ಶುಕ್ರವಾರ, ಸೆಪ್ಟೆಂಬರ್ 24, 2021
23 °C

ಶಿಕ್ಷಕರ ದಿನ: ಸಾ...ನಮಸ್ಕಾರ ಸಾ!

ಸಂತೆಬೆನ್ನೂರು ಫೈಜ್ನಟ್ರಾಜ್ Updated:

ಅಕ್ಷರ ಗಾತ್ರ : | |

Prajavani

ಸರ್, ನಮಸ್ಕಾರ ಹೇಗಿದ್ದೀರಿ?

ಬಹಳ ದಿನಗಳಾದವು ಸಾರ್ ನಿಮ್ಮ ಜೊತೆ ಮಾತಾಡಿ. ನಿಮಗೋ ನಮ್ಮಂತಹ ಶಿಷ್ಯರನೇಕ. ನಮಗೋ ಎದೆ ಹೊಕ್ಕ ಗುರುಗಳು ಒಬ್ಬರೋ...ಇಬ್ಬರೋ!

ಟಾಲ್ಸ್ ಸ್ಟಾಯ್ ತನ್ನ ಆಸ್ತಿನೆಲ್ಲಾ ದಾನ ಮಾಡಿದ ಕತೆ ಹೇಳಿದ್ರಿ, ಅವನೇ ಸಾಕಿದ್ದ ಭೂರ್ಜ್ವ ವನ ಕಳೆದುಕೊಳ್ಳದೇ, ಕೊಡಲೂ ಆಗದೇ ದ್ವಂದ್ವದಲ್ಲಿ ಎಲ್ಲೋ ಕೊನೆಯಾದ ಅಂತ. ಸಾ... ನಮಗೆ ನಮ್ಮದು ಅಂತ ಏನಿದೆ ಸಾ? ಎರಡಕ್ಷರ ಕಲಿತಿದ್ದೇವೆ. ಅದು ನಿಮ್ಮ ಭಿಕ್ಷೆ, ನಾಕ್ಕಾಸ್ ದುಡಿದಿದ್ದೇವೆ ಅದು ಬೆವರಿನ ಮತ್ತು ದುಡಿಮೆಯ ಫಲ.

ಪುಣ್ಯಕೋಟಿ ಕತೆ ಹೇಳಿದ್ರಿ... ನಾವು ಸತ್ಯವಂತರಾಗಲಿಲ್ಲ. ಹರಿಶ್ಚಂದ್ರ, ಗಾಂಧೀಜಿ ಅವರ ಚರಿತ್ರೆ ಹೇಳಿಕೊಟ್ಟಿರಿ, ಶ್ರವಣಕುಮಾರನ ಪಿತೃಭಕ್ತಿ ಬಗ್ಗೆ ದಿನಗಟ್ಟಲೆ ಹೇಳಿದಿರಿ... ನಾವೋ ಅಪ್ಪ ಕೆಮ್ಮಿದರೂ ಮಾತ್ರೆ ತರಲು ಆಲೋಚಿಸುತ್ತಿದ್ದೇವೆ; ಅಮ್ಮನ ಕಣ್ಣೀರು ಕೂಡ ಈಗೀಗ ನಮಗೆ ಅರ್ಥ ಆಗುತ್ತಿಲ್ಲ!

ಸಾ... ಕೊಟ್ಟು ಕುದಿಯಲುಬೇಡ ಇಟ್ಟು ಹಂಗಿಸಬೇಡ... ಅಂತ ವಚನ ಉರು ಹೊಡೆಸುತ್ತಿದ್ದಿರಿ; ಛೆ... ನಾಲ್ಕಾಣೆ ಕೊಟ್ಟು ನಾಲ್ಕು ರೂಪಾಯಿ ಪ್ರಚಾರ ಪಡೆಯುವ ದಲ್ಲಾಳಿಗಳು ಹೆಚ್ಚಾಗಿದ್ದಾರೆ!

ಕನ್ನಡ ವರ್ಣಮಾಲೆಯ ಪರಿಚಯ ನೆಟ್ಟಗಿಲ್ಲದಿದ್ರೂ ಸಾಹಿತಿಯಾಗಲು ಹೊಂಟು ಜೀವನದ ‘ವ್ಯಾಪಾರ’ ಮರೆತಿದ್ದೇವೆ!

ಪಾಠ ಮಾಡೋ ಮೇಷ್ಟ್ರು ಅಧಿಕಾರಿಗಳ ಹಿಂದೆ, ರಾಜಕಾರಣಿಗಳ ಹಿಂದೆ, ಮೈಕ್‌ಗಳ ಮುಂದೆ ಕಳೆದು ಹೋಗುತ್ತಿದ್ದಾರೆ. ಶಿಕ್ಷಣ ಸೊಪ್ಪಿನ ವ್ಯಾಪಾರಕ್ಕೂ ಕಡೆಯಾಗಿದೆ ಸಾ! ಹಿಂಗಾದ್ರೆ ಹೆಂಗೆ ಸಾ?

ಸಿನಿಮಾ ಹೀರೋ, ರಾಜಕೀಯದ ಮಂದಿ, ಕ್ರಿಕೆಟ್ ಜನ ಈಗೀಗ ನಮ್ಮ ಮಕ್ಕಳಿಗೆ ಆದರ್ಶ ಆಗ್ತಿರೋದಕ್ಕೆ ಯಾರ್ ಸಾ ಹೊಣೆ... ನಾವೇ ಅಲ್ವೇನ್ ಸಾ?

ಅಲ್ಲಾ... ಸಾ... ಪ್ರತಿ ಪಾಠದ ನಂತರ ಹೇಳ್ತಿದ್ರಿ.... ಯದಾ ಯದಾಹಿ ಧರ್ಮಸ್ಯ... ಅಂತಂದು ಸಂಭವಾಮಿ ಯುಗೇ ಯುಗೇ.... ಅಂತ! ಎಲ್ಲಿ ಸಾ ಅವತಾರಗಳು ಹತ್ತಕ್ಕೆ ಕ್ಲೋಸಾ ಸಾ? ಹನ್ನೊಂದು ಅನ್ನೋ ಒಂದು ಅಂಕಿ ಐತಲ್ಲ ಸಾ... ನಮ್ಮನ್ನು ತಿದ್ದೋಕೆ ಬರಲ್ವಾ ಸಾ? ಯಾರ್‌ ಬರ್ತಾರ್ ಸಾ?

ಬನ್ನಿ ಸಾ ಈಗೀಗ ನಮ್ಮ ನಿಮ್ಮ ಕೆಲವು ಶಾಲೆಗಳು ನೋಡಿ ಸಾ... ಗುಟ್ಕಾ ಕೇಂದ್ರ, ಸಿಗರೇಟ್ ಅಂಗಡಿ, ಬಾರ್ ಶಾಪ್‌ಗಳಾಗ್ತಿವೆ. ಅರಳೋ ಮುಂಚೆ ಮಕ್ಕಳೆಂಬ ಹೂ ಬಾಡ್ತಿವೆ. ಪ್ರೀತಿ ಪ್ರೇಮದ ಹೆಸರಲ್ಲಿ ಬದುಕು ನರಕ ಮಾಡ್ಕೊಳ್ತಿವೆ. 

ಸಾ... ನೀವು ಎಂದಿಗೂ ನೆನಪಾಗ್ತೀರಿ, ಇಂಥಾ ಗುರುಗಳು ನಮ್ಮ ಮಕ್ಕಳಿಗೆ ಯಾಕ್ ಸಿಗಲಿಲ್ಲ ಅಂತ, ಶಿಕ್ಷಣ ಅಂದ್ರೆ ಅಂಕಪಟ್ಟಿ ಅಲ್ಲ ಅಂತ ಹೇಳಿದ್ರಿ ಅದಕ್ಕೆ, ತಿನ್ನೋ ಅನ್ನದಲ್ಲಿ ಎರಡು ತುತ್ತು ಹಸಿದವರಿಗೆ ಕೊಡೋದನ್ನು ಕಲಿಸಿದ್ರಿ... ಹೀಗೆ ಸದಾ ಏನೇನೋ ಕಾರಣಕ್ಕೆ ನೆನಪಾಗ್ತಿರ ಸಾ!

‘ಶಿಕ್ಷಕರೆಂದರೆ ಕಲಿಸುವವರಲ್ಲ ಪ್ರೇರೇಪಿಸುವವರು’ ಅಂತ ಅಬ್ರಹಾಂ ಲಿಂಕನ್ ಮಾತ್ನ ನೀವು ಹೇಳಿದ್ರಿ. ಅದೀಗ ನೆನಪಾತು ಸಾ. ನಾವೂ ನಿಮ್ಮಂಗಲ್ಲದಿದ್ದರೂ ನಿಮ್ಮ ನೆರಳಿನಂಗೆ ಬದ್ಕಕೆ ಪ್ರಯತ್ನ ಪಡ್ತಿದ್ದೀವಿ ಸಾ. ಈ ದಿನ ನಿಮ್ಮ ನೆನಪಾಗಿ ಕಣ್ಣು ತುಂಬಿ ಬಂತು ಸಾ. ಜಗದೆಲ್ಲಾ ‘ಸಾ’ಗಳಿಗೆ ಇದೋ ಅಡ್ಡ ಬಿದ್ದು ಶರಣು ಸಾ!

ಯಾಕೋ ಅಕ್ಷರ ತಿದ್ದಿಸಿದ ಜೊತೆಗೆ ಅನ್ನದ ದಾರಿ ತೋರಿದ ಗುರುಗಳ ಎದುರು ನಾಲ್ಕು ಮಾತಾಡೋಣ ಅನ್ನಿಸಿತು, ತಪ್ಪಾಗಿದ್ದರೆ ಮನ್ನಿಸಿ ಸಾ.

ನಮಸ್ಕಾರ ಸಾ!

(ಲೇಖಕರು: ಸಂತೇಬೆನ್ನೂರಿನ ಕರ್ನಾಟಕ ಪಬ್ಲಿಕ್ ಶಾಲೆಯ ಶಿಕ್ಷಕರು)

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು