ಬುಧವಾರ, ಆಗಸ್ಟ್ 4, 2021
23 °C

ಎಚ್ಚೆಸ್ವಿ: ಒಂದು ಬೊಗಸೆಯಲ್ಲಿ..

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಎಚ್ಚೆಸ್ವಿ ಕಾವ್ಯ ಸಾತತ್ಯ
(ವಿಮರ್ಶಾ ಲೇಖನಗಳು)
ಲೇ:ಎಸ್‌.ಆರ್‌.ವಿಜಯಶಂಕರ
ಪ್ರ: ಚಿಂತನ ಚಿತ್ತಾರ, ಮೈಸೂರು.
ಮೊ: 90607 01480

ಎಚ್‌.ಎಸ್‌. ವೆಂಕಟೇಶಮೂರ್ತಿ ನಾಡಿನ ಮಹತ್ವದ ಲೇಖಕರು. ಈ ವರ್ಷದ ಫೆಬ್ರುವರಿಯಲ್ಲಿ ಕಲ್ಬುರ್ಗಿಯಲ್ಲಿ ನಡೆದ 85ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನಕ್ಕೆ ಸರ್ವಾಧ್ಯಕ್ಷರಾದವರು. ಈ ಸಮ್ಮೇಳನಕ್ಕೂ ಮುನ್ನ ಈ ಪುಸ್ತಕ ಹೊರಬಂದಿದೆ.

ಇತ್ತೀಚಿನ ವರ್ಷಗಳಲ್ಲಿ ಎಚ್ಚೆಸ್ವಿ ಕಾವ್ಯದ ಕುರಿತು ಬರೆದ ವಿಮರ್ಶೆಗಳು ಮತ್ತು ಅವರ ಪತ್ರಿಕಾ ಅಂಕಣಗಳಲ್ಲಿ ಬರೆದ ಎಚ್ಚೆಸ್ವಿ ಕೃತಿಗಳ ಕುರಿತ ಲೇಖನಗಳನ್ನು ಈ ಕೃತಿಯಲ್ಲಿ ಒಟ್ಟುಗೂಡಿಸಿದ್ದಾರೆ. ಈ ಸಂಕಲನಕ್ಕಾಗಿಯೇ ಎಚ್ಚೆಸ್ವಿಯವರ ಸುನೀತಗಳು ಮತ್ತು ಮಕ್ಕಳ ಕಾವ್ಯದ ಬಗ್ಗೆ ಬರೆದ ಎರಡು ಲೇಖನಗಳು ಮತ್ತು ಸಮ್ಮೇಳನಕ್ಕೆ ಪೂರ್ವಭಾವಿಯಾಗಿ ಮಾಡಿದ ವಿಶೇಷ ಸಂದರ್ಶನಗಳೂ ಇಲ್ಲಿವೆ.  ಎಚ್ಚೆಸ್ವಿಯವರ ಮೂರು ಮುಖ್ಯ ಕವಿತೆಗಳು ಮತ್ತು ಒಟ್ಟು ಸಾಹಿತ್ಯದ ಕುರಿತ ಮುನ್ನೋಟಗಳನ್ನು ಬೊಗಸೆಯಲ್ಲಿ ಹಿಡಿದಿಡುವ ವಿಜಯಶಂಕರ ಅವರ ಪ್ರಯತ್ನ ಇಲ್ಲಿ ಗಮನ ಸೆಳೆಯುತ್ತದೆ.

‘ಶ್ರೀ ಸಂಸಾರಿ’ ಮತ್ತು ‘ಅಮೆರಿಕಾದಲ್ಲಿ ಬಿಲ್ಲು ಹಬ್ಬ’ ಈ ಎರಡೂ ಕವಿತೆಗಳನ್ನು ಅದರೆಲ್ಲ ಬನಿಯೊಂದಿಗೆ ಅರ್ಥೈಸಲು ವಿಜಯಶಂಕರ ಸಫಲರಾಗಿದ್ದಾರೆ. ಅದೇ ವೇಳೆ  70ರ ದಶಕದಲ್ಲಿ ತಾವು ನೋಡಿದ ದಾರಾಸಿಂಗ್‌ ಎಂಬ ಪೈಲ್ವಾನನ ಕಣ್ಣೋಟದ ಜೊತೆಗೆ ಎಚ್ಚೆಸ್ವಿಯವರ ‘ಪುರುಷಧ್ವಜ‘ ಕವಿತೆಯನ್ನು ಹೋಲಿಸಿ ಬರೆದಿರುವ ಲಲಿತ ಪ್ರಬಂಧದ ಮಾದರಿಯೂ ಕುತೂಹಲಕರವಾಗಿದೆ.

ಎಚ್ಚೆಸ್ವಿಯವರ ಮಕ್ಕಳ ಕಾವ್ಯ, ಸುನೀತಗಳು ಮತ್ತು ಒಟ್ಟು ಕಾವ್ಯದ ಕುರಿತ ಮೂರು ಲೇಖನಗಳು ಸಾಹಿತ್ಯದ ವಿದ್ಯಾರ್ಥಿಗಳಿಗೆ ಉಪಯುಕ್ತವಾಗುವಂತಿವೆ. ಎರಡು ಸಂದರ್ಶನಗಳಂತೂ ಎಚ್ಚೆಸ್ವಿಯವರ ಕಾವ್ಯ–ಜೀವನ ದೃಷ್ಟಿಯನ್ನು ಸಮರ್ಥವಾಗಿ ಕಟ್ಟಿಕೊಟ್ಟಿದೆ.

‘ಕನ್ನಡದಲ್ಲಿ ಸಾನೆಟ್‌’ ಕುರಿತು ಸ್ವತಃ ಎಚ್ಚೆಸ್ವಿಯವರು 20 ವರ್ಷಗಳ ಹಿಂದೆ ಬರೆದಿರುವ ಲೇಖನವೂ ಇದರಲ್ಲಿ ಅನುಬಂಧದ ರೂಪದಲ್ಲಿ ಸೇರಿಕೊಂಡಿದ್ದು ಎಚ್ಚೆಸ್ವಿ ಕಾವ್ಯಾಸಕ್ತರಿಗೆ ಪುಷ್ಕಳ ಓದಿನ ಅನುಭವ ನೀಡುತ್ತದೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು