ಮಂಗಳವಾರ, ಮಾರ್ಚ್ 31, 2020
19 °C

24X7 ಮುಂಬೈ ನೈಟ್ಸ್

ಪಂಜು ಗಂಗೊಳ್ಳಿ Updated:

ಅಕ್ಷರ ಗಾತ್ರ : | |

Prajavani

ದೇಶದಲ್ಲಿ ‘ನಿದ್ರಿಸದ ನಗರ’ ಅಂತ ಯಾವುದಾದರೂ ಇದ್ದರೆ ಅದು ಮುಂಬೈ. ಈ ಥಳುಕು ಬಳುಕಿನ ಮಾಯಾನಗರಿಯಲ್ಲಿ ಯಾವಾಗ ಬೆಳಗಾಗುತ್ತದೆ, ಯಾವಾಗ ಕತ್ತಲಾಗುತ್ತದೆ ಎಂಬುದೇ ತಿಳಿಯುವುದಿಲ್ಲ. ರಾತ್ರಿ 2 ಗಂಟೆಯಲ್ಲೂ ರಸ್ತೆಯಲ್ಲಿ ಜನರು ನೋಡಲು ಸಿಗುತ್ತಾರೆ. ಮುಂಬೈಯಲ್ಲಿ ‘ಡೇ ಲೈಫ್’ಗಿಂತ ‘ನೈಟ್ ಲೈಫ್’ ಹೆಚ್ಚು ಆಕರ್ಷಕ. ಹೀಗಾಗಿಯೇ ಈ ಮಾಯಾನಗರಿ ಭಾರತದ ವಾಣಿಜ್ಯ ರಾಜಧಾನಿ ಮಾತ್ರ ಅಲ್ಲ; ಭಾರತದ ‘ನೈಟ್ ಲೈಫ್’ ರಾಜಧಾನಿ ಎಂಬ ಬಿರುದು ಪಡೆದಿದೆ.

ಈಗ ಮುಂಬೈಯ ‘ನೈಟ್ ಲೈಫ್’ಗೆ ಮಹಾರಾಷ್ಟ್ರ ಸರ್ಕಾರ ಅಧಿಕೃತ ಮುದ್ರೆ ಒತ್ತಲು ಮುಂದಾಗಿದೆ. ಜ. 27ರಿಂದ ಪ್ರಯೋಗಾರ್ಥವಾಗಿ ಕೆಲವು ನಿರ್ದಿಷ್ಟ ‘ನಾನ್ ರೆಸಿಡೆಂಟ್’ (ಜನವಸತಿರಹಿತ) ಪ್ರದೇಶಗಳಲ್ಲಿ ಅಂಗಡಿ, ಉಪಹಾರ ಗೃಹ (ಈಟರೀಸ್) ಮತ್ತು ಮಾಲ್‌ಗಳನ್ನು 24X7  ತೆರೆದಿಡುವ ಯೋಜನೆ ಜಾರಿಗೊಳಿಸಲು ನಿರ್ಧರಿಸಿದೆ.ಸಹಜವಾಗಿಯೇ ಈ ಯೋಜನೆಗೆ ಪರ ಹಾಗೂ ವಿರೋಧ ಅಭಿಪ್ರಾಯ ವ್ಯಕ್ತವಾಗಿದೆ. ಈ ಯೋಜನೆ ವಿರೋಧಿಸುವವರ ಮುಖ್ಯ ವಾದವೇನೆಂದರೆ, ‘ಇದು ಅಪರಾಧಗಳ ಪ್ರಮಾಣ ಹೆಚ್ಚಲು ದಾರಿ ಮಾಡಿಕೊಡುತ್ತದೆ’ ಎನ್ನುವುದು. ಮುಖ್ಯವಾಗಿ ಸ್ತ್ರೀಯರ ಮೇಲಿನ ಅಪರಾಧಗಳು. ವಿರೋಧ ಪಕ್ಷ ಬಿಜೆಪಿ ನಾಯಕರು ಈ ಕ್ರಮಕ್ಕೆ ಅರ್ಧ ಬೆಂಬಲ ಮಾತ್ರ ವ್ಯಕ್ತಪಡಿಸಿದ್ದಾರೆ. ‘ಚಿಕ್ಕಪುಟ್ಟ ವ್ಯಾಪಾರಿಗಳಿಗೆ ಅನುಕೂಲ ಮಾಡಿಕೊಡುವ ರೀತಿಯಲ್ಲಿದ್ದರೆ ಬೆಂಬಲಿಸುತ್ತೇವೆ. ಆದರೆ ಬಾರ್, ರೆಸ್ಟೊರೆಂಟ್, ಪಬ್‌ಗಳಿಗೆ 24 ಗಂಟೆಯೂ ತೆರೆದಿಡಲು ಅವಕಾಶ ಕೊಟ್ಟರೆ ವಿರೋಧಿಸುತ್ತೇವೆ’ ಎಂಬುದು ಅವರ ಸ್ಪಷ್ಟನೆ.

‘ಮುಂಬೈನಲ್ಲಿ ಈಗಾಗಲೆ ನೈಟ್‌ಲೈಫ್‌ ರೂಢಿಯಲ್ಲಿದೆ. ಹಗಲೂ ರಾತ್ರಿ ಜನ ಓಡಾಡುತ್ತಾರೆ. ಈಗ ಅದಕ್ಕೆ ಅಧಿಕೃತ ರೂಪ ಕೊಟ್ಟಂತಾಗುತ್ತದೆ’ ಎನ್ನುವುದು ನೈಟ್‌ಲೈಫ್‌ ಪರವಾಗಿರುವವರ ಬಲವಾದ ವಾದ.

ಮುಂಬೈಯ ಜೀವನಾಡಿಯಾದ ಸ್ಥಳೀಯ ರೈಲುಗಳು ರಾತ್ರಿ ಒಂದು ಗಂಟೆವರೆಗೂ ಚಲಿಸುತ್ತವೆ. ಬೆಳಗಿನ ಜಾವ ನಾಲ್ಕು ಗಂಟೆಗೆ ಮತ್ತೆ ಶುರುವಾಗುತ್ತವೆ. ಲೋಕಲ್ ರೈಲುಗಳಿಗೆ ಹೊಂದಿಕೊಂಡು ಬಿಎಸ್ಟಿ ಬಸ್‌ಗಳೂ ಸಂಚರಿಸುತ್ತವೆ. ಆಟೊ ಮತ್ತು ಟ್ಯಾಕ್ಸಿಗಳು 24 ಗಂಟೆಯೂ ಓಡಾಡುವುದರಿಂದ ಲೋಕಲ್ ರೈಲುಗಳು ಸ್ತಬ್ಧವಾಗುವ ಮೂರು ಗಂಟೆಗಳ ಕಾಲ ಜನಸಂಚಾರಕ್ಕೆ ಹೆಚ್ಚೇನೂ ಅಡಚಣೆಯಾಗುವುದಿಲ್ಲ. ಅಂಗಡಿ, ಮಾಲ್‌ಗಳು ರಾತ್ರಿ 10 ಗಂಟೆಗೆ ಮುಚ್ಚಿದರೂ ಬಾರ್, ಪಬ್‌ಗಳು ರಾತ್ರಿ 1.30ರ ತನಕ ತೆರೆದಿರುತ್ತವೆ.

ನಗರದ ರಸ್ತೆಗಳ ಮೂಲೆ ಮೂಲೆಗಳಲ್ಲಿರುವ ‘ಖಾವ್ ಗಲ್ಲಿ’ (ಪುಟ್‌ಪಾತ್‌ಗಳಲ್ಲಿ ಊಟ, ತಿಂಡಿ ಮಾರುವ ಜಾಗ)ಗಳಂತೂ ಹೆಚ್ಚೂ ಕಡಿಮೆ ರಾತ್ರಿಯಿಡೀ ವ್ಯಾಪಾರ ನಡೆಸುತ್ತವೆ. ಸ್ಟಾರ್ ಹೋಟೆಲ್‌ಗಳು 24 ಗಂಟೆಯೂ ತೆರೆದಿರುತ್ತವೆ. ಮೆರಿನ್ ಡ್ರೈವ್, ಬ್ಯಾಂಡ್ ಸ್ಟ್ಯಾಂಡ್, ಜುಹೂ, ವರ್ಲಿ ಸೀ ಫೇಸ್ ಮೊದಲಾದ ಸಾರ್ವಜನಿಕ ಸ್ಥಳಗಳಲ್ಲಿ ಬೆಳಿಗ್ಗೆ ಅಥವಾ ರಾತ್ರಿಯ ಯಾವ ಹೊತ್ತಲ್ಲಿ ನೋಡಿದರೂ ಜನರಿರುತ್ತಾರೆ. ‘ಜನ ಈ ರೀತಿ ಅಪರಾತ್ರಿಯಲ್ಲೂ ರಸ್ತೆಗಳಲ್ಲಿ ತಿರುಗಾಡುವುದರಿಂದಲೇ ಮಹಿಳೆಯರು ಇಲ್ಲಿ ರಾತ್ರಿ ಹೊತ್ತಲ್ಲೂ ಓಡಾಡಲು ತೊಂದರೆ ಇಲ್ಲ’ ಎನ್ನುವುದು ನೈಟ್‌ಲೈಫ್‌ ಪರ ಇರುವವರ ವಾದ.

ಆದರೆ, ಇಲ್ಲೊಂದು ವಿಶೇಷವಿದೆ. ಸರ್ಕಾರದ ನೈಟ್‌ಲೈಫ್‌ ನಿರ್ಧಾರಕ್ಕೆ ಅಂಗಡಿ, ಉಪಹಾರ ಗೃಹ ಮತ್ತು ಮಾಲ್ ಮಾಲೀಕರು ಹೆಚ್ಚಿನ ಉತ್ಸಾಹವನ್ನೇನೂ ತೋರಿಸುತ್ತಿಲ್ಲ! ಕುಸಿದ ಆರ್ಥಿಕ ಪರಿಸ್ಥಿತಿಯಿಂದಾಗಿ ಅಂಗಡಿಗಳಿಗೆ ಹಗಲಲ್ಲೇ ಜನರು ಬರುತ್ತಿಲ್ಲ; ಇನ್ನು ರಾತ್ರಿ ಬರುವವರು ಯಾರು? ಅದೂ ಅಲ್ಲದೆ ಜನರೆಲ್ಲ ಅಮೆಜಾನ್, ಫ್ಲಿಪ್‌ಕಾರ್ಟ್‌, ಸ್ನ್ಯಾಪ್‌ಡೀಲ್‌, ಸಬ್ ವೇ, ಝೊಮ್ಯಾಟೊ ಮೊದಲಾದ ಆನ್‌ಲೈನ್‌ ಶಾಪ್‌ಗಳ ಭರಾಟೆಯಲ್ಲಿ ಮುಳುಗಿದ್ದಾರಲ್ಲ... ಎನ್ನುವುದು ಅವರ ಪ್ರಶ್ನೆ. ಅದೂ ಅಲ್ಲದೆ, ರಾತ್ರಿಯಿಡೀ ವ್ಯಾಪಾರ ಮಳಿಗೆಗಳನ್ನು ತೆರೆದಿಡಬೇಕಾದರೆ ಸಿಬ್ಬಂದಿ ಸಂಬಳ, ಸೆಕ್ಯುರಿಟಿ, ವಿದ್ಯುತ್ ಬಿಲ್, ಕಸ ವಿಲೇವಾರಿ ಮೊದಲಾದುದಕ್ಕೆ ಖರ್ಚಿನ ಹೊರೆ ಇನ್ನೂ ಹೆಚ್ಚುತ್ತದೆ.

ಈ ಕಾರಣಕ್ಕಾಗಿಯೇ ಸರ್ಕಾರವು ಈ ಯೋಜನೆಯನ್ನು ಯಾರಿಗೂ ಕಡ್ಡಾಯ ಮಾಡಿಲ್ಲ. ಅದೇ ವೇಳೆಗೆ ಈ ಯೋಜನೆ ಪೊಲೀಸರ ಮೇಲೆ ಇನ್ನೂ ಹೆಚ್ಚಿನ ಒತ್ತಡ ಹೇರುವುದು ನಿಜ. ಈಗಾಗಲೇ ಸಿಬ್ಬಂದಿ ಕೊರತೆ ಎದುರಿಸುತ್ತಿರುವ ಮುಂಬೈ ಪೊಲೀಸ್‌ ಇಲಾಖೆಯ ಮೇಲೆ ಇನ್ನೂ ಹೆಚ್ಚಿನ ಒತ್ತಡ ಬಿದ್ದರೆ ದಕ್ಷತೆ ಇನ್ನಷ್ಟು ಕುಸಿಯುವುದಂತೂ ಖಚಿತ. ಈ ಯೋಜನೆ ಜಾರಿಗೊಂಡರೆ ಅಪರಾಧ ಪ್ರಮಾಣ ಹೆಚ್ಚುತ್ತದೆ ಎನ್ನುವ ಭಯವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲು ಅಥವಾ ಒಪ್ಪಲು ಸಾದ್ಯವಿಲ್ಲ. ಆದರೂ, ಪ್ರಾರಂಭಿಕ ದಿನಗಳಲ್ಲಿ ಈ ಬಗ್ಗೆ ಜನರಲ್ಲಿ ಆತಂಕವಿರುವುದು ಸಹಜವೇ.

ಮುಂಬೈಯ ನರಿಮನ್ ಪಾಯಿಂಟಿನ ಎನ್‌ಸಿಪಿಎ ಮತ್ತು ಉಪನಗರ ಕುರ್ಲಾದ ಬಿಕೆಸಿ –ಈ ಎರಡು ಗ್ರೇಟೆಡ್ ಏರಿಯಾ (ಜನವಸತಿಯಿಂದ ದೂರವಿರುವ) ಪ್ರದೇಶಗಳಲ್ಲಿ ಈ ಯೋಜನೆಯನ್ನು ಪ್ರಾಯೋಗಿಕ ಯೋಜನೆ ರೂಪದಲ್ಲಿ ಜಾರಿಗೆ ತರಲು ಮಹಾರಾಷ್ಟ್ರ ಸರ್ಕಾರದ ಮಂತ್ರಿಮಂಡಲದ ಸಭೆಯಲ್ಲಿ ನಿರ್ಧರಿಸಲಾಗಿದೆ. ಮೊದಲ ಹಂತದಲ್ಲಿ ಈ ಪ್ರದೇಶಗಳಲ್ಲಿರುವ ಮಾಲ್, ಮಲ್ಟಿಫ್ಲೆಕ್ಸ್, ಉಪಹಾರ ಗೃಹ, ಅಂಗಡಿ, ಖಾವ್ ಗಲ್ಲಿ ಮತ್ತು ಮಾಲ್‌ಗಳ ಒಳಗಿರುವ ಹೋಟೆಲ್ ಮತ್ತು ರೆಸ್ಟೊರೆಂಟ್‌ಗಳು ರಾತ್ರಿಯಿಡೀ ತೆರೆದಿರುತ್ತವೆ. ಮಾಲ್‌ಗಳ ಒಳಗಿರುವ ಹೋಟೆಲ್, ರೆಸ್ಟೊರೆಂಟ್‌ಗಳು ರಾತ್ರಿಯಿಡೀ ತೆರೆದಿರಬಹುದಾದರೂ ರಾತ್ರಿ 1.30ರ ನಂತರ ಗ್ರಾಹಕರಿಗೆ ಮದ್ಯ ಮಾರುವುದಿಲ್ಲ ಎಂಬ ಷರತ್ತಿಗೆ ಒಳಪಡುತ್ತವೆ. ‘ಪೈಲಟ್ ಪ್ರಾಜೆಕ್ಟ್’ನ ಫಲಿತಾಂಶ ನೋಡಿಕೊಂಡು ಮುಂದಿನ ಹಂತಗಳಲ್ಲಿ ವಿಮಾನ ನಿಲ್ದಾಣ, ರೈಲ್ವೆ ನಿಲ್ದಾಣ, ಬೀಚ್‌ ಸೇರಿದಂತೆ ಇತರೇ ಪ್ರಮುಖ ಪ್ರದೇಶಗಳಲ್ಲಿ ಜಾರಿಗೆ ತರುವ ಬಗ್ಗೆ ಚಿಂತಿಸಲಾಗುತ್ತದೆ.

5 ಶತಕೋಟಿ ಪೌಂಡ್ ವ್ಯವಹಾರ ಮಾಡುವ ಲಂಡನ್‌ನ ‘ನೈಟ್‌ಲೈಫ್’ ಮಾದರಿಯನ್ನು ನೋಡಿ, ಮಹಾರಾಷ್ಟ್ರದ ಪ್ರವಾಸೋದ್ಯಮ ಸಚಿವ ಆದಿತ್ಯ ಠಾಕ್ರೆ 2013ರಲ್ಲೇ ಈ ಯೋಜನೆ ಬಗ್ಗೆ ಪ್ರಸ್ತಾಪಿಸುತ್ತಿದ್ದರು. ಆದರೆ, 2017ರಲ್ಲಿ ಕಮಲಾ ಮಿಲ್ಲಿನ ರೂಫ್‌ಟಾಪ್‌ ರೆಸ್ಟೊರೆಂಟ್‌ ಅಗ್ನಿ ದುರಂತದಲ್ಲಿ 14 ಜನರು ಸತ್ತರು. ಹಾಗಾಗಿ, ಈ ಯೋಜನೆ ಮುನ್ನೆಲೆಗೆ ಬರಲಿಲ್ಲ. ಈಗಿನ ಸರ್ಕಾರ ಶಿವಸೇನೆಯ ನೇತೃತ್ವದ್ದೇ ಆಗಿದೆ. ಹಾಗಾಗಿ, ಅವರ ದಾರಿ ಸುಲಭವಾಗಿದೆ. ಈ ಪೈಲಟ್ ಪ್ರಾಜೆಕ್ಟ್‌ನ ಫಲಿತಾಂಶವನ್ನು ಮುಂಬೈ ಮಾತ್ರವಲ್ಲದೆ ಬೆಂಗಳೂರು ಮತ್ತಿತರ ಮಹಾನಗರಗಳೂ ಎದುರು ನೋಡುತ್ತಿವೆ ಎನ್ನುವುದು ಗುಟ್ಟೇನಲ್ಲ.

ಕರ್ನಾಟಕ ಸರ್ಕಾರ ಬೆಂಗಳೂರಲ್ಲಿ ಇದೇ ಮಾದರಿಯ ನೈಟ್‌ಲೈಫನ್ನು ಪ್ರಾರಂಭಿಸಲು ಮುಂದಾಗಿರುವ ಸುದ್ದಿ ಬಂದಿದೆ. ತಡರಾತ್ರಿ ಕೆಲಸ ಮಾಡುವವರು ಮತ್ತು ಪ್ರವಾಸಿಗರು ಈ ಯೋಜನೆ ಮೆಚ್ಚುವುದರಲ್ಲಿ ಸಂದೇಹವಿಲ್ಲ. ಆದರೆ, ಇಲ್ಲಿ ಗಮನಿಸಬೇಕಾದ ಮುಖ್ಯ ವಿಚಾರವೆಂದರೆ ಮುಂಬೈಗೆ ಈ ರೀತಿಯ ನೈಟ್‌ಲೈಫ್ ಹೊಸತಲ್ಲ. ಇಂತಹ ನೈಟ್‌ಲೈಫಿನ ಅನುಭವವಿಲ್ಲದ ನಗರಗಳು ಏಕಾಏಕಿ ಈ ಯೋಜನೆಯನ್ನು ಜಾರಿಗೆ ತರಲು ಹೊರಟರೆ ಕೈಸುಟ್ಟುಕೊಳ್ಳುವ ಅಪಾಯವೇ ಹೆಚ್ಚು.

2005ರವರೆಗೆ ಮುಂಬೈಯಲ್ಲಿ ಡಾನ್ಸ್‌ಬಾರ್‌ಗಳು ರಾತ್ರಿ 1ರಿಂದ 2ಗಂಟೆವರೆಗೂ ತೆರೆದಿರುತ್ತಿದ್ದವು. ಆ ವರ್ಷ ಆಗಸ್ಟ್ 15ರಂದು ಆಗಿನ ಮಹಾರಾಷ್ಟ್ರ ಸರ್ಕಾರ ಡಾನ್ಸ್‌ಬಾರ್‌ಗಳನ್ನು ಮುಚ್ಚಿಸಿದ ನಂತರ ಮುಂಬೈಯ ನೈಟ್‌ಲೈಫ್ ತನ್ನ ಆಕರ್ಷಣೆ ಕಳೆದುಕೊಂಡಿತು. ಆಗ 20 ಸಾವಿರಕ್ಕೂ ಹೆಚ್ಚು ಡಾನ್ಸರ್‌ಗಳು ಕೆಲಸ ಕಳೆದುಕೊಂಡು ಬೀದಿಗೆ ಬಿದ್ದರು. ಅವುಗಳನ್ನು ಮುಚ್ಚಿಸಿದವರು ಆಗ ಗೃಹ ಸಚಿವರಾಗಿದ್ದ ಎನ್‌ಸಿಪಿ ಮುಖಂಡ ಆರ್.ಆರ್. ಪಾಟೀಲ್. ಅದೇ ಎನ್‌ಸಿಪಿ ಪಾಲುದಾರ ಆಗಿರುವ ಈಗಿನ ಸರ್ಕಾರ ಮುಂಬೈಯ ಅಳಿದುಳಿದ ನೈಟ್‌ಲೈಫ್‌ಗೆ ಕಾನೂನಿನ ಬೆಂಬಲ ನೀಡಲು ಮುಂದಾಗಿದೆ. ಈ ನೈಟ್‌ಲೈಫ್‌ ಯೋಜನೆ ಎಷ್ಟರಮಟ್ಟಿಗೆ  ಸಫಲವಾಗುತ್ತದೋ ಕಾದು ನೋಡಬೇಕು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು