ಶುಕ್ರವಾರ, ಜನವರಿ 24, 2020
27 °C

ಜೀವದ ಗೆಳೆಯರು ಈ ಹಿರೀಕರು

ಹಂಪನಾ Updated:

ಅಕ್ಷರ ಗಾತ್ರ : | |

Prajavani

ಹಂಪಸಂದ್ರ ವೆಂಕಟರಮಣಪ್ಪ ನಾಗರಾಜರಾವ್ (1942) ಮತ್ತು ನಾನು, ಹಂಪಸಂದ್ರ ಪದ್ಮನಾಭಯ್ಯ ನಾಗರಾಜಯ್ಯ (1936)- ಇಬ್ಬರದೂ ಸಮಾನ ಹೆಸರು, ಸಮಾನ ಮನೋಧರ್ಮ, ಸಮಾನ ಸಾಹಿತ್ಯಪ್ರೀತಿ ಮತ್ತು ಅಧ್ಯಯನಶೀಲ ಪ್ರವೃತ್ತಿಯುಳ್ಳ ಆತ್ಮೀಯರು. ಇಬ್ಬರೂ ಚಿಕ್ಕಬಳ್ಳಾಪುರ ಜಿಲ್ಲೆಯವರು. ನಮ್ಮಿಬ್ಬರ ಊರಿನ ಹೆಸರು ಹಂಪಸಂದ್ರ. ಅವರದು ಗುಡಿಬಂಡೆ ತಾಲ್ಲೂಕು ಹಂಪಸಂದ್ರ, ನನ್ನದು ಗೌರೀಬಿದನೂರು ತಾಲ್ಲೂಕು ಹಂಪಸಂದ್ರ.

ಅನೇಕ ವೇಳೆ, ಈಗಲೂ, ಈ ಹಂಪಸಂದ್ರಕ್ಕೆ ಬರೆದ ಅಂಚೆಕಾಗದಗಳು ಆ ಹಂಪಸಂದ್ರಕ್ಕೆ ಹೋಗಿ ಅಲ್ಲಿಂದ ತಿರುಗಿ ಇಲ್ಲಿಗೆ ಬಂದು ಬಟವಾಡೆ ಆಗುತ್ತಿದ್ದವು. ಒಮ್ಮೊಮ್ಮೆ ಹಂಪಸಂದ್ರಕ್ಕೆ ಬರೆದ ಅಂಚೆಪತ್ರಗಳು ತುಮಕೂರು ಜಿಲ್ಲೆಯ ನಿಟ್ಟೂರು ಹತ್ತಿರದ ಅಮ್ಮಸಂದ್ರಕ್ಕೆ ಹೋಗಿ ಸುತ್ತಾಡಿಕೊಂಡು ಒಂದು ವಾರ ತಡವಾಗಿ ಹಂಪಸಂದ್ರಕ್ಕೆ ಹಿಂತಿರುಗಿ ಬರುತ್ತಿದ್ದುದೂ ಉಂಟು.

ಉನ್ನತ ಶಿಕ್ಷಣಕ್ಕಾಗಿ ಇಬ್ಬರು ನಾಗರಾಜರೂ ಮೈಸೂರಿಗೆ ಬಂದವರು- ಒಬ್ಬರು ಕನ್ನಡವನ್ನು ಪ್ರಧಾನವಾಗಿಸಿ ಮಹಾರಾಜ ಕಾಲೇಜಿಗೆ ಸೇರಿ ಸಂಸ್ಕೃತವನ್ನೂ ರೂಢಿಸಿಕೊಂಡರು, ಇನ್ನೊಬ್ಬರು ಸಂಸ್ಕೃತವನ್ನು ಪ್ರಮುಖವಾಗಿಸಿ ಮಹಾರಾಜ ಸಂಸ್ಕೃತ ಕಾಲೇಜಿಗೆ ಸೇರಿ ಕನ್ನಡವನ್ನೂ ಆದರಿಸಿದರು. ಇಬ್ಬರೂ ಅಭ್ಯಾಸಬಲದಿಂದ ಪಳಗಿಸಿದ ವಾಕ್ ಶಕ್ತಿಯಿಂದ ಸಭಾಸದರು ಮೆಚ್ಚುವಂಥ ವಾಗ್ಮಿಗಳೂ ವಿದ್ಯಾಧಿದೇವತೆಯ ಉಪಾಸನೆಯಿಂದ ಪರಿಗಣಿಸಬಹುದಾದ ಲೇಖಕರೂ ಆದರು. ಮಹಾಪ್ರಬಂಧವನ್ನು ರಚಿಸಿ ವಿಶ್ವವಿದ್ಯಾನಿಲಯಕ್ಕೆ ಸಾದರಪಡಿಸಿ ಡಾಕ್ಟರೇಟನ್ನು ಪಡೆದುದಲ್ಲದೆ ಗೌರವ ಡಿಲಿಟ್‌ಗೂ ಭಾಜನರಾದರು. ಇಬ್ಬರೂ ರಾಷ್ಟ್ರಪತಿಗಳಿಂದ ಸಂಮಾನಿತರಾದರು. ಈ ಸಾಮ್ಯತೆ ಕೇವಲ ಆಕಸ್ಮಿಕ ಇರಲಾರದು.

ವಿದ್ವತ್ ಕ್ಷೇತ್ರದಲ್ಲಿ ವಿಶಿಷ್ಟ ಕೊಡುಗೆಯನ್ನು ನೀಡಿದ ವಿದ್ವಾಂಸರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿಯವರು ಭಾಷಾ ಸಮ್ಮಾನ್ ಪ್ರಶಸ್ತಿಯನ್ನು ನೀಡಿ ಪುರಸ್ಕರಿಸುತ್ತಾರೆ. ಇದು ವಾರ್ಷಿಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗೆ ಸರಿಸಮಾನವಾದುದು. ನಾಗರಾಜರಾಯರಿಗೆ ಸಂಸ್ಕೃತಕ್ಕೂ ನನಗೆ ಕನ್ನಡಕ್ಕೂ ಭಾಷಾ ಸಮ್ಮಾನ್ ಒಂದೇ ವರ್ಷದಲ್ಲಿ ಪ್ರಾಪ್ತವಾಯಿತು. ಹೈದರಾಬಾದಿನ ತೆಲುಗು ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ನಮಗೆ ಆ ಪ್ರಶಸ್ತಿಯನ್ನು ಅಕಾಡೆಮಿಯ ಅಂದಿನ ಅಧ್ಯಕ್ಷರಾಗಿದ್ದ ಸುನಿಲ್ ಗಂಗೋಪಾಧ್ಯಾಯರು ಪ್ರದಾನ ಮಾಡಿದರು.
ಪ್ರಶಸ್ತಿ ಪುರಸ್ಕೃತರಾಗಿ ನಾಗರಾಜಾರಾಯರು ಅಸ್ಖಲಿತ ವಾಗ್ಧಾರೆಯಾಗಿ ದೇವವಾಣಿಯನ್ನು ಮೊಳಗಿಸಿ ವಿಜೃಂಭಿಸಿದರು. ನಾನು ಸುಲಿದ ಬಾಳೆಯ ಹಣ್ಣಿನಂದದ ಸವಿಗನ್ನಡದಲ್ಲಿ ಮಾತಾಡಿದೆ. ನಮ್ಮಿಬ್ಬರ ನಡುವೆ ಸಮದಂಡಿಯಾದ ಈ ಸಾದೃಶ್ಯಸಂಪತ್ತು ಇಷ್ಟಕ್ಕೆ ನಿಲ್ಲುವುದಿಲ್ಲ. ಇಬ್ಬರೂ ವಿದುಷಿಯರೂ ಸಾರಸ್ವತೋಪಾಸಕರೂ ಗೃಹತಪಸ್ವಿನಿಯರೂ ಆದ ಸೌಭಾಗ್ಯವತಿಯರನ್ನು ಪಡೆದ ಭಾಗ್ಯಶಾಲಿಗಳು.

ನಾಮಸಾದೃಶ್ಯದಿಂದ ತೊಡಗಿ ಇನ್ನೂ ಕೆಲವು ಸಮಾನ ಆಸಕ್ತಿ ಅರ್ಹತೆ ಇತ್ಯಾದಿ ಗುಣಾವಳಿ ಮೇಲುಮೇಲಿನ ತೇಲುನೋಟಕ್ಕೆ ನಮ್ಮಿಬ್ಬರಲ್ಲಿ ಕಾಣಿಸುವುದು ದಿಟ. ಆದರೆ ಇವಿಷ್ಟರಿಂದಲೇ ನಾವಿಬ್ಬರೂ ಸಮಾನರೆಂಬ ನಿರ್ಧಾರ ಕೈಗೊಳ್ಳುವಂತಿಲ್ಲ. ಸಾಮ್ಯಗಳಿರುವಂತೆ ವೈಷಮ್ಯಗಳೂ ಇವೆ. ನಮ್ಮಿಬ್ಬರ ನಡುವೆ ಮೈತ್ರಿ ಇದೆಯೇ ಹೊರತು ವೈಷಮ್ಯವಿಲ್ಲ. ನಾಗರಾಜರಾಯರು ಹಲವು ವಿಷಯ ವಿಚಾರಗಳಲ್ಲಿ ನನಗಿಂತಲೂ ಹೆಚ್ಚು ಸಾಧನೆ ಮಾಡಿ ಬಹಳ ಮುಂದಿದ್ದಾರೆ ಮತ್ತು ಎತ್ತರದಲ್ಲಿದ್ದಾರೆ. ಸಂಸ್ಕೃತ ಭಾಷೆ, ಸಾಹಿತ್ಯ ಮತ್ತು ಶಾಸ್ತ್ರಗಳಲ್ಲಿ ಅವರ ಪರಿಶ್ರಮ, ಪಾಂಡಿತ್ಯ ಅಗಾಧ.

ಸುಪ್ರಸಿದ್ಧ ಕಾವ್ಯಗಳ ಮುಖ್ಯ ಭಾಗಗಳು ಅವರಿಗೆ ವಾಚೋವಿಧೇಯ. ಅಲಂಕಾರಶಾಸ್ತ್ರ, ವ್ಯಾಕರಣ, ಛಂದಸ್ ಶಾಸ್ತ್ರಾದಿಗಳು ಅವರಿಗೆ ಕರತಲಾಮಲಕ. ಕಾವ್ಯಶಾಸ್ತ್ರ ವಿಚಕ್ಷಣರಾಗಿದ್ದು ಸುಲಲಿತವಾಗಿ ಬರೆಯುತ್ತಾರೆ. ಏಕಮೇವಾದ್ವಿತೀಯ ಸಂಸ್ಕೃತ ಸುಧಾಮ ಪತ್ರಿಕೆಯ ವಾಚಕರಿಗೆ ರಾಯರ ಪದ್ಯಗಂಧಿ ಗದ್ಯಶೈಲಿಯ ರುಚಿ ಸಿಗುತ್ತಿದೆ. ಸಂಸ್ಕೃತದಲ್ಲಿ ಪುಂಖಾನುಪುಂಖವಾಗಿ ಕಾವ್ಯ ಕಥೆ, ಕಾದಂಬರಿ ನಾಟಕಗಳನ್ನು ಬರೆದು ಕೀರ್ತಿ ಗಳಿಸಿದ್ದಾರೆ. ನಿರರ್ಗಳವಾಗಿ ಉಪನ್ಯಾಸ ಮಾಡುತ್ತಾರೆ.

ಶ್ರವಣಬೆಳಗೊಳದಲ್ಲಿ 2017ರಲ್ಲಿ ರಾಷ್ಟ್ರೀಯ ಸಂಸ್ಕೃತ ಸಮ್ಮೇಳನ ನಡೆಯಿತು. ಅದರ ವೇದಿಕೆಯಿಂದ ನಾಗರಾಜರಾಯರು ಓತಪ್ರೋತವಾಗಿ ಮಾತಾಡಿದಾಗ ಆಸೇತುಹಿಮಾಚಲದಿಂದ ಬಂದಿದ್ದ ಸಂಸ್ಕೃತ ಪ್ರಾಜ್ಞರು ಬೆಕ್ಕಸಬೆರಗಾಗಿ ಆಲಿಸಿದರು. ರಾಯರ ವ್ಯಾಖ್ಯಾನನಿರಪೇಕ್ಷ ಶೈಲಿಯನ್ನೂ ವಾಕ್ಸರಣಿಯನ್ನೂ ಕಂಠಸಿರಿಯನ್ನೂ ಆಸ್ವಾದಿಸಿ, ಆನಂದಿಸಿ ಮುಕ್ತಕಂಠದಿಂದ ಶ್ಲಾಘಿಸಿದರು.

ಅವರ ಪ್ರಗಲ್ಭಪಾಂಡಿತ್ಯವನ್ನು ಅವಧಾರಿಸಿ ಇಸ್ರೇಲಿನ ಜರೊಸೆಲೇಮ್ ವಿಶ್ವವಿದ್ಯಾಲಯ ಸಂದರ್ಶಕ ಪ್ರಾಧ್ಯಾಪಕರನ್ನಾಗಿಸಿ ಗೌರವಿಸಿರುವುದು ಕನ್ನಡಿಗರು ಹೆಮ್ಮೆಪಡುವ ವಿಚಾರ. ಸಂಸ್ಕೃತ, ಕನ್ನಡ, ಇಂಗ್ಲಿಷ್ – ಈ ಮೂರೂ ಭಾಷೆಗಳಲ್ಲಿ ಏಕಪ್ರಕಾರವಾದ ಪ್ರಭುತ್ವ ಸಾಧಿಸಿಕೊಂಡಿರುವುದಲ್ಲದೆ ಕೃತಿಗಳನ್ನೂ ಹೊರತಂದಿದ್ದಾರೆ.
ಅನುವಾದಶಿರೋಮಣಿ ನಾಗರಾಜರಾವ್ ಕನ್ನಡದಿಂದ ಸಂಸ್ಕೃತಕ್ಕೂ ಇಂಗ್ಲಿಷಿಗೂ ಮತ್ತು ಸಂಸ್ಕೃತ, ಇಂಗ್ಲಿಷಿನಿಂದ ಕನ್ನಡಕ್ಕೂ ಭಾಷಾಂತರ ಮಾಡಿ ಬಹುಭಾಷಿಗರ ಮನ್ನಣೆಗೆ ಪಾತ್ರರಾಗಿದ್ದಾರೆ. ಅವರ ಅನುವಾದದ ಲಾಭ ಪಡೆದ ಫಲಾನುಭವಿಗಳಲ್ಲಿ ನಾನೂ ಒಬ್ಬನೆಂಬುದನ್ನು ಹೇಳಿಕೊಳ್ಳಲು ಹೆಮ್ಮೆಪಡುತ್ತೇನೆ. ನಾನು ತಿಳಿಗನ್ನಡದಲ್ಲಿ ಬರೆದಿರುವ ಚಾರು ವಸಂತ ಎಂಬ ದೇಸೀಕಾವ್ಯವನ್ನು ನಾಗರಾಜರಾವ್ ಅವರು ‘ಚಾರುವಸಂತೀಯಮ್’ ಎಂಬ ಶೀರ್ಷಿಕೆಯಿತ್ತು ಸಂಸ್ಕೃತ ಭಾಷೆಗೆ ಅತ್ಯಮೋಘವಾಗಿ ಭಾಷಾಂತರಿಸಿ ಮಹೋಪಕಾರವೆಸಗಿದ್ದಾರೆ.

ವಿದ್ವದ್ವರೇಣ್ಯರಾದ ನಾಗರಾಜಾರಾವ್ ಬಲ್ಲಿದರ ಬಳಗದಲ್ಲಿ ಮೂರ್ಧನ್ಯ ಸ್ವರೂಪರಾಗಿ ಕಂಗೊಳಿಸುತ್ತಿದ್ದರೂ ಹಸುಗೂಸಿನಂತೆ ನಗುನಗುತ್ತಾ ಸರಳ ಸಜ್ಜನಿಕೆ ವಿನಯ ಸಂಪನ್ನತೆಯಿಂದ ಎಲ್ಲರೊಡನೊಂದಾಗಿ ಬೆಲ್ಲಸಕ್ಕರೆಯಂತೆ ಬೆರೆತು ಬಾಳುತ್ತಿರುವ ಅಪರೂಪದ ಅಪರಂಜಿ. ವಯಸ್ಸಿನಲ್ಲಿ ನಾನು ದೊಡ್ಡವನು, ವಿದ್ವತ್ತಿನಲ್ಲಿ ಅವರು ದೊಡ್ಡವರು. ಅವರು ಆಯುಸ್ಸು ಆರೋಗ್ಯಭಾಗ್ಯದಿಂದ ವರ್ಧಿಷ್ಣವಾಗಿ ಪ್ರಕಾಶಿಸುತ್ತಿರಲೆಂದು ಹಾರೈಸುತ್ತೇನೆ. 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು