ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಸ್ತಕ ವಿಮರ್ಶೆ | ಎಷ್ಟೊಂದು ಮಸಾಲೆ ದೋಸೆ!

Last Updated 27 ನವೆಂಬರ್ 2022, 3:03 IST
ಅಕ್ಷರ ಗಾತ್ರ

ಘಮಘಮ ಮಸಾಲೆ ದೋಸೆ
(ಮಸಾಲೆ ದೋಸೆಗೆ ಸಂಬಂಧಿಸಿದ ಹಿರಿಯ ಲೇಖಕರ ಆಯ್ದ ಬರಹಗಳು)
ಸಂಪಾದಕ: ವೈ.ಎನ್‌.ಗುಂಡೂರಾವ್‌
ಪ್ರ: ಅಂಕಿತ ಪುಸ್ತಕ, ಬೆಂಗಳೂರು
ಸಂ: 9019190502

ಕಾದ ಕಾವಲಿಯ ಮೇಲೆ ತಣ್ಣೀರು ಚುಮುಕಿಸಿ, ಎದ್ದ ಹಬೆಯೊಳಗೆ ಹಿಟ್ಟು ಹಾಕಿ, ಗಿರ್‍ರೆಂದು ತಿರುಗಿಸಿ ಮೇಲೊಂದಿಷ್ಟು ಅಭ್ಯಂಜನವಾಗಿ (ಸ್ಪೆಷಲ್ಲಾದರೆ ತುಪ್ಪ), ಸಾಫ್ಟ್‌/ರೋಸ್ಟ್‌ ಆಗಿ ಸುತ್ತಿಬರುವ ಮಸಾಲೆ ದೋಸೆ ಸುತ್ತ ಅದೆಷ್ಟೋ ಕಥೆಗಳಿವೆ, ಸಂಬಂಧಗಳಿವೆ, ನೆನಪುಗಳಿವೆ. ಅಂತಹ ಅನುಭವಗಳ ಆಯ್ದ ಬರಹಗಳ ಕೃತಿ ‘ಘಮಘಮ ಮಸಾಲೆ ದೋಸೆ’.

ಇಲ್ಲಿ ಸವಿದವರ ಪಟ್ಟಿ ದೊಡ್ಡದೇ ಇದೆ. ವಿ.ಸೀ ಅವರಿಂದ ಹಿಡಿದು ಪು.ತಿ.ನ, ನಿಸಾರ್‌ ಅಹಮದ್‌ವರೆಗೆ ಹಲವರು ಇಲ್ಲಿ ದೋಸೆ ಮೆಲ್ಲಲು ಕೂತಿದ್ದಾರೆ. ಕೃತಿಯ ಆರಂಭದಲ್ಲೇ ಮಸಾಲೆ ದೋಸೆಗೆ ದೋಸೆಗಳ ರಾಜನ ಪಟ್ಟವನ್ನು ನೀಡಿರುವ ಸಂಪಾದಕ ವೈ.ಎನ್‌.ಗುಂಡೂರಾವ್‌, ವಿದ್ಯಾರ್ಥಿ ಭವನದ ಮಸಾಲೆ ದೋಸೆಯ ನೆನಪಿನ ಬುತ್ತಿ ಬಿಚ್ಚಿಡುತ್ತಾರೆ.ವಿದ್ಯಾರ್ಥಿ ಭವನಕ್ಕೆ ದೋಸೆ ಮೆಲ್ಲಲು ಬರುತ್ತಿದ್ದ ಸಾಹಿತಿಗಳ ಪಟ್ಟಿ ಅಲ್ಲಿನ ಮೆನುವಿಗಿಂತ ದೊಡ್ಡದಿದೆ ಎನ್ನುವುದನ್ನು ಗುಂಡೂರಾವ್‌ ದಾಖಲಿಸುತ್ತಾರೆ. ಡಿ.ವಿ.ಜಿ ಅವರ ಹಾವಭಾವವೇ ಇಲ್ಲಿನ ಆರ್ಡರ್‌! ಒಟ್ಟಾರೆ ವಿದ್ಯಾರ್ಥಿ ಭವನ, ಎಂ.ಟಿ.ಆರ್‌., ಕೃಷ್ಣ ಭವನ ಇತ್ಯಾದಿ ಇತ್ಯಾದಿ ಮಸಾಲೆ ದೋಸೆಯ ಲೋಕಕ್ಕೂ ಸಾಹಿತ್ಯ ಲೋಕಕ್ಕೂ ಇದ್ದ ಸಂಪರ್ಕಕೊಂಡಿಯನ್ನು ವಿಸ್ತೃತವಾಗಿ ಅವರಿಲ್ಲಿ ವಿವರಿಸಿದ್ದಾರೆ.

ಮುಖ್ಯಮಂತ್ರಿಯಾಗಿದ್ದಾಗ ಎಸ್‌.ಎಂ.ಕೃಷ್ಣ ಅವರು ಇದೇ ಹೋಟೆಲ್‌ನಲ್ಲಿ ಮಸಾಲೆ ದೋಸೆ ಸವಿದು, ವಿಪಕ್ಷಗಳ ಕೈಯಿಂದ ಟೀಕೆಯ ತುಪ್ಪ ಸುರಿಸಿಕೊಂಡಿದ್ದ ಬಗ್ಗೆಯೂ ಎಚ್‌.ಎಲ್‌.ಕೇಶವಮೂರ್ತಿ ಉಲ್ಲೇಖಿಸಿದ್ದಾರೆ.

ಯಾವು‘ದೋ ಸೆ’ಳೆತ ಎಂಬ ಲೇಖನದಲ್ಲಿ ಶತಾವಧಾನಿ ಆರ್‌.ಗಣೇಶ್‌, ‘ದೋಸೆಯ ನಿರ್ಮಿತಿ ಕಲೆಗಳ ಕಲೆ’ ಎನ್ನುತ್ತಾ, ‘ರುಬ್ಬುವುದೊಂದು ಕಲೆ, ಹುಯ್ಯುವುದೊಂದು ಕಲೆ, ಇದಕ್ಕೆ ತಕ್ಕ ‘ಪಕ್ಕವಾದ್ಯ’ಗಳನ್ನು (ಚಟ್ನಿ, ಪಲ್ಯ ಇತ್ಯಾದಿ) ರೂಪಿಸಿಕೊಳ್ಳುವುದು ಮತ್ತೊಂದು ಕಲೆ. ರಸಿಕತೆಯಿಂದ ಸವಿಯುವುದುದಂತೂ ಮಹಾಕಲೆ’ ಎನ್ನುತ್ತಾ ದೋಸೆಯ ಹಲವು ಮಗ್ಗುಲುಗಳನ್ನು ವರ್ಣಿಸಿದ್ದಾರೆ.

ವಿ.ಸೀ ಅವರು ದೋಸೆಯ ಹಿರಿಮೆಯನ್ನು ಹೀಗೆ ವಿವರಿಸುತ್ತಾರೆ. ‘ಉಳಿದ ಎಲ್ಲವನ್ನೂ ಹತ್ತು ಜನರಿಗಾಗಿ ಒಟ್ಟಿಗೆ ಮಾಡುತ್ತಾರೆ. ನಿಮಗಾಗಿಯೇ ಪ್ರತ್ಯೇಕವಾಗಿ ಮಾಡುವುದಿಲ್ಲ. ಹತ್ತು ಜನಕ್ಕೆ ಮಾಡಿದುದರಲ್ಲಿ ನಿಮಗೂ ಭಾಗ; ಹತ್ತರಲ್ಲಿ ನೀವು ಹನ್ನೊಂದು. ದೋಸೆ ಹಾಗಲ್ಲ. ನೀವು ಹೇಳಿದಂತೆ ನಿಮಗೇ ಪ್ರತ್ಯೇಕವಾಗಿ ಅದನ್ನು ಮಾಡಿಕೊಡುತ್ತಾರೆ. ಎರಡು ವ್ಯಕ್ತಿತ್ವಗಳಿಗೆ ಬೆಲೆ ಇಲ್ಲಿ. ದೋಸೆಗೆ, ನಿಮಗೆ’. ವಿ.ಸೀ ಅವರಂತೆ ನೀವೆಂದಾದರೂ ಯೋಚಿಸಿದ್ದೀರಾ? ಅಷ್ಟೇ ಅಲ್ಲ, ಯಾರನ್ನೂ, ಯಾವುದನ್ನೂ ಹೊಗಳದ ಹೆಂಗಸಿನ ಮನೋವೃತ್ತಿ ಮಸಾಲೆ ದೋಸೆಯ ಮುಂದೆ ಮಂಕಾಗುವುದನ್ನೂ ವಿ.ಸೀ ಮೆಲ್ಲನೆ ಕುಟುಕುತ್ತಾರೆ. ಮನೋರೋಗಕ್ಕೂ ಮಸಾಲೆ ದೋಸೆಯೇ ಮದ್ದು ಎನ್ನುವುದನ್ನೂ ಅನುಭವಗಳ ಮೂಲಕ ಕಟ್ಟಿಕೊಡುತ್ತಾರೆ.

ಪು.ತಿ.ನ ಅವರಿಗೆ ಮಸಾಲೆ ದೋಸೆಯೊಂದು ಕಾವ್ಯ. ‘ಇಂಗಿನ ಕಹಿ, ಮೆಂತ್ಯದ ಒಗಚು, ಹಸಿಶುಂಠಿ, ಹಸಿಮೆಣಸಿನ ಕಾಯಿ, ಮೆಣಸುಗಳ ವಿಶಿಷ್ಟವಾದ ಖಾರ, ಪಲ್ಯದ ಕಾಯಿಗಳ ವಿವಿಧ ಮಾಧುರ್‍ಯ, ಹಿಟ್ಟುಗಳ ಹುದುಗಿನ ಹಿತವಾದ ಹುಳಿ, ತುಪ್ಪದ ಕಂಪು, ಬೆಣ್ಣೆಯ ವಿಪುಲಾರ್ಧತೆ–ಈ ಸಮೃದ್ಧ ರಸಗಳನ್ನು ಹೊಂದಿಸಿ, ಸುತ್ತಲೂ ಕೆನ್ನಾಲಗೆಯನ್ನು ಚಾಚಿ ಕಾವಲೆಯ ಮೇಲಿರುವ ಭಕ್ಷ್ಯವನ್ನು ರುಚಿ ನೋಡಲು ಹವಣಿಸುವ ಅಗ್ನಿದೇವನನ್ನು ನೀರಿನಿಂದ ದಟ್ಟಿಸುತ್ತಾ, ಕಣ್ಣಿಗೆ ನಾಲಗೆಯ ಹರಿತವನ್ನು ಕೊಟ್ಟು ಒಂದು ಕ್ಷಣವೂ ಹಿಂಚು ಮುಂಚಿಲ್ಲದಂತೆ ಸಿದ್ಧ ಕ್ಷಣದಲ್ಲಿ ಎಲೆಗಿಳಿಸುವ ಕುಶಲ ಬಾಣಸಿಗನ ಕುಶಲ ಕೃತಿ ಈ ಮಸಾಲೆ ದೋಸೆ’. ಪು.ತಿ.ನ ಅವರು ಹೀಗೆನ್ನುವಾಗ ನಾಲಿಗೆಯೊಮ್ಮೆ ತಿಂದ ಮಸಾಲೆ ದೋಸೆಯನ್ನು ನೆನಪಿಸಿಕೊಳ್ಳದೆ ಇದ್ದೀತೇ? ಇಲ್ಲಿರುವ ಎಲ್ಲ ‘ಮಸಾಲೆ ದೋಸೆ’ಯ ರುಚಿ ಒಂದಕ್ಕಿಂತ ಒಂದು ಭಿನ್ನ, ಘಮವೂ ಅಷ್ಟೇ. ಪುಸ್ತಕ ಓದಿದ ಬಳಿಕ ಒಂದು ಗರಿಗರಿ ಮಸಾಲೆ ದೋಸೆ ಆರ್ಡರ್‌ ಮಾಡೋಣ ಎಂದೆನಿಸದೇ ಇರದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT