ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಸ್ತಕ ವಿಮರ್ಶೆ: ಹೌದು, ಇದು ಮಾಮೂಲಿ ಮಾತಲ್ಲ...

Last Updated 22 ಜನವರಿ 2022, 19:31 IST
ಅಕ್ಷರ ಗಾತ್ರ

ಕೃತಿ: ಬೇರೆಯೇ ಮಾತು
ಲೇ: ವಡ್ಡರ್ಸೆ ರಘುರಾಮ ಶೆಟ್ಟಿ
ಸಂ: ದಿನೇಶ್ ಅಮಿನ್‌ಮಟ್ಟು
ಪ್ರ: ಅಹರ್ನಿಶಿ ಪ್ರಕಾಶನ, ಶಿವಮೊಗ್ಗ
ಸಂ: 9449174662/ 9448628511

‘ಉದ್ಯೋಗ ಬೇಡುವ ಬದಲು ಉದ್ದಿಮೆ ಕಟ್ಟಿ ಉದ್ಯೋಗದಾತನಾಗು’ ಎಂಬುದು ವ್ಯಕ್ತಿತ್ವ ವಿಕಸನ ಶಿಬಿರಗಳಲ್ಲಿ ಸಾಮಾನ್ಯವಾಗಿ ಕೇಳಿಬರುವ ಮಾತು. ಇದನ್ನು ಪತ್ರಿಕೋದ್ಯಮಕ್ಕೆ ಅನ್ವಯಿಸುವುದು ಸುಲಭದ ಸಂಗತಿಯಲ್ಲ. ಅದರಲ್ಲೂ ಸಾಮಾನ್ಯ ಪತ್ರಕರ್ತರೊಬ್ಬರು ಮೂರ್ನಾಲ್ಕು ದಶಕಗಳ ಹಿಂದೆಯೇ ಅಂತಹದ್ದೊಂದು ಸಾಹಸಕ್ಕೆ ಮುಂದಾಗುವುದು ಪತ್ರಿಕೋದ್ಯಮದಲ್ಲಿ ಮಹತ್ವದ ಹೆಜ್ಜೆ ಗುರುತೇ ಸರಿ. ವೃತ್ತಿ ಬದುಕಿನ ಬಗ್ಗೆ ಅಗಾಧ ಪ್ರೀತಿ, ಕಟಿಬದ್ಧ ಸಾಮಾಜಿಕ ಕಳಕಳಿ, ಅದಮ್ಯವಾದ ಬರವಣಿಗೆಯ ತುಡಿತದಿಂದಷ್ಟೇ ಅಂತಹದ್ದೊಂದು ಪ್ರಯತ್ನ ಸಾಧ್ಯ.

ಪತ್ರಿಕೋದ್ಯಮದ ಅಆಇಈ ಅನ್ನು ತರಗತಿ ಕೋಣೆಗಳಲ್ಲಿ ಕಲಿತು ಬಂದು, ಪತ್ರಿಕಾಲಯದ ಮೊಗಸಾಲೆಗಳಲ್ಲಿ ‘ಗಟ್ಟಿಕಾಳುಗಳಿಗಿಂತ ಜೊಳ್ಳುಗಳೇ ಹೆಚ್ಚು’ ಎಂಬ ಗೊಣಗಾಟಕ್ಕೆ ಕಾರಣರಾಗುವ ನವಪೀಳಿಗೆಯ ಪತ್ರಕರ್ತರ ಹಿಂದೆ, ಇಂತಹ ಯಾವುದೇ ಮೌಲ್ಯಗಳಿಂದ ಬಹುತೇಕ ಹೊರತಾದ, ಪ್ರಾಯೋಗಿಕ ಕಲಿಕೆಯ ಗಂಧಗಾಳಿ ಇರದ ಅಂಶಗಳೇ ಹೆಚ್ಚಾಗಿ ಕೆಲಸ ಮಾಡುತ್ತವೆ. ದಿನದಿನಕ್ಕೂ ಸೂಕ್ಷ್ಮವಾಗುತ್ತಿರುವ ಪತ್ರಿಕೋದ್ಯಮದ ಇಂತಹ ಜಟಿಲ ಸಮಸ್ಯೆಗಳಿಗೆ ಧೀಮಂತ ಪತ್ರಕರ್ತ ವಡ್ಡರ್ಸೆ ರಘುರಾಮ ಶೆಟ್ಟಿ ಅವರ ಬದುಕು– ಬರಹ ಸಮರ್ಪಕ ಉತ್ತರವಾಗಬಲ್ಲದು.

ಪತ್ರಿಕಾ ವೃತ್ತಿಯು ಪತ್ರಿಕೋದ್ಯಮ ಆಗಿ ಬದಲಾದ 1991ರ ಹೊಸ ಆರ್ಥಿಕ ನೀತಿಯ ನಂತರದ ಕಾಲಘಟ್ಟಕ್ಕೆ ಮುನ್ನವೇ ಓದುಗರಿಂದ ಷೇರು ಹಣ ಸಂಗ್ರಹಿಸಿ, 1984ರಲ್ಲಿ ಅವರು ಆರಂಭಿಸಿದ ‘ಮುಂಗಾರು’ ‍‍ಪತ್ರಿಕೆ ಆ ಕಾಲಕ್ಕಷ್ಟೇ ಅಲ್ಲ ಇಂದಿಗೂ ಒಂದು ದಾಖಲೆಯೇ. ಸಂಪಾದಕನ ಹೆಸರು ಕೇಳುತ್ತಿದ್ದಂತೆಯೇ ಕಣ್ಣರಳಿಸುವ ಶಿಷ್ಯಪಡೆ, ಎರಡು ಬಗೆಯಲ್ಲಿ ಪತ್ರಿಕೋದ್ಯಮಕ್ಕೆ ಮಾದರಿಯಾಗಿ ನಿಲ್ಲಬಲ್ಲ ಕಸುವನ್ನು ತಾನು ಸ್ಥಗಿತಗೊಂಡ ಎರಡೂವರೆ ದಶಕಗಳ ಬಳಿಕವೂ ಉಳಿಸಿಕೊಂಡಿದೆ ಎಂದಾದರೆ, ಅಂತಹದ್ದೊಂದು ಪತ್ರಿಕೆ ಭೌತಿಕವಾಗಿ ಸೋತಿದ್ದರೂ ನೈತಿಕವಾಗಿ ಗೆದ್ದಿದೆ ಎಂದೇ ಅರ್ಥ. ವಡ್ಡರ್ಸೆ ಅವರ ಬರಹದ ಅಕ್ಷರ ಅಕ್ಷರದಲ್ಲೂ ಪುಟಿಯುವ ಜನಪರ ಕಾಳಜಿ ಒಬ್ಬ ವೃತ್ತಿನಿರತ ಪತ್ರಕರ್ತನಿಗೆ ಮೇರು ಮಾದರಿಯಾದರೆ, ಅದೆಲ್ಲಾ ಇದ್ದೂ ‘ವ್ಯಾಪಾರಿ ಜಾಣ್ಮೆ’ಯ ಭದ್ರ ಬುನಾದಿ ಇಲ್ಲದಿದ್ದರೆ ಅಂತಹದ್ದೊಂದು ‘ಆದರ್ಶ ಸೌಧ’ ಕಣ್ಣೆದುರೇ ಕುಸಿದುಹೋಗುವ ದುರಂತಮಯ ಚಿತ್ರಣವನ್ನು, ಆ ಮೂಲಕ ಪತ್ರಿಕೆಯೊಂದನ್ನು ಮುನ್ನಡೆಸಲು ಬೇಕಾದ ಆಡಳಿತಾತ್ಮಕ ಒಳಸುಳಿಗಳನ್ನು ಪತ್ರಿಕೆಯ ಮಾಲೀಕರಾಗುವ ಕನಸು ಹೊತ್ತವರಿಗೆ ‘ಮುಂಗಾರು’ ನೀಡುತ್ತದೆ.

ಕಾಲಗರ್ಭದಲ್ಲಿ ಹುದುಗಿಹೋಗಬಹುದಾಗಿದ್ದ ವಡ್ಡರ್ಸೆ ಅವರ ಬರಹಗಳನ್ನು ದಶಕಗಳ ಕಾಲ ಜತನದಿಂದ ಕಾಯ್ದುಕೊಂಡು ಬಂದು, ಪುಸ್ತಕದ ರೂಪ ಕೊಟ್ಟಿರುವ ‘ಮುಂಗಾರು ಪ್ರಾಡಕ್ಟ್‌’ ದಿನೇಶ್‌ ಅಮಿನ್‌ಮಟ್ಟು ಅವರೇ ಒಂದರ್ಥದಲ್ಲಿ ಈಗ ‘ಬೇರೆಯೇ ಮಾತು’ವಿನ ವಾರಸುದಾರ. ಗುರುವಿನ ಮೇಲೆ ಭಕ್ತಿಯೊಟ್ಟಿಗೆ ಅದಮ್ಯ ಪ್ರೀತಿಯೂ ಇದ್ದರಷ್ಟೇ ಶಿಷ್ಯನೊಬ್ಬ ಮಾಡಬಹುದಾದ ಕೆಲಸ ಇದು.

ವೈಚಾರಿಕ ಕ್ರಾಂತಿಗೆ ನಾಂದಿ ಹಾಡುವ ‘ಚಿಂತನೆಯ ಬೆಳೆ’, ರಾಜಕೀಯ ನೇತಾರರ ವ್ಯಕ್ತಿಚಿತ್ರಣ ಕಟ್ಟಿಕೊಡುವ ‘ನಮ್ಮವರು’ ಮತ್ತು ಪತ್ರಿಕೆಯೊಂದು ಓದುಗರಿಗೆ ಕೊಡಬೇಕಾದ ಪ್ರಾಶಸ್ತ್ಯವನ್ನು ಎತ್ತಿಹಿಡಿಯುವ ‘ಓದುಗರೊಡನೆ ಸಂಪಾದಕ’ ಎಂಬ ಮೂರು ವಿಭಾಗಗಳಲ್ಲಿ ಇರುವ ವಡ್ಡರ್ಸೆ ಅವರ ಬರಹಗಳು ಇಂದು ಬರೆದವೇನೋ ಎಂಬಷ್ಟು ಪ್ರಸ್ತುತವಾಗಿವೆ. ಪತ್ರಿಕೆ– ಓದುಗರ ನಡುವಿನ ನವಿರಾದ ಸಂಬಂಧಕ್ಕೆ ಗಟ್ಟಿ ನೆಲೆಯನ್ನು ಒದಗಿಸುತ್ತವೆ. ಅಂದಹಾಗೆ, ಆರಂಭದಲ್ಲಿ ಮೂಡಿಸಿದ್ದ ಸಂಚಲನವನ್ನು ಈಗ ಕೇಳಿದರೂ ಮೂಡಿಸುವಂತಿರುವ ಈ ಪತ್ರಿಕೆಯ ಘೋಷವಾಕ್ಯ ‘ಚಿಂತನೆಯ ಮಳೆ ಹರಿಸಿ ಜನಶಕ್ತಿಯ ಬೆಳೆ ತೆಗೆವ ಮುಂಗಾರು’.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT