ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಸ್ಕೃತಿಯ ಬಟ್ಟಲಲ್ಲಿ ರಾಜಕೀಯದ ‘ಗಾಳಿ’!

Last Updated 1 ಆಗಸ್ಟ್ 2020, 19:30 IST
ಅಕ್ಷರ ಗಾತ್ರ

ಸಂಸ್ಕೃತಿಯಲ್ಲಿ ರಾಜಕೀಯ ಹಸ್ತಕ್ಷೇಪದ ಪ್ರಶ್ನೆಯು ಬಹುಕಾಲದಿಂದ ಕಾಡುತ್ತಿದೆ. ರಾಜಕೀಯ ಪಕ್ಷಗಳ ಪರವಾಗಿ ಸಾಹಿತಿಗಳ ವಕ್ತಾರಿಕೆ ಪ್ರಶ್ನೆಯೂ ಅದಕ್ಕೀಗ ಸೇರಿಕೊಂಡಿದೆ. ಈ ಮಧ್ಯೆ ಸಾಹಿತ್ಯ ಕ್ಷೇತ್ರದಿಂದ ವಿಧಾನ ಪರಿಷತ್ತಿಗೆ ಮಾಡಲಾಗಿರುವ ನಾಮನಿರ್ದೇಶನದ ವಿಷಯ ಕೂಡ ಹಲವು ಪ್ರಶ್ನೆಗಳನ್ನು ಎತ್ತುವಂತೆ ಮಾಡಿದೆ. ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಹುಡುಕುವ ಯತ್ನವೇ ಭಿನ್ನ ಆಯಾಮಗಳ ಇಲ್ಲಿನ ಮೂರು ವಿಶ್ಲೇಷಣೆಗಳು...

ಸಂಸ್ಕೃತಿಯ ವಲಯದಲ್ಲಿ ಸರ್ಕಾರವು ಏನನ್ನು ಮಾಡಬೇಕು, ಏನನ್ನು ಮಾಡಬಾರದು ಎಂಬ ವಿಚಾರ ಕುರಿತು ನಮ್ಮ ನಾಡಿನ ರಾಜಕಾರಣಿಗಳಿಗೆ ಮಾತ್ರವಲ್ಲ ಸಾಹಿತಿ, ಕಲಾವಿದರಿಗೂ ಸ್ಪಷ್ಟತೆ ಇಲ್ಲ. ಹೊಸ ಸರ್ಕಾರವೊಂದು ಬಂದು ಅಕಾಡೆಮಿ ನಾಮಕರಣಗಳನ್ನು ರದ್ದು ಮಾಡಿದಾಗಲೋ ಅಥವಾ ಇನ್ನಾವುದೋ ಅರೆಸರ್ಕಾರಿ ಸಂಸ್ಥೆಗೆ ನೇಮಕಾತಿ ನಡೆದಾಗಲೋ ಅದನ್ನು ಪ್ರತಿಭಟಿಸಿ ಒಂದೊಂದು ದನಿ ಕೇಳುವುದಿದೆ. ಆದರೆ, ಅದಕ್ಕೆಲ್ಲ ಹಿನ್ನೆಲೆಯಾಗಿ ಕಳೆದ ಹಲವಾರು ವರ್ಷಗಳಿಂದ ಕ್ರಮಕ್ರಮವಾಗಿ ಪಕ್ಷ- ಪಂಗಡ- ಸಿದ್ಧಾಂತಗಳ ಭಿನ್ನತೆಗಳನ್ನೆಲ್ಲ ಮೀರಿದ ಆಕ್ರಮಣಕಾರಿ ಬೆಳವಣಿಗೆಯೊಂದು ನಡೆಯುತ್ತಿರುವುದನ್ನು ಈ ನಾಡಿನ ಸಾಂಸ್ಕೃತಿಕ ಕ್ರಿಯಾಶೀಲರು ನಿರ್ಲಕ್ಷ್ಯದಿಂದಲೋ, ಹತಾಶೆಯಿಂದಲೋ ಗುರುತಿಸದೆ ಸುಮ್ಮನಿದ್ದಾರೆ.

ಈಚೆಗೆ, ಸಾಹಿತ್ಯದ ಕೋಟಾದಲ್ಲಿ ರಾಜಕೀಯ ಕ್ಷೇತ್ರದ ಮಹನೀಯರೊಬ್ಬರನ್ನು ವಿಧಾನ ಪರಿಷತ್ತಿಗೆ ನಾಮಕರಣ ಮಾಡಿರುವುದಕ್ಕೂ ಇಂಥದ್ದೇ ತೆಳುವಾದ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹಾಗಾಗದೇ ವಿಧಿಯಿಲ್ಲ- ಪ್ರಾಥಮಿಕ ಸಮಸ್ಯೆಗಳನ್ನು ಗುರುತಿಸದೆ ನಿರ್ದಿಷ್ಟ ಉದಾಹರಣೆಗಳನ್ನು ಮಾತ್ರ ಎದುರಿಗಿಟ್ಟು ಟೀಕಿಸಿದರೆ, ಅದು ಯಾವುದೋ ಹಿತಾಸಕ್ತಿಯನ್ನು ಒಳಗಿಟ್ಟುಕೊಂಡು ಆಡುತ್ತಿರುವ ಮಾತಾಗಿ ಕೇಳಿ ಅಪಾರ್ಥ ಹುಟ್ಟಿಸುತ್ತದೆ. ಇಷ್ಟರಮೇಲೆ, ಯಾರು ಸಾಹಿತಿ- ಕಲಾವಿದ, ಯಾರು ಅಲ್ಲ ಎಂದು ತೀರ್ಮಾನಿಸುವ ಸ್ಪಷ್ಟ ಮಾನದಂಡವು ಜಗತ್ತಿನಲ್ಲಿ ಎಲ್ಲೂ ಇಲ್ಲವಾದ್ದರಿಂದ, ನಾವು ನಿರ್ದಿಷ್ಟ ವ್ಯಕ್ತಿಗಳನ್ನು ಎದುರಿಗಿಟ್ಟು ಇಂಥ ಜಿಜ್ಞಾಸೆ ನಡೆಸುವುದರಲ್ಲಿ ಯಾವ ಹುರುಳೂ ಇಲ್ಲ. ಅದರ ಬದಲು, ಈಗಲಾದರೂ ನಾವೆಲ್ಲ ತುರ್ತಾಗಿ ಮಾಡಬೇಕಾಗಿರುವ ಕೆಲಸ ಇದು- ಸರ್ಕಾರ ಮತ್ತು ಸಂಸ್ಕೃತಿಯ ಸಂಬಂಧವನ್ನು ಕುರಿತೇ ಕೆಲವು ಮೂಲಪ್ರಶ್ನೆಗಳನ್ನೆತ್ತಿ ನಮ್ಮೊಳಗಾದರೂ ಅದನ್ನು ಸ್ಪಷ್ಟಗೊಳಿಸಿಕೊಳ್ಳುವುದು.

ಸರ್ಕಾರವು ಸಂಸ್ಕೃತಿಯ ವಲಯವನ್ನು ಹೇಗೆ ನಿರ್ವಹಿಸಬೇಕು ಎಂಬ ಚರ್ಚೆ ಇವತ್ತು ನಿನ್ನೆಯದಲ್ಲ. 1950ರ ದಶಕದಲ್ಲಿಯೇ ಸಂಗೀತ ನಾಟಕ ಅಕಾಡೆಮಿಯು ಒಂದು ರಾಷ್ಟ್ರಮಟ್ಟದ ವಿಚಾರ ಸಂಕಿರಣ ನಡೆಸಿ, ಅದಕ್ಕೆ ಎಲ್ಲ ಭಾಷೆಗಳ ಗಣ್ಯರನ್ನು ಆಹ್ವಾನಿಸಿತ್ತು. ಅದರಲ್ಲಿ ಕೆಲವರು ಸಾಹಿತ್ಯ- ಕಲೆಗಳ ನಾನಾ ಸಮಸ್ಯೆಗಳನ್ನು ಪ್ರಸ್ತಾಪಿಸುತ್ತ, ಇಂಥ ಸಮಸ್ಯೆಗಳ ನಿರ್ವಹಣೆಗೆ ಸರ್ಕಾರವು ಪ್ರತ್ಯೇಕ ಇಲಾಖೆಯೊಂದನ್ನು ಸ್ಥಾಪಿಸಬೇಕೆಂಬ ಸಲಹೆ ಇತ್ತಾಗ ಕಮಲಾದೇವಿ ಚಟ್ಟೋಪಾಧ್ಯಾಯ ಅವರು ಹೇಳಿದ್ದರು- ‘ಈ ಸಂಕಿರಣದಲ್ಲಿ ಮತ್ತು ಹೊರಗೆ, ಸಂಸ್ಕೃತಿ ಇಲಾಖೆಯೊಂದು ಬೇಕೆಂಬ ಮಾತನ್ನು ನಾನು ಪದೇ ಪದೇ ಕೇಳುತ್ತಿದ್ದೇನೆ. ದೇವರು ಕಾಪಾಡಲಿ, ಅಂಥ ಸಚಿವಾಲಯವೊಂದು ಹುಟ್ಟಿದರೆ ಈ ದೇಶದಲ್ಲಿ ಸಾಂಸ್ಕೃತಿಕ ಚಟುವಟಿಕೆಗಳೇ ನಿರ್ನಾಮವಾದಾವು’. ವ್ಯಂಗ್ಯದ ಸಂಗತಿಯೆಂದರೆ, ಅದಾಗಿ ಕೆಲ ವರ್ಷಗಳಲ್ಲೇ ಕೇಂದ್ರ ಸಂಸ್ಕೃತಿ ಇಲಾಖೆ ಆರಂಭವಾಯಿತು! ತಮ್ಮ ಬದುಕಿನ ಬಹುಭಾಗವನ್ನು ನಿರ್ಲಕ್ಷಿತ ಕಲೆ- ಕಲಾವಿದರನ್ನು ಸಂಘಟಿಸುವ ಕೆಲಸಕ್ಕೇ ಮೀಸಲಾಗಿಟ್ಟ ಕಮಲಾದೇವಿಯವರಿಗೇ ಹೀಗನಿಸಿದ್ದು ಯಾಕೆಂದು ನಾವೀಗ ಯೋಚಿಸಿಕೊಳ್ಳಬೇಕು. ಸಂಸ್ಕೃತಿಯ ವಲಯವು ತನ್ನನ್ನು ತಾನೇ ಕಲ್ಪಿಸಿಕೊಳ್ಳಬೇಕೇ ಹೊರತು ಅದರಲ್ಲಿ ಪ್ರಭುತ್ವದ ಹಸ್ತಕ್ಷೇಪ ಇರಬಾರದೆಂಬುದು ಈ ಮಾತಿನ ಇಂಗಿತವೆಂದು ನನ್ನ ತಿಳಿವಳಿಕೆ.

1963ರ ತಮ್ಮ ಲೇಖನವೊಂದರಲ್ಲಿ ಕನ್ನಡದ ಪ್ರಸಿದ್ಧ ಕವಿ ಗೋಪಾಲಕೃಷ್ಣ ಅಡಿಗರೂ ಇದಕ್ಕೆ ಸಂವಾದಿಯಾದ ಅಭಿಪ್ರಾಯವೊಂದನ್ನು ಹೇಳಿದ್ದಾರೆ. ‘ರಾಜಕೀಯ ಹಾಗೂ ನಾವು’ ಎಂಬ ಹೆಸರಿನ ಆ ಲೇಖನವನ್ನು ಚುಟುಕಾಗಿ ಸಂಗ್ರಹಿಸುತ್ತೇನೆ- ಆಧುನಿಕ ಪ್ರಭುತ್ವದ ಸ್ವರೂಪವೇ ಆಕ್ರಮಣಕಾರಿಯಾದದ್ದು. ಹಿಂದಿನ ಕಾಲಗಳಲ್ಲಿ ಒಳ್ಳೆಯ ಮತ್ತು ಕೆಟ್ಟ ಪ್ರಭುತ್ವಗಳು ಇದ್ದವಾದರೂ, ಆಗ ಪ್ರಭುತ್ವದ ವ್ಯಾಪ್ತಿಯೇ ಸೀಮಿತವಾಗಿದ್ದುದರಿಂದ, ಅದರ ಒಳಿತು- ಕೆಡುಕುಗಳೆರಡರ ಪರಿಣಾಮಗಳೂ ಸೀಮಿತವಾಗಿದ್ದವು. ಆದರೆ, ಆಧುನಿಕ ಸರ್ಕಾರಗಳು ಬಂದದ್ದೇ, ಎಲ್ಲವನ್ನೂ ಕೇಂದ್ರೀಕರಿಸಿಕೊಂಡು, ಎಲ್ಲ ವಲಯಗಳನ್ನೂ ತಾವೇ ನಿರ್ವಹಣೆ ಮಾಡುವುದಾಗಿ ಆರೋಪಿಸಿಕೊಂಡು, ಬದುಕಿನ ಎಲ್ಲ ಮೂಲೆಗಳಿಗೂ ಕೈಹಾಕಲು ಆರಂಭ ಮಾಡಿದವು.

ತಂತ್ರಜ್ಞಾನ ಮತ್ತು ಮಾಧ್ಯಮಗಳು ಅದಕ್ಕೆ ಪರೋಕ್ಷ ಬೆಂಬಲ ಕೊಟ್ಟು, ಸರ್ಕಾರಗಳನ್ನು ಕೊಬ್ಬಿಸಿ ತಾವೂ ಕೊಬ್ಬಿದವು. ತಾನು ಅಧಿಕೃತವೆಂದು ದೃಢೀಕರಿಸುವ ಸಿದ್ಧಾಂತ- ನಂಬಿಕೆಗಳ ಪ್ರಕಾರವೇ ಬದುಕಿನ ಎಲ್ಲ ಕ್ಷೇತ್ರಗಳೂ ನಡೆಯಬೇಕೆಂಬ ಈ ಆಧುನಿಕತೆಯ ಅಹಂಕಾರವೇ ಪ್ರಭುತ್ವದ ಇಂಥ ಆಕ್ರಮಣಕಾರಿ ಸ್ವರೂಪಕ್ಕೆ ಪ್ರೇರಕ- ಇದು ಅಡಿಗರ ಲೇಖನದ ಸಾರಾಂಶ. ನಮ್ಮ ಸಂಸ್ಕೃತಿಯ ಶಾಸ್ತ್ರಜ್ಞರು ಅಗತ್ಯವಾಗಿ ಗಮನಿಸಿಕೊಳ್ಳಬೇಕು: ಮುಂದೆ ಮಿಷೆಲ್ ಫೂಕೋನಿಂದ ಅಶೀಶ್ ನಂದಿ ಅವರ ವರೆಗೆ ನಾನಾ ಚಿಂತಕರು ಪ್ರಭುತ್ವದ ಹಿಂಸೆಗಳನ್ನು ಕುರಿತು ಮಂಡಿಸಿದ ಸಿದ್ಧಾಂತಗಳ ಹೊಳಹು ಕಮಲಾದೇವಿ ಮತ್ತು ಅಡಿಗರಲ್ಲಿದೆ.

ಆದರೆ, ಆಧುನಿಕ ಪ್ರಭುತ್ವಗಳು ಇಂಥ ಅನುಮಾನದ ದನಿಗಳಿಗೆ ಸಂಪೂರ್ಣ ಕಿವುಡಾಗಿ ಮುನ್ನಡೆದಿದ್ದು ಈಗ ಇತಿಹಾಸ. 21ನೆಯ ಶತಮಾನದಲ್ಲಿಯಂತೂ ಸಂಸ್ಕೃತಿಯೊಳಗೆ ಸರ್ಕಾರಗಳ ಇಂಥ ಹಸ್ತಕ್ಷೇಪವು ಪಕ್ಷ- ಸಿದ್ಧಾಂತಗಳ ಭೇದವಿಲ್ಲದೆ ಭಂಡತನದಿಂದ ಬೆಳೆದಿದೆ. ಕೆಲವೇ ವರ್ಷಗಳ ಹಿಂದೆ ಕರ್ನಾಟಕ ಸರ್ಕಾರವು ಸಾಂಸ್ಕೃತಿಕ ನೀತಿಯೊಂದನ್ನು ರೂಪಿಸಲಿಕ್ಕೆ ಬರಗೂರು ರಾಮಚಂದ್ರಪ್ಪನವರ ನೇತೃತ್ವದಲ್ಲಿ ಸ್ಥಾಪಿಸಿದ್ದ ಸಮಿತಿಯು ಇಂಥ ಅಪಾಯಗಳಲ್ಲಿ ಕೆಲವನ್ನಾದರೂ ಗಮನಿಸಿ ಒಂದಿಷ್ಟು ಉಪಯುಕ್ತ ಶಿಫಾರಸುಗಳನ್ನು ಮಾಡಿತ್ತು. ಉದಾಹರಣೆಗೆ, ಸರ್ಕಾರಗಳು ಬದಲಾದಾಗ ಅಕಾಡೆಮಿಗಳನ್ನು ಬದಲಿಸಬಾರದು ಎಂಬುದು ಅಂಥದ್ದೊಂದು.

ಆದರೆ, ಅಂದಿನ ಸರ್ಕಾರವು ಇಂಥ ಆಯಕಟ್ಟಿನ ಶಿಫಾರಸುಗಳನ್ನು ನಿರಾಕರಿಸಿ, ಈ ಬಗೆಯ ಅಕ್ರಮಗಳನ್ನು

ಸರ್ಕಾರಿ ನೀತಿಯಾಗಿ ಅಧಿಕೃತಗೊಳಿಸಿತು. ಇಷ್ಟು ಅಧ್ವಾನ ಸಾಲದೆಂಬಂತೆ, ಕಳೆದ ಹತ್ತು- ಹದಿನೈದು ವರ್ಷಗಳಲ್ಲಿ ನಮ್ಮ ಸರ್ಕಾರಗಳು ಇನ್ನೂ ಅಪಾಯಕಾರಿಯಾದ ಅನೇಕ ಸಾಂಸ್ಕೃತಿಕ ನಿರ್ಧಾರಗಳನ್ನು ತೆಗೆದುಕೊಳ್ಳುತ್ತ, ಸ್ಥಿತಿ ಸಂಪೂರ್ಣ ಹದಗೆಡುವಂತೆ ಮಾಡಿವೆ. ಇದಕ್ಕೆ ವರ್ತಮಾನ ಕಾಲದ ಬೇಕಷ್ಟು ಉದಾಹರಣೆಗಳನ್ನು ಕೊಡಬಹುದು- ಊರಿಗೊಂದು ಉತ್ಸವ ನಡೆಸಬೇಕೆಂದೂ, ಜಾತಿಗೊಬ್ಬ ಸಂತರ ಜಯಂತಿ ಆಚರಿಸಬೇಕೆಂದೂ, ಒಂದೊಂದು ಕಲಾಪ್ರಕಾರಕ್ಕೂ ಅಕಾಡೆಮಿಯೊಂದನ್ನು ಆರಂಭಿಸಬೇಕೆಂದೂ, ಪ್ರಕಟವಾದ ಎಲ್ಲ ಪುಸ್ತಕಗಳ ಸಗಟು ಖರೀದಿ ನಡೆಸಬೇಕೆಂದೂ- ಹೀಗೆ ನಾನಾ ಹಿತಾಸಕ್ತಿಗಳಿಂದ ಒತ್ತಡ ಬಂದಾಗ, ಸರ್ಕಾರವು ಜನಪ್ರಿಯತೆಯ ಭ್ರಮೆಯಲ್ಲಿ ಅದನ್ನು ಅಡ್ಡಾದಿಡ್ಡಿಯಾಗಿ ಬೆಂಬಲಿಸಿತು. ಮಾತ್ರವಲ್ಲ, ಸಂಸ್ಕೃತಿ ವಲಯದ ಕ್ರಿಯಾಶೀಲರು ಆ ವಿಚಾರವನ್ನು ಕುರಿತು ಮೌನನಿರ್ಲಕ್ಷ್ಯ ತೋರಿಸಿ ಅಥವಾ ಕೆಲವೊಮ್ಮೆ ಪರೋಕ್ಷವಾಗಿ ಅಂಥ ಒತ್ತಡಗಳಿಗೆ ಒತ್ತಾಸೆ ಸೂಚಿಸಿ, ಸರ್ಕಾರದ ಈ ಎಲ್ಲ ಅಧ್ವಾನಗಳಿಗೆ ಕಾರಣಕರ್ತರೇ ಆಗಿದ್ದಾರೆ.

ಆಧುನಿಕ ಪ್ರಭುತ್ವಗಳ ಉಗಮಸ್ಥಾನವಾಗಿರುವ ಪಶ್ಚಿಮದ ದೇಶಗಳು ಈ ಸಮಸ್ಯೆಯನ್ನು ಹೇಗೆ ನಿರ್ವಹಿಸಿಕೊಳ್ಳುತ್ತಿವೆ ಎಂಬುದನ್ನೂ ನಾವಿಲ್ಲಿ ಗಮನಿಸಬೇಕು. ಅಲ್ಲೂ ಇಂಥ ಸಮಸ್ಯೆಗಳಿಲ್ಲವೆಂದೇನೂ ಇಲ್ಲ. ಆದರೆ, ಆ ದೇಶಗಳು ಆಧುನಿಕತೆಯ ಜತೆಗೆ ಹಲವು ಶತಮಾನಗಳ ಕಾಲ ಈಗಾಗಲೇ ಏಗಿರುವ ತಿಳಿವಳಿಕೆಯಿಂದಲೋ ಅಥವಾ ಭಾರತದಂಥ ಬಹುತ್ವದ ವೈವಿಧ್ಯ ಅಲ್ಲಿ ಇಲ್ಲದ ಕಾರಣದಿಂದಲೋ ಸರ್ಕಾರ ಮತ್ತು ಸಂಸ್ಕೃತಿಯ ವಲಯಗಳ ನಡುವೆ ಒಂದು ಗೌರವಯುತ ಅಂತರ ಕಾಯ್ದುಕೊಳ್ಳುವ ಉಪಾಯವನ್ನು ಆವಿಷ್ಕರಿಸಿಕೊಂಡಿವೆ. ಉದಾಹರಣೆಗೆ, ಇಂಗ್ಲೆಂಡಿನಲ್ಲಿ ಕನ್ಸರ್ವೇಟಿವ್ ಪಕ್ಷ ಸೋತು ಲೇಬರ್ ಪಕ್ಷವು ಅಧಿಕಾರಕ್ಕೆ ಬಂದರೆ, ಅವರು ರಾಯಲ್ ಶೇಕ್‍ಸ್ಪಿಯರ್ ಕಂಪನಿಯ ಮುಖ್ಯಸ್ಥರನ್ನು ಬದಲಾಯಿಸುವ ಮೂರ್ಖತನ ಮಾಡುವುದಿಲ್ಲ.

ಅಮೆರಿಕದಲ್ಲಿ ಟ್ರಂಪ್ ಹೋಗಿ ಕ್ಲಿಂಟನ್ ಬಂದರೂ ಹಾರ್ವರ್ಡ್ ವಿಶ್ವವಿದ್ಯಾಲಯದ ಕುಲಪತಿ ನೇಮಕಾತಿಯ ಕೆಲಸದಲ್ಲಿ ಅವರು ಕೈ ಹಾಕುವುದಿಲ್ಲ. ಆದರೆ, ನಮ್ಮ ದೇಶದಲ್ಲಿ ಸರ್ಕಾರಗಳು ವಿಶ್ವವಿದ್ಯಾಲಯಗಳನ್ನು ತಾಲ್ಲೂಕು ಕಚೇರಿಗಳಂತೆ ನಡೆಸುತ್ತಿವೆ; ಸರ್ಕಾರದ ಹಸ್ತಕ್ಷೇಪವು ಎಷ್ಟು ಜಗಜ್ಜಾಹೀರಾಗಿದೆಯೆಂದರೆ, ಸೆನೆಟ್‌, ಸಿಂಡಿಕೇಟುಗಳ ಮಾತು ಬಿಡಿ, ಸ್ವತಃ ಕುಲಪತಿಗಳಾಗುವ ಆಕಾಂಕ್ಷಿಗಳೇ ತಮ್ಮ ಬಯೊಡೇಟಾ ಹಿಡಿದುಕೊಂಡು ಶಿಕ್ಷಣ ಇಲಾಖೆಯ ಅಂಡರ್ ಸೆಕ್ರೆಟರಿಯನ್ನು ಕಾಣಲಿಕ್ಕೆ ಹೋದ ದೃಷ್ಟಾಂತ ಕಥೆಗಳನ್ನು ನಾನು ಕೇಳಿದ್ದೇನೆ. ಅಂಥ ದಾರುಣ ಸಾಂಸ್ಕೃತಿಕ ಹವಾಮಾನವನ್ನು ನಾವೆಲ್ಲ ಸೇರಿ ರೂಪಿಸಿಕೊಂಡಿದ್ದೇವೆ.

ನಮ್ಮ ಸರ್ಕಾರಗಳು ಸಮರ್ಪಕವಾದ ಸಾಂಸ್ಕೃತಿಕ ನೀತಿಯೊಂದನ್ನು ರೂಪಿಸಿಕೊಳ್ಳದೆ ಇರುವುದೇ ಇದಕ್ಕೆಲ್ಲ ಮೂಲಕಾರಣವೆಂದು ಹಲವೊಮ್ಮೆ ಹೇಳಲಾಗುತ್ತದೆ. ಆದರೆ, ಅದು ಹಾದಿ ತಪ್ಪಿಸುವ ಅರೆಸತ್ಯದ ಮಾತು. ಸಂಸ್ಕೃತಿಯ ಆರೋಗ್ಯಕ್ಕೆ ಬೇಕಿರುವುದು ಕಾಲಕಾಲಕ್ಕೆ ತನ್ನ ನೀತಿಯನ್ನು ನಿರ್ಧರಿಸಿಕೊಳ್ಳುವ ಸ್ವಾಯತ್ತತೆಯೇ ಹೊರತು, ಯಾರೋ ನಿರೂಪಿಸಿಕೊಟ್ಟ ಸಿದ್ಧ ನೀತಿಯಲ್ಲ. ನಿಜ, ಒಂದು ನಾಡಿಗೆ ಸಾಂಸ್ಕೃತಿಕ ನೀತಿಯೊಂದು ಇರಬೇಕು. ಆದರೆ, ಅದನ್ನು ಸರ್ಕಾರವು ರೂಪಿಸಬೇಕು ಎಂದು ಕಲ್ಪಿಸುವಲ್ಲಿಯೇ ಸಂಸ್ಕೃತಿಯ ಸ್ವಾಯತ್ತತೆ ನಷ್ಟವಾಗಿ ಹೋಗುತ್ತದೆ. ಸಾಂಸ್ಕೃತಿಕ ನೀತಿಯನ್ನು ತಾನೇ ರೂಪಿಸುತ್ತೇನೆ ಎಂದು ಪ್ರಭುತ್ವ ಭಾವಿಸುವುದೇ ಆಧುನಿಕತೆಯ ಅಹಂಕಾರದಿಂದ. ಹಲವು ವರ್ಷಗಳ ಹಿಂದೆ, ಸಂಸ್ಕೃತಿ ಜಿಜ್ಞಾಸು ಅಶೀಶ್ ರಾಜಾಧ್ಯಕ್ಷ ಅವರು ಸಭೆಯೊಂದರಲ್ಲಿ ಆಡಿದ ಒಂದು ಮಾತು ನನಗಿಲ್ಲಿ ನೆನಪಾಗುತ್ತದೆ- ‘ಸಾಂಸ್ಕೃತಿಕ ವಲಯದ ವ್ಯಕ್ತಿ- ಸಂಸ್ಥೆಗಳೂ ನಾಗರಿಕ ಸಮಾಜವೂ ಒಟ್ಟಾಗಿ ಕೂಡಿ ತನ್ನ ಸಮುದಾಯದೊಳಗಿಂದಲೇ ಒಂದು ನೀತಿಯನ್ನು ಹುಟ್ಟಿಸಿಕೊಳ್ಳಲು ಸರ್ಕಾರವು ಬೆಂಬಲ ಕೊಡಬೇಕು; ಯಾವುದೇ ಸರ್ಕಾರವು ರೂಪಿಸಬಹುದಾದ ಅತ್ಯುತ್ತಮ ಸಾಂಸ್ಕೃತಿಕ ನೀತಿ ಅದೇ’.

ಆದರೆ, ಅಂಥ ಸಮಷ್ಟಿ ಪ್ರಜ್ಞೆಯೊಂದು ನಮ್ಮ ನಾಡಿನಲ್ಲಿ ಹುಟ್ಟುವುದಕ್ಕೆ ಮೊದಲು, ಕಡೆಯ ಪಕ್ಷ ಸಾಂಸ್ಕೃತಿಕ ವಲಯದ ಸ್ವಾಯತ್ತತೆಯ ಅಗತ್ಯವನ್ನು ಖಡಾಖಂಡಿತವಾಗಿ ಅರಿತುಕೊಳ್ಳಬೇಕು ಮತ್ತು ಅಧಿಕಾರಶಾಹಿಯ ಕೈಯಳತೆಯಿಂದ ಸಂಸ್ಕೃತಿಯ ಕೆಲಸಗಳನ್ನು ಹೊರತರುವ ವಿಕೇಂದ್ರೀಕರಣದ ಪ್ರಜ್ಞೆಯನ್ನೂ ಮೂಡಿಸಿಕೊಳ್ಳಬೇಕು. ಸಂಸ್ಕೃತಿ ವಲಯಕ್ಕೆ ಸರ್ಕಾರದ ಗರಿಷ್ಠ ಸಹಾಯ ಮತ್ತು ಕನಿಷ್ಠ ಹಸ್ತಕ್ಷೇಪ- ಇದು ನಾವು ಸಾಧಿಸಬೇಕಿರುವ ಗುರಿ. ಇದೆಲ್ಲ ಸಾಧ್ಯವಾಗುವುದಕ್ಕೆ ಮೊದಲು, ಪ್ರಾಯಶಃ ಒಂದು ಹೊಸ ಬಗೆಯ ಸಾಂಸ್ಕೃತಿಕ ಸ್ವಾತಂತ್ರ್ಯ ಚಳವಳಿಯೇ ನಡೆಯಬೇಕೋ ಏನೋ ಎಂದೂ ಹಲವೊಮ್ಮೆ ನನಗನ್ನಿಸಿದೆ. ಇದಿಷ್ಟು, ಪ್ರಾಥಮಿಕ ಹಂತದಲ್ಲಿರುವ ನನ್ನ ಸ್ವಗತ ಚಿಂತನೆ; ಉಳಿದವರಿಗೆ ಮಾಡುತ್ತಿರುವ ಉಪದೇಶ ಖಂಡಿತ ಇದಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT