ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಸ್ತಕ ವಿಮರ್ಶೆ: ‘ಕಾಯ’ದ ಸುತ್ತ ಹೆಪ್ಪುಗಟ್ಟಿದ ಛಿದ್ರಲೋಕ

Last Updated 16 ಅಕ್ಟೋಬರ್ 2021, 19:30 IST
ಅಕ್ಷರ ಗಾತ್ರ

ತಮ್ಮ ಮೊದಲ ಕಾದಂಬರಿ ‘ಬಿಳಿಯ ಚಾದರ’ದಲ್ಲಿಯೇ ಕನ್ನಡ ಸಾಹಿತ್ಯಲೋಕಕ್ಕೆ ಹೊಸ ಸಂವೇದನೆಯನ್ನು ಪರಿಚಯಿಸಿದವರು ಗುರುಪ್ರಸಾದ ಕಾಗಿನೆಲೆ. ಆ ಸಂವೇದನೆಯನ್ನು ಮುಂದಿನ ಕೃತಿಗಳಲ್ಲಿ ಹಿಗ್ಗಿಸುತ್ತಲೇ ಬಂದಿದ್ದಾರೆ. ಅವರ ನಾಲ್ಕನೇ ಕಾದಂಬರಿ ‘ಕಾಯಾ’ ಕೂಡ ಬೆರಗುಗೊಳಿಸುವ ಹೊಸ ಜಗತ್ತನ್ನು ನಮ್ಮ ಮುಂದಿಡುತ್ತದೆ. ಹೊಸ ಜೀವನಕ್ರಮವನ್ನು ಕಟ್ಟಿಕೊಡುತ್ತದೆ.

ಈ ಕಾದಂಬರಿಯ ಎಲ್ಲ ಪಾತ್ರಗಳೂ ತಮ್ಮ ‘ಭಾರತೀಯ ಮೂಲದ ಭೂತ’ದಿಂದ ತಪ್ಪಿಸಿಕೊಂಡಿರುವುದು ಗಮನಾರ್ಹವಾದ ಅಂಶ. ಮುಖ್ಯಪಾತ್ರಗಳಾದ ಕಸ್ತೂರಿ ಮತ್ತು ಮಲೀಕರ ಹಿನ್ನೆಲೆಯ ಉಲ್ಲೇಖವಾದರೂ ಅದು ಅವರನ್ನು ನಿಯಂತ್ರಿಸುವಷ್ಟು ಪ್ರಭಾವಿಯಾಗಿಲ್ಲ. ಜೀವನಕ್ರಮದಲ್ಲಿಯೂ ಜೀವನದೃಷ್ಟಿಯಲ್ಲಿಯೂ ಅವರು ಅಲ್ಲಿಯವರೇ. ಇದು ಅನಿವಾಸಿ ಭಾರತೀಯರ ಸಾಹಿತ್ಯ ಹೊಸ ಘಟ್ಟ ಏರಿರುವುದರ ಸೂಚನೆಯೂ ಇರಬಹುದು.

ಈ ಕಾದಂಬರಿಯ ವಸ್ತು ಕನ್ನಡಕ್ಕೆ ತುಂಬ ಹೊಸದು. ಆದರೆ ಹೊಸದೇನನ್ನೋ ಹೇಳುತ್ತಿದ್ದೇನೆ, ಅರ್ಥ ಮಾಡಿಸುತ್ತಿದ್ದೇನೆ ಎಂಬ ಹಮ್ಮು ಲೇಖಕರಿಗಿಲ್ಲ. ತನ್ನಷ್ಟೇ ತನ್ನ ಓದುಗನಿಗೂ ತಿಳಿದಿದೆ ಎಂಬ ನಂಬಿಕೆಯಲ್ಲಿಯೇ ಅವರು ಬರೆಯುತ್ತಾರೆ.

ಇದು ಸ್ವಕೇಂದ್ರಿತ ಮನುಷ್ಯರ ಛಿದ್ರಲೋಕ. ಕಾಯಿಲೆ ವಾಸಿ ಮಾಡುವುದನ್ನು ಯಾರು ಬೇಕಾದರೂ ಮಾಡುತ್ತಾರೆ, ಆದರೆ ಸುಂದರಿಯನ್ನು ಅಪ್ರತಿಮ ಸುಂದರಿಯನ್ನಾಗಿಸುವುದು ಸವಾಲು; ಅದು ಹಣ ಮಾಡುವ ದಾರಿಯೂ ಹೌದು ಎನ್ನುವ ಮಲೀಕ ಒಂದೆಡೆ, ಅಜ್ಞಾತಲೋಕಕ್ಕೆ ಬಂದು ತನ್ನ ಸುಂದರ ಕನಸುಗಳನ್ನೆಲ್ಲ ಸುಟ್ಟುಕೊಂಡು ಏಡ್ಸ್ ಹತ್ತಿಸಿಕೊಳ್ಳುವ, ಕೊನೆಗೆ ಅದನ್ನೇ ತನ್ನ ಉನ್ನತಿಯ ಮೆಟ್ಟಿಲಾಗಿಸಿಕೊಳ್ಳುವ ಕಸ್ತೂರಿ ಇನ್ನೊಂದೆಡೆ. ಇವರ ನಡುವೆ ಏಡ್ಸ್ ಇಲ್ಲದಿದ್ದರೂ ಅದರ ನೆರಳಲ್ಲಿ ನರಕದ ಬದುಕು ಅನುಭವಿಸುತ್ತಿರುವ ಸಮಾಂತ ಇದ್ದಾಳೆ, ಪರಮಸುಂದರಿ ಪರಿ ಇದ್ದಾಳೆ, ಪರದೆಯ ಹಿಂದಿದ್ದುಕೊಂಡೇ ಎಲ್ಲವನ್ನೂ ನಿಯಂತ್ರಿಸುವ ಲೀಸಾ ಇದ್ದಾಳೆ. ಈ ಎಲ್ಲ ಪಾತ್ರಗಳ ಛಿದ್ರ ಮಾನಸಿಕ ಸ್ಥಿತಿಯ ರೂಪಕದ ಹಾಗೆ, ತನ್ನನ್ನು ತಾನೇ ಇರಿದುಕೊಳ್ಳುವ ಹನಿ ಮಠದ ಇದ್ದಾಳೆ. ಇವರ ಮೂಲಕವೇ ಒಂದೆಡೆ, ಕಾಯಕೇಂದ್ರಿತ ಭೌತಿಕಜಗತ್ತೂ ಇನ್ನೊಂದೆಡೆ ಸಂಕೀರ್ಣವಾದ ಮನುಷ್ಯ ಸಂಬಂಧಗಳ ಮಾನಸಿಕ ಜಗತ್ತೂ ಅನಾವರಣಗೊಳ್ಳುತ್ತ ಹೋಗುತ್ತವೆ. ಎರಡು ಕಾಲಘಟ್ಟದ ಕಥನಗಳನ್ನು ಸಮಾನಾಂತರವಾಗಿ ಬೆಳೆಸಿಕೊಂಡು ಹೋಗಿರುವ ನಿರೂಪಣಾ ತಂತ್ರವೂ ಪರಿಣಾಮಕಾರಿಯಾಗಿದೆ.ಪ್ಲಾಸ್ಟಿಕ್ ಸರ್ಜನ್ ಮಲೀಕ್ ತನ್ನ ಹೆಂಡತಿಯ ಚಹರೆಗಳನ್ನು ಸಮಾಂತಳಲ್ಲಿ ಕೆತ್ತುತ್ತ ಹೋಗುವುದು ಧ್ವನಿಪೂರ್ಣವಾಗಿದೆ.

ಈ ಕಾದಂಬರಿಯ ಒಂದು ಅಧ್ಯಾಯದ ಹೆಸರು ‘ಮೀ ಟೂ’. ಆ ಅಧ್ಯಾಯದ ಒಳಗಾಗಲಿ, ಪಾತ್ರಗಳ ಸಂಭಾಷಣೆಯಲ್ಲಾಗಲಿ ‘ಮೀ ಟೂ’ ಒಂದು ‘ಇಶ್ಯೂ’ ಆಗಿ ಬೆಳೆಯುವುದೇ ಇಲ್ಲ. ಲೀಸಾ ಎಂಬ ಅಜ್ಞಾತ ಹೆಣ್ಣು, ಮಲೀಕ ತನಗೆ ಚಿಕಿತ್ಸೆ ನೀಡಿದ ನಂತರ ತನ್ನ ಸ್ತನವನ್ನು ಅಸಭ್ಯವಾಗಿ ಮುಟ್ಟಿದ್ದಾನೆಂದು ಕೇಸು ಹಾಕುತ್ತಾಳೆ. ರಾಜಿಗಾಗಿ ದೊಡ್ಡ ಮೊತ್ತದ ಹಣದ ಬೇಡಿಕೆಯನ್ನೂ ಇಡುತ್ತಾಳೆ. ಇಡೀ ಕಾದಂಬರಿಯುದ್ದಕ್ಕೂ ಪ್ರವಹಿಸುವ ಈ ಹಣಕ್ಕಾಗಿ ಹೂಡಿದ ಕೇಸಿನ ವಿವರಗಳ ಅಧ್ಯಾಯಕ್ಕೆ ‘ಮೀ ಟೂ’ ಎಂದು ಹೆಸರಿಟ್ಟಿರುವುದು ಆ ಚಳವಳಿಯ ಅಪವ್ಯಾಖ್ಯಾನವಾಗಿಯೇ ಕಾಣಿಸುತ್ತದೆ.ಕಾದಂಬರಿಯಲ್ಲಿ ‘ಮೀ ಟೂ’ ಒಂದು ಇಶ್ಯೂ ಆಗಿ ಬೆಳೆದಿದ್ದರೆ, ಅದರ ದುರುಪಯೋಗವನ್ನೂ ತುಂಬ ಸಮರ್ಥವಾಗಿ ಹೇಳಲು ಸಾಧ್ಯವಿತ್ತು; ಕಾಯವನ್ನೇ ಕೇಂದ್ರವಸ್ತುವಾಗಿಟ್ಟುಕೊಂಡಿದ್ದ ಈ ಕೃತಿಗೆ ಬೇರೆಯದೇ ಆಯಾಮ ಸಿಗುವ ಸಾಧ್ಯತೆಯೂ ಇತ್ತು. ಆದರೆ ಅದರಲ್ಲಿ ಕಾದಂಬರಿಕಾರನಿಗೆ ಅಷ್ಟಾಗಿ ಆಸಕ್ತಿ ಇದ್ದಂತಿಲ್ಲ. ಅಲ್ಲದೆ ಕೊನೆಯ ಭಾಗದಲ್ಲಿ ಸಮಾಂತ ಹೇಳುವ ‘ಅಮ್ಮ, ಇದು ಮೀ ಟೂ ಯುಗ. ಆತನಂಥವರಿಗೆ ಶಿಕ್ಷೆಯಾದರೆ ಜಗತ್ತಿನ ಗಂಡಸರಿಗೆಲ್ಲ ಬುದ್ಧಿ ಬರುತ್ತದೆ’ ಎಂಬ ಮಾತೂ ಆ ಪಾತ್ರದ ಬಾಯಿಯಲ್ಲಿ ಸಹಜ ಮಾತಾಗಿ ಕೇಳಿಸುವುದಿಲ್ಲ; ಆಡಿಸಿದ ಮಾತಾಗಿ ಕೇಳಿಸುತ್ತದೆ.

ಇನ್ನೊಂದು ಮುಖ್ಯ ಪಾತ್ರ ಕಸ್ತೂರಿ. ಬಹುಸಂಕಷ್ಟಗಳನ್ನು ಹಾದು, ಮೈಯಲ್ಲಿ ಏಡ್ಸನ್ನೂ ಮಡಿಲಲ್ಲಿ ಮಗಳನ್ನೂ ಇಟ್ಟುಕೊಂಡು ತನ್ನ ಬದುಕಿನ ದಾರಿಯನ್ನು ಕಟ್ಟಿಕೊಳ್ಳುವ ಹೆಣ್ಣು. ಆರಂಭದಲ್ಲಿಯೂ ಕೊನೆಯಲ್ಲಿಯೂ ಆಕೆಯ ಸಂಕಟ, ತಲ್ಲಣಗಳ ಒಳಜಗತ್ತು ಪರಿಣಾಮಕಾರಿಯಾಗಿ ಮೂಡಿಬಂದಿದೆ. ಆದರೆ ‘ಎಚ್‌ಐವಿ ಕಸ್ತೂರಿ’ಯಾಗಿ ಬೆಳೆಯುವುದನ್ನು ವಿವರಿಸುವ ‘ಕಾಯಾ ರಾಜಕಾರಣ’ ಎಂಬ ಹೆಸರಿನ ಎರಡು ಅಧ್ಯಾಯಗಳಲ್ಲಿ ಅವಳ ಅಂತರಂಗದ ಬದುಕು ಸಂಪೂರ್ಣ ಮಾಯವಾಗಿದೆ. ಬದಲಿಗೆ ಕಸ್ತೂರಿ ಎಂಬ ಪಾತ್ರ ಲೇಖಕರ ಕಣ್ಣ ಇಶಾರೆಯಂತೆ ನಡೆಯುವ ಕ್ಯಾರಿಕೇಚರ್ ಆಗಿಬಿಡುತ್ತದೆ. ಹಾಗಾಗಿಯೇ ಆ ಭಾಗದಲ್ಲಿ ಪಾತ್ರ ನಿಧಾನಕ್ಕೆ ಹಿಂದಕ್ಕೆ ಹೋಗಿ ಲೇಖಕ ಮುಂದಕ್ಕೆ ಬಂದಂತೆ ತೋರುತ್ತದೆ. ಇದರಿಂದಾಗಿ ಕಸ್ತೂರಿಯ ಪಾತ್ರವೂ ಕಾದಂಬರಿಯ ಅನುಭವಜಗತ್ತೂ ಕುಸಿದಿದೆ.

ಇನ್ನೊಂದು ಗಮನಾರ್ಹ ವಿಷಯ, ಈ ಕಾದಂಬರಿಯ ಮುಖ್ಯ ಹೆಣ್ಣುಪಾತ್ರಗಳೆಲ್ಲವೂ ಅವಲಂಬಿತರು ಇಲ್ಲವೇ ಅವಕಾಶವಾದಿಗಳು; ಕೆಲವೊಮ್ಮೆ ಎರಡೂ! ಹೊರಗಿನಿಂದ ಆಧುನಿಕ, ಸ್ವತಂತ್ರ ಮನಃಸ್ಥಿತಿಯ ವೇಷ ತೊಟ್ಟು ಹಣಕ್ಕಾಗಿ, ಯಶಸ್ಸಿಗಾಗಿ ಪುರುಷನನ್ನು ಯಾವುದೇ ಸಿಗ್ಗಿಲ್ಲದೆ ಬಳಸಿಕೊಳ್ಳುವವರು. ಮಲೀಕ ಕೊಡುವ ಜೀವನಾಂಶದಲ್ಲಿ ಪರಿ, ಎಡ್ವರ್ಡ್ ಎಂಬ ಬಡ ಪ್ರೊಫೆಸರ್ ಜೊತೆಗಿರುತ್ತಾಳೆ. ಎಡ್ವರ್ಡ್‌ನಿಗೊಬ್ಬಳು ಹ್ಯಾನಾ ಎಂಬ ಹೆಂಡತಿಯಿದ್ದಾಳೆ. ಅವಳಿಗೂ ಪರಿ, ಮಲೀಕನಿಂದ ತೆಗೆದುಕೊಳ್ಳುತ್ತಿರುವ ಜೀವನಾಂಶದ ಮೇಲೆ ಕಣ್ಣಿದೆ. ಇತ್ತ, ಸಮಾಂತ ಕೂಡ ಮೊದಲು ಅಮ್ಮನ ದುಡ್ಡಿನಲ್ಲಿ ನಂತರ ಮಲೀಕನ ಹಣದಲ್ಲಿ ಬದುಕು ಉಡಾಯಿಸುತ್ತಿರುವವಳು. ಕೊನೆಯಲ್ಲಿ ತೋಟ ತೆಗೆದುಕೊಳ್ಳಲು ಮುಂಗಡ ಹಣಕ್ಕಾಗಿ ಮಲೀಕನ ಬಳಿ ಹಣ ಕೇಳಿದಾಗ ಕಸ್ತೂರಿಗೆ ತನ್ನ ಮಗಳ ಬಗ್ಗೆ ಹೆಮ್ಮೆಯಾಗುತ್ತದೆ! ಕಸ್ತೂರಿಯೂ ತನ್ನನ್ನು ಸಿಕ್ಕಾಗೆಲ್ಲ ‘ಮುಟ್ಟುವ’ ಹಾಕಿನ್ಸ್‌ ಜೊತೆಗೇ ಬದುಕುತ್ತಾಳೆ. ಯಾಕೆ ಬದುಕುತ್ತಾಳೆ ಎಂದು ಕೇಳಿದರೆ ಅವಳ ಉತ್ತರ ‘ಅವನು ಗಂಡಸು’ ಎಂದು! ವ್ಯಕ್ತಿ ಸ್ವಾತಂತ್ರ್ಯ ಮತ್ತು ಸ್ವಾವಲಂಬಿ ಬದುಕನ್ನೇ ಸಾಮಾಜಿಕ ವ್ಯವಸ್ಥೆಯ ಗುರುತಾಗಿಸಿಕೊಂಡಿರುವ ಅಮೆರಿಕದಲ್ಲಿನ ಈ ಹೆಣ್ಣುಪಾತ್ರಗಳ ವರ್ತನೆ ಸೋಜಿಗ ಹುಟ್ಟಿಸುತ್ತದೆ.

ಕಾದಂಬರಿಯ ಮುಕ್ತಾಯ ತುಂಬ ಚೇತೋಹಾರಿಯೂ ಆಶಾದಾಯಕವೂ ಆಗಿದೆ. ಬದುಕಿಗೊಂದು ಗುರಿಯೇ ಇಲ್ಲದಂತಿದ್ದ ಸಮಾಂತ ಕೃಷಿ ಮಾಡಲು ತೊಡಗುತ್ತಾಳೆ. ಮಲೀಕ ತನ್ನ ಸೌಂದರ್ಯವರ್ಧನೆಯ ಕೆಲಸ ಬಿಟ್ಟು ಮದುಮಗಳ ಬೆರಳನ್ನು ಜೋಡಿಸುವ ಕೆಲಸದಲ್ಲಿ ತೊಡಗುತ್ತಾನೆ. ನಿಜದ ಅರ್ಥದಲ್ಲಿ ಡಾಕ್ಟರನಾಗುತ್ತಾನೆ. ಈ ಎರಡೂ ಪಾತ್ರಗಳು ತಮ್ಮ ನೆಮ್ಮದಿಯನ್ನು ಕಂಡುಕೊಳ್ಳುವುದು ನಿಸರ್ಗದ ಸನ್ನಿಧಾನದಲ್ಲಿ ಎನ್ನುವುದು ಧ್ವನಿಪೂರ್ಣವಾಗಿದೆ. ಕೊನೆಗೂ ಮನುಷ್ಯನ ಎಲ್ಲ ಗಾಯಗಳಿಗೆ ಮುಲಾಮು ಇರುವುದಿದ್ದರೆ, ಅವನ ವಿನಾಶವನ್ನು ತಡೆಯುವ ಶಕ್ತಿ ಯಾರಿಗಾದರೂ ಇದ್ದರೆ ಅದು ಪ್ರಕೃತಿಗೇ ಎಂಬುದನ್ನು ಸೂಚಿಸುವ ಈ ಮುಕ್ತಾಯ ‘ಕಾಯಾ’ಕ್ಕೊಂದು ಮಮತೆಯ ಮಾಯಕವನ್ನು ಕಲ್ಪಿಸುವಂತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT