ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾತುರ್ಮಾಸ್ಯ: ದೇಹಕ್ಕೂ ಮನಸ್ಸಿಗೂ ವ್ರತ

Last Updated 13 ಜುಲೈ 2019, 11:41 IST
ಅಕ್ಷರ ಗಾತ್ರ

ನಮ್ಮ ಸಂಸ್ಕೃತಿಯಲ್ಲಿ ಸನ್ಯಾಸಕ್ಕೆ ತುಂಬ ಗೌರವವಿದೆ. ಲೌಕಿಕ ಸಂಸಾರವನ್ನು ತ್ಯಜಿಸಿ, ಜಗತ್ತಿನ ಒಳಿತಿಗಾಗಿ ಬದುಕುವವನೇ ಸನ್ಯಾಸಿ. ಅವನು ಒಂದೇ ಕಡೆ ನೆಲೆ ನಿಲ್ಲಬಾರದು; ಜಗತ್ತೇ ಅವನ ಪಾಲಿಗೆ ಮನೆ. ಹೀಗಿದ್ದರೂ ಅವನು ಮಳೆಗಾದಲ್ಲಿ ಒಂದೆಡೆ ಇರಬೇಕು; ಆ ಸಮಯದಲ್ಲಿ ಅಧ್ಯಯನಶೀಲನಾಗಿರಬೇಕು; ಜನರಿಗೆ ಧರ್ಮಬೋಧನೆಯನ್ನು ಮಾಡಬೇಕು ಎಂದು ಪರಂಪರೆ ಹೇಳುತ್ತದೆ. ಹೀಗೆ ಅವನು ಸನ್ಯಾಸಿಯಾದವನು ಒಂದೆಡೆ ಇದ್ದು, ಸಾಧನೆಯಲ್ಲಿ ತೊಡಗುವ ವ್ರತವನ್ನೇ ‘ಚಾತುರ್ಮಾಸ್ಯ’ ಎಂದು ಕರೆಯುವುದು.

‘ಚಾತುರ್ಮಾಸ್ಯ’ ಎಂದರೆ ನಾಲ್ಕು ತಿಂಗಳು ಎಂದು ಅರ್ಥ. ವರ್ಷದಲ್ಲಿ ನಾಲ್ಕು ತಿಂಗಳ ಕಾಲ ಈ ವ್ರತವನ್ನು ಆಚರಿಸುವುದರಿಂದ ಈ ಹೆಸರು ಬಂದಿದೆ. ಇಂದು ಈ ವ್ರತ ಸನ್ಯಾಸಿಗಳಿಗೆ ಮಾತ್ರ ಎಂಬ ಅಭಿಪ್ರಾಯವಿದ್ದರೂ ಇದನ್ನು ಗೃಹಸ್ಥರೂ ಆಚರಿಸಬೇಕು ಎಂದು ಶಾಸ್ತ್ರಗಳು ಹೇಳುತ್ತವೆ.

ಆಷಾಢಮಾಸದ ಶುಕ್ಲಪಕ್ಷದ ಏಕಾದಶಿ ಅಥವಾ ದ್ವಾದಶೀ ಅಥವಾ ಪೂರ್ಣಿಮೆಯಂದು ಚಾತುರ್ಮಾಸ್ಯವ್ರತವನ್ನು ಆಚರಿಸುವುದು ವಾಡಿಕೆ.

ದೈಹಿಕ ಮತ್ತು ಮಾನಸಿಕ ನಿಯಂತ್ರಣಕ್ಕೆ ಪೂರಕವಾಗುವಂತೆ ಈ ವ್ರತದ ವಿಧಾನಗಳನ್ನು ರೂಪಿಸಲಾಗಿದೆ. ಈ ಸಮಯದಲ್ಲಿ ನಮ್ಮ ದಿನನಿತ್ಯದ ಚಟುವಟಿಕೆಗಳನ್ನು ಆದಷ್ಟು ಕಡಿಮೆ ಮಾಡಿಕೊಂಡು, ಭಗವಂತನ ಧ್ಯಾನ, ಸ್ತೋತ್ರ ಮತ್ತು ಪೂಜೆಗಳಲ್ಲಿ ತೊಡಗಬೇಕೆಂಬುದು ಈ ವ್ರತದ ಉದ್ದೇಶ. ಹೀಗೆ ನಮ್ಮ ದೈಹಿಕ ಚಟುವಟಿಕೆಗಳ ಮೇಲೆ ನಿಯಂತ್ರಣವನ್ನು ಸಾಧಿಸುವ ಉದ್ದೇಶದಿಂದ ಈ ವ್ರತದ ಸಮಯದಲ್ಲಿ ಕೆಲವೊಂದು ಆಹಾರಪದಾರ್ಥಗಳನ್ನು ತೊರೆಯುವುದುಂಟು. ಮೊದಲ ತಿಂಗಳು ತರಕಾರಿಗಳನ್ನೂ ಎರಡನೆಯ ತಿಂಗಳು ಮೊಸರನ್ನೂ ಮೂರನೆಯ ತಿಂಗಳಲ್ಲಿ ಹಾಲನ್ನೂ ನಾಲ್ಕನೆಯ ತಿಂಗಳಿನಲ್ಲಿ ದ್ವಿದಳಧಾನ್ಯಗಳನ್ನೂ ಉಪಯೋಗಿಸುವಂತಿಲ್ಲ. (ಈಗ ಹದಿನೈದು ದಿನಗಳಿಗೆ – ಎಂದರೆ ಒಂದು ಪಕ್ಷವನ್ನೇ ಒಂದು ತಿಂಗಳು ಎಂಬ ಎಣಿಕೆಯಲ್ಲಿಯೂ ಚಾತುರ್ಮಾಸ್ಯವನ್ನು ಕೆಲವರು ಆಚರಿಸುವುದುಂಟು.)

ಚಾತುರ್ಮಾಸ್ಯವನ್ನು ಸನ್ಯಾಸಿಗಳು ವಿಶೇಷವಾಗಿ ಆಚರಿಸುವುದುಂಟು. ಸನ್ಯಾಸಿಗಳು ಆಷಾಢಪೂರ್ಣಿಮೆಯಂದು ಕ್ಷೌರವನ್ನು ಮಾಡಿಸಿಕೊಂಡು ವ್ರತಾಚರಣೆಗೆ ತೊಡಗುತ್ತಾರೆ. ವ್ರತವು ಮುಗಿಯುವ ತನಕ ಅವರು ಕ್ಷೌರವನ್ನು ಮಾಡಿಸಿಕೊಳ್ಳುವಂತಿಲ್ಲ.

ಶ್ರೀಮಹಾವಿಷ್ಣುವು ಈ ಸಮಯದಲ್ಲಿ ಯೋಗನಿದ್ರೆಯಲ್ಲಿರುತ್ತಾನೆ ಎಂಬ ನಂಬಿಕೆಯಿದೆ. ಸನ್ಯಾಸಿಗಳು ಈ ಸಮಯದಲ್ಲಿ ಒಂದೇ ಕಡೆಯಲ್ಲಿ ವಾಸ ಮಾಡಿ, ಜಗತ್ತಿನ ಒಳಿತಿಗಾಗಿ ಭಗವಂತನ ಧ್ಯಾನದಲ್ಲಿ ತಲ್ಲೀನರಾಗಿರಬೇಕು. ಸನ್ಯಾಸಿಗಳು ಒಂದೇ ಕಡೆಯಲ್ಲಿ ವಾಸ ಮಾಡುವಂತಿಲ್ಲ. ಆದರೆ ಮಳೆಗಾಲದಲ್ಲಿ ಓಡಾಟವೂ ಕಷ್ಟ. ಹೀಗಾಗಿ ಅವರು ಈ ಸಂದರ್ಭದಲ್ಲಿ ಒಂದು ಕಡೆ ಇರಲು ಅವಕಾಶ ಕೊಟ್ಟಿದೆ. ಆದರೆ ಈ ಸಮಯದಲ್ಲಿ ಅವರು ಎಂದಿನ ತಮ್ಮ ಅನುಷ್ಠಾನಗಳ ಜೊತೆಗೆ ಮತ್ತೂ ಹೆಚ್ಚಿನ ಜಪ–ತಪ–ಅಧ್ಯಯನಗಳಲ್ಲಿ ನಿರತರಾಗಿರಬೇಕು. ಜನರಿಗೆ ಧರ್ಮಬೋಧನೆಯನ್ನು ಮಾಡಬೇಕು.

ಕೇವಲ ವೈದಿಕ ಪಂಥದ ಸನ್ಯಾಸಿಗಳು ಮಾತ್ರವೇ ಅಲ್ಲದೆ, ಬೌದ್ಧ–ಜೈನ ಸನ್ಯಾಸಿಗಳೂ ಚಾತುರ್ಮಾಸ್ಯವ್ರತವನ್ನು ಆಚರಿಸುತ್ತಾರೆ.

ನಮ್ಮ ನಾಡಿನಲ್ಲಿ ಶೃಂಗೇರಿ, ಉಡುಪಿ ಮುಂತಾದ ಪ್ರಸಿದ್ಧ ಕ್ಷೇತ್ರಗಳಲ್ಲಿ ಸನ್ಯಾಸಿಗಳು ಆಚರಿಸುವ ಚಾತುರ್ಮಾಸ್ಯವ್ರತದ ವಿಧಿ–ವಿಧಾನಗಳನ್ನು ನೋಡಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT