ಸೋಮವಾರ, ಮೇ 23, 2022
30 °C

ಕನ್ನಡದ ಕೆಲಸ: ತಮಿಳು ಕಾನನ, ಕನ್ನಡ ಜೀವನ

ಕೆ.ನರಸಿಂಹಮೂರ್ತಿ Updated:

ಅಕ್ಷರ ಗಾತ್ರ : | |

Prajavani

‘ಕನ್ನಡ ಅಂದ್ರೆ, ರಾಜ್‌ಕುಮಾರ್‌ ಅಂದ್ರೆ ನಂಕ ತುಂಬ ಇಷ್ಟ. ನಮ್ಮ ಜೀವ ಇರೋಗಂಟ ಇದೇ. ಜೀವ ಓದರೂ ಇದೇ. ಇನ್ನೊಂದ್‌ ಟ್ರಿಪ್ ಹುಟ್ಟಿದ್ರೂ ನಾನಿಲ್ಲೇ ಹುಟ್ಟಬೇಕು ಅಂತ ಒಂದಾಸೆ. ಅದು ದೇವ್ರಿಷ್ಟ...’ 

ನಲವತ್ತು ವರ್ಷದ ಹಿಂದೆ ವೆಲ್ಲೂರಿನಿಂದ ಚಾಮರಾಜನಗರಕ್ಕೆ ಅಳಿಯನಾಗಿ ಬಂದ ವಿ.ಪಿ.ಸುಬ್ರಹ್ಮಣ್ಯಂ ಕಂದಮಿಳು ಶೈಲಿಯಲ್ಲಿ ನಗುನಗುತ್ತಾ ಮಾತನಾಡುತ್ತಿದ್ದರೆ ಅವರ ಪತ್ನಿ ಶಾಂತಾಮಣಿ ನೆನಪುಗಳಿಗೆ ಜಾರಿದ್ದರು.

ಘಟಪ್ರಭಾ ನದಿಗೆ ಅಡ್ಡಲಾಗಿ ಕಟ್ಟಿರುವ ಬೆಳಗಾವಿ ಜಿಲ್ಲೆಯ ಹಿಡಕಲ್‌ ಜಲಾಶಯ ನಿರ್ಮಾಣದ ಕಾಲದಲ್ಲಿ ಕೆಲಸಕ್ಕೆಂದು ತಮಿಳುನಾಡಿನಿಂದ ವಲಸೆ ಬಂದಿದ್ದ ಕುಟುಂಬದ ದೊಡ್ಡ ಮಗಳು ಶಾಂತಾಮಣಿ. ಜಲಾಶಯದ ಕೆಲಸ ಮುಗಿಸಿ ಕುಟುಂಬ ಕರ್ನಾಟಕ–ತಮಿಳುನಾಡು ಗಡಿ ಜಿಲ್ಲೆಯಾದ ಚಾಮರಾಜನಗರಕ್ಕೆ ವಲಸೆ ಬಂದು ನೆಲೆಸಿತ್ತು. ಕಾಡಿನಂತಿದ್ದ ಮಾಳಗೆರೆಯಲ್ಲಿ ಮೂರು ಎಕರೆ ಜಮೀನು ಖರೀದಿಸಿ ಕೃಷಿ ಆರಂಭಿಸಿತ್ತು.

ಅವರಿಗೆ ಹದಿಹರೆಯಕ್ಕೆ ಬರುವ ಮುಂಚೆಯೇ ವೆಲ್ಲೂರಿನ ಪೆರುಂದರೈಗೆ ಸೇರಿದ ವೇಪಂಬಾಳೈ ಎಂಬ ಚಿಕ್ಕ ಹಳ್ಳಿಊರಿನ ಸುಬ್ರಹ್ಮಣ್ಯಂ ಹೆಣ್ಣು ನೋಡಲು ಬಂದರು. ಸೋದರತ್ತೆ ಮಗಳನ್ನು ನೋಡಿದ ಕೂಡಲೇ ಒಪ್ಪಿದರು. ಮನೆ ಅಳಿಯನೂ ಆದರು. ಈ ದಂಪತಿ ಮಗ, ಮಗಳನ್ನು ನಗರದಲ್ಲೇ ಕನ್ನಡ ಮಾಧ್ಯಮದಲ್ಲೇ ಓದಿಸಿದರು. ಅವರ ಮನೆಯಲ್ಲಷ್ಟೇ ತಮಿಳು. ಉಳಿದೆಲ್ಲೆಡೆ ಕನ್ನಡ. 

ಚಾಮರಾಜನಗರದಲ್ಲಿ ಇಂಥ ಸಾವಿರಾರು ಕುಟುಂಬಗಳ ಸದಸ್ಯರು ಸುಮಾರು ಆರೇಳು ದಶಕಗಳಿಂದ ಬದುಕು ಕಟ್ಟಿಕೊಂಡು, ಕನ್ನಡಿಗರೊಂದಿಗೆ ಬೆರೆತು ಕನ್ನಡಿಗರೇ ಆಗಿದ್ದಾರೆ. ಈ ಜಿಲ್ಲೆಯಲ್ಲಿರುವ ತಮಿಳರ ಸಂಖ್ಯೆ ಸುಮಾರು 70 ಸಾವಿರ.

ಸುಬ್ರಹ್ಮಣ್ಯಂ ಹೇಳುತ್ತಿದ್ದರು: ನಾವು ಎಲ್ಲಿ ಇರ್ತೀವೋ ಅದೇ ನಮ್ಮ ತಾಯಿ, ಅದೇ ನಮ್ಮ ತಾಯಿಮಣ್ಣು. ಅದಕ್ಕೂ ನಾವು ಭಕ್ತರಂತೆ ಇದ್ದು ಕೈ ಮುಗಿದು ಅಲ್ಲೇ ಅನುಸರಿಸಿಕೊಂಡು ಬಾಳಬೇಕು. ಸಂತೋಸವಾಗಿ ಒಪ್ಕೊಬೇಕು. ಮಕ್ಕಳಿಕೂ ಅದ್ನೇ ಹೇಳಿದೀನಿ... ವೋಟು, ರೇಸನ್ ಕಾರ್ಡ್‌ ಇರೊದು ಇಲ್ಲಿ. ನಾವು ದುಡುವಣಿಕೆ ಮಾಡ್ತೀವಿ, ಏನ್‌ ತೊಂದ್ರೆ ಇಲ್ಲ. ಭೂಕಂಪ ಇಲ್ಲ. ಪ್ರವಾಹ ಇಲ್ಲ. ವೆದರೆಲ್ಲ ಫೈನಾಗಿರ್ತದೆ. ಇದರ ಮೇಲೆ ದೇವರು ನಮಗೆ ಏನು ಸೌಲಭ್ಯ ಕೊಡಬೇಕು? ಎಲ್ಲೇ ಹೋದ್ರೂ ದುಡಿಬೇಕು. ಎಲ್ಲಕ್ಕಿಂತ ನಗರವೇ ಬೆಸ್ಟು.

ಚಾಮರಾಜನಗರ ಕಸಬಾ ಹೋಬಳಿಯ ದೊಲ್ಲಿಪುರ, ಮಾಳಗೆರೆ, ಹರದನಹಳ್ಳಿ, ಚಿಕ್ಕಹೊಳೆ, ಅಟ್ಟುಗುಳಿಪುರ, ಗುಂಡ್ಲುಪೇಟೆ, ಹನೂರು, ಕೊಳ್ಳೇಗಾಲ, ಯಳಂದೂರು– ಹೀಗೆ ಎಲ್ಲಿಯೇ ಹೋದರೂ ನಮಗೆ ಮೂರ್ನಾಲ್ಕು ಎಕರೆಯಿಂದ ಹತ್ತನ್ನೆರಡು ಎಕರೆವರೆಗೆ ಸ್ವಂತ ಜಮೀನಿನಲ್ಲಿ ಕೃಷಿ, ತೋಟಗಾರಿಕೆ ಮಾಡಿಕೊಂಡು ಸದ್ದಿಲ್ಲದೆ ಬದುಕುತ್ತಿರುವ ತಮಿಳು ಕುಟುಂಬಗಳು ಕಾಣುತ್ತವೆ.

ಅವರೆಲ್ಲ ತಮ್ಮ ತಂದೆ, ತಾತಂದಿರ ಕಾಲದಿಂದಲೂ ನಗರದ ಕಪ್ಪು ನೆಲವನ್ನೇ ಕರ್ಮಭೂಮಿಯನ್ನಾಗಿ ಮಾಡಿಕೊಂಡವರು. ಕೆರೆಗಳಿಂದ ಕೆಂಪು ಮಣ್ಣನ್ನು ತಂದು ಭೂಮಿಯನ್ನು ಹಸನು ಮಾಡಿದವರು. ಇತ್ತೀಚಿನ ವರ್ಷಗಳಲ್ಲಿ ತಮಿಳುನಾಡಿನಿಂದ ಬಂದು ಜಮೀನುಗಳನ್ನು ಗುತ್ತಿಗೆ ಪಡೆದು ಕೃಷಿ ಮಾಡುತ್ತಿರುವವರೂ ಉಂಟು. ಅವರಿಗೆ ಈ ನೆಲದೊಂದಿಗೆ ವ್ಯವಹಾರದ ನಂಟಷ್ಟೇ ಇದೆ. ಅದಕ್ಕೆ ಬೇಕಾಗುವಷ್ಟು ಮಾತ್ರ ಕನ್ನಡ ಗೊತ್ತು. ಹೆಚ್ಚಿಗೆ ಕಾಣಿಸಿಕೊಳ್ಳುವುದೂ ಇಲ್ಲ.

ಸತತ ಪ್ರಯತ್ನಗಳ ಬಳಿಕವೂ ಸುಧಾರಿತ ಕಾಡುಗಳಂತಿರುವ ತಮಿಳರ ತೋಟಗಳಿಗೆ ಈಗಲೂ ಸರಿಯಾದ ರಸ್ತೆ ಸಂಪರ್ಕವಿಲ್ಲ. ಸುವರ್ಣಾವತಿ ನದಿ ಕಾಲುವೆ ಪಕ್ಕದಲ್ಲೇ ನೂರಾರು ಎಕರೆ ಜಮೀನುಗಳಲ್ಲಿ ಅವರು ಬಾಳೆ, ಅಡಿಕೆ, ತೆಂಗು ಬೆಳೆಯುತ್ತಿದ್ದಾರೆ. ಅಗತ್ಯ ಬಿದ್ದರಷ್ಟೇ ನಗರಕ್ಕೆ ಸವಾರಿ. ಇಲ್ಲದಿದ್ದರೆ ತಮ್ಮ ಕೃಷಿಯದ್ದೇ ದಾರಿ. ತೋಟ ಮತ್ತು ತೋಟದ ಮನೆಯ ಬದುಕು ಸಂಪನ್ನ.

ತಮಿಳರಷ್ಟೇ ಅಲ್ಲ, ಕೇರಳದ ಮೂಲೆಯಿಂದ ಬಂದ ಮಲಯಾಳಿ ಮಂದಿಗೂ ಚಾಮರಾಜನಗರ ಜಿಲ್ಲೆ ಜೀವನ ಕೊಟ್ಟಿದೆ. ಅವರು ಕೂಡ ಜಲಾಶಯಗಳ ಕೆಲಸ ಮಾಡಲೆಂದು ವಲಸೆ ಬಂದ ಕುಟುಂಬಗಳ ಮಂದಿಯೇ. ಅವರ ಸಂಖ್ಯೆ ಕಡಿಮೆ.

91ರಲ್ಲಿ ಕಾವೇರಿ ವಿವಾದದ ಸಂದರ್ಭದ ಹಿಂಸಾಚಾರದ ಕಹಿ ನೆನಪನ್ನೇ ನುಂಗಿಕೊಂಡು ಅವರೆಲ್ಲ ಕನ್ನಡವನ್ನು ಮನ–ಮನೆಯಲ್ಲಿ ಬೆಚ್ಚಗೆ ಕಾಪಿಟ್ಟುಕೊಂಡಿದ್ದಾರೆ ಎಂಬುದೇ ವಿಶೇಷ. ಆ ಗಲಾಟೆ ಆದ ಬಳಿಕ, ಕೂಲಿಗಾಗಿ ಬಂದಿದ್ದ ಬಹಳಷ್ಟು ಮಂದಿ ತಮಿಳುನಾಡಿನ ಕೊಯಮತ್ತೂರು, ತಿರುಪ್ಪೂರು, ಮೈಸೂರು, ಬೆಂಗಳೂರಿಗೆ ಕೆಲಸ ಹುಡುಕಿಕೊಂಡು ಹೋಗಿಬಿಟ್ಟರು. ಆಗ ಮಾ‌ಳಗೆರೆಯಲ್ಲೇ 60 ಕುಟುಂಬಗಳಿದ್ದವು. ಈಗ ಬರೀ 15 ಕುಟುಂಬಗಳಷ್ಟೇ ಇವೆ. ಸ್ವಂತ ಜಮೀನುಗಳನ್ನು ಮಾಡಿಕೊಂಡವರು ಮಾತ್ರ ಇಲ್ಲಿಯೇ ಉಳಿದಿದ್ದಾರೆ. ತಮ್ಮ ಹೆಣ್ಣು ಮಕ್ಕಳನ್ನು ತಮಿಳುನಾಡಿನ ಸಂಬಂಧಿಕರಿಗೆ ಮದುವೆ ಮಾಡಿಕೊಟ್ಟಿದ್ದಾರೆ. ಸುಬ್ರಹ್ಮಣ್ಯಂ ಅವರ ಮಗಳು ಈರೋಡಿನ ಗೋಪಿ ಜಿಲ್ಲೆಯ ಸೊಸೆ. ಮಗನಿಗೆ ಬೆಂಗಳೂರಿನಲ್ಲಿ ಕೆಲಸ.

70ರ ದಶಕದಲ್ಲಿ ಕೊಯಮತ್ತೂರಿನಿಂದ ವ್ಯವಸಾಯಕ್ಕೆಂದು ಇಲ್ಲಿಗೆ ಬಂದ ಪಿ.ಎನ್‌.ಚಿನ್ನಸ್ವಾಮಿ ಚಾಮರಾಜನಗರ ಜಿಲ್ಲಾ ತಮಿಳು ಸಂಘದ ಅಧ್ಯಕ್ಷರು. ‘ಆಗ ಜಮೀನು ಜಂಗಲ್‌ ತರ ಇತ್ತು. ಅದೆಲ್ಲ ಸುದ್ದ ಮಾಡಿ ವ್ಯವಸಾಯ ಮಾಡಿಕೊಂಡು ಇದ್ದೀವಿ’ ಎಂಬ ಅವರ ಮಾತಿನಲ್ಲಿ ನೋವು ನುಂಗಿಕೊಂಡ ನಗು ಇಣುಕಿತು.

‘ನಮ್ಮ ಸುರಕ್ಷತೆ ಮತ್ತು ತಮಿಳರು–ಕನ್ನಡಿಗರ ನಡುವೆ ಸೇತುವೆಯೊಂದಿರಬೇಕು ಎಂದು ಸಂಘವನ್ನು ಸ್ಥಾಪಿಸಿದೆವು. ನಾವು ಕರ್ನಾಟಕದ ಪರವಾಗಿಯೇ ಹೋರಾಟ ಮಾಡೋರು. ಬೇರೆ ಯೋಚನೆ ಏನಿಲ್ಲ’ ಎನ್ನುವಷ್ಟರಲ್ಲಿ ಅವರ ಮೊಮ್ಮಗಳು ಮನೆಯಿಂದ ಹೊರಬಂದಳು.

‘ಕನ್ನಡ ನಂಗೆ ಮಾತಾಡಕ್‌ ಗೊತ್ತಿಲ್ಲ’ ಎನ್ನುತ್ತಲೇ, ಆಕೆ, ‘ನನ್‌ ಹೆಸ್ರೂ ನೇಹಶ್ರೀ, ನಾನು ಚೆನ್ನೈನಲ್ಲಿ ಅಣ್ಣಾ ಯೂನಿವರ್ಸಿಟಿಲಿ ಸೆಕೆಂಡ್‌ ಈಯರ್ ಬಿ.ಟೆಕ್‌ ಡಿಗ್ರಿ ಓದ್ಕೊಂಡಿದಿನಿ’ ಎಂದು ನಗೆ ಚೆಲ್ಲಿದಳು. ‘ನಮ್ಮ ಮನೆ ಸತ್ಯಮಂಗಲದಲ್ಲಿದೆ. ಅಜ್ಜಿಯವರ ಊರು ಚಾಮರಾಜನಗರ’ ಎಂದು ಮತ್ತೆ ಮುಗ್ದ ನಗೆ ನಕ್ಕಳು.

ಈ ನೆಲದಲ್ಲಿ ಕನ್ನಡದ ನಂಟನ್ನು ಉತ್ಕೃಷ್ಟವಾಗಿ ಉಳಿಸಿಕೊಂಡು ಬರಲು ತಮಿಳು ಸಂಘ ತನ್ನದೇ ಕೊಡುಗೆ ನೀಡುತ್ತಿರುವುದನ್ನು ಮರೆಯುವಂತಿಲ್ಲ. ಏಕೆಂದರೆ ಈ ಸಂಘವೂ ಕೂಡ ಪ್ರತಿ ವರ್ಷ ನವೆಂಬರ್‌ನಲ್ಲಿ ಕನ್ನಡ ರಾಜ್ಯೋತ್ಸವವ ಏರ್ಪಡಿಸುತ್ತದೆ. ‘ಕನ್ನಡವೆನೆ ಕುಣಿದಾಡುವುದೆನ್ನೆದೆ’ ಎಂದು ಪುಳಕಗೊಳ್ಳುತ್ತದೆ.

ಮಾತು ಮುಗಿಸುವ ಮುನ್ನ ಸುಬ್ರಹ್ಮಣ್ಯಂ ಕಂದಮಿಳಿನಲ್ಲಿ ಮತ್ತೆ ಹೇಳುತ್ತಲೇ ಹೋದರು: ನಂಗೆ ರಾಜಕುಮಾರ್‌ ಅಂತ್ರೆ ತುಂಬ ಇಷ್ಟ. ಅವರ ಹಾಡುಗಳೂ ಇಷ್ಟ ಎನ್ನುತ್ತಾ ಯೂಟ್ಯೂಬ್‌ನಲ್ಲಿ ‘ಹುಟ್ಟಿದರೆ ಕನ್ನಡ ನಾಡಲ್‌ ಹುಟ್ಟಬೇಕು’ ಹಾಡು ನೋಡುತ್ತಾ ಖುಷಿಯಿಂದ ತಲೆಯಾಡಿಸತೊಡಗಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು