ಭಾನುವಾರ, ಜೂನ್ 13, 2021
23 °C

ವ್ಯಕ್ತಿ ಸ್ವಾತಂತ್ರ್ಯ ಕನ್ನಡಿಯೊಳಗಿನ ಗಂಟು

ಪಲ್ಲವಿ ಇಡೂರು Updated:

ಅಕ್ಷರ ಗಾತ್ರ : | |

Prajavani

ಸ್ವಾತಂತ್ರ್ಯವೆಂಬುದು ಪ್ರತಿಯೊಬ್ಬರ ಮೂಲಭೂತ ಹಕ್ಕು. ಬ್ರಿಟಿಷರ ಶತಮಾನಗಳ ಹಿಡಿತಕ್ಕೆ ಸಿಕ್ಕಿ ಆರ್ಥಿಕವಾಗಿ, ಸಾಮಾಜಿಕವಾಗಿ ಹಾಗೂ ವೈಯಕ್ತಿಕವಾಗಿ ಜರ್ಜರಿತರಾಗಿದ್ದ ಭಾರತೀಯರಿಗೆ 1947ರ ಆಗಸ್ಟ್ 15ನೇ ತಾರೀಖಿನಂದು ದೊರೆತ ಸ್ವಾತಂತ್ರ್ಯವೆಂಬುದು ವರ್ಣನಾತೀತ ಅನುಭವ. ಆದರೆ, ಬ್ರಿಟಿಷರು ಆಳ್ವಿಕೆಯನ್ನು ನಮ್ಮ ಕೈಗೆ ಹಸ್ತಾಂತರಿಸಿದ ನಂತರ ನಾವು ಸಂಪೂರ್ಣ ಸ್ವತಂತ್ರರಾಗಿದ್ದೇವೆಯೇ ಎಂದು ಪ್ರಶ್ನಿಸಿಕೊಂಡರೆ, ನಾವು ರಾಜಕೀಯವಾಗಿ ನಮ್ಮ ಪ್ರತಿನಿಧಿಗಳನ್ನು ಆಯ್ಕೆ ಮಾಡುವಲ್ಲಿ ಸ್ವತಂತ್ರರಾಗಿದ್ದೇವೆಯೇ ಹೊರತು ಉಳಿದ ಹಾಗೆ ಬಹಳಷ್ಟು ವಿಚಾರಗಳಲ್ಲಿ ಈಗಲೂ ಬಂದಿಗಳೇ ಅನ್ನಬಹುದು.

ಪ್ರಜಾಪ್ರಭುತ್ವದ ಪರಿಕಲ್ಪನೆಯಡಿಯಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಸಾರಥ್ಯದಲ್ಲಿ ಅತ್ಯಂತ ಜಾಗರೂಕತೆಯಿಂದ ರಚಿತವಾದ ‘ಭಾರತದ ಸಂವಿಧಾನ’ವನ್ನು ನಮಗೆ ನಾವೇ ಸಮರ್ಪಿಸಿಕೊಂಡಿದ್ದೇವೆ. ಇದರಲ್ಲಿ ದೇಶದ ಪರಿಸ್ಥಿತಿಯನ್ನು ಕಾಲಕ್ಕೆ ತಕ್ಕಂತೆ ಅವಲೋಕಿಸಿ ಅಗತ್ಯ ತಿದ್ದುಪಡಿಗೆ ಅವಕಾಶವನ್ನೂ ಕಲ್ಪಿಸಲಾಗಿದೆ.

ಸ್ವಾತಂತ್ರ್ಯದ ನಂತರ, ದೇಶದಲ್ಲಿ ಕಣ್ಣಿಗೆ ರಾಚುತ್ತಿದ್ದ ಅನೇಕ ಜ್ವಲಂತ ಸಮಸ್ಯೆಗಳ ಕಗ್ಗಂಟುಗಳನ್ನು ಬಿಡಿಸುತ್ತ ಅಭಿವೃದ್ಧಿಯ ಪಥದೆಡೆಗೆ ದೃಷ್ಟಿ ನೆಟ್ಟಿದ್ದ ದೇಶಕ್ಕೆ ಮತ್ತು ಜನತೆಗೆ ಮೊದಲ ಬಾರಿಗೆ ಉಸಿರುಗಟ್ಟಿಸುವ ವಾತಾವರಣ ನಿರ್ಮಾಣವಾಗಿದ್ದು ಇಂದಿರಾ ಗಾಂಧಿ ನೇತೃತ್ವದ ಸರ್ಕಾರ ತುರ್ತು ಪರಿಸ್ಥಿತಿಯನ್ನು ಘೋಷಿಸಿದಾಗ. ದೇಶದೊಳಗಿನ ಯಾವುದೇ ಆಗುಹೋಗುಗಳ ಬಗ್ಗೆ, ತಪ್ಪುಗಳ ಬಗ್ಗೆ ಮುಕ್ತವಾಗಿ ಮಾತನಾಡುವ ಅಥವಾ ಬರವಣಿಗೆಯ ಮೂಲಕ ಪ್ರತಿಭಟಿಸುವ ಹಕ್ಕನ್ನು ಅಧಿಕೃತವಾಗಿ ಹತ್ತಿಕ್ಕಲಾಯಿತು. ಇಂತಹ ಚಟುವಟಿಕೆಗಳಲ್ಲಿ ತೊಡಗಿಕೊಂಡವರು ಹಾಗೂ ತುರ್ತು ಪರಿಸ್ಥಿತಿಯನ್ನು ವಿರೋಧಿಸಿದವರನ್ನು ಮುಲಾಜಿಲ್ಲದೆ ಜೈಲಿಗಟ್ಟಲಾಯಿತು. ಆ ಮೂಲಕ ಭಯದ ವಾತಾವರಣ ನಿರ್ಮಿಸಲಾಯಿತು. ಸ್ವಾತಂತ್ರ್ಯಕ್ಕಾಗಿ ಯಾವ ಪಕ್ಷ ಹಗಲಿರುಳು ಶ್ರಮಿಸಿ ಸ್ವತಂತ್ರ ಭಾರತದ ಅಧಿಕಾರದ ಚುಕ್ಕಾಣಿ ಹಿಡಿಯಿತೊ, ಅದೇ ಪಕ್ಷದ ನಾಯಕತ್ವದಲ್ಲಿ ಮುಂದೆ ಮೂವತ್ತು ವರ್ಷಗಳ ನಂತರ ನಾಗರಿಕ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಕೆಲಸವಾಗಿದ್ದು, ದೇಶದ ಇತಿಹಾಸದಲ್ಲೊಂದು ಅಳಿಸಲಾಗದ ಕಪ್ಪುಚುಕ್ಕೆ.

ಹಾಗೆಂದ ಮಾತ್ರಕ್ಕೆ ತುರ್ತು ಪರಿಸ್ಥಿತಿಯ ಸಮಯದಲ್ಲಿ ಮಾತ್ರ ದೇಶದ ಜನತೆಯ ವ್ಯಕ್ತಿಗತ ಸ್ವಾತಂತ್ರ್ಯಕ್ಕೆ ಧಕ್ಕೆಯಾಗಿರುವುದೇ ಎಂದು ನೋಡಿದರೆ ಖಂಡಿತ ಅಲ್ಲ. ವ್ಯಕ್ತಿಗತ ಸ್ವಾತಂತ್ರ್ಯವೆಂಬುದು ಮನುಷ್ಯನ ಮೂಲಭೂತ ಹಕ್ಕು. ಆದರೆ, ಅದಕ್ಕಾಗಿ ಇವತ್ತಿಗೂ ನಾವು ನಾನಾ ರೀತಿಯಲ್ಲಿ ಹೋರಾಡುತ್ತಿದ್ದೇವೆ. ತಿನ್ನುವ ಆಹಾರದಿಂದ ಹಿಡಿದು, ಧಾರ್ಮಿಕ ಭಾವನೆ, ಲೈಂಗಿಕತೆ ಹೀಗೆ ಎಲ್ಲ ವಿಚಾರಗಳಲ್ಲೂ ನಮ್ಮದೇ ಆಯ್ಕೆ ಹಾಗೂ ಹಕ್ಕಿಗಾಗಿ ಹೋರಾಟ ನಡೆಯುತ್ತಲೇ ಇದೆ. ಆಹಾರದ ವಿಷಯದಲ್ಲಿ ರಾಜಕೀಯ ಮೇಲಾಟಗಳಿಗೆ ವೈಯಕ್ತಿಕ ಆಯ್ಕೆಯ ಸ್ವಾತಂತ್ರ್ಯ ಬಲಿಯಾಗುತ್ತಿದ್ದರೆ, ಪ್ರೀತಿ, ಪ್ರೇಮ, ಲೈಂಗಿಕತೆ, ಧರ್ಮದ ವಿಚಾರವಾಗಿಯೂ ಸಾಮಾಜಿಕ ಕಟ್ಟುಪಾಡುಗಳು, ರಾಜಕೀಯ ಪಿತೂರಿಗಳ ವಿರುದ್ಧವಾಗಿ ಹೋರಾಟಗಳು ನಡೆಯುತ್ತಿವೆ.

ಜಾತಿ ಎನ್ನುವುದು ಸ್ವಾತಂತ್ರ್ಯ ಸಿಕ್ಕು ಇಷ್ಟು ವರ್ಷಗಳ ನಂತರವೂ ಸಂಕೀರ್ಣಗೊಳ್ಳುತ್ತಲೇ ಹೋಗುತ್ತಿರುವ ಸಮಸ್ಯೆಯಾಗಿದ್ದು, ರಾಜಕೀಯ ಹಾಗೂ ಸಾಮಾಜಿಕವಾಗಿ ದಾಳವಾಗಿ ಉಪಯೋಗವಾಗುತ್ತಿದೆ. ಜೊತೆಗೆ ಮೇಲ್ವರ್ಗದವರ ತುಳಿತಕ್ಕೆ ಒಳಗಾಗುತ್ತಿರುವ ಸಮುದಾಯದವರು ಕೆಲವೊಮ್ಮೆ ಪ್ರತಿಭಟಿಸುತ್ತಾ ಇನ್ನೂ ಹೆಚ್ಚಾಗಿ ಪ್ರತಿಭಟಿಸಲೂ ಆಗದ ಅಸಹಾಯಕ ಸ್ಥಿತಿಯಲ್ಲಿದ್ದಾರೆ. ಸ್ತ್ರೀ ವಿಚಾರವಾಗಿ ಹೇಳುವುದಾದರೆ, ಸಾಂವಿಧಾನಿಕ ಮಾನ್ಯತೆಯೊಂದಿಗೆ ಆಕೆಯೂ ಪುರುಷರಿಗೆ ಸಮಾನಳೆಂದು ಹೇಳಿದರೂ ಅದು ಬರೀ ಕಾನೂನಾಗಿ ಉಳಿದಿದೆ. ಇವತ್ತಿಗೂ ಎಷ್ಟೋ ಕ್ಷೇತ್ರಗಳಲ್ಲಿ ಆಕೆ ಎರಡನೇ ದರ್ಜೆಯ ನಾಗರಿಕಳಾಗಿಯೇ ಬದುಕುತ್ತಿದ್ದಾಳೆ. ಅಷ್ಟೇ ಅಲ್ಲದೆ ತನ್ನ ಹಕ್ಕುಗಳಿಗಾಗಿ, ಸ್ಥಾನಮಾನಗಳಿಗಾಗಿ, ಸಮಾಜದ ಮೌಢ್ಯಗಳ ನಡುವೆ ತನ್ನ ಮಾನಸಿಕ ಹಾಗೂ ದೈಹಿಕ ರಕ್ಷಣೆಗಾಗಿಯೂ ಹೋರಾಟ ನಡೆಸುತ್ತಲೇ ಇದ್ದಾಳೆ. ಹೆಣ್ಣು ಭ್ರೂಣಹತ್ಯೆಯೊಂದೇ ಸಾಕು ಹುಟ್ಟುವ ಮೊದಲೇ ಹೆಣ್ಣೆಂಬ ಕಾರಣಕ್ಕೆ ಆಕೆ ಅನುಭವಿಸುವ ತಾರತಮ್ಯವನ್ನು ವಿವರಿಸಲು!

ಸ್ವಾತಂತ್ರ್ಯದ ಇಷ್ಟು ವರ್ಷಗಳ ನಂತರವೂ ನೀರು, ಆಹಾರ, ವಿದ್ಯೆ ಮುಂತಾದ ಮೂಲಭೂತ ಹಕ್ಕಿನ ವಿಚಾರವಾಗಿ ಜನರ ಹೋರಾಟ ಇನ್ನೂ ಮುಗಿದಿಲ್ಲ. ಇವುಗಳಲ್ಲಿ ಬಹುತೇಕ ವ್ಯಕ್ತಿಗತ ಹಕ್ಕುಗಳನ್ನು ‘ದೇಶದ ಹಿತ’, ‘ದೇಶದ ಸುರಕ್ಷತೆ’, ‘ಸಂಸ್ಕೃತಿ’, ‘ಧರ್ಮ’ಗಳ ಹೆಸರಿನಲ್ಲಿ ನಿರಾಕರಿಸಲಾಗುತ್ತಿದೆ. ಇಷ್ಟಾಗಿಯೂ ಹಕ್ಕಿನ ನಿರೀಕ್ಷೆಯಿದ್ದಲ್ಲಿ ದೊಡ್ಡ ಹೋರಾಟವನ್ನೇ ನಡೆಸಬೇಕಾದ ಅನಿವಾರ್ಯತೆಯಿದೆ.

ಇವೆಲ್ಲವೂ ಒಂದು ತೂಕವಾದರೆ, ಸಾಮಾಜಿಕ ಹಾಗೂ ರಾಜಕೀಯವಾಗಿ ನಡೆಯುವ ವಿದ್ಯಮಾನಗಳು ಮತ್ತು ತೀರ್ಮಾನಗಳು ಸರಿಕಾಣದ ಪಕ್ಷದಲ್ಲಿ, ಅದರ ವಿರುದ್ಧವಾಗಿ ದನಿ ಎತ್ತುವ ಸ್ವಾತಂತ್ರ್ಯವನ್ನು ಸಂವಿಧಾನವೇ ನಮಗೆ ಕೊಟ್ಟಿದೆ. ಆದಾಗ್ಯೂ ಅಂತಹ ಸಂದರ್ಭಗಳಲ್ಲಿ ಸಮ ಸಮಾಜದ ಪರಿಕಲ್ಪನೆಯಡಿಯಲ್ಲಿ ದನಿಯೆತ್ತುವವರನ್ನು ಸಾಮಾಜಿಕವಾಗಿ ಸ್ವಾಸ್ಥ್ಯ ಹಾಳುಮಾಡುವ ದೇಶದ್ರೋಹಿಗಳು ಎಂಬರ್ಥದಲ್ಲಿ ಬಿಂಬಿಸಲಾಗುತ್ತಿದೆ. ಸಮಸ್ಯೆಗಳನ್ನು ಒಪ್ಪಿಕೊಂಡು, ಅದರ ಜೊತೆಯೇ ಬದುಕುವ ಸಮಾಜದ ಬಹುಪಾಲು ಜನರು, ಹೋರಾಡುವ ವ್ಯಕ್ತಿಗಳು ಹಾಗೂ ವಿಷಯ ಎರಡನ್ನೂ ಮನರಂಜನೆಯ ಸರಕಾಗಿ ಕಾಣುತ್ತಿರುವುದು ದುರಂತ. ಇತ್ತೀಚೆಗಂತೂ ಇನ್ನೂ ಒಂದು ಹೆಜ್ಜೆ ಮುಂದಕ್ಕೆ ಹೋಗಿ ‘ಹೇರಿದ್ದೆಲ್ಲವನ್ನೂ ಒಪ್ಪಿಕೊಳ್ಳಿ, ಇಲ್ಲವಾದರೆ ದೇಶ ಬಿಟ್ಟು ಹೊರಡಿ’ ಎನ್ನುವಂತಹ ಮಾತುಗಳನ್ನಾಡುವ ಮಟ್ಟಿಗೆ ಪರಿಸ್ಥಿತಿ ಮುಂದುವರಿದಿದೆ.

ಇತ್ತೀಚಿನ ಘಟನೆಗಳ ಉದಾಹರಣೆಗಳನ್ನೇ ತೆಗೆದುಕೊಂಡರೆ ಕಾಶ್ಮೀರದ ಸ್ವಾಯತ್ತತೆಯ ವಿಚಾರವಾಗಿಯೂ ಅಲ್ಲಿನ ನಾಗರಿಕರ ಧ್ವನಿಯನ್ನು ಹತ್ತಿಕ್ಕಲಾಯಿತು. ನಾಗರಿಕ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ಪ್ರತಿಭಟಿಸಿದ ಅನೇಕರನ್ನು ದೇಶದ್ರೋಹದ ಆರೋಪ ಹೊರಿಸಿ ಬಂಧಿಸಿ ಜೈಲಿಗಟ್ಟಲಾಯಿತು. ಈ ರೀತಿಯ ಇನ್ನೂ ಅನೇಕ ವಿಚಾರಗಳಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ನಡೆಯುತ್ತಿರುವ ದೌರ್ಜನ್ಯದ ವಿರುದ್ಧ ಮಾತನಾಡಿದ ಅನೇಕ ವೃತ್ತಿಪರರು, ಸಾಮಾಜಿಕ ಹೋರಾಟಗಾರರು, ಪತ್ರಕರ್ತರು, ಸಾಹಿತಿಗಳನ್ನು ಬಂಧಿಸುವ ಮೂಲಕ ಪ್ರತಿಭಟಿಸುವ ಧೈರ್ಯವನ್ನೇ ತೋರಿಸದಂತೆ ಹತ್ತಿಕ್ಕಲಾಗುತ್ತಿದೆ. ಶೈಕ್ಷಣಿಕವಾಗಿ, ತಾಂತ್ರಿಕವಾಗಿ, ಬೌದ್ಧಿಕವಾಗಿ ಮುಂದುವರಿದ ಇವತ್ತಿನ ಯುವಪೀಳಿಗೆಯಾಗಲಿ ಅಥವಾ ಹಿರಿಯರೇ ಆಗಲಿ ಪ್ರತಿಭಟಿಸಲೂ ಹಿಂದೇಟು ಹಾಕುವಂತಹ ಅನಧಿಕೃತ ತುರ್ತು ಪರಿಸ್ಥಿತಿಯೊಂದು ದೇಶದಲ್ಲಿ ನಿರ್ಮಾಣವಾಗಿದೆ. ದುರಂತವೆಂದರೆ ಯಾರು ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಅದನ್ನು ಬಲವಾಗಿ ವಿರೋಧಿಸಿದ್ದರೊ, ಅವರದ್ದೇ ಆಡಳಿತದಲ್ಲಿ ಇಂದು ಈ ರೀತಿಯ ಪರಿಸ್ಥಿತಿ ನಿರ್ಮಾಣವಾಗಿದೆ!

ವ್ಯಕ್ತಿಗತ ಸ್ವಾತಂತ್ರ್ಯದಲ್ಲಿ ಬರುವ ಮತ್ತೊಂದು ವಿಚಾರವೆಂದರೆ ‘ಗೋಪ್ಯತೆಯ ಹಕ್ಕು’. ದಕ್ಷತೆ ಮತ್ತು ಒಂದೇ ಸಂಖ್ಯೆಯಡಿಯಲ್ಲಿ ವೈಯಕ್ತಿಕ ಮಾಹಿತಿಗಳನ್ನು ದಾಖಲಿಸುವ ಕಾರಣಕ್ಕೆ ಜಾರಿಗೆ ತಂದ ‘ಆಧಾರ್’ ಮೂಲಕ ಎಲ್ಲ ಕಡೆ ಬಳಕೆಯಾಗುತ್ತಿರುವ ವೈಯಕ್ತಿಕ ಮಾಹಿತಿಗಳು ಎಷ್ಟು ಸುರಕ್ಷಿತವೆಂಬುದಕ್ಕೆ ಸ್ಪಷ್ಟತೆಯಿಲ್ಲ. ಗೂಗಲ್ ಮತ್ತು ಸಾಮಾಜಿಕ ಜಾಲತಾಣಗಳನ್ನು ಬಳಸುವವರ ಮಾಹಿತಿಗಳು ಸೋರಿಕೆಯಾಗುತ್ತಿದ್ದರೂ ಒಂದು ಹಂತದಲ್ಲಿ ಅದನ್ನು ನಿರ್ಬಂಧಿಸುವ ಸ್ವಾತಂತ್ರ್ಯವಾದರೂ ಬಳಕೆದಾರರಿಗಿದೆ. ಆದರೆ, ಕಾನೂನಿನ ಹೆಸರಿನಲ್ಲಿ ಗೋಪ್ಯತೆಯ ಹಕ್ಕಿನ ಉಲ್ಲಂಘನೆಯಾಗುತ್ತಿದ್ದರೂ ಅದರ ಆಳ ಮತ್ತು ಪರಿಣಾಮಗಳ ಕಲ್ಪನೆಯಿಲ್ಲದ ಸಮಾಜದಲ್ಲಿ ಪ್ರತಿಭಟಿಸಲೂ
ಸಾಧ್ಯವಾಗದಂತಹ ಸ್ಥಿತಿ.

ಇಂತಹ ಅನೇಕ ದಿನನಿತ್ಯದ ಸಮಾಜದ ಆಗುಹೋಗುಗಳನ್ನು ಅವಲೋಕಿಸಿದರೆ, ಬ್ರಿಟಿಷರಿಂದ ಆಡಳಿತ ಚುಕ್ಕಾಣಿ ಹಿಡಿದು ಅಧಿಕೃತವಾಗಿ ಸ್ವತಂತ್ರ ದೇಶವೆಂದಾದ 73 ವರ್ಷಗಳ ನಂತರವೂ ನಾವು ನಿಜವಾಗಲೂ ವ್ಯಕ್ತಿಗತವಾಗಿ ಎಷ್ಟು ಸ್ವತಂತ್ರರು ಎಂದು ಪ್ರಶ್ನಿಸಿಕೊಂಡರೆ, ನಿರಾಸೆಯಾಗುತ್ತದೆ. ಸಂವಿಧಾನಾತ್ಮಕವಾಗಿ ಎಲ್ಲ ರೀತಿಯ ಹಕ್ಕುಗಳ ಉಲ್ಲೇಖ ವಿದ್ದರೂ ಬೇರೆ ಬೇರೆ ಕಾರಣಗಳಿಗೆ ಕಾರ್ಯರೂಪಕ್ಕೆ ಬರದೇ ಸ್ವಾತಂತ್ರ್ಯ ಮಾತ್ರ ಕನ್ನಡಿಯೊಳಗಿನ ಗಂಟಾಗಿಯೇ ಉಳಿದಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು