ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಲಿತ ಲೋಕದ ತಲ್ಲಣ, ಗಡಿಕನ್ನಡದ ಸೊಗಡು

Last Updated 11 ಏಪ್ರಿಲ್ 2020, 19:30 IST
ಅಕ್ಷರ ಗಾತ್ರ

ತಮಿಳು ಗಡಿಯಲ್ಲಿರುವ ಚಾಮರಾಜನಗರದ ಕನ್ನಡದ ಪ್ರಾದೇಶಿಕ ಸೊಗಡು ವಿಶಿಷ್ಟವಾದದ್ದು. ಸ್ವಲ್ಪ ಈಚೆಗೆ ಬಂದರೆ ನಂಜನಗೂಡಿನಲ್ಲೇ ಈ ಕನ್ನಡ ಬದಲಾಗುತ್ತದೆ. ಚಾಮರಾಜನಗರದ ಕನ್ನಡದಲ್ಲಿ ಈ ಹಿಂದೆ ದೇವನೂರ ಮಹಾದೇವ ಬರೆದದ್ದು ಸಾಹಿತ್ಯಲೋಕದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿತ್ತು. ಅದಾದ ಬಳಿಕ ಕಪಿಲೆಯಲ್ಲಿ ಸಾಕಷ್ಟು ನೀರು ಹರಿದಿದೆ. ಇವತ್ತು ಚಾಮರಾಜನಗರದ ಕನ್ನಡದ ವೈವಿಧ್ಯ ಸಿನಿಮಾದಲ್ಲೂ ಅಭಿವ್ಯಕ್ತಿಗೊಂಡು ಹೆಚ್ಚು ಮನ್ನಣೆ‍ಪಡೆದಿದೆ. ಮಂಜು ಕೋಡಿಉಗನೆ ಅವರ ’ಚಪ್ಪೋಡು‘ ಕಾದಂಬರಿಯಲ್ಲಿ ಗಡಿಕನ್ನಡದ ಪಾತ್ರಗಳು ಜೀವಂತ ಎದ್ದು ಬಂದಿವೆ. ಜೊತೆಗೇ ಅಲ್ಲಿಯ ಜಾತಿವ್ಯವಸ್ಥೆಯ ಒಳಗೊಳಗಿನ ಕಟುಸತ್ಯಗಳೂ ಕಣ್ಣಮುಂದೆ ಕುಣಿಯುತ್ತವೆ.

ಮೈಸೂರಿನಲ್ಲಿ ಉನ್ನತ ವ್ಯಾಸಂಗ ಮುಗಿಸಿ ಸೂರಳ್ಳಿ ಹೊಲಗೇರಿಗೆ ಹಿಂತಿರುಗಿದ ಮಹೇಶ ದಲಿತ ಒಕ್ಕೂಟ ರಚಿಸಿ ದಲಿತರ ಬದುಕಿಗೆ ಘನತೆ ತುಂಬಲು ಯತ್ನಿಸುತ್ತಾನೆ. ಜಮೀನಿನ ಚೆಕ್ಕುಬಂದಿಯ ವಿವಾದ ಜಾತಿನಿಂದನೆಗೆ ಕಾರಣವಾಗಿ ಕೋರ್ಟು ಮೆಟ್ಟಿಲು ಹತ್ತುತ್ತಾನೆ. ಊರವರಿಗೆಲ್ಲ ಜಗಲಿಕಟ್ಟೆ ಎಂಬಂತಿರುವ ಪಾರೋತಿಯ ಹೋಟೆಲ್‌ ಎಲ್ಲ ಚರ್ಚೆಗಳ ಪಾರ್ಲಿಮೆಂಟು. ಇನ್ನೊಂದೆಡೆ ದಲಿತ ಹೆಣ್ಣುಮಗಳು ಕಮಲಿ ಮೇಲ್ಜಾತಿಯ ಯುವಕ ನಟೇಶನ ಪ್ರೇಮಕ್ಕೆ ಬಿದ್ದು ಬಸಿರಾಗುತ್ತಾಳೆ. ಅಂಬೇಡ್ಕರ್‌ ಜಯಂತಿ ಕಾರ್ಯಕ್ರಮ ಊರೆಲ್ಲ ಉಸಾಬರಿಗಳಿಗೂ ಮುಖಾಮುಖಿ ಯಾಗುತ್ತದೆ. ಈ ಮಧ್ಯೆ ಊರ ಜಾತ್ರೆಯಲ್ಲಿ ಕಾನೂನುಬದ್ಧವಾಗಿಯೇ ದೇವಾಲಯ ಪ್ರವೇಶ ಮಾಡಬೇಕೆಂಬ ದಲಿತರ ಹುಮ್ಮಸ್ಸು. ಜಾತ್ರೆಯನ್ನೇ ರದ್ದುಗೊಳಿಸಹೊರಟ ಮೇಲ್ಜಾತಿಯವರ ದಾರ್ಷ್ಟ್ಯ. ಜಾತಿವೈಷಮ್ಯದ ಮಧ್ಯೆಯೇ ಜಾತಿಮೀರಿದ ದೇಹಮೋಹದ ಸಲ್ಲಾಪಗಳು. ಕೊನೆಗೆ ಊರಿಗೆ ಊರೇ ರಣರಂಗ. ಜಿಲ್ಲೆಯ ದಲಿತಲೋಕದ ವಾಸ್ತವದ ತಲ್ಲಣಗಳೇ ಇಲ್ಲಿ ಪಾತ್ರಗಳ ಮೂಲಕ ಮಾತನಾಡಿದೆ. ಕಥೆ ಹಳೆಯದ್ದೇ ಆದರೂ ಅದನ್ನು ಹೇಳುತ್ತಲೇ ದಲಿತಲೋಕದೊಳಕ್ಕೂ ಆತ್ಮವಿಮರ್ಶೆಯ ಕ್ಷಕಿರಣಗಳನ್ನು ಹಾಯಿಸುವುದು ಮಂಜು ಅವರ ಕಾದಂಬರಿಯ ವೈಶಿಷ್ಟ್ಯ.

ಈಗಾಗಲೆ ಎರಡು ಕಥಾಸಂಕಲನ ಮತ್ತು ಎರಡು ಕವನ ಸಂಕಲನಗಳ ಮೂಲಕ ಕನ್ನಡ ಸಾಹಿತ್ಯಲೋಕದಲ್ಲಿ ಸ್ಪಷ್ಟಹೆಜ್ಜೆಗಳನ್ನು ಊರಿರುವ ಮಂಜು ಕೋಡಿಉಗನೆ ಈ ಕಾದಂಬರಿಯ ಮೂಲಕ ಹೊಸ ದಿಕ್ಕು ತೋರಲು ಯತ್ನಿಸಿದ್ದಾರೆ. ಕೆ.ಪಿ.ಸುರೇಶ ಅವರ ಮುನ್ನುಡಿ ಮತ್ತು ಕುಂವೀ ಅವರ ಹಿನ್ನುಡಿ ಈ ದಿಕ್ಕಿನತ್ತ ಬೆಳಕು ಚೆಲ್ಲಿದೆ.

ದಲಿತ ಲೋಕದ ಬದಲಾದ ಕಾಲ ಮತ್ತು ಸಂದರ್ಭದ ಒಳನೋಟ ಹಾಗೂ ವಿಷಾದದ ದನಿ ಈ ಕಾದಂಬರಿಗೆ ಹೆಚ್ಚು ಮಹತ್ವವನ್ನು ತಂದುಕೊಟ್ಟಿದೆ.

ಈ ಕಾದಂಬರಿ ಓದಿದ ಬಳಿಕ ‘ಐಯ್‌ ಬುಡಪ್ಪೈ ನಂಗ್ಯಾನ್‌ ಗೊತ್ತು! ನಾಯಾನ್‌ ಬದ್ದಿದನ... ಬಾಳಿಯನ. ಇನ್ನುವ ನೀನ್‌ಯೋಳು. ಲಾಯಿರಿ ಓದ್‌ ಮಡ್ಗಿರೋನ.’ ಎನ್ನುವಂತಿಲ್ಲ. ಅಷ್ಟರಮಟ್ಟಿಗೆ ಓದುಗನ ಮನಸನ್ನು ಈ ಕಾದಂಬರಿ ಗುಂಗಿಹುಳದಂತೆ ಕೊರೆಯುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT