ಸೋಮವಾರ, ಮಾರ್ಚ್ 27, 2023
28 °C

ಸ್ವಾತಿ ತಿರುನಾಳ್ ಅಜ್ಞಾತ ‘ಕೃತಿ’

ಬಿ.ಎಸ್.ಶೈಲಜಾ Updated:

ಅಕ್ಷರ ಗಾತ್ರ : | |

ವೀಕ್ಷಣಾಲಯದ 1837ರ ನೋಟ

ಸಂಗೀತ ಕ್ಷೇತ್ರದಲ್ಲಿ ಅಜರಾಮರರಾಗಿರುವ ಸ್ವಾತಿ ತಿರುನಾಳ್ ಅವರದು ಬಹುಮುಖ ಪ್ರತಿಭೆ. ಅವರ ಸಂಗೀತ ಕೃತಿಗಳ ಕುರಿತು ನಿಮಗೆ ಗೊತ್ತು. ಆದರೆ, ಖಗೋಳ ವಿಜ್ಞಾನದ ಅವರ ಆಸಕ್ತಿ ತಿರುವನಂತಪುರಕ್ಕೆ ವೀಕ್ಷಣಾಲಯವನ್ನು ತಂದುಕೊಟ್ಟು, ಮುಂದೆ ಧೂಮಕೇತುವೊಂದರ ಆವಿಷ್ಕಾರಕ್ಕೂ ಅವಕಾಶ ಮಾಡಿಕೊಟ್ಟಿದ್ದುದು ಗೊತ್ತೇ?

ಈಗ ನಾನು ಹೇಳಲು ಹೊರಟಿರುವ ಸ್ವಾತಿ ತಿರುನಾಳ್ ಅವರ ಕೃತಿ ಹಾಡುವಂತಹುದಲ್ಲ; ನೋಡುವಂತಹುದು. ನೋಡಲೇ ಬೇಕಾದದ್ದು. ನಮ್ಮ ದೇಶ ಕಂಡ ಹಲವಾರು ಪ್ರತಿಭಾಶಾಲಿಗಳಲ್ಲಿ ಸ್ವಾತಿ ತಿರುನಾಳ್ ರಾಮ ವರ್ಮ (1813-1846) ಕೂಡ ಸೇರಿದ್ದಾರೆ. ಅವರ ಭಾಷಾ ಪ್ರೌಢಿಮೆ, ಸಂಗೀತ ಜ್ಞಾನ, ಸಾಹಿತ್ಯಾಸಕ್ತಿ ಎಲ್ಲರಿಗೂ ತಿಳಿದ ವಿಷಯ. ಅವರು ಬೆಳೆದ ವಾತಾವರಣ ಅವರಿಗೆ ಎಲ್ಲ ಬಗೆಯ ವಿದ್ಯೆಗಳನ್ನೂ ಪರಿಚಯಿಸಿತ್ತು.


ಕಲೆ: ಗುರು ನಾವಳ್ಳಿ

ತಾಯಿಯ ಗರ್ಭದಲ್ಲಿದ್ದಾಗಲೇ ಅರಸ ಎಂಬ ಪಟ್ಟ ಕಟ್ಟಿಸಿಕೊಂಡ ಬಾಲಕನಿಗೆ ತಂದೆ ಒಳ್ಳೆಯ ಶಿಕ್ಷಣ ಕೊಡಿಸಿದರು. ದಕ್ಷಿಣ ಭಾರತದ ಎಲ್ಲ ಭಾಷೆಗಳು, ಸಂಸ್ಕೃತ, ಇಂಗ್ಲಿಷ್, ಫ್ರೆಂಚ್, ಪರ್ಷಿಯನ್ –ಹೀಗೆ ಹಲವು ಭಾಷೆಗಳ ಸಾಹಿತ್ಯ ಮತ್ತು ಸಂಗೀತದ ಪರಿಚಯ ಅವರಿಗೆ ಆಯಿತು. ಗಣಿತ ಮತ್ತು ಖಗೋಳ ವಿಜ್ಞಾನದಲ್ಲಿಯೂ ಪರಿಣತಿ ಪಡೆದ ಈ ಬಾಲಕನಿಗೆ ಯುರೋಪಿಯನ್‌ ಪದ್ಧತಿಯ ಗಣಿತ ಬಹಳ ಸುಲಭವಾಗಿ ಅರ್ಥವಾಯಿತು. 1825ರಲ್ಲಿ, ಅಂದರೆ ಈತನ ಹದಿಮೂರನೆಯ ವಯಸ್ಸಿನಲ್ಲಿ ವೆಲ್ಷ್ ಎಂಬ ಬ್ರಿಟಿಷ್ ಅಧಿಕಾರಿ ಈ ಬಾಲಕನನ್ನು ಭೇಟಿ ಮಾಡಿ ವರದಿಯಲ್ಲಿ ಬರೆದಿದ್ದು ಹೀಗೆ: ‘ಮಹಾರಾಜನಾಗಿರುವ ಈ ಬಾಲಕ ಬಹಳ ಪ್ರತಿಭಾಶಾಲಿ. ಯುಕ್ಲಿಡ್ ಜಾಮಿಟ್ರಿಯ 47ನೆಯ ಸೂತ್ರವನ್ನು ಆತ ಹಲಗೆಯ ಮೇಲೆ ಬರೆದು ಇಂಗ್ಲಿಷ್‍ನಲ್ಲಿ ವಿವರಿಸಿದ್ದು ನನಗೆ ಆಶ್ಚರ್ಯವನ್ನು ಉಂಟುಮಾಡಿತು. ನಾವು ಕಲಿಯುವ ಜಾಮಿಟ್ರಿ ಎಂಬ ಪದದ ಮೂಲವೇ ಸಂಸ್ಕೃತ; ಭೂಮಿಯ ಅಳತೆ ಎಂಬುದು ಅದರ ಅರ್ಥ; ಅಷ್ಟೇ ಅಲ್ಲ, ನಾವು ಇಂಗ್ಲಿಷ್‍ನಲ್ಲಿ ಬಳಸುವ ಹೆಕ್ಸಾಗನ್, ಹೆಪ್ಟಾಗನ್, ಆಕ್ಟಾಗನ್ ಮುಂತಾದ ಶಬ್ದಗಳೆಲ್ಲ ಸಂಸ್ಕೃತದಿಂದಲೇ ಬಂದಿವೆ ಎಂದು ವಿವರಿಸಿದಾಗ ಇನ್ನೂ ಆಶ್ಚರ್ಯವಾಯಿತು. ಈತ ನಿರರ್ಗಳವಾಗಿ ಮಾತನಾಡಬಲ್ಲ. ಆದರೆ, ಭಾಷೆಯಲ್ಲಿ ಪಾಂಡಿತ್ಯವಿಲ್ಲ; ವ್ಯಾಕರಣ ದೋಷಗಳು ಇದ್ದವು. ಆತನಿಗೆ ಕಲಿಸಿಕೊಟ್ಟ ಗುರುವೂ (ಸುಬ್ಬರಾವ್ ಎಂಬ ತಂಜಾವೂರು ಬ್ರಾಹ್ಮಣ) ಹಾಗೆಯೇ ಮಾತನಾಡುತ್ತಿದ್ದುದನ್ನು ಕೇಳಿ ವಿಷಾದವಾಯಿತು...’

ಖಗೋಳ ವಿಜ್ಞಾನದಲ್ಲಿ ಪರಿಣತಿ ಪಡೆದಿದ್ದ ಈ ಬಾಲಕ ಮುಂದೆ ತಿರುವಾಂಕೂರು ಪಂಚಾಂಗದ ಹುಟ್ಟಿಗೇ ಕಾರಣನಾದ. ಸಾಂಪ್ರದಾಯಿಕ (ಹಿಂದೂ) ಪದ್ಧತಿಯನ್ನೂ ದೂರದರ್ಶಕವನ್ನೂ ಬಳಸಿ ನಕ್ಷತ್ರಗಳನ್ನು ವೀಕ್ಷಿಸಿ ಕಾಲಕಾಲಕ್ಕೆ ಮಾಡಬೇಕಾದ ತಿದ್ದುಪಡಿಗಳ ಬಗ್ಗೆ ತಿಳಿವಳಿಕೆ ಪಡೆದುಕೊಂಡಿದ್ದ. ಈತನಿಗೆ ಸಹಜವಾಗಿ ದೂರದರ್ಶಕ ಮತ್ತು ಯುರೋಪಿಯನ್ ಖಗೋಳ ವಿಜ್ಞಾನದ ಬಗ್ಗೆ ಆಸಕ್ತಿ ಇತ್ತು. ಮುಂದೆ ಫ್ರೇಸರ್ ಎಂಬ ರೆಸಿಡೆಂಟ್ ಬಂದದ್ದು ಈ ಆಸಕ್ತಿಯನ್ನು ಪೋಷಿಸುವಲ್ಲಿ ಬಹಳ ನೆರವಾಯಿತು. 1837ರಲ್ಲಿ ಮೊದಲ ಪಂಚಾಂಗ ಸಿದ್ಧವಾಯಿತು (ಅದಾದ 100 ವರ್ಷಕ್ಕೆ ಅಲ್ಲೊಂದು ವಿಶ್ವವಿದ್ಯಾಲಯವೂ ಸ್ಥಾಪನೆಯಾಯಿತು). ಪ್ರತಿವರ್ಷವೂ ಅದನ್ನು ಸಿದ್ಧಗೊಳಿಸುವ ಕಾರ್ಯ ಮತ್ತು ಅದಕ್ಕೆ ಪೂರಕವಾದ ಖಗೋಳ ಅಳತೆಗಳಿಗೆ ಆಧುನಿಕ ಉಪಕರಣಗಳ ಉಪಲಬ್ಧಿ –ಇವು ಕೇರಳದಲ್ಲೆಲ್ಲ ಒಂದು ರೀತಿಯ ಕ್ರಾಂತಿಯನ್ನು ಉಂಟುಮಾಡಿದವು.

ತಿರುವು ದೊರಕಿಸಿದ ದೂರದರ್ಶಕ

ಈ ಯುವ ಮಹಾರಾಜರಿಗೆ ಜಾನ್ ಕಾಲ್ಡ್‌ಸ್ಕಾಟ್ ಎಂಬ ತರುಣನ ಪರಿಚಯ ವಾಗಿದ್ದು ಹೇಗೆ ತಿರುವನ್ನು ತಂದುಕೊಟ್ಟಿತು ಎಂಬ ಕಥೆ ಸ್ವಾರಸ್ಯಕರವಾಗಿದೆ.

ಇಂಗ್ಲೆಂಡಿನ ಜಾನ್ ಉದ್ಯೋಗ ಅರಸಿ ಐದು ತಿಂಗಳ ಹಡಗು ಪ್ರಯಾಣ ಮುಗಿಸಿ 1821ರಲ್ಲಿ ಮುಂಬೈಗೆ ಬಂದಿಳಿದ. ಅಪೋಲೊ ಕಾಟನ್ ಎಂಬಲ್ಲಿ ಸಹಾಯಕನಾಗಿ ಸೇರಿಕೊಂಡಿದ್ದ. ಆ ಕಂಪನಿಯ ಮಾಲೀಕ ವಿಲಿಯಂ ವೆಸ್ಟ್‌ಗೆ ಖಗೋಳ ವೀಕ್ಷಣೆಯಲ್ಲಿ ಆಸಕ್ತಿ. ಒಂದೆರಡು ಚಿಕ್ಕ ದೂರದರ್ಶಕಗಳನ್ನೂ ಇಟ್ಟುಕೊಂಡಿದ್ದ. ಹೀಗೆ ಜಾನ್‍ಗೆ ಅದರ ಪರಿಚಯವಾಗಿ ವಿಶೇಷ ಆಸಕ್ತಿ ಬೆಳೆಯಿತು. ಇದರ ನಂತರ ಜಾನ್‌, ತಿರುವಾಂಕೂರು ಸಂಸ್ಥಾನದಲ್ಲಿ ಕೊಚ್ಚಿನ್ ಸಮೀಪದ ಅಲ್ವಾಯೆ (ಈಗ ಅದರ ಹೆಸರು ಆಳುವಾ) ಎಂಬ ಊರಿನಲ್ಲಿ ಕಾಫಿ ತೋಟದ ಮಾಲೀಕನ ಪರಿಚಯ ಮಾಡಿಕೊಂಡು, ಮುಂಬೈ ಕೆಲಸಕ್ಕೆ ರಾಜೀನಾಮೆ ಕೊಟ್ಟು ಒವನ್ -ಕಾಲ್ಡ್‌ಸ್ಕಾಟ್ ಆ್ಯಂಡ್ ಕೋ ಎಂಬ ಕಂಪನಿಯ ಸ್ಥಾಪಕನಾದ. ಆಗಲೇ ಆತನಿಗೆ ಮಹಾರಾಜರ ಪರಿಚಯವಾಯಿತು. ಅಲ್ವಾಯೆದ ತನ್ನ ಬಂಗಲೆಯಲ್ಲಿಯೇ ದೂರದರ್ಶಕಗಳಿಂದ ವೀಕ್ಷಣೆ ನಡೆಸುತ್ತಿದ್ದ ಈತ ಮಹಾರಾಜರ ತಮ್ಮನಿಗೆ ರಸಾಯನ ಶಾಸ್ತ್ರವನ್ನೂ ಕಲಿಸುತ್ತಿದ್ದ.


ನವೀಕರಣಗೊಂಡ ಸೌರ ಗಡಿಯಾರ - ಚಿತ್ರಗಳು: ಪ್ರಮೋದ್ ಗಲಗಲಿ

ಬ್ರಿಟಿಷ್ ಸರ್ಕಾರದ ಪ್ರತಿನಿಧಿಯಾಗಿ ತಿರುವಾಂಕೂರು ಆಡಳಿತ ನೋಡಿಕೊಳ್ಳುತ್ತಿದ್ದ ಜನರಲ್ ಸ್ಟುವರ್ಟ್ ಫ್ರೇಸರ್‌ಗೆ ಕೂಡ ಖಗೋಳ ವೀಕ್ಷಣೆಯಲ್ಲಿ ಆಸಕ್ತಿ. ಆತ ಸ್ವಾತಿ ತಿರುನಾಳ್ ಮಹಾರಾಜರನ್ನು ಈ ಪುಟ್ಟ ವೀಕ್ಷಣಾಲಯಕ್ಕೆ ಕರೆತಂದಿದ್ದ. ಅಷ್ಟು ಹೊತ್ತಿಗೆ ಮದರಾಸು ವೀಕ್ಷಣಾಲಯ ಒಳ್ಳೆಯ ಹೆಸರು ಮಾಡಿತ್ತು (ಅದು 1786ರಲ್ಲಿಯೇ ಸ್ಥಾಪನೆಗೊಂಡಿತ್ತು). ಆದ್ದರಿಂದ ಅಲೆಪ್ಪಿಯಲ್ಲಿಯೂ ಒಂದು ವೀಕ್ಷಣಾಲಯ ಸ್ಥಾಪಿಸಬಹುದು ಎಂಬ ಸಲಹೆಯನ್ನು ಜಾನ್, ಮಹಾರಾಜರ ಮುಂದಿಟ್ಟ. ಸ್ವತಃ ಖಗೋಳಾಸಕ್ತರಾಗಿದ್ದ ಮಹಾರಾಜರಿಗೆ ಇದೊಂದು ಅದ್ಭುತ ಅವಕಾಶವಾಗಿ ಕಂಡಿತು. ತಿರುವನಂತಪುರದಲ್ಲಿಯೇ ಏಕೆ ಸ್ಥಾಪಿಸಬಾರದು ಎಂದು ಯೋಚಿಸಿ ಅದರ ಎಲ್ಲ ಜವಾಬ್ದಾರಿಯನ್ನು ಜಾನ್‍ಗೆ ವಹಿಸಿದರು. ಖಗೋಳ ವೀಕ್ಷಕನಾಗಿ ಜಾನ್‍ಗೆ ಸರ್ಕಾರಿ ಉದ್ಯೋಗವೂ ದೊರಕಿತು. 1837ರಲ್ಲಿ ವೀಕ್ಷಣಾಲಯ ಕೆಲಸ ಆರಂಭಿಸಿತು.

ಮೊದಲ ವರದಿಯಲ್ಲಿ ಜಾನ್ ಮೊದಲ ವಾಕ್ಯದಲ್ಲಿಯೇ ಮಹಾರಾಜನಿಗೆ ಕೃತಜ್ಞತೆ ಸಲ್ಲಿಸಿದ್ದಾನೆ: ‘ತನ್ನ ಪ್ರಜೆಗಳ ಶಿಕ್ಷಣ ಹಾಗೂ ಬೌದ್ಧಿಕ ಬೆಳವಣಿಗೆಯಲ್ಲಿ ಅತೀವ ಆಸಕ್ತಿ ಇರುವ ಈ ಮಹಾರಾಜ ಸ್ಥಾಪಿಸಿರುವ ಈ ವೀಕ್ಷಣಾಲಯ...’ ಎಂದು ವರದಿ ಆರಂಭವಾಗುತ್ತದೆ. ಇದು ನಿರ್ಮಾಣವಾಗುತ್ತಿದ್ದ ಸಮಯದಲ್ಲಿ ಜಾನ್ ಇನ್ನೊಂದು ಯೋಜನೆ ಹಾಕಿಕೊಂಡ. ಇನ್ನೊಬ್ಬ ವೀಕ್ಷಕ ಟಿ.ಜಿ.ಟೇಲರ್‌ನೊದಿಗೆ ದಕ್ಷಿಣ ಭಾರತವನ್ನೆಲ್ಲಾ ಸುತ್ತಿ, ಭೂ ಆಯಸ್ಕಾಂತ ಕ್ಷೇತ್ರದ ಅಳತೆ ಮಾಡಿದ. ಭೂಮಿಯ ಆಯಸ್ಕಾಂತ ಕ್ಷೇತ್ರದ ಮಧ್ಯರೇಖೆಯನ್ನು ಗುರುತಿಸುವ ಈ ಕಾರ್ಯ ಬಹಳ ಮಹತ್ವದ್ದಾಗಿತ್ತು. ಆದರೆ, ಆಗ ಉಪಕರಣಗಳಲ್ಲಿ ಅಥವಾ ನಿಖರ ಅಂದಾಜಿನಲ್ಲಿ (ಇದಕ್ಕೆ ಕ್ಯಾಲಿಬ್ರೇಷನ್ ಎನ್ನುತ್ತಾರೆ) ತಪ್ಪಾಗಿದೆ ಎಂದು ರಾಯಲ್ ಸೊಸೈಟಿಯ ಸದಸ್ಯರು ಆಕ್ಷೇಪವೆತ್ತಿದ್ದರು. ಈ ಏರಿಳಿತ ಉಪಕರಣದಿಂದ ಆಗಿರಲಾರದು, ಭೂ ಆಯಸ್ಕಾಂತ ಕ್ಷೇತ್ರದ ವ್ಯತ್ಯಾಸಗಳು ನೈಜವೇ ಆಗಿದ್ದಿರಬೇಕು ಎಂದು ಈಚೆಗೆ ಕೆಲವರು ಆ ದಾಖಲೆಗಳನ್ನು ಪುನರ್‌ಪರಿಶೀಲಿಸುತ್ತಿದ್ದಾರೆ.

ದೂರದರ್ಶಕ ಸಜ್ಜಾಗುತ್ತಿದ್ದ ಹಾಗೇ ಎರಡು ಧೂಮಕೇತುಗಳು ಭೇಟಿ ಕೊಟ್ಟವು. ಒಂದಂತೂ ಹಗಲಿನಲ್ಲಿಯೂ ಕಾಣುವಷ್ಟು ಪ್ರಕಾಶಮಾನವಾಗಿತ್ತು. ನಕ್ಷತ್ರಗಳ ವೀಕ್ಷಣೆಯ ಪಟ್ಟಿಯೂ ತಯಾರಾಯಿತು. 1843ರಲ್ಲಿ ಪೂರ್ಣ ಸೂರ್ಯಗ್ರಹಣದ ನೆರಳೂ ಅಲ್ಲಿಯೇ ಹಾದುಹೋಯಿತು. ಈ ಎಲ್ಲ ವೀಕ್ಷಣೆಗಳನ್ನು ಅತ್ಯುತ್ಸಾಹದಿಂದ ವರದಿ ಮಾಡಿದ ಜಾನ್‍ಗೆ ದುಪ್ಪಟ್ಟು ಸಂತೋಷವಾಗಿದ್ದು ಇನ್ನೂ ಉತ್ತಮ ಉಪಕರಣಗಳನ್ನು ತರಲು ಮಹಾರಾಜ ಆದೇಶ ಕೊಟ್ಟಾಗ.

ರಾಜಕೀಯ ವರಸೆಗಳು

1846ರಲ್ಲಿ ಜಾನ್ ಇಂಗ್ಲೆಂಡಿಗೆ ಹೊರಟ. ಮಹಾರಾಜರ ಆದೇಶದಂತೆ ದೊಡ್ಡ ದೂರದರ್ಶಕ ಮುಂತಾದ ಉಪಕರಣಗಳನ್ನು ಖುದ್ದಾಗಿ ಪರಿಶೀಲಿಸಿ ತರುವುದು ಉದ್ದೇಶ. ಅದಕ್ಕಿಂತ ಮುಖ್ಯವಾದದ್ದು ತನ್ನ ವೀಕ್ಷಣೆಗಳನ್ನು ರಾಯಲ್ ಸೊಸೈಟಿಗೆ ತೋರಿಸಿ ಪ್ರಕಟಿಸಬೇಕೆಂಬ ಆತನ ಹೆಬ್ಬಯಕೆ. ಆದರೆ, ಅಲ್ಲಿ ನಡೆಯುತ್ತಿದ್ದ ರಾಜಕೀಯ ಆತನಿಗೆ ಅಂತಹ ಅವಕಾಶವನ್ನು ನೀಡಲಿಲ್ಲ.

ಮಹಾರಾಜರೊಡನೆ ಒಳ್ಳೆಯ ಸಂಬಂಧ ಇಟ್ಟುಕೊಂಡಿದ್ದ ಫ್ರೇಸರ್ ಇರುವವರೆಗೂ ವೀಕ್ಷಣಾಲಯ ಒಳ್ಳೆಯ ವರದಿಗಳನ್ನು ನೀಡುವ ಕಾರ್ಯವನ್ನು ಯಶಸ್ವಿಯಾಗಿ ನಡೆಸಿಕೊಂಡು ಬಂತು. ಸ್ವಾತಿ ತಿರುನಾಳ್ ಅವರ ನಂತರ ಅಧಿಕಾರಕ್ಕೆ ಬಂದವನು ಕಲೆನ್. ಮಹಾರಾಜರ ಮೊದಲ ಭೇಟಿ ನಂತರ ಫ್ರೇಸರ್‌ ನೀಡಿದ ವರದಿ ಹೀಗಿದೆ:

‘ಈ ಮಹಾರಾಜ ಇಪ್ಪತ್ತಾರು ವಯಸ್ಸಿನ ಬಹಳ ಸುಸಂಸ್ಕೃತ ತರುಣ, ಇಂಗ್ಲಿಷ್ ಭಾಷೆ ಮಾತ್ರವಲ್ಲದೆ ಫ್ರೆಂಚ್ ಮತ್ತು ಅರೇಬಿಕ್ ಅನ್ನೂ ನಿರರ್ಗಳವಾಗಿ ಮಾತನಾಡಬಲ್ಲ. ಆದರೆ ಇವನ ಸುತ್ತ ಇರುವ ಸಲಹೆಗಾರರು (ಬ್ರಾಹ್ಮಣರು) ಇವನನ್ನು ಮೂಢನಂಬಿಕೆಗಳ ಇಕ್ಕಳದಲ್ಲಿ ಸಿಕ್ಕಿಸಿಕೊಂಡಿದ್ದಾರೆ. ಅವರನ್ನು ಕೇಳದೆ ಅವನು ಏನೂ ಮಾಡುವಂತಿಲ್ಲ. ಇದು ಬಹಳ ದುರದೃಷ್ಟಕರ ಸಂಗತಿ’ -ಮುಂದೆ ಇದನ್ನೇ ಕಲೆನ್ ದುರುಪಯೋಗಪಡಿಸಿಕೊಂಡು ಅರಸೊತ್ತಿಗೆಗೆ ಮುಳುವಾದದ್ದು ಚರಿತ್ರೆಯಲ್ಲಿದೆ.

ಕಲೆನ್ ಎಂಬ ಈ ದಂಡನಾಯಕ ಸ್ವಾತಿ ತಿರುನಾಳ್‌ ಚಿತ್ತಸ್ವಾಸ್ಥ್ಯವನ್ನೇ ಕದಡಿ ಹಾಕಿದ. ರಾಜಾಜ್ಞೆಯ ವಿರುದ್ಧ ಫರ್ಮಾನುಗಳನ್ನು ಹೊರಡಿಸಿ ಸಾಕಷ್ಟು ಕಿರುಕುಳ ಕೊಡಲಾರಂಭಿಸಿದ. ಇದಕ್ಕೆ ಕೃಷ್ಣರಾವ್ ಎಂಬುವರ ಕುಮ್ಮಕ್ಕೂ ಕಾರಣ. ಕಂಪನಿಗೆ ಸಲ್ಲಿಸುತ್ತಿದ್ದ ವರದಿಗಳಲ್ಲಿ ರಾಜನ ವಿರುದ್ಧ ಹಲವಾರು ದೂರುಗಳು ತಲುಪುತ್ತಿದ್ದವು. ವೀಕ್ಷಣಾಲಯದ ಸ್ಥಾಪನೆಯೂ ಒಂದು ಆಕ್ಷೇಪಾರ್ಹ ಯೋಜನೆ; ದುಡ್ಡು ಪೋಲಾಗುತ್ತಿದೆ ಎಂಬರ್ಥದಲ್ಲಿ ಬಿಂಬಿಸಲಾಗಿತ್ತು. ಇಂಗ್ಲೆಂಡ್‍ಗೆ ಹೋಗಿದ್ದ ಜಾನ್‍ಗೆ ಅನೇಕ ವದಂತಿಗಳು ಕಿವಿಗೆ ಬಿದ್ದವು. ಉಪಕರಣ ತೆಗೆದುಕೊಂಡು ಹೋದರೆ ಅದರ ಹಣ ಪಾವತಿಯಾಗುತ್ತದೆ ಎಂಬುದು ಖಚಿತವಿಲ್ಲ ಎಂಬ ಮಾಹಿತಿ ಸಿಕ್ಕೊಡನೆ ಆತ ಮರಳಿ ಇಂಡಿಯಾಕ್ಕೆ ಹೋಗುವ ವಿಚಾರವನ್ನೇ ಕೈಬಿಟ್ಟಿದ್ದ. ಆದರೆ, ಆಗ ರಾಯಲ್ ಸೊಸೈಟಿಗೆ ಸ್ವಯಂ ಮಹಾರಾಜರೇ ಬರೆದ ಕಾಗದವನ್ನು ಆತ ಓದಿದ. ಇದು ಬಹುಶಃ ಅವನ ನಿರ್ಧಾರವನ್ನು ಬದಲಿಸಲು ಧೈರ್ಯ ಕೊಟ್ಟಿರಬೇಕು. ಅಂತೂ ದೊಡ್ಡದೊಂದು ದೂರದರ್ಶಕ ಕೊಂಡು ಹೊರಟು ನಿಂತ.

ಇಂದಿನ ಇತಿಹಾಸಕಾರರ ಪ್ರಯತ್ನದಿಂದ ಆ ಪತ್ರ ಈಚೆಗೆ ಬೆಳಕು ಕಂಡಿದೆ. ‘ಈ ವೀಕ್ಷಣಾಲಯದ ಸ್ಥಾಪನೆ... ಈ ಬಗ್ಗೆ ರೆಸಿಡೆಂಟರಿಂದ ತಮಗೆ ಸಿಕ್ಕಿರುವ ಹೇಳಿಕೆ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ನಾನು ಮಾಡಿದ್ದಲ್ಲ. ಅದಕ್ಕೆ ತದ್ವಿರುದ್ಧವಾಗಿ, ಈ ಯೋಜನೆಯಿಂದ ನನಗೆ ದೊರಕಿರುವುದು ಒಂದು ದೊಡ್ಡ ಸನ್ಮಾನ ಮಾತ್ರ.  ಇಂದಿನ ವೈಜ್ಞಾನಿಕ ಪರಿಸರದಲ್ಲಿ ನನ್ನ ಹೆಸರಿನಲ್ಲಿ ಅದನ್ನು ಶೈಕ್ಷಣಿಕ ಉದ್ದೇಶ ಮಾತ್ರಕ್ಕಾಗಿ ಸ್ಥಾಪಿಸಿದ ಪೂರ್ಣ ಅರಿವು ನನಗಿದೆ…’ ಹೀಗೆ ಆ ಪತ್ರ ಬಹಳ ಘನವತ್ತಾದ ಇಂಗ್ಲಿಷ್ ಭಾಷೆಯಲ್ಲಿದೆ.


ತಾರಸಿಯ ಮೇಲೆ ಇಂದಿನ ದೂರದರ್ಶಕಗಳು

ದೊಡ್ಡ ದೂರದರ್ಶಕ ನೋಡದ ನತದೃಷ್ಟ

ಜಾನ್ 1847ರಲ್ಲಿ ಬಂದಿಳಿದಾಗ ಮಹಾರಾಜ ಆಗಲೇ ತೀರಿಕೊಂಡುಬಿಟ್ಟಿದ್ದರಿಂದ ಹೊಸ ದೂರದರ್ಶಕದ ಮೂಲಕ ನೋಡಬೇಕೆಂಬ ಅವರ ಆಸೆ ಫಲಿಸಲೇ ಇಲ್ಲ. ವೀಕ್ಷಣೆಗಳು ಮುಂದುವರಿಯಲು ಬೇಕಾದ ಎಲ್ಲ ಸೌಲಭ್ಯಗಳೂ ಇದ್ದವು. ಆದರೆ ಒಂದೇ ವರ್ಷದಲ್ಲಿ ಜಾನ್ ಸಹ ತೀರಿಹೋದ. ಮುಂದೆ ದೈನಂದಿನ ವೀಕ್ಷಣೆಗಳು ಮುನ್ನಡೆದವು. ಇವು ಮುಖ್ಯವಾಗಿ ಹವಾಮಾನಕ್ಕೆ ಸಂಬಂಧಿಸಿದ್ದವು. ಮದ್ರಾಸು, ಬಾಂಬೆ ಮತ್ತು ಶಿಮ್ಲಾ ವೀಕ್ಷಣಾಲಯಗಳಿಗೆ ಹವಾಮಾನ ವರದಿಯನ್ನು ಕಳಿಸುವುದು; ಬೆಳಿಗ್ಗೆ ಮಧ್ಯಾಹ್ನ ಸಂಜೆ ಸಿಗ್ನಲ್ ಕೂಗಿಸುವುದು ಇಷ್ಟು ಮಾತ್ರ ನಡೆದುಕೊಂಡು ಬಂದಿದ್ದವು. ಮುಂದೆ ಬ್ರೌನ್ ಎಂಬ ಉತ್ಸಾಹಿ ಅಧಿಕಾರಿ ಆಕಾಶಕಾಯಗಳ ವೀಕ್ಷಣೆ ನಡೆಸಿದನಾದರೂ ಆತನನ್ನು ಅಗಸ್ತ್ಯ ಮಲೆ ಎಂಬಲ್ಲಿ ವೀಕ್ಷಣಾಲಯ ಸ್ಥಾಪಿಸಲು ಕಳಿಸಿಕೊಟ್ಟ ಮೇಲೆ ಈ ಉಪಕರಣಗಳು ದೂಳು ತಿನ್ನತೊಡಗಿದವು. 1855ರಲ್ಲಿ ಮುಚ್ಚಿಯೇ
ಹೋಯಿತು.

ಮುಂದೆ ಬಂದ ಬ್ರಿಟಿಷ್ ಅಧ್ಯಾಪಕರು ವೀಕ್ಷಣೆಗಳಲ್ಲಿ ಆಸಕ್ತಿ ತೋರಿಸಿದ್ದರಿಂದ ಆಗೊಮ್ಮೆ ಈಗೊಮ್ಮೆ ಗ್ರಹಣ ಮುಂತಾದ ಘಟನೆಗಳ ವೀಕ್ಷಣೆ ಮುಂದುವರಿಯಿತು. ನಕ್ಷತ್ರಗಳು ಮಧ್ಯಾಹ್ನ ರೇಖೆಯನ್ನು ದಾಟುವ ಸಮಯವನ್ನು ನಿಖರವಾಗಿ ಗುರುತಿಸಲು ಸೌರ ಗಡಿಯಾರದ ಜೊತೆಗೆ ಪೆಂಡುಲಂ ಗಡಿಯಾರವೂ ಸ್ಥಾಪನೆ ಯಾಯಿತು. ನಿಖರವಾದ ಸಮಯಕ್ಕೆ ದಿನಕ್ಕೆ ಮೂರು ಬಾರಿ ಸಿಗ್ನಲ್ ಕೊಟ್ಟು ಗುಡ್ಡದ ಕೆಳಗಿನ ಮಿಲಿಟರಿಯವರು ಸೈರನ್ ಕೂಗಿಸುವ ವ್ಯವಸ್ಥೆ ಇದ್ದಿತು. ಪುನಃ 1910ರಲ್ಲಿ ಬಾಗಿಲು ತೆಗೆದು ಭೌತಶಾಸ್ತ್ರದ ಪ್ರೊಫೆಸರ್ ಮಿಶೆಲ್ ಎಂಬುವರು ವೀಕ್ಷಣೆ ನಡೆಸಿದರು. ಹತ್ತೇ ವರ್ಷ. ಪುನಃ ಬಾಗಿಲು ಮುಚ್ಚಿತು. ಕೇಳುವವರಿಲ್ಲದೇ ಕಟ್ಟಡ ಶಿಥಿಲವಾಗತೊಡಗಿತು.

1931ರಲ್ಲಿ ಭಾರೀ ಮಳೆಗೆ ಗೋಡೆ ಕುಸಿದಾಗ ಕೆಲವು ಉಪಕರಣಗಳನ್ನು ಬೇರೆಡೆಗೆ ವರ್ಗಾಯಿಸಲಾಯಿತು. ಗುಡ್ಡದ ಮೇಲಿನ ಒಂದು ಭಾಗವನ್ನು ನೀರಿನ ರಿಸರ್ವಾಯರ್ ಕಟ್ಟಲು ಬಿಟ್ಟುಕೊಡಬೇಕಾದ ಕಾರಣ, ಕಟ್ಟಡದ ಕೆಲವು ಭಾಗವನ್ನು ಕೆಡವಬೇಕಾಯಿತು. ಹವಾಮಾನ ವೀಕ್ಷಣೆಗಳು ಅಬಾಧಿತವಾಗಿ ಮುಂದುವರಿದವು. 1937ರಲ್ಲಿ ವೀಕ್ಷಣಾಲಯದ ಶತಮಾನೋತ್ಸವದ ಸಂದರ್ಭದಲ್ಲಿ ವಿಶ್ವವಿದ್ಯಾಲಯ ಸ್ಥಾಪನೆಯಾಗಿ ವೀಕ್ಷಣಾಲಯವನ್ನು ಅದಕ್ಕೆ ಹಸ್ತಾಂತರಿಸಲಾಯಿತು. ಅನೇಕ ಆಸಕ್ತ ಪ್ರಾಧ್ಯಾಪಕರು ವೀಕ್ಷಣೆ ನಡೆಸಿದರು.

ಬಹಳ ಮುಖ್ಯವಾದದ್ದೆಂದರೆ, 1941ರ ಜನವರಿಯಲ್ಲಿ ಸುಬ್ರಮಣ್ಯಂ ಅಯ್ಯರ್ ಎಂಬುವರು ಪತ್ತೆ ಮಾಡಿದ ಧೂಮಕೇತು. 1941ಸಿ ಎಂಬ ಹೆಸರಿನ ಇದು ದಕ್ಷಿಣ ಗೋಳಾರಕ್ಕೆ ಮಾತ್ರ ಬಹಳ ಚೆನ್ನಾಗಿ ಕಂಡಿತು. ಇವರ ಸಹಾಯಕನಾಗಿದ್ದ ಕುಟ್ಟನ್ ನಾಯರ್ ಎಂಬಾತ ಧೂಮಕೇತುವಿನ ಕಕ್ಷೆಯನ್ನೂ ಲೆಕ್ಕ ಮಾಡಿದ್ದ. ಆದರೆ ಇವರ ವರದಿ ಹಡಗಿನ ಮೂಲಕ ಇಂಗ್ಲೆಂಡಿನ ರಾಯಲ್ ಅಸ್ಟ್ರನಾಮಿಕಲ್ ಸೊಸೈಟಿಯನ್ನು ತಲುಪುವಷ್ಟರಲ್ಲಿ ಅಲ್ಲಿಗೆ ಇತರರ ವರದಿಗಳು ತಲುಪಿಬಿಟ್ಟಿದ್ದವು. ಆವಿಷ್ಕಾರದ ಕೀರ್ತಿ ಸುಬ್ರಮಣ್ಯಂ ಅಯ್ಯರ್ ಅವರ ಕೈತಪ್ಪಿ ಹೋಯಿತು. ಮುಂದೆ ವಿಕ್ರಂ ಸಾರಾಭಾಯ್ ಅವರು ಕಾಸ್ಮಿಕ್ ಕಿರಣಗಳ ಕುರಿತ ತಮ್ಮ ಮೊದಲ ಪ್ರಯೋಗಗಳನ್ನು ನಡೆಸಲು ಈ ವೀಕ್ಷಣಾಲಯವನ್ನೇ ಆಯ್ದುಕೊಂಡದ್ದೊಂದು ವಿಶೇಷ.


ಹಳೆಯ ದೂರದರ್ಶಕ

ಕಲಾಶಾಲೆ ಈಗ ಹೀಗಿದೆ

ಈಚೆಗೆ ತಿರುವನಂತಪುರಕ್ಕೆ ಹೋದಾಗ ಸಂಜೆ ಸ್ವಲ್ಪ ಬಿಡುವು ಸಂಪಾದಿಸಿಕೊಂಡು ಗುಡ್ಡ ಹತ್ತಿದೆವು. ಅಲ್ಲಿಯ ತಾರಾಲಯದ ನಿರ್ದೇಶಕ ಪ್ರಕಾಶ್ ಅವರು ಇಬ್ಬರು ಉತ್ಸಾಹಿಗಳನ್ನು ಜೊತೆಯಲ್ಲಿ ಕಳಿಸಿಕೊಟ್ಟರು. ಹಳೆಯ ಚಿತ್ರಗಳಲ್ಲಿನ ಗುಮ್ಮಟಗಳು ಈಗಿಲ್ಲ. ಕಟ್ಟಡದ ಮಧ್ಯಭಾಗ ಮಾತ್ರ ಉಳಿದುಕೊಂಡಿದೆ.

ಜಾನ್ ವಿವರಿಸಿರುವ ಟ್ರಾನ್ಸಿಟ್ ಎಂಬ ಉಪಕರಣ ಅಲ್ಲಿ ಇದೆ. ಆದರೆ ಅದನ್ನು ಅಲ್ಲಾಡಿಸುವುದೂ ಸಾಧ್ಯವಿಲ್ಲ. ತಾರಸಿಯ ಮೇಲೆ ದೂರದರ್ಶಕ ಇದೆ. ಅದನ್ನು ಭದ್ರವಾಗಿಡಲು ಒಂದು ವಿಶೇಷ ಗಾಡಿ ಇದೆ. ಆ ಗಾಡಿಯನ್ನು ದೂರಕ್ಕೆ ಎಳೆದು ದೂರದರ್ಶಕವನ್ನು ಬಳಸಬಹುದು. ವಾರಕ್ಕೊಮ್ಮೆ ಅಥವಾ ಗ್ರಹಣದಂತಹ ವಿಶೇಷ ಖಗೋಳೀಯ ಘಟನೆಗಳ ಸಂದರ್ಭದಲ್ಲಿ ಈ ಯುವಕರು ಸಾರ್ವಜನಿಕರಿಗೆ ಇದನ್ನು ಪರಿಚಯಿಸುತ್ತಾರೆ. ಆದರೆ, ಈ ದೂರದರ್ಶಕ ಹೊಚ್ಚ ಹೊಸದು. ಸಾರ್ವಜನಿಕರಿಗೆ ಖಗೋಳ ಶಿಕ್ಷಣವನ್ನು ಕೊಡಬೇಕೆಂಬ ಸ್ವಾತಿ ತಿರುನಾಳ್ ಅವರ ಕನಸು ಹೀಗೆ ಇಲ್ಲಿ ಸಣ್ಣದಾಗಿ ಸಾಕಾರಗೊಂಡಿದೆ.

ತಿರುವನಂತಪುರಕ್ಕೆ ಹೋಗುವವರು ಅನಂತ ಪದ್ಮನಾಭ ದೇವಾಲಯವನ್ನು ನೂಕುನುಗ್ಗಲಿನಲ್ಲಿಯಾದರೂ ಪ್ರವೇಶಿಸಲೇ ಬೇಕು ಎಂದು ಹಟತೊಟ್ಟು ಬಂದಿರುತ್ತಾರೆ. ಅದರ ಪಕ್ಕದಲ್ಲೇ ಇರುವ ಸ್ವಾತಿ ತಿರುನಾಳ್ ಅವರ ಕಲಾಶಾಲೆಯ ಕಡೆಗೆ ತಪ್ಪಿಯೂ ತಿರುಗಿ ನೋಡುವುದಿಲ್ಲ. ಅಲ್ಲಿ ಈ ಮಹಾನುಭಾವನ ಆಸಕ್ತಿಗಳ ವೈವಿಧ್ಯದ ಸಣ್ಣ ಪರಿಚಯ ಸಿಗುತ್ತದೆ. ಸಂಗೀತವಲ್ಲದೆ ಆತನ ಚಿತ್ತ ಹರಿದದ್ದು ಬೇಕಾದಷ್ಟು ದಿಕ್ಕಿನಲ್ಲಿ.

ಆದರೆ ದುರದೃಷ್ಟವಶಾತ್ ಅವು ಚರಿತ್ರೆಯ ಪುಟಗಳನ್ನೇ ಸೇರಲಿಲ್ಲ. ಮೇಲುಮುಂಡು ಮತ್ತು ವೇಲುತಂಬಿ ಮುಂತಾದ ಘರ್ಷಣೆಗಳು ಈತನ ಕಾಲದಲ್ಲಿ ನಡೆದಿದ್ದರಿಂದ ಅವಕ್ಕೆ ಪ್ರಾಶಸ್ತ್ಯ ದೊರಕಿತು. ಕಲೆನ್‌ನಂತಹ ‘ಮೇಧಾವಿ’ಗಳು ರಾಜನ ಕೃತ್ಯಗಳೆಲ್ಲವನ್ನೂ ಕಾಮಾಲೆ ಕಣ್ಣಿನಿಂದಲೇ ನೋಡಿ ವರದಿ ಮಾಡಿದ್ದರಿಂದ ಬ್ರಿಟಿಷರ ದಾಖಲೆಗಳಲ್ಲಿ ಅವು ಮಾತ್ರ ಸೇರಿದವು. ಸಾಮಾನ್ಯರ ಶಿಕ್ಷಣಕ್ಕಾಗಿ ಆತ ನಡೆಸಿದ ಕೆಲವೊಂದು ಕ್ರಾಂತಿಕಾರಿ ಯೋಜನೆಗಳು ಆತನ ಅಕಾಲಿಕ ಮರಣದ ನಂತರ ತುಕ್ಕು ಹಿಡಿದ ಬಂಡಿಯ ಚಕ್ರಗಳಂತೆ ನಿಂತಲ್ಲೇ ನಿಂತುಬಿಟ್ಟವು.

ಸ್ವಾತಿ ತಿರುನಾಳ್ ಮ್ಯೂಸಿಯಂನಲ್ಲಿ ಖಗೋಳ ವಿಜ್ಞಾನದ ಹಲವಾರು ಉಪಕರಣಗಳಿವೆ. ಅದರಲ್ಲಿ ಒಂದು ಪುಟ್ಟ ‘ಸಿಗ್ನಲ್’ ಯಂತ್ರವಿದೆ. ದಿನಕ್ಕೆ ನಾಲ್ಕು ಬಾರಿ ಸಮಯ ಸೂಚಿಸುವುದು ವೀಕ್ಷಣಾಲಯದ ಕರ್ತವ್ಯವಾಗಿತ್ತಷ್ಟೆ. ಮಧ್ಯಾಹ್ನವನ್ನು ತಿಳಿಯಲು ಗೂಟದ ನೆರಳು ನೋಡಬೇಕಾಗಿತ್ತು. ಅದು ಕನಿಷ್ಠವಾದಾಗ ಅಥವಾ ಮೊದಲೇ ಗುರುತು ಮಾಡಿದ್ದ ಮಧ್ಯಾಹ್ನ ರೇಖೆಯನ್ನು (ಉತ್ತರ -ದಕ್ಷಿಣ ರೇಖೆ) ದಾಟಿದಾಗ ಗಂಟೆ ಹೊಡೆಯಬೇಕಿತ್ತು. ತುಪಾಕಿ ಹಾರಿಸುವ ಪದ್ಧತಿಯೂ ರೂಢಿಯಲ್ಲಿತ್ತು. ಇದಕ್ಕೆ ಮಾಡಿಕೊಂಡಿದ್ದ ಉಪಾಯ ಈ ಪುಟ್ಟ ತುಪಾಕಿ. ಇದೊಂದು ಬಗೆಯ ಪುಟ್ಟ ದೂರದರ್ಶಕ -ಪುಟ್ಟ ಮಸೂರ ಬೆಳಕನ್ನು ಕೇಂದ್ರೀಕರಿಸುವ ಬಿಂದುವಿನಲ್ಲಿ ಚಿಟಿಕೆಯಷ್ಟು ಪಟಾಕಿ ಮದ್ದನ್ನು ಇರಿಸಲು ಅವಕಾಶವಿತ್ತು. ಬೆಳಕಿನ ಜೊತೆಗೆ ಶಾಖವೂ ಕೇಂದ್ರೀಕೃತವಾಗುವುದರಿಂದ ಸೂರ್ಯ ಮಧ್ಯಾಹ್ನ ರೇಖೆಯನ್ನು ದಾಟಿದ ಕೂಡಲೇ ಮದ್ದು ಸಿಡಿಯುತ್ತಿತ್ತು.

ದಿನದಿನಕ್ಕೆ ಸೂರ್ಯ ಉತ್ತರ ದಕ್ಷಿಣವಾಗಿಯೂ ಚಲಿಸುವುದರಿಂದ ಅದಕ್ಕೆ ತಕ್ಕ ಹಾಗೆ ಮಸೂರವನ್ನು ತಿರುಗಿಸುವ ವ್ಯವಸ್ಥೆಯೂ ಇತ್ತು. ಇದು ಸ್ವಾತಿ ತಿರುನಾಳ್ ಕಾಲದಲ್ಲಿಯೇ ಬಳಕೆಯಾಗುತ್ತಿತ್ತು. 1910ರಲ್ಲಿ ಇದನ್ನು ಕೈಬಿಟ್ಟು ಎಲೆಕ್ಟ್ರಿಕ್ ವ್ಯವಸ್ಥೆ ಮಾಡಲಾಯಿತು. ಇದು ಬಹಳ ಆಕರ್ಷಕ ಎಂದು ನನಗೆ ಅನಿಸಿದ್ದರಿಂದ, ತಾರಾಲಯದಲ್ಲಿ ಶೂನ್ಯ ನೆರಳಿನ ದಿನ ಇದನ್ನು ಪ್ರಾತ್ಯಕ್ಷಿಕೆಯನ್ನಾಗಿ ತೋರಿಸುವ ಏರ್ಪಾಟು ಮಾಡಿದೆವು. ಇದು ಮಾಧ್ಯಮದವರಿಗೆ ದೊಡ್ಡ ಆಕರ್ಷಣೆಯಾಯಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು