ಬುಧವಾರ, ಮಾರ್ಚ್ 22, 2023
19 °C

ಮೊದಲ ಓದು: ವಿಶಾಲ ಹರವಿನ ‘ಅಕ್ಷರ ದಾಹ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಡಾ.ಗೀತಾ ವಸಂತ ಅವರ ‘ಅಕ್ಷರ ದಾಹ’ ಎಂಬ ವಿಮರ್ಶಾ ಸಂಕಲನದಲ್ಲಿ ಒಟ್ಟು 16 ಲೇಖನಗಳಿವೆ. ಹಳೆಗನ್ನಡ, ಹೊಸಗನ್ನಡ ಸಾಹಿತ್ಯದ ಕೆಲವು ಕೃತಿಗಳನ್ನು ಇಲ್ಲಿ ಸಮೀಕ್ಷೆ ಮಾಡಲಾಗಿದೆ. ಜೊತೆಗೆ ಕರ್ನಾಟಕ ‘ಅವಧೂತ ಪರಂಪರೆ’, ‘ಬುದ್ಧ: ನೈತಿಕ ವಿಕಾಸದ ಮಹಾ ಮಾರ್ಗ’, ‘ಕೈವಾರ ತಾತಯ್ಯ: ಆಧ್ಯಾತ್ಮಿಕ -ಸಾಂಸ್ಕೃತಿಕ ನೆಲೆ’ ಎಂಬ ಗಮನ ಸೆಳೆಯುವ ಲೇಖನಗಳು ಇವೆ.

‘ಹಳೆಗನ್ನಡ ಕಾವ್ಯದ ಮರುಸೃಷ್ಟಿಯ ಸವಾಲುಗಳು: ನಾಗಚಂದ್ರ’ ಎಂಬ ಲೇಖನದಲ್ಲಿ ಜೈನಪುರಾಣಗಳ ಸ್ವರೂಪ, ವಿನ್ಯಾಸ, ರಾಮಾಯಣ ಪರಂಪರೆ, ಜೈನ ರಾಮಾಯಣ ಪರಂಪರೆ, ನಾಗಚಂದ್ರ ಉದಾತ್ತ ರಾವಣ ಎಂಬ ಉಪಶೀರ್ಷಿಕೆಗಳಡಿಯಲ್ಲಿ ಕೆಲವು ಮಾಹಿತಿ ಸ್ವರೂಪದ ಒಳನೋಟಗಳನ್ನು ಲೇಖಕಿ ಕೊಟ್ಟಿದ್ದಾರೆ. ‘ಜನ್ನನ ಕಾವ್ಯ: ಚಿತ್ತವೃತ್ತಿಗಳ ನಿಬಿಡಲೋಕ’ ಈ ಸಂಕಲನದ ಬಹುಮುಖ್ಯ ಲೇಖನವಾಗಿದ್ದು ಯಶೋಧರ ಚರಿತೆಯ ತಾತ್ವಿಕ ನೆಲೆಗಳ ಚರ್ಚೆ ಅಮೃತಮತಿಯ ಪಾತ್ರದ ಚೌಕಟ್ಟಿನಲ್ಲಿಯೇ ನಡೆಯುತ್ತದೆ. ಕುವೆಂಪು ಅವರಿಂದ ಮೊದಲುಗೊಂಡು ಜಿ. ರಾಜಶೇಖರ್, ಗಿರಡ್ಡಿ ಗೋವಿಂದರಾಜು ಒಳಗೊಂಡಂತೆ ಹಿರಿಯ ಕಿರಿಯ ವಿಮರ್ಶಕರು ಈ ಕೃತಿಯ ಕುರಿತು ಚರ್ಚಿಸಿದ್ದಾರೆ. ಅವುಗಳಲ್ಲಿರುವ ಚರ್ಚೆ, ವಾದಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಈ ಲೇಖನದ ಚರ್ಚೆಯನ್ನು ಮುಂದುವರಿಸಿದ್ದರೆ ಇನ್ನೂ ಹೆಚ್ಚಿನ ಒಳನೋಟಗಳನ್ನು ಕೊಡಲು ಸಾಧ್ಯವಾಗುತ್ತಿತ್ತು.

‘ಕನ್ನಡ ಕೀರ್ತನಸಾಹಿತ್ಯ ಸಂಪಾದನೆಯ ತಾತ್ವಿಕತೆ’, ‘ಸತ್ಯವಂತರ ಸಂಗವಿರಲು’ ಲೇಖನಗಳು ಕೀರ್ತನ ಸಾಹಿತ್ಯದ ಸಾಂಸ್ಕೃತಿಕ ಮಹತ್ವ, ತಾತ್ವಿಕ ಒಳನೋಟಗಳನ್ನು ವಿಶ್ಲೇಷಣೆಗೆ ಒಳಪಡಿಸಿರುವ ಕ್ರಮದಲ್ಲಿ ಯಶಸ್ವಿಯಾಗಿವೆ. ‘ಗ್ರಾಮಾಯಣ ಕಾದಂಬರಿಯಲ್ಲಿ ಕುಟುಂಬ ಮತ್ತು ಮಹಿಳೆ’, ‘ಜ್ಯೋತಿ ಸ್ಪರ್ಶಿಸಿದ ಜ್ಯೋತಿ: ಕೆಳದಿ’, ‘ಹೋರಾಟದ ಮೌನ ಝರಿ: ಶಬರಿ’, ‘ಸಮಗಾರ ಭೀಮವ್ವ’, ‘ಮಹಿಳಾ ಸಾಹಿತ್ಯ: ಬಹುಮುಖಿ ನೆಲೆಗಳು’ ಈ ಲೇಖನಗಳು ಸ್ತ್ರೀವಾದಿ ಅಧ್ಯಯನದ ನೆಲೆಗಳನ್ನೊಳಗೊಂಡಿವೆ.

‘ಕನ್ನಡ ಕಾವ್ಯ ಪರಂಪರೆಯ ಆರಂಭವು ಜೈನ ಕವಿಗಳಿಂದ ಆಯಿತು’ ಎನ್ನುತ್ತದೆ ಈ ಕೃತಿಯ ಮೊದಲ ಲೇಖನದ ಮೊದಲ ಸಾಲು. ಕೃತಿಕಾರರ ಧರ್ಮ, ಜಾತಿಯನ್ನು ಗುರುತಿಸಿ ಅಧ್ಯಯನ ಮಾಡಿರುವುದು ಕೃತಿಯ ಉದ್ದಕ್ಕೂ ಕಂಡುಬರುತ್ತದೆ. ಇಂದು ಈ ಬಗೆಯಲ್ಲಿಯೇ ಸಾಹಿತ್ಯ ಕೃತಿಗಳನ್ನು ಪರಿಶೀಲಿಸುವ ಕ್ರಮವೊಂದು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ಕನ್ನಡ ಭಾಷೆಯಲ್ಲಿ ಬರೆಯುವ ಕೃತಿಕಾರ ಕನ್ನಡ ಲೇಖಕನಲ್ಲವೇ, ಕನ್ನಡ ಸಾಹಿತ್ಯ ಪರಂಪರೆಯ ಹಿನ್ನೆಲೆಯಲ್ಲಿ ಅವನನ್ನು ಅಧ್ಯಯನ ಮಾಡಬೇಕಲ್ಲವೇ ಎಂಬ ಪ್ರಶ್ನೆ ಕಾಡುತ್ತದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು