ಭಾನುವಾರ, ಜುಲೈ 3, 2022
24 °C

ಹಾಯಿದೋಣಿ: ಯಶಸ್ಸು ಹಿಂಬಾಲಿಸಿ ಬಂತು!

ರಾಹುಲ್‌ ನಾರ್ವೆಕರ್‌ Updated:

ಅಕ್ಷರ ಗಾತ್ರ : | |

Prajavani

ಬಾಲ್ಯದ ದಿನಗಳ ನೆನಪುಗಳು ಇನ್ನೂ ಹಸಿರಾಗಿವೆ. ಮುಂಬೈಯ ಭಾಂಡುಪ್‌ನಲ್ಲಿ ನಾವು ಸರಳ ಜೀವನ ನಡೆಸುತ್ತಿದ್ದೆವು. ನಮ್ಮ ಚಾಳ್‌ನಲ್ಲಿದ್ದ ಏಕೈಕ ಟಿವಿಯ ಹೆಮ್ಮೆಯ ಮಾಲೀಕರಾಗಿದ್ದೆವು. ನಮ್ಮ ತಂದೆ ಅಪರೂಪಕ್ಕೊಮ್ಮೆ ಹುಟ್ಟುಹಬ್ಬದ ಆಚರಣೆಯಂತಹ ಐಷಾರಾಮದ ಅವಕಾಶವನ್ನೂ ಒದಗಿಸುತ್ತಿದ್ದರು. ಆದರೆ, ಕಾರ್ಖಾನೆ ಮುಚ್ಚಿ, ಅವರು ಕೆಲಸ ಕಳೆದುಕೊಂಡ ಬಳಿಕ ನಮ್ಮ ಬದುಕೇ ಬದಲಾಯಿತು. ಮುಂದಿನ 10–12 ವರ್ಷಗಳವರೆಗೆ ನಮ್ಮ ಜೀವನ ಎಷ್ಟೊಂದು ಸಂಘರ್ಷಮಯ ಆಗಿತ್ತೆಂದರೆ, ನನ್ನ ಸ್ನೇಹಿತರು ಬಳಸಿ ಎಸೆದಿದ್ದ ಶಾಲಾ ಶೂಗಳನ್ನು ರಿಪೇರಿ ಮಾಡಿ ನಾನು ಬಳಸಿದ್ದೆ. ಅಮ್ಮ ಬಟ್ಟೆ ಹೊಲಿಯುವುದನ್ನು ಆರಂಭಿಸಿದ್ದಳು.

ನಮ್ಮ ಆರ್ಥಿಕ ಸ್ಥಿತಿಯು ಮುಜುಗರ ತರುವಂತಿತ್ತು. ನಾನು ಜನರಿಂದ ದೂರವಿರಲು ಆರಂಭಿಸಿದೆ. ಓದಿನ ಚಟವನ್ನು ಬೆಳೆಸಿಕೊಂಡೆ. ಕೈಗೆ ಸಿಕ್ಕ ಎಲ್ಲವನ್ನೂ ಓದಲಾರಂಭಿಸಿದೆ. ಹಳೆಯ ಪುಸ್ತಕಗಳ ಅಂಗಡಿಗೆ ದಿನನಿತ್ಯ ಭೇಟಿ ನೀಡಲಾರಂಭಿಸಿದೆ. ಅಲ್ಲಿ 50 ಪೈಸೆ ಕೊಟ್ಟರೆ ಒಂದು ಗಂಟೆಯವರೆಗೆ ಓದಲು ಅವಕಾಶ ನೀಡುತ್ತಿದ್ದರು. ನನ್ನ ಶಬ್ದ ಭಂಡಾರ ಮತ್ತು ಜ್ಞಾನ ವೃದ್ಧಿಯಾಯಿತು. ಕಲಿಕೆಯಲ್ಲೂ ಪ್ರಗತಿ ಕಾಣಿಸಿತು.

ಕಾಲೇಜಿಗೆ ಹೋಗಲು ಆರಂಭಿಸುವಾಗ ಸಂಪಾದನೆಗಾಗಿ ಸಣ್ಣಪುಟ್ಟ ಕೆಲಸಗಳನ್ನೂ ಮಾಡಿದೆ. ವಾರ್ಡ್‌ ಬಾಯ್‌, ಡೆಲಿವರಿ ಬಾಯ್‌ ಆದೆ. ಹಣ್ಣು ಮಾರಾಟ, ದೀಪಾವಳಿಯ ಸಮಯದಲ್ಲಿ ಪಟಾಕಿ, ಕಂದೀಲು ಮಾರಾಟ, ಮಾರ್ಕೆಟಿಂಗ್‌... ಹೀಗಾಗಿ ಹಾಜರಾತಿಯ ಕೊರತೆ ಹಾಗೂ ಶುಲ್ಕ ಪಾವತಿಸಲಾಗದ ಕಾರಣದಿಂದ ಕಲಿಕೆಗೆ ಹಿನ್ನಡೆಯಾಯಿತು. ಕೊನೆಗೆ, ದೂರಶಿಕ್ಷಣ ಕೋರ್ಸ್‌ ಮೂಲಕ ಪದವಿಪೂರ್ವ ಶಿಕ್ಷಣವನ್ನು ಮುಗಿಸಿ ಉದ್ಯಮಶೀಲತಾ ಕೋರ್ಸ್‌ಗೆ ಪ್ರವೇಶ ಪಡೆದೆ. ಸಂಜೆ 6.30ರಿಂದ ನಸುಕಿನ 2 ಗಂಟೆಯವರೆಗೆ ಗ್ರಾಹಕ ಸೇವಾ ಕೇಂದ್ರದಲ್ಲಿ ಕೆಲಸ ಆರಂಭಿಸಿದೆ. ಆದರೆ, ತುಂಬಾ ಪ್ರಶ್ನೆಗಳನ್ನು ಕೇಳುತ್ತೇನೆ ಎಂಬ ಕಾರಣಕ್ಕೆ ‘ಕೆಲಸ ಮಾಡಲು ಅಸಮರ್ಥ’ ಎಂದು ಜರಿದು ನನ್ನನ್ನು ವಜಾ ಮಾಡಿದರು.

1994ರಲ್ಲಿ ನನ್ನ ಮೊದಲ ಸಾಹಸಕ್ಕೆ ಕೈಹಾಕಿದೆ. ಸ್ನೇಹಿತರ ಜತೆ ಸೇರಿ ಕೇಬಲ್‌ ಟಿವಿಗಾಗಿ ಜಾಹೀರಾತು ಸಂಗ್ರಹಿಸುವ ಕೆಲಸ ಆರಂಭಿಸಿದೆ. 1998ರಲ್ಲಿ ನಾವು ‘ಚಾನೆಲ್‌ ಆಕ್ಸಿಜನ್‌’ ಎಂಬ ಏಷ್ಯಾದ ಮೊದಲ ಮ್ಯೂಸಿಕ್‌ ಚಾನೆಲ್‌ ಆರಂಭಿಸಿದೆವು. ಆದರೆ, ಅದನ್ನು ನಡೆಸಲು ಸಾಧ್ಯವಾಗಲಿಲ್ಲ.

2001ರಲ್ಲಿ ನಾನು ದೆಹಲಿಗೆ ಸ್ಥಳಾಂತರಗೊಂಡೆ. ಅಲ್ಲಿ ರೇಡಿಯೊ ಜಾಕಿಯಾಗಿದ್ದ ಪಲ್ಲವಿಯನ್ನು ವರಿಸಿದೆ. ನಮ್ಮ ಮದುವೆಯ ದಿನವೇ ನನ್ನನ್ನು ಕೆಲಸದಿಂದ ವಜಾ ಮಾಡಲಾಗಿತ್ತು. ಅದೃಷ್ಟವಶಾತ್‌ ನನಗೆ ಇನ್ನೂ ಒಳ್ಳೆಯ ನೌಕರಿ ಸಿಕ್ಕಿತು. 2005ರಲ್ಲಿ ನಮ್ಮ ಮಗನ ಜನನವಾಯಿತು. ಇದಾಗಿ ಒಂದು ತಿಂಗಳಲ್ಲಿ ಪತ್ನಿಯು ವಿರಳ ಕಾಯಿಲೆ ‘ಮ್ಯಸ್ತೇನಿಯಾ ಗ್ರಾವಿಯಾ’ಗೆ ತುತ್ತಾದಳು. ಇಂಥ ಸನ್ನಿವೇಶದಲ್ಲಿ ಪತ್ನಿ ಮತ್ತು ಮಗನ ಜತೆಗೆ ಇರುವುದು ಅನಿವಾರ್ಯವಾಗಿ, ನಾನು ನೌಕರಿಯನ್ನು ಬಿಟ್ಟೆ. ಪಲ್ಲವಿಗೆ ಕಿಮೊ ಥೆರಪಿ, ಶಸ್ತ್ರಚಿಕಿತ್ಸೆ, ರೇಡಿಯೇಷನ್‌ ಚಿಕಿತ್ಸೆ... ಹೀಗೆ ಚಿಕಿತ್ಸೆಗಳ ಸರಣಿಯೇ ನಡೆಯಿತು. ಆಕೆಯ ಧ್ವನಿಪೆಟ್ಟಿಗೆಗೆ ಹಾನಿಯಾಯಿತು. ‘ಇನ್ನು ಮುಂದೆ ಈಕೆ ಮಾತನಾಡಲಾರಳು’ ಎಂದು ವೈದ್ಯರು ಹೇಳಿದರು. ನನ್ನ ಜಗತ್ತೇ ಕುಸಿದುಹೋಯಿತು.

ಪಲ್ಲವಿಯು ಚೇತರಿಸಿಕೊಂಡು, 2008ರಲ್ಲಿ ಮತ್ತೆ ರೇಡಿಯೊ ಜಾಕಿ ಕೆಲಸಕ್ಕೆ ಸೇರಿಕೊಂಡಳು. ನಾನು ಸ್ನೇಹಿತರ ಜತೆ ಸೇರಿ ಇನ್ನೊಂದು ಕಂಪನಿ ಆರಂಭಿಸಿದೆ. ಈ ಎಲ್ಲಾ ಬೆಳವಣಿಗೆಗಳ ಮಧ್ಯೆ ನನ್ನ ಸ್ನೇಹಿತರು, ಸಂಬಂಧಿಕರಲ್ಲಿ ಶೇ 99ರಷ್ಟು ಮಂದಿ ನಮ್ಮಿಂದ ದೂರವಾಗಿದ್ದರು. ‘ಜನರು ನಮ್ಮ ಅಂತಸ್ತನ್ನು ಗೌರವಿಸಿದ್ದರೇ ವಿನಾ ನಮ್ಮನ್ನಲ್ಲ’ ಎಂಬುದು ಈ ಸಂದರ್ಭದಲ್ಲಿ ಮನವರಿಕೆಯಾಯಿತು. ಅದೇ ಜನ ಈಗ ನಮ್ಮನ್ನು ‘ಸ್ಫೂರ್ತಿದಾಯಕ ದಂಪತಿ’ ಎಂದು ಹೊಗಳುತ್ತಿದ್ದಾರೆ. ಪಲ್ಲವಿಯು ಆರೋಗ್ಯದ ಅನೇಕ ಸಮಸ್ಯೆಗಳನ್ನು ಎದುರಿಸಿದ್ದಳು. ಕೆಲವು ಸಮಸ್ಯೆಗಳು ಮರುಕಳಿಸುತ್ತಿದ್ದವು. ಪ್ರತಿ ಬಾರಿಯೂ ಆಕೆ ಅವುಗಳನ್ನು ಮೆಟ್ಟಿ ನಿಂತಳು.

ಏಳನೇ ತಿಂಗಳಲ್ಲಿ ಜನಿಸಿ, ಬದುಕುವ ಸಾಧ್ಯತೆಯೇ ಇಲ್ಲ ಎಂಬ ಸ್ಥಿತಿಯಿಂದ ಆರಂಭಿಸಿ, ಜೀವನವನ್ನು ಪೂರ್ಣ ಪ್ರಮಾಣದಲ್ಲಿ ಆನಂದಿಸುವಲ್ಲಿಯವರೆಗೆ, ಕಾಲೇಜು ಶುಲ್ಕವನ್ನು ಪಾವತಿಸಲು ಸಾಧ್ಯವಾಗದ ಸ್ಥಿತಿಯಿಂದ– ಹಾರ್ವರ್ಡ್‌ನಲ್ಲಿ ಶಿಕ್ಷಣ ಪಡೆಯುವವರೆಗೆ, ‘ಉದ್ಯಮಿಯಾಗಲು ಅಸಮರ್ಥ’ ಎನಿಸಿಕೊಂಡಲ್ಲಿಂದ– 11 ಉದ್ಯಮಗಳ ಸಹ ಸಂಸ್ಥಾಪಕ ಎನಿಸಿಕೊಳ್ಳುವ ವರೆಗೆ... ನನ್ನ ಜೀವನವು ಭಾರಿ ಏಳುಬೀಳುಗಳಿಂದ ಕೂಡಿದೆ. ಅದರಲ್ಲಿ ಡ್ರಾಮಾ, ರೋಮಾನ್ಸ್‌, ಸೋಲು, ಪ್ರೇರಣೆ, ಯಶಸ್ಸು, ಮತ್ತೆ ಸೋಲು, ಪುನಃ ಯಶಸ್ಸು... ಎಲ್ಲವೂ ಇವೆ. ಪ್ರತಿಬಾರಿ ಸೋತಾಗಲೂ ನಾನು ಇನ್ನಷ್ಟು ಪ್ರಯತ್ನ ಮಾಡಿದ್ದೇನೆ ಯಾವತ್ತೂ ಧೈರ್ಯಗೆಡಲಿಲ್ಲ.

ಲೇಖಕ: ನವೋದ್ಯಮಗಳ ಸ್ಥಾಪಕ, ಚಿತ್ರ: ಜಿ.ಕುಮಾರನ್‌

 

‘ಬೀಯಿಂಗ್‌ ಯೂ’

‘ಬೀಯಿಂಗ್‌ ಯೂ’ ಬೆಂಗಳೂರು ಮೂಲದ ಡಿಜಿಟಲ್‌ ಮೀಡಿಯಾ ನವೋದ್ಯಮ ಕಂಪನಿ. 2017ರಲ್ಲಿ ಅಸ್ತಿತ್ವಕ್ಕೆ ಬಂದ ಈ ಕಂಪನಿ ಜನಸಾಮಾನ್ಯರು, ಅದರಲ್ಲೂ ಮಹಿಳೆ ಯರ ಯಶೋಗಾಥೆಗಳನ್ನು ಕಟ್ಟಿಕೊಡುತ್ತದೆ. ಜೀವನದ ನೈಜಕಥೆಗಳ ಮೂಲಕ ಸಮಾಜದಲ್ಲಿ ಸಕಾರಾತ್ಮಕ ಭಾವ ಮೂಡಿಸಿ, ಪ್ರೇರಣೆ ತುಂಬುವ ಕೆಲಸದಲ್ಲಿ ತೊಡಗಿಸಿ ಕೊಂಡಿದೆ. ‘ಪ್ರಜಾವಾಣಿ’ಗಾಗಿ ‘ಬೀಯಿಂಗ್ ಯು’ ಈ ಹಾಯಿದೋಣಿಯ ಈ ಕಥೆಗಳನ್ನು ಕಟ್ಟಿಕೊಡುತ್ತಿದೆ... ಇಮೇಲ್‌: beingyou17@gmail.com

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು