂಚ ನೀರು ಚಿಮುಕಿಸಿ ನೀವೇ ನೀಟಾಗಿ ಕತ್ತರಿಸಿ. ಹೆಚ್ಚುಕಮ್ಮಿಯಾದರೂ ಚಿಂತಿಲ್ಲ. ಎಲ್ಲಿಗೂ ಹೋಗಲಿಕ್ಕಿಲ್ಲ ತಾನೇ ?
ಯಾವುದೇ ಕಾರಣಕ್ಕೂ ಮುಖಗಳನ್ನು ಮುಟ್ಟದಂತೆ ಮಕ್ಕಳನ್ನು ತರಬೇತಿಗೊಳಿಸಿ.

ಮಹಿಳೆಯರೇ ಹಾಲು,ತರಕಾರಿ ಎಷ್ಟೆಲ್ಲಾ ತೊಳೆತೊಳೆದು ಬಳಸುತಿದ್ದರೂ, ನಮ್ಮದೇ ಕೈಗಳನ್ನು ಹತ್ತಾರು ಬಾರಿ ತೊಳೆದು ಕೇಡಿ ವೈರಸ್ ಅನ್ನು ಶುಚಿಗೊಳಿಸತೊಡಗಿದರೂ, ಬೆರಳೊಳಗಿನ ಉಂಗುರದೆಡೆ ಶುಚಿಯಾಗುವುದು ಕಷ್ಟ. ಹಾಗಾಗಿ ಆ ಉಂಗುರಗಳನು ಕಳಚಿಬಿಡಿ.

ಸ್ಯಾನಿಟೈಸರ್ ಜ್ವಲನಕಾರಿ ಅಂಶಗಳನ್ನು ಹೊಂದಿರುತ್ತದೆ.ಹಾಗಾಗಿ ಅವನ್ನು ಬಳಸಿರುವ ಹೊತ್ತು ಗ್ಯಾಸ್ ಒಲೆ ಉರಿಸುವುದು ಅಪಾಯಕಾರಿ. ಈ ಬಗ್ಗೆ ಬಹಳ ಜಾಗರೂಕರಾಗಿರಿ. ಕುಟುಂಬಕೆ ಊಡಿಸುವ ಕೈಗಳವು.

ಮಕ್ಕಳಿಗೆ ಈ ಪರಿಸ್ಥಿತಿಯ ಗಂಭೀರತೆ ತಿಳಿದಿಲ್ಲ. ಗೆಳೆಯರಿಲ್ಲದೇ ಈ ದಿನಗಳಲಿ ಅವು ಬಹಳ ಬೋರ್ ಎಂದು ಮೂಲೆಯಲಿ ಕೂರಲು ಬಿಡಬೇಡಿ. ಚೆಸ್, ನೃತ್ಯ, ಕೇರಂ, ಲೂಡೋ, ಓದು ಮುಂತಾದ ಒಳಾಂಗಣ ಆಟಗಳಲಿ ಅವರ ಜತೆಗೆ ಸೇರಿ. ಮಕ್ಕಳ ಸಾಂಗತ್ಯವು ಮನಸನು ಟಾನಿಕ್ ತರಹ ಬಹಳ ಹಗುರಾಗಿಸಿ ಪುನಶ್ಚೇತನಗೊಳಿಸುವುದು.

ಕೆಲವರಿಗೆ ಇಡೀ ದಿನ ಮಕ್ಕಳಿಗೆ ಗದರಿಸುವ ಚಾಳಿ ಇರುತ್ತದೆ. (ವಿಶೇಷವಾಗಿ ಟೀನೇಜ್ ಹುಡುಗರಿಗೆ ತಂದೆಯಂದಿರು) ನಾವು ನಿಮ್ಮನ್ನು ಸಾಕುವವರು ಎಂಬ ಅಹಂಕಾರದಿಂದ ಹಾಗೆ ಮಾಡದಿರಿ. ಈ ಭೂಮಿಯ ನಿಷ್ಕಲ್ಮಷ ಹೃದಯಗಳವು. ಹಾರ್ಮೊನ್ ಏರುಪೇರಿನ ವಯಸು ಬೇರೆ. ಹೆಚ್ಚು ಬುದ್ಧಿ ಮಾಡಲು ಹೋಗಬೇಡಿ. ಮೂರು ಕತ್ತೆಯ ವಯಸಾದರೂ ನಿಮಗೆಷ್ಟು ಬುದ್ಧಿ ಇದೆ ಎಂದು ಮೊದಲು ಚಿಂತಿಸಿ. ಅವರ ವಯಸಿನಲ್ಲಿ ನೀವು ಊರಿಡೀ ಅವರಿವರ ಮನೆಯ ತೋಟದ ಹಣ್ಣುಗಳಿಗೆ ಕಲ್ಲು ಬಿಸಾಡುತ್ತಾ ಕಾಲ ಕಳೆದಿದ್ದಿರಿ ಎಂಬುವುದನ್ನ ನೆನಪಿಸಿಕೊಳ್ಳಿ. ಅವುಗಳ ಭಾವನೆಗಳನ್ನು ಗೌರವಿಸಿ. ಅನುನಯದಿಂದ ಮಾತನಾಡಿಸಿ.

ಈ ದುರಿತ ಕಾಲದಲಿ ನಮ್ಮನ್ನು ಮನೆಯೊಳಗೆ ಕಾಪಿಡಬಹುದಾದದ್ದು ಪ್ರೀತಿ ಮತ್ತು ಪ್ರೀತಿ ಮಾತ್ರ. ದಯವಿಟ್ಟು ಎಲ್ಲರೂ ಪರಸ್ಪರ ಪ್ರೀತಿಯಿಂದ ವರ್ತಿಸಲು ಪ್ರಜ್ಞಾಪೂರ್ವಕವಾಗಿ ಕಲಿಯಿರಿ. ಮಕ್ಕಳ ಮೇಲೆ ಸದಾ ಗದರುವ, ಗಂಡನ ಮೇಲೆ ಕಿರಿಕಿರಿ ಮಾಡುವ, ಹೆಂಡತಿಯನು ಅನಾದರದಿಂದ ಕಾಣುವ ನಮ್ಮೆಲ್ಲರ ದುರ್ಬುದ್ದಿಗಳನು ಬಿಟ್ಟು ಬಿಡೋಣ. ಇದು ಬರಿದೇ ಮೂರು ವಾರಗಳ ಲಾಕ್ ಡೌನ್ ಅಂತ ಅನಿಸುತಿಲ್ಲ‌. ಹಾಗಿರುವಾಗ ನಮ್ಮ ನಮ್ಮ ತಿಕ್ಕಲುತನದ ಭಾರಗಳು ನಮ್ಮ ಬಳಿಯಿರುವ ಜೀವಗಳ ನೆಮ್ಮದಿ ಹಾಳು ಮಾಡಬಿಡುವುದು ಬೇಡ.

"ಕೊರೋನಾ ಬಂದಾದರೂ ಸರಿಯೇ..ಈ ಮಾರಿಯ ಜತೆ ಬದುಕುವುದು ಹೇಗೆ ?" ಎಂಬ ಫೀಲಿಂಗ್ ಸಂಗಾತಿಗೆ ಬರಲು ಬಿಡಬೇಡಿ.

ಮನೆಯೊಳಗೆ ಸಾಧ್ಯವಾದಷ್ಟೂ ಏರುದನಿಯನ್ನು ಹತ್ತಿಕ್ಕಿ. ಇನ್ನೂ ದಿನಗಳು ಶುರುವಾಗಿಲ್ಲ. ಮೃದುದನಿ, ಸವಿದನಿ ರೂಢಿಸಿಕೊಳ್ಳಿ. ಬದಲಾಗಲು ಮುಲಾಜು ಮಾಡಬೇಡಿ. ಮಾತಿನಿಂ ನಗೆ ನುಡಿಯು ಮಾತಿನಿಂ ಹಗೆಹೊಲೆಯು ಎಂಬುವುದನ್ನು ಮರೆಯದಿರಿ.

ಗಂಡಸರು, ಮನೆಯ ಒಳ ಸೇರಿದವರಿಗೆಲ್ಲಾ ಆರೂ ಹೊತ್ತು ಅಡುಗೆ,ಬಟ್ಟೆ ಬರೆಗಳ ಕಾಳಜಿ ಮಾಡುವ ಹೆಂಗಳೆಯರನು ಅನುಕಂಪದಿಂದ ನೋಡಿ.ಅನುಭೂತಿಯಿಂದ ಜತೆಜತೆಯಾಗಿ ಸಹಾಯಿಸಿ.

ಹೆಂಗಳೆಯರು ದುಡಿಯಲಾಗದೆ ಮನೆಯಲಿ ಕುಳಿತ,ಆರ್ಥಿಕ ಸಮಸ್ಯೆಗಳ ಸುಳಿಯು ಗಿರಗಿರನೆ ತಲೆಯೊಳಗೆ ತಿರುಗುತಿರುವ ಗಂಡಂದಿರನು ಸಹಾನುಭೂತಿಯಿಂದ ನಡೆಸಿಕೊಳ್ಳಿ‌.

ಪರಸ್ಪರ ಸಂಬಂಧಗಳು ಬಲವಾಗಬೇಕಾದರೆ ಸಂಗಾತಿಗಳು ತಲೆಗೆ ಎಣ್ಣೆ ಮಸಾಜ್ ಮಾಡುವ, ಬೆನ್ನ ಹಿಂದಿನ ಮಣ್ಣ ಜಿಗುಟನ್ನು ತಿಕ್ಕಿ ತೊಳೆವ ಆಟ ಆಡಿಕೊಳ್ಳಿ.ಮತ್ತೆ ಶಕ್ತಾನುಸಾರ ಸಂದರ್ಭಾನುಸಾರ ಇತರ ದಾಂಪತ್ಯದಾಟಗಳಲಿ ಮುಂದುವರಿಯುವ ಅವಕಾಶವಿರುತ್ತದೆ.

ಇದೇ ಹೊತ್ತಿನಲಿ ಬಳಿಯಿರುವ ಹಸಿದವರ, ಬಡವರ ಕಾಳಜಿ ಮಾಡಿ.ಸಾಧ್ಯವಾದಷ್ಟೂ ಮಧ್ಯಾಹ್ನದ ಅಡುಗೆಯಲಾದರೂ ಕನಿಷ್ಟ ಮೂವರಿಗಾದರೂ ಊಟ ಹಾಕುವ ರೂಢಿ ಮಾಡಿ.ಇದು ಬಹಳ ತೃಪ್ತಿದಾಯಕ ಮತ್ತು ದೇವನು ಮೆಚ್ಚುವ ಕಾರ್ಯವಾಗಿದೆ.

 

ಮತ್ತು ಒಂದೇ ವಾರಕೆ ಮನೆಯೊಳಗೆ ಕೂತು ಹುಚ್ಚರಂತಾಡುವ ಗಂಡಸರೇ, ಈಗ ಯಥೇಚ್ಛವಾಗಿ ವಿದ್ಯೆ ಬುದ್ಧಿ ಇದ್ದೂ.. ಉದ್ಯೋಗಾವಕಾಶ ಇದ್ದೂ ಅನುಮತಿ ನಿರಾಕರಿಸಿ ಮನೆಯೊಳಗೆ ಇರಿಸಿರುವ ನಿಮ್ಮನಿಮ್ಮ ಹೆಣ್ಣುಗಳ ಬಗ್ಗೆ ಕೊಂಚ ಮುಕ್ತಮನಸಿನಿಂದ ಚಿಂತಿಸಿ .ಅವರಿಗೆಷ್ಟು ಬೇಜಾರಾಗಬಹುದು ಪಾಪ ಅಂತ ಮನಸತೆರೆದು ಆಲೋಚಿಸಿ.

ಒಟ್ಟಿನಲಿ ಮನೆಯೊಳಗೆ ಯಾರೂ ಜಗಳವಾಡದಿರುವ ನಿರ್ಣಯ ತೆಗೆದುಕೊಳ್ಳೋಣ.ಈ ಬೇಯುತಿರುವ ಕಾಲದಲಿ ಪ್ರೀತಿಯೊಂದೇ ನಮ್ಮನ್ನು ಬದುಕಿಸಬಲ್ಲದು.ಸಂಗಾತಿಗಳಲಿ,ಮಕ್ಕಳಲಿ,ಪ್ರಾಣಿ ಪಕ್ಷಿಗಳಲಿ ಒಟ್ಟು ಜೀವಮಂಡಲವು ನಮ್ಮ ಹೃದಯದ ಅನುಕಂಪೆಯಲಿ ತೊಯ್ದು ಹೋಗಲಿ.ಯಾರಿಗೆ ಗೊತ್ತು ಈ ಕೊರೋನಾ ಯಾರನೆಲ್ಲಾ ಬಲಿಹಾಕಲೆಂದು ಹೊಂಚು ಹಾಕುತಿದೆಯೆಂದು.

ಹಾಗಾಗಿ ಪರಸ್ಪರ ಪ್ರೀತಿಸೋಣ ಮತ್ತು ಪ್ರೀತಿಸುತ್ತಲೇ ಇರೋಣ. ಈಗ ನಮ್ಮ ಕೈಹಿಡಿಯಬಹುದಾದ ಶಕ್ತಿ ಅದೊಂದೇ.

 

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು