ಶನಿವಾರ, ಆಗಸ್ಟ್ 15, 2020
27 °C

ಪುಸ್ತಕ ವಿಮರ್ಷೆ | ಸಾಹಿತ್ಯ ಸುಧೆಯ ರಸದಾಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಸದಾಳಿಯಲ್ಲಿ ಒಂಬತ್ತು ಲೇಖನಗಳಿವೆ. ಇವೆಲ್ಲವೂ ಸಾಹಿತ್ಯ ಅನುಸಂಧಾನ ಲೇಖನಗಳೆಂದು ನಿಸ್ಸಂಶಯವಾಗಿ ಹೇಳಬಹುದು. ಇದರಲ್ಲಿನ ಏಳು ಲೇಖನಗಳು ಲೇಖಕರು ವಿವಿಧ ಗೋಷ್ಠಿಗಳಲ್ಲಿ ಮಂಡಿಸಿದ ಪ್ರಬಂಧಗಳಾಗಿವೆ. ಪುಸ್ತಕದ ಶೀರ್ಷಿಕೆಯೇ ಹೇಳುವಂತೆ ಇಲ್ಲಿನ ಎಲ್ಲ ಲೇಖನಗಳು ‘ರಸದಾಳಿ’ ಕಬ್ಬಿನಂತೆ ಓದುಗರಿಗೆ ರಸ ಉಣಿಸಬಲ್ಲವಾಗಿವೆ. 

ಕನ್ನಡ ಕಾವ್ಯಗಳನ್ನು ಓದುವ ಅನೇಕ ಸಂದರ್ಭಗಳಲ್ಲಿ ಕವಿಗಳು ಕಬ್ಬಿನ ವರ್ಣನೆ ಮಾಡಿರುವುದನ್ನು ಸಾಮಾನ್ಯವಾಗಿ ಗಮನಿಸಿರುತ್ತೇವೆ. ಕಬ್ಬನ್ನು ಕೇಂದ್ರೀಕರಿಸಿರುವ ‘ಪ್ರಾಚೀನ ಕನ್ನಡ ಕಾವ್ಯಗಳಲ್ಲಿ ರಸದಾಳಿ ಕಬ್ಬು’ ಲೇಖನ ಓದುಗರ ಕುತೂಹಲ ಹೆಚ್ಚಿಸುತ್ತದೆ. ಕಬ್ಬನ್ನು ನುರಿಸಿ ಬೆಲ್ಲ ಮಾಡುತ್ತಿದ್ದ ಆಲೆಮನೆಗಳು ಆಧುನಿಕ ಬದುಕಿನ ಸಂದರ್ಭದಲ್ಲಿ ಮರೆಯಾಗುತ್ತಿರುವುದರ ವಿಷಾದದ ನಡುವೆ, ಪ್ರಾಚೀನ ಕರ್ನಾಟಕದ ಜನಜೀವನದಲ್ಲಿ ಕಬ್ಬು ಮತ್ತು ಕಬ್ಬಿನ ಉತ್ಪನ್ನಗಳು ಎಷ್ಟೊಂದು ಮುಖ್ಯಪಾತ್ರ ವಹಿಸಿದ್ದವು ಎನ್ನುವುದನ್ನು ಈ ಲೇಖನ ಮೆಲುಕು ಹಾಕಿಸುತ್ತದೆ.

‘ಪ್ರಾಚೀನ ಕನ್ನಡ ಸಾಹಿತ್ಯದಲ್ಲಿ ಕ್ರೀಡೆ ಮತ್ತು ಮನೋರಂಜನೆಯ ಪರಿಕಲ್ಪನೆಗಳು’ ಲೇಖನ ವಿಶೇಷ ಮತ್ತು ಕುತೂಹಲ ಭರಿತ ಮಾಹಿತಿಗಳ ಹೂರಣವಾಗಿದೆ. ವೇದ, ರಾಮಾಯಣ, ಮಹಾಭಾರತ, ವಾತ್ಸ್ಯಾಯನ ಕಾಮಸೂತ್ರ, ಯಶಸ್ತಿಲಕ ಚಂಪೂ, ದಂಡಿಯ ದಶಕುಮಾರ ಚರಿತ, ಮನುಸ್ಮೃತಿ, ಕೌಟಿಲ್ಯನ ಅರ್ಥಶಾಸ್ತ್ರ, ಮಾನಸೋಲ್ಲಾಸ ಗ್ರಂಥಗಳಲ್ಲಿ ಉಲ್ಲೇಖಗೊಂಡಿರುವ, ವಿದೇಶಿ ಪ್ರವಾಸಿಗರ ಬರಹಗಳು ಹಾಗೂ ಕನ್ನಡ ಮಾರ್ಗಕಾರನಿಂದ ತೊಡಗಿ ಅನೇಕ ಕಾವ್ಯಗಳಲ್ಲಿ ಅಡಕಗೊಂಡಿರುವ ಕ್ರೀಡೆ, ಮನೋರಂಜನೆ, ಉತ್ಸವಗಳಿಗೆ ಸಂಬಂಧಿಸಿದ ವಿಪುಲವಾದ ಮಾಹಿತಿಗಳನ್ನು ಇದೊಂದೇ ಲೇಖನದಲ್ಲಿ ಸಂಕ್ಷಿಪ್ತವಾಗಿ ಹೆಕ್ಕಿಕೊಟ್ಟಿದ್ದಾರೆ. ಇಷ್ಟೊಂದು ಆಸಕ್ತಿದಾಯಕ ಮಾಹಿತಿಗಳನ್ನು ಒಟ್ಟುಗೂಡಿಸುವಲ್ಲಿ ಲೇಖಕರು ಸಾಕಷ್ಟು ಕೃತಿಗಳನ್ನು ತಡಕಾಡಿರುವುದು, ಶಾಸನಗಳನ್ನು ಅಧ್ಯಯನ ನಡೆಸಲು ಹಾಕಿರುವ ಶ್ರಮವೂ ಎದ್ದುಕಾಣಿಸುತ್ತದೆ.

ಹಾಗೆಯೇ ‘ಕರ್ನಾಟಕದ ಶಿಲ್ಪ ಮತ್ತು ಸಾಹಿತ್ಯದಲ್ಲಿ ಬಾಹುಬಲಿ ಕಥನ’ ಲೇಖನದಲ್ಲಿ ಬಾಹುಬಲಿಯ ವ್ಯಕ್ತಿತ್ವವು ಶಿಲೆಯಲ್ಲಿ ಅರಳಿದ ರೀತಿ ಮತ್ತು ಅಕ್ಷರ ಮಾಧ್ಯಮದಲ್ಲಿ ಒಡಮೂಡಿದ ವಿಧಾನವನ್ನು ದಾಖಲಿಸಲು ಪ್ರಯತ್ನಿಸಿರುವುದು ಕಾಣಿಸುತ್ತದೆ. ಪ್ರಾಚೀನ ಕಾಲದಿಂದ ತೊಡಗಿ ಆಧುನಿಕ ಕವಿಗಳವರೆಗೆ ಗೊಮ್ಮಟ ಮೂರ್ತಿಯನ್ನು ಕುರಿತು ತಮ್ಮ ಅನುಭವಕ್ಕೆ ದಕ್ಕಿದ ಭಾವವನ್ನು ಅಭಿವ್ಯಕ್ತಿಸಿರುವುದನ್ನು, ಬಾಹುಬಲಿಯ ವ್ಯಕ್ತಿತ್ವ ಒಂದಿಲ್ಲೊಂದು ರೀತಿಯಲ್ಲಿ ಕನ್ನಡ ಕವಿಗಳ ಭಾವಕೋಶವನ್ನು ಉದ್ದೀಪನಗೊಳಿಸಿದ ಬಗೆಯನ್ನು ಈ ಲೇಖನದಲ್ಲಿ ಸಾದ್ಯಂತವಾಗಿ ಕಟ್ಟಿಕೊಟ್ಟಿದ್ದಾರೆ ಲೇಖಕರು. ಉಳಿದ ಆರೂ ಲೇಖನಗಳು ಸಾಹಿತ್ಯಾಸಕ್ತರಿಗಷ್ಟೇ ಅಲ್ಲ, ಓದಿನ ಆಸಕ್ತಿ ಇರುವವರೆಲ್ಲರ ಕುತೂಹಲ ತಣಿಸುವಂತಿವೆ.

ರಸದಾಳಿ

ಡಾ.ಶ್ರೀಧರ ಎಚ್‌.ಜಿ. ಮುಂಡಿಗೆಹಳ್ಳ

ಪ್ರ: ಸಪ್ನ ಬುಕ್‌ ಹೌಸ್‌, ಬೆಂಗಳೂರು

ದೂ: 080– 40114455

ಪುಟ: 200

ಬೆಲೆ: ₹150

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು