ಶುಕ್ರವಾರ, ಮಾರ್ಚ್ 31, 2023
33 °C

ಸಾಮಾನ್ಯತೆಯ ಆರಾಧಕ ತಿರುಮಲೇಶ್‌

ಎಸ್‌.ಆರ್‌. ವಿಜಯಶಂಕರ Updated:

ಅಕ್ಷರ ಗಾತ್ರ : | |

Prajavani

ಕನ್ನಡ ಕವಿ, ಆಧುನಿಕ ಚಿಂತಕ ನಮ್ಮ ನಡುವಿನ ಬಹುದೊಡ್ಡ ವಿದ್ವಾಂಸ, ಭಾಷಾ ಶಾಸ್ತ್ರಜ್ಞ ಹಾಗೂ ತತ್ವಶಾಸ್ತ್ರಜ್ಞ ಕೆ.ವಿ. ತಿರುಮಲೇಶ್ ಇನ್ನಿಲ್ಲ (1940–2023) ಎಂಬ ದುಃಖದ ವಾರ್ತೆ ತಿಳಿದಾಗ ಸಾಹಿತ್ಯ ಬಳಗ ಮಂಕಾಯಿತು. ಅವರು ಕವಿ ಮಾತ್ರವಲ್ಲದೆ ಕನ್ನಡ ವೈಚಾರಿಕತೆಯ ಸಾಕ್ಷಿಪ್ರಜ್ಞೆಯೂ ಅಗಿದ್ದರು.

ಈಗ ಕೇರಳದಲ್ಲಿರುವ ಕಾಸರಗೋಡಿನ ಕಾರಡ್ಕ ಗ್ರಾಮದ ಕಿಳಿಂಗಾರಿನವರಾದ ತಿರುಮಲೇಶ್, ಸಮೀಪದ ನೀರ್ಚಾಲಿನ ಸಂಸ್ಕೃತ ಕಾಲೇಜಿನಲ್ಲಿ ಪ್ರಾರಂಭದ ವಿದ್ಯಾಭ್ಯಾಸ ಮುಗಿಸಿದರು. ಕನ್ನಡ ವಿದ್ವಾನ್ ಪರೀಕ್ಷೆಗೆ ಓದುತ್ತಿದ್ದ ಅವರು ಇಂಗ್ಲಿಷ್ ಸಾಹಿತ್ಯದ ಆಕರ್ಷಣೆಯಿಂದ ಮುಂದೆ ತಿರುವನಂತಪುರದಲ್ಲಿ ಇಂಗ್ಲಿಷ್ ಎಂ.ಎ. ಓದಿದರು. ಅಲ್ಲಿ ಅವರು ಪ್ರಸಿದ್ಧ ಬರಹಗಾರ ಅಯ್ಯಪ್ಪ ಪಣಿಕ್ಕರ್ ಅವರ ನೇರ ವಿದ್ಯಾರ್ಥಿ. ಕಾಸರಗೋಡಿನ ಸರ್ಕಾರಿ ಕಾಲೇಜಿನಲ್ಲಿ ಇಂಗ್ಲಿಷ್ ಅಧ್ಯಾಪಕರಾಗಿದ್ದಾಗ, ವೇಣುಗೋಪಾಲ ಕಾಸರಗೋಡು, ಗಂಗಾಧರ ಭಟ್ಟ ಮೊದಲಾದವರೊಡಗೂಡಿ ಅಲ್ಲಿ ನವ್ಯ ಸಾಹಿತ್ಯ ಸಂಘ ಕಟ್ಟಿದರು. ಕತೆಗಾರ ವ್ಯಾಸರಿಗೂ ಆಪ್ತರು.

ಮುಂದೆ ಹೈದರಾಬಾದಿನ ಸೆಂಟ್ರಲ್ ಇನ್‌ಸ್ಟಿಟ್ಯೂಟ್ ಆಫ್ ಇಂಗ್ಲಿಷ್ ಅಂಡ್ ಫಾರಿನ್ ಲಾಗ್ವೇಜಸ್ ಸಂಸ್ಥೆಯಲ್ಲಿ ಭಾಷಾಶಾಸ್ತ್ರದ ಅಧ್ಯಯನ ಮಾಡಿ ಡಾಕ್ಟರೇಟ್ ಪಡೆದರು. ಅದೇ ಸಂಸ್ಥೆಯಲ್ಲಿ ಅಧ್ಯಾಪಕರಾಗಿ ಸೇರಿ, ಪ್ರಾಧ್ಯಾಪಕರಾಗಿ, ಸಂಸ್ಥೆಯ ಡೀನ್ ಹುದ್ದೆಯನ್ನಂಲಕರಿಸಿ ನಿವೃತ್ತರಾದರು. ಇಂಗ್ಲೆಂಡಿನ ರೀಡಿಂಗ್‌ ವಿಶ್ವವಿದ್ಯಾಲಯದಲ್ಲಿ ಭಾಷಾಶಾಸ್ತ್ರದಲ್ಲೂ ಸ್ನಾತಕೋತ್ತರ ಪದವಿ ಪಡೆದ ಇವರು, ಅಮೆರಿಕ ಹಾಗೂ ಮಧ್ಯಪ್ರಾಚ್ಯ ದೇಶದ ವಿಶ್ವವಿದ್ಯಾಲಯಗಳಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿ ಹಲವು ವರುಷಗಳ ಕಾಲ ಕೆಲಸ ಮಾಡಿದರು. 

ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ 60ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿರುವ ಇವರ ‘ಅಕ್ಷಯ ಕಾವ್ಯ’ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕಾರ ಸಂದಿದೆ. ತಿರುಮಲೇಶ್‌ ನವ್ಯೋತ್ತರ ಚಿಂತಕರು. ಚಿತ್ರಕಲೆಯಲ್ಲಿ ಬಹಳ ಆಸಕ್ತಿವುಳ್ಳವರು. ಕವಿಯಾಗಿ ಅವರು ಕಟ್ಟುವ ಶಬ್ದಚಿತ್ರಗಳಲ್ಲಿ ಅವರ ಚಿತ್ರಕಲಾಸಕ್ತಿಯನ್ನೂ ಗುರುತಿಸಬಹುದು. ತತ್ವಶಾಸ್ತ್ರ ಅವರಿಗೆ ಆಳವಾದ ಅಭ್ಯಾಸವಿದ್ದ ಕ್ಷೇತ್ರ. ಪಾಶ್ಚಿಮಾತ್ಯ ಹಾಗೂ ಭಾರತೀಯ ತತ್ವಶಾಸ್ತ್ರಗಳ ಅಪಾರ ಜ್ಞಾನವಿದ್ದ ಅವರ ಬಹುಶ್ರುತ ಆಸಕ್ತಿಯ ಆಳ, ಅಗಲವನ್ನು ಅವರ ಪತ್ರಿಕಾ ಅಂಕಣಗಳ ಸಂಗ್ರಹಗಳಾದ ‘ಆಳ–ನಿರಾಳ‘ ಸಂಪುಟಗಳಲ್ಲಿ ಕಾಣಬಹುದು. ಅವರ ಅಸ್ತಿತ್ವವಾದದ ಬಗ್ಗೆ ಕನ್ನಡದಲ್ಲಿ ಬರೆದ ಕೃತಿಯೊಂದು ಆಕರ ಗ್ರಂಥವೂ ಹೌದು. ನಾಟಕ, ಕಾವ್ಯ, ಕಾದಂಬರಿ, ವೈಚಾರಿಕ ಬರಹ – ಹೀಗೆ ಅವರ ಅನುವಾದ ಕೃತಿಗಳು ನೂತನ ಜಾಗತಿಕ ಚಿಂತನೆಗಳ ಸಂಗ್ರಹಯೋಗ್ಯ ಕೃತಿಗಳೇ ಆಗಿವೆ.

ಕಾವ್ಯ, ಸಣ್ಣಕತೆ, ಕಾದಂಬರಿ, ವಿಮರ್ಶೆ, ಪ್ರಬಂಧಗಳು– ಹೀಗೆ ಎಲ್ಲ ಸಾಹಿತ್ಯ ಪ್ರಕಾರಗಳಲ್ಲೂ ಅವರು ಬಹಳ ಮೌಲಿಕವಾದ ಕೊಡುಗೆಯನ್ನಿತ್ತಿದ್ದಾರೆ. ‘ಮುಖವಾಡಗಳು’, ‘ವಠಾರ’ ಮೊದಲಾದ ಕವನ ಸಂಗ್ರಹಗಳ ಮೂಲಕ ನವ್ಯ ಸಾಹಿತ್ಯದ ಗಮನಾರ್ಹ ಕವಿಯಾಗಿ ಬೆಳೆದರು. ನವ್ಯ ಸಾಹಿತ್ಯದ ಗಮನಾರ್ಹ ಸಂಕಲನ ಎಂದು ಪರಿಗಣಿತವಾದ ‘ಮಹಾಪ್ರಸ್ಥಾನ’ ಸಂಕಲನದ (1971) ಬಳಿಕ ಕವಿ ಅಡಿಗರಿಂದ ಭಿನ್ನವಾದ ಚಿಂತನೆಗೆ ತೊಡಗಿದ ತಿರುಮಲೇಶರ ‘ಮುಖಾಮುಖಿ’ ಕವನ ಸಂಕಲನ (1978) ಅವರನ್ನು ನವ್ಯರಿಂದ ಭಿನ್ನನೆಲೆಗೆ ಒಯ್ದಿತು. ಆ ಬಳಿಕ ‘ಪಾಪಿಯೂ‘ ಕಥನ ಕಾವ್ಯ, ‘ಅವಧ’ ಕವನ ಸಂಕಲನ ಮೂಲಕ ಕನ್ನಡ ಕಾವ್ಯ ಕ್ಷೇತ್ರದಲ್ಲಿ ಹೊಸ ಪ್ರಯೋಗಗಳನ್ನು ನಡೆಸಿದರು.

ಅಕ್ಷಯ ಕಾವ್ಯ, ಅವ್ಯಯ ಕಾವ್ಯ ಮೊದಲಾದ ಕಾವ್ಯಗಳು ಅವರ ಕಾವ್ಯ ಸಾಧನೆಗಳನ್ನು ಇನ್ನೊಂದು ಮಜಲಿಗೆ ಒಯ್ದವು. ಅವುಗಳ ಜೊತೆ ಜೊತೆಯಲ್ಲಿ ಸತತವಾಗಿ ಅವರು ಕನ್ನಡ, ಇಂಗ್ಲಿಷ್‌ ಸಾಹಿತ್ಯಗಳ ಬಗ್ಗೆ ಕನ್ನಡದಲ್ಲಿ ವಿಮರ್ಶೆಗಳನ್ನು ಬರೆಯುತ್ತಿದ್ದರು. ಇಂಗ್ಲಿಷ್‌ನಲ್ಲೂ ಕೃತಿ ರಚನೆ ಮಾಡುತ್ತಿದ್ದರು. ಡೆರಿಡಾನ ಬಗ್ಗೆ ಅವರು ಇಂಗ್ಲಿಷಿನಲ್ಲಿ ಬರೆದ ಕೃತಿ (ಡೆರಿಡಾಸ್‌ ಹೀಲ್‌ ಆಫ್‌ ಅಖಿಲಿಸ್‌ ಅಂಡ್ ಅದರ್‌ ಎಸ್ಸೇಸ್‌) ಕೃತಿ ಅವರಿಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ತಂದಿತ್ತು.

ಶೈಲಿಶಾಸ್ತ್ರದ ಹಿನ್ನೆಲೆಯಲ್ಲಿ ಅವರು ಬರೆದ ಬೇಂದ್ರೆಯವರ ಕಾವ್ಯ ಶೈಲಿ ಎಂಬ ಲೇಖನ ಇಂದಿಗೂ ಬೇಂದ್ರೆ ಕಾವ್ಯಾಧ್ಯಯನದಲ್ಲೊಂದು ಮೈಲಿಗಲ್ಲು. ಹಾಗೆಯೇ ಅವರು ಪುರಂದರದಾಸರ ಬಗ್ಗೆ, ಹಳೆಗನ್ನಡ ಶೈಲಿಯ ಬಗ್ಗೆ, ಕನ್ನಡ ವ್ಯಾಕರಣದ ಬಗ್ಗೆ ಬರೆದವೂ ಗಮನಾರ್ಹ ಕೃತಿಗಳು. ವಾಗರ್ಥ, ಉಲ್ಲೇಖ, ಕಾವ್ಯಕಾರಣ, ಹೀಗೆ ಅವರ ವಿಮರ್ಶಾ ಕೃತಿಗಳ ಕೊಡುಗೆಯೂ ದೊಡ್ಡದು.

ಅಸ್ತಿತ್ವವಾದಿ ಚಿಂತಕ ಹೈಡೆಗರ್‌ ‘ಬೀಯಿಂಗ್‌ ಆನ್‌ ದ ವರ್ಲ್ಡ್‌’ ಎಂಬ ತಾತ್ವಿಕತೆಯನ್ನು ವಿವರಿಸುತ್ತಾರೆ. ಅದನ್ನು ವಿವರಿಸುವ ಸಂದರ್ಭದಲ್ಲಿ ಪ್ರಸಿದ್ಧ ಚಿತ್ರಕಲಾವಿದ ವ್ಯಾನ್‌ಗಾಫ್‌ನ ಬೂಟುಗಳ ಚಿತ್ರದ ಉದಾಹರಣೆ ನೀಡುತ್ತಾರೆ. ಅವು ಬೂಟುಗಳಾಗಿದ್ದೂ ಇನ್ನೇನನ್ನೋ ಹೇಳುತ್ತವೆ. ತಿರುಮಲೇಶ್‌ ಕಾವ್ಯ ಚಿತ್ರಗಳು ಹಾಗೆ. ಅವು ಆ ವಸ್ತು–ವ್ಯಕ್ತಿಗಳಾಗಿದ್ದೂ ಕವಿ ಮನಸ್ಸಿನ ಏನೇನನ್ನೋ ಕಾಣಿಸುತ್ತವೆ. ತಿರುಮಲೇಶ್‌ರ ‘ವಾನ್‌ಗಾಫ್‌ನ ಬೂಟುಗಳು’ ಎಂಬ ಕವನ ಪ್ರಸಿದ್ಧ ಚಿತ್ರಗಾರ ವ್ಯಾನ್‌ಗಾಫ್‌ ಮಾಡಿದ ಬೂಟಿನ ಚಿತ್ರಗಳನ್ನು ಧ್ಯಾನಿಸುತ್ತದೆ. 

ವಾನ್‌ಗಾಫ್‌ ಆಯ್ದುಕೊಂಡ ಸಾಮಾನ್ಯ ವಿಚಾರ ಕಲೆಯ ವಸ್ತುವಲ್ಲ ಎಂದು ಹಲವು ಕಲಾ ವಿಮರ್ಶಕರು ಬರೆದರು. ವಾನ್‌ಗಾಫ್‌ ರೈತರ, ಕಾರ್ಮಿಕರ ಬೂಟುಗಳ ಹಲವು ಚಿತ್ರಗಳನ್ನು ಬರೆದು ಚರಿತ್ರೆಗೆ ಸೇರಿಹೋದ. ತಿರುಮಲೇಶ್‌ ಕವನ, ಆ ವಿಮರ್ಶಕರು ಏನಾದರು ಎಂದು ಕೇಳಿ, ಆ ಬೂಟಿನಡಿಗೆ ಸೇರಿ ಹೋದರು ಎನ್ನುತ್ತದೆ. ಅದು ವರ್ತಮಾನವನ್ನು ಅರಿಯದ ವಿಮರ್ಶೆಯ ಗತಿ. ಯಾವುದೇ ಕವನ, ಬರಹ, ಚಿಂತನೆಯಲ್ಲೂ ತಿರುಮಲೇಶ್‌ ಸಾಮಾನ್ಯತೆಯ ಆರಾಧಕ. ಸಾಮಾನ್ಯ ವಸ್ತುಗಳಿಂದ, ಅನುಭವಗಳಿಂದ ಅವರು ಅಸಾಮಾನ್ಯ ಕಾವ್ಯಾನುಭವ ನೀಡುತ್ತಾರೆ. ಇದ್ದಿಲ ಕೆಲಸದ ಪೆಂಟಯ್ಯನ ಅಂಗಿ, ಹೈದರಾಬಾದಿನ ಅಬೀಡ್ಸ್‌ನಲ್ಲಿ ರಸ್ತೆ ದಾಟುವುದು, ಎದುರಿನ ಕಟ್ಟಡದ ಬಾಲ್ಕನಿಯಲ್ಲಿ ಹೆಂಗಸು ನಿತ್ಯ ತಲೆ ಬಾಚುವುದು, ಚೋರಟೆ ಹುಳ, ಕಿಟ್ಟುಣ್ಣಿ ಸರ್ಕಸ್‌, ಮನೆಯೊಳಗೆ ಕಂಡು ಮುಖಾಮುಖಿಯಾದ ಬೆಕ್ಕು– ಎಲ್ಲಾ ಸಾಮಾನ್ಯವೆಂದು ಕಾಣುವ ವಸ್ತು ವಿಚಾರಗಳೂ ಅವರಲ್ಲೊಂದು ಕಾವ್ಯಾನುಭವವನ್ನು ಹುಟ್ಟಿಸುತ್ತವೆ.  

ತಾವೇ ಕಟ್ಟಿದ ತಮ್ಮ ಕಾವ್ಯ ರೀತಿಗಳನ್ನು ತಾವೇ ಮುರಿಯುತ್ತಾ ಬೆಳೆದರು. ಮಕ್ಕಳಿಗಾಗಿಯೂ ಸಾಹಿತ್ಯ ರಚಿಸಿದ ಇವರು ತಮ್ಮ ಕೊನೆಯ ಎರಡು ವರ್ಷಗಳಲ್ಲಿ ಹತ್ತಕ್ಕೂ ಹೆಚ್ಚು ಮಕ್ಕಳ ಸಾಹಿತ್ಯ ಕೃತಿಗಳನ್ನು ಪ್ರಕಟಿಸಿದರು. ಸಾರ್ವಜನಿಕ ಜೀವನದಲ್ಲಿ ಕೊನೆವರೆಗೂ ತಮಗೆ ಅನಿಸಿದ್ದನ್ನು ನೇರವಾಗಿ ಹೇಳಬಲ್ಲ ಪ್ರಜಾಪ್ರಭುತ್ವವಾದಿ ಅವರಾಗಿದ್ದರು. ಅಂತಹ ಸಂವೇದನಾಶೀಲ, ಪಾಂಡಿತ್ಯಪೂರ್ಣ ಕವಿ ತೀರಿಹೋಗಿ ಉಂಟಾದ ಖಾಲಿ ಜಾಗವನ್ನು ಇನ್ನೊಬ್ಬ ಕವಿ ತುಂಬಲು ತುಂಬಾ ದಿನಗಳು ಬೇಕಾಗುತ್ತವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು