ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಸ್ತೆಗಳ ಸುಧಾರಣೆಗೆ ನೆರವಾದ ‘ಕಾಗೆ’

ತೋಟಪಟ್ಟಿಗಳಿಗೆ ಸಂಪರ್ಕ ಕಲ್ಪಿಸುವುದಕ್ಕೂ ಆದ್ಯತೆ
Last Updated 21 ಮಾರ್ಚ್ 2018, 7:24 IST
ಅಕ್ಷರ ಗಾತ್ರ

ಬೆಳಗಾವಿ: ಕಾಗವಾಡ ಮತಕ್ಷೇತ್ರದ ಬಿಜೆಪಿ ಶಾಸಕ ಭರಮಗೌಡ ಕಾಗೆ ಅವರು ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯಲ್ಲಿ ಹೆಚ್ಚಿನ ಹಣವನ್ನು ಹಳ್ಳಿಗಳು, ತೋಟಪಟ್ಟಿಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳ ಅಭಿವೃದ್ಧಿ ಕಾಮಗಾರಿಗಳಿಗಾಗಿ ಒದಗಿಸಿದ್ದಾರೆ.

ಜನಮಾನಸದಲ್ಲಿ ರಾಜು ಕಾಗೆ ಎಂದೇ ಖ್ಯಾತರಾಗಿರುವ ಅವರು, ಒಮ್ಮೆ ಸಂಯುಕ್ತ ಜನತಾ ದಳ (ಜೆಡಿಯು)ದಿಂದ ಹಾಗೂ ಸತತ ಮೂರು ಬಾರಿ ಬಿಜೆಪಿಯಿಂದ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಮತ್ತೊಂದು ಚುನಾವಣೆಯಲ್ಲೂ ಸ್ಪರ್ಧೆಗೆ ಸಜ್ಜಾಗುತ್ತಿರುವ ಅವರು, ಜನರ ಬೇಡಿಕೆಗಳಿಗೆ ಸ್ಪಂದಿಸುವುದಕ್ಕಾಗಿ ಪ್ರದೇಶಾಭಿವೃದ್ಧಿ ನಿಧಿಯನ್ನು ಬಳಸಿಕೊಂಡಿದ್ದಾರೆ. ಸ್ಥಳೀಯರ ಕೋರಿಕೆಯಂತೆ ರಸ್ತೆಗಳ ಸುಧಾರಣೆಗೆ ಒತ್ತು ಕೊಟ್ಟಿದ್ದಾರೆ.

2013-14ನೇ ಸಾಲಿನಿಂದ 2017–18ನೇ ಸಾಲಿನವರೆಗೆ ವಾರ್ಷಿಕ ಸರಾಸರಿ 60 ಕಾಮಗಾರಿಗಳಿಗೆ ಹಣ ಬಿಡುಗಡೆ ಮಾಡುವಂತೆ ಅವರು ಜಿಲ್ಲಾಡಳಿತಕ್ಕೆ ಶಿಫಾರಸು ಪತ್ರಗಳನ್ನು ಕೊಟ್ಟಿದ್ದಾರೆ. ಇವುಗಳಲ್ಲಿ ಬಹುತೇಕ ಕಾಮಗಾರಿಗಳು ರಸ್ತೆಗೆ ಸಂಬಂಧಿಸಿದವೇ ಆಗಿವೆ! ಉಳಿದಂತೆ ಅಲ್ಲಲ್ಲಿ ಸಾಂಸ್ಕೃತಿಕ ಭವನ, ಸಮುದಾಯ ಭವನಗಳ ನಿರ್ಮಾಣದ ಬೇಡಿಕೆಗೂ ಸ್ಪಂದಿಸಿದ್ದಾರೆ.

ಹಳ್ಳಿಗಳಿಗೆ ಆದ್ಯತೆ:

2013–14ನೇ ಸಾಲಿನಲ್ಲಿ 65 ಕಾಮಗಾರಿಗಳಿಗೆ ಶಿಫಾರಸು ಮಾಡಿದ್ದರು. ಅವುಗಳಲ್ಲಿ ಬಹುತೇಕವು ರಸ್ತೆ ಅಭಿವೃದ್ಧಿಗೆ ಸಂಬಂಧಿಸಿದವೇ ಆಗಿವೆ. ಉಗಾರಖುರ್ದ್, ಮಂಗಸೂಳಿ, ಮದಬಾವಿ, ವಿಷ್ಣುವಾಡಿ, ಮಲಬಾದ, ಐನಾಪುರ, ಅನಂತಪುರ, ಶೇಡಬಾಳ, ಚಮಕೇರಿ, ಗುಂಡೇವಾಡಿ, ಶಿರೂರ, ಮೋಳೆ, ಕೊಟ್ಟಲಗಿ, ಉಗಾರ... ಮೊದಲಾದ ಕಡೆಗಳಲ್ಲಿ ರಸ್ತೆ ನಿರ್ಮಾಣಕ್ಕೆ ಹಣ ನೀಡಿದ್ದಾರೆ. ಮಂಗಸೂಳಿ, ಲೋಕೂರದಲ್ಲಿ ಸಮುದಾಯ ಭವನ ಹಾಗೂ ಐನಾಪುರ, ಮಂಗಸೂಳಿಯಲ್ಲಿ ಸಾಂಸ್ಕೃತಿಕ ಭವನ ನಿರ್ಮಾಣಕ್ಕೆ ಆರ್ಥಿಕ ನೆರವು ಒದಗಿಸಿದ್ದಾರೆ. ₹ 1.95 ಕೋಟಿಗೆ ಶಿಫಾರಸು ಮಾಡಿದ್ದರು. ಇದರಲ್ಲಿ ₹ 1.43 ಕೋಟಿ ವೆಚ್ಚದ ಕಾಮಗಾರಿಗಳಿಗೆ ಅನುಮೋದನೆ ಸಿಕ್ಕಿದೆ.

2014–15ರಲ್ಲಿ ಶಿಫಾರಸು ಮಾಡಿದ 64 ಕಾಮಗಾರಿಗಳಲ್ಲಿ, ಹೆಚ್ಚಿನವು ರಸ್ತೆ ಸುಧಾರಣೆಯವು. ವಿವಿಧ ಹಳ್ಳಿಗಳಲ್ಲಿ ಒಳರಸ್ತೆಗಳು, ತೋಟಪಟ್ಟಿಗಳನ್ನು ಸಂಪರ್ಕಿಸುವ ಹಾಗೂ ದೇವಸ್ಥಾನಗಳ ಮಾರ್ಗಗಳಿಗೆ ಹೊಸ ರೂಪ ನೀಡಲು ಹಣ ಕೊಡಿಸಿದ್ದಾರೆ. ₹ 2.49 ಕೋಟಿ ವೆಚ್ಚದ ಕಾಮಗಾರಿಗಳಿಗೆ ಶಿಫಾರಸು ಮಾಡಿದ್ದರು. ಈ ಪೈಕಿ ₹ 1.99 ಕೋಟಿ ದೊರೆತಿದೆ. ಬಹಳ ಕಾಮಗಾರಿಗಳಿಗೆ ಹಣ ಬಿಡುಗಡೆಯಾಗಿದೆ.

ಉಳಿದಿದೆ:

2017–18ರಲ್ಲಿ ಗುಂಡೇವಾಡ, ಉಗಾರಬದ್ರುಕ, ಸಿದ್ದೇವಾಡಿ, ಜುಗುಳ, ಮೋಳವಾಡದಲ್ಲಿ ಸಾಂಸ್ಕೃತಿಕ ಭವನಕ್ಕೆ ಹಣ ಕೊಟ್ಟಿದ್ದಾರೆ. ಶಿಫಾರಸು ಮಾಡಿದ್ದ ₹ 1 ಕೋಟಿ ಪೈಕಿ ₹ 70 ಲಕ್ಷದ ಕಾಮಗಾರಿಗಷ್ಟೇ ಅನುಮೋದನೆ ದೊರೆತಿದೆ. ಜಿಲ್ಲಾಡಳಿತ ಸಿದ್ಧಪಡಿಸಿರುವ ಅಂಕಿಅಂಶಗಳ ಪ್ರಕಾರ, ನಿಧಿಯನ್ನು ಸಂಪೂರ್ಣವಾಗಿ ಬಳಸಿಕೊಂಡಿಲ್ಲ. ಮಾರ್ಗಸೂಚಿಗೆ ಅನುಗುಣವಾದ ಕಾಮಗಾರಿಗಳನ್ನು ಶಿಫಾರಸು ಮಾಡಿಲ್ಲದಿರುವ ಕಾರಣಕ್ಕೆ ₹ 1 ಕೋಟಿಗೂ ಹೆಚ್ಚಿನ ಪ್ರಮಾಣದ ಹಣ ಬಳಕೆಯಾಗದೆ ಉಳಿದಿದೆ.

ಈ ಕುರಿತು ಪ್ರತಿಕ್ರಿಯಿಸಿದ ಅವರು, ‘ಈ ನಿಧಿಯಲ್ಲಿನ ಹಣವನ್ನು ಜನರ ಬೇಡಿಕೆ ಆಧರಿಸಿ ನೀಡಿದ್ದೇನೆ. ನನ್ನ ಕ್ಷೇತ್ರದ ವ್ಯಾಪ್ತಿಯಲ್ಲಿ 4–5 ಸಕ್ಕರೆ ಕಾರ್ಖಾನೆಗಳು ಬರುತ್ತವೆ. ಅಲ್ಲಿಗೆ ಕಬ್ಬು ಪೂರೈಸುವುದಕ್ಕೆ ಹೋಗುವ ರೈತರು ರಸ್ತೆಗಳನ್ನು ನಿರ್ಮಿಸಿಕೊಡಿ ಎಂದು ಮನವಿ ಸಲ್ಲಿಸಿದ್ದರು’ ಎಂದು ತಿಳಿಸಿದರು.

‘ವಿವಿಧೆಡೆ ಸ್ಮಶಾನಗಳ ಅಭಿವೃದ್ಧಿಗೂ ಕೋರಿಕೆ ಬಂದಿತ್ತು. ಕುರುಬ, ಮಾದಿಗ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಸೇರಿದಂತೆ ಎಲ್ಲ ಸಮಾಜದವರ ಅನುಕೂಲಕ್ಕಾಗಿ ಪ್ರತ್ಯೇಕವಾಗಿ ಭವನಗಳನ್ನು ಕಟ್ಟಿಸಿಕೊಟ್ಟಿದ್ದೇನೆ. ಕೆಲವೆಡೆ ಭವನಗಳ ಕಾಮಗಾರಿ ಪೂರ್ಣಗೊಳಿಸುವುದಕ್ಕೆ ಹಣ ಒದಗಿಸಲಾಗಿದೆ. ತೋಟಗಳಲ್ಲಿ ವಾಸಿಸುವವರ ಓಡಾಟಕ್ಕಾಗಿ ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗಿದೆ. ಜನರ ಮನವಿಗಳಿಗೆ ಸ್ಪಂದಿಸಿದ್ದೇನೆ’ ಎಂದು ಹೇಳಿದರು.

ಕೆಲವೆಡೆ ಸಿಸಿ ರಸ್ತೆ, ಚರಂಡಿ

2015–16ನೇ ಸಾಲಿನಲ್ಲಿ ಕಾಂಕ್ರೀಟ್‌ ರಸ್ತೆ, ಚರಂಡಿ ನಿರ್ಮಾಣಕ್ಕೆ ಹಣಕಾಸು ಒದಗಿಸಿದ್ದಾರೆ. ಶಿರೂರ, ಉಗಾರ ಬಿ.ಕೆ., ಶಿರಗುಪ್ಪಿಯಲ್ಲಿ ಸಾಂಸ್ಕೃತಿಕ ಭವನ ಕಟ್ಟಲು, ಉಗಾರಖುರ್ದ ಹಾಗೂ ಫರೀದಖಾನವಾಡಿಯಲ್ಲಿ ಆಟದ ಮೈದಾನ ನಿರ್ಮಾಣಕ್ಕೆ ಸಹಾಯಹಸ್ತ ಚಾಚಿದ್ದಾರೆ. ಕಾಗವಾಡದಲ್ಲಿ ಸ್ಪೋರ್ಟ್ಸ್‌ ಹಾಗೂ ಸೋಷಿಯಲ್‌ ಕ್ಲಬ್‌ ಕಟ್ಟಡ ಪೂರ್ಣಗೊಳಿಸಲು ₹ 5 ಲಕ್ಷ ಕೊಡಿಸಿದ್ದಾರೆ. ಚಮಕೇರಿಯಲ್ಲಿ ₹ ಲಕ್ಷ ವೆಚ್ಚದಲ್ಲಿ ಶೌಚಾಲಯ ನಿರ್ಮಾಣ ಕೈಗೊಳ್ಳಲಾಗಿದೆ. ಆ ಸಾಲಿನಲ್ಲಿ 70 ಕೆಲಸಗಳಿಗೆ ಶಿಫಾರಸು ಮಾಡಿದ್ದ ಅವರು, ₹ 1.92 ಕೋಟಿ ಕೋರಿದ್ದರು. ₹ 1.92 ಕೋಟಿ ದೊರೆತಿದೆ.

2016–17ನೇ ಸಾಲಿನಲ್ಲಿ 66 ಕಾಮಗಾರಿ ಶಿಫಾರಸಾಗಿವೆ. ಮದಬಾವಿಯಲ್ಲಿ ಸಾಂಸ್ಕೃತಿಕ ಭವನಕ್ಕೆ ₹ 2.50 ಲಕ್ಷ ಹಾಗೂ ಖಿಳೇಗಾಂವದಲ್ಲಿ ಹರಳಯ್ಯ ಸಮುದಾಯ ಭವನಕ್ಕೆ ₹ 3 ಲಕ್ಷ ಕೊಡುವಂತೆ ಸೂಚಿಸಿದ್ದಾರೆ. ಆಗ ₹ 2.06 ಕೋಟಿ ಕೇಳಿದ್ದರು. ₹ 1.72 ಕೋಟಿ ಸಿಕ್ಕಿದೆ.

**

ವಾರ್ಷಿಕವಾಗಿ ಸಿಗುವ ₹ 2 ಕೋಟಿ ಮೊತ್ತದಲ್ಲಿ ವಿವಿಧ ಕಾಮಗಾರಿಗಳಿಗೆ ಅನುಮೋದನೆ ದೊರೆತಿದೆ. ಬಹಳಷ್ಟು ಪೂರ್ಣಗೊಂಡಿವೆ. ಕೆಲವು ಪ್ರಗತಿಯಲ್ಲಿವೆ. ಈಚೆಗೆ ಅನುಮೋದನೆಯಾದ ಕಾಮಗಾರಿಗಳಿಗೆ ಪೂಜೆ ನೆರವೇರಿಸುತ್ತಿದ್ದೇನೆ.
– ಭರಮಗೌಡ ಕಾಗೆ, ಶಾಸಕರು, ಕಾಗವಾಡ ಕ್ಷೇತ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT