ಸೋಮವಾರ, ಆಗಸ್ಟ್ 8, 2022
22 °C

ಮಕ್ಕಳ ಕಲ್ಪನೆಗೆ ರಂಗುತುಂಬುವ ರಚನೆಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಪ್ರಯೋಗಶೀಲ ಮಕ್ಕಳ ಸಾಹಿತಿ ಚಂದ್ರಗೌಡ ಕುಲಕರ್ಣಿ ಅವರ ಪದ್ಯಗಳೆಂದರೆ ಮಕ್ಕಳಿಗೆ ಅಚ್ಚುಮೆಚ್ಚು. ಪ್ರಾಸಬದ್ಧವಾದ ಅವರ ಗೀತೆಗಳು ಮಕ್ಕಳ ಕಲ್ಪನೆಗೆ ರಂಗು ತುಂಬಬಲ್ಲವು. ಅವರ ಇತ್ತೀಚಿನ ಕವನ ಸಂಕಲನ ‘ಉದ್ದನೆ ಬಾಲ ಇದ್ರೆ’! ಛಂದೋಬಂಧ ರಚನೆಗಳಾದ ಈ ಪದ್ಯಗಳು ತಾಳ, ಲಯಗಳಿಗೆ ತಲೆದೂಗಿ ಭಾವದುಂಬಿ ಹಾಡಿ ನಲಿಯುವಂಥವು.

‘ಹಕ್ಕಿಯಂತೆ ರೆಕ್ಕೆ ಇದ್ರೆ ಶಾಲೆಯ ತುಂಟ ಮಕ್ಕಳಿಗೆ/ ಬಸ್ಸು ಆಟೊ ಕಾಯ್ತಿರಲಿಲ್ಲ ಬೇಗನೆ ಬರಲು ಶಾಲೆಗೆ’ ಎಂಬ ಸಾಲುಗಳು ಮಕ್ಕಳಿಗೆ ಖುಷಿ ನೀಡಬಲ್ಲಂಥವು. ಮಕ್ಕಳಿಗೆ ಮಂಗಗಳಂತೆ ಉದ್ದನೆಯ ಬಾಲ ಇದ್ದಿದ್ದರೆ ಏನಾಗುತ್ತಿತ್ತು? ಪ್ರೈಮರಿ ಸ್ಕೂಲನ್ನು ಗಿಡಗಿಡದಲ್ಲಿ ಕಟ್ಟಬೇಕಿತ್ತು ಎನ್ನುತ್ತದೆ ಇಲ್ಲಿನ ಒಂದು ಕವಿತೆ! ನೀರಲ್ಲೇ ಇರುವ ಮೀನಿಗೆ ನೆಗಡಿ ಯಾಕ ಬಂದಿಲ್ಲ ಎಂದು ಕೇಳುತ್ತದೆ ಮತ್ತೊಂದು ಕವಿತೆ. ಜೋಡುಗಾಲಿಯ ಚಂದ್ರಾಮ, ಅದ್ಭುತ ಯಾನ ಮೊದಲಾದ ಪದ್ಯಗಳು ಮಕ್ಕಳು ಸದಾ ಗುನುಗುನಿಸುವಂತಿವೆ.

ಆನೆ ಬಾಳ ಚಿಕ್ಕದಾಗಿ ಇರುವೆಯಾಗಿ ಬಿಟ್ರೆ
ಏನೇನಾಗಬಹುದು? ಒಂದೆ ಹಳಕು ಸಾಕು ಊಟಕ್ಕಂತ ಕೂತ್ರೆ ಎಂದು ಮಕ್ಕಳ ಮುಖದಲ್ಲಿ ನಗು ಅರಳಿಸುತ್ತಾರೆ ಈ ಕವಿ. ಆಗ ಮಾವುತನಿಗೆ ಸೂಜಿಗಿಂತ ಚಿಕ್ಕ ಅಂಕುಶ ಬೇಕಂತೆ. ಇರುವೆ ಆಕಾರದ ಆನೆಯ ಸೊಂಡಿಲು ದಾರದಂತೆ ಕಾಣುವುದಂತೆ! ಇಂತಹ ಕವನಗಳ ಮೂಲಕ ಮಕ್ಕಳ ಮುಂದೆ ಫ್ಯಾಂಟಸಿ ಲೋಕವನ್ನೇ ಅವರು ತೆರೆದಿಟ್ಟಿದ್ದಾರೆ. ಸಂಕಲನದ ಮೊದಲ ಕವಿತೆ ‘ಕನ್ನಡನುಡಿ ಚಂದ, ಚಿಲಿಪಿಲಿ ಶ್ರೀಗಂಧ’ ಎನ್ನುತ್ತದೆ. ಅಮ್ಮನ ಜೋಗುಳ ಹಾಡಿನ ಕಂಪನ್ನು ಹರಡುವ ಭಾಷೆಯೂ ಹೌದು ಎಂದು ಕೊಂಡಾಡುತ್ತದೆ. v

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು