ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೃತದ ರುಚಿ

Last Updated 1 ಜುಲೈ 2020, 20:30 IST
ಅಕ್ಷರ ಗಾತ್ರ

ಕಾಂಚನವೆಂಬ ನಾಯ ನೆಚ್ಚಿ ನಿಮ್ಮ ನಾನು ಮರೆದೆನಯ್ಯಾ;
ಕಾಂಚನಕ್ಕೆ ವೇಳೆಯಲ್ಲದೆ ಲಿಂಗಕ್ಕೆ ವೇಳೆಯಿಲ್ಲ.
ಹಡಿಕೆಗೆ ಮೆಚ್ಚಿದ ಸೊಣಗ
ಅಮೃತದ ರುಚಿಯ ಬಲ್ಲುದೆ ಕೂಡಲಸಂಗಮದೇವಾ?

ಪ್ರಸ್ತುತ ವಚನದಲ್ಲಿ ಮೂರು ವಿಶೇಷತೆಗಳಿವೆ. ಭೌತಿಕ ಆಕರ್ಷಣೆಯತ್ತ ಸೆಳೆಯುವ ಅಂಶ, ಮತ್ತೊಂದು ಆಶ್ಚರ್ಯದ ಜೊತೆಗೆ ವಿಷಾದ, ಅದೂ ಪ್ರಶ್ನಾರ್ಥಕವಾಗಿ ಉಳಿದು ವಚನ ಕೊನೆಯಾಗುವುದು. ಕೊನೆಗೆ ಒಂದು ಗುಣದ ಬಗ್ಗೆ ಗಮನ ಸೆಳೆಯುತ್ತದೆ; ಬಸವಣ್ಣನವರ ಸೂಕ್ಷ್ಮದೃಷ್ಟಿ.

ಮನುಷ್ಯನ ಮನಸ್ಸುನ್ನು ಬಹಳ ಬೇಗ ಸೆಳೆಯುವುದು ಭೌತಿಕ ಆಕರ್ಷಣೆಗೆ ಕಾರಣವಾಗುವ ಕಾಂಚನ. ಕಾಂಚನ ಎಂದರೆ ಹಣ, ದ್ರವ್ಯ, ಚಿನ್ನ ಮುಂತಾದವು. ಇವೆಲ್ಲವೂ ಲೋಲುಪತೆಯನ್ನು ತರುವಲ್ಲಿ ಪ್ರಮುಖವಾದ ಪಾತ್ರವನ್ನು ವಹಿಸುತ್ತವೆ. ಈ ಭೌತಿಕ ಆಕರ್ಷಣೆಯನ್ನು ತರುವ ಎಲ್ಲದಕ್ಕೂ ಮೂಲವಾದ ಹಣವನ್ನು ನಾಯಿಯೆಂದು ಕರೆಯುತ್ತಿದ್ದಾರೆ ಬಸವಣ್ಣ. ಈ ಆಕರ್ಷಣೆ ಹೆಚ್ಚಾಗುತ್ತಾ ಹೋದಂತೆ ಎಂತಹ ಮನುಷ್ಯನ ಮನಸ್ಸಾದರೂ ನಾಯಿಯಂತೆ ಚಾಂಚಲ್ಯ ಸ್ವಭಾವವನ್ನು ಹೊಂದುತ್ತಾನೆ. ವಿಷಯವನ್ನು ಭೋಗಂಗಳನ್ನು ಹೆಚ್ಚುಗೊಳಿಸುವ, ಲೋಲುಪತೆಗೆ ಜಾರಿಸುವ ಕಾರ್ಯಕ್ಕೆ 'ಕಾಂಚನ' ಕಾರಣವಾಗುತ್ತದೆ; ಕೊನೆಗೆ ಅದಕ್ಕೆ ಆಳಾಗಿ, ಅದು ಹೇಳಿದಂತೆ ಕೇಳುವ, ಅದರೊಂದಿಗೇ ಸುತ್ತುವ ನಾಯಿಯಾಗಿಸಿಬಿಡುತ್ತಾನೆ.

ಲೋಲುಪತೆ ಹೆಚ್ಚಾಗುವುದನ್ನು ಒಂದು ಸಾದೃಶ್ಯದ ಮೂಲಕ ಪರಿಣಾಮಕಾರಿಯಾಗಿ ಹೇಳುತ್ತಾರೆ. ಹೊಲಸನ್ನು ಮೆಚ್ಚಿದ ಸೊಣಗವು ಅದರ ಕಡೆಗೇ ಹೊರಳುತ್ತದೆಯೇ ಹೊರತು ಅವುಗಳಿಂದ ಬಿಡುಗಡೆಗೊಂಡು ಆತ್ಮಸಂತೋಷವನ್ನು ಕೊಡುವ ಅಮೃತದ ಅಥವಾ ಅಮೃತತ್ವದ ಕಡೆಗೆ ಚಲನೆ ಮಾಡುವುದಿಲ್ಲ. ಇದನ್ನೇ ‘ಹಡಿಕೆಗೆ ಮೆಚ್ಚಿದ ಸೊಣಗ‘ ಎಂದು ಹೇಳುತ್ತಾರೆ. ದುರ್ಗಂಧವನ್ನೇ ಇಷ್ಟ ಪಡುವ ನಾಯಿ ಎಂದೂ ಅದರಿಂದ ಹೊರಬರಲಾರದು. ಇಲ್ಲಿ ಹಣವೆನ್ನುವುದು ಆ ದುರ್ಗಂಧ; ಅದನ್ನು ಬಯಸುವ ನಾಯಿಬುದ್ಧಿಯನ್ನು ಹೊಂದಿದ ಮನುಷ್ಯನೇ ಸೊಣಗ. ಅಂತಹವನು ಎಂದೂ ಅಮೃತಕ್ಕೆ ಸಮಾನವಾದ ದೈವದ ಕಡೆಗೆ, ಶಾಶ್ವತವಾದ ಸುಖವನ್ನು ಕರುಣಿಸುವ ಪರಮಾತ್ಮನ ಕಡೆಗೆ ಹೊರಳುವುದೇ ಇಲ್ಲವಲ್ಲ? ವಚನದಲ್ಲಿ, ಮನುಷ್ಯನ ಆಳದ ಮನಸ್ಸಿನಲ್ಲಿನ ಲೋಲುಪತೆಯ ಗುಣದ ಬಗೆಗಿನ ಅಚ್ಚರಿಯ ಜೊತೆಗೆ ವಿಷಾದವೂ ಇದೆ.

ಈ ನಾಯಗುಣದಿಂದ ವಿಮುಖವಾಗುವುದಕ್ಕೆ ಹಾದಿ ಮರೆವು. ಈ ಮರೆವು ಯಾವುದರಲ್ಲಿ ಇರಬೇಕು, ಯಾವುದರಲ್ಲಿ ಇರಬಾರದು – ಎನ್ನುವುದೂ ಬಹಳ ಮುಖ್ಯವಾದ ಅಂಶ. ‘ಮಾಡಿದೆನೆಂಬುದು ಮನದಲ್ಲಿ ಹೊಳೆದಡೆ ಏಡಿಸಿ ಕಾಡಿತ್ತು ಶಿವನ ಡಂಗುರ’ ಎನ್ನುವ ವಚನದಲ್ಲಿ ಮನುಷ್ಯ ಹೊರಗೆ ಮಾಡಿದ ಒಳ್ಳೆಯ ಕಾರ್ಯಗಳಿಗೆ ಮರೆವಿನ ಅಗತ್ಯ ಇದೆ ಎನ್ನುವುದನ್ನು ಸಾರುತ್ತಲೇ, ಮಾಡಿದ ಕಾರ್ಯದಿಂದ ದೊರೆಯುವ ಸಾಮಾಜಿಕ ಸ್ಥಾನಮಾನಗಳಿಂದಲೂ ದೂರ ಉಳಿಯಬೇಕೆಂದೂ ಹೇಳಿದ್ದಾರೆ. ಒಬ್ಬ ಸಾಧಕ ತನ್ನ ಪಥದಲ್ಲಿ ನಡೆಯುವಾಗ ಈ ಮರೆವು ಇರದಿದ್ದರೆ ಅಮೃತವನ್ನು ಹಿಡಿಯಲಾರದೆ, ಹಡಿಕೆಯ ಕಡೆಗೆ ಚಲಿಸುವ ಹಾಗೆ ಆಗಿಬಿಡುತ್ತಾನೆ ಎನ್ನುವುದನ್ನು ಒತ್ತಿ ಹೇಳುತ್ತಿದ್ದಾರೆ. ‘ಕಾಂಚನ’ದಿಂದ ಲೋಲುಪನಾಗಿ ‘ಅಂದಣವನೇರಿದ ಸೊಣಗ’ನ ಹಾಗಿರುವ ಮನಸ್ಸನ್ನು ಬಿಟ್ಟು, ಕಾಂಚನದ ಅಸೆಯಿಂದ ನಾಯಿಯಂತಾಗದೆ, ಅಮೃತದ ಕಡೆಗೆ ನಡೆಯಬೇಕು ಎನ್ನುತ್ತಿದ್ದಾರೆ ಬಸವಣ್ಣ. ದೈವಚಿಂತನೆ ಮತ್ತು ದೈವಸಾಕ್ಷಾತ್ಕಾರದ ಬಗ್ಗೆ ಅವರು ಈ ವಚನದಲ್ಲಿ ಹೇಳುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT