ಮಂಗಳವಾರ, ಸೆಪ್ಟೆಂಬರ್ 28, 2021
22 °C

ಒಳನೋಟ: ಜನರ ಮಧ್ಯೆ ಉದಯಿಸಿದ ಲೋಕಾನುಭವದ ಸಾಹಿತ್ಯ

ಕೃಷ್ಣ ಕೊಲ್ಹಾರ ಕುಲಕರ್ಣಿ/ಸುಭಾಸ ಕಾಖಂಡಕಿ Updated:

ಅಕ್ಷರ ಗಾತ್ರ : | |

ಸಂ ತರು, ಶರಣರು, ಹರಿದಾಸರ ಬದುಕು ಎಂದರೆ ಬೆಟ್ಟದ ಮೇಲೆ ಅರಳಿದ ಸುಂದರವಾದ ಹೂವು ಇದ್ದಂತೆ. ತನ್ನ ಪಾಡಿಗೆ ತಾನು ಬೆಳೆದು ಮೊಗ್ಗಾಗಿ ಹೂವಾಗಿ ಅರಳಿ ಪರಿಸರದಲ್ಲೆಲ್ಲ ಪರಿಮಳವನ್ನು ಬೀರುವುದು. ಆ ಪರಿಮಳವನ್ನು ಆಘ್ರಾಣಿಸುವುದು, ಬಿಡುವುದು ಪರಿಸರದ ಜನರ ಮನಸ್ಸಿಗೆ ಬಿಟ್ಟದ್ದು. ಆದರೆ, ಅದರ ಆಕರ್ಷಣೆಗೆ ಒಳಗಾದರೆ ಸಾಕು, ನಿರಂತರ ಆ ಪರಿಸರದಲ್ಲೇ ಬದುಕುವ ಆಸೆ ಸಹಜವಾಗಿ ಬರುತ್ತದೆ. ಆ ಪರಿಮಳವನ್ನೇ ಬೇಕಿದ್ದರೆ ಮಾನವ ಬದುಕಿನ ಶಾಶ್ವತ ಮೌಲ್ಯಗಳು ಎನ್ನಬಹುದು. ಹರಿದಾಸರ ಕೀರ್ತನೆಗಳೆಂದರೆ ಅಂತಹ ಮೌಲ್ಯಗಳ ಕಟ್ಟು.

ಕರ್ನಾಟಕ ಸಾಹಿತ್ಯ ಚರಿತ್ರೆಯಲ್ಲಿ ಸಾಮಾಜಿಕ ಆಂದೋಲನದ ದೃಷ್ಟಿಯಿಂದ ಹರಿದಾಸರು ಮತ್ತು ಅವರ ಸಾಹಿತ್ಯ ಪ್ರಮುಖವಾಗುತ್ತದೆ. ಅದುವೇ ಅದರ ವೈಶಿಷ್ಟ್ಯ ಕೂಡ. ಅವರ ನೆಲೆ ಆ ಮೊದಲಿನವರಂತೆ ಸಾರಾಸಗಟಾಗಿ ವೈದಿಕ ವಿರೋಧಿ ನೆಲೆಯಾಗಿರಲಿಲ್ಲ. ಬಹುಸಂಖ್ಯಾತರು ನಂಬಿದ, ಶ್ರದ್ಧೆ ಇಟ್ಟ ಧರ್ಮದೊಂದಿಗೆ ಸಾಗುತ್ತ ಅದರಲ್ಲಿ ಕಂಡುಬರುವ ಕುಂದುಕೊರತೆಗಳನ್ನು, ನ್ಯೂನತೆಗಳನ್ನು ಶ್ರದ್ಧೆಗೆ ಪೆಟ್ಟು ಬೀಳದಂತೆ ಎತ್ತಿ ತೋರಿಸಿ, ಅವರ ಮನ ಒಪ್ಪುವಂತೆ ಮಾಡಿದರು.

ಹಿರಿಯ ವಿದ್ವಾಂಸರಾಗಿದ್ದ ಎಂ.ಎಂ. ಕಲಬುರ್ಗಿ ಅವರು ಹೇಳುವಂತೆ, ‘ಮಾರ್ಗ ಸಾಹಿತ್ಯವನ್ನು ಹಂಪಿಯ ಹರಿಹರಾದಿಗಳು ದೇಶಿಗೆ ಹೊರಳಿಸಿದರೆ, ಅದನ್ನು ಪುರಂದರಾದಿಗಳು ಸಂಗೀತ ಪ್ರಧಾನವಾಗಿಸಿದರು. ಈಗ ವಾಚನ ಯೋಗ್ಯವಾಗಿದ್ದ ಮಾರ್ಗ ಸಾಹಿತ್ಯಕ್ಕೆ ಬದಲು ದೇಶಿ ಸಾಹಿತ್ಯ ಗಮಕಯೋಗ್ಯವಾಗಿ ಪುರಂದರಾದಿಗಳಿಂದ ಗಾನಯೋಗ್ಯವಾಗಿ ಹರಿಯಿತು. ಅರಮನೆಯಿಂದ ಮನೆಗೆ, ಮನೆಯಿಂದ ಮನೆ ಮನೆಗೆ ಮುನ್ನಡೆಯಿತು’.

ಬಹುತೇಕ ಸಾಹಿತ್ಯ, ಅರಮನೆ–ಗುರುಮನೆ ಮತ್ತು ಪಂಡಿತರ ಮನಮನೆಗಳಿಗಷ್ಟೇ ಸೀಮಿತವಾಗಿರುತ್ತದೆ. ಆದರೆ ಹರಿದಾಸ ಸಾಹಿತ್ಯವು ಈ ಮೂರೂ ಮನೆಗಳೊಂದಿಗೆ ಪಾಮರರ ಮನೆಯನ್ನೂ ಮುಟ್ಟಿತು. ಹರಿದಾಸ ಸಾಹಿತ್ಯ ಎಲ್ಲ ಯುಗದಲ್ಲೂ ಸಲ್ಲುವಂಥದ್ದು. ದಲಿತವರ್ಗದಿಂದ ಹಿಡಿದು ಸಮಾಜದ ಅತ್ಯಂತ ಪ್ರಬಲ ವರ್ಗದವರೆಗೆ ಎಲ್ಲರಲ್ಲೂ ಹರಿದಾಸ ಸಾಹಿತ್ಯ ಸ್ವೀಕಾರವಾಗಿದೆ. ದ್ಯಾಮವ್ವ, ದುರ್ಗವ್ವರ ಗುಡಿಗಳಲ್ಲಿ, ಎಲ್ಲ ವರ್ಗದ ಭಜನೆಗಳಲ್ಲಿ ಕೂಡ ದಾಸರ ಪದಗಳು ಅಂದಿನಿಂದಲೂ ಪ್ರವೇಶ ಪಡೆದಿವೆ. ಹೀಗೆ ಕನ್ನಡದ ಯಾವ ಸಾಹಿತ್ಯವೂ ಪ್ರವೇಶ ಪಡೆದಂತೆ ಕಾಣುವುದಿಲ್ಲ.

ಅವರವರ ಧರ್ಮದ ಅಸ್ತಿತ್ವವನ್ನು ಉಳಿಸಿ ಬೆಳೆಸಿ ಮುಂದುವರಿಯುವಂತೆ ಮಾಡಿದ ಬಹುಪಾಲು ಶ್ರೇಯಸ್ಸು ಹರಿದಾಸ ಸಾಹಿತ್ಯದ್ದಾದರೆ, ಅದರೊಂದಿಗೆ ಮೋಕ್ಷ ಅಥವಾ ಮುಕ್ತಿ ಸಾಧನೆಗೆ ಸ್ತ್ರೀಯರಿಗೂ ಶೂದ್ರರಿಗೂ ಒದಗಿಸಿ ಕೊಡುವಲ್ಲಿ ಮುಂದಾದದ್ದು ಅದರ ಇನ್ನೊಂದು ವೈಶಿಷ್ಟ್ಯ (ಮೋಕ್ಷ ಅಥವಾ ಮುಕ್ತಿಗೆ ಅರ್ಹತೆ ಇಲ್ಲಿ ಅಮುಖ್ಯ, ಸಾಧನೆ ಮುಖ್ಯ). ಅವರವರ ಧರ್ಮಗಳ ಅಸ್ತಿತ್ವವನ್ನು ಉಳಿಸಿ ಬೆಳೆಸಿದರೆಂದು ಹೇಳಿದಾಕ್ಷಣ ಆ ಧರ್ಮಗಳಲ್ಲಿರುವ ಹಿಂಸಾತ್ಮಕ ಆಚರಣೆಗಳನ್ನು, ಬಲಿ ಪದ್ಧತಿಗಳನ್ನು, ಡಂಬಾಚಾರಗಳನ್ನು ಅವರು ಪುರಸ್ಕರಿಸಲಿಲ್ಲ. ಅವುಗಳನ್ನು ತೀಕ್ಷ್ಣವಾಗಿ ಖಂಡಿಸುತ್ತ, ಸರಳವಾದ ವಿಧಾನಗಳ ಮೂಲಕ ಜೀವನವನ್ನು ಸಾಗಿಸುತ್ತ ಸಾಧನೆಯನ್ನು ಮಾಡಲು ಸಾಧ್ಯ ಎಂಬುದನ್ನು ತೋರಿಸಿಕೊಟ್ಟರು.

ದೇವರ ಆರಾಧನೆಗೆ ಜನಸಾಮಾನ್ಯರಿಗಿದ್ದ ಎಲ್ಲ ತೊಡಕುಗಳನ್ನು ನಿವಾರಣೆ ಮಾಡಿದ್ದು ದಾಸ ಸಾಹಿತ್ಯದ ಬಹುಮುಖ್ಯ ಲಕ್ಷಣವಾಗಿದೆ. ಕಳೆದ ಐದು ಶತಮಾನಗಳಿಂದ ಇಂದಿನವರೆಗೂ ನಮ್ಮ ನಾಡಿನ ಜನಜೀವನವನ್ನು ಉತ್ತಮಗೊಳಿಸಲು ದಾಸ ಸಾಹಿತ್ಯವು ಒಂದು ಮಹತ್ವಪೂರ್ಣ ಸೇವೆಯನ್ನು ಸಲ್ಲಿಸುತ್ತಿದೆ. ಯಾವುದೇ ಸಾಹಿತ್ಯದ ಉದ್ದೇಶವೂ ಅದುವೇ ಆಗಿರಬೇಕಷ್ಟೆ.

ದಾಸ ಸಾಹಿತ್ಯವು ಜನರ ಮಧ್ಯ ಜನರಿಂದ, ಜನರ ಮುಂದೆಯೇ ಹುಟ್ಟಿದ ಸಾಹಿತ್ಯ. ಯಾವುದೇ ಒಂದು ಕೇಂದ್ರೀಕೃತ ವ್ಯವಸ್ಥೆಯಲ್ಲಿ ಹುಟ್ಟಿದ್ದಲ್ಲ. ಮನೆ ಮನೆ, ಓಣಿ ಓಣಿಗಳಲ್ಲಿ ತಿರುಗಾಡುತ್ತ, ಹಾಡುತ್ತ, ಕುಣಿಯುತ್ತ ಸಾಗುವಾಗ ಕಂಡ ಲೋಕಾನುಭವ ಅದು. ಭಾವ ತನ್ಮಯತೆಯಲ್ಲಿ ಮೂಡಿಬಂದ ಈ ಕೃತಿಗಳು ಕವಿತೆಯ ಎಲ್ಲ ಕಾವ್ಯಾಂಶಗಳಿಂದ ತುಂಬಿ ನಿಂತುವು. ಸಾಹಿತ್ಯ ಮತ್ತು ಸಂಗೀತದ ಸಾಮರಸ್ಯ ಪ್ರತೀಕವಾದ ಈ ರಚನೆಗಳು ಶುದ್ಧ ಭಾವಗೀತೆಗಳಾದುವು. ಜ್ಞಾನ, ಭಕ್ತಿಗಳ ಜೊತೆಗೆ ದಾಸರು ವೈರಾಗ್ಯವನ್ನೂ ಜನರಿಗೆ ಬೋಧಿಸಿದರು.

ದಾಸಕೂಟದ ನೋಟ ವಿಶಾಲವಾದುದು. ದಾಸ ಸಾಹಿತ್ಯದ ಪ್ರಾರಂಭ ಕಾಲದ ವ್ಯಾಸರಾಯರು, ಕುರುಬ ಜನಾಂಗದ ಕನಕದಾಸರ ಮೇಲೆ ಪ್ರೀತಿ ತೋರಿದುದನ್ನು ಎಲ್ಲರೂ ಬಲ್ಲರು. ಹಂಪಿಯಲ್ಲಿದ್ದ ರಾಮಾವಧೂತರಿಂದ ಮುಸ್ಲಿಮ ಧರ್ಮದ, ಪಿಂಜಾರ ಶೇಖ ಬಡೇಸಾಬ (ಕ್ರಿ.ಶ. 1882-1940) ರಾಮದಾಸರಾದರು. ಶ್ರೀರಾಮ ಅಂಕಿತದಲ್ಲಿ ಅವರ 800ಕ್ಕಿಂತ ಅಧಿಕ ಕೀರ್ತನೆಗಳು ಪ್ರಕಟವಾಗಿವೆ.

ರಾಯಚೂರು ಹತ್ತಿರದ ಚಂಡರಕಿಯ ಬೇಡ ದೊರೆಗಳು ಗೋಪಾಲದಾಸರ ಪ್ರಭಾವದಿಂದ ಭಾಗವತರಾದರು. ಕೋಸಗಿಯ ಗುರು ಜಗನ್ನಾಥದಾಸರ ಪ್ರಭಾವದಿಂದ ಹಲವಾರು ನೇಕಾರರು ಹರಿದಾಸರಾದರು. ಅಸ್ಕಿಹಾಳ ಗೋವಿಂದದಾಸರಿಂದ ಪ್ರಭಾವಿತರಾಗಿ ಅನೇಕ ಕ್ಷೌರಿಕರು, ದಲಿತರು  ಹರಿದಾಸರಾದರು. ಮಾನವಿಯ ಶಾಮಸುಂದರ ವಿಠಲದಾಸರು ಹರಿಜನನಾದ ಮೂರ್ತೆಪ್ಪ ಅವರನ್ನು ತಮ್ಮ ಆಪ್ತ ವರ್ಗಕ್ಕೆ ಸೇರಿಸಿಕೊಂಡು ಹರಿದಾಸರನ್ನಾಗಿ ಮಾಡಿದ್ದರು. ಚಂಡರಕಿ ರಾಘವೇಂದ್ರದಾಸರ ಪ್ರಭಾವ
ದಿಂದ ಹೂಗಾರ ಭೀಮಪ್ಪ, ಭೀಮದಾಸರೆನಿಸಿ ಅಥಣಿಯಲ್ಲಿ ಅಭಿನವಮಂತ್ರಾಲಯವನ್ನೇ ಸೃಷ್ಟಿಸಿದರು. ಹಲವಾರು ಕೀರ್ತನೆಗಳನ್ನೂ ರಚಿಸಿದರು. ವಿಶಿಷ್ಟಾದ್ವೈತ ಸಂಪ್ರದಾಯ ತುಳಸೀರಾಮದಾಸರ ಶಿಷ್ಯ ಪರಂಪರೆಯಲ್ಲಿ ಗಾಣಿಗರಾದ ಮಳಿಗೆ ರಂಗಸ್ವಾಮಿದಾಸರು, ಬಣಜಿಗರಾದ ಚನ್ನಪಟ್ಟಣದ ಅಹೋಬಲದಾಸರು, ದಲಿತರಾದ ಚೆಂಚುದಾಸರು ತಮ್ಮ ಕೃತಿಗಳ ಮೂಲಕ ಗಮನಸೆಳೆದವರು.

ಹರಿದಾಸರು ಸಂಸಾರವನ್ನು ತೊರೆದ ಸಂನ್ಯಾಸಿಗಳಲ್ಲ. ಬದುಕಿನುದ್ದಕ್ಕೂ ಹೆಂಡತಿ ಮಕ್ಕಳೊಡನೆ, ನೆರೆಹೊರೆಯವರೊಂದಿಗೆ, ಊರ ಮಂದಿಯ ನಡುವೆ ಬಾಳಿದವರು. ಸಾಮಾನ್ಯರಲ್ಲಿ ಸಾಮಾನ್ಯರಾಗಿ, ಭಕ್ತರಲ್ಲಿ ಭಕ್ತರಾಗಿ, ಭಾವುಕರಲ್ಲಿ ಭಾವುಕರಾಗಿ ಇದ್ದವರು. ಭಗವಂತ ಎಂದಾಕ್ಷಣ ಮೈಮೇಲೆ ದೇವರು ಬಂದಹಾಗೆ ಎಂದೂ ಹುಚ್ಚರಂತೆ, ಪಿಶಾಚಿಗಳಂತೆ ಕುಣಿದವರಲ್ಲ. ಕೈಯಿಂದ, ಬಾಯಿಯಿಂದ ಬೂದಿಯನ್ನೋ, ಇನ್ನೇನನ್ನೋ ಕೊಡುತ್ತಿರಲೂ ಇರಲಿಲ್ಲ. ನೆರೆಹೊರೆಯವರ ಪರಿಸ್ಥಿತಿಯನ್ನು ಅರಿತವರಾಗಿದ್ದರು. ಊರವರ ವ್ಯವಹಾರಗಳನ್ನು ಬಲ್ಲವರಾಗಿದ್ದರು. ಆಳುವವರ ಸರಿ ತಪ್ಪುಗಳನ್ನು ತಿಳಿದವರಾಗಿದ್ದರು. ಸಮಸ್ಯೆಗಳು ಎದುರಾದಾಗ ಅವುಗಳಿಗೆ ತಮ್ಮ ಸೀಮಿತ ಪರಿಧಿಯಲ್ಲಿ ಪರಿಹಾರವನ್ನು ಸೂಚಿಸುವಲ್ಲಿ ಸಮರ್ಥರಾಗಿದ್ದರು.

ದಾಸರು ಅನುಭಾವಿಗಳಾಗಿದ್ದರು. ಅವರಲ್ಲಿ ಕೆಲವರು ವಿದ್ವಾಂಸರಾಗಿದ್ದರು. ಶಾಸ್ತ್ರ ಪಾಂಡಿತ್ಯವನ್ನು ಪಡೆದವರಾಗಿದ್ದರು. ಆದ್ದರಿಂದ ಅವರ ಕೃತಿಗಳು ಕೇವಲ ಮನರಂಜನೆಯನ್ನು ಕೊಡುವಂಥವಾಗಲಿಲ್ಲ. ವಿಚಾರ ಪ್ರಚೋದಕವಾದುವು. ಚಿತ್ತ ಶುದ್ಧಿಯನ್ನು ಮಾಡುವಂಥವಾದುವು. ಅಂತರಂಗವನ್ನು ಪ್ರವೇಶಿಸಿ ರಸೋತ್ಪಾದನೆಯನ್ನು ಮಾಡುವ ಶಕ್ತಿಯುಳ್ಳವಂಥವಾದವು. ಆದ್ದರಿಂದ ಈ ಕೀರ್ತನೆಗಳಲ್ಲಿ ಉತ್ತಮ ಕಾವ್ಯಗಳಲ್ಲಿರುವ ಲಕ್ಷಣಗಳನ್ನೂ ಗುರುತಿಸಲಾಗಿದೆ. ಹಾಗೆಂದು ಎಲ್ಲ ದಾಸರ ಕೀರ್ತನೆಗಳು ಉತ್ತಮ ಕಾವ್ಯಮಟ್ಟದವು ಎಂದು ಹೇಳಲಾಗದು. ಅಲ್ಲಲ್ಲಿ ಜೊಳ್ಳೂ ಇದೆ. ಗಟ್ಟಿ ಅಧಿಕ.

ಸಂಸ್ಕೃತದಿಂದಲೇ ಮುಕ್ತಿ, ಶಾಸ್ತ್ರಪಾಂಡಿತ್ಯವಿಲ್ಲದವರು ಪಾಮರರು, ಪಾಪಿಗಳು ಎನ್ನುವ ಮನೋಧರ್ಮ ಪ್ರಚಲಿತ ದಲ್ಲಿದ್ದಾಗ ದಾಸರು ಕನ್ನಡದಲ್ಲಿ ವೇದಾಂತದ ಗಹನ ತತ್ವಗಳನ್ನು ಹೇಳಿದರು. ಕನ್ನಡದಲ್ಲಿಯೇ ಜನಸಾಮಾನ್ಯರು ಮುಕ್ತಿಗೆ ಪೂರ್ವವಾದ ಜ್ಞಾನವನ್ನು ಪಡೆಯಲು ದಾರಿ ಮಾಡಿಕೊಟ್ಟರು. ದಾಸರ ಕೀರ್ತನೆಗಳಲ್ಲಿ ಬರದೇ ಇದ್ದ ವಿಚಾರಗಳೇ ಇಲ್ಲ. ಧರ್ಮ, ನೀತಿ, ಸಂಸಾರ, ವೇದಾಂತ, ರಾಜಕಾರಣ, ಅರ್ಥನೀತಿ, ಸಾಮಾನ್ಯ ನೀತಿ, ವಿನೋದ ಎಲ್ಲವೂ ಇವೆ. ಮುಖ್ಯವಾಗಿ ಜೀವನಗಂಗೆಯ ಬೃಹದ್ದರ್ಶನ ವನ್ನು ಅವರು ತಮ್ಮ ಸಾಹಿತ್ಯದಲ್ಲಿ ಮಾಡಿಸಿದ್ದಾರೆ.

ಹರಿದಾಸರ ಸಮಾಜಮುಖಿ ಕೀರ್ತನೆಗಳ ನಾಲ್ಕು ಸಂಪುಟಗಳನ್ನು ನಾವು ಸಂಗ್ರಹಿಸಿದ್ದು ಈ ಹಿನ್ನೆಲೆಯಲ್ಲಿ. ಜಾತಿ ಭೇದವಿಲ್ಲದೆ ಸಮಾಜದಲ್ಲಿಯ ಮೂಢನಂಬಿಕೆ, ತಪ್ಪು ಆಚರಣೆಗಳನ್ನು ತಿದ್ದಲು ಪ್ರಯತ್ನಿಸುವುದು, ಸಮಾಜದ ಸ್ವಾಸ್ಥ್ಯವನ್ನು ಕಾಪಾಡಲು ಪ್ರೇರೇಪಿಸುವ ನೀತಿ ಬೋಧಕ ಕೃತಿಗಳನ್ನು ನಾವು ಆಯ್ಕೆ ಮಾಡಿಕೊಂಡಿದ್ದೇವೆ. ಇವುಗಳನ್ನು ನಾಡಿನ ಹರಿದಾಸಸಾಹಿತ್ಯದ ಪ್ರಖ್ಯಾತ ವಿದ್ವಾಂಸರು ಸಂಗ್ರಹಿಸಿ ಕೊಟ್ಟಿದ್ದಾರೆ. ಪ್ರತಿಯೊಬ್ಬ ಹರಿದಾಸರ ಕೀರ್ತನೆಗಳ ಮೊದಲು ಆಯಾ ಹರಿದಾಸರ ಸಂಕ್ಷಿಪ್ತ ಪರಿಚಯ, ಅವರ ಸಾಹಿತ್ಯದ ವೈಶಿಷ್ಟ್ಯವನ್ನೂ ಕೊಡಲು ಪ್ರಯತ್ನಿಸಿದ್ದೇವೆ.

ಹರಿದಾಸರ ಸಮಾಜಮುಖಿ ಚಿಂತನೆಗಳು ಭಾಗ–1

ಸಂ: ಕೃಷ್ಣ ಕೊಲ್ಹಾರ ಕುಲಕರ್ಣಿ, ಸುಭಾಸ ಕಾಖಂಡಕಿ

ಪುಟಗಳು: 252

ಭಾಗ–2: ಸಂ: ಕೆ.ಗೋಕುಲನಾಥ

ಪುಟಗಳು: 236

ಭಾಗ–3: ಸಂ: ಸ್ವಾಮಿರಾವ್‌ ಕುಲಕರ್ಣಿ

ಪುಟಗಳು: 238

ಭಾಗ–4: ಸಂ: ಜಿ.ಅಶ್ವತ್ಥನಾರಾಯಣ, ನಾ.ಗೀತಾಚಾರ್ಯ

ಪುಟಗಳು: 262

ಎಲ್ಲ ಸಂಪುಟಗಳ ಒಟ್ಟು ಬೆಲೆ: ₹ 800 (ಇನ್ಫೊಸಿಸ್‌ ಪ್ರತಿಷ್ಠಾನ ನೆರವು ನೀಡಿರುವ ಕಾರಣ ₹ 400ಕ್ಕೆ ನಾಲ್ಕೂ ಸಂಪುಟಗಳು ಸಿಗಲಿವೆ)

ಪ್ರ: ವಿಜಯ ಪ್ರಕಾಶನ, ವಿಜಯಪುರ

ಸಂ: 9342018470

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು