ಬುಧವಾರ, ಆಗಸ್ಟ್ 4, 2021
28 °C

ನನ್ನ ಅವ್ವ... ಸತ್ವಶಾಲಿ ಮಹಿಳೆ 

ಶಿವಾನಂದ ಕಣವಿ Updated:

ಅಕ್ಷರ ಗಾತ್ರ : | |

Prajavani

ಕನ್ನಡದ ಹಿರಿಯ ಲೇಖಕಿಯರಲ್ಲಿ ಒಬ್ಬರಾಗಿದ್ದ ದಿವಂಗತ ಶಾಂತಾದೇವಿ ಕಣವಿ ಅವರದು ಚೆಂಬೆಳಕಿನಂತಹ ವ್ಯಕ್ತಿತ್ವ. ಅವರ ಸ್ಮೃತಿ ಗ್ರಂಥ ‘ಸಂಜೆಮಲ್ಲಿಗೆ’ ಇನ್ನೇನು ಪ್ರಕಟವಾಗಲಿದೆ. ಈ ಹೊತ್ತಿನಲ್ಲಿ, ಅವರ ಹಿರಿಯ ಪುತ್ರನಿಂದ ಅಮ್ಮನಿಗೆ ನುಡಿನಮನ...

ಕನ್ನಡ ಸಾಹಿತ್ಯದ ಹಿರಿಯ ಲೇಖಕಿಯರಲ್ಲಿ ಒಬ್ಬರಾಗಿದ್ದ ದಿವಂಗತ ಶಾಂತಾದೇವಿ ಕಣವಿ ಅವರದು ಚೆಂಬೆಳಕಿನಂತಹ ವ್ಯಕ್ತಿತ್ವ. ನಾಡಿನ ಹಿರಿಯ ಕವಿ ಚೆನ್ನವೀರ ಕಣವಿಯವರ ಪತ್ನಿಯಾಗಿದ್ದ ಶಾಂತಾದೇವಿ ಬದುಕಿನಲ್ಲಿ ಪತಿಯ ನೆರಳಾಗಿದ್ದರೂ ಸಾಹಿತ್ಯದಲ್ಲಿ ಕವಿಯನ್ನು ಹಿಂಬಾಲಿಸದೆ ಕಥಾ ಜಗತ್ತಿನಲ್ಲಿ ಹೆಜ್ಜೆ ಹಾಕಿದವರು. ಅವರ ಕಥೆಗಳು ಹಿಂದಿ, ತಮಿಳು, ಮಲಯಾಳಂ, ತೆಲುಗು, ಒಡಿಯಾ, ಪಂಜಾಬಿ ಮತ್ತು ಇಂಗ್ಲಿಷ್‌ ಭಾಷೆಗಳಲ್ಲಿ ಅನುವಾದಿತವಾಗಿವೆ. ಅವರ ಸ್ಮೃತಿ ಗ್ರಂಥ ‘ಸಂಜೆಮಲ್ಲಿಗೆ’ ಇನ್ನೇನು ಪ್ರಕಟವಾಗಲಿದೆ. ಈ ಹೊತ್ತಿನಲ್ಲಿ ಅವರ ಹಿರಿಯಪುತ್ರ, ತಮ್ಮ ಅವ್ವನನ್ನು ನೆನಪಿಸಿಕೊಂಡ ಬರಹ ಇಲ್ಲಿದೆ...

ಶಾಂತಾದೇವಿ ಕಣವಿ (1933-2020)

ಹಿರಿಯ ಕಥೆಗಾರ್ತಿ ಶಾಂತಾದೇವಿ ಕಣವಿ ಯವರು ಆರು ದಶಕಕ್ಕೂ ಹೆಚ್ಚು ಕಾಲ ಕನ್ನಡ ಸಾಹಿತ್ಯಸೇವೆಯನ್ನು ಮಾಡಿದರು. ಅವರ ಎಂಟು ಕಥಾಸಂಗ್ರಹಗಳು ಸಂಜೆ ಮಲ್ಲಿಗೆ, ಬಯಲು ಆಲಯ, ಮರು ವಿಚಾರ, ಜಾತ್ರೆ ಮುಗಿದಿತ್ತು, ಕಳಚಿ ಬಿದ್ದ ಪೈಜಣ, ನೀಲಿಮಾ ತೀರ, ಗಾಂಧಿ ಮಗಳು ಮತ್ತು ಅಚ್ಚ ಪರಿಮಳ ಮತ್ತು ಎರಡು ಸಂಪುಟಗಳಲ್ಲಿ ಸಂಗ್ರಹಿತ ಕಥಾ ಮಂಜರಿ ಅಸಂಖ್ಯ ಕನ್ನಡಿಗರ ಹೃದಯ ತಟ್ಟಿವೆ.

ಅವರ ಸಾಹಿತ್ಯ ಸೇವೆಗೆ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಅಕಾಡೆಮಿಯ ಗೌರವ ಪ್ರಶಸ್ತಿ, ಕರ್ನಾಟಕ ಸರಕಾರದ ದಾನ ಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತಿನ ಬಿ. ಸರೋಜಾದೇವಿ ಪ್ರಶಸ್ತಿ, ಈಟೀವಿ ಪರಿಪೂರ್ಣ ಮಹಿಳೆ ಪ್ರಶಸ್ತಿ ಇತ್ಯಾದಿಗಳೂ ಮತ್ತು ಕರ್ನಾಟಕ ರಾಜ್ಯ ಅಕ್ಕ ಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ದಿಂದ ಗೌರವ ಡಾಕ್ಟರೇಟಿನ ಗೌರವವೂ ಸಂದಿವೆ.

ಅವರ ಸಾಹಿತ್ಯ ಕೃಷಿಯ ಬಗ್ಗೆ ಹಲವು ವಿಚಾರ ಸಂಕಿರಣಗಳೂ ಮತ್ತು ಕೃತಿಗಳೂ ಪ್ರಕಟವಾಗಿವೆ. ‘ಒಣಗ ಬಾರದು ಒಡಲ ಚಿಲುಮೆ’ ಎಂಬ ವಿಮರ್ಶೆಯ ಕೃತಿಯಲ್ಲಿ 56 ವಿಮರ್ಶಕರು ಅವರ ಕಥೆಗಳ ವಿಮರ್ಶೆಯನ್ನು ಮಾದಿದ್ದಾರೆ. ಸದ್ಯ ಅವರ ಸ್ಮೃತಿ ಗ್ರಂಥ ‘ಸಂಜೆ ಮಲ್ಲಿಗೆ’ ಪ್ರಕಟವಾಗಲಿದೆ.

****

ಸಾವಿಲ್ಲದ, ಆತ್ಮವೊಂದು ಇದೆಯೋ ಇಲ್ಲವೋ ನನಗೆ ಗೊತ್ತಿಲ್ಲ. ನನ್ನ ಆತ್ಮಶೋಧವೂ ಕವಿ ವಿ.ಜಿ. ಭಟ್ಟರಂತೆ ಕಿಟ್ಟೆಲ್ ಶಬ್ದಕೋಶದ 153ನೆಯ ಪುಟಕ್ಕಿಂತ ಮುಂದೆ ಹೋಗಿಲ್ಲ.

ನನ್ನ ವೈಜ್ಞಾನಿಕ ಓದು ನನಗೆ ಮನಸ್ಸು, ನೆನಪುಗಳು, ಕನಸು, ಭಾವನೆ, ಬುದ್ಧಿ, ವಿವೇಕಗಳೆಲ್ಲ ನಮ್ಮ ಮೆದುಳಿನಲ್ಲಿ ಉಗಮಿಸುತ್ತವೆ. ಆದ್ದರಿಂದ ನಮ್ಮ ಸಾವಿನ ನಂತರ ನಮ್ಮ ದೇಹದಂತೆ ಅವೂ ನಶ್ವರ ಎಂದು ಬೋಧಿಸುತ್ತದೆ. ಆದರೆ ಒಬ್ಬ ವ್ಯಕ್ತಿಯ ನೆನಪು, ಪ್ರಭಾವ ಉಳಿದವರ ಪ್ರಜ್ಞೆಯಲ್ಲಿ ಆ ವ್ಯಕ್ತಿಯ ನಂತರವೂ ಉಳಿಯುತ್ತದೆ. ಆ ಮಟ್ಟಿಗೆ ಅವರಿನ್ನೂ ನಮ್ಮೊಡನೆ, ನಮ್ಮಲ್ಲಿ ಇದ್ದಾರೆಂದು ಹೇಳಬಹುದು. ಕಣ್ಮರೆಯಾದ ವ್ಯಕ್ತಿ ಒಬ್ಬ ಸಾಹಿತಿ, ಕಲೆಗಾರ, ಚಿಂತಕರಾಗಿದ್ದಾಗ ಅವರ ಕೃತಿಗಳ ಮೂಲಕ ಇನ್ನೂ ಹೆಚ್ಚು ದಿನ, ವರುಷ, ಶತಮಾನಗಳವರೆಗೆ ಕೂಡ ಅನೇಕ ಪರಿಚಿತ ಮತ್ತು ಅಪರಿಚಿತ ಆಸಕ್ತರಿಗೆ ‘ಜೀವಂತ’ವಾಗಿರುತ್ತಾರೆ. ಇದು ನನ್ನ ತಿಳುವಳಿಕೆ.

ನನ್ನ ಅವ್ವನ ಸುಮಾರು ಆರು ದಶಕಗಳ ಕನ್ನಡ ಸಾಹಿತ್ಯ ಕೃಷಿ ಬಗ್ಗೆ ಇತರರು ಬರೆದಿದ್ದಾರೆ ಮತ್ತು ಸಾವಿರಾರು ಓದುಗರು ಮೆಚ್ಚಿಕೊಂಡಿದ್ದಾರೆ. ಅವಳ ಸ್ನೇಹಮಯ ವಿಶಾಲ ಹೃದಯದ ಬಗ್ಗೆ ಅವಳ ಹತ್ತಿರ ಬಂದವರೆಲ್ಲ ಈಗ ಮುದ್ರಣವಾಗುತ್ತಿರುವ ಸ್ಮೃತಿ ಗ್ರಂಥ ‘ಸಂಜೆಮಲ್ಲಿಗೆ’ಯಲ್ಲಿ (ಸಂ: ವೀಣಾ ಶಾಂತೇಶ್ವರ, ಶಾಂತಾ ಇಮ್ರಾಪುರ) ಬರೆದಿದ್ದಾರೆ. ನಾನು ಈ ಚಿಕ್ಕ ಟಿಪ್ಪಣಿಯಲ್ಲಿ ಅವಳಿಂದ ನಾನು ಏನು ಕಲಿತೆ ಮತ್ತು ಹೇಗೆ ಪ್ರಭಾವಿತನಾದೆ ಅನ್ನುವ ಬಗ್ಗೆ ಬರೆಯುತ್ತಿದ್ದೇನೆ.

ನನ್ನ ಅವ್ವನಿಗೆ ಕೆಲವು ಆಳವಾದ ನಂಬಿಕೆಗಳಿದ್ದವು. ಆದರೆ ಅವಳೆಂದೂ ಕುಟುಂಬದಲ್ಲಿ ಇತರರ ಮೇಲೆ ತನ್ನ ನಂಬಿಕೆಗಳನ್ನು ಹೇರಲಿಲ್ಲ ಅಥವಾ ಭಾಷಣವನ್ನೂ ಕೊಡುತ್ತಿರಲಿಲ್ಲ. ತನ್ನ ನಡೆಯಲ್ಲಿಯೇ ಅವಳದನ್ನು ವ್ಯಕ್ತಗೊಳಿಸುತ್ತಿದ್ದಳು. ಹೀಗಾಗಿ ನನ್ನ ಮೇಲೆ ಬಾಲ್ಯದಿಂದ ಅವು ಗಾಢ ಪ್ರಭಾವವನ್ನು ಬೀರಿದವು.

ಅವ್ವ ನಿರೀಶ್ವರವಾದಿಯಾಗಿರಲಿಲ್ಲ. ಆದರೆ ಜೀವನದುದ್ದಕ್ಕೂ ಎಂದೂ ಅವಳು ಯಾವ ದೇವರ ಪೂಜೆಗಾಗಿಯೂ ಗುಡಿ, ದೇವಾಲಯಗಳಿಗೆ ಹೋಗಲಿಲ್ಲ. ಧಾರ್ಮಿಕ ನಂಬಿಕೆಗಳು ವೈಯಕ್ತಿಕ, ಹೊರತೋರಿಕೆಗಾಗಿ ಅಲ್ಲ ಎಂಬುದು ಅವಳ ಗಾಢ ನಂಬಿಕೆಯಾಗಿತ್ತು. ಮನೆಯ ಪೂಜಾ ಕೋಣೆಯ ಏಕಾಂತದಲ್ಲಿ ಅವಳು ಆಗಾಗ ಧ್ಯಾನ ಮಾಡುತ್ತಿದ್ದಳು. ಪೂಜೆ, ಪುನಸ್ಕಾರ, ಹೋಮ, ಹವನ ಮುಂತಾದವುಗಳನ್ನು ಅವಳು ಎಂದೂ ಆಚರಿಸುತ್ತಿದ್ದಿಲ್ಲ. ಜ್ಯೋತಿಷ್ಯ ಮತ್ತು ಅದರೊಡನೆಯ ಗ್ರಹಣ, ರಾಹುಕಾಲ, ಮುಹೂರ್ತ, ಶಕುನ-ಅಪಶಕುನ, ಗ್ರಹ ಶಾಂತಿ ಇತ್ಯಾದಿಗಳಿಂದಂತೂ ಅವಳು ಬಹಳ ದೂರವಿದ್ದಳು.

ಚಿಕ್ಕಂದಿನಿಂದಲೂ ಅವಳು ಚಿಕಿತ್ಸಕ, ವಾಸ್ತವವಾದಿ, ವೈಚಾರಿಕ ದೃಷ್ಟಿಕೋನವನ್ನು ಬೆಳೆಸಿಕೊಂಡಿದ್ದಳು. ಜನಸೇವೆಯಲ್ಲಿ ತೊಡಗಿರುವ ಎಲ್ಲರ ಬಗ್ಗೆಯೂ ಅವಳಿಗೆ ಗೌರವವಿತ್ತು ಆದರೆ ಧಾರ್ಮಿಕ, ನೈತಿಕ ಮಾರ್ಗದರ್ಶನಕ್ಕಾಗಿ ಅವಳೆಂದೂ ಯಾರ ಕಡೆಗೂ ಹೋಗಲಿಲ್ಲ. ಡಾಂಭಿಕ, ಪ್ರಚಾರಪ್ರಿಯರಿಂದ ಬಹು ದೂರವಿರುತ್ತಿದ್ದಳು. ಆದರೆ ಸಮಾಜದ ದಲಿತ, ಪೀಡಿತ, ಶೋಷಿತರ ಏಳ್ಗೆ, ಮತ್ತು ಹಕ್ಕುಗಳಿಗಾಗಿ ಕಾರ್ಯನಿರತರಾದವರೆಲ್ಲ ಅವಳಿಗೆ ಪ್ರಿಯ ಮತ್ತು ಆದರಣೀಯರಾಗಿದ್ದರು.

ಹಬ್ಬಗಳೆಲ್ಲ ಸಂತೋಷದಿಂದ ಕುಟುಂಬದ ಎಲ್ಲ ಸದಸ್ಯರೊಡನೆ ಹಬ್ಬದ ಊಟ ತಿಂದು ಮನೋರಂಜನೆ ಮಾಡುವದಕ್ಕಾಗಿ ಮಾತ್ರ ಅಲ್ಲದೇ ವಿಶೇಷ ಪೂಜೆ ಪುನಸ್ಕಾರಗಳಿಗಾಗಿ ಅಲ್ಲ ಎಂದು ನಡೆಯುತ್ತಿದ್ದಳು. ಮನೆಯಲ್ಲಿ ನಡೆದ ವಿವಾಹಗಳೂ ಸರಳವಾಗಿರಬೇಕು ಯಾವ ಆಡಂಬರದ ಧಾರ್ಮಿಕ ವಿಧಿಗಳಿಲ್ಲದೇ 12ನೆಯ ಶತಮಾನದ ಲಿಂಗಾಯತ ಶರಣರ ಕೆಲ ವಚನಗಳನ್ನು ಉದ್ಗರಿಸಿ ಆಚರಿಸುವದು ಅವಳ ಮತ್ತು ನನ್ನ ತಂದೆಯವರ ಆಯ್ಕೆಯಾಗಿತ್ತು. ಅದೇ ವೇಳೆ ಮಕ್ಕಳು ಅಥವಾ ಸಂಬಂಧಿಗಳು ಧಾರ್ಮಿಕ ವಿಧಿಗಳನ್ನು ಆಚರಿಸಬೇಕು ಎಂದರೆ ಅವರೆಂದೂ ಅಡ್ಡ ಬರಲಿಲ್ಲ. ಒಟ್ಟಾರೆ ಸ್ವಂತ ಆಚಾರ ವಿಚಾರಗಳನ್ನು ಅಭಿವ್ಯಕ್ತಗೊಳಿಸುವಲ್ಲಿ ಎಂದೂ ಅವಳು ಹಿಂಜರಿಯಲಿಲ್ಲ. ಆದರೆ ಉಳಿದವರೆಲ್ಲರೂ ಅದನ್ನೇ ಪಾಲಿಸ ಬೇಕೆಂದು ಹಟವನ್ನೂ ಹಿಡಿಯುತ್ತಿರಲಿಲ್ಲ.

ಅವಳಿಗೆ 12ನೆಯ ಶತಮಾನದ ವಚನಕಾರರು ಬಹಳ ಪ್ರಿಯರಾಗಿದ್ದರು. ಏಕೆಂದರೆ ಅವರ ಅನೇಕ ವಿಚಾರಗಳು ಅವಳಿಗೆ 20–21ನೆಯ ಶತಮಾನಕ್ಕೂ ಸರಿ ಎನಿಸುತ್ತಿದ್ದವು. ಇತ್ತೀಚೆಗೆ ಅವಳು ಬೌದ್ಧ ವಿಚಾರಗಳನ್ನು ಆಸಕ್ತಿಯಿಂದ ಓದುತ್ತಿದ್ದಳು. ಅಂದರೆ ಅವಳು ಸ್ವಾನುಭವ, ಸ್ವಾಧ್ಯಾಯದಿಂದ ತನ್ನ ನಂಬಿಕೆ, ವೈಚಾರಿಕತೆಯನ್ನು ರೂಪುಗೊಳಿಸುತ್ತಿದ್ದಳು. ಯಾವದೇ ಮತ, ಪಂಥದಿಂದಲ್ಲ.

ಅವ್ವನ ತಂದೆ, ಸಿದ್ದಬಸಪ್ಪಾ ಗಿಡ್ನವರ, ನನ್ನ ಅಜ್ಜ, ಉತ್ಕಟ ಪುಸ್ತಕ ಪ್ರಿಯರು. ಸಣ್ಣ ಊರುಗಳಲ್ಲಿ ಅವರ ಹೆಚ್ಚಿನ ನೌಕರಿಯ ದಿನಗಳನ್ನು (1920-57ವರೆಗೆ ) ಕಳೆದರೂ ಅವರ ಸಾಹಿತ್ಯ ಪ್ರೇಮ, ಸಾಹಿತಿಗಳ ಗೆಳೆತನ ಮತ್ತು ಅದರಂತೇ ಸಂಗೀತ ಮತ್ತು ಸಂಗೀತಕಾರರ ಪ್ರೇಮ ಪ್ರಸಿದ್ಧವಾಗಿತ್ತು. ಅವರ ಮನೆಯ ಗ್ರಂಥಾಲಯ ತನ್ನ ಗಾತ್ರ ಮತ್ತು ವೈವಿಧ್ಯದಿಂದ ಎಲ್ಲರನ್ನೂ ಬೆರಗುಗೊಳಿಸುತ್ತಿತ್ತು. ಅವರು ಲಿಂಗಾಯತ ಶರಣರಷ್ಟೇ, ಜಿದ್ದು ಕೃಷ್ಣಮೂರ್ತಿ, ವಿವೇಕಾನಂದ, ಶ್ರೀ ಅರವಿಂದರನ್ನೂ ಮೆಚ್ಚಿಕೊಂಡಿದ್ದರು. ಗ್ರಂಥಾಲಯ ವಿಪುಲವಾಗಿ ಇಂಗ್ಲೀಷು, ಕನ್ನಡ ಸಾಹಿತ್ಯಕೃತಿಗಳ ಜೊತೆಗೆ ತತ್ವಜ್ಞಾನ ಆಧ್ಯಾತ್ಮದರಿವಿನ ಭಾಂಡಾರವೂ ಆಗಿತ್ತು. ಅವರ ಗ್ರಂಥಾಲಯದಲ್ಲೇ ತನ್ಮಯಳಾಗಿ ತನ್ನ ಬಾಲ್ಯವನ್ನು ಕಳೆದಳು ನನ್ನ ಅವ್ವ. ಆದರೆ ಅವಳು ಶ್ರೀ ಅರವಿಂದರ ಅಥವಾ ಇತರ ಆಧ್ಯಾತ್ಮಿಗಳ ಅನುಯಾಯಿಯಾಗಲಿಲ್ಲ. ಅವಳು ಕೊನೆಯವರೆಗೂ ವೈಚಾರಿಕವಾಗಿ ಸ್ವತಂತ್ರ ಮತ್ತು ವಾಸ್ತವವಾದಿಯಾಗಿದ್ದಳು ಮತ್ತು ನಮ್ಮನ್ನೆಲ್ಲ ಅದೇ ದಿಕ್ಕಿನಲ್ಲಿ ತನ್ನ ಉದಾಹರಣೆಯ ಮೂಲಕ ನಡೆಸಿದಳು.

ಅವಳ ಸಾಹಿತ್ಯದ ಓದು ವಿಶಾಲವಾಗಿತ್ತು ಮತ್ತು ಕೊನೆಯ ದಿನಗಳ ವರೆಗೂ ನಡೆದಿತ್ತು. ಅವಳ ಕೊನೆ ದಿನಗಳಲ್ಲೂ ಹಾಸಿಗೆಯ ಬಳಿ ಶಾರ್ಲೆಟ್ ಬ್ರೊಂಟೀ ಯ ‘ಜೇನ್ ಆಯರ್’ ಇತ್ತು. ಅದನ್ನವಳು ಅದೆಷ್ಟು ಬಾರಿ ಓದ್ದಿದ್ದಳೋ !

ಅವಳ ಮೆಚ್ಚಿನ ಲೇಖಕರೆಲ್ಲಾ ವಾಸ್ತವವಾದಿಗಳಾಗಿದ್ದರು. ಉದಾಹರಣೆಗೆ ಇಂಗ್ಲೀಷಿನಲ್ಲಿ ಅವಳಿಗೆ ಜೇನ್ ಆಸ್ಟಿನ್ ಅತಿ ಪ್ರಿಯ. ಅದರಂತೇ ಬ್ರೊಂಟೀ ಅಕ್ಕ-ತಂಗಿಯರು, ಚಾರ್ಲ್ಸ್ ಡಿಕನ್ಸ್, ಜಾರ್ಜ್‌ ಎಲಿಯಟ್, ವಿಕ್ಟರ್ ಹ್ಯುಗೊ, ಲಿಯೊ ಟಾಲ್‌ಸ್ಟಾಯ್‌, ಅಂಟೊನ್ ಚೆಕೋವ್, ಓ ಹೆನ್ರಿ, ಗೈ ದಿ ಮೊಪಾಸ್ಸಾ ಇತ್ಯಾದಿ. ಕನ್ನಡದ ಗದ್ಯ ಸಾಹಿತ್ಯದಲ್ಲಿ ಮಾಸ್ತಿ, ಕಾರಂತ, ಅನಕೃ, ತರಾಸು, ಕಟ್ಟೀಮನಿ, ನಿರಂಜನ, ಕುವೆಂಪು, ಭೈರಪ್ಪ, ಶಂಕರ ಮೊಕಾಶಿ, ಶಾಂತಿನಾಥ ದೇಸಾಯಿ, ಪೂರ್ಣಚಂದ್ರ  ತೇಜಸ್ವಿ, ಲಂಕೇಶ, ಕೊಡಗಿನ ಗೌರಮ್ಮ, ವಾಣಿ, ತ್ರಿವೇಣಿ, ಅನುಪಮಾ, ವೈದೇಹಿ ಮತ್ತೆ ಅನೇಕರು.  ಅವಳು ಸ್ವಭಾವತಃ ವಾಸ್ತವವಾದಿ. ಆದ್ದರಿಂದಲೇ ಉಳಿದ ಕನ್ನಡದ ಮತ್ತು ಯುರೋಪಿನ ವಾಸ್ತವವಾದಿಗಳು ಅವಳಿಗೆ ಪ್ರಿಯರಾಗಿದ್ದರು.

ಸ.ಸ.ಮಾಳವಾಡರ ಮನೆಯಲ್ಲಿ ಇತ್ತೀಚೆಗೆ ದೊರೆತ ಒಂದು ಹಸ್ತಪ್ರತಿಯನ್ನು ನೋಡಿದರೆ 1944ರಲ್ಲಿ (11 ವರುಷದವಳಿದ್ದಾಗ) ಅವಳು ಬರೆದ ಒಂದು ಕಥೆಯಿಂದ ಅವಳ ಬರಹ ಪ್ರಾರಂಭವಾಯಿತೆನ್ನಬಹುದು. ಆದರೆ ಪ್ರಕಟವಾಗಿ ಪ್ರಸಿದ್ಧಿ ಪಡೆದ ಕಥೆ 1958ರ ನಡೆದು ಬಂದ ದಾರಿ, ಕೀರ್ತಿನಾಥ ಕುರ್ತುಕೋಟಿ ಸಂಪಾದಿಸಿದ ಸಾಹಿತ್ಯ ಸಂಗ್ರಹದಲ್ಲಿ. ನಾವೆಲ್ಲಾ ಐದು ಜನ ಮಕ್ಕಳು ಚಿಕ್ಕವರಾಗಿದ್ದಾಗಲೂ ಅಡಿಗೆ ಮನೆ, ಮಲಗುವ ಮನೆ, ಡೈನಿಂಗ ರೂಮು ಎಲ್ಲ ಅವಳ ಓದು ಬರಹದ ಕೋಣೆಗಳಾಗಿದ್ದವು. 60ರ ದಶಕದಿಂದ ಸುಧಾ, ಕಸ್ತೂರಿ, ತರಂಗ, ಮಯೂರ, ವಿವಿಧ ದೀಪಾವಳಿ ವಿಶೇಷಾಂಕಗಳು ಅವಳ ಸಣ್ಣ ಕಥೆಗಳನ್ನು ಬೇಡಿ ಪ್ರಕಟಗೊಳಿಸಿದವು. ಆಕಾಶವಾಣಿ ಅವಳ ಕಥೆಗಳನ್ನಷ್ಟೇ ಅಲ್ಲ ಸುಮಾರು 60ಕ್ಕೂ ಮೀರಿ ರೇಡಿಯೊ ನಾಟಕಗಳನ್ನೂ, ಮಕ್ಕಳು ಮತ್ತು ಮಹಿಳೆಯರಿಗಾಗಿ ಅನೇಕ ಹರಟೆ, ಭಾಷಣಗಳನ್ನೂ ಪ್ರಸಾರ ಮಾಡಿತು. ಎಂಟು ಕಥಾ ಸಂಗ್ರಹ ಗಳೂ ಮತ್ತವಳ ಕಥೆಗಳ ವಿಮರ್ಶಾ ಗ್ರಂಥಗಳೂ ಪ್ರಕಟವಾದವು ಮತ್ತನೇಕ ಗೌರವ, ಪ್ರಶಸ್ತಿಗಳೂ ದೊರಕಿದವು. ಅದರೆ ಅದೆಲ್ಲ ಅವಳು ಅಕ್ಕ ಮಹಾದೇವಿಯೆಂದಂತೆ ‘ಸಂತೆಯೊಳಗೊಂದು ಮನೆಯ ಮಾಡಿ ಶಬ್ದಕ್ಕೆ ನಾಚದೆಯೇ’ ಸಾಧಿಸಿದಳು.

ಅಡುಗೆ ಮನೆಯ ಜವಾಬ್ದಾರಿಯನ್ನು ಚಿಕ್ಕ ಸೊಸೆ ಮಂಜುಳಾಗೆ ವಹಿಸಿದ ನಂತರ ಅವಳು ಯಾವಾಗಲೂ ದೂರದರ್ಶಕದ ಮುಂದೆ ಪುಸ್ತಕ ಹಿಡಿದುಕೊಂಡೇ ಎಲ್ಲರಿಗೂ ಕಾಣಿಸುತ್ತಿದ್ದಳು.

ತಾಯಿಯಾಗಿ ಅವಳು ನಾವು ಚಿಕ್ಕವರಿದ್ದಾಗ ನಮ್ಮನ್ನು ಸಹಜವಾಗಿ ಪ್ರೀತಿ ಮತ್ತು ಅನುಶಾಸನ ಮಿಶ್ರಿಸಿ ಬೆಳೆಸಿದಳು ಆದರೆ ಸ್ವಲ್ಪ ಪ್ರಜ್ಞಾವಂತರಾದಂತೆಯೇ ಕುಟುಂಬದ ವಿಷಯಗಳಲ್ಲಿ ಪಾರದರ್ದಶಿಯೂ ಮತ್ತು ವೈಚಾರಿಕವಾಗಿ ಉದಾರಮತವಾದಿಯೂ ಆಗಿದ್ದಳು. ನಾವು ಬೆಳೆದಂತೆ ನಮಗೆ ವೈಚಾರಿಕ ಸ್ವಾತಂತ್ರ್ಯ ನಮ್ಮ ನಮ್ಮ ಜೀವನ ಸಂಗಾತಿಗಳು, ಅಭಿರುಚಿಗಳು, ಹವ್ಯಾಸಗಳು,ಶೈಕ್ಷಣಿಕ ಮತ್ತು ವ್ಯವಹಾರಿಕ ರಂಗಗಳಲ್ಲಿ ಜವಾಬ್ದಾರಿಯುತ ಸ್ವಾತಂತ್ರ್ಯ ಪೂರ್ತಿಯಾಗಿ ನಮ್ಮ ತಂದೆ-ತಾಯಿ ಕೊಟ್ಟಿದ್ದರು. ಈಗ ಎಷ್ಟೋ ಬಾರಿ ನಾವು ನಮ್ಮ ಮಕ್ಕಳ ಜೊತೆಗೆ ಹಾಗಿದ್ದೀವಾ ಎಂದು ಅನೇಕ ಬಾರಿ ನನಗೆ ಪ್ರಶ್ನೆಯೇಳುತ್ತದೆ. ನನ್ನ ಮಟ್ಟಿಗೆ ಅವಳ ಪಾಲನೆಯ ಶೈಲಿ ನಮಗೆ ಆದರ್ಶವಾಗಿದೆ.

ಅವಳ ನಂಬಿಕೆಗಳು ಗಾಢವಾಗಿದ್ದವು. ಆದರೂ ಎಂದೂ ಜಡವಾಗಿದ್ದಿಲ್ಲ. ಹೊಸ ವಿಚಾರ ಅಥವಾ ಚಿಂತನೆಯ ಕ್ರಮಕ್ಕೆ ಸರಳವಾಗಿ ತನ್ನನು ತಾನು ತೆರೆದುಕೊಂಡಿದ್ದಳು. ಸುತ್ತೆಲ್ಲ ವೈಚಾರಿಕ ಜಡತ್ವ ತುಂಬಿದಾಗ ಇದೊಂದು ಅಪರೂಪ ಗುಣವಾಗಿಲ್ಲವೇ? ನನ್ನ ತಂದೆಯ ದೃಷ್ಟಿಕೋನ ಸಮಷ್ಟಿಯದು, ಸಮತೋಲ- ಸಮನ್ವಯತೆಯದು. ತಮ್ಮ ಅನುಭವ, ಕಾವ್ಯ ದರ್ಶನದ ಜೊತೆಗೆ ರಾಜಕೀಯ, ಸಾಮಾಜಿಕ ಅನಿಸಿಕೆಗಳನ್ನೂ ತಮ್ಮ ಕವಿತೆಗಳ ಮೂಲಕ ಅವರು ಸುಮಾರು ಏಳು ದಶಕಕ್ಕೂ ಹೆಚ್ಚು ಕಾಲ ವ್ಯಕ್ತಗೊಳಿಸಿದ್ದಾರೆ. ವಿರಳವಾದ ಸಂದರ್ಭಗಳಲ್ಲಿ ಅವರು ಸಾರ್ವಜನಿಕವಾಗಿ ಬೀದಿಗಿಳಿದೂ ತಮ್ಮ ವಿರೋಧವನ್ನು ಪ್ರದರ್ಶಿಸಿದ್ದಾರೆ. 1975-77ರ ತುರ್ತು ಪರಿಸ್ಥಿತಿ, 1981–82ರ ಕನ್ನಡ ಪ್ರಾಧಾನ್ಯತೆಗಾಗಿ ಗೋಕಾಕ ಚಳುವಳಿ, ಕಲಬುರ್ಗಿಯವರ ಹೃದಯ ವಿದ್ರಾವಕ ಹತ್ಯೆ, ಇತ್ತೀಚಿನ ಕೋಮುವಾದ ಮತ್ತು ನಾಗರಿಕತೆ ಸಂಬಂಧಿತ ವಿವಾದಗಳು ಇದಕ್ಕೆ ಕೆಲವು ಉದಾಹರಣೆಗಳು. ಆಗೆಲ್ಲ ನನ್ನ ಅವ್ವ ಅವರ ಬೆನ್ನ ಹಿಂದಿನ ಸ್ಥಿರ ಸಂಗಾತಿಯಾಗಿದ್ದಳು.

ಸ್ವತಃ ಅವಳು ಸಾರ್ವಜನಿಕ ಸಭೆ ಸಮಾರಂಭಗಳಲ್ಲಿ ಶ್ರೋತೃವಾಗಿದ್ದಳೇ ಹೊರತು ವೇದಿಕೆಯೇರಿ ಭಾಷಣ ಬೀರಲು ಹಿಂಜರಿದಳು. ಆಡಂಬರ, ಪ್ರಚಾರ ಪಿಪಾಸೆ, ತನ್ನ ಸಾಧನೆಯ ಬಗ್ಗೆ ಗರ್ವ ಇತ್ಯಾದಿ ಅವಳ ಹತ್ತಿರವೆಂದೂ ಸುಳಿಯಲಿಲ್ಲ.

ಇಂಥ ತಾಯಿಯಿಂದ ಪ್ರಭಾವಿತರಾಗದೇ ಇರಲು ನಮಗೆಲ್ಲ ಹೇಗೆ ಸಾಧ್ಯ. ನಮ್ಮೊಳಗೆ ಅವಳಿಂದೂ ಜೀವಿಸಿದ್ದಾಳೆ ಎಂದು ನನಗನಿಸುತ್ತದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು