ಬುಧವಾರ, ಜುಲೈ 28, 2021
23 °C

ಗೋವಾದ ವಿಶಿಷ್ಟ ಆಚರಣೆ ಸಾವೋ- ಜಾವೋ

ನಾಗರೇಖಾ ಗಾಂವಕರ Updated:

ಅಕ್ಷರ ಗಾತ್ರ : | |

ಗೋವಾ ಎಂದ ಕೂಡಲೇ ಮನಸ್ಸಿಗೆ ಮೂಡಿಬರುವ ಚಿತ್ರ ಕಣ್ಣಿಗೆ ಕಾಣುವಷ್ಟು ವಿಶಾಲವಾಗಿ ಹಬ್ಬಿಕೊಂಡ ಕಡಲು. ಅದರ ಅಲೆಗಳು, ದಂಡೆ. ಅದರ ಮೇಲೆ ಬಣ್ಣಬಣ್ಣದ ಕೊಡೆಗಳು. ಅದರಡಿಯಲ್ಲಿ ಕಾಲು ಚಾಚಿ ಕೂತ ವಿವಿಧ ಭಂಗಿಯ ಗಂಡು- ಹೆಣ್ಣು ನೆನಪಾಗುತ್ತಾರೆ.

ಮೋಜು ಮಸ್ತಿ, ಕತ್ತಲಾಗುತ್ತಲೇ ವಿವಿಧ ಬಗೆಯ ವಿದ್ಯುತ್ ದೀಪಗಳಲ್ಲಿ ಝಗಮಗಿಸುವ, ಕಣ್ಣು ಕೋರೈಸುವ, ಸದಾ ಗಿಜಿಗಿಜಿಗುಡುವ ಪ್ರವಾಸಿಗರಿಂದ ತುಂಬಿದ ಪಟ್ಟಣಗಳು. ಭಾರತದ ಅತಿಚಿಕ್ಕ ರಾಜ್ಯ ಎಂಬ ಹೆಗ್ಗಳಿಕೆ ಪಡೆದ, ಪ್ರವಾಸೋದ್ಯಮದಲ್ಲಿ ದೇಶಕ್ಕೆ ಮಾದರಿಯಾದ, ದೇಶ– ವಿದೇಶಗಳ ಪ್ರವಾಸಿಗರನ್ನು ಕೈ ಬೀಸಿ ಕರೆಯುವ ಸುಂದರ ತಾಣ.

ಆದರೆ, ಇದಿಷ್ಟೇ ಗೋವಾ ಎಂದುಕೊಳ್ಳಬೇಡಿ. ಗೋವಾದ ನಗರವಾಸಿಗಳು ಮತ್ತು ಹಳ್ಳಿಗರು ತಮ್ಮದೇ ಆದ ಸಾಂಸ್ಕೃತಿಕ  ಹಿನ್ನೆಲೆ ಹೊಂದಿದ್ದು, ಹಬ್ಬಗಳನ್ನು ಆಚರಿಸುತ್ತಾರೆ. ಪ್ರಕೃತಿಯ ಜೊತೆ ಅನುಸಂಧಾನದಲ್ಲಿ ಮತ್ತು ದೈವತ್ವದ ಆರಾಧನೆಯಲ್ಲೂ ತಮ್ಮದೇ ವಿಶಿಷ್ಟ ಶೈಲಿಗಳಿಂದ ಗಮನ ಸೆಳೆಯುತ್ತಾರೆ.

ಅದರಲ್ಲೂ ಉತ್ತರ ಗೋವಾದ ಭಾಗದಲ್ಲಿ ಕಂಡುಬರುವ ಒಂದು ವಿಶಿಷ್ಟ ಉತ್ಸವ ‘ಸಾವೋ–ಜಾವೋ’. ಪ್ರತಿವರ್ಷವೂ ನಿಗದಿತ ದಿನದಂದು ದೇಶ, ವಿದೇಶಗಳ ಹಲವು ಪ್ರವಾಸಿಗರನ್ನು ಗೋವಾ ತನ್ನಡೆಗೆ ಆಕರ್ಷಿಸುತ್ತದೆ. ಜೂನ್ 24ರಂದು ಸ್ಯಾನ್ ಜಿವೋ (San joao) ಎಂದು ಕರೆಯಲಾಗುವ ಈ ಉತ್ಸವ ಮೋಜು, ಸಂಭ್ರಮದೊಂದಿಗೆ ಆಚರಿಸಲಾಗುತ್ತದೆ. ಇದೊಂದು ವಾರ್ಷಿಕ ಆಚರಣೆ. ಪೋರ್ಚಿಗೀಸ್ ಭಾಷೆಯ ‘San Juvanv’ ಕಾಲಕ್ರಮೇಣ ‘ಸಾವೋ ಜಾವೋ’ ಎಂಬ ಅಪಭ್ರಂಶಕ್ಕೆ ಒಳಗಾಗಿರಬೇಕು. ಇದಕ್ಕೆ ಸಾವೋ ಎಂದರೆ ಸೇಂಟ್ ಎಂತಲೂ, ಜಾವೋ ಅಂದರೆ ಜಾನ್ ಎಂತಲೂ ಅರ್ಥವಿದೆ.ವಿಶಿಷ್ಟ ಹಬ್ಬವಾದ ಈ ದಿನದಂದು ಗೋವನ್ನರು ಅಷ್ಟೇ ವಿಶಿಷ್ಟ ಸಂಪ್ರದಾಯವೊಂದನ್ನು ಚಾಚೂತಪ್ಪದೇ ಪಾಲಿಸುತ್ತಾರೆ. ಆನಂದಿಸುತ್ತಾರೆ. ಅದೇ ಬಾಪ್ಟಿಸ್ಟ್ ಸೇಂಟ್ ಜಾನ್‍ರಿಗೆ ಸಲ್ಲಿಸುವ ಹರಕೆ. ಗೋವನ್ನರು ಬಾವಿಗಳು ಅಥವಾ ಇನ್ನಿತರ ನೀರಿನ ಆಕರಗಳಿಗೆ ವಿಶೇಷವಾಗಿ ಮಳೆನೀರಿನಿಂದ ತುಂಬಿದ ಹೊಂಡಗಳಿಗೆ ಅಥವಾ ಕೆರೆಗಳಿಗೆ ಜಿಗಿಯುತ್ತಾರೆ. ಇದೊಂದು ಕ್ಯಾಥೋಲಿಕ್ ಕ್ರೈಸ್ತ ಸಂಪ್ರದಾಯ. ‘ಕೊಪೆಲ್’ ಗಳೆಂದು ಕರೆಯಲಾಗುವ ಹೂಗಳಿಂದ, ಎಲೆಗಳಿಂದ, ಹಣ್ಣುಗಳಿಂದ ಅಲಂಕರಿಸಿದ ತಲೆಸಿಂಬೆಯನ್ನು ತಲೆಯ ಕಿರೀಟದಂತೆ ಧರಿಸುವುದು ಈ ಹಬ್ಬದ ಇನ್ನೊಂದು ವೈಶಿಷ್ಟ್ಯ. ಬಣ್ಣಬಣ್ಣದ ಹೂಗಿಡದ ಕುಡಿಗಳನ್ನು, ಹೂಗಳನ್ನು, ಹಣ್ಣುಗಳನ್ನು ಸೇರಿಸಿ ತಲೆ ಕಿರೀಟವನ್ನು ಮಾಡಲಾಗುತ್ತದೆ. ಇದನ್ನು ತೊಟ್ಟ ಕ್ರೀಡಾಲೋಲ ಹುಡುಗರು ‘ವೈವಾರೇ ಸಾವೋ ಜಾವೋ’ ಎಂದು ಪಠಿಸುತ್ತಾ ಸಂಭ್ರಮಿಸುತ್ತಾರೆ.

ಪ್ರತಿವರ್ಷವೂ ಈ ಬಾಪ್ಟಿಸ್ಟ್ ಸೇಂಟ್ ಜಾನ್ ಹಬ್ಬವನ್ನು ಕ್ರಿಸ್‌ಮಸ್ ಹಬ್ಬಕ್ಕೆ ಸುಮಾರು ಐದು ತಿಂಗಳ ಮೊದಲೇ ಆಚರಿಸಲಾಗುತ್ತದೆ. ಅಂದರೆ ಕ್ರಿಸ್ತನ ಜನನವಾಗುವ ಐದು ತಿಂಗಳ ಮುಂಚೆ. ಪವಿತ್ರ ಗ್ರಂಥವಾದ ಬೈಬಲ್‌ನಲ್ಲಿನ ಉಲ್ಲೇಖದ ಪ್ರಕಾರ ಇದಕ್ಕೊಂದು ಐತಿಹ್ಯವಿದೆ. ಯೇಸು ಕ್ರಿಸ್ತನ ತಾಯಿ ಮೇರಿಗೆ ಕನಸಿನಲ್ಲಿ ದೇವದೂತನಿಂದ ಯೇಸು ಕ್ರಿಸ್ತನ ಜನನವಾಗುವ ಸಂಗತಿಯು ಮೊದಲೇ ತಿಳಿದುಬರುತ್ತದೆ. ಒಮ್ಮೆ ಆಕೆ ತನ್ನ ಸೋದರ ಸಂಬಂಧಿಯಾದ ಎಲಿಜಬೆತ್‍ಳನ್ನು ಕಾಣಲು ಹೋಗುತ್ತಾಳೆ. ಆ ಸಮಯದಲ್ಲಿ ಎಲಿಜಬೆತ್ ಕೂಡ ಗರ್ಭಿಣಿಯಾಗಿದ್ದು, ಆಕೆಯ ಹೊಟ್ಟೆಯಲ್ಲಿದ್ದ ಕೂಸೇ ಈ ಜಾನ್. ಸಹೋದರಿಯನ್ನು ಭೇಟಿಯಾದ ಮೇರಿ ತನಗೆ ಮೊದಲೇ ಅನುಭವಕ್ಕೆ ಬಂದ ಯೇಸುವಿನ ಜನನದ ಕುರಿತ ದೇವದೂತನ ಸಂದೇಶವನ್ನು ಎಲಿಜಬೆತ್‍ಳಲ್ಲಿ ಹೇಳುತ್ತಿದ್ದಂತೆಯೇ ಎಲಿಜಬೆತ್‍ಳ ಗರ್ಭದಿಂದ ಜಾನ್ ಪುಟಿದು ಹೊರಬರುತ್ತಾನೆ. ಮುಂದೆ ಸೇಂಟ್ ಜಾನ್ ದಿ ಬ್ಯಾಪ್ಟಿಸ್ಟ್ ಆಗಿ ಪ್ರಸಿದ್ಧರಾಗುತ್ತಾರೆ. ಮುಂದೆ ಸೇಂಟ್ ಜಾನ್‍ರಿಂದಲೇ ಯೇಸು ಸ್ವಾಮಿ ಕೂಡ ಜ್ಞಾನಸ್ನಾನದ ದೀಕ್ಷೆ ಪಡೆದರು ಎನ್ನುವುದು ಕ್ರಿಶ್ಚಿಯನ್ನರ ನಂಬಿಕೆ.

ಇನ್ನೊಂದು ಐತಿಹ್ಯದ ಪ್ರಕಾರ ಸೇಂಟ್ ಜಾನ್ ಬ್ಯಾಪ್ಟಿಸ್ಟರು ಯೇಸುವನ್ನು ಜೋರ್ಡಾನ್ ನದಿಯಲ್ಲಿ ಮುಳುಗೇಳಿಸಿ ಜ್ಞಾನಸ್ನಾನದ ದೀಕ್ಷೆ ಕೊಟ್ಟರಂತೆ. ಬ್ಯಾಪ್ಟಿಸಂ ಎಂದರೆ ಶುದ್ಧೀಕರಣ, ಅದೂ ನೀರಿನಲ್ಲಿ ಮುಳುಗೇಳುವ ಮೂಲಕ ಶುದ್ಧಗೊಳ್ಳುವುದು.

ಉತ್ತರ ಗೋವಾದ ಸಿಯೋಲಿಮ್ ಎಂಬ ಹಳ್ಳಿಯಲ್ಲಿ ಬಹಳ ಸಂಭ್ರಮದಿಂದ ಈ ಹಬ್ಬ ಆಚರಿಸಲಾಗುತ್ತದೆ. ಕ್ರೀಡಾಲೋಲರು ಬಗೆಬಗೆಯ ಹೂಗಳಿಂದ ಹಣ್ಣುಗಳಿಂದ ಅಲಂಕರಿಸಿದ ಕಿರೀಟಗಳನ್ನು ತೊಟ್ಟು ಕುಣಿಯುತ್ತಾರೆ. ಹಬ್ಬದ ಕೊನೆಯಲ್ಲಿ ರುಚಿಕಟ್ಟಾದ ಔತಣ ಕೂಟವಿರುತ್ತದೆ. ಈ ಹಬ್ಬವು ಮಳೆಗಾಲದ ಪ್ರಾರಂಭದಲ್ಲಿ ನಡೆಯುವುದರಿಂದ ನಿಸರ್ಗದಲ್ಲಿ ಹಸಿರು, ಹೂ ಚೆಲುವು ಕಂಗೊಳಿಸುತ್ತಿರುತ್ತದೆ. ಬಾವಿ, ಕೆರೆ, ಹೊಂಡ, ನದಿಗಳೆಲ್ಲ ತುಂಬಿ ಹರಿಯುತ್ತಿರುತ್ತವೆ. ಅದಕ್ಕೆ ತಕ್ಕಂತೆ ಯಾವ ಕೊರತೆಗಳಿಲ್ಲದ ಸಮಯದಲ್ಲಿ ನಿಸರ್ಗ ನಳನಳಿಸುತ್ತಾ, ಭೂಮಿ, ಗಿಡಮರಗಳು ದಾಹ ನೀಗಿಸಿಕೊಂಡು ತುಂಬು ತೃಪ್ತಿಯಲ್ಲಿರುವಾಗ ಸೇಂಟ್ ಜಾನ್‍ರ ಹುಟ್ಟುಹಬ್ಬ ಆಚರಿಸಲಾಗುತ್ತದೆ. ಸೇಂಟ್ ಜಾನ್‍ರು ತಮ್ಮ ತಾಯಿಯ ಗರ್ಭದಿಂದ ಹೊರಜಿಗಿದು ಬಂದದ್ದಕ್ಕೆ ಹಾಗೂ ಜೋರ್ಡಾನ್ ನದಿಯಲ್ಲಿನ ಪವಿತ್ರ ಸ್ನಾನದ ಸಂಕೇತವಾಗಿ ಜನರು ಆದಿನ ನೀರಿನ ಆಕರಗಳಿಗೆ ಜಿಗಿದು ಸಂಭ್ರಮಿಸುತ್ತಾರೆ.ಸಾಂಪ್ರದಾಯಿಕವಾಗಿ ಜನರು ಈ ದಿನ ಗುಂಪುಗುಂಪಾಗಿ ತಿರುಗುತ್ತಾ, ಬಾವಿ, ಹೊಂಡ, ಹಳ್ಳ ಇತ್ಯಾದಿ ನೀರಿರುವಲ್ಲಿ ಜಿಗಿದು, ಹಲಸಿನ ಹಣ್ಣು, ಅನಾನಸ್ ಮುಂತಾದ ಹಣ್ಣುಗಳನ್ನು ಬಹುಮಾನವಾಗಿ ಪಡೆಯುತ್ತಾರೆ.

ಹಬ್ಬದ ದಿನವಂತೂ ಗೋವನ್ನರು ವಿವಿಧ ಹಣ್ಣುಗಳನ್ನು ಸೇವಿಸುತ್ತಾರೆ. ಪರಂಪರೆಯ ಪ್ರಕಾರ ಹೊಸದಾಗಿ ವಿವಾಹವಾದ ದಂಪತಿ ಇದ್ದ ಕುಟುಂಬಗಳು ಪರಸ್ಪರರ ಕುಟುಂಬಗಳಿಗೆ ಹಣ್ಣುಗಳನ್ನು, ಕಾಣಿಕೆಗಳನ್ನು ವಿನಿಮಯ ಮಾಡಿಕೊಳ್ಳುತ್ತಾರೆ. ಆ ಮೂಲಕ ಸಹ ಜೀವನ, ಸಹಬಾಳ್ವೆ, ಸಂತೋಷಕ್ಕೆ ಸಾಕಾರವಾಗಿ ಈ ಹಬ್ಬ ಮನಸ್ಸುಗಳನ್ನು ಬೆಸೆಯುವಲ್ಲಿಯೂ, ಸಂಬಂಧಗಳನ್ನು ಗಟ್ಟಿಗೊಳಿಸುವಲ್ಲಿಯೂ ಸಫಲವಾಗಿದೆ. 

ಪೂರಕ ಮಾಹಿತಿ: ಸ್ಟ್ಯಾನಿ ಪಿಂಟೋ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು