ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೆಚ್ಚುಗೆ ಪಡೆದ ಪ್ರಬಂಧ| ಎಮ್ಮಾಯಣ

ಭೂಮಿಕ ಸಂಕ್ರಾಂತಿ ಲಲಿತ ಪ್ರಬಂಧ ಸ್ಪರ್ಧೆ
Last Updated 31 ಜನವರಿ 2020, 19:30 IST
ಅಕ್ಷರ ಗಾತ್ರ

‘ಎಮ್ಮಾಯಣ’ ಎನ್ನುವ ಶಬ್ದ ಕೇಳಿದಾಕ್ಷಣ ಇದೇನಾಪ್ಪಾ.. ಅಂತ ನೀವೆಲ್ಲಾ ಯೋಚನೆಗೆ ಬಿದ್ದಿರಬಹುದು. ಇದೂ ಕೂಡ ರಾಮಾಯಣ, ಫೋನಾಯಣ, ಮೊಬೈಲಾಯಣಗಳ ಜಾತಿಗೇ ಸೇರಿದ್ದು.

ಎಮ್ಮೆ ಎಂದ ಕೂಡಲೇ ಒಂದು ಕ್ಷಣ ಎಲ್ಲರ ಮನಸ್ಸು ಹಳ್ಳಿ ಕಡೆ ಹೋಗಿ ನೆನಪುಗಳ ಸುರುಳಿ ಬಿಚ್ಚಿಕೊಂಡು ಬಿಡುತ್ತದೆ. ಎರಡು ಮಾಡಿನ ಕೊಟ್ಟಿಗೆ, ಸಾಲಾಗಿ ಕಟ್ಟಿರುವ ಎಮ್ಮೆ, ಹಸುಗಳು, ಅದರ ಪಕ್ಕವೇ ಗೊಬ್ಬರದ ಗುಂಡಿ. ಮುಂಜಾನೆ ಎದ್ದ ಕೂಡಲೇ ಕುಡಿಯುವ ಎಮ್ಮೆ ಹಾಲಿನ ತಾಜಾ ರುಚಿಯ ಚಹಾ, ಚಾಕುವಿನಲ್ಲಿ ಕತ್ತರಿಸಬಹುದಾದ ಗಟ್ಟಿ ಮೊಸರು, ಬಿಳಿದಾದ ಚೆಂಡೋ.. ಆಕಾಶದಲ್ಲಿನ ಚಂದಿರನೋ ಎಂಬಂತಿರುವ ಬೆಣ್ಣೆ ಮುದ್ದೆ, ವೀಳ್ಯದೆಲೆ ಹಾಕಿ ಕಾಸಿರುವ ಘಮಘಮಿಸುವ ಹರಳು ಹರಳಾದ ಗಟ್ಟಿತುಪ್ಪ.. ಎಲ್ಲರ ಬಾಯಲ್ಲೂ ಒಂದು ಕ್ಷಣ ನೀರು ಬಂದಿರಲೇಬೇಕು.

ನಮ್ಮದು ಹಳ್ಳಿಮನೆ. ಮನೆಯ ಪಕ್ಕದಲ್ಲೇ ದೊಡ್ಡದಾದ ಕೊಟ್ಟಿಗೆ. ನನ್ನ ಮದುವೆಯಾದ ಶುರುವಿಗೆ ನಮ್ಮ ಮನೇಲಿ ಒಂದು ನಾಡಾಕಳು ಬಿಟ್ಟರೆ ಉಳಿದೆಲ್ಲವೂ ಎಮ್ಮೆಗಳೇ ಆಗಿದ್ದವು. ಬಂದವರೆಲ್ಲಾ ‘ಇದೇನು ಎಮ್ಮೆ ಕೊಟ್ಟಿಗೆಯಾ..?’ ಎನ್ನುತ್ತಿದ್ದರು. ಎಮ್ಮೆಗಳನ್ನು ನೋಡಿ ‘ಇದೇನು ಪಟ್ಟದ ಆನೆಗಳಾ!’ ಎಂದು ಮೂಗಿನ ಮೇಲೆ ಬೆರಳಿಡುತ್ತಿದ್ದರು. ಅವಿಭಕ್ತ ಕುಟುಂಬದಂತೆ ಕೊಟ್ಟಿಗೆ ತುಂಬಿ ತುಳುಕುತ್ತಿತ್ತು.

ಈ ಎಮ್ಮೆಗಳಲ್ಲೂ ಎಷ್ಟೊಂದು ಜಾತಿ ಅಂತೀರಿ. ಬಂಗಾಳಿ ಗೌಳಿ, ಜವಾರಿ, ಸುರ್ತಿ, ಮುರ‍್ರಾ.. ಎಂದು ನಾನು ಬೇರೆ ಬೇರೆ ತಳಿಗಳನ್ನೆಲ್ಲಾ ನೋಡಿದ್ದು ಇಲ್ಲೇ. ಅದೇನು ಹಾಲು, ಮಜ್ಜಿಗೆ, ಬೆಣ್ಣೆ, ತುಪ್ಪ ಅಂತೀರಿ! ಹಾಗೇ ಒಂದೆರಡು ವರ್ಷ ಕಳೆಯಿತು ನೋಡಿ, ಕಾಲ ಬದಲಾಗೇಬಿಡ್ತು.

‘ಮನೆ ತುಂಬ ಜನ, ಕೊಟ್ಟಿಗೆ ತುಂಬ ದನ’ ಎಂತಿದ್ದವರು ಮನೆಯಲ್ಲಿ ಗಂಡ ಮತ್ತು ಹೆಂಡ್ತಿ ಇಬ್ರೇ ಇರೋ ಸಮಯ ಬಂತು. ಕೊಟ್ಟಿಗೆ ತುಂಬಾ ಎಮ್ಮೆಗಳನ್ನು ಸಾಕುವುದೇನು ಸಸಾರದ ಕೆಲಸವೇ..? ಅವಕ್ಕೆಲ್ಲ ಹೊಟ್ಟೆ ತುಂಬಾ ಹಿಂಡಿ -ಹುಲ್ಲು ಹಾಕಬೇಕು, ಸೆಗಣಿ ತೆಗೆದು ಮೈಗೆಲ್ಲ ನೀರು ಹಾಕಿ ಕೊಟ್ಟಿಗೆ ತೊಳೆಯಬೇಕು, ಹಾಲು ಹಿಂಡಬೇಕು.. ಒಂದೆರಡಾ! ಇನ್ನು ಹಿಂಡಿ-ಬೂಸಾ ರೇಟೋ ಅಕ್ಕಿ ರೇಟಿಗಿಂತ ಜಾಸ್ತಿ. ಮನೆ ಖರ್ಚಿಗಿಂತ ಕೊಟ್ಟಿಗೆಯದೇ ಜಾಸ್ತಿಯಾಗಿಬಿಡಬೇಕೇ! ಇವನ್ನೆಲ್ಲಾ ಲೆಕ್ಕ ಹಾಕಿಯೇ ಪಕ್ಕದ ಮನೆಯವರೆಲ್ಲಾ ಇದ್ದ ಹಸುಗಳನ್ನೆಲ್ಲಾ ಮಾರಾಟ ಮಾಡಿ ಡೈರಿಯಿಂದ ಹಾಲು ತಂದುಕೊಳ್ಳುತ್ತಿರಬೇಕು ಅಂತ ನನ್ನ ಟ್ಯೂಬ್‌ಲೈಟ್ ತಲೆಗೆ ಸ್ವಲ್ಪ ಲೇಟಾಗಿ ಹೊಳೀತು.

ಹಳ್ಳಿಮನೇಲಿ ಹಾಲು, ಮೊಸರು, ತುಪ್ಪ ಅಂತ ಗಡದ್ದಾಗಿ ತಿಂದುಂಡು ರೂಢಿ ನೋಡಿ. ಅದೂ ಅಲ್ದೆ ನೆಂಟರಿಷ್ಟರು, ಹಬ್ಬ-ಹರಿದಿನ ಮುನ್ನೂರೈವತ್ತೈದು ದಿನವೂ ಇರುವ ಆಳುಕಾಳ್ಗಳು ಎಂದು ಎಲ್ಲರಿಗೂ ಚಹಾ, ಮಜ್ಜಿಗೆ ಎಂದು ಪೂರೈಸುವುದಕ್ಕೆ ದುಡ್ಡು ಕೊಟ್ಟು ತರುವ ಈ ಡೈರಿ ಹಾಲು ಬಾರಿ ಬರುವುದಿಲ್ಲ. ಇನ್ನೂ ಒಂದು ಸಮಸ್ಯೆ ಎಂದರೆ ಹಳ್ಳಿಮನೆಗಳಲ್ಲಿ ಸೆಗಣಿ ಗ್ಯಾಸಿನಲ್ಲೇ ಅಡುಗೆ ಮಾಡುವುದು. ತೋಟ-ಗದ್ದೆಗಳಿಗೆಲ್ಲ ಜೀವಾಮೃತ ಮಾಡೋಕೆ ಎಮ್ಮೆದನಗಳ ಮೂತ್ರ ಬೇಕು. ಸಾವಯವ ಗೊಬ್ಬರ ಹಾಕಿಯೇ ತರಕಾರಿ ಗಿಡಗಳನ್ನೆಲ್ಲ ಬೆಳೆಸೋದು. ಇಷ್ಟೆಲ್ಲಾ ಉಪಯೋಗ ಇರುವಾಗ ಎಲ್ಲಾ ಎಮ್ಮೆಗಳನ್ನೂ ಮಾರಾಟ ಮಾಡೋದಕ್ಕೆ ಮನಸ್ಸು ಬರಲಿಲ್ಲ. ಇನ್ನು ಕೆಲಸದವರ ಬಳಿ ಮಾಡ್ಸೋಣವೆಂದ್ರೆ ಅವರ ಪಗಾರೋ ಸಾಪ್ಟವೇರ್ ಎಂಜಿನಿಯರ್‌ನ ಪಗಾರವೇ ಸೈ. ಅವರು ಹೇಳಿದಷ್ಟು ಹಣ ಕೊಟ್ಟರೂ ಸೆಗಣಿ ಮುಟ್ಟುವ ಕೆಲಸ ಇವರು ಮಾಡುವುದಕ್ಕೆ ಒಲ್ಲೆ ಎಂದುಬಿಡುತ್ತಾರೆ. ಸ್ವಲ್ಪ ಒತ್ತಾಯಿಸಿದರೆ ‘ಇವೆಲ್ಲಾ ಮಾಡುವುದಕ್ಕೆ ಹೇಸಿಗೆ ಅಂತ್ಲೇ ಡೈರಿ ಹಾಲು ತಂದುಕೊಳ್ತೇವೆ. ನಿಮ್ಮ ಮನೆಗೆ ಬಂದು ಸೆಗಣಿ ಮುಟ್ಟಿಕೊಳ್ಳುವುದಾ.. ಇಸ್ಸೀ..’ ಎಂದು ನಮ್ಮನ್ನೇ ಪೆದ್ದರನ್ನಾಗಿ ಮಾಡಿಬಿಡುತ್ತಾರೆ.

ಏನಾದ್ರಾಗ್ಲಿ ಸಾದಾ ತಳಿಯ ಎರಡ್ಮೂರು ಎಮ್ಮೆ ಕಟ್ಟಿಕೊಂಡು ಉಳಿದವುಗಳನ್ನು ಮಾರಾಟ ಮಾಡುವುದೆಂದು ತೀರ್ಮಾನಿಸಿದೆವು. ಇದ್ದ ಹಾಲಿನಲ್ಲೇ ಒಂದಿಷ್ಟು ಹಾಲು, ತುಪ್ಪ ಮಾರಾಟ ಮಾಡಿಕೊಂಡರೆ ಹಿಂಡಿ, ಬೂಸಾದ ಖರ್ಚಾದರೂ ಆಯಿತು ಎಂಬುದು ನಮ್ಮ ಲೆಕ್ಕಾಚಾರ. ಆದ್ರೆ ಈ ಎಮ್ಮೆಗಳನ್ನ ಮಾರಾಟ ಮಾಡೋವಾಗ ಮಾತ್ರ ಹೊಟ್ಟೆ ಕರುಳಿಂದ ಸಂಕ್ಟ ಆಗೋಯ್ತು ನೋಡಿ. ಮನೆ ಹೆಣ್ಮಕ್ಕಳನ್ನ ಗಂಡನ ಮನೆಗೆ ಕಳ್ಸೋವಾಗ ಆಗೋಹಾಂಗೇ ಸೀರೆ ಸೆರಗೆಲ್ಲಾ ಒದ್ದೆ ಆಯ್ತು. ಲಾಭವೋ ಲುಕ್ಸಾನೊ ಒಲ್ಲದ ಮನಸ್ಸಿಂದ ಸುಬ್ಬಿ, ತಿಮ್ಮಿ, ದುರ್ಗಿ.. ಎಲ್ಲ ಹೊರಟು ನಿಂತವು.

ಮೂರು ಎಮ್ಮೆಗಳ ಕೆಲಸವೇನೂ ಸುಲಭದ್ದಲ್ಲ. ಮೊದಲೆಲ್ಲ ದನಗಾವಲಿಗೆಂದೇ ಒಬ್ಬನನ್ನು ನೇಮಿಸುತ್ತಿದ್ದರು. ಆತ ಮುಂಜಾನೆ ದನಗಳ ದಂಡನ್ನು ಹೊಡೆದುಕೊಂಡು ಹೊರಟರೆ ಕತ್ತಲಾಗೋ ಮೊದ್ಲು ಅವನ್ನೆಲ್ಲ ಅವರವ್ರ ಮನೆಗೆ ಒಪ್ಪಿಸುತ್ತಿದ್ದ. ಗುಡ್ಡ-ಬೆಟ್ಟ ಎಲ್ಲಾ ತಿರುಗಿ ಚೆನ್ನಾಗಿ ಮೆಂದು ಗುಂಪಿನಲ್ಲಿ ನಾ ಮುಂದು ತಾ ಮುಂದು ಎಂದು ಬರುವ ಸೊಬಗನ್ನು ನೋಡುವುದೇ ಒಂದು ಹಬ್ಬವಾಗಿತ್ತು. ಆದರೆ ಈಗ ಹಾಗಿಲ್ವಲ್ಲಾ. ಮನೆಯ ಹತ್ತಿರದ ಬೆಟ್ಟದ ಮೇಲೆ ಮೇಯಲು ಬಿಟ್ಟೆವು. ಅವಕ್ಕೇನು ಇದು ನಮ್ಮನೆ, ಅದು ಬೇರೆಯವರ ಮನೆ ಎಂದು ತಿಳಿಯುತ್ತಾ? ಪಾಪ ಒಂದೇಸಮ ತಲೆ ಬಗ್ಗಿಸಿಕೊಂಡು ಸೊರ ಪರ ಹುಲ್ಲು ತಿನ್ನುತ್ತಾ ಹೊರಟ ಈ ಎಮ್ಮೆಗಳು ಪಕ್ಕದ ಮನೆಯ ಹಿತ್ತಲನ್ನೂ ತಿಂದು ಮುಗಿಸಿದ್ದವು. ಅವರಿಗೋ ಕಷ್ಟಪಟ್ಟು ಬೆಳೆಸಿದ ತರಕಾರಿ ಹೂವಿನ ಗಿಡಗಳು, ಎಷ್ಟೆಂದರೂ ಹೊಟ್ಟೆ ಉರಿಯುತ್ತದೆ. ಸಿಟ್ಟಲ್ಲಿ ‘ಎಮ್ಮೆ, ದನ ಸರ‍್ಯಾಗಿ ಸಾಕೋಕೆ ಆಗದೇ ಇದ್ದವರು ಯಾಕ್ರೀ ಸಾಕ್ತೀರಾ?’ಎಂದು ಬಾಯಿಗೆ ಬಂದಿದ್ದು ಬೈದರು. ಎಷ್ಟೆಂದರೂ ಮೂಗ ಜಾತಿ, ಅವಕ್ಕೇನು ಗೊತ್ತಾಗುತ್ತೆ. ಅವರು ಮಾಡಿದ ತಪ್ಪಿಗೆ ನಾವು ಜಗಳ ಆಡೋದು ಸರಿ ಅಲ್ಲ ಎನಿಸಿ ಅವರು ಹೇಳಿದ್ದನ್ನೆಲ್ಲಾ ಸಹಿಸಿಕೊಂಡೆವು.

ಈ ಎಮ್ಮೆಗಳಿಗೆ ಆಲಸ್ಯ. ಯಾವಾಗ ನೊಡಿದ್ರೂ ಬಿದ್ದುಕೊಂಡಿರುತ್ವೆ ಅಂತೀವಿ. ಆದ್ರೆ ಇವೂ ನಾವು ತಿಳ್ಕೊಂಡಷ್ಟು ದಡ್ಡರಲ್ಲ. ಮುಂಜಾನೆ ನಾವು ಏಳುವುದು ಸ್ವಲ್ಪ ಲೇಟಾದ್ರೂ ಇವು ಕೊಟ್ಟಿಗೆಯಿಂದ್ಲೇ ‘ಆಂಯ್‘ ಅಂತ ಹೊಟ್ಟೆ ಕರುಳಿನಿಂದ ಕೂಗುತ್ವೆ. ‘ಹಸಿವೆಯಾಗಿದೆ ಹುಲ್ಲು ಹಾಕು, ಹಾಲು ಹಿಂಡು’ ಎಂತಿರಬೇಕು. ಅಕ್ಕಪಕ್ಕ ಹಾದು ಹೋದರೂ ಹೆಜ್ಜೆಯ ಸದ್ದಿಗೇ ಎಚ್ಚರಗೊಂಡು ಕರೆಯುತ್ವೆ. ಹುಲ್ಲು, ಕಡೆಗಚ್ಚು ಕೊಡುವಾಗ, ಮೂಸಿ ನೋಡಿ ನಮ್ಮ ಧ್ವನಿ, ಸ್ಪರ್ಶದ ಸೂಕ್ಷ್ಮತೆಯಿಂದ್ಲೇ ಪರಿಚಯ ಹಿಡಿದುಬಿಡುತ್ವೆ. ಮಾತು ಬರದಿದ್ರೂ ಇವರ ಚುರುಕುತನ ನೋಡಿ ಆಶ್ಚರ್ಯವಾಗುತ್ತದೆ.

ನಮ್ಮ ಮನೆಯಲ್ಲಿ ನಾನೇ ಹಾಲು ಹಿಂಡುವುದು. ಒಂದ್ಸಲ ನೆಂಟರ ಮನೆಗೆ ಹೋದಾಗ ಸಂಜೆ ಮನೆಗೆ ಬರುವುದಕ್ಕೆ ಅಗಲಿಲ್ಲ. ನನ್ನ ಗಂಡ ಹಾಲು ಹಿಂಡುವುದಕ್ಕೆ ಹೋದರು. ಕುಳಿತುಕೊಂಡು ಕೆಚ್ಚಲಿಗೆ ನೀರು ಸೋಕಿ, ಮೆಲು ಹಚ್ಚಬೇಕು ಎನ್ನುವಷ್ಟರಲ್ಲಿ ಇವರನ್ನು ಮೂಸಿ ಮೂಸಿ ದುರುಗುಟ್ಟಿ ನೋಡಿ ‘ಥಟ್ ಫಟ್’ ಎಂದು ಕಾಲು ಎತ್ತಿ ತಿರುಗಿ ಬಿಡಬೇಕೇ! ಆಮೇಲೆ ಹುಲ್ಲು, ಹಿಂಡಿ ಏನೇ ಇಟ್ಟರೂ ಕೊಡದೇ ಕೊನೆಯ ಅಸ್ತ್ರವೆಂದು ಇವರು ನನ್ನ ಸೀರೆಯನ್ನೇ ಸುತ್ತಿಕೊಂಡು ಬಂದು ಕೆಚ್ಚಲಿಗೆ ಕೈ ಹಾಕಿದಾಗ ಮಾಮೂಲಿನಂತೆ ಹಾಲು ಕೊಟ್ಟಿತ್ತು.

ಈ ಎಮ್ಮೆಗಳಿಗೆ ಹೊಟ್ಟೆ ದೊಡ್ಡ. ತಿನ್ನೋಕೆ, ಕುಡಿಯೋಕೆ ಜಾಸ್ತಿಯೇ ಬೇಕು. ವರ್ಷ ಪೂರ್ತಿ ಕಟ್ಟಿ ಹೊಟ್ಟೆ ಹೊರೆಯುವುದು ತಿಳಿದುಕೊಂಡಷ್ಟು ಸುಲಭವಲ್ಲ. ಹೀಗೇ ಕಟ್ಟಿ ಹಾಕೋದ್ರಿಂದ ಅವಕ್ಕೂ ಕೈಕಾಲೆಲ್ಲ ಹಿಡಿಯುತ್ತೆ, ಸೂರ್ಯನ ಬೆಳಕು ತಾಗಲ್ಲ, ನೈಸರ್ಗಿಕವಾಗಿ ಸಿಗುವ ಔಷಧೀಯ ವಸ್ತುಗಳು ಸಿಗಲ್ಲ. ಅದಕ್ಕೇ ಮಳೆಗಾಲದಲ್ಲಿ ಸುತ್ತೆಲ್ಲಾ ಹಸಿರಿರುತ್ತೆ ತಿಂದು ಬರಲಿ ಎಂದು ಕಾಲಾಡಲು ಬಿಟ್ಟೆವು. ಒಮ್ಮೆ ಹೀಗೇ ಹೊರಗಡೆ ಬಿಟ್ಟಾಗ ಈ ಎಮ್ಮೆ ದಂಡು ಎಲ್ಲೋ ಹೋಗಿಬಿಟ್ಟಿದ್ದವು. ರಾತ್ರಿಯಾದರೂ ಬರಲಿಲ್ಲ. ಹಿಂಡಿ ಆಸೆಗೆ ಬರಬಹುದು, ಕೆಚ್ಚಲ ಹಾಲು ತುಂಬಿ ನೋವು ಬಂದಾದ್ರೂ ಬರಬಹುದು, ಕರುಗಳ ನೆನಪಾಗಿಯಾದ್ರೂ ಬರಬಹುದು ಎನ್ನುತ್ತ ಕಾದೆವು. ಸಂಜೆಯಾದರೂ ಇಲ್ಲ. ಇನ್ನೆಲ್ಲಿ ಅರಲು ಮಿಂದು ಕೆರೆಯಲ್ಲಿ ಮುಳುಗು ಹಾಕುತ್ತಿರಬೇಕು. ಈಜುವ ಖುಷಿಯಲ್ಲಿ ಕತ್ತಲಾಗಿದ್ದೂ ತಿಳಿಯಲಿಲ್ಲ ಎಂದು ಗೊಣಗಿಕೊಂಡೆವು. ನನ್ನ ಗಂಡ ಆ ದನ ಮಳೆಯಲ್ಲಿ ಬ್ಯಾಟರಿ ಹಿಡಿದು ಗುಡ್ಡ, ಬೆಟ್ಟ, ಹೊಳೆ, ಕಾಡು ಎಂದು ಸುಮಾರು ಏಳೆಂಟು ಕಿಲೋಮೀಟರ್ ನಡೆದು ಹುಡುಕಾಡಿ ಆಮೇಲೆ ಕಾಲು ಸೋತು ಮನೆಗೆ ಬಂದರು.

ಹಿಂದೊಮ್ಮೆ ಹೀಗೆ ಹೋದಾಗ ಯಾರದ್ದೋ ಹುಲ್ಲಿನ ಬೇಣದಲ್ಲಿ ಸಿಕ್ಕಿ ಹಾಕಿಕೊಂಡು ಬರಲಾರದೇ ಅಲ್ಲೇ ಮಲಗಿದ್ದವು. ನನ್ನ ಗಂಡನ ಬೈಕ್ ಸದ್ದಿಗೆ ಎದ್ದು ದಣಪೆಯ ಅಂಚಿಗೆ ಬಂದು ಕುತ್ತಿಗೆ ಉದ್ದ ಮಾಡಿ ‘ಆಂಯ್’ ಎಂದು ಕರೆದವಂತೆ. ಇವರು ಅನುಮಾನದಿಂದ ಗಾಡಿ ನಿಲ್ಲಿಸಿ ನೋಡಿದಾಗ ನಮ್ಮದೇ ಎಮ್ಮೆಗಳು. ಆಮೇಲೆ ಹಾಕಿದ ದಣಪೆಯನ್ನು ತೆಗೆದು ಎಮ್ಮೆಗಳನ್ನೆಲ್ಲಾ ಹೊರಕ್ಕೆ ಬಿಟ್ಟಿದ್ದರು. ಬೈಕಿನ ಹಿಂದೇ ಮನೆಗೆ ಬಂದಿದ್ದವು. ಒಡೆಯನ ಬೈಕಿನ ಸದ್ದನ್ನು ಕೂಡ ಇವು ಎಷ್ಟು ನೆನಪಿಟ್ಟುಕೊಂಡಿದ್ದಾವಲ್ಲ.. ಎಂದು ಆಶ್ಚರ್ಯವಾಗಿತ್ತು.

ಏನಾದರಾಗಲಿ, ರಾತ್ರಿ ಬರಬಹುದೆಂದು ಅವುಗಳ ಜಾಗದಲ್ಲಿ ಹುಲ್ಲು ಹಾಕಿ ಬಾಗಿಲು ತೆಗೆದಿಟ್ಟೆವು. ಬೆಳಗಾದರೂ ಬರಲೇ ಇಲ್ಲ. ಚಹಾಕ್ಕೆ ಹಾಲಿಲ್ಲ, ಮನೆಯಲ್ಲಿ ಚಡಪಡಿಕೆ. ಚೌಡಮ್ಮನಿಗೆ ಕಾಯಿ ಹೇಳಿಕೊಂಡಾಯ್ತು. ಪಕ್ಕದ ಮನೆಯಿಂದ ಹಾಲು ತಂದು ಚಹಾವೇನೋ ಕುಡಿದಾಯ್ತು. ಆದ್ರೆ ಎಮ್ಮೆಗಳ ಸುಳಿವಿಲ್ಲ. ಈ ಎಮ್ಮೆಗಳ ರೇಟೋ ಬಂಗಾರದ ರೇಟಿಗಿಂತಲೂ ಹೆಚ್ಚು. ಯಾರಾದರೂ ಹೊಡೆದುಕೊಂಡು ಹೋಗಿ ಮಾರಾಟ ಮಾಡಿರಬಹುದಾ.. ಅಥವಾ ಹಟ್ಟಿಗರಿಗೆ ಹೊಡೆದರಾ.. ಎಂಬ ಆತಂಕ ನಮಗೆ. ಅದೇನೇ ಇರಲಿ ಚೌಡಮ್ಮನ ಹೇಳಿಕೆ ಜೊತೆ ಭಟ್ಟರ ಬಳಿ ಹೋಗಿ ಕತ್ತಿ ಮಂತ್ರಿಸಿ ತರುವುದು ಒಳ್ಳೆಯದೆನಿಸಿತು. ನನ್ನ ಗಂಡ ಇದ್ದ ಕೆಲಸ ಅಲ್ಲೇ ಬಿಟ್ಟು ಭಟ್ಟರ ಮನೆಗೆ ಓಡಿದರು. ಅವರೇನೋ ಅಂಜನ ಹಚ್ಚಿ ನೋಡಿ ‘ದಿಕ್ಕು ತಪ್ಪಿದೆ ಪಶ್ಚಿಮಕ್ಕೆ ತಿರುಗಿದವರಿಗೆ ಪೂರ್ವ ಮರೆತಿದೆ’ ಎನ್ನುತ್ತ ಕತ್ತಿ ಮಂತ್ರಿಸಿ ಕೊಟ್ಟರು. ಇವರಿನ್ನೂ ಮನೆಗೆ ಬಂದಿರಲಿಲ್ಲ. ಮಧ್ಯಾಹ್ನ ಅಡುಗೆ ಮನೆಯಲ್ಲಿ ನಾನು ಎಮ್ಮೆಗಳನ್ನೇ ನೆನಪಿಸುತ್ತಾ ಹೇಗಪ್ಪಾ ಹುಡುಕುವುದು ಎಂದುಕೊಳ್ಳುತ್ತಿರುವಾಗ ಹೊರಗಡೆ ‘ಆಂಯ್‘ ಎಂದು ಕರೆದಂತಾಯ್ತು. ಗೇಟಿನ ಬಳಿ ನೋಡಿದೆ. ಎಮ್ಮೆಯ ದಂಡು ಗೇಟಿನ ಎದುರು ನಿಂತು ನಾವು ಬಂದಿದ್ದೇವೆ ಎಂದು ಕರೆಯುತ್ತಿದ್ದವು. ಅವಕ್ಕೇ ಮನೆಯ ದಾರಿ ನೆನಪಾಯಿತೋ ಮಂತ್ರಿಸಿದ ಕತ್ತಿ ದಾರಿ ತೋರಿಸಿತೋ ಅಂತೂ ಎಮ್ಮೆಗಳಂತೂ ಮನೆಗೆ ಬಂದವು. ಎಮ್ಮಾಯಣವೇ ಆಯ್ತು ನೋಡಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT