ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಳದ ಹಂಗಿಲ್ಲದ ನದೀಯಾನ

Last Updated 8 ಮಾರ್ಚ್ 2020, 1:59 IST
ಅಕ್ಷರ ಗಾತ್ರ

‍ಪುಸ್ತಕ: ತೇಜೋ – ತುಂಗಭದ್ರಾ (ಕಾದಂಬರಿ)

ಲೇಖಕರು: ವಸುಧೇಂದ್ರ

ಪುಟ: 464

ಬೆಲೆ: ₹380

ವಿಳಾಸ: ಛಂದ ಪುಸ್ತಕ, ಐ –004, ಮಂತ್ರಿ ಪ್ಯಾರಾಡೈಸ್, ಬನ್ನೇರುಘಟ್ಟ ರಸ್ತೆ, ಬೆಂಗಳೂರು–76

ಲಲಿತಪ್ರಬಂಧ ಮತ್ತು ಸಣ್ಣಕತೆಗಳಿಂದ ಜನಪ್ರಿಯರಾದ ವಸುಧೇಂದ್ರ ಅವರಿಗೆ ಕಾದಂಬರಿ ಪ್ರಕಾರ ಹೊಸದೇನಲ್ಲ. ‘ತೇಜೋ–ತುಂಗಭದ್ರಾ’ ಇವರ ಎರಡನೇ ಕಾದಂಬರಿ. ಮೊದಲ ಕಾದಂಬರಿ ‘ಹರಿಚಿತ್ತ ಸತ್ಯ’ದಲ್ಲಿ ಮನುಷ್ಯ ಬದುಕಿನಲ್ಲಿ ಅವನ ಪ್ರಯತ್ನ ಮೀರಿ ನಡೆಯುವ ವಿಧಿಯಾಟ ನಡೆಯನ್ನು ಹಿಡಿಯುವ ಪ್ರಯತ್ನ ಮಾಡಿದ್ದ ಅವರು, ‘ತೇಜೋ–ತುಂಗಭದ್ರಾ’ದಲ್ಲಿ ಆ ಕ್ಯಾನ್ವಾಸ್‌ ಅನ್ನು ಇನ್ನಷ್ಟು ವಿಸ್ತರಿಸಿಕೊಂಡು ಎರಡು ನದಿಗಳ ಗುಂಟ ಹರಿದ ನಾಗರಿಕತೆಯ ವಿರಾಟ್ ಸ್ವರೂಪವನ್ನು ಕಂಡರಿಸಲು ಯತ್ನಿಸಿದ್ದಾರೆ.

ಸಾಮಾನ್ಯವಾಗಿ ಚರಿತ್ರೆಯ ಕಥೆ ಎಂದರೆ ಅದು ಆಳಿದವರ, ಯುದ್ಧ ಮಾಡಿದವರ ಕಥೆಯೇ ಆಗಿರುತ್ತದೆ. ಆದರೆ ‘ತೇಜೋ–ತುಂಗಭದ್ರಾ’ ಆಳಿಸಿಕೊಂಡವರ ಕಥೆಯನ್ನು ಹೇಳುತ್ತದೆ. ಜನಸಾಮಾನ್ಯರ ಬದುಕನ್ನು ಆಯಾ ಕಾಲಕ್ಕೆ ಆಳಿದವರು ಹೇಗೆ ಕಲಕಿದರು, ರಾಜರ ಸಾಮ್ರಾಜ್ಯ ವಿಸ್ತರಣೆಯ, ಯುದ್ಧದ ಹಪಹಪಿ ನಾಗರಿಕರ ಬದುಕಿನ ಹರಿವಿನ ದಿಸೆಯನ್ನು ಹೇಗೆ ಬದಲಿಸುತ್ತದೆ ಎನ್ನುವುದು ಕಾಣಿಸುವುದು ಈ ಕಾದಂಬರಿಯ ಉದ್ದೇಶ. ಹೀಗಾಗಿಯೇ ಪೋರ್ಚುಗಲ್‌ನ ಲಿಸ್ಬನ್‌ ನಗರದಿಂದ ಕರ್ನಾಟಕದ ವಿಜಯನಗರದವೆಗೆ 1492ರಿಂದ ಹಿಡಿದು 1518ರವರೆಗೆ ಹರಡಿಕೊಂಡಿರುವ ಈ ಕಥನವ್ಯಾಪ್ತಿಯಲ್ಲಿ ರಾಜರ ಚಹರೆ ನೇರವಾಗಿ ಕಾಣಿಸಿಕೊಳ್ಳುವುದು ಒಂದೆರಡು ಸಲ ಮಾತ್ರ. ಉಳಿದಂತೆ ಧರ್ಮ, ಪ್ರಭುತ್ವಗಳ ಕರಿನೆರಳು ಜನಸಾಮಾನ್ಯರ ಬದುಕನ್ನು ಹೇಗೆ ಹಿಂಡಿ ಹಿಪ್ಪೆ ಮಾಡುತ್ತದೆ, ಮುಂದೆ ಸಾಗುತ್ತಿರುವ ನಾಗರಿಕತೆಯ ಕಾಲನ್ನು ಅವು ಹೇಗೆ ಅಮಾನವೀಯ ಕ್ರೌರ್ಯದ ಮೂಲಕ ಹಿಡಿದೆಳೆಯುತ್ತವೆ ಎಂಬುದನ್ನೇ ಮುಖ್ಯವಾಗಿ ನಿರೂಪಿಸುತ್ತ ಹೋಗುತ್ತದೆ. ಈ ಹರಿವಿನಲ್ಲಿ ಹಲವು ಧರ್ಮ, ಸಮುದಾಯ, ದೇಶ ಕಾಲಗಳ ಘರ್ಷಣೆಗಳು ಬೆರೆತುಹೋಗಿವೆ. ಕ್ರೌರ್ಯ ಮತ್ತು ಪ್ರೇಮಗಳು ಪರಸ್ಪರ ಮುಖಾಮುಖಿಯಾಗಿವೆ. ಪರಸ್ಪರ ಗುದ್ದಿಕೊಂಡು ಮುರಿದುಕೊಂಡು ಬಿದ್ದಿವೆ. ಮತ್ತೆ ಎದ್ದು ಹೋರಾಟಕ್ಕೆ ನಿಂತಿವೆ.

ಯಾವುದಾದರೊಂದು ಬಗೆಯಲ್ಲಿ ಇಂದಿನ ಬಿರುಕು–ಬಿಕ್ಕಟ್ಟುಗಳಿಗೆ ಸಲ್ಲದೇ ಹೋದರೆ ಇತಿಹಾಸಕಥನಗಳನ್ನು ಕಟ್ಟುವುದು ವ್ಯರ್ಥ. ‘ತೇಜೋ–ತುಂಗಭದ್ರಾ’ ಕಾದಂಬರಿಯ ಸಾರ್ಥಕತೆ ಇರುವುದೂ ಇಲ್ಲಿಯೇ. ಎಷ್ಟೋ ವರ್ಷಗಳ ಹಿಂದಿನ ಕಥನವನ್ನು ಒರೆಯುವ ಈ ಕೃತಿಯಲ್ಲಿನ ಹಲವು ‘ಜಾಗೃತ ಜಾಗ’ಗಳಿಗೆ, ಇಂದಿನ ಮನುಷ್ಯನಡೆಯ ದಿಸೆಯ ತುದಿಗೆ ಕಾದಿರುವ ವಿನಾಶವನ್ನು ಕಾಣಿಸುವ ಕಾಣ್ಕೆ ಇದೆ. ಇತಿಹಾಸದ ಹರಿವಿನ ಬಿರುಕುಗಳಲ್ಲಿ ವರ್ತಮಾನದ ಬಿಂಬಗಳನ್ನು ಈ ಕಾದಂಬರಿ ಅಲ್ಲಲ್ಲಿ ಕಾಣಿಸುತ್ತದೆ. ಉದಾಹರಣೆಗಾಗಿ ವಿಜಯನಗರ ಸಾಮ್ರಾಜ್ಯದ ತೆಂಬಕಪುರವನ್ನು ಕೃಷ್ಣದೇವರಾಯ ‘ಕೃಷ್ಣರಾಯಪುರ’ ಎಂದು ಹೆಸರು ಬದಲಿಸುವ ಸನ್ನಿವೇಶ, ಇಂದಿನ ಹೆಸರು ಬದಲಾವಣೆಯ ರಾಜಕೀಯ ಪ್ರಹಸನಗಳ ನೆನಪಿಗೆ ತರುತ್ತದೆ. ಹೀಗೆ ವರ್ತಮಾನಕ್ಕೆ ಕನ್ನಡಿ ಹಿಡಿಯುವ ಹಲವು ಜಾಗಗಳು ಈ ಕಾದಂಬರಿಯಲ್ಲಿವೆ.

ಸ್ಥಾಪಿತವಾದ ಇತಿಹಾಸದ ಸತ್ಯವನ್ನು ಮತ್ತೊಂದು ದಿಕ್ಕಿನಿಂದ ನೋಡಲೂ ಈ ಕಾದಂಬರಿ ಒತ್ತಾಯಿಸುತ್ತದೆ. ಪೋರ್ಚುಗೀಸರ ಆಗಮನವನ್ನು ಭಾರತದ ಅಧಃಪತನದ ಆರಂಭದ ಸೂಚನೆಯಾಗಿ ನಾವು ಗುರ್ತಿಸುತ್ತೇವೆ. ಆದರೆ ಸಾವಿರ ಸಾವಿರ ಕಿಲೋಮೀಟರ್ ದೂರ ಇರುವ ಆ ದೇಶಕ್ಕೆ ಭಾರತವೂ ಒಂದು ಇವಿಲ್ ಆಗಿ ಕಾಣಿಸಬಹುದಾದ ಸಾಧ್ಯತೆಯೊಂದನ್ನು ಮರೆತುಬಿಡುತ್ತೇವೆ. ಕಾದಂಬರಿಯ ಆರಂಭದ ಭಾಗದಲ್ಲಿಯೇ ಬೆಲ್ಲಾ ತನ್ನ ಇನಿಯ ಗೇಬ್ರಿಯಲ್‌ಗೆ ಹೇಳುವ ಮಾತುಗಳನ್ನು ಗಮನಿಸಿ: ‘‘ಪ್ರತಿಯೊಂದು ನದಿಗೂ ದೇವರು ಒಂದು ವಿಶೇಷ ಪರಿಮಳವನ್ನು ಕೊಟ್ಟಿರುತ್ತಾನೆ. ಅದರ ನೀರಿನ ರುಚಿ, ಅದು ಹರಿಯುವ ಮಣ್ಣಿನ ಗುಣ, ಅದರೊಳಗಿನ ಜಲಚರಗಳ ಮೈವಾಸನೆ, ಸುತ್ತಲ ಹಸಿರು – ಎಲ್ಲಾ ಸೇರಿ ಅದು ಸಂಭವಿಸಿರುತ್ತದೆ. ಆ ಸಹಜ ಪರಿಮಳವೇ ನದಿಯ ಇರುವನ್ನು ನಮಗೆ ಆಪ್ತಗೊಳಿಸುತ್ತದೆ. ಆದರೆ ಈಗ ನಮ್ಮ ತೇಜೋ ನದಿಗೆ ಆಗಿರುವ ಅಧೋಗತಿಯನ್ನು ನೋಡು! ತನ್ನ ಮೂಲ ಪರಿಮಳವನ್ನೇ ಕಳೆದುಕೊಂಡು ಬರೀ ಭಾರತದ ಮಸಾಲೆ ಪದಾರ್ಥಗಳ ಗಾಢ ವಾಸನೆಯಿಂದ ನರಳುತ್ತಿದೆ. ಸಾವಿರಾರು ವರ್ಷಗಳಿಂದ ತನ್ನ ಪರಿಮಳವನ್ನು ಕಾಪಾಡಿಕೊಂಡಿದ್ದ ನದಿಗೆ ನಾವು ಬರೀ ಐದು ವರ್ಷಗಳಲ್ಲಿ ಎಂತಹ ಅವಸ್ಥೆ ತಂದಿಟ್ಟುಬಿಟ್ಟಿದ್ದೇವೆ! ಗಾಮಾ ಭಾರತಕ್ಕೆ ಹಾದಿಯನ್ನು ಕಂಡು ಹಿಡಿದದ್ದೇ ನಮ್ಮ ತೇಜೋಳಿಗೆ ಕುತ್ತಾಗಿ ಹೋಯ್ತು’’.

ಬೆಲ್ಲಾಳಿಗೆ ಭಾರತ ತನ್ನೂರಿನ ಜನರ ನೆಮ್ಮದಿ ಕೆಡಿಸಿದ, ತನ್ನ ಇನಿಯನನ್ನು ತನ್ನಿಂದ ಕಿತ್ತುಕೊಂಡು ಬದುಕನ್ನು ನಾಶಗೊಳಿಸುತ್ತಿರುವ ಇವಿಲ್. ಇದೇ ಕೋಪದಲ್ಲಿ ಅವಳು ಭಾರತಕ್ಕೆ ಹಾಕುವ ಶಾಪವನ್ನು ನೋಡಿ: ‘ತನ್ನ ಶ್ರೀಮಂತಿಕೆ ಸೊಕ್ಕಿನಿಂದ ಆ ಭಾರತವೆಂಬ ದೇಶ ನನ್ನ ಪ್ರಿಯಕರನನ್ನು ನನ್ನಿಂದ ಕಿತ್ತುಕೊಳ್ಳುತ್ತಿದೆ. ಅದಕ್ಕಾಗಿ ನಾನು ಭಾರತವನ್ನು ದ್ವೇಷಿಸುತ್ತೇನೆ. ಸಿರಿತನ ಯಾವತ್ತೂ ಪ್ರೀತಿಗಿಂತಲೂ ಮಿಗಿಲಾದದ್ದಲ್ಲ. ಆದರೂ ತನ್ನ ಸಿರಿತನದ ಅಹಂಕಾರ ಆ ದೇಶಕ್ಕಿದೆ. ಈ ದೇಶದ ಬಡ ಯುವಕರನ್ನೆಲ್ಲ ತನ್ನೆಡೆಗೆ ಕರೆಸಿಕೊಳ್ಳುತ್ತಿದೆ. ಅದಕ್ಕೆ ತಕ್ಕ ಪ್ರತಿಫಲವನ್ನು ಅದು ಅನುಭವಿಸುತ್ತದೆ. ಇಕೋ, ಆ ದೇಶಕ್ಕೆ ಈ ನೊಂದ ಪ್ರೇಮಿಯ ಶಾಪವಿದೆ’.

ಬೆಲ್ಲಾಗೆ ಭಾರತ ಇವಿಲ್ ಆದರೆ, ಗೇಬ್ರಿಯಲ್‌ಗೆ ಅದು ಅಗಾಧ ಅವಕಾಶಗಳ ಆಗರ. ತಾನು, ತನ್ನಂಥ ಅಸಂಖ್ಯ ಯುವಕರು, ತನ್ನ ದೇಶ ಎಲ್ಲವೂ ಉದ್ಧಾರಗೊಳ್ಳಲು ತೆರೆದುಕೊಂಡ ದಾರಿ. ನಾವು ನಿಂತಿರುವ ತುದಿಯಿಂದ ಇತಿಹಾಸವನ್ನು ಅರ್ಥ ಮಾಡಿಕೊಳ್ಳುವಾಗ ಅದಕ್ಕೆ ಇನ್ನೊಂದು ತುದಿ ಇರುವುದನ್ನು ನಾವು ಮರೆತೇ ಬಿಟ್ಟಿರುತ್ತೇವೆ ಅಲ್ಲವೇ? ಈ ಮರೆತ ಮತ್ತೊಂದು ತುದಿಯನ್ನು ‘ತೇಜೋ–ತುಂಗಭದ್ರಾ’ ನೆನಪಿಸುತ್ತದೆ.

ಯಾವುದೇ ಕಾಲ ದೇಶ ಆಗಿರಲಿ. ಪುರುಷಾಹಂಕಾರದ ಮೆರೆದಾಟಗಳ ಫಲವಾದ ಯುದ್ಧ, ಧರ್ಮಯುದ್ಧಗಳ ಪರಿಣಾಮವನ್ನು ಬರ್ಬರವಾಗಿ ಉಣ್ಣುವುದು ಮಹಿಳೆಯರೇ ಆಗಿರುತ್ತಾರೆ. ಆದರೆ ಅದು ಯಾವ ಇತಿಹಾಸ ಪುಸ್ತಕದಲ್ಲಿಯೂ ದಾಖಲಾಗುವುದಿಲ್ಲ. ‘ತೇಜೋ–ತುಂಗಭದ್ರಾ’ ಕಾದಂಬರಿಯಲ್ಲಿ ಬರುವ ಬಹುತೇಕ ಎಲ್ಲ ಸ್ತ್ರಿಪಾತ್ರಗಳೂ ಒಂದಲ್ಲ ಒಂದು ಬಗೆಯಲ್ಲಿ ಪ್ರಭುತ್ವದಿಂದ, ಧರ್ಮದ ವೇಷತೊಟ್ಟ ಕ್ರೂರನಖಗಳಿಂದ ಜರ್ಜರಿತರಾದವರು. ಆದರೆ ಅವರೆಲ್ಲರೂ ತಮ್ಮದೇ ರೀತಿಯಲ್ಲಿ ಅದಕ್ಕೆ ಪ್ರತಿಭಟನೆಯನ್ನು ದಾಖಲಿಸುತ್ತಾರೆ ಎನ್ನುವುದೂ ಗಮನಾರ್ಹ. ಲಿಸ್ಬಾ ಭಾರತಕ್ಕೆ ಹಾಕುವ ಶಾಪದಿಂದ ಹಿಡಿದು ಹಂಪಮ್ಮ ಹೊಟ್ಟೆಯಲ್ಲಿನ ಮಗುವನ್ನು ಹೊತ್ತು ಸತಿ ಹೋಗುವುದರಿಂದ ತಪ್ಪಿಸಿಕೊಂಡು ಅಮ್ಮದಕಣ್ಣನ ಜೊತೆ ಓಡಿಹೋಗುವುದರವರೆಗೆ ಹತ್ತು ಹಲವು ಸ್ತ್ರೀ ಪ್ರತಿರೋಧದ ಮಾದರಿಗಳನ್ನು ಈ ಕಾದಂಬರಿ ದಾಖಲಿಸುತ್ತದೆ.

ಇತಿಹಾಸದ ಕಥನವನ್ನು ಜನಸಾಮಾನ್ಯರ ಬದುಕಿನ ಮೂಲಕ ಕಟ್ಟುವುದು ಸುಲಭಸಾಧ್ಯವಲ್ಲ. ಅದರಲ್ಲಿಯೂ ನಾವು ಕಂಡು ಕೇಳರಿಯದ ದೇಶದ, ಇತಿಹಾಸದ ಎಳೆಯ ಮೇಲೆ ಕಥನ ಸವಾರಿ ಮಾಡುವುದಂತೂ ಇನ್ನೂ ಕಷ್ಟ. ಅದಕ್ಕೆ ಸಾಕಷ್ಟು ಅಧ್ಯಯನ ಬೇಕು. ಅಷ್ಟೇ ಕಲ್ಪನಾಶಕ್ತಿಯೂ ಬೇಕು. ಇವೆರಡರ ಸರಿಯಾದದ ಹದ ಸಿಕ್ಕದೇ ಹೋದರೆ ಒಂದೋ ಕೈಪಿಡಿಯಾಗಿಯೋ, ಇಲ್ಲವೇ ಬರೀ ಕಾಲ್ಪನಿಕತೆಯ ವಿಲಾಸದಲ್ಲಿ ಓದುಗರನ್ನು ಮೈಮರೆಸಿ ಕೈಚೆಲ್ಲುವ ಕೃತಿಯೋ ಆಗಿಬಿಡುವ ಅಪಾಯವಿದೆ. ಈ ಕಾದಂಬರಿಯ ಪುಟಪುಟಗಳಲ್ಲಿಯೂ ಅಧ್ಯಯನಶೀಲತೆ ಎದ್ದು ಕಾಣುತ್ತದೆ. ಈ ಅಧ್ಯಯನವೇ ಈ ಕಾದಂಬರಿಯ ಸೃಜನಶೀಲತೆಯ ಹೆಗಲಿಗೆ ಭಾರವೂ ಆಗಿದೆ. ವಸ್ತು, ಆಶಯ, ವಿಸ್ತಾರಗಳ ದೃಷ್ಟಿಯಿಂದ ಇದು ಮಹತ್ವದ ಪ್ರಯತ್ನ. ಆದರೆ ಸೃಜನಶೀಲ ಕೃತಿಯಾಗಿ ಎಷ್ಟು ಯಶಸ್ವಿಯಾಗಿದೆ ಎಂದು ಕೇಳಿಕೊಂಡರೆ ಹಲವು ತೊಡಕುಗಳು ಎದ್ದು ಕಾಣಲು ಶುರುವಾಗುತ್ತದೆ.

ಹಾಗೆ ನೋಡಿದರೆ ಕಾದಂಬರಿ ಆರಂಭವೇ ತುಸು ಪೇಲವವಾಗಿದೆ. ಲಿಸ್ಬನ್‌ ನಗರದ ವಿವರಗಳೆಲ್ಲ ಡ್ರೋನ್ ಕ್ಯಾಮೆರಾದಲ್ಲಿ ತೆಗೆದ ಏರಿಯಲ್ ಶಾಟ್‌ಗಳ ಹಾಗೆ ಭಾಸವಾಗುತ್ತದೆ. ಮಾಹಿತಿಗಳ ಅತಿಯಾದ ಹರಿವಿನಿಂದ ಕಥನ ಹಿನ್ನೆಲೆಗೆ ಸರಿದು ಇತಿಹಾಸದ ಪುಟಗಳನ್ನು ಓದಿದ ಅನುಭವ ನೀಡುತ್ತದೆ.‌ತೇಜೋ ನದಿಯ ದಡದಲ್ಲಿನ ಲಿಸ್ಬಾ–ಗೇಬ್ರಿಯಲ್ ಮತ್ತು ತುಂಗಾ ನದಿಯ ದಡದಲ್ಲಿನ ಕೇಶವ–ಹಂಪಮ್ಮ ಈ ಎರಡು ಜೋಡಿಗಳ ಪ್ರೇಮಕಥೆಯ ಮೂಲಕವೇ ಎರಡು ನಾಗರಿಕತೆಗಳ ಹೊಯ್ದಾಟಗಳು, ಹುಡುಕಾಟಗಳು ತೆರೆದುಕೊಳ್ಳುತ್ತ ಹೋಗುತ್ತವೆ. ಆದರೆ ಲೇಖಕರಿಗೇ ಈ ಎರಡು ಪ್ರೇಮಕಥೆಗಳು ಅಷ್ಟೊಂದು ಮುಖ್ಯ ಅನಿಸಿದಂತಿಲ್ಲ.ಮಾಹಿತಿಗಳ ಮಹಾಪೂರದಲ್ಲಿ ಲಿಸ್ಬಾ ಮತ್ತು ಗೇಬ್ರಿಯಲ್ ಎನ್ನುವ ಕುಸುಮಕೋಮಲ ಪ್ರೇಮಕಥೆಯೊಂದು ತನ್ನ ನವಿರುಗುಣವನ್ನೆಲ್ಲ ಕಳೆದುಕೊಂಡು ಕೊಚ್ಚಿಕೊಂಡು ಹೋಗಿಬಿಟ್ಟಿದೆ. ಹಾಗೆಯೇ ಆಚರಣೆಗಳ ವಿವರಣೆಗಳಲ್ಲಿ ಕೇಶವ ಮತ್ತು ಹಂಪಮ್ಮನ ಪ್ರೇಮ ಮಸುಕಾಗುತ್ತದೆ.

ಕಥನಕ್ರಮಣದ ನಡುವೆ ಲೇಖಕರು ಆಗಾಗ ತೂರಿಸುವ ಸ್ಟೇಟ್‌ಮೆಂಟ್‌ಗಳು ಸುಂದರವಾಗಿದ್ದರೂ (‘ದ್ವೇಷ ಮಾಡಲು ಯಾರೂ ಇಲ್ಲದ ಸ್ಥಿತಿಯಲ್ಲೂ ಮನುಷ್ಯ ತಲ್ಲಣಿಸಿಬಿಡುತ್ತಾನೆ’) ಅನಪೇಕ್ಷಿತ ಅತಿಕ್ರಮಣದಂತೆ ಕಾಣಿಸುತ್ತದೆ. ಬಹುಶಃ ತನ್ನ ಕಥನದ ಅನುರಣನಶಕ್ತಿಯ ಮೇಲೆ ಪೂರ್ತಿ ನಂಬಿಕೆ ಇಲ್ಲದಿದ್ದಾಗ ಲೇಖಕ ಇಂಥ ಆಕರ್ಷಣೆಯ ಮೂಲಕ ಓದುಗರನ್ನು ತಣಿಸಲು ಹೊರಡುತ್ತಾನೆ. ಪಾತ್ರಗಳ ಸಂಭಾಷಣೆಯಲ್ಲಿಯೂ ಕೆಲವು ಕಡೆ ಅತಿಯಾದ ಗ್ರಂಥಸ್ಥ ಭಾಷೆ ಕೃತಕವಾಗಿ ತೋರುತ್ತದೆ. ತೆಂಬಕಪುರದ ಪಾತ್ರಗಳು ಮಾತಾಡುವಾಗ ಇದ್ದ ಆಡುಭಾಷೆ ಮಲೆನಾಡಿನಲ್ಲಿ ಕೇಶವ ಮತ್ತು ಅವನ ತಂದೆ ಮಾತಾಡುವಾಗ ಮಾಯವಾಗಿಬಿಡುತ್ತದೆ. ಶಿಲ್ಪಿಯೊಬ್ಬ ತನ್ನ ಮಗನ ಜೊತೆ ಮಾತಾಡುವಾಗ ‘ಮಗಾ ಎಲ್ಲ ದೊಡ್ಡ ಭೌತಿಕ ಸಂಗತಿಗಳೂ ಮನುಷ್ಯನನ್ನು ಹೆದರಿಸುತ್ತವೆ’ ಎಂದು ಹೇಳುವುದು ತೀರಾ ಕೃತಕವಾಗಿ ಕಾಣಿಸುತ್ತದೆ.

ಕಾದಂಬರಿಯಲ್ಲಿ ಬರುವ ಇತಿಹಾಸದ ಜನಜೀವನದ ವಿವರಗಳು ಮಾಹಿತಿಯಾಗಿಷ್ಟೇ ದಾಟುವುದು ಈ ಕಾದಂಬರಿಯ ಬಹುದೊಡ್ಡ ಮಿತಿ. ವಸುಧೇಂದ್ರ ಅವರದು ಕಥೆಯನ್ನು ಹೇಳುವ ಮಾದರಿ. ಹಾಗೆ ಹೇಳುವಿಕೆಯಲ್ಲಿ ಕಥೆಯ ಚಲನೆಯಷ್ಟೇ ಜೀವಂತ ಪರಿಸರವೊಂದನ್ನು ಕಟ್ಟಿಕೊಡುವುದು ಅವರಿಗೆ ಬಹುತೇಕ ಕಡೆ ಸಾಧ್ಯವಾಗಿಲ್ಲ.ಒಂದು ಉದಾಹರಣೆಯೊಂದಿಗೆ ಹೇಳಬೇಕೆಂದರೆ, ಕಾದಂಬರಿಯ ಕೊನೆಯ ಭಾಗದಲ್ಲಿ ಅಮ್ಮದಕಣ್ಣ, ಗರ್ಭಿಣಿಯಾಗಿರುವ ಹಂಪಮ್ಮನನ್ನು ಕುದುರೆಯ ಮೇಲೆ ಗೋವಾಕ್ಕೆ ಕರೆದುಕೊಂಡು ಹೋಗುವ ಸನ್ನಿವೇಶವನ್ನೇ ನೋಡಬಹುದು. ದಟ್ಟ ಕಾಡಿನ ಆ ಇಡೀ ಪ್ರಯಾಣದಲ್ಲಿ ನಮಗೆ ಆ ಪಾತ್ರಗಳು ಕಾಣುತ್ತವೆಯೇ ಹೊರತು ಅವರು ಸಾಗುವ ಕಾಡಿನ ಪರಿಸರ ಜೀವಂತ ಅನುಭವವಾಗಿ ದಕ್ಕುವುದೇ ಇಲ್ಲ.ಗೇಬ್ರಿಯಲ್‌ ಪ್ರಯಾಣ ಭಾರತಕ್ಕೆ ಪ್ರಯಾಣ ಬರುವ ಹಡಗಿನ ಪ್ರಯಾಣದ ಸನ್ನಿವೇಶ, ತೆಂಬಕ್ಕ ಸತಿ ಹೋಗುವ ಸಂದರ್ಭ, ಅಡವಿಸ್ವಾಮಿಯ ಪ್ರತಿಭಟನೆಯಂಥ ಕೆಲವು ಸನ್ನಿವೇಶಗಳು ಇದಕ್ಕೆ ಅಪವಾದ.

ಪಾತ್ರಗಳಿಗೆ ಒಂದು ಶುಭಾಂತ್ಯ ಕೊಡಲೇಬೇಕು ಎಂಬ ಲೇಖಕರ ಹಟ ಕಾದಂಬರಿಯ ಅಂತ್ಯವನ್ನು ಗಾಢವಾಗಿಸಿಲ್ಲ. ಗೇಬ್ರಿಯಲ್ ತಂದಿರುವ ಬಣ್ಣದ ಮೀನುಗಳು ಎಷ್ಟೋ ವರ್ಷಗಳ ನಂತರ ತುಂಗಾನದಿಯಲ್ಲಿ ಕಾಣಿಸಿಕೊಳ್ಳುವುದು, ಗೇಬ್ರಿಯಲ್‌ಗೆ ಮತ್ತೆ ಲಿಸ್ಬಾ ಭೇಟಿಯಾಗುವುದು, ಕೇಶವನನ್ನು ಪ್ರೀತಿಸಿದ, ಅವನ ಮಗುವನ್ನು ಹೊಟ್ಟೆಯಲ್ಲಿ ಇಟ್ಟುಕೊಂಡಿರುವ ಹಂಪಮ್ಮ, ಅಮ್ಮದಕಣ್ಣನನ್ನು ಪ್ರೇಮಿಸುವುದೆಲ್ಲವೂ ಪಾತ್ರಗಳನ್ನು ದಡಮುಟ್ಟಿಸಲು ಮಾಡಿದ ಕೃತಕಜೋಡಣೆಯಂತೆ ಭಾಸವಾಗುತ್ತದೆ.

ವಸ್ತು, ಅಧ್ಯಯನ, ಹರಹು ಈ ಎಲ್ಲದರಲ್ಲಿಯೂ ಈ ಕಾದಂಬರಿ ಮೆಚ್ಚುಗೆ ಗಳಿಸುತ್ತದೆ. ಆದರೆ ಲೇಖಕ ವಸುಧೇಂದ್ರ ಅವರಿಗೆ ಈ ಕಾದಂಬರಿಯ ಮೂಲಕ ಸೃಜನಶೀಲಯಾನದಲ್ಲಿ ದೊಡ್ಡ ಯಶಸ್ಸು ಸಾಧ್ಯವಾಗಿದೆಯೇ ಎಂದು ಕೇಳಿದರೆ...

ಹೌದೆನ್ನುವುದು ಕಷ್ಟ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT