ಶನಿವಾರ, ಅಕ್ಟೋಬರ್ 23, 2021
20 °C

ವಿಮರ್ಶೆ: ಒಳ–ಹೊರಕಥನಗಳ ವಿಶಿಷ್ಟ ಸಂಕಥನ

ರಘುನಾಥ ಚ.ಹ. Updated:

ಅಕ್ಷರ ಗಾತ್ರ : | |

Prajavani

ಮೊಳದಷ್ಟು ಹೂವು
ಲೇ:
ಶ್ರೀಧರ ಬಳಗಾರ
ಪ್ರ: ನಿವೇದಿತ ಪ್ರಕಾಶನ, ಬೆಂಗಳೂರು. ಫೋನ್: 9448733323.

**
ಮೂರ್ನಾಲ್ಕು ದಶಕಗಳ ಕಾಲ ಕಥೆಯನ್ನೋ ಕವಿತೆಯನ್ನೋ ನಿರಂತರವಾಗಿ ಬರೆದುಕೊಂಡು ಬಂದ ನಂತರವೂ ಬರಹಗಾರನೊಬ್ಬ ಬರವಣಿಗೆಗೆ ಸಂಬಂಧಿಸಿದಂತೆ ತನ್ನದೇ ಆದ ಮೀಮಾಂಸೆಯೊಂದನ್ನು ಸ್ಪಷ್ಟವಾಗಿ ಕಟ್ಟಿಕೊಳ್ಳುವುದು ಅಪರೂಪ. ಬರವಣಿಗೆ ಯಾಂತ್ರಿಕ ಪ್ರಕ್ರಿಯೆಯಾದಾಗ ಅಥವಾ ಸಾಹಿತ್ಯೇತರ ಪ್ರೇರಣೆಗಳೇ ಬರವಣಿಗೆಗೆ ಮುಖ್ಯವಾದಾಗ ಲೇಖಕ ತನ್ನದೇ ಆದ ‘ಸಾಹಿತ್ಯ ಸಿದ್ಧಾಂತ’ವೊಂದನ್ನು ಕಟ್ಟಿಕೊಳ್ಳುವುದು ಕಷ್ಟ. ಆದರೆ, ಬರವಣಿಗೆಯನ್ನು ತಮ್ಮ ಬದುಕಿನ ಅವಿಭಾಜ್ಯ ಭಾಗವೆಂದು ಭಾವಿಸಿದ ಎಲ್ಲ ಪ್ರಮುಖ ಬರಹಗಾರರೂ ಸಹಜವಾಗಿಯೇ ತಮ್ಮದೇ ಆದ ಮೀಮಾಂಸೆಯೊಂದನ್ನು ರೂಪಿಸಿಕೊಂಡಿರುತ್ತಾರೆ. ಪ್ರಜ್ಞಾಪೂರ್ವಕವಾಗಿಯೋ ಅಪ್ರಜ್ಞಾಪೂರ್ವಕ ವಾಗಿಯೋ ರೂಪುಗೊಂಡ ಇಂಥ ಮೀಮಾಂಸೆಗಳು, ಲೇಖಕನಿಗೆ ತನ್ನನ್ನು ತಾನು ಸ್ಪಷ್ಟಪಡಿಸಿಕೊಳ್ಳುವ ವಿಧಾನ ಆಗಿರುವಂತೆಯೇ ಸಾಹಿತ್ಯ ವಿದ್ಯಾರ್ಥಿಗಳಿಗೆ ಕೃತಿಕಾರ–ಕೃತಿಯನ್ನು ಅರ್ಥೈಸಿಕೊಳ್ಳಲು ಕೈದೀವಿಗೆಗಳೂ ಆಗುತ್ತವೆ. ಅಂಥದೊಂದು ನುಡಿದೀಪ ಶ್ರೀಧರ ಬಳಗಾರರ ‘ಮೊಳದಷ್ಟು ಹೂವು’.

ಕನ್ನಡ ಕಥಾಲೋಕದಲ್ಲಿ ಹೆದ್ದಾರಿಯಂತಿರುವ ಉತ್ತರಕನ್ನಡ ಜಿಲ್ಲೆಯ ಪ್ರಮುಖ ಕಥೆಗಾರರಲ್ಲಿ ಶ್ರೀಧರ ಬಳಗಾರರೂ ಒಬ್ಬರು. ಕಥೆ–ಕಾದಂಬರಿಗಳ ಮೂಲಕ ಕನ್ನಡದ ಕಥನ ಪರಂಪರೆಯನ್ನು ಸೂಕ್ಷ್ಮಗೊಳಿಸುತ್ತಾ ಬಂದಿರುವ ಅವರು, ‘ಮೊಳದಷ್ಟು ಹೂವು’ ಕೃತಿಯ ಮೂಲಕ ಒಟ್ಟುಗೂಡಿಸಿರುವ ವಿಚಾರಗಳು ಕೂಡ ಅವರ ಕಥಾದಾರಿಯಲ್ಲಿ ಅರಳಿರುವ ಹೂವುಗಳೇ ಆಗಿವೆ.

ಮೂರು ಭಾಗಗಳಲ್ಲಿ ಜೋಡಿಸಲಾಗಿರುವ ಇಲ್ಲಿನ ಬರಹಗಳನ್ನು – ವಿಚಾರ, ವಿಮರ್ಶೆ ಹಾಗೂ ವ್ಯಕ್ತಿತ್ವ ಎಂದು ಅನುಕೂಲಕ್ಕಾಗಿ ವಿಂಗಡಿಸಬಹುದಾದರೂ ಎಲ್ಲ ಬರಹಗಳಲ್ಲಿ ಏಕಸೂತ್ರವಾಗಿ ಕೆಲಸ ಮಾಡಿರುವ ಮನಸು ನಿತ್ಯ ಕುತೂಹಲಿ ಸಾಹಿತ್ಯ ವಿದ್ಯಾರ್ಥಿಯದು. ಬರಹವೊಂದು ಮೂಡುವ ಬಗೆ ಹೇಗೆ ಎಂದು ಚಿಂತಿಸುವ ಈ ಮನಸ್ಸು, ಬರವಣಿಗೆಯ ಮೂಲಕ ಲೇಖಕ ಕಂಡುಕೊಳ್ಳುವ ಅರಿವು ಹಾಗೂ ಆ ಅರಿವಿನ ಮಾರ್ಗದಲ್ಲಿ ಓದುಗರನ್ನು ಸಹಪಯಣಿಗರನ್ನಾಗಿ ಮಾಡಿಕೊಳ್ಳುವ ಸಾಧ್ಯತೆಗಳ ಬಗ್ಗೆ ಆಸಕ್ತವಾದುದು.

ಈ ಕೃತಿ ಒಂದೇ ಬಗೆಯ ಹೂಗಳಿಂದ ಕೂಡಿದ ಹೆಣಿಗೆಯಲ್ಲ; ಹಲ ಬಗೆಯ ಹೂಗಳು ಸೇರಿ ಸೊಗಯಿಸಿದ ಮೊಳ. ಬರವಣಿಗೆಯ ಬೆರಗನ್ನು ಹಲವು ರೂಪಗಳಲ್ಲಿ ಚರ್ಚಿಸಿದಂತೆಯೇ, ಸಾಹಿತ್ಯದ ಸಖ್ಯ ಭಾವಲೋಕದ ಮೇಲೆ ಉಂಟುಮಾಡುವ ಪರಿಣಾಮಗಳನ್ನೂ ಕೃತಿ ಚರ್ಚಿಸುತ್ತದೆ. ‘ಒಂದು ಕಥೆಯ ವೃತ್ತಾಂತ’, ‘ಹಲವು ಹೆಸರುಗಳ ಒಂದು ನದಿ’, ‘ಬರೆಯುತ್ತ ಅರಿಯುವ ಬೆರಗು’, ‘ಕಪಾಟಿನ ಹ್ಯಾಂಗರಿಗೆ ನೇತಾಡುವ ನೆರಳುಗಳು’, ‘ಹತ್ತು ಕಥೆಗಳ ಗಂಟನ್ನು ಬಿಚ್ಚುತ್ತ’, ‘ಗಂಧಶಾಲಿ ಭತ್ತ ಮತ್ತು ಅದರ ಕಂಪಿನ ಕತೆಗಳು’ – ಇವೆಲ್ಲ ಬರಹಗಳು ಬಳಗಾರರು ತಮ್ಮನ್ನು ಅರಿಯುವ ಪ್ರಯತ್ನದ ರಚನೆಗಳಾಗಿರುವಂತೆಯೇ ಸೃಜನಶೀಲ ಬರವಣಿಗೆಯ ಲೋಕಕ್ಕೆ ಬರಹಗಾರನೊಬ್ಬ ಎದುರಾಗುವ ಕಥನಗಳಾಗಿಯೂ ಕುತೂಹಲದಿಂದ ಓದಿಸಿಕೊಳ್ಳುತ್ತವೆ. ಚಿತ್ತಾಲ ಹಾಗೂ ಅನಂತಮೂರ್ತಿ ಕೃತಿಯುದ್ದಕ್ಕೂ ಅಲ್ಲಲ್ಲಿ ಎದುರಾಗುತ್ತಾ ಹೋಗುವುದು, ಬಳಗಾರರ ಮೇಲೆ ಇರಬಹುದಾದ ಅವರಿಬ್ಬರ ಪ್ರಭಾವಕ್ಕಿಂತಲೂ ಹೆಚ್ಚಾಗಿ, ಬರಹಗಾರರ ಜಗತ್ತು ಒಂದರೊಳಗೊಂದು ಹೆಣೆದುಕೊಂಡಿರುವ ವಿಸ್ಮಯವನ್ನೂ ಎದೆಯಿಂದ ಎದೆಗೆ ಜರುಗುವ ಸೃಜನಶೀಲ ಜೀವಸಂಚಾರವನ್ನೂ ತೋರುವಂತಿದೆ.

ಬರವಣಿಗೆಯ ವಿಸ್ಮಯವನ್ನು ದಾಟಿ ಲೋಕದ ದಂದುಗಗಳತ್ತಲೂ ಬರಹಗಾರರ ಕಣ್ಣು ಹರಿದಿರುವುದಕ್ಕೆ ಉದಾಹರಣೆಯಂತಿರುವ ‘ಬರ ಮತ್ತು ನವಿಲು’, ‘ಹರಿಯಲಿ ಚಿತ್ತ ಸಹಜ ಕೃಷಿಯತ್ತ’ ಬಗೆಯ ಬರಹಗಳು, ಸಂವೇದನಾಶೀಲ ಲೇಖಕನೊಬ್ಬ ಹೊಂದಿರಬೇಕಾದ ಸಮಕಾಲೀನತೆಯ ಕಣ್ಣು ಕರುಳಿನ ರಚನೆಗಳಾಗಿವೆ.

ಒಳನೋಟಗಳಿಂದ, ಕುತೂಹಲಕರ ವ್ಯಾಖ್ಯಾನಗಳಿಂದ ಗಮನಸೆಳೆಯುವ ಬಳಗಾರರ ಕೆಲವು ಬರಹಗಳು, ಈವರೆಗಿನ ನಮ್ಮ ಗ್ರಹಿಕೆಗಳನ್ನು ಪುನರ್‌ ಪರಿಶೀಲಿಸಿಕೊಳ್ಳಲು ಒತ್ತಾಯಿಸುತ್ತವೆ. ‘ಪಂಪ ಪಥ’ ಲೇಖನ, ‘ಅಖಂಡ ಕನ್ನಡ ದೇಶವನ್ನು ಕಟ್ಟಲು ಅಗತ್ಯವಾದ ದರ್ಶನ’ವನ್ನು ಪಂಪನ ಭಾರತದಲ್ಲಿ ಕಾಣಬಹುದೆಂದು ಹೇಳುವ ಮೂಲಕ, ಪಂಪನ ಹೊಸಓದಿಗೆ ಪ್ರೇರೇಪಿಸುವಂತಿದೆ. ರಾಜಪ್ರಭುತ್ವದ ಅಪಾಯ ಮತ್ತು ಭೋಗಾತಿಶಯದ ವಿಕಾರವನ್ನು ತನ್ನ ಕಾವ್ಯದಲ್ಲಿ ಅದ್ಭುತವಾಗಿ ನಿರ್ವಹಿಸಿದ ಪಂಪ, ‘ವಿಕ್ರಮಾರ್ಜುನ ವಿಜಯ’ದಲ್ಲಿ ಮಾಡಿಕೊಂಡ ನಾಯಕತ್ವದ ಬದಲಾವಣೆಗೆ, ‘ಸಾಮಂತನಾದ ಅರಿಕೇಸರಿಯಲ್ಲಿ ಸಾಮ್ರಾಜ್ಯ ಸ್ಥಾಪನೆಯ ಕೆಚ್ಚನ್ನು ಮೂಡಿಸಿ ಅಂದಿನ ಅರಾಜಕತೆಯನ್ನು ಹೋಗಲಾಡಿಸಬೇಕಿತ್ತಲ್ಲವೇ?’ ಎಂದು ಲೇಖಕರು ಅರ್ಥೈಸಿರುವುದು ಕುತೂಹಲಕರವಾಗಿದೆ.

‘ಮಹಾತ್ಮ ಗಾಂಧಿ ಮತ್ತು ಮಹಿಳಾ ಸಬಲೀಕರಣ’ ಲೇಖನದಲ್ಲಿ – ಹೆಣ್ಣಿನ ಗುಣಗಳನ್ನು ಒಳಗೊಳ್ಳುವ ಮೂಲಕ ಗಾಂಧೀಜಿಯ ವ್ಯಕ್ತಿತ್ವ ಹರಳುಗಟ್ಟಿದ್ದನ್ನು ಗುರ್ತಿಸುವ ಬಳಗಾರರು, ‘ಭಾರತದ ಬಿಡುಗಡೆ ಸ್ತ್ರೀ ವಿಮೋಚನೆಯಿಂದ ಮಾತ್ರ ಸಾಧ್ಯ’ ಎನ್ನುವ ಗಾಂಧಿ ನಂಬಿಕೆಯನ್ನು ಎತ್ತಿತೋರಿಸುತ್ತಾರೆ. ಮಹಿಳಾ ವಿಮೋಚನೆಯನ್ನು ಭಾರತದಲ್ಲಿ ತಮ್ಮ ಆಳ್ವಿಕೆಗೆ ಕಾರಣಗಳಲ್ಲೊಂದಾಗಿ ನೀಡಿದ ಬ್ರಿಟಿಷ್‌ ಪ್ರಭುತ್ವದ ವಿರುದ್ಧದ ಚಳವಳಿಯಲ್ಲಿ ಮಹಿಳೆಯರನ್ನು ತೊಡಗಿಸಿದ ಗಾಂಧಿ, ‘ಭಾರತವನ್ನು ಸಾಂಸ್ಕೃತಿಕವಾಗಿ ಬೆತ್ತಲಾಗಿಸಲು ಬಂದ ವಸಾಹತುಶಾಹಿಗಳಿಗೆ ಪ್ರತಿರೋಧವಾಗಿ ಮಹಿಳೆಯರ ಕೈಗೆ ಚರಕವನ್ನು ಕೊಟ್ಟು ಸಮಾನತೆಯ ವಸ್ತ್ರವನ್ನು ನೇಯಿಸಿದ್ದು ಸ್ತ್ರೀಲೋಕದ ಘನತೆಗೆ ಒಂದು ಮಾದರಿ’ ಎಂದು ವಿಶ್ಲೇಷಿಸಿರುವುದು ವಿಶೇಷವಾಗಿದೆ.

‘ಹನೇಹಳ್ಳಿಗೆ ಹೀಗೆ ಬನ್ನಿ’ ಹಾಗೂ ‘ಶ್ರೀ ಸಂಸಾರಿ’ ರುಚಿಕಟ್ಟಾದ ಪ್ರಬಂಧವನ್ನು ಓದಿದ ಅನುಭವ ಕೊಡುವ ರಚನೆಗಳು. ಯಶವಂತ ಚಿತ್ತಾಲರ ಕಥೆ–ಕಾದಂಬರಿಯಲ್ಲಿನ ಪಾತ್ರಗಳನ್ನು ಹನೇಹಳ್ಳಿಯಲ್ಲಿ ಲೇಖಕ ಮುಖಾಮುಖಿಯಾಗುವ ಕಲ್ಪನೆಯೇ ಸೊಗಸಾದುದು. ಹನೇಹಳ್ಳಿಯ ನೋಟದಿಂದಾಗಿ, ಕನ್ನಡದ ಸುಪ್ರಸಿದ್ಧ ಲೇಖಕರ ಊರುಕೇರಿಗಳಿಗೂ ಇಂಥ ‘ಪ್ರವಾಸ ಕಥನ’ದ ಭಾಗ್ಯ ಒದಗಬೇಕೆಂದು ಓದುಗನಿಗೆ ಅನ್ನಿಸಿದರೆ ಆಶ್ಚರ್ಯವೇನಿಲ್ಲ.

ಸಾಹಿತ್ಯ ವಿದ್ಯಾರ್ಥಿಗಳಿಗೆ, ವಿಶೇಷವಾಗಿ ಕಥನ–ಕಾವ್ಯದ ಬಗ್ಗೆ ಆಸಕ್ತಿಯುಳ್ಳ ಯುವ ಬರಹಗಾರರಿಗೆ ‘ಮೊಳದಷ್ಟು ಹೂವು’ ಕೃತಿ ಪಠ್ಯದಂತೆ ಆಕರವಾಗಬಲ್ಲದು. ಪ್ರತೀ ಲೇಖಕನ ಬರವಣಿಗೆಯ ದಾರಿ ಭಿನ್ನವಾಗಿ ಇರಬಹುದಾದರೂ, ಆ ದಾರಿಯಲ್ಲಿ ಕಾಣುವ ಹಸಿರು, ಹೂವು, ಗಿಡಗಂಟಿಗಳ ಕೊರಳುಗಳಿಂದ ಮೂಡುವ ಹಾಡು ಭಿನ್ನವೇನಲ್ಲ. ಆ ನೋಟವನ್ನು ಅರಿಯುವ ಪ್ರಯತ್ನದಲ್ಲಿ, ಬಳಗಾರರ ಹೂವಿನ ಮೊಳ ಹಾಕುವಿಕೆ ಸಹೃದಯರನ್ನೂ ಒಳಗೊಳ್ಳುವಂತಹದ್ದು. ‘ಶ್ರೀ ಸಂಸಾರಿ’ ಬರಹದಲ್ಲಿ, ಸಮುದ್ರ ನೋಡಿ ವಾಪಸ್ಸಾಗುವಾಗ ಕವಿ ಎಚ್‌.ಎಸ್‌. ವೆಂಕಟೇಶಮೂರ್ತಿ ‘ಆತ್ಮ ಸ್ನಾನವಾದಂತಾಯ್ತು’ ಎಂದು ಉದ್ಗರಿಸಿದರೆ, ಕಥೆಗಾರ ಬಳಗಾರರು ‘ಚಂದ್ರನನ್ನು ಮನೆಗೆ ಕರೆದುಕೊಂಡು ಹೋಗೋಣ’ ಎಂದು ಪ್ರತಿಕ್ರಿಯಿಸುತ್ತಾರೆ. ಮಾತಿಗೆ ನಿಲುಕದ ಈ ಸುಖ–ಸಂತೋಷದ ಅನುಭೂತಿ ‘ಮೊಳದಷ್ಟು ಹೂವು’ ಕೃತಿಯ ಸಖ್ಯದಲ್ಲಿ ಸಹೃದಯರದೂ ಆಗುತ್ತದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು