ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಳನೋಟ | ದನಾನುರಾಗಿ ವೈದ್ಯರ ಅನುಭವ ಕಥನ

Last Updated 5 ನವೆಂಬರ್ 2022, 22:27 IST
ಅಕ್ಷರ ಗಾತ್ರ

ಪಶುವೈದ್ಯರಾಗಿ ಕಾರ್ಯನಿರ್ವಹಿಸುತ್ತಿದ್ದಾಗ ಕ್ಷೇತ್ರದಲ್ಲಿ ಎದುರಾದ ಮೂವತ್ಮೂರು ವಿಶಿಷ್ಟ ಸಂದರ್ಭಗಳ, ಸವಾಲುಗಳ ರೋಚಕ ನಿರೂಪಣೆಯ ಬರಹಗಳ ಸಂಕಲನ ಡಾ. ಮಿರ್ಜಾ ಬಷೀರರ ‘ಗಂಗೆ ಬಾರೆ ಗೌರಿ ಬಾರೆ’. ಮೊದಲ ಮತ್ತು ಕೊನೆಯ ಬರಹಗಳು ಮಾತ್ರ ಇಡಿಯಾಗಿ ಅವರ ಪತ್ನಿಯ ಕುರಿತಾಗಿವೆ. ಆದರೆ, ಆಳದಲ್ಲಿ ಅವೂ ಕ್ರಮವಾಗಿ ಸಮಾಜದಲ್ಲಿ ಪಶುವೈದ್ಯ ವೃತ್ತಿಯ ಬಗೆಗಿರುವ ಅನಾದರವನ್ನೂ ಉತ್ತಮ ಪಶುವೈದ್ಯರೆನಿಸಿಕೊಂಡವರ ಮನೆಯವರ ಔದಾರ್ಯ ಹಾಗೂ ತ್ಯಾಗಗಳ ಬಗ್ಗೆ ಅಭಿಮಾನವನ್ನೂ ಪ್ರಕಟಿಸುತ್ತ ಕೃತಿಯ ಚೌಕಟ್ಟಿಗೆ ಪೂರಕವಾಗಿಯೇ ದುಡಿದಿವೆ.

ಒಂದರ್ಥದಲ್ಲಿ ಈ ಕೃತಿಯು ಕತೆ, ಪ್ರಬಂಧ ಮತ್ತು ಆತ್ಮಕತೆಗಳನ್ನು ಹದವಾಗಿ, ಬಿಡಿಸಲಾಗದಂತೆ ಬೆಸೆದು ಹೆಣೆದಿರುವ ಒಂದು ವಿಶಿಷ್ಟ ವೃತ್ತಿಜೀವನದ ಅನುಭವಕಥನ. ಈ ಕೃತಿಯ ಎರಡು ಪ್ರಾಮುಖ್ಯತೆಗಳನ್ನು ಹೀಗೆ ಸೂತ್ರೀಕರಿಸಿ ಹಿಡಿಯಬಹುದೆನಿಸುತ್ತದೆ. ಒಂದು- ಇದು ಇಷ್ಟು ಸಮಗ್ರವಾಗಿ ಕಾಣಿಸುತ್ತಿರುವ ಪಶುವೈದ್ಯಲೋಕವು ಕನ್ನಡ ಸಾಹಿತ್ಯದಲ್ಲಿ ಈವರೆಗೆ ಪ್ರಾಸಂಗಿಕವಾಗಿಯಾದರೂ ಎಲ್ಲೂ ಬಂದೇ ಇರದಷ್ಟು ಅಜ್ಞಾತವೂ, ಅಪರೂಪವೂ ಆಗಿರುವಂಥ ಅನುಭವಲೋಕವಾಗಿರುವುದು. ಮತ್ತೊಂದು- ಈವರೆಗಿನ ಕನ್ನಡದ ಇತರೆ ವೃತ್ತಿಜೀವನದ ಅನುಭವಕಥನಗಳ ಸಾಲಲ್ಲಿಟ್ಟು ನೋಡಿದಾಗಲೂ ಅವೆಲ್ಲವುಗಳಿಗಿಂತ ಭಿನ್ನವಾಗಿ, ಅನನ್ಯವಾಗಿ ತನ್ನ ರುಚಿವೈಶಿಷ್ಟ್ಯವನ್ನು ಸಾಬೀತುಪಡಿಸಿರುವುದು.

ಇಲ್ಲಿನ ಒಟ್ಟೂ ಬರಹಗಳಲ್ಲಿ ಪಶುವೈದ್ಯ ಬಷೀರರದೇ ಮೇಲುಗೈಯಾಗಿ ಒಂದೆರಡು ಬರಹಗಳು ಮಾತ್ರ ಪ್ರಸಂಗ ನಿರೂಪಣೆಯ ಹಂತದಲ್ಲಿ ಉಳಿದುಬಿಟ್ಟಿವೆ. ಇನ್ನುಳಿದಂತೆ ಕೇವಲ ವೈನೋದಿಕ ಪ್ರಸಂಗಗಳಾಗಬಹುದಾಗಿದ್ದ ಈ ಬಹುತೇಕ ಅನುಭವಗಳಲ್ಲಿ ಕತೆಗಾರ ಬಷೀರರು ತಮ್ಮ ಕಥನಪ್ರತಿಭೆಯಿಂದ ರಕ್ತ ಮಾಂಸ ತುಂಬಿ ಪ್ರಾಣಪೋಷಣೆ ಮಾಡಿದ್ದಾರೆ. ಒಂದು ಬಿಂದುವಿನಿಂದ ಪ್ರಾರಂಭವಾದ ಬರಹವು ವೃತ್ತಾಕಾರವಾಗಿ ಚಲಿಸಿ ಮತ್ತದೇ ಬಿಂದುವಿಗೆ ಬಂದು ತಲುಪಿ ಒಂದು ಪೂರ್ಣ ಕಥನಾನುಭವ ಒದಗುವಂತೆ ಇವುಗಳನ್ನು ನಿರೂಪಿಸಿರುವ ರೀತಿಯಂತೂ ಆಪ್ಯಾಯಮಾನವಾಗಿದೆ.

ಗಮನಾರ್ಹವಾದ ಮತ್ತೊಂದು ಅಂಶವೆಂದರೆ, ಇಡೀ ಕೃತಿಯಲ್ಲಿ ಡಾ. ಲೇಶಣ್ಣ, ಡಾ. ಸುನೀಲ್‍ಚಂದ್ರ, ಬೆಟ್ಟಯ್ಯರನ್ನು ಬಿಟ್ಟರೆ ನೌಕರಶಾಹಿ ಜಂಜಾಟಗಳು ಮತ್ತು ಸಂಘ-ಸಂಸ್ಥೆ-ಮಾಧ್ಯಮಗಳಂಥ ಒತ್ತಡ ಗುಂಪುಗಳ ಮಧ್ಯಪ್ರವೇಶಗಳ ಪ್ರಸ್ತಾಪವೇ ಇಲ್ಲದಿರುವುದು. ಅಧಿಕಾರಿ ದರ್ಜೆಯ ನೌಕರರಾದ ಪಶುವೈದ್ಯರಿಗೆ ಸಾಮಾನ್ಯವಾಗಿ ಸಮುದಾಯದ ಇತರೆ ಈ ಎಲ್ಲ ಭಾಗೀದಾರರೊಂದಿಗೆ ಅನಿವಾರ್ಯ ಸಂಬಂಧವಿದ್ದೇ ಇರುತ್ತದೆ. ಇವೆಲ್ಲ ಸೇರಿ ಸೂಚಿಸುತ್ತಿರುವುದೇನೆಂದರೆ, ಲೇಖಕರಿಗೆ ದನಗಳ ಮನದ ಮುಂದೆ ಜನಗಳ ಮನ ಗೌಣವೆನಿಸಿರಬಹುದು. ದನಾನುರಾಗಿಯಾದ ಅವರಿಗೆ ಬ್ಯಾಂಡ್ಸೆಟ್ ಹುಚ್ಚಯ್ಯ, ಅಮಾಸೇಗೌಡ, ಪುಷ್ಪಕ್ಕ, ಮುಂಡುಪ್ಪಾಡಿ ಗಿರೀಶ, ರಾಮಾ ಜೋಯಿಸ, ನಾಣ್ಯಪ್ಪ ಪೂಜಾರಿ ಮುಂತಾದ ದನಸೇವಕರೇ ಮುಖ್ಯರೆನಿಸಿರುವುದು.

ಲೇಖಕರಲ್ಲದ ಪಶುವೈದ್ಯರು, ಲೇಖಕರಾಗಿದ್ದೂ ಜೀವನದ ಪ್ರತಿಯೊಂದರಲ್ಲೂ ಒಳ್ಳೆಯದನ್ನೇ ಕಾಣುವ ಮತ್ತು ಸ್ವೀಕರಿಸುವ ಗುಣವಿರದ ಪಶುವೈದ್ಯರು ಬರೆದಿದ್ದರೆ ಈ ಕೃತಿಯ ಸ್ವರೂಪ ಹೀಗಿರುತ್ತಿರಲಿಲ್ಲ. ಅಸಹಾಯಕತೆ, ಸ್ವಮರುಕ, ಪಾಪಪ್ರಜ್ಞೆ, ಆತ್ಮಪ್ರಶಂಸೆ, ವೃತ್ತಿಬದ್ಧತೆ ಮತ್ತು ಪಶುವೈದ್ಯಕೀಯ ಜ್ಞಾನಗಳು ಎಲ್ಲೂ ಅಂಕೆ ಮೀರದಂತೆ ಅಂಕುಶ ಹಾಕುತ್ತ ತನ್ನ ಕುರೂಪವನ್ನೂ ಕಾಣಿಸುವ ರಾಜಹಾಸ್ಯ ಮತ್ತು ಎಲ್ಲೆ ಮೀರದ ಪರಹಾಸ್ಯಗಳ ವಿಶಾಲವಾದ, ಘನವಾದ ಲೋಕದೃಷ್ಟಿಯಲ್ಲಿ ಅತ್ಯಂತ ಎಚ್ಚರದಿಂದ ಈ ಬರಹಗಳನ್ನು ಮುನ್ನಡೆಸಿದ್ದಾರೆ ಲೇಖಕರು. ಇದರಿಂದ ಇಡೀ ಕೃತಿ ಒಂದು ಸಮೃದ್ಧ ಓದಿನ ಅನುಭವ ನೀಡುವ ಸಜೀವ ಕಲಾಕೃತಿಯಾಗಿ ಮೈದಳೆದಿದೆ.

ಪಾರಿಭಾಷಿಕ ಪದಗಳ ಭಾರದಲ್ಲಿ ನಜ್ಜುಗುಜ್ಜಾಗಿಸದೆ ಒಂದು ಜ್ಞಾನಶಿಸ್ತನ್ನು ಹೀಗೆ ಲೋಕಾನುಭವದ ಪಾಕದಲ್ಲಿ ಅದ್ದಿ ಆಸಕ್ತಿಕರ ಪಠ್ಯವಾಗಿ ಮಾರ್ಪಡಿಸಿ ವಿದ್ಯಾರ್ಥಿಗಳಿಗೆ ಕೊಡಲು ಸಾಧ್ಯವೆಂಬುದನ್ನು ಈ ಕೃತಿಯು ನಿರೂಪಿಸಿದೆ. ಪಶುವೈದ್ಯಕೀಯ ವಿದ್ಯಾರ್ಥಿಗಳು, ಅಲ್ಲಿನ ಅಧ್ಯಾಪಕರು, ಕೃಷಿ ಮತ್ತು ಹೈನುಗಾರಿಕೆಯಲ್ಲಿ ಆಸಕ್ತಿಯಿರುವವರು, ಗೃಹಿಣಿಯರು, ಅಷ್ಟೇಕೆ ಸಾಹಿತ್ಯದ ಗಂಭೀರ ಪ್ರಕಾರಗಳ ಓದಷ್ಟೇ ನಿಜವಾದ ಓದೆಂಬ ಆಧುನಿಕ ಮೂಢನಂಬಿಕೆಯಲ್ಲಿರುವ ಸಾಹಿತ್ಯಾಭ್ಯಾಸಿಗಳು ಒಮ್ಮೆ ಕುತೂಹಲಕ್ಕಾದರೂ ಓದಿ ನೋಡಬೇಕು.

ಅನ್ಯ ಜ್ಞಾನಶಿಸ್ತುಗಳನ್ನು ಅವುಗಳ ಆಳವಿವರಗಳೊಟ್ಟಿಗೇ ಕಟ್ಟಿಕೊಡುವ ವಿಷಯಾಂಶ, ಚೇತೋಹಾರಿಯಾದ ಲವಲವಿಕೆಯ ಭಾಷೆಯಲ್ಲಿ ಅವುಗಳನ್ನು ದಾಟಿಸುವ ಶೈಲಿ ಮತ್ತು ಅಗೋಚರ, ಅಗಮ್ಯ, ಅಗ್ರಾಹ್ಯ, ಅಮುಖ್ಯವೆಂಬಂತಿರುವ ಸಂಗತಿಗಳಲ್ಲಿ ಅಡಗಿರುವ ಜೀವನತತ್ವವನ್ನು ಹಿಡಿದೆತ್ತಿ ತೋರುವ ಅಧ್ಯಾತ್ಮಗಳನ್ನು ಮುಪ್ಪುರಿಗೊಳಿಸಿಕೊಂಡಿರುವ ಬರಹಗಳ ಸಂಖ್ಯೆ ಕನ್ನಡದಲ್ಲಿ ಅಷ್ಟಿಲ್ಲ. ಆ ಮಾದರಿಯ ಕೃತಿಗಳಾದ ಬಿಜಿಎಲ್ ಸ್ವಾಮಿಯವರ ‘ನಮ್ಮ ಹೊಟ್ಟೆಯಲ್ಲಿ ದಕ್ಷಿಣ ಅಮೆರಿಕ’, ಹಾರ್ನಳ್ಳಿ ರಾಮಸ್ವಾಮಿಯವರ ‘ಮೈ ಲಾರ್ಡ್’, ಎಸ್.ವಿ.ಶ್ರೀನಿವಾಸರಾಯರ ‘ರಂಗಣ್ಣನ ಕನಸಿನ ದಿನಗಳು’, ತೇಜಸ್ವಿಯವರ ‘ಪರಿಸರದ ಕತೆಗಳು’, ನಾಗೇಶ ಹೆಗಡೆಯವರ ‘ಇರುವುದೊಂದೇ ಭೂಮಿ’ಗಳ ಸಾಲಿಗೆ ಸೇರುತ್ತದೆ ಈ ಕೃತಿ. ಗುಜ್ಜಾರಪ್ಪನವರ ರೇಖಾಚಿತ್ರಗಳು ಮತ್ತು ಸಾಗರ್ ಅವರ ಪುಟವಿನ್ಯಾಸ ಪುಸ್ತಕದ ಮೌಲ್ಯವನ್ನು ಹೆಚ್ಚಿಸಿವೆ.

ಕೃತಿ: ಗಂಗೆ ಬಾರೆ ಗೌರಿ ಬಾರೆ

ಲೇ: ಡಾ.ಮಿರ್ಜಾ ಬಷೀರ್‌

ಪ್ರ: ಬಹುರೂಪಿ

ಸಂ: 7019182729

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT