ಶುಕ್ರವಾರ, ಆಗಸ್ಟ್ 6, 2021
22 °C

ವಿಮರ್ಶೆ: ಕಳಿಲಾಕ ಇದ್ದ ಕೇಡ ಬೆಳುದಿಂಗಳ ನೋಡಾ...

ರಘುನಾಥ ಚ.ಹ. Updated:

ಅಕ್ಷರ ಗಾತ್ರ : | |

Prajavani

ಬೆಳುದಿಂಗಳ ನೋಡಾ
ಲೇ:
ಎಸ್‌.ಆರ್‌. ವಿಜಯಶಂಕರ
ಪ್ರ: ಚಿಂತನ ಚಿತ್ತಾರ, ಮೈಸೂರು.
ಸಂ: 9945668082

ಬೇಂದ್ರೆಯವರ ‘ಬೆಳುದಿಂಗಳ ನೋಡಾ’ ಕವಿತೆಯ ವಿಶ್ಲೇಷಣೆಯ ಮೂಲಕ ಆರಂಭಗೊಳ್ಳುವ ಎಸ್‌.ಆರ್‌. ವಿಜಯಶಂಕರ ಅವರ ‘ಬೆಳುದಿಂಗಳ ನೋಡಾ’ ಕೃತಿ, ಲೇಖಕ ತನ್ನ ಓದು ಮತ್ತು ಚಿಂತನೆಗೆ ದಕ್ಕಿದ ಬೆಳುದಿಂಗಳನ್ನು ಸಹೃದಯರೊಂದಿಗೆ ಹಂಚಿಕೊಳ್ಳುವ ಪ್ರಯತ್ನದಂತಿದೆ. ಬೇಂದ್ರೆಯವರ ಬೆಳುದಿಂಗಳ ನೋಟದ ಕವಿತೆಯ ಅರ್ಥಸಾಧ್ಯತೆಗಳನ್ನು ತೆರೆದಿಡುತ್ತಾ ಹೋಗುವ ಬರಹ, ಲೇಖಕರ ತಂದೆಯ ಅಂತಿಮಸಂಸ್ಕಾರದ ನೆನಪಿನೊಂದಿಗೆ ಹೊಸತೊಂದು ಆಯಾಮ ಪಡೆಯುತ್ತದೆ. ಭೌತಿಕ ಶರೀರ ಬೆಂಕಿಯ ಮೂಲಕ ಬೆಳಕಿಗೆ ಸೇರುವ ಪ್ರಕ್ರಿಯೆ ಲೇಖಕರಲ್ಲಿ ಆಧ್ಯಾತ್ಮಿಕ ಲಹರಿಗಳನ್ನು ಉಂಟುಮಾಡುತ್ತದೆ; ಮೃತರ ಬದುಕೇ ಬೆಳುದಿಂಗಳಾಗಿದ್ದುದನ್ನು ಸೂಚಿಸುತ್ತದೆ. ಏಕಕಾಲಕ್ಕೆ ವೈಯಕ್ತಿಕವೂ ಸಾರ್ವತ್ರಿಕವೂ ಆಗುವುದು ಒಳ್ಳೆಯ ಕವಿತೆಯದು ಮಾತ್ರವಲ್ಲ, ಎಲ್ಲ ಒಳ್ಳೆಯ ಬರಹಗಳ ಗುಣವೂ ಹೌದು. ಕಾವ್ಯದ ಆಶಯಪ್ರಧಾನ ವಿಶ್ಲೇಷಣೆಗಳೇ ಹೆಚ್ಚಾಗಿರುವ ಸಂದರ್ಭದಲ್ಲಿ, ಸದ್ಯದ ಅಗತ್ಯವಾಗಿರುವ ರಸಪ್ರಧಾನ ಭಾವಪ್ರಧಾನ ಬರಹಗಳಿಗೆ ಉದಾಹರಣೆಯಾಗಿ ವಿಜಯಶಂಕರರ ‘ಬೆಳುದಿಂಗಳ ನೋಡಾ’ ವಿಶ್ಲೇಷಣೆಯನ್ನು ನೋಡಬಹುದು.

ಬೆಳುದಿಂಗಳ ನೋಡಾ ಎನ್ನುವ ಆಹ್ವಾನ, ಸಂಕಲನದ ಉಳಿದ ಬರಹಗಳಿಗೂ ಅನ್ವಯಿಸುವಂತಹದ್ದು. ಕನ್ನಡ ಸಾಂಸ್ಕೃತಿಕ ಲೋಕದ ಕೆಲವು ತಾರೆಗಳನ್ನು ‘ಇಗೋ ನೋಡಿರಿ’ ಎಂದು ತೋರುವ ತೋರುಬೆರಳಿನಂತೆ ಈ ಕೃತಿಯ ಬರಹಗಳಿವೆ. ಟಿ.ಎಸ್‌. ವೆಂಕಣ್ಣಯ್ಯ, ಟಿ.ವಿ. ವೆಂಕಟಾಚಲಶಾಸ್ತ್ರಿ, ಜಿ. ರಾಮಕೃಷ್ಣ, ಚೆನ್ನವೀರ ಕಣವಿ, ಏರ್ಯ ಲಕ್ಷ್ಮೀನಾರಾಯಣ ಆರ್ಯ, ಉಮಾಕಾಂತ ಭಟ್ಟ, ಷ. ಶೆಟ್ಟರ್‌, ಬರಗೂರು ರಾಮಚಂದ್ರಪ್ಪ ಮುಂತಾದವರ ಕುರಿತ ಬರಹಗಳು ಕೃತಿಗಳ ಮೂಲಕ ವ್ಯಕ್ತಿಯನ್ನೂ, ವ್ಯಕ್ತಿತ್ವದ ನೆರಳು ಕೃತಿಗಳಲ್ಲಿ ಇರುವುದನ್ನೂ ಗುರ್ತಿಸುವ ಪ್ರಯತ್ನಗಳಾಗಿವೆ. ಈ ಕೃತಿ–ವ್ಯಕ್ತಿ ವಿಶೇಷಗಳ ಬರಹಗಳಲ್ಲಿ ವಿಶಿಷ್ಟವಾಗಿ ಕಾಣಿಸುವುದು ಗಿರೀಶ ಕಾರ್ನಾಡ ಹಾಗೂ ಕೆ.ಬಿ. ಸಿದ್ದಯ್ಯನವರ ಕುರಿತಾದ ಬರಹಗಳು. ಕಾರ್ನಾಡರ ನಾಟಕಗಳ ಅನನ್ಯತೆಯನ್ನು ಸೂಚಿಸುತ್ತ, ಆ ಕೃತಿಗಳಷ್ಟೇ ಅವರ ನಿಷ್ಠುರ ಪ್ರಾಮಾಣಿಕ ಹಾಗೂ ಧರ್ಮನಿರಪೇಕ್ಷ ವ್ಯಕ್ತಿತ್ವವೂ ವಿಶಿಷ್ಟವಾಗಿದ್ದುದನ್ನು ವಿಜಯಶಂಕರ್‌ ಗುರ್ತಿಸುತ್ತಾರೆ. ಕಾಲೇಜು ದಿನಗಳಲ್ಲಿ ಕಂಡ ಕೆ.ಬಿ. ಸಿದ್ದಯ್ಯನವರ ವೈಚಾರಿಕತೆ ಮುಂದಿನ ದಿನಗಳಲ್ಲಿ ಅವರ ಕಾವ್ಯದಲ್ಲಿ ಪ್ರಖರವಾಗಿ ಅಭಿವ್ಯಕ್ತಗೊಂಡಿದ್ದನ್ನು ವಿಶ್ಲೇಷಿಸುವ ಮೂಲಕ, ಬಕಾಲ, ಗಲ್ಲೆಬಾನಿಗಳ ಕವಿ–ಕಾವ್ಯದ ಬಗ್ಗೆ ಓದುಗರ ಗಮನಸೆಳೆಯುತ್ತಾರೆ.

ಪುಸ್ತಕದ ಎರಡನೇ ಭಾಗದಲ್ಲಿನ ‘ಇಪ್ಪತ್ತೊಂದನೇ ಶತಮಾನದ ಮೊದಲ ಘಟ್ಟದ ಕನ್ನಡ ಸಾಹಿತ್ಯ’ ಲೇಖನ ಈ ಸಂಕಲನದಲ್ಲಿ ಹೆಚ್ಚು ಕುತೂಹಲ ಕೆರಳಿಸುವ ಹಾಗೂ ಚರ್ಚೆಗೆ ಅವಕಾಶ ಕಲ್ಪಿಸುವ ಬರಹ. 56 ಪುಟಗಳಷ್ಟು ದೀರ್ಘವಾದ ಈ ಬರಹ, 2001ರಿಂದ 2017ರವರೆಗಿನ ಕನ್ನಡ ಸಾಹಿತ್ಯದ ಅವಲೋಕನವಾಗಿದೆ. ಈ ಅವಧಿಯನ್ನು, ಕಳೆದ ಐದು ದಶಕಗಳ ಎಲ್ಲ ಸಾಹಿತ್ಯ ಶ್ರದ್ಧೆಗಳೂ ಸಕ್ರಿಯವಾಗಿರುವ ಕಾಲಘಟ್ಟ ಎಂದು ಸರಿಯಾಗಿಯೇ ಗುರ್ತಿಸಿರುವ ಸಮೀಕ್ಷಕರು, ‘ಸಾಮಾಜಿಕ ಕಳಕಳಿ, ಅನ್ಯಾಯ–ಶೋಷಣೆಗಳ ವಿರುದ್ಧದ ಹೋರಾಟ ಮುಂತಾದ ಆಶಯಗಳು ಸಾಹಿತ್ಯ ಕೃತಿಗಳ ಕಲಾಸಿದ್ಧಿಗಿಂತ ಮುಖ್ಯ’ ಎಂಬ ವಿಚಾರ ರೂಪುಗೊಂಡಿರುವುದರ ಬಗ್ಗೆ ಗಮನಸೆಳೆಯುತ್ತಾರೆ.

ಈ ವಿಚಾರಗಳೆಲ್ಲವೂ ಸರಿಯೆ. ಆದರೆ, ಹೊಸ ಶತಮಾನದ ಮೊದಲೆರಡು ದಶಕಗಳ ಅವಧಿಯಲ್ಲಿ ಗಮನಸೆಳೆದ ಹೊಸ ಲೇಖಕರ ಸಮೀಕ್ಷೆ ಎನ್ನುವ ಕುತೂಹಲದಿಂದ ಓದಿದರೆ ಈ ಬರಹ ನಿರಾಶೆ ಹುಟ್ಟಿಸುತ್ತದೆ. ಈ ಎರಡು ದಶಕಗಳಿಗೆ ಮೊದಲೇ ಬರಹಗಾರರಾಗಿ ಪ್ರಸಿದ್ಧರಾದ ಲೇಖಕರ ಸಾಹಿತ್ಯದ ವಿವೇಚನೆಯೇ ಇಲ್ಲಿ ಹೆಚ್ಚಿನ ಸ್ಥಾನ ಪಡೆದುಕೊಂಡಿದೆ. ಮೂಲಭೂತವಾದವನ್ನು ವಿರೋಧಿಸುವ ಕವಿ ಎಂದು ಆರಿಫ್‌ ರಾಜಾ ಅವರ ಬಗ್ಗೆ ಮೂರ್ನಾಲ್ಕು ಸಾಲುಗಳಲ್ಲಿ ಬರೆಯುವ ವಿಜಯಶಂಕರರು, ಹಿಂದೂಮೂಲಭೂತವಾದದ ವಿರೋಧಿ ದನಿಯಾಗಿ ದೀರ್ಘವಾಗಿ ಚರ್ಚಿಸಿರುವುದು ಎಚ್‌.ಎಸ್‌. ವೆಂಕಟೇಶಮೂರ್ತಿ ಅವರ ಕವಿತೆಯನ್ನು. ತಿರುಮಲೇಶರ ಕಾವ್ಯಕ್ಕೆ ಹೆಚ್ಚಿನ ಅವಕಾಶ ಇರುವ ಸಮೀಕ್ಷೆಯಲ್ಲಿ, ಆಶಯದ ಜೊತೆಗೆ ಕಲಾಸಿದ್ಧಿಯಲ್ಲೂ ಗಮನಾರ್ಹ ಯಶಸ್ಸುಪಡೆದಿರುವ ಲಲಿತಾ ಸಿದ್ಧಬಸವಯ್ಯನವರ ಕಾವ್ಯಕ್ಕೆ ಸಿಕ್ಕಿರುವುದು ಒಂದು ಪ್ಯಾರಾ ಮಾತ್ರ.

ಮೌನೇಶ ಬಡಿಗೇರರ ‘ಮಾಯಾ ಕೋಲಾಹಲ’ದ ಕಥೆಗಳಿಗೆ ವಿಮರ್ಶೆಯ ನ್ಯಾಯ ಸಂದಿದೆಯಾದರೂ, ಕಳೆದೆರಡು ದಶಕಗಳಲ್ಲಿ ಗಮನಾರ್ಹ ಕಥೆಗಳನ್ನು ಬರೆದ ಮಂಜುನಾಥ್‌ ಲತಾ, ಗಂಗಾಧರ ಬೀಚನಹಳ್ಳಿ ಅವರ ಕಥೆಗಳ ಪ್ರಸ್ತಾಪವೇ ಸಮೀಕ್ಷೆಯಲ್ಲಿಲ್ಲ. ಕನ್ನಡ ಕಾದಂಬರಿ ಲೋಕಕ್ಕೆ ಹೊಸ ಸಂವೇದನೆಯೊಂದನ್ನು ಸೇರ್ಪಡೆಗೊಳಿಸಿದ ವಿ.ಎಂ. ಮಂಜುನಾಥರ ‘ಅಸ್ಪೃಶ್ಯ ಗುಲಾಬಿ’ ಕೃತಿಯ ಉಲ್ಲೇಖವೂ ಇಲ್ಲ. ಹೊಸ ಬರಹಗಾರರ ಸಾಹಿತ್ಯವನ್ನು ವಿಮರ್ಶಕರು ಗಮನಿಸುವುದಿಲ್ಲ ಎನ್ನುವ ‘ಜನಪ್ರಿಯ ಆರೋಪ’ಕ್ಕೆ ವಿಯಶಂಕರ ಅವರ ಈ ಸಮೀಕ್ಷೆಯೂ ಹೊರತಾಗಿಲ್ಲ.

ತಮ್ಮ ಬರಹಗಳನ್ನು ಲೇಖಕರು ‘ವಿಮರ್ಶಾ ಪ್ರಬಂಧಗಳು’ ಎಂದು ಕರೆದಿದ್ದಾರೆ. ಆದರೆ, ಪ್ರಬಂಧದ ಶಿಲ್ಪ ಹಾಗೂ ಧ್ವನಿ ಇಲ್ಲಿಲ್ಲ. ವ್ಯಕ್ತಿಚಿತ್ರಗಳೇ ಹೆಚ್ಚಿನ ಪ್ರಮಾಣದಲ್ಲಿರುವ ಈ ಸಂಕಲನದ ರಚನೆಗಳನ್ನು ಲೇಖನಗಳು ಎಂದು ಕರೆಯುವುದೇ ಹೆಚ್ಚು ಸರಿ. ವಿಮರ್ಶಾನ್ಯಾಯ–ಪ್ರಾತಿನಿಧ್ಯದ ದೃಷ್ಟಿಯಿಂದ ಚರ್ಚೆಗೆ ಅವಕಾಶ ಕಲ್ಪಿಸಿದರೂ, ‘ಮದುಮಗಳ ಕಣ್ಣಿನ ಬಗೀ / ಚಂದಿರನ ನಗಿ’ ಇರುವಂಥ ಸಾರಸ್ವತ ಬೆಳುದಿಂಗಳನ್ನ ಸಹೃದಯರೊಂದಿಗೆ ಸೊಗಸಾಗಿ ಹಂಚಿಕೊಂಡಿರುವ ಕಾರಣದಿಂದಾಗಿ ಈ ಕೃತಿ ಆಪ್ತವೆನ್ನಿಸುತ್ತದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು