ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಸ್ತಕ ವಿಮರ್ಶೆ | ಬೆಳ್ಳಿತೋಟದ ವಿಭಿನ್ನ ಒಳನೋಟ

Last Updated 21 ಜೂನ್ 2020, 0:44 IST
ಅಕ್ಷರ ಗಾತ್ರ

ಚಿತ್ರಸಲ್ಲಾಪ(ಸಿನಿಮಾ ಬರಹಗಳ ಸಂಕಲನ)
ಲೇ:
ಎನ್‌.ಎಸ್‌. ಶಂಕರ್
ಪ್ರ: ಯಾಜಿ ಪ್ರಕಾಶನ, ಹೊಸಪೇಟೆ
ಮೊ: 94810 42400

**

ಎನ್‌.ಎಸ್‌.ಶಂಕರ್‌ ನಮ್ಮ ನಡುವಣ ಮಹತ್ವದ ಲೇಖಕರಲ್ಲಿ ಒಬ್ಬರು. ಮೂಲತಃ ಪತ್ರಕರ್ತರಾಗಿರುವ ಅವರು ತಮ್ಮ ಬರಹಗಳಲ್ಲಿ ರಾಜಕೀಯ, ಸಿನಿಮಾ, ಭಾಷೆ ಮತ್ತು ಸಂಸ್ಕೃತಿಗಳ ಕುರಿತು ಏಕಸೂತ್ರವೊಂದನ್ನು ಇಟ್ಟುಕೊಂಡು ಬರೆಯುತ್ತಿರುವುದು ಅವರ ಹೆಚ್ಚುಗಾರಿಕೆ. ಸಾಮಾನ್ಯವಾಗಿ ಪತ್ರಕರ್ತರು ‘ಎಲ್ಲ ಕುದುರೆಗಳ ಜಾಕಿ, ಯಾವುದರ ಒಡೆಯರೂ ಅಲ್ಲ’ ಎನ್ನುವುದುಂಟು. ಆದರೆ ಶಂಕರ್‌ ಈ ವಿಷಯದಲ್ಲಿ ಹಲವು ಸಲ ಅಪವಾದದಂತೆ ಕಾಣಿಸುತ್ತಾರೆ. ಅವರ ಹಲವು ಬರಹಗಳಲ್ಲಿ ವೈವಿಧ್ಯಮಯ ವಸ್ತು ವಿಷಯಗಳ ಆಯ್ಕೆ ಮತ್ತು ವಿಭಿನ್ನ ಒಳನೋಟಗಳು ಸಹಜವೆಂಬಂತೆ ಅಂತರ್ಗತವಾಗಿರುತ್ತವೆ.

‘ಚಿತ್ರಸಲ್ಲಾಪ’ ಹೆಸರೇ ಹೇಳುವಂತೆ ಚಿತ್ರರಂಗದ ಒಳಹೊರಗನ್ನು ಕುರಿತ 34 ಬರಹಗಳ ಗುಚ್ಛ. 1993ರಿಂದ 2019ರವರೆಗೂ ಅವರು ಬೇರೆ ಬೇರೆ ಪತ್ರಿಕೆಗಳಲ್ಲಿ ಸಿನಿಮಾ ಕುರಿತು ಬರೆದಿರುವ ಲೇಖನಗಳು ಇಲ್ಲಿವೆ. ಅಂದರೆ ಸುಮಾರು 26 ವರ್ಷಗಳ ಅವಧಿಯಲ್ಲಿ ಬರೆದಿರುವ ಲೇಖನಗಳು. ಈ 26 ವರ್ಷಗಳಲ್ಲಿ ಕನ್ನಡ ಮಾತ್ರವಲ್ಲ, ಭಾರತೀಯ ಚಿತ್ರರಂಗ ಎಷ್ಟೊಂದು ಹೊರಳುಗಳನ್ನು ದಾಖಲಿಸಿದೆ ಎನ್ನುವುದನ್ನು ಗಮನಿಸಿದರೆ ಇಲ್ಲಿನ ಬರಹಗಳ ವಿಸ್ತಾರ ಅರ್ಥವಾಗುತ್ತದೆ. ಹಾಗೆಂದೇ ಇಲ್ಲಿ ಸಿನಿಮಾಗಳ ಎದೆಸೀಳುವ ಡಿಸೆಕ್ಷನ್‌ ಇದ್ದಂತೆಯೇ ಸಿನಿಮಾರಂಗದ ಗಣ್ಯರ ವ್ಯಕ್ತಿತ್ವದ ಒಳಸೀಳುಗಳೂ ಕಾಣಿಸುತ್ತವೆ.

ಇಲ್ಲಿಯ ಬರಹಗಳನ್ನು ಸ್ಥೂಲವಾಗಿ ಎರಡು ವಿಭಾಗಗಳನ್ನಾಗಿ ಮಾಡಬಹುದು. ಮೊದಲನೆಯದ್ದು ಸಿನಿಮಾಗಳ ಚೌಕಟ್ಟು, ವಸ್ತು, ವಿಷಯಗಳ ಕುರಿತ ವಿಶ್ಲೇಷಣೆ; ಎರಡನೆಯದ್ದು ಸಿನಿಮಾರಂಗದ ಪ್ರಮುಖರ ಕುರಿತ ಒಳನೋಟಗಳುಳ್ಳ ಬರಹಗಳು. ಚಿತ್ರಗಳ ಕಥೆ, ಕಥೆಯ ತರ್ಕಗಳು, ಅಶ್ಲೀಲತೆ, ತಾರೆಯರ ಇಮೇಜ್‌, ಸಿನಿಮಾ ಜೊತೆಗಿನ ಪ್ರೇಕ್ಷಕನ ಸಂಬಂಧ, ಟ್ರೆಂಡ್‌ ಇತ್ಯಾದಿಗಳ ಕುರಿತು ಬರೆದಷ್ಟೇ ನಿಸೂರಾಗಿ ಶಂಕರ್‌ ಅವರು ಚಿತ್ರರಂಗದ ಹಲವು ಗಣ್ಯರ ಜೊತೆಗಿನ ಒಡನಾಟ, ಅವರ ಸಾಧನೆ ಮತ್ತು ಅವರ ಜೊತೆಗಿರುವ ತಮ್ಮ ತಕರಾರುಗಳ ಕುರಿತು ದಾಖಲಿಸುತ್ತಾರೆ.ಫಾಲ್ಕೆ, ರಾಜ್‌ಕುಮಾರ್‌, ಪುಟ್ಟಣ್ಣ, ಸಿದ್ದಲಿಂಗಯ್ಯ, ಕಾಸರವಳ್ಳಿ, ಬರಗೂರು, ಅಮಿತಾಭ್‌‌, ರೆಹಮಾನ್‌, ಮಣಿರತ್ನಂರಿಂದ ಹಿಡಿದು ಮರ್ಲಾನ್‌ ಬ್ರಾಂಡೊ, ಮಾರಿಯೊ ಫ್ಯೋಜೊವರೆಗೆ ಅವರ ಬರಹ ಲಹರಿಗಳು ಇಲ್ಲಿ ಹರಿದಾಡಿವೆ.

ಕನ್ನಡ ಸಿನಿಮಾಗಳ ಕುರಿತು ಬರೆಯುವ ಯಾರೇ ಆದರೂ ರಾಜ್‌ಕುಮಾರ್‌ ಅವರನ್ನು ದಾಟದೇ ಹೋಗಲು ಸಾಧ್ಯವಿಲ್ಲ. ಶಂಕರ್‌ ಅವರೂ ಇದಕ್ಕೆ ಹೊರತಲ್ಲ. ಈ ಸಂಕಲನದಲ್ಲಿ ರಾಜ್‌ ಎಂಬ ‘ಸಾಂಸ್ಕೃತಿಕ ಪವಾಡ’ದ ಕುರಿತು ನಾಲ್ಕು ಬರಹಗಳಿವೆ. ನಾಲ್ಕೂ ವಿಭಿನ್ನ ನೋಟಗಳು. ಫಾಲ್ಕೆ ಪ್ರಶಸ್ತಿ ಬಂದ ಸಂದರ್ಭ, ಅತೃಪ್ತಿಗೆ ಕಾರಣವಾದ ಅರ್ಧಂಬರ್ಧ ಸಂದರ್ಶನ, ರಾಜ್‌ಗೆ ಬರೆದ ಪತ್ರ ಮತ್ತು ರಸ್ತೆಗೆ ರಾಜ್‌ ಹೆಸರು ಇಡುವಾಗಿನ ಸಂದರ್ಭ. ಈ ಬರಹಗಳಲ್ಲಿ ರಾಜ್‌ ಕುರಿತ ಬೆರಗುಗಣ್ಣಿನ ಮೋಹ ಇದ್ದಂತೆಯೇ, ಅಭಿಮಾನಿಗಳಿಂದಾಗಿ ಹೆಸರು ಕೆಡಿಸಿಕೊಳ್ಳುವ ಸಂದರ್ಭದ ಕುರಿತ ಎಚ್ಚರವೂ; ಚಿತ್ರರಂಗ ಬೆಳೆಸಲು ರಾಜ್‌ ನೀಡಿದ ಕೊಡುಗೆಗಳೇನು ಎಂಬ ನೇರಪ್ರಶ್ನೆಯೂ ಇದೆ.

ಚಿತ್ರರಂಗದ ವ್ಯಕ್ತಿಗಳನ್ನು ಕುರಿತು ಬರೆಯುವಾಗ ಅವರ ವ್ಯಕ್ತಿತ್ವದ ಎಲ್ಲ ಆಯಾಮಗಳನ್ನೂ ಸ್ಪರ್ಶಿಸುವುದು ಇಲ್ಲಿನ ವಿಶೇಷ. ಅದಿಲ್ಲದೆಯೂ ಭಿನ್ನವಾಗಿ ವಿಶೇಷವಾಗಿ ಗಮನ ಸೆಳೆಯುವ ಎರಡು ಲೇಖನಗಳೆಂದರೆ ‘ಸ್ಯಾವಿ’ ಪತ್ರಿಕೆಯಲ್ಲಿ ಇಂಗ್ಲಿಷ್‌ನಲ್ಲಿ ಬಂದ ‘ಅಭಿನಯ ಶಾರದೆ’ ಜಯಂತಿಯವರ ಸಂದರ್ಶನದ ಒಟ್ಟು ಗ್ರಹಿಕೆ ಮತ್ತು ತಾವು ನಿರ್ದೇಶಿಸಿದ ಚಿತ್ರದ ಹೀರೋ ಆಗಿದ್ದ ರಮೇಶ್‌ ಅರವಿಂದ್ ವ್ಯಕ್ತಿತ್ವದ ‘ಅತಿಮಾನುಷ ಅಚ್ಚುಕಟ್ಟು’ ಕುರಿತ ಬರಹ.

ಗಿರೀಶ್‌ ಕಾಸರವಳ್ಳಿ ಚಿತ್ರಗಳ ಮನನಕ್ಕಾಗಿ ಎನ್‌.ಮನು ಚಕ್ರವರ್ತಿ 2009ರಲ್ಲಿ ಸಂಪಾದಿಸಿರುವ ‘Culturing realism’ ಕೃತಿಯ ಕುರಿತ ಬರಹ ಮತ್ತು ಕೆ.ಪುಟ್ಟಸ್ವಾಮಿಯವರ ‘ಸಿನಿಮಾಯಾನ’ ಕೃತಿಗೆ ಬರೆದ ಮುನ್ನುಡಿ ಇಲ್ಲಿ ಓದಲೇಬೇಕೆನ್ನಿಸುವ ಎರಡು ವಿಮರ್ಶೆಗಳು. ಮೊದಲ ಪುಸ್ತಕವನ್ನು ‘ಕಾಸರವಳ್ಳಿ ಕೀರ್ತನೆ’ ಎಂದು ಒಂದೇ ವಾಕ್ಯದಲ್ಲಿ ಭಂಜಿಸುವ ಶಂಕರ್‌, ಪುಟ್ಟಸ್ವಾಮಿಯವರ ಪುಸ್ತಕದ ಕುರಿತು ‘ಉಜ್ವಲ ಸಿನಿಮಾಧ್ಯಾನ’ ಎಂದು ಸಹೃದಯರಾಗುತ್ತಾರೆ. ಕೃತಿಯ ಕುರಿತ ಆಕ್ಷೇಪಗಳನ್ನು ಕೂಡಾ ‘ಇದು ಆಕ್ಷೇಪವಲ್ಲ, ಆಸೆ ಮಾತ್ರ’ ಎನ್ನುತ್ತಾರೆ. ‘ಸಿನಿಮಾ ಒಂದು ಜನಪದ ಕಲೆ’ ಎನ್ನುವ ಹೇಳಿಕೆಯ ಕಾಪಿರೈಟ್‌ಗಾಗಿ ಬರಗೂರು ರಾಮಚಂದ್ರಪ್ಪ ಅವರ ಜೊತೆಗೆ ಗುದ್ದಾಡಿದ ಲೇಖನವೂ ಇಲ್ಲಿರುವುದು ಅದ್ಯಾಕೋ ಹೊಂದಿಕೊಳ್ಳುವುದಿಲ್ಲ.

26 ವರ್ಷಗಳಲ್ಲಿ ಕನ್ನಡ ಚಿತ್ರರಂಗದ ಹೊರಳುಹಾದಿಗಳ ಕುರಿತ ಒಂದು ಸ್ಪಷ್ಟಗ್ರಹಿಕೆ ಈ ಪುಸ್ತಕ ಓದಿದರೆ ಸಿಗುತ್ತದೆ ಎನ್ನುವಂತಿಲ್ಲ. ಏಕೆಂದರೆ ಇಲ್ಲಿರುವ ಬಹುತೇಕ ಲೇಖನಗಳು ಆಯಾ ಸಂದರ್ಭಕ್ಕೆ ಪತ್ರಕರ್ತನ ಪ್ರತಿಕ್ರಿಯೆ ಎಂಬಂತೆ ದಾಖಲಾಗಿರುವುದು. ಪತ್ರಿಕಾಬರಹಗಳ ಮಿತಿಗಳನ್ನು ಉಲ್ಲಂಘಿಸಿ ಇನ್ನಷ್ಟು ಆಳ ಅಗಲದ ವಿಶ್ಲೇಷಣೆಗಳನ್ನು ಮಂಡಿಸುವ ಸಾಮರ್ಥ್ಯ ಶಂಕರ್‌ ಅವರಿಗಿದೆ. ಇಲ್ಲಿ ಮೇಲ್‌ಸ್ತರದ ಟೀಕೆಟಿಪ್ಪಣಿಗಳಂತೆ ಕಾಣಿಸುವ ಆರಂಭದ ಹಲವು ಬರಹಗಳನ್ನು ಇನ್ನಷ್ಟು ವಿಸ್ತರಿಸಿ ಬರೆಯಬಹುದಿತ್ತು. ಈಗಲೂ ಸಕ್ರಿಯರಾಗಿರುವ ಗಿರೀಶ್‌ ಕಾಸರವಳ್ಳಿ ಮತ್ತು ಜಯಂತಿಯವರನ್ನು ಎದುರಿಗೆ ಕೂರಿಸಿಕೊಂಡು ಶಂಕರ್‌ ಅವರೇ ಸಂದರ್ಶನ ಮಾಡಿದ್ದರೆ ಪುಸ್ತಕದ ಮೌಲ್ಯ ಇನ್ನಷ್ಟು ಹೆಚ್ಚುತ್ತಿತ್ತು. ಇದು ಈ ಪುಸ್ತಕದ ಕುರಿತ ಆಕ್ಷೇಪವಲ್ಲ, ಆಸೆ ಮಾತ್ರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT