ಶನಿವಾರ, ಮಾರ್ಚ್ 6, 2021
18 °C

ಡಿಜಿಟಲ್ ಜಗತ್ತಿನ ಬುಕ್ ಬ್ರಹ್ಮ!

ಪದ್ಮನಾಭ ಭಟ್‌ Updated:

ಅಕ್ಷರ ಗಾತ್ರ : | |

Prajavani

ಕೃತಿ–ಕರ್ತೃ–ಪ್ರಕಾಶಕ–ಓದುಗರೆಂಬ ನಾಲ್ಕು ವಿಮುಖಗಳನ್ನು ಮುಖಾಮುಖಿಯಾಗಿಸುವ ಜಾಗವೊಂದಿದ್ದರೆ ಎಷ್ಟು ಚೆನ್ನಾಗಿತ್ತಲ್ಲವೇ ಎಂಬ ಕನಸನ್ನು ಡಿಜಿಟಲ್ ಜಗತ್ತಿನಲ್ಲಿ ನನಸು ಮಾಡುವ ಉದ್ದೇಶದಿಂದಲೇ ಅವತರಿಸಿದ ‘ಬುಕ್‌ ಬ್ರಹ್ಮ’ನ ಕುರಿತ ಮಾಹಿತಿ ಇಲ್ಲಿದೆ.

***

ಕೆಲವು ವರ್ಷಗಳ ಹಿಂದೆ ‘ಚುಕುಬುಕ್ಕು’ ಎಂಬ ಹೆಸರಿನ ಕನ್ನಡ ವೆಬ್‌ ಸೈಟ್‌ ಒಂದು ಕನ್ನಡ ಪುಸ್ತಕ ಪ್ರೇಮಿಗಳ ನಲ್ದಾಣವಾಗಿ ಗಮನ ಸೆಳೆದಿತ್ತು. ಸಾಹಿತಿಗಳು, ಸಾಹಿತ್ಯ, ಓದುಗರು ಮತ್ತು ಪ್ರಕಾಶಕರೆಂಬ ಭಿನ್ನ ದಿಕ್ಕುಗಳನ್ನು ಒಂದೇ ಬಿಂದುವಿನಲ್ಲಿ ಮೇಲೆ ಸೇರಿಸುವ ಈ ಪುಸ್ತಕ ರೈಲು ಹೆಚ್ಚು ದೂರ ಕ್ರಮಿಸಲಾಗದೆ ನಿಂತುಹೋಯಿತು. ಆದರೆ ತನ್ನ ಚೇತೋಹಾರಿ ಪ್ರಯತ್ನದಿಂದ ‘ಚುಕುಬುಕ್ಕು ಇನ್ನೂ ಹಲವು ಓದುಗರ ಮನಸಲ್ಲಿ ನೆನಪಾಗಿ ಉಳಿದುಕೊಂಡಿದೆ. 

ಈಗ ಅಂಥದ್ದೇ ಇನ್ನೊಂದು ಪ್ರಯತ್ನ ಇನ್ನಷ್ಟು ವ್ಯವಸ್ಥಿತವಾಗಿ, ವಿಸ್ತಾರವಾಗಿ ನಡೆಯುತ್ತಿದೆ. ಈ ಪ್ರಯತ್ನದ ಹೆಸರು ‘ಬುಕ್ ಬ್ರಹ್ಮ’. ಫೇಸ್‌ಬುಕ್‌ನಲ್ಲಿರುವ ಪುಸ್ತಕ ಪ್ರೇಮಿಗಳಿಗೆ ಈಗಾಗಲೇ ಈ ‘ಬ್ರಹ್ಮ’ನ ಸೃಷ್ಟಿಯ ಸುಳಿವು ಸಿಕ್ಕಿರುತ್ತದೆ. ಕಳೆದ ಒಂದೂವರೆ ವರ್ಷದಿಂದ ನಿರಂತರ ಸೃಷ್ಟಿಕಾರ್ಯದಲ್ಲಿ ತೊಡಗಿದ್ದ ಈ ಬ್ರಹ್ಮ ಇದೇ ಆಗಸ್ಟ್‌ 15ರಂದು ಮರೆಯಿಂದ ಸ್ವತಂತ್ರಗೊಂಡು ಜನರೆದುರು ಬರಲಿದ್ದಾನೆ.

ಏನಿದು ಬುಕ್ ಬ್ರಹ್ಮ?

ಕನ್ನಡದಲ್ಲಿ ವರ್ಷಕ್ಕೆ ಆರರಿಂದ ಏಳು ಸಾವಿರ ಪುಸ್ತಕಗಳು ಬರುತ್ತವೆ. ಅವುಗಳಲ್ಲಿ ಆಸಕ್ತ ಓದುಗವಲಯಕ್ಕೆ ತಲುಪುವ ಭಾಗ್ಯವನ್ನು ಪಡೆದಿರುವ ಪುಸ್ತಕಗಳೆಷ್ಟು ಎಂದು ನೋಡಿದರೆ ಸಂಖ್ಯೆ ಕಾಲು ಭಾಗಕ್ಕೂ ನಿಲ್ಲುವುದಿಲ್ಲ. ಪತ್ರಿಕೆಗಳಲ್ಲಿ ಬರುವ ವಿಮರ್ಶೆ, ಟಾಪ್‌ ಟೆನ್ ಪಟ್ಟಿ, ಪುಸ್ತಕ ಪಟ್ಟಿ, ಸಾಮಾಜಿಕ ಜಾಲತಾಣಗಳಲ್ಲಿ ಬರುವ ವಿವರಗಳು ಎಲ್ಲ ಸೇರಿದರೂ ನಮಗೆ ಸಿಗುವ ಪುಸ್ತಕಗಳ ಮಾಹಿತಿ ಸಾವಿರದೈನೂರು ದಾಟುವುದು ಕಷ್ಟ. ಅತ್ತ ಓದುಗನಿಗೆ ತನ್ನ ಆಸಕ್ತಿಯ ವಿಷಯಗಳ ಕುರಿತು ಬಂದ ಕೃತಿಗಳ ಮಾಹಿತಿ ಸಿಗದೆ, ಇತ್ತ ಬರಹಗಾರನಿಗೆ ತನ್ನ ಕೃತಿಗೆ ಜನರಿಂದ ಪ್ರತಿಕ್ರಿಯೆ ಸಿಗದೆ, ಮತ್ತೊಂದೆಡೆ ಪ್ರಕಾಶಕನಿಗೆ ಲಾಭ ಹೋಗಲಿ, ಬಂಡವಾಳದ ಬಾಬತ್ತೂ ಮರಳದೇ ಇರುವ ತ್ರಿಶಂಕು ಸ್ಥಿತಿಯಲ್ಲಿ ಪುಸ್ತಕೋದ್ಯಮ ಬೆಳೆಯಲು ಸಾಧ್ಯವೇ? ಎಷ್ಟೋ ವರ್ಷಗಳಿಂದ ಪುಸ್ತಕೋದ್ಯಮ ಎದುರಿಸುತ್ತಿರುವ ಈ ಯಕ್ಷಪ್ರಶ್ನೆಗೆ ಉತ್ತರ ಹುಡುಕುವ ಪ್ರಯತ್ನದ ಫಲವಾಗಿಯೇ ಬುಕ್ ಬ್ರಹ್ಮ ಅವತರಿಸಿದ್ದು.

‘ಓದುಗರಿಗೆ ಪುಸ್ತಕದ ಮಾಹಿತಿ ಕೊಡುವುದು, ಲೇಖಕರಿಗೆ ವಿಮರ್ಶೆಯನ್ನು ಒದಗಿಸಿಕೊಡುವುದು, ಪ್ರಕಾಶಕರಿಗೆ ಹೊಸ ಓದುಗವರ್ಗವನ್ನು ಒದಗಿಸಿಕೊಡುವುದು ಮತ್ತು ಈ ಎಲ್ಲರ ನಡುವಿನ ಗ್ಯಾಪ್‌ ಅನ್ನು ತುಂಬುವಂಥ ಒಂದು ವೇದಿಕೆಯನ್ನು ರೂಪುಗೊಳಿಸುವುದು ನಮ್ಮ ಉದ್ದೇಶ’ ಎನ್ನುತ್ತಾರೆ ‘ಬುಕ್‌ ಬ್ರಹ್ಮ’ದ ಸಂಪಾದಕ ದೇವು ಪತ್ತಾರ.

‘ವರ್ಷಕ್ಕೆ ಸುಮಾರು ಇನ್ನೂರೈವತ್ತು ಸಿನಿಮಾಗಳು ಬಿಡುಗಡೆಯಾಗುವ ಕನ್ನಡ ಚಿತ್ರರಂಗವನ್ನು ನಾವು ‘ಇಂಡಸ್ಟ್ರಿ’ ಎಂದು ಕರೆಯುತ್ತೇವೆ. ಅದಕ್ಕೊಂದು ವ್ಯವಸ್ಥಿತ ಇಂಡಸ್ಟ್ರಿಯ ಸ್ವರೂಪವೂ ಇದೆ. ಆದರೆ ವರ್ಷಕ್ಕೆ ಸುಮಾರು 6,000 ಪುಸ್ತಕಗಳು ಬಿಡುಗಡೆಯಾಗುವ ಪುಸ್ತಕ ಕ್ಷೇತ್ರವನ್ನು ನಾವು ಇಂಡಸ್ಟ್ರಿ ಎಂದು ಕರೆಯುವುದಿಲ್ಲ. ಅದಿನ್ನೂ ಅಸಂಘಟಿತವಾಗಿಯೇ ಇದೆ. ಈ ವೈರುಧ್ಯಕ್ಕೆ ಏನೆನ್ನೋಣ?’ ಎಂದು  ಪ್ರಶ್ನೆಯಲ್ಲಿಯೇ ತಮ್ಮ ಪ್ರಯತ್ನದ ಉದ್ದೇಶವನ್ನೂ ಸೂಚ್ಯವಾಗಿ ಹೇಳುತ್ತಾರೆ ಅವರು. 

‘ವರ್ಬಿಂಡನ್ ಕಮ್ಯೂನಿಕೇಶನ್ಸ್‌’ ಎನ್ನುವ ಬೆಂಗಳೂರು ಮೂಲದ ಬಹುರಾಷ್ಟ್ರೀಯ ಕಂಪನಿ ಈ ಪುಸ್ತಕ ಪ್ರಯತ್ನಕ್ಕೆ ಬೆಂಬಲವಾಗಿ ನಿಂತಿದೆ. 20 ಜನರ ತಂಡ ಒಂದೂವರೆ ವರ್ಷದಿಂದ ಈ ವೆಬ್‌ಸೈಟ್ ಈಗಿನ ಸ್ವರೂಪಕ್ಕೆ ಬರಲು ಶ್ರಮಿಸಿದ್ದಾರೆ. 

ಬುಕ್ ಬ್ರಹ್ಮ ಹೇಗಿರುತ್ತದೆ?

ಮುಖ್ಯವಾಗಿ ಇದು ಹೊತ್ತಿಗೆ ಪ್ರೀತಿಯನ್ನು ಉತ್ತಿಬಿತ್ತಿ ಬೆಳೆಯುವ ತಾಣ. ಸದ್ಯಕ್ಕೆ ಇದರಲ್ಲಿ 5,000 ಪುಸ್ತಕಗಳ ಮಾಹಿತಿ ಇದೆ. ಜೊತೆಗೆ 2,000 ಕನ್ನಡ ಲೇಖಕರ ಪರಿಚಯವೂ ಇದೆ. ಸೃಜನಶೀಲ ಸಾಹಿತ್ಯ, ವಿಜ್ಞಾನ, ವ್ಯಕ್ತಿತ್ವ ವಿಕಸನ, ಸಂಪಾದನೆ, ವಿಮರ್ಶೆ, ಸಿನಿಮಾ, ಜನಪದ, ದೃಶ್ಯಕಲೆ, ಮಾನವಿಕ, ಕೃಷಿ, ಧರ್ಮ, ಹಾಸ್ಯ, ಮಕ್ಕಳ ಸಾಹಿತ್ಯ ಹೀಗೆ ಹಲವು ವಿಭಾಗ ಮಾಡಿಕೊಂಡು ಪುಸ್ತಕಗಳ ಮುಖಪುಟ ಮತ್ತು ಮಾಹಿತಿಯನ್ನು ನೀಡಲಾಗಿದೆ. 

ಪ್ರತಿ ಪುಸ್ತಕದ ಪುಟ, ಬೆಲೆ, ಪ್ರಕಾಶನಗಳ ತಾಂತ್ರಿಕ ವಿವರಗಳು, ಆಯಾ ಕೃತಿಯಲ್ಲಿ ಏನಿದೆ ಎನ್ನುವುದರ ಕುರಿತು ಒಂದು ಪುಟ್ಟ ಟಿಪ್ಪಣಿ ಮತ್ತು ಆ ಕೃತಿಯನ್ನು ಎಲ್ಲಿ ಕೊಳ್ಳಬಹುದು ಎಂಬುದರ ಮಾಹಿತಿ ಇರುತ್ತದೆ. ಆನ್‌ಲೈನ್ ಮೂಲಕ ಖರೀದಿಸಬಹುದಾದರೆ ವೆಬ್‌ಸೈಟ್‌ ವಿಳಾಸ ಮತ್ತು ನೇರವಾಗಿ ಖರೀದಿಸುವವರಿಗೆ ಪ್ರಕಾಶಕರ ವಿಳಾಸವನ್ನು ನೀಡಲಾಗಿದೆ. ಜೊತೆಗೆ ಆ ಪುಸ್ತಕಗಳ ಬಗ್ಗೆ ಬೇರೆ ಬೇರೆ ಪತ್ರಿಕೆಗಳಲ್ಲಿ, ಜಾಲತಾಣಗಳಲ್ಲಿ, ಅಥವಾ ಫೇಸ್‌ಬುಕ್‌ಗಳಲ್ಲಿ ಪ್ರಕಟವಾಗಿರುವ ಬರಹಗಳ ಕೊಂಡಿಗಳನ್ನೂ ನೀಡಲಾಗುತ್ತದೆ.

ಕನ್ನಡದ 50 ಪ್ರಾತಿನಿಧಿಕ ಲೇಖಕರ ಸಮಗ್ರ ಕೃತಿಗಳು ಮತ್ತು ಅವರ ಕುರಿತಾಗಿ ಬಂದಿರುವ ಕೃತಿಗಳ ವಿವರಗಳು ಬುಕ್‌ ಬ್ರಹ್ಮದಲ್ಲಿ ಲಭ್ಯವಿವೆ. ಆದರೆ ಈ ವೆಬ್‌ಸೈಟ್ ಮೂಲಕ ಪುಸ್ತಕಗಳನ್ನು ಕೊಳ್ಳಲು ಸಾಧ್ಯವಿಲ್ಲ. ಇಲ್ಲಿನ ಮಾಹಿತಿಗಳನ್ನು ಬಳಸಿಕೊಂಡು ಬೇರೆಡೆ ಕೊಳ್ಳಬಹುದಷ್ಟೆ.

ಮಲ್ಟಿಮೀಡಿಯಾ ಬಲ

‘ನಾವು ಇಲ್ಲಿಯವರೆಗೆ ಅರ್ಧದಷ್ಟು ಕ್ಲಾಸಿಕ್ ಕೃತಿಗಳ ಪುಸ್ತಕ ಮಾಹಿತಿಯನ್ನು ಲಗತ್ತಿಸಿದ್ದೇವೆ ಮತ್ತರ್ಧ ಸಮಕಾಲೀನ ಕೃತಿಗಳ ಮಾಹಿತಿ ಸಂಗ್ರಹಿಸಿದ್ದೇವೆ. ಮುಂದಿನ ದಿನಗಳಲ್ಲಿ ಸಮಕಾಲೀನ ಕೃತಿಗಳ ಮೇಲೆಯೇ ಹೆಚ್ಚು ಗಮನ ಕೇಂದ್ರೀಕರಿಸುವ ಆಲೋಚನೆ ಇದೆ. ಪ್ರತಿದಿನವೂ ಅವತ್ತು ಬಿಡುಗಡೆಯಾದ ಪುಸ್ತಕಗಳ ಕುರಿತು ಮಾಹಿತಿ ಅಪ್‌ಡೇಟ್ ಮಾಡುವ ರೀತಿಯಲ್ಲಿ ಸುವ್ಯವಸ್ಥಿತವಾಗಿ ಕಾರ್ಯನಿರ್ವಹಿಸುವ ಯೋಜನೆ ನಮ್ಮದು’ ಎನ್ನುತ್ತಾರೆ ದೇವು. 

ಪುಸ್ತಕಗಳ ಮುಖಪುಟ ಮತ್ತು ಮಾಹಿತಿಗಷ್ಟೇ ಈ ಜಾಗ ಸೀಮಿತವಾಗಲ್ಲ. ಅಂತರ್ಜಾಲದ ಹೊಸ ಸಾಧ್ಯತೆಗಳನ್ನು ಬಳಸಿಕೊಂಡು ಬಹುಮಾಧ್ಯಮದ ಮೂಲಕ ಪುಸ್ತಕ ಕಂಪನ್ನು ಹರಡುವುದರಲ್ಲಿಯೂ ಹಿಂದೆ ಬಿದ್ದಿಲ್ಲ. ಅಕ್ಷರರೂಪದ ಮಾಹಿತಿಗಳಷ್ಟೇ ಅಲ್ಲದೆ, ಆಡಿಯೊ, ವಿಡಿಯೊ ಮೂಲಕವೂ ಪುಸ್ತಕಗಳ ಬಗ್ಗೆ ಚರ್ಚೆ, ಮಾತುಕತೆ, ಸಂದರ್ಶನ, ಪರಿಚಯ ನೀಡಲಾಗುತ್ತದೆ. ಬುಕ್‌ ಬ್ರಹ್ಮವೇ ತಯಾರಿಸಿದ ಆಡಿಯೊ ವಿಡಿಯೊಗಳ ಜೊತೆಗೆ ಪಬ್ಲಿಕ್ ಪ್ಲಾಟ್‌ಫಾರಂಗಳಲ್ಲಿ ಮಹತ್ವದ ಆಡಿಯೊ, ವಿಡಿಯೊಗಳ ಲಿಂಕ್‌ ಅನ್ನೂ ನೀಡಲಾಗುವುದು.  

ಈಗಾಗಲೇ ಫೇಸ್‌ಬುಕ್‌ನಲ್ಲಿ ಬುಕ್‌ ಬ್ರಹ್ಮದ ಪುಟ ಸಾಹಿತ್ಯಪ್ರಿಯರ ಗಮನ ಸೆಳೆದಿದೆ. ಕನ್ನಡದ ಹಲವು ಸಾಹಿತಿಗಳು ಈ ಪ್ರಯತ್ನಕ್ಕೆ ಶುಭವನ್ನೂ ಹಾರೈಸಿದ್ದಾರೆ. ಅಚ್ಚುಕಟ್ಟಾದ ಮಾಹಿತಿ ಮತ್ತು ಅಂದವಾದ ವಿನ್ಯಾಸ ಈ ಬ್ರಹ್ಮನ ಅಗ್ಗಳಿಕೆ. ಸಾಹಿತ್ಯವಲಯದಿಂದ ಮತ್ತು ಪುಸ್ತಕಪ್ರೇಮಿಗಳಿಂದ ಬಂದಿರುವ ಈ ಸಕಾರಾತ್ಮಕ ಸ್ಪಂದನ ‘ಬ್ರಹ್ಮ’ನ ಹಿಂಬದಿಯಲ್ಲಿ ಕೆಲಸ ಮಾಡುತ್ತಿರುವ ತಂಡಕ್ಕೆ ಹೊಸ ಉತ್ಸಾಹವನ್ನು ತಂದಿದೆ. 

‘ಆಧುನಿಕ ಪರಿಭಾಷೆಯಲ್ಲಿ ಕನ್ನಡವನ್ನು, ಕನ್ನಡ ಭಾಷಾ ಸಾಹಿತ್ಯವನ್ನು ಉಳಿಸುವ ಮತ್ತು ಬೆಳೆಸುವ ಪ್ರಯತ್ನ ನಮ್ಮದು’ ಎನ್ನುವ ದೇವು ಅವರ ಮಾತು ಈ ವೆಬ್‌ಸೈಟಿನ ಮಹತ್ವವನ್ನೂ ಮುಂದಿನ ದಿಕ್ಸೂಚಿಯನ್ನೂ ಒಟ್ಟೊಟ್ಟಿಗೇ ಸೂಚಿಸುವ ಹಾಗಿದೆ. 

www.bookbrahma.com ಈ ವಿಳಾಸದ ಚುಂಗು ಹಿಡಿದು ನೀವೂ ಬುಕ್‌ ಬ್ರಹ್ಮನ ಅಂಗಳದಲ್ಲಿ ಒಂದು ಸುತ್ತು ಹಾಕಿ ಬರಬಹುದು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು