ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಸ್ತಕ ವಿಮರ್ಶೆ | ಮಕ್ಕಳ ತಾತ್ವಿಕ ಚಿಂತನೆಗೆ ದಾರಿದೀಪ

Last Updated 5 ಫೆಬ್ರುವರಿ 2022, 20:15 IST
ಅಕ್ಷರ ಗಾತ್ರ

ಮಕ್ಕಳಿಗಾಗಿ ತತ್ವಚಿಂತನೆ

ಲೇಖಕ: ಸುಂದರ್‌ ಸಾರುಕ್ಕೈ
ಕನ್ನಡಕ್ಕೆ: ಮಾಧವ ಚಿಪ್ಪಳಿ
ಚಿತ್ರಗಳು:ಪ್ರಿಯಾ ಕುರಿಯನ್
ಪ್ರಕಾಶನ: ಅಕ್ಷರ ಪ್ರಕಾಶನ
ಬೆಲೆ: 260
​ಪುಟಗಳು: 80


ನಮ್ಮ ಮಕ್ಕಳು ರ್‍ಯಾಂಕ್ ಪಡೆಯದಿದ್ದರೂ ಅಡ್ಡಿ ಇಲ್ಲ, ಚೆಂದಾಗಿ ಆಲೋಚನೆ ಮಾಡಲು ಕಲಿತರೆ ಸಾಕು ಎನ್ನುವುದಾದರೆ ನಾವು ಓದಲೇಬೇಕಾದ ಪುಸ್ತಕವಿದು. ಈ ಪುಸ್ತಕದ ಲೇಖಕರಾದ ಸುಂದರ್‌ ಸರುಕ್ಕೈ ಅವರನ್ನು ದಿನನಿತ್ಯ ಜೀವನದ ತತ್ವಶಾಸ್ತ್ರಜ್ಞರೆಂದೇ ಕರೆಯಬಹುದು. ಅವರು ತತ್ವಶಾಸ್ತ್ರದ ಕುರಿತು ನಮಗಿರುವ ತಪ್ಪು ಕಲ್ಪನೆಗಳನ್ನು ನಿವಾರಿಸುತ್ತ, ತಾತ್ವಿಕ ಚಿಂತನೆಯು ಸಾಮಾನ್ಯವಾದುದೆಂದು ಸಾರ್ವಜನಿಕರಿಗೆ ಮುಟ್ಟಿಸುವ ಕೆಲಸ ಮಾಡುತ್ತಿದ್ದಾರೆ.

ತಮ್ಮ ‘ಬೇರ್‌ ಫುಟ್ ಫಿಲಾಸಫರ್ಸ್‌’ https://www.barefootphilosophers.com/ ಯೋಜನೆ ಅಡಿಯಲ್ಲಿ ಸುಂದರ್‌ ಅವರು ತತ್ವ ಚಿಂತನೆಯನ್ನು ಸಮಾಜಮುಖಿಯಾಗಿಸುತ್ತಿದ್ದಾರೆ. ಅಂಕುಡೊಂಕಾಗಿ ದೇಶದುದ್ದಕ್ಕೂ ಅಲೆದಾಡುತ್ತಿರುವ ಅವರು, ಸ್ಪಷ್ಟ ಗುರಿ ಹೊಂದಿರುವ ಸಂಚಾರಿ ಚಿಂತಕರ ಚಾವಡಿಯನ್ನು ರೂಪಿಸುತ್ತಿದ್ದಾರೆ. ಅದರ ಭಾಗವಾಗಿ ಮಕ್ಕಳಿಗಾಗಿ ತತ್ವಶಾಸ್ತ್ರದ ಹಲವು ಕಾರ್ಯಾಗಾರಗಳನ್ನು ಮಾಡಿ, ಅವುಗಳ ಯಶಸ್ಸಿನ ಫಲವಾಗಿ ಅವರು ಫಿಲಾಸಫಿ ಫಾರ್‍ ಕಿಡ್ಸ್ ಎಂಬ ಪುಸ್ತಕವನ್ನು ಇಂಗ್ಲಿಷ್‌ನಲ್ಲಿ ರಚಿಸಿದ್ದಾರೆ. ಅದು ಈಗ ಹಲವು ಭಾರತೀಯ ಭಾಷೆಗಳಿಗೆ ಅನುವಾದಗೊಳ್ಳುತ್ತಿದ್ದು, ಈಗ ಕನ್ನಡದಲ್ಲೂ ಲಭ್ಯ. ಇದರಿಂದ ಕನ್ನಡದ ಮಕ್ಕಳಿಗಂತೂ ಹೆಚ್ಚಿನ ಪ್ರಯೋಜನವಾಗಲಿದೆ.

ಈ ಪುಸ್ತಕವನ್ನು ನಿರ್ಮಿಸಿದ ಮನಸ್ಸುಗಳ ಹಿಂದೆ ಹಲವು ಕಾಳಜಿಗಳಿವೆ: ಇಂದಿನ ಚಿಂತನಹೀನ ಶೈಕ್ಷಣಿಕ ವ್ಯವಸ್ಥೆ ಜ್ಞಾನವೆಂದರೆ ‘ವಿಜ್ಞಾನ’, ಶಿಕ್ಷಣವೆಂದರೆ ಒತ್ತಡ, ಭಯ, ಸ್ಪರ್ಧೆ ಎಂಬಂತೆ ಮಾಡಿದೆ. ಅರ್ಥಪೂರ್ಣವಾಗಿ, ತೃಪ್ತಿಕರ ಜೀವನ ನಡೆಸಲು ಬೇಕಾದ ಜ್ಞಾನ ಮತ್ತು ಕೌಶಲಗಳು ಮಕ್ಕಳಿಗೆ ದೊರಕದಂತೆಯೂ ಈ ವ್ಯವಸ್ಥೆ ಮಾಡಿದೆ ಎಂದು ಪುಸ್ತಕದ ಪ್ರಸ್ತಾವನೆಯಲ್ಲಿ ಸುಂದರ್‍ ಸರಿಯಾಗಿ ಗುರುತಿಸುತ್ತಾರೆ. ಇಂತಹ ಸಂಕಟಕರ ಸ್ಥಿತಿಯನ್ನು ಮನಸ್ಸಿನಲ್ಲಿಟ್ಟುಕೊಂಡು, ‘ತತ್ವಶಾಸ್ತ್ರೀಯ ಚಿಂತನೆಯು ವಿದ್ಯಾರ್ಥಿಗಳಿಗೆ ಹೆಚ್ಚು ಸ್ವತಂತ್ರರೂ ವಿಮರ್ಶಾ ಪ್ರವೃತ್ತಿಯವರೂ ಸೃಜನಶೀಲರೂ ಆಗಲು ಬೇಕಾದ ಕೌಶಲಗಳನ್ನು ಕಲಿಸಿ ಅವರನ್ನು ಸಬಲರನ್ನಾಗಿಸುತ್ತದೆ’ ಎಂಬ ನಂಬಿಕೆಯಿಂದ ಅವರು ಈ ಕೆಲಸಕ್ಕೆ ಕೈಹಾಕಿರುವುದಾಗಿ ಹೇಳುತ್ತಾರೆ. ಅವರ ಇನ್ನೊಂದು ನಂಬಿಕೆ, ‘ಒತ್ತಡಗಳಿಲ್ಲದೇ ಕಲಿಕೆಯ ಸುಖವನ್ನು ಮಕ್ಕಳು ಮರಳಿ ಪಡೆಯಲು ಸಾಧ್ಯವಾದರೆ ಅವರು ತಮ್ಮ ಜೀವನದುದ್ದಕ್ಕೂ ಸಮರ್ಥರಾಗಿರುತ್ತಾರೆ’ ಎಂಬುದು. ಕಲಿಕೆಯು ಸಂತೋಷದ ಸವಾರಿಯನ್ನು ಮಾಡಬೇಕು ಎಂದುಕೊಂಡು ಬರೆದ ಪುಸ್ತಕವಿದು.

ಇದು ತತ್ವಶಾಸ್ತ್ರದ ಪುಸ್ತಿಕೆ ಅಲ್ಲ, ತತ್ವಶಾಸ್ತ್ರಜ್ಞರು ಏನೇನು ಹೇಳಿದ್ದಾರೆ ಎಂದು ಹೇಳುವ ಹೊತ್ತಿಗೆಯೂ ಅಲ್ಲ. ಬದಲಾಗಿ ತಾತ್ವಿಕವಾಗಿ ಯೋಚನೆ ಮಾಡುವುದನ್ನು ಕಲಿಸುವ ಪುಸ್ತಿಕೆ. ತತ್ವಶಾಸ್ತ್ರವೆಂದರೆ ಘನ ಪಂಡಿತರಷ್ಟೇ ಮಾಡುವ ಅಧ್ಯಯನವಲ್ಲ, ಅದು ನಮ್ಮ ದಿನನಿತ್ಯದ ಕಲಿಕೆಯ ಭಾಗವೆಂದು ಇದು ತೋರಿಸುತ್ತದೆ. ಹಾಗಾಗಿ ಇದು ಮಾಹಿತಿಯನ್ನು ಕೊಡುವ ಪುಸ್ತಕವಾಗದೆ, ನಮ್ಮ ಜೊತೆ ಮಾತನಾಡುತ್ತ ಯೋಚನೆಯನ್ನು ಕಲಿಸುವ ಸಾಮಗ್ರಿಯಾಗಿದೆ.

ಒಟ್ಟು ಎಂಟು ಸಾಧನಗಳ ಮೂಲಕ ಇಲ್ಲಿ ತತ್ವ ಚಿಂತನೆ ಮಾಡುವುದನ್ನು ಕಲಿಯಬಹುದು: ‘ನೋಡುವುದು’ (ಸೀಯಿಂಗ್), ‘ಯೋಚಿಸುವುದು’,‘ಓದುವುದು’,‘ಬರೆಯುವುದು’, ‘ಗಣಿತ’, ‘ಕಲೆ’, ‘ಒಳ್ಳೆಯವರಾಗುವುದು’ (ಬೀಯಿಂಗ್ ಗುಡ್) ಮತ್ತು ‘ಕಲಿಯುವುದು’. ಪ್ರತೀ ವಿಭಾಗದಲ್ಲಿ ಆಯಾ ವಿಷಯಕ್ಕೆ ತಕ್ಕುದಾದ ನಿರೂಪಣೆಯ ತಂತ್ರಗಳನ್ನು ರೂಪಿಸಲಾಗಿದೆ; ಸರಳ ಚಟುವಟಿಕೆಗಳನ್ನು ಕೊಡುವುದರ ಮೂಲಕ, ಪ್ರಶ್ನೆಗಳನ್ನು ಕೇಳುವುದರ ಮೂಲಕ, ಉದಾಹರಣೆ ಕೊಟ್ಟು ವಿವರಿಸುವ ಮೂಲಕ ಲೇಖಕರು ಇಲ್ಲಿ ವಿಷಯಗಳನ್ನು ಮನನ ಮಾಡಿಸುತ್ತಾರೆ.

ಕೆಲವು ನಿದರ್ಶನಗಳನ್ನು ಇಲ್ಲಿ ಕೊಡಬಹುದೇನೋ. ಯೋಚನೆ ಮಾಡುವುದು ಹೇಗೆ ಎಂದು ಕಲಿಸುವ ಅಧ್ಯಾಯದಲ್ಲಿ ಈ ರೀತಿ ಪ್ರಶ್ನೆಗಳನ್ನು ಕೇಳುತ್ತಾರೆ: ‘ಈ ಪ್ರಶ್ನೆಗಳಿಗೆ ಉತ್ತರಿಸಿದರೆ ಯೋಚನೆಯ ಬಗ್ಗೆ ಏನು ಅರ್ಥವಾಗುತ್ತದೆ ಗಮನಿಸಿ– ಯೋಚನೆ ಮಾಡುವಾಗ ಕಣ್ಣು ಮುಚ್ಚಿಕೊಳ್ಳುತ್ತೀರಾ? ಕಿವಿಗಳನ್ನು ಮುಚ್ಚಿಕೊಂಡು ಯೋಚನೆ ಮಾಡಲು ಸಾಧ್ಯವೇ? ಯೋಚನೆ ಮಾಡುತ್ತಿರುವಾಗ ನಿಮಗೆ ಸುತ್ತಲಿನ ಶಬ್ದಗಳು ಕೇಳಿಸುತ್ತವೆಯೇ? ಯೋಚನೆ ಮಾಡಲಿಕ್ಕೆ ನಿಮಗೆ ಭಾಷೆ ಬೇಕೆ? ಕನ್ನಡ? ಇಂಗ್ಲಿಷ್? ಇತ್ಯಾದಿ’. ಹಾಗೆಯೇ ಯೋಚನೆಯ ಬಗ್ಗೆ, ಅದರ ಪ್ರಯೋಜನದ ಬಗ್ಗೆ ಹೇಳುತ್ತ, ಅದನ್ನು ಕೈಗೊಳ್ಳುವುದು ಹೇಗೆ ಎನ್ನುವುದನ್ನು ಈ ಭಾಗ ಕಲಿಸುತ್ತದೆ.

ಓದಿನ ಬಗ್ಗೆ ಕಲಿಸುತ್ತ, ‘ಓದಿನ ಮೂಲಕ ಪಠ್ಯಗಳನ್ನು ಅರ್ಥಮಾಡಿಕೊಳ್ಳಲು ಕೇವಲ ಪದಗಳ ಅರ್ಥ ಗೊತ್ತಿದ್ದರೆ ಸಾಕಾಗುವುದಿಲ್ಲ, ವಾಕ್ಯಗಳಿಗೆ ಅವುಗಳದೇ ಬೇರೆ ಅರ್ಥ ಇರುತ್ತದೆ’ ಎಂದು ತೋರಿಸಿ, ಗುಲಾಬಿ ಬಣ್ಣದ ಅಕ್ಷರಗಳಲ್ಲಿ ಚಟುವಟಿಕೆಯೊಂದನ್ನು ಕೊಡಲಾಗಿದೆ: ‘ಈ ಮಾವಿನ ಹಣ್ಣು ಹಳದಿ ಇದೆ ಮತ್ತು ಸಿಹಿ ಆಗಿದೆ’ ಎನ್ನುವ ವಾಕ್ಯದ ಪದಗಳನ್ನು ಇಟ್ಟುಕೊಂಡು ಎಷ್ಟು ಹೊಸ ವಾಕ್ಯಗಳನ್ನು ಮಾಡಲಿಕ್ಕೆ ಸಾಧ್ಯ? ಅವುಗಳಲ್ಲಿ ಎಷ್ಟು ವಾಕ್ಯಗಳಿಗೆ ಅರ್ಥ ಇದೆ? ಹೀಗೆ ಹಲವು ಚಟುವಟಿಕೆಗಳನ್ನೊಳಗೊಂಡ ಪುಸ್ತಕದ ವಿನ್ಯಾಸವು ಓದುಗರನ್ನು ಎಂಗೇಜ್ ಮಾಡುತ್ತದೆ.

ವಿವರಣೆ ಕೊಟ್ಟು ಕಲಿಸುವ ಒಂದು ಉದಾಹರಣೆಯನ್ನು ನೋಡೋಣ. ಇದು ‘ಗಣಿತ’ ಎಂಬ ಅಧ್ಯಾಯದಲ್ಲಿದೆ: ‘ಒಂದು ಕತೆಯನ್ನು ಓದುವಾಗ ಅಥವಾ ಬರೆಯುವಾಗ ಏನು ಮಾಡುತ್ತೀರೋ ಗಣಿತವು ಅದಕ್ಕಿಂತ ಭಿನ್ನವೇನಲ್ಲ. ಛೋಟಾ ಭೀಮನ ಒಂದು ಕತೆ ಇದೆ ಎಂದುಕೊಳ್ಳೋಣ. ಅವನೊಬ್ಬ ಕತೆ ಪುಸ್ತಕದಲ್ಲಿರುವ ಸಣ್ಣ ಹುಡುಗ. ಅವನಿಗೆ ಕೆಲವು ಗುಣಗಳಿದ್ದಾವೆ. ಅವನು ಯಾವದೋ ರೀತಿ ಕಾಣುತ್ತಾನೆ, ಅವನು ಎಷ್ಟೋ ಎತ್ತರ ಇದ್ದಾನೆ, ಇತ್ಯಾದಿ. ಮರದಂತೆ ಛೋಟಾ ಭೀಮ್ ನಿಜವಾದ ವಸ್ತುವಲ್ಲ, ಆದರೆ ಅವನಿಗೆ ಈ ಗುಣಗಳಿದ್ದಾವೆ. ಅದೇ ರೀತಿ, ಸಂಖ್ಯೆಗಳು ಮರದಂತೆ ಇರುವ ವಸ್ತುಗಳಲ್ಲ, ಆದರೆ ಅವುಗಳಿಗೆ ಗುಣಗಳಿವೆ. ಉದಾಹರಣೆಗೆ, 1+1=2.’

ಇಲ್ಲಿ ವಿಷಯದ ನಿರೂಪಣೆ ಹೇಗಿದೆ ಎಂದರೆ ಒಬ್ಬ ಮಾಸ್ತರ ನಮ್ಮ ಮುಂದೆ ನಿಂತು ಚಿಂತನೆ ಮಾಡುವುದನ್ನು ಕಲಿಸುತ್ತಿದ್ದಾರೇನೋ ಎನ್ನುವ ಅನುಭವ ಕೊಡುತ್ತದೆ. ಒಟ್ಟಾರೆ ಸುಂದರ್‍ ಅವರ ಬರವಣೆಗೆಯ ಶೈಲಿಯೇ ಹಾಗೆ; ಅವರ ಪಠ್ಯಗಳು ನಮ್ಮ ಜೊತೆ ಮಾತನಾಡುತ್ತವೆ. ಮಕ್ಕಳನ್ನು ಮನಸ್ಸಿನಲ್ಲಿಟ್ಟುಕೊಂಡು ಇದನ್ನು ಬರೆದುದರಿಂದ ಇಲ್ಲಿ ಭಾಷೆಯೂ ಸರಳವಾಗಿದೆ. ಪ್ರಿಯಾ ಕುರಿಯನ್ ಅವರು ಬಿಡಿಸಿದ ಚಿತ್ರಗಳು, ಬಣ್ಣ ಬಣ್ಣದ ವಿನ್ಯಾಸ ಮಕ್ಕಳ ಕಲಿಕೆಗೆ ಪೂರಕವಾಗಲಿವೆ. ಮೂಲ ಪಠ್ಯದ ಸರಳತೆ, ಸ್ಪಷ್ಟತೆ ಉಳಿಸಿಕೊಂಡಿರುವ ಮಾಧವ ಚಿಪ್ಪಳಿ ಅವರ ಅನುವಾದ ಕನ್ನಡಕ್ಕೆ ಒಗ್ಗಿದೆ. ಭಾಷಾಂತರ ಸೋತಿದೆಯೆಂಬ ಉದಾಹರಣೆಗಳು ಅತಿ ವಿರಳ.

ನಿಷ್ಠುರವಾದ ಮಾತೆಂದರೆ, ನಾವು ಸಮಕಾಲಿನ ಸಂದರ್ಭದಲ್ಲಿ ಅಷ್ಟೊಂದು ತಾತ್ವಿಕರಾಗುತ್ತಿಲ್ಲವೇನೋ! ತತ್ವಪದಕಾರರನ್ನ ಕಂಡ ಸಂಸ್ಕೃತಿ ನಮ್ಮದು. ತಾತ್ವಿಕತೆ ನಮ್ಮ ಜೀವನದಲ್ಲಿ ಹಾಸುಹೊಕ್ಕಾಗಿತ್ತು. ಈಗ ನಾವು ಆಧುನಿಕಪೂರ್ವ ತತ್ವಚಿಂತನೆಯನ್ನು ಕಳೆದುಕೊಂಡು, ಆಧುನಿಕ ತತ್ವಶಾಸ್ತ್ರವನ್ನೂ ಅರಗಿಸಿಕೊಳ್ಳದೆ ಟೊಳ್ಳಾಗಿಬಿಟ್ಟಿದ್ದೇವೇನೋ!

ಪ್ರಬುದ್ಧ ಜೀವನದ ದೃಷ್ಟಿಕೋನಕ್ಕೆ ತತ್ವಚಿಂತನೆಯು ತಳಪಾಯವಾಗುತ್ತದೆ ಎನ್ನುವುದಾದರೆ, ಪ್ರಸ್ತುತ ಪುಸ್ತಕ ನಾವು ಕಳೆದುಕೊಳ್ಳುತ್ತಿರುವ ನಮ್ಮ ತತ್ವಚಿಂತನೆಯನ್ನು ನೆನಪಿಸಿಕೊಳ್ಳಲು ಸಂದರ್ಭವೊಂದನ್ನು ಒದಗಿಸಿದೆ. ಮತ್ತೆ ಇಂತಹ ಪುಸ್ತಕಗಳು ಅನುವಾದಗಳ ಮೂಲಕ ನಮ್ಮನ್ನು ತಲುಪುವುದರ ಜೊತೆಗೆ, ನಮ್ಮ ಭಾಷೆಯಲ್ಲಿಯೂ ಇವು ಮೂಡಿಬರುವುದು ಉಚಿತವಲ್ಲವೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT