ಭಾನುವಾರ, ಮಾರ್ಚ್ 29, 2020
19 °C

ಕಾವ್ಯದ ನಿಗೂಢ ಚಿತ್ರಲಿಪಿ

ಸಂದೀಪ ನಾಯಕ Updated:

ಅಕ್ಷರ ಗಾತ್ರ : | |

Prajavani

‘ಸ್ವಪ್ನಲಿಪಿ’ ಒಂದು ವಿಶಿಷ್ಟ ಕವನ ಸಂಗ್ರಹ. ತೆಲುಗು ಪತ್ರಕರ್ತರಾಗಿದ್ದ ಪೆನುಮರ್ತಿ ವಿಶ್ವನಾಥ ಶಾಸ್ತ್ರಿ ಅವರು ‘ಅಜಂತಾ’ ಎಂಬ ಕಾವ್ಯನಾಮದಲ್ಲಿ ಬರೆದ ಕವಿತೆಗಳನ್ನು ಇದು ಒಳಗೊಂಡಿದೆ. 1993ರಲ್ಲಿ ಪ್ರಕಟವಾದ ಈ ಸಂಗ್ರಹದಲ್ಲಿ ಅಜಂತಾ ಅವರು 45 ವರ್ಷಗಳಲ್ಲಿ ಬರೆದ 40ಕ್ಕೂ ಹೆಚ್ಚು ಕವಿತೆಗಳಲ್ಲಿ 29 ಮಾತ್ರ ಇವೆ.

ಈ ಸಂಕಲನದ ವಿಶೇಷ ಎಂದರೆ, ಕವಿತೆಗಳ ಒಂದೂ ಪ್ರತಿ ತಮ್ಮಲ್ಲಿ ಇಲ್ಲದಿದ್ದಾಗಲೂ ಕವಿತೆಗಳನ್ನು ನೆನಪಿನಿಂದಲೇ ಬರೆದು ಈ ಸಂಕಲನವನ್ನು ಅಜಂತಾ ಪ್ರಕಟಿಸಿದ್ದಾರೆ. ಈ ಕವಿತೆಗಳನ್ನು ಕನ್ನಡಿಗರ ಮನಮುಟ್ಟುವಂತೆ ಅನುವಾದಿಸಿರುವ ಚಿದಾನಂದ ಸಾಲಿ ಕವಿಯ ಮಹತ್ವವನ್ನು ಪರಿಚಯಿಸುವುದರ ಜೊತೆಗೆ ಅಜಂತಾ ಕಾವ್ಯದ ಅನುವಾದದ ಕಷ್ಟವನ್ನೂ ಹಂಚಿಕೊಂಡಿದ್ದಾರೆ.

ಇದು ಅಜಂತಾ ಅವರ ಕಾವ್ಯದ ವಿಶೇಷಗಳ ಮಾತಾಯಿತು. ಆದರೆ ‘ಸ್ವಪ್ನಲಿಪಿ’ ತೆಲುಗು ಕಾವ್ಯದ ಮೇಲೆ ಬೀರಿದ ಪ್ರಭಾವ ಅಪಾರವಾಗಿದೆ. ಅದಕ್ಕೆ ಆ ಸಂಕಲನದಲ್ಲಿರುವ ಕವಿತೆಗಳೇ ಉದಾಹರಣೆಯಾಗಿವೆ.

‘ನೇಣಿನ ಹಗ್ಗಗಳೇ ನನ್ನ ಕಲ್ಪನೆಗಳು

ಸಂಕೋಲೆಗಳೇ ನನ್ನ ಮಾತುಗಳು

ನನ್ನ ಅಕ್ಷರಗಳೇ ನನ್ನ ಮೇಲೆಸೆದ ಕಲ್ಲುಗಳು

ನನಗೆ ಮನೆಯಿಲ್ಲ

ನನಗೆ ಕೊನೆಯಿಲ್ಲ

...

ಆಕಾಶ ಕಾಣಿಸದಲ್ಲಿ 

ಕತ್ತಲು ನೇಣುಗಂಬವಾಗಿರುವಲ್ಲಿ

ನಿಶ್ಯಬ್ದದ ಮೇಲೆ ನಿಶ್ಯಬ್ದವಾಗಿ ಕುಳಿತು

ಗಾಳಿಗೊಡ್ಡಿದ ದೀಪಗಳ ಬಗ್ಗೆ ಹಾಡು ಬರೆಯುವೆ

ನನಗೆ ರೂಪವಿಲ್ಲ

ನನ್ನ ಹಾಡುಗಳೇ ನನ್ನ ರೂಪ’

– ಎಂದು ‘ನನ್ನ ಮೇಲೆಸೆದ ಕಲ್ಲುಗಳು ನನ್ನ ಅಕ್ಷರಗಳು’ ಕವಿತೆಯಲ್ಲಿ ಕವಿಯ ರೂಹು ಅಳಿದು ಅಕ್ಷರಗಳು (ಕವಿತೆ) ಉಳಿಯುವ ಬಗ್ಗೆ ಅಜಂತಾ ಬರೆಯುತ್ತಾರೆ. ಇಲ್ಲೊಂದು ದ್ವಂದ್ವವೂ ಇದೆ. ‘ನನ್ನ ಅಕ್ಷರಗಳೇ ನನ್ನ ಮೇಲೆಸೆದ ಕಲ್ಲುಗಳು’ ಎನ್ನುವಲ್ಲಿ ತನ್ನ ಹಾಡು ತನ್ನನ್ನೇ ಕೊಲ್ಲುವುದನ್ನು, ಅದರ ಜೊತೆಗೇ ತಾನು ಶಾಶ್ವತವಾಗುವುದನ್ನೂ ಕವಿ ಸೂಚಿಸುತ್ತಿದ್ದಾನೆ.

ಭೀಕರ ಏಕಾಂತ, ಮಹಾ ನಗರ, ಕತ್ತಲು, ಸಾವು – ಅಜಂತಾ ಅವರ ಕವಿತೆಗಳ ವಸ್ತುಗಳಾಗಿವೆ. ಅವರ ಕವಿತೆಗಳಲ್ಲಿ ನಾಶದ ಪ್ರತಿಮೆ ಮತ್ತೆ ಮತ್ತೆ ಬರುತ್ತಿರುತ್ತದೆ. ಅವರ ಇಡೀ ಕಾವ್ಯವೇ ವಿಲಕ್ಷಣ ಪ್ರತಿಮೆಗಳ ಸರಣಿ ಮೆರವಣಿಗೆಯಾಗಿದೆ. 

‘ನಪುಂಸಕನ ಕನಸಿನಂತೆ

ದೀನವಾಗಿ, ಹೀನವಾಗಿ, ರಜೋವಿಹೀನವಾಗಿ ಇದೆ

ಕತ್ತಲ ತೊಡೆಗಳ ಮೇಲೆ ರಕ್ತ ಕಾರುತ್ತಿರುವ ಕ್ಷುದ್ರಸಂಜೆ’ (ಕ್ಷುದ್ರಸಂಜೆ)

ಅವರ ಕಾವ್ಯದ ವಿಲಕ್ಷಣತೆಯನ್ನು ಸೂಚಿಸಲು ಈ ಸಾಲುಗಳನ್ನು ನೋಡಬಹುದು. ಅದು ಭೀತಿಯದು, ಸಾವಿನದು. ಮತ್ತು ಇವೆಲ್ಲವೂ ಪ್ರಾಣಿಯೂ ಆದ ಮನುಷ್ಯನ ಅನಾದಿಯ ಭಾವಗಳು. ಅವೆಲ್ಲ ಕನಸಿನಲ್ಲಿ ನಾವು ಕಾಣುತ್ತಿರುವ ಗಾಯಗೊಂಡ ಪ್ರಾಣಿಯ, ಯಾರೂ ಗುಣಪಡಿಸಲಾಗದ ನೋವಿನಂತಹದ್ದಾಗಿದೆ. ಇಲ್ಲಿನ ‘ವಕ್ರರೇಖೆ’ ಕವಿತೆಯಲ್ಲಿ ‘ಶೂನ್ಯಸಮುದ್ರಗಳಲ್ಲಿ ಭಯೋತ್ಪಾತ ಸೃಷ್ಟಿಸಿದ ಜ್ಞಾಪಕಗಳು/ ಬೆಂಬತ್ತಿದಾಗ, ಬೆಂಬತ್ತಿದಾಗ/ ಗಾಯಗೊಂಡು, ದೂಳಿನ ಮೋಡದಿಂದಾವೃತ್ತನಾದ/ ಮನುಷ್ಯನ ಮೃತ್ಯುಘೋಷದ ವಿನಾ/ ಮತ್ತೇನೂ ಕೇಳಿಸದು ನಿನಗಾಗ’ ಎನ್ನುತ್ತಾರೆ. ‘ನನ್ನ ತಲೆ ಮೇಲೆ ತೂಗಾಡುತ್ತಿರುವ ಕತ್ತಿಯ ಮೇಲೆ/ ನನ್ನ ಹಸ್ತಾಕ್ಷರ ಹೊರತು ಬೇರೆ ಸಂಕೇತವಿಲ್ಲ’ ಎನ್ನುತ್ತಾರೆ ‘ಮಹಾನಿಶ್ಯಬ್ದ’ ಕವಿತೆಯಲ್ಲಿ.

‘ಸಾವಿನ ಮನೆಯಲ್ಲಿ ಬೆತ್ತಲಾಗಿ ನಿಂತ ಗಾಯಾಳು ನಾನು/ ನೋವು ನನ್ನ ಮುಖಪುಟ’ – ಈ ಸಾಲುಗಳಿರುವ ‘ಅಗ್ನಿಸ್ಪರ್ಶ’ ಕವಿತೆಯಲ್ಲಿ ಸಾವಿನ ಹಲವು ಚಿತ್ರಗಳು ಬರುತ್ತಲೇ ಇರುತ್ತವೆ. 

ಅಸಂಗತ ಚಿತ್ರಗಳಂತೆ ಕಾಣುವ ಈ ‘ಕನಸಿನ ಬರಹ’ಗಳನ್ನು ಯಾರೂ ಹೇಗೆಬೇಕಾದರೂ ತಮ್ಮ ಅನುಭವಗಳ ಹಿನ್ನೆಲೆಯಲ್ಲಿ ಅರ್ಥಮಾಡಿಕೊಳ್ಳಬಹುದು; ಅರ್ಥಮಾಡಿಕೊಳ್ಳದೇ ಇರುವುದೂ ಒಂದು ಅರ್ಥವೇ ಆದ್ದರಿಂದ ಇಲ್ಲಿನ ಕವಿತೆಗಳ ಮರು ಓದುಗಳಿಂದ ಮಾತ್ರ ಅವುಗಳ ಗೆಳೆತನ (ಒಲಿದರೆ ಮಾತ್ರ!) ಮಾಡಬಹುದು. ಅದಕ್ಕೆ ಕಾರಣವಿದೆ.

ಇಲ್ಲಿನ ಭಾಷೆ ನಮಗೆ ಗೊತ್ತಿರುವ ಭಾಷೆಯೇ. ಆದರೆ, ಅದು ಸೃಷ್ಟಿಸಿರುವ ಚಿತ್ರಲಿಪಿ ನಿಗೂಢವಾಗಿದೆ. ಅದರ ಅದೃಶ್ಯ ಬೇರುಗಳು ನಮ್ಮ ಚಿಂತನೆಯ ನೀರಿನ ಆಳಕ್ಕೆ ಇಳಿಯಲು, ಅದನ್ನು ಬರಿದು ಮಾಡಲು ತವಕಿಸುತ್ತವೆ.

‘ತೊಡೆಯಬಾರದ ಲಿಪಿಯ ಬರೆಯಬಾರದು ನೋಡಾ!’ ಎನ್ನುತ್ತಾನೆ ನಮ್ಮ ವಚನಕಾರ ಅಲ್ಲಮಪ್ರಭು. ಅಜಂತಾರ ‘ಸ್ವಪ್ನಲಿಪಿ’ ಅಂತಹ ಅಳಿಸಲಾಗದ ಲಿಪಿ. ಈ ಸಂಸ್ಕೃತಮಯವಾದ ಕಾವ್ಯವನ್ನು ಓದಲು ಸಾವಧಾನ, ಸಮಾಧಾನ ಓದುಗರಿಗೆ ಬೇಕೇಬೇಕು. 

ಸ್ವಪ್ನಲಿಪಿ

ತೆಲುಗು ಮೂಲ: ಅಜಂತಾ

ಕನ್ನಡಕ್ಕೆ: ಚಿದಾನಂದ ಸಾಲಿ

ಪು: 80  ಬೆ: ರೂ. 100

ಪ್ರ: ಸಾಹಿತ್ಯ ಅಕಾಡೆಮಿ

ಸೆಂಟ್ರಲ್‌ ಕಾಲೇಜು ಆವರಣ,

ಡಾ. ಬಿ.ಆರ್‌. ಅಂಬೇಡ್ಕರ್‌ ರಸ್ತೆ,

ಬೆಂಗಳೂರು – 560 001

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)