ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

'ಹರಿವ ನದಿ' ಆತ್ಮಕಥನ: ಸಾಮಾನ್ಯ ಗೃಹಿಣಿಯ ಅಸಾಮಾನ್ಯ ಕಥೆ

Last Updated 9 ಜನವರಿ 2022, 2:59 IST
ಅಕ್ಷರ ಗಾತ್ರ

ಹರಿವ ನದಿ
ಲೇ: ಮೀನಾಕ್ಷಿ ಭಟ್ಟ
ನಿರೂಪಣೆ: ಭಾರತಿ ಹೆಗಡೆ
ಪುಟಗಳು: 236
ಬೆಲೆ:200
ಪ್ರ:ವಿಕಾಸ ಪ್ರಕಾಶನ
ಸಂ:9900095204


‘ಪುರುಷರ ಆತ್ಮಕಥೆಗಳು ಸ್ವ–ಕೇಂದ್ರಿತವಾದರೆ ಮಹಿಳಾ ಆತ್ಮಕಥೆಗಳು ಕುಟುಂಬಕೇಂದ್ರಿತ. ಅನುಭವದಿಂದ ಕಥನ ಕಟ್ಟುವುದು ಮಹಿಳೆಯರ ವಿಶೇಷ ಗುಣ. ಅದು ಅವರ ವಿಶೇಷ ಶಕ್ತಿಯೂ ಹೌದು’ ಎಂದೊಮ್ಮೆ ಲೇಖಕಿ ಸಬಿಹಾ ಭೂಮಿಗೌಡ ಹೇಳಿದ್ದನ್ನು ಓದಿದ ನೆನಪು. ಮೊನ್ನೆ ಬಿಡುಗಡೆಯಾದ ಮೀನಾಕ್ಷಿ ಭಟ್ಟ ಅವರ ಆತ್ಮಕಥನ ‘ಹರಿವ ನದಿ’, ಅವರ ಮಾತನ್ನು ಅಕ್ಷರಶಃ ಸಮರ್ಥಿಸುತ್ತದೆ. ಹೆಸರಿಗೆ ಇದು ಮೀನಾಕ್ಷಿ ಅವರ ಆತ್ಮಕಥೆಯಾದರೂ ಅದು ಕುಟುಂಬಕೇಂದ್ರಿತವಾಗಿದೆ. ಅದೇ ಕುಟುಂಬದ ಕಣ್ಣಿನಿಂದ ಸುತ್ತಲಿನ ಸಮಾಜದ ಒಡಲಾಳವನ್ನೂ ತೆರೆದಿಡುತ್ತದೆ. ಹೀಗಾಗಿ ಇದು ಕೇವಲ ಲೇಖಕಿಯ ಕಥೆಯಾಗಿ ಉಳಿಯದೆ, ಅವರು ಹುಟ್ಟಿ ಬೆಳೆದ ಶರಾವತಿ ಮತ್ತು ಅಘನಾಶಿನಿ ಕೊಳ್ಳಗಳ ಜನಜೀವನದ ಕಥೆಯಾಗಿಯೂ ಬೆಳೆಯುತ್ತದೆ.

ಸಾಮಾನ್ಯಗೃಹಿಣಿಯೊಬ್ಬಳಿಗೆ ಹೇಳಿಕೊಳ್ಳಲು ಏನಿರುತ್ತದೆ? ಅಂಥವರಿಂದ ಏಕೆ ಆತ್ಮಕಥೆ ಎಂಬ ಪ್ರಶ್ನೆ ಹಲವರಲ್ಲಿ ಮೂಡಿರಲಿಕ್ಕೂ ಸಾಕು.ಸಾಮಾನ್ಯಮಹಿಳೆಯೊಬ್ಬಳ ಅಸಾಮಾನ್ಯವಾದ ದರ್ಶನಕ್ಕೆ ಇಂತಹ ಆತ್ಮಕಥೆಗಳು ಅತ್ಯಗತ್ಯ. ನದಿಯ ಹರಿವಿನಂತೆಯೇ ಬದುಕು ಬಂದಂತೆ ಸ್ವೀಕರಿಸುತ್ತಾ ಹೋಗುವ ಲೇಖಕಿ, ಎದುರಿಸಿದ ಕಷ್ಟ–ನಷ್ಟಗಳ ಕುರಿತು ಬಡಬಡಿಸುತ್ತಾ ಕೂರುವುದಿಲ್ಲ. ಎಲೆ ಬಳ್ಳಿಯನ್ನು ಎಷ್ಟು ಬಾರಿ ಕಿತ್ತು ನೆಟ್ಟರೂ ಮತ್ತೆ ಚಿಗುರುವಂತೆ ಬಾರಿ ಬಾರಿ ನೆಲೆ ಕಳೆದುಕೊಂಡರೂ ಸಿಕ್ಕ ಜಾಗದಲ್ಲಿ ಮತ್ತೆ ಬದುಕು ಕಟ್ಟಿಕೊಳ್ಳುವ ಅವರ ಜೀವನೋತ್ಸಾಹ ಇತರರಿಗೂ ಮಾದರಿಯಾದುದು. ಅದರಲ್ಲೂಸಾಮಾನ್ಯಮಹಿಳೆಯರಿಗಂತೂ ಪ್ರೇರಣೆದಾಯಕವಾದುದು.

ಮೀನಾಕ್ಷಿ ಅವರ ಬದುಕಿನುದ್ದಕ್ಕೂ ಹಲವು ವಿಷಣ್ಣ ಭಾವದ ಕಥೆಗಳು ಹರಳುಗಟ್ಟಿವೆ. ಕೃತಿಯ ಪುಟಗಳನ್ನು ತಿರುವಿ ಹಾಕಿದಂತೆ ಓದುಗರಿಗೆ ಅದರ ಅನುಭವವಾಗುತ್ತದೆ. ಆದರೆ, ಅಂತಹ ಬದುಕಿನ ಕುರಿತು ಲೇಖಕಿಗೆ ಯಾವುದೇ ತಕರಾರಿಲ್ಲ. ಗೋದೂಳಿ ಸಮಯದಲ್ಲಿ ಮನೆಯ ಹಿತ್ತಲಿನಲ್ಲಿ ಮಹಿಳೆಯರು ಸುಖ–ದುಃಖದ ವಿಚಾರಗಳನ್ನು ಮಾತನಾಡಿಕೊಂಡಷ್ಟೇ ಸಲೀಸಾಗಿ ತಮ್ಮ ನೋವು–ಸಂಕಟವನ್ನು ತೇಲಿಸಿಬಿಡುತ್ತಾರೆ. ‘ಇದೇ ಬದುಕು’ ಎಂಬ ಸಂದೇಶದ ಮಂದಹಾಸ ಬೀರಿ ವಿರಮಿಸುತ್ತಾರೆ.

ಮೀನಾಕ್ಷಿ ಅವರ ಕಥೆಯನ್ನು ಮುನ್ನಡಿಯ ಒಂದು ವಾಕ್ಯದಲ್ಲಿ ನಾಗೇಶ ಹೆಗಡೆ ಅವರು ತುಂಬಾ ಸೊಗಸಾಗಿ ಹಿಡಿದಿಟ್ಟಿದ್ದಾರೆ. ಅವರು ಬರೆಯುತ್ತಾರೆ: ‘ತವರು ಎಂದುಹೇಳಿಕೊಳ್ಳಲು ತವರೇ ಇಲ್ಲದ, ಗಂಡನ ಮನೆ ಎಂಬ ಮನೆಯೇ ಇಲ್ಲದ ಇವರ ಬದುಕಿನ ವಿವರಣೆಗಳನ್ನು ಓದುವಾಗ ಕಾಂಬೋಡಿಯಾದ ತೇಲುಗ್ರಾಮಗಳ ಚಿತ್ರಣ ಮನಸ್ಸಿನಲ್ಲಿ ಮೂಡುತ್ತದೆ’. ಕೇಂದ್ರ ಸ್ಥಾನದಲ್ಲಿರಬೇಕಿದ್ದ ಲೇಖಕಿ ತಮ್ಮ ಬಾಳಿನ ಪುಟಗಳಲ್ಲಿ ಪತಿ, ಪ್ರಖರ ಪಾಂಡಿತ್ಯದ ಗಜಾನನ ಶಾಸ್ತ್ರಿಯವರಿಗೆ ಹೆಚ್ಚಿನ ಜಾಗ ಕೊಟ್ಟಿದ್ದಾರೆ. ಹೀಗಿದ್ದೂ ಅವರ ಚಿತ್ರಣ ತುಂಬಾ ಢಾಳಾಗಿ ಮೂಡುವುದಿಲ್ಲ.

ನಾಡಿಗೆ ಬೆಳಕು ನೀಡಲು ಕೊಳ್ಳದ ಹಳ್ಳಿಗಳ ಜನ ಮನೆಯ ದೀಪವನ್ನೇ ನಂದಿಸಿಕೊಂಡವರು. ಆತ್ಮಕಥೆಯೊಂದಿಗೆ ಪೋಣಿಸಿಕೊಂಡು ಬಂದ ಆ ಕತ್ತಲಿನ ಉಪಕಥೆಗಳು ಹೃದಯ ತಟ್ಟುತ್ತವೆ. ಸುಂದರವಾಗಿದ್ದ, ಮೇಲ್ವರ್ಗದ ಯುವತಿ ಕೂಲಿ ಕೆಲಸಕ್ಕೆ ಹೋಗಬೇಕಾದುದು, ಯಾರ ನಾಲಿಗೆಗೂ ತುತ್ತಾಗದಂತೆ ಮಾನ ಕಾಪಾಡಿಕೊಂಡು, ಸ್ವಾಭಿಮಾನದಿಂದ ಬದುಕು ಸಾಗಿಸಿದುದು, ಪತಿಯ ಸಾವಿನ ನಡುವೆಯೂ ಬದುಕಿನ ಬಂಡಿಯನ್ನು ಒಬ್ಬಂಟಿಯಾಗಿ ಎಳೆದುದು ಅವರ ಜೀವಪರ, ಜೀವನಪರ ಧೋರಣೆಗೆ ಸಾಕ್ಷಿಯಾಗಿ ನಿಲ್ಲುತ್ತವೆ. ‘ಕತ್ತಲು ಇರಬಹುದು, ಸುರಂಗದ ಅಂಚಿಗೆ ಬೆಳಕಿನ ಕಿರಣಗಳು ಗೋಚರಿಸಿಯೇ ಗೋಚರಿಸುತ್ತವೆ’ ಎನ್ನುವುದು ಮೀನಾಕ್ಷಿ ಅವರ ಮನೋಧರ್ಮ. ಅವರ ಬದುಕಿನ ಈ ಫಿಲಾಸಪಿ ನೋವುಂಡ ಮಹಿಳೆಯರ ಕಣ್ಣೀರು ಒರೆಸುವಷ್ಟು ಸಶಕ್ತವಾಗಿದೆ.

ತಮ್ಮ ಅಮ್ಮನ ಕಥೆಯನ್ನು ಪತ್ರಕರ್ತೆ ಭಾರತಿ ಹೆಗಡೆ ಸೊಗಸಾಗಿ ನಿರೂಪಿಸಿದ್ದಾರೆ. ಬಾಲ್ಯದಿಂದಲೂ ಅಮ್ಮನನ್ನು ನೋಡುತ್ತಾ, ಎಲ್ಲ ಬೆಳವಣಿಗೆಗಳಿಗೆ ಸಾಕ್ಷಿಯಾಗುತ್ತಾ ಬೆಳೆದ ಭಾರತಿ ಅವರಿಗೆ ಆತ್ಮಕಥೆಯ ವಿವರಗಳನ್ನು ಸಮರ್ಥವಾಗಿ ‘ಪ್ರಸೆಂಟ್‌’ ಮಾಡಲು ಯಾವುದೇ ಕಷ್ಟ ಎದುರಾಗಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT