ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಸ್ತಕ ವಿಮರ್ಶೆ: ರಂಗುರಂಗಿನ ಪುಟ್ಟ ಕಥೆಗಳು

Last Updated 4 ಸೆಪ್ಟೆಂಬರ್ 2021, 19:30 IST
ಅಕ್ಷರ ಗಾತ್ರ

ಮಧ್ಯವರ್ತಿ
ಪುಟ್ಟ ಪುಟ್ಟ ಕಥೆಗಳು
ಲೇ:
ದೊಡ್ಡರಂಗೇಗೌಡ
ಪ್ರ: ಗೀತಾಂಜಲಿ ಪಬ್ಲಿಕೇಷನ್ಸ್‌
ಸಂ: 9740066842
ಬೆಲೆ:250 ಪುಟಗಳು 252

***

ಸಾಹಿತಿ ದೊಡ್ಡರಂಗೇಗೌಡರ ಹೆಸರು ಪ್ರಸ್ತಾಪವಾದೊಡನೆ ಮೊದಲು ನೆನಪಿಗೆ ಬರುವುದು ಅವರ ಕಾವ್ಯಲೋಕ. ಅದಕ್ಕೆ ಮುಖ್ಯ ಕಾರಣ ದಶಕಗಳಿಂದ ಅವರು ಪ್ರಧಾನವಾಗಿ ಕಾವ್ಯ ಕೃಷಿಯನ್ನೇ ಮಾಡಿಕೊಂಡು ಬಂದಿರುವುದು. ಅಲ್ಲಿ ‘ನಮ್ಮೂರ ಮಂದಾರ ಹೂವೆ’ಯಂತಹ ಕಾವ್ಯಪುಷ್ಪಗಳು ಅರಳಿ ಕಂಪು ಬೀರಿದ್ದೂ ಗೌಡರನ್ನು ಕಾವ್ಯಲೋಕದ ಆಸಾಮಿಯನ್ನಾಗಿ ನೋಡುವಂತೆ ಮಾಡಿದೆ. ಆದರೆ, ಕಾವ್ಯದಷ್ಟೇ ಕಥೆಗಳ ಮೇಲೂ ಅವರಿಗೆ ಪರಿಶ್ರಮವಿದೆ. ಎಲೆಮರೆಯ ಕಾಯಿಯಂತಿದ್ದ ಅವರ ಕಥಾಶಕ್ತಿ ‘ಮಧ್ಯವರ್ತಿ’ ಸಂಕಲನದಲ್ಲಿ ದೊಡ್ಡದಾಗಿ ಬೆಳಗಿದೆ.

ದೊಡ್ಡರಂಗೇಗೌಡರ 48 ಪುಟ್ಟ ಪುಟ್ಟ ಕಥೆಗಳ ಗುಚ್ಛವೇ ‘ಮಧ್ಯವರ್ತಿ’. ಕಾಲೇಜು ದಿನಗಳಲ್ಲಿ ಕಥೆ ಬರೆಯುತ್ತಿದ್ದ ಅವರು ಬಳಿಕ ಕಾವ್ಯದ ಕಡೆಗೆ ವಾಲಿದವರು. ನಿವೃತ್ತಿಯ ನಂತರವಷ್ಟೇ ಅವರು ಮತ್ತೆ ಕಥಾಸಾಗರಕ್ಕೆ ಧುಮುಕಿದ್ದಾರೆ. ಗೌಡರ ಅನುಭವ, ಸುತ್ತಮುತ್ತಲಿನ ಸಮಾಜದ ಕುರಿತು ಅವರು ಹೊಂದಿದ ಕೌತುಕ, ಕಥೆ ಹೇಳುವ ಆಸಕ್ತಿ ಎಲ್ಲವೂ ಮೇಳೈಸಿದ್ದರಿಂದ ‘ಮಧ್ಯವರ್ತಿ’ ಅವತರಿಸಲು ಸಾಧ್ಯವಾಗಿದೆ. ಸಮಾಜವನ್ನು ಕಾಡುವ ಭ್ರಷ್ಟಾಚಾರ, ಮೋಸ, ವಂಚನೆ, ಬಡತನ ಇವರ ಕಥೆಗಳಿಗೆ ಮುಖ್ಯ ವಸ್ತುವಾಗಿವೆ.

ಸಂದರ್ಭಕ್ಕೆ ತಕ್ಕಂತೆ ಬಣ್ಣ ಬದಲಾಯಿಸುವ ಜನರ ಕಥೆ ಹೇಳುವ ‘ಗೋಸುಂಬೆಗಳು’, ಆಕಸ್ಮಿಕವಾಗಿ ಒದಗಿಬಂದ ಸಹಾಯದಿಂದ ಬದುಕಿನ ಗತಿಯೇ ಬದಲಾಗುವಂತಹ ಕಥೆ ಹೇಳುವ ‘ಯೋಗಾಯೋಗ’ ಭಿನ್ನ ಕಥಾವಸ್ತುವಿನಿಂದ ಗಮನಸೆಳೆಯುತ್ತವೆ.

ನಿಮ್ಮ ಬಳಿ ದುಡ್ಡು ಇದೆ ಎಂದು ಗೊತ್ತಾದರೆ ಸಾಕು, ಗಾಂಧಿನಗರದ ಮಂದಿ ಹೇಗೆ ಟೋಪಿ ಹಾಕುತ್ತಾರೆ ಎಂಬುದನ್ನು ‘ಮಧ್ಯವರ್ತಿ’ ಕಥೆ ತುಂಬಾ ಸೊಗಸಾಗಿ ಕಟ್ಟಿಕೊಡುತ್ತದೆ. ನಗಾರಿ ನಂಜುಂಡನಂತಹ ಪತ್ರಕರ್ತರ ದಂಡೇ ಚಂದನವನದ ಈ ಬೀದಿಯಲ್ಲಿದೆ. ‘ನಿಮ್ಮ ಮಗನನ್ನು ಹೀರೊ ಮಾಡಿ’ ಎಂದು ಪುಸಲಾಯಿಸುವುದು, ಸಿಕ್ಕಾಪಟ್ಟೆ ದುಡ್ಡು ಪೀಕಿಸುವುದು, ಕೊನೆಗೆ ಕೈಕೊಟ್ಟು ಓಡಿ ಹೋಗುವುದು... ಎಲ್ಲವೂ ಗಾಂಧಿನಗರದಲ್ಲಿ ನಡೆದಿರುವಂಥದೇ ಘಟನೆಗಳು. ಅದಕ್ಕೆ ದೊಡ್ಡರಂಗೇಗೌಡರು ಕಥೆಯ ರೂಪ ನೀಡಿದ್ದಾರೆ.

ಪುಟ್ಟ ಪುಟ್ಟ ಕಥೆಗಳು ಇವಾಗಿದ್ದರಿಂದ ಸುಲಲಿತವಾಗಿ ಓದಿಸಿಕೊಂಡು ಹೋಗುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT