ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಳನೋಟ: ದಲಿತ ಮಹಿಳೆಯರು ಕಟ್ಟಿದ ಚರಿತ್ರೆ

Last Updated 24 ಸೆಪ್ಟೆಂಬರ್ 2022, 23:58 IST
ಅಕ್ಷರ ಗಾತ್ರ

ಅಂಬೇಡ್ಕರ್ ಚಳವಳಿಯಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆ, ಸಾಧನೆ ಮತ್ತು ಸಬಲೀಕರಣದ ಸ್ವರೂಪವನ್ನು ಚರ್ಚಿಸುವ ‘ನಾವೂ ಇತಿಹಾಸ ಕಟ್ಟಿದೆವು’ ಎಂಬ ಕೃತಿಯನ್ನು 1989ರಲ್ಲಿ ಊರ್ಮಿಳಾ ಪವಾರ್ ಮತ್ತು ಮೀನಾಕ್ಷಿ ಮೂನ್ ಮರಾಠಿಯಲ್ಲಿ ಪ್ರಕಟಿಸಿದರು. ದು. ಸರಸ್ವತಿಯವರು ಅದನ್ನೀಗ ಕನ್ನಡಕ್ಕೆ ಅನುವಾದಿಸಿದ್ದು, ಅಂಬೇಡ್ಕರ್ ಕುರಿತು ಬಂದಿರುವ ಅಸಂಖ್ಯ ಕೃತಿಗಳ ಸಾಲಿನಲ್ಲಿ ಈ ಕೃತಿ ವಿಶಿಷ್ಟವೂ ಮಹತ್ವದ್ದೂ ಆಗಿದೆ.

‘ಅವನ’ ಚರಿತ್ರೆಯೇ ಎಲ್ಲೆಡೆ ವ್ಯಾಪಿಸಿರುವುದರ ನಡುವೆ ‘ಅವಳ’ ಚರಿತ್ರೆಯನ್ನು ಈ ಕೃತಿ ಕಟ್ಟಿದೆ. ಇದು ಊರ್ಮಿಳಾ ಮತ್ತು ಮೀನಾಕ್ಷಿ ಅವರ ಸ್ತ್ರೀವಾದಿ ನೋಟದಿಂದ ಕಟ್ಟಿದ ‘ಅವಳ’ ಚರಿತ್ರೆ. ಪ್ರಧಾನಧಾರೆಯ ಚಳವಳಿಗಳ ಇತಿಹಾಸದಲ್ಲಿ ದಾಖಲಾಗದ, ಸ್ಥಾನ ಪಡೆಯದ, ಅಂಬೇಡ್ಕರ್‌ವಾದಿಗಳು ರಚಿಸಿದ ಚಳವಳಿಗಳ ಚರಿತ್ರೆಯಲ್ಲೂ ಅದೃಶ್ಯರಾಗಿದ್ದ ಮಹಿಳೆಯರ ಚರಿತ್ರೆ ಇದು. ಪ್ರತಿಕೂಲ ಮತ್ತು ಪರಿಮಿತ ಪರಿಸ್ಥಿತಿಗಳಲ್ಲಿ ಆ ಮಹಿಳೆಯರು ಕಟ್ಟಿದ ಚರಿತ್ರೆಯನ್ನು ಓದಿ, ಇಂದಿನ ನಮ್ಮ ಸಾಮಾಜಿಕ ಜವಾಬ್ದಾರಿ ಮತ್ತು ಹೊಣೆಗಾರಿಕೆಯನ್ನು ಎಚ್ಚರಿಸುವ ಕೃತಿ ಇದು. ಜೊತೆಗೆ ಶತಮಾನಗಳಿಂದ ಸಮಾಜ ಉಪೇಕ್ಷಿಸಿದ ಮಹಿಳೆಯರು ಅದರಲ್ಲೂ ದಲಿತ ಮಹಿಳೆಯರು ಕಟ್ಟಿದ ಚರಿತ್ರೆಯಿದು- ಕಣ್ಣಿದ್ದರೆ ಕಾಣಿ ಎಂದು ಗಟ್ಟಿಸಿ ಹೇಳಿದ ಕೃತಿಯೂ ಹೌದು.

1920ರಿಂದ 1956ರ ಅವಧಿಯ ಅಂಬೇಡ್ಕರ್ ಚಳವಳಿಯಲ್ಲಿ ಭಾಗಿಯಾಗಿದ್ದ ಮಹಿಳೆಯರು ರೂಪುಗೊಂಡ, ಪ್ರಭಾವಿತರಾದ ಬಗೆ ಮತ್ತು ಸಬಲೀಕರಣದ ಸ್ವರೂಪವನ್ನು ದಾಖಲಿಸುವುದು ಕೃತಿಯ ಪ್ರಧಾನ ಉದ್ದೇಶ. ಇದರಲ್ಲಿ ಎರಡು ಭಾಗಗಳಿವೆ. ಮೊದಲನೆಯ ಭಾಗದಲ್ಲಿ ಅಂಬೇಡ್ಕರ್ ಚಳವಳಿಯ ಸಾಮಾಜಿಕ, ಐತಿಹಾಸಿಕ ಹಿನ್ನೆಲೆಯನ್ನು ಪತ್ರಿಕಾ ವರದಿಗಳ ಮೂಲಕ ಪುನರ್ ರೂಪಿಸಿದ ಹದಿಮೂರು ಅಧ್ಯಾಯಗಳಿವೆ. ಎರಡನೆಯದರಲ್ಲಿ ಚಳವಳಿಯಲ್ಲಿ ಭಾಗಿಯಾಗಿದ್ದ ನಲವತ್ತನಾಲ್ಕು ಮಹಿಳೆಯರ ಸಂದರ್ಶನಗಳಿವೆ.

ಸಂದರ್ಶಿಸಲ್ಪಟ್ಟ ದಲಿತ ಮಹಿಳೆಯರ ಹಿನ್ನೆಲೆಯನ್ನು ಮುಖ್ಯವಾಗಿ ಗಮನಿಸಬೇಕಿದೆ. ಇವರಲ್ಲಿ ಅನಕ್ಷರಸ್ಥರಿದ್ದಾರೆ, ಪ್ರಾಥಮಿಕ/ಪ್ರೌಢಶಾಲಾ ಶಿಕ್ಷಣವನ್ನು ಪಡೆದವರಿದ್ದಾರೆ, ವಿರಳವಾಗಿ ಟೀಚರ್ ಟ್ರೇನಿಂಗ್ ಮತ್ತು ಪದವಿ ಪಡೆದವರಿದ್ದಾರೆ. ಬಹುತೇಕರ ಹೆತ್ತವರು ಕಾರ್ಮಿಕರು, ಇನ್ನು ಕೆಲವರ ಹೆತ್ತವರು ಇಂಗ್ಲಿಷರ ಮನೆಯಲ್ಲಿ ಅಡುಗೆಯವರಾಗಿ, ವಾಹನ ಚಾಲಕರಾಗಿ, ಪೊಲೀಸರಾಗಿ, ಶಿಕ್ಷಕರಾಗಿ, ಗುಮಾಸ್ತರಾಗಿ ದುಡಿಯುತ್ತಿದ್ದವರು. ಆದರೆ 1920ರ ವೇಳೆಗೆಲ್ಲ ಈ ಹೆತ್ತವರು ಸಂಘಟನೆ, ಅಂಬೇಡ್ಕರ್ ಚಳವಳಿಯ ಮಹತ್ವ ಅರಿತು ಅದರಲ್ಲಿ ಪಾಲ್ಗೊಂಡಿದ್ದರು. ಹೀಗಾಗಿ ಹೆತ್ತವರ ಪ್ರೇರಣೆಯಿಂದ, ವಿವಾಹಾನಂತರ ಗಂಡನ ಮನೆಯ ಪರಿಸರದಿಂದ ಈ ಮಹಿಳೆಯರು ಅಂಬೇಡ್ಕರ್ ಚಳವಳಿಗಳಲ್ಲಿ ಭಾಗಿಯಾದರು.

ಅಂಬೇಡ್ಕರ್ ಮುನ್ನಡೆಸಿದ ಮಹಾಡ್ ಕೆರೆ ಸತ್ಯಾಗ್ರಹ, ಕಾಳಾರಾಮ್ ದೇವಾಲಯ ಪ್ರವೇಶ ಹೋರಾಟ, ಪೂನಾ ಒಪ್ಪಂದ, ಬೌದ್ಧಧರ್ಮಕ್ಕೆ ಮತಾಂತರ ಮುಂತಾದವುಗಳಲ್ಲಿ ಸಾವಿರಾರು ಸಂಖ್ಯೆಯಲ್ಲಿ ಈ ಮಹಿಳೆಯರು ಪಾಲ್ಗೊಂಡಿದ್ದರು. ಗೃಹಿಣಿಯರು ಮಕ್ಕಳನ್ನು ಕಂಕುಳಲ್ಲಿ ಇಟ್ಟುಕೊಂಡೇ ಹೋರಾಟಕ್ಕೆ ಬಂದರು. ಗರ್ಭಿಣಿಯರು ಮತ್ತು ಎಳೆಕೂಸಿನ ತಾಯಂದಿರು ಜೈಲುಶಿಕ್ಷೆ ಅನುಭವಿಸಿ ಹೊಸ ಚರಿತ್ರೆಯನ್ನು ನಿರ್ಮಿಸಿದರು.

ಚಳವಳಿಯ ಪ್ರೇರಣೆಯಿಂದ ಮಹಿಳೆಯರ ವ್ಯಕ್ತಿತ್ವದಲ್ಲಾದ ಬದಲಾವಣೆಗಳು ಗಮನಾರ್ಹ. ಅನೇಕ ಅನಕ್ಷರಸ್ಥ ಮಹಿಳೆಯರು ಪ್ರಭಾವಿ ಭಾಷಣಕಾರ್ತಿಯರಾಗಿ, ಸಂಘಟಕಿಯರಾಗಿ, ಹಾಡುಗಾರ್ತಿಯರಾಗಿ ರೂಪಾಂತರಗೊಂಡರು. ಶಿಕ್ಷಿತ ಮಹಿಳೆಯರು ಪತ್ರಿಕಾ ಬರಹ, ಕವಿತೆಗಳನ್ನು ಬರೆದರು; ರಾಜಕೀಯ ನಾಯಕಿಯರಾಗಿ, ದಲಿತ ಸಂಘಟನೆಗಳಲ್ಲಿ ಪದಾಧಿಕಾರಿಗಳಾಗಿ ತಮ್ಮ ಶಕ್ತಿ ಮತ್ತು ಸಾಮರ್ಥ್ಯ ಸಾಬೀತುಪಡಿಸಿದರು.

ದಲಿತ ಮಹಿಳೆಯರ ಈ ಹಾದಿ ಸುಗಮವಾಗಿರಲಿಲ್ಲ. ‘ದಲಿತ ಹೆಣ್ಣುಮಕ್ಕಳ ಬದುಕು ಕತ್ತರಿಯ ನಡುವೆ ಸಿಕ್ಕಿದಂತೆ. ಹೊಲದಲ್ಲಿ ದುಡಿಯುವಾಗ ಮರ್ಯಾದೆಗಾಗಿ ಭಯಪಡಬೇಕು, ಮನೆಯೊಳಗೆ ಗಂಡಂದಿರ ಭಯ... ಹೊಡೆತ, ಜಗಳ, ಅಳು ಮತ್ತು ಹಸಿವು ಮಾಮೂಲಿಯಾಗಿದ್ದವು’ ಎಂಬ ಬೇಬಿತಾಯಿ ಕಾಂಬ್ಳೆ ಅವರ ಮಾತು ದಲಿತ ಮಹಿಳೆಯರ ಬದುಕಿಗೆ ಹಿಡಿದ ಕನ್ನಡಿ.

ಹಲವರು ತಮ್ಮ ಕೌಟುಂಬಿಕ ಜವಾಬ್ದಾರಿಗಳ ಜೊತೆ ಸಾರ್ವಜನಿಕ ಬದುಕಿಗೆ ಸಮಯ ಕೊಡಲು ಹೆಣಗಾಡಿದ್ದರೆ, ಹೊರಗೆ ಹೋಗಿ ಸಮಾಜಸೇವೆ ಮಾಡಬೇಕೆಂದು ಕುಟುಂಬ ಯೋಜನೆಯನ್ನು ಆ ಕಾಲಕ್ಕೇ ಬಳಸಿದವರು ಕೆಲವರು. ಸಂಶಯ ಸ್ವಭಾವದ ಗಂಡ-ಅತ್ತೆಯರ ಕಿರುಕುಳ, ಹೊಡೆತ, ಅಪವಾದ ತಡೆಯಲಾಗದೆ ತವರಿಗೆ ಬಂದವರು ಕೆಲವರಾದರೆ, ‘ಕಾರಣವಿಲ್ಲದೆ ನನ್ನನ್ನು ಅನುಮಾನಿಸಬೇಡಿ’ ಎಂದು ಪ್ರತಿರೋಧ ತೋರಿದವರು ಕೆಲವರು. ಮತ ಚಲಾಯಿಸಲು ಬಿಡದ ಗುಂಪಿಗೆ, ಸೆರಗಲ್ಲಿ ಬಚ್ಚಿಟ್ಟುಕೊಂಡ ಖಾರದ ಪುಡಿ ಎರಚಿ ಪ್ರತಿರೋಧ ತೋರಿದವರು ಇನ್ನು ಕೆಲವರು.

ಅನೇಕ ಪರಿಮಿತ, ಸಂಕಷ್ಟದ ವಾತಾವರಣವಿದ್ದರೂ ಈ ಮಹಿಳೆಯರ ಆತ್ಮವಿಶ್ವಾಸ, ಧೀಶಕ್ತಿ, ಪ್ರಶ್ನಿಸುವ, ವಿವೇಚಿಸುವ ಗುಣಗಳು ಅನನ್ಯ. ‘ನಾವು ನಿಮ್ಮ ಜೊತೆ ಮತಾಂತರಕ್ಕೆ ಸಿದ್ಧ. ನಮಗೆ ಘನತೆಯಿಂದ ಬದುಕಲು ಅವಕಾಶವಿರುವ, ನಮ್ಮ ಚಲನವಲನದ ಮೇಲೆ ನಿರ್ಬಂಧ ಹೇರದ, ನಮಗೆ ನಮ್ಮದೆನಿಸುವ ಧರ್ಮವನ್ನು ನಮಗೆ ಕೊಡಿ’ ಎಂದು ಅಂಬೇಡ್ಕರ್ ಅವರಿಗೆ ಮನವಿ ಇಟ್ಟವರು ಇವರು. ಒಂದೇ ಮನದಿಂದ ತಾವು ಅದುವರೆಗೆ ಪೂಜಿಸುತ್ತಿದ್ದ ದೇವದೇವತೆಗಳನ್ನು ಮತಾಂತರದ ವೇಳೆ ನದಿಗೆ ಎಸೆದವರಿವರು! ಇಲ್ಲಿ ಮಹಿಳೆಯರ ಆತ್ಮವಿಶ್ವಾಸದಷ್ಟೇ ಸಾಮಾನ್ಯರ ಮಾತಿಗೆ ಕಿವಿಯಾಗುತ್ತಿದ್ದ ಅಂಬೇಡ್ಕರ್ ವ್ಯಕ್ತಿತ್ವವೂ ಮುಖ್ಯವಾಗಿದೆ.

‘ನೀವ್ಯಾಕೆ ಹರಿಜನ ಸೇವಕ ಸಂಘದ ಹಣವನ್ನು ವಿನಿಯೋಗಿಸುವ ಕೆಲಸ ಹರಿಜನರಿಗೇ ವಹಿಸುವುದಿಲ್ಲ’ ಎಂದು ಗಾಂಧಿಯನ್ನೇ ಪ್ರಶ್ನಿಸಿದ ಮುಕ್ತಾ ಸರ್ವಗೋಡ್; ಹಿಂದೂ ಕೋಡ್ ಬಿಲ್ ಕುರಿತು ಅಪಪ್ರಚಾರದಲ್ಲಿ ತೊಡಗಿದ್ದ ಕರ್‌ಪಾತ್ರಿ ಮಹಾರಾಜ್‌ರ ಮಾತಿನ ಜೊಳ್ಳುತನವನ್ನು ಬಯಲಿಗೆಳೆದ ನಲಿನಿತಾಯಿ ಲಢಕ್; ‘ಅಡುಗೆಮನೆ ಒಲೆಯು ಯಾವತ್ತೂ ನನಗೆ ಆಕರ್ಷಣೆ ಹುಟ್ಟಿಸಲೇ ಇಲ್ಲ. ಅದು ಮಹಿಳೆಯರ ಸಾಮಾಜಿಕ ಚಟುವಟಿಕೆಗೆ ಅಡ್ಡಿಯಾಗಿದೆ’ ಎಂದ ಗೀತಾಬಾಯಿ ಪವಾರ್; ‘ಗಂಡ ನನ್ನನ್ನು ಪ್ರೋತ್ಸಾಹಿಸಲೂ ಇಲ್ಲ, ವಿರೋಧಿಸಲೂ ಇಲ್ಲ. ನನ್ನ ನಿರ್ಧಾರ ನಾನೇ ತೆಗೆದುಕೊಳ್ಳುತ್ತಿದ್ದೆ’ ಎಂದ ಕೌಸಲ್ಯಾಬಾಯಿ ಬೈಸಂತ್ರಿ ಇವರೆಲ್ಲ ಕಟ್ಟಿದ ಅಪರೂಪದ ಚರಿತ್ರೆಯೇ ‘ನಾವೂ ಇತಿಹಾಸ ಕಟ್ಟಿದೆವು’ ಕೃತಿಯಾಗಿದೆ.

ದು. ಸರಸ್ವತಿಯವರ ಅನುವಾದದ ಭಾಷೆ ನವಿರಾಗಿದೆ, ಸೃಜನಶೀಲವಾಗಿದೆ, ಹಲವು ಭಾಷಾ ನಮೂನೆಗಳನ್ನು ಸಮಯೋಚಿತವಾಗಿ ಕೃತಿಯಲ್ಲಿ ದುಡಿಸಿಕೊಂಡಿದ್ದಾರೆ. ಇದೊಂದು ಕನ್ನಡದ ಹೋರಾಟದ ಚರಿತ್ರೆಗೆ ಮಹತ್ವದ ಕೊಡುಗೆಯಾಗಿದೆ. ಮಹಿಳಾ ಚರಿತ್ರೆಯನ್ನು ಎಲ್ಲೆಲ್ಲಿ ಮತ್ತು ಹೇಗೆಲ್ಲ ಕಟ್ಟಲು ಅವಕಾಶವಿದೆ ಎಂಬ ಹೊಸ ಯೋಜನೆಯನ್ನು ಈ ಮೂಲಕ ಸರಸ್ವತಿಯವರು ನಮಗೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT