ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇದು ಗಂಜಿಯಲ್ಲ, ಪರಮಾನ್ನ!

ಅವಲೋಕನ
Last Updated 11 ಜುಲೈ 2020, 19:30 IST
ಅಕ್ಷರ ಗಾತ್ರ

ಮಂಜೀ ಮಹದೇವನ ಗಂಜೀ ಪುರಾಣ
ಲೇ: ಜಿ.ಎಸ್.ಭಟ್ಟ ಸಾಗರ
ಪ್ರ: ಚಾರುಮತಿ ಪ್ರಕಾಶನ ಬೆಂಗಳೂರು
ಪುಟ: 432
ಬೆಲೆ: ₹ 350
ಮೊ:9448235553

ಸಾಗರದ ಜಿ.ಎಸ್.ಭಟ್ಟ ಅವರ ಮೂರನೆ ಕಾದಂಬರಿ ‘ಮಂಜೀ ಮಹದೇವನ ಗಂಜೀ ಪುರಾಣ’ ಯಕ್ಷಗಾನ ಪ್ರಿಯರಿಗೆ ಬರೀ ಗಂಜೀ ಊಟವಲ್ಲ, ಪರಮಾನ್ನದ ಭೋಜನ. ಯಕ್ಷಗಾನ ಎನ್ನುವುದು ಈ ಕಾದಂಬರಿಯ ಆವರಣವೇ ವಿನಾ ಖಂಡಿತಾ ಅದರ ವಸ್ತುವಲ್ಲ ಎಂದು ಲೇಖಕರು ಮೊದಲೇ ಹೇಳುತ್ತಾರೆ. ಆದರೆ ಕೃತಿಯನ್ನು ಓದಿ ಮುಗಿಸಿದ ನಂತರ ಯಕ್ಷಗಾನವೇ ಇದರ ವಸ್ತು ಎನ್ನಿಸದೆ ಹೋಗದು. ಯಾಕೆಂದರೆ ಕಾದಂಬರಿಯ ನಾಯಕ ಮಂಜೀ ಮಹದೇವ ಯಕ್ಷಗಾನ ಕಲಾವಿದ. ಆತನ ಬದುಕಿನ ಕತೆಯನ್ನು ಹೇಳುತ್ತಲೇ ಲೇಖಕರು ಯಕ್ಷಗಾನದ ಕತೆಯನ್ನೂ ಹೇಳುತ್ತಾರೆ. ಯಕ್ಷಗಾನವೇ ಈ ಕೃತಿಯ ವಸ್ತು ಎನ್ನುವುದು ಕಾದಂಬರಿಯ ಮಿತಿ ಅಲ್ಲ. ದೌರ್ಬಲ್ಯವೂ ಅಲ್ಲ. ಯಕ್ಷಗಾನ ಪ್ರಿಯರಿಗೆ ಇದು ಪರಮಾನ್ನವಾದರೆ ಯಕ್ಷಗಾನ ಗೊತ್ತಿಲ್ಲದವರಿಗೂ ಇದು ಸಪ್ಪೆ ಗಂಜೀ ಊಟವೇನೂ ಅಲ್ಲ. ಸಿಹಿ ಇದೆ. ಅಲ್ಲಲ್ಲಿ ಬರುವ ಕಿಡಿನುಡಿಗಳು ಚಿತ್ರಾನ್ನದಲ್ಲಿ ಸಿಗುವ ಬೆಂದ ಕಡಲೆಕಾಳಿನಂತೆ ನಿಧಾನಕ್ಕೆ ಜಗಿದು ನುಂಗಬಹುದು.

ಮೊದಲ ಕೆಲವು ಅಧ್ಯಾಯಗಳನ್ನು ಬಿಟ್ಟರೆ ಮುಂದಿನ ಅಧ್ಯಾಯಗಳೆಲ್ಲಾ ಮಂಜೀ ಮಹದೇವನೇ ಹೇಳಿಕೊಂಡ ಆತ್ಮಚರಿತ್ರೆ. ಇವುಗಳನ್ನು ಓದುತ್ತಿದ್ದಾಗ ನಿಮ್ಮ ಮನಸ್ಸಿನಲ್ಲಿ ಸಾಕಷ್ಟು ಯಕ್ಷಗಾನ ಕಲಾವಿದರು ಸುಳಿದಾಡಬಹುದು. ಒಂದು ಅರ್ಥದಲ್ಲಿ ಇದು ಹಲವು ಕಲಾವಿದರ ಏಕ ಆತ್ಮಚರಿತ್ರೆಯಂತೆ ಅನಿಸಿದರೆ ಅಚ್ಚರಿಯೂ ಅಲ್ಲ. ಕಾದಂಬರಿಯ ಆರಂಭದಲ್ಲಿಯೇ ಲೇಖಕರು ‘ಕಾದಂಬರಿಯ ಕೇಂದ್ರ ಪ್ರಜ್ಞೆಗೆ ಪ್ರೇರಣೆಯಾದ ಹೊಸ್ತೋಟ ಮಂಜುನಾಥ ಭಾಗವತರಿಗೆ ಅರ್ಪಣೆ’ ಎಂದು ಹೇಳಿದ್ದರಿಂದ ಅಲ್ಲಲ್ಲಿ ಮಂಜುನಾಥ ಭಾಗವತರು ಕಾಣಿಸಿಕೊಳ್ಳುತ್ತಾರೆ. ಬಡಗುತಿಟ್ಟಿನ ಇತರ ಕೆಲವು ಯಕ್ಷಗಾನ ಮೇರು ಕಲಾವಿದರ ನೆನಪುಗಳೂ ಕಾಡುತ್ತವೆ. ‘ಇಲ್ಲಿ ಬಳಕೆಯಾದ ಕಾಲ್ಪನಿಕ ಮಾತುಗಳು ಒಂದಲ್ಲ ಒಂದು ವಾಸ್ತವ ಕಲಾವಿದನ ಕಡೆಗೆ ಬೊಟ್ಟು ಮಾಡಿದರೆ ಯಾವ ಆಶ್ಚರ್ಯವೂ ಇಲ್ಲ. ಆದರೆ ಅದು ಉದ್ದೇಶಿತ ಅಲ್ಲ’ ಎಂದು ಲೇಖಕರು ಹೇಳಿದ್ದಾರೆ. ಇಂತಹ ನಿರೀಕ್ಷಣಾ ಜಾಮೀನುಗಳ ಹಂಗಿಲ್ಲದೆಯೂ ಕಾದಂಬರಿಯನ್ನು ಸವಿಯಬಹುದು. ಯಾಕೆಂದರೆ ಯಾವ ಮಾತುಗಳೂ ಇಲ್ಲಿ ತಪ್ಪು ಹೊರಿಸುವ ಕೆಲಸವನ್ನು ಮಾಡಿಲ್ಲ.

ಡೇರೆ ಮೇಳಗಳ ಸಂಕಟ, ಮೇಳಗಳ ನಡುವಿನ ರಾಜಕೀಯ, ಕಷ್ಟ ನಷ್ಟಗಳು, ಹರಕೆ ಆಟ, ಸಾಂಪ್ರದಾಯಿಕ ಮತ್ತು ಹೊಸ ಪ್ರಸಂಗಗಳು ಹಾಗೂ ಅದರ ಕುರಿತಾದ ಚರ್ಚೆ, ಕಲಾವಿದರ ದಶಾವತಾರಗಳು, ಯಕ್ಷಗಾನದಲ್ಲಿನ ಹೊಸ ಪ್ರಯೋಗಗಳು ಹೀಗೆ ಸಾಕಷ್ಟು ಮಾಹಿತಿಗಳನ್ನು ಕಾದಂಬರಿಯಲ್ಲಿ ಕಾಣಬಹುದು. ಆತ್ಮಕತೆಯಂತಿರುವ ನಿರೂಪಣೆ ಈ ವಿವರಗಳನ್ನು ನೀಡಲು ಹೆಚ್ಚು ಸಹಕಾರಿಯಾಗಿದೆ. ಯಕ್ಷಗಾನ ಗೊತ್ತಿಲ್ಲದ ಓದುಗ ಗಂಜೀ ಪುರಾಣ ಕಾದಂಬರಿಯನ್ನು ಓದಿದರೆ ಯಕ್ಷಗಾನ ಬಗ್ಗೆ ಪ್ರಾಥಮಿಕ ಮಾಹಿತಿಯನ್ನು ಪಡೆಯಬಹುದು.

ಮಂಜೀ ಮಹದೇವನ ಮದುವೆ ಅತ್ಯಂತ ನಾಟಕೀಯ ಅನ್ನಿಸುತ್ತದೆ. ಕಾದಂಬರಿಯೊಂದಕ್ಕೆ ಇಂತಹ ನಾಟಕೀಯತೆ ಅಗತ್ಯ. ಆದರೆ ಇದು ಹೀಗೆ ಬಂದು ಹಾಗೆ ಹೋಗಿದೆ. ಗಂಜೀ ಪುರಾಣ ಕಾದಂಬರಿಯೇ ಆಗುವುದಕ್ಕೆ ಇದು ಇನ್ನಷ್ಟು ಹಿಗ್ಗಬೇಕಿತ್ತು ಅನಿಸುತ್ತದೆ. ಯಾಕೆಂದರೆ ಮೊದಲ ಕೆಲವು ಅಧ್ಯಾಯವನ್ನು ಬಿಟ್ಟರೆ ಇದು ಆತ್ಮಕತೆಯಂತೆಯೇ ಇರುವುದರಿಂದ ಕಾದಂಬರಿ ಓದಿದ ಮುದ ಸಿಗುವುದಿಲ್ಲ. ಅದು ಕಾದಂಬರಿಯ ಮಿತಿಯೇ ವಿನಾ, ಕೃತಿಯ ಮಿತಿಯಲ್ಲ. ಕಾದಂಬರಿ ಎಂದುಕೊಳ್ಳದೆಯೂ ಗಂಜೀ ಪುರಾಣವನ್ನು ಓದಿ ಸವಿಯಬಹುದು.

ಯಕ್ಷಗಾನ ಆವರಣ ಇರುವಂತಹ ಕಾದಂಬರಿಗಳು ಕನ್ನಡದಲ್ಲಿ ಸಾಕಷ್ಟು ಬಂದಿಲ್ಲ. ಆ ದೃಷ್ಟಿಯಲ್ಲಿ ಇದೊಂದು ಉತ್ತಮ ಪ್ರಯತ್ನ. ‘ವಿವರಗಳನ್ನು ಹುಡುಕಿ ತುಂಬುವುದು ಕಷ್ಟಕರವಲ್ಲ. ಅವುಗಳನ್ನು ಕಲೆಯ ಹದಕ್ಕೆ ಕರಗಿಸಿ ಬೆಸೆಯುವುದು ಸೃಷ್ಟಿಶೀಲತೆ’ ಎಂದು ಪ್ರಸಿದ್ಧ ಕಾದಂಬರಿಕಾರ ಎಸ್.ಎಲ್.ಭೈರಪ್ಪ ಹೇಳುತ್ತಾರೆ. ಈ ಮಾತನ್ನು ಗಮನದಲ್ಲಿ ಇಟ್ಟುಕೊಂಡಿರುವುದಾಗಿ ಲೇಖಕರು ಹೇಳುತ್ತಾರೆ. ಆದರೆ ಅದರಲ್ಲಿ ಸಂಪೂರ್ಣ ಯಶಸ್ಸು ಸಿಕ್ಕಿಲ್ಲ. ಆದರೂ ‘ಮಂಜೀ ಮಹದೇವನ ಗಂಜೀ ಪುರಾಣ’ ಓದಿನ ಸುಖಕ್ಕೆ ಕೊಂಚವೂ ಮೋಸ ಮಾಡುವುದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT