ಗುರುವಾರ , ಮೇ 13, 2021
18 °C

ಒಳನೋಟ: ಕೀಲಿಮಣೆ ರಾಯರ ವಿದ್ವತ್‌ ಪ್ರಪಂಚ

ಎಸ್. ದಿವಾಕರ್ Updated:

ಅಕ್ಷರ ಗಾತ್ರ : | |

Prajavani

ಕೆಲವರಿರುತ್ತಾರೆ: ಒಂದು ಕ್ಷೇತ್ರದಲ್ಲಿ ಸಾಧಿಸಬಹುದಾದ್ದನ್ನು ಸಾಧಿಸಿ, ಇತರ ಕೆಲವು ಕ್ಷೇತ್ರಗಳಿಗೂ ಲಗ್ಗೆಯಿಟ್ಟು ಅಲ್ಲಿಯೂ ತಕ್ಕಮಟ್ಟಿಗೆ ಯಶಸ್ಸು ಗಳಿಸುವವರು. ಪ್ರಚಾರದಿಂದ ದೂರವೇ ಉಳಿದುಬಿಡುವ ಅಂಥ ಜನರಲ್ಲಿ ಕೆ.ಪಿ.ರಾವ್ (ಕಿನ್ನಿಕಂಬಳ ಪದ್ಮನಾಭ ರಾವ್) ಗಮನಾರ್ಹರು. ಇವತ್ತು ಕಂಪ್ಯೂಟರಿನಲ್ಲಿ ಕನ್ನಡವನ್ನು ಬರೆಯುವವರೆಲ್ಲರಿಗೂ ಉಚ್ಚಾರಣಾತ್ಮಕ ತರ್ಕ ಬಳಸಿ ರೂಪಿಸಲಾದ ಕೀಬೋರ್ಡ್ ಅಥವಾ ಕೀಲಿಮಣೆಯ ಪರಿಚಯ ಇದ್ದೇ ಇರುತ್ತದೆ. ಅದನ್ನು ಮೊತ್ತಮೊದಲು ರೂಪಿಸಿದವರು ಕೆ.ಪಿ.ರಾವ್.

ರಾವ್‌ ಅವರು ಅಭಿವೃದ್ಧಿಪಡಿಸಿದ ಇನ್ನೊಂದು ತಂತ್ರಾಂಶವೆಂದರೆ ‘ಅಪಾರ’. ಅದು ಭಾರತದ ಎಲ್ಲ ಭಾಷೆಗಳಿಗೆ ಏಕಕಾಲದಲ್ಲಿ ಅನ್ವಯವಾಗಬಹುದಾದ ಕೀಲಿಮಣೆ. ಮೂಲದಲ್ಲಿ ಭಾಷೆಯ ಸ್ವರಸಂಜ್ಞೆಗಳನ್ನು ರೋಮನ್ ಲಿಪಿಯಲ್ಲಿ ಮೂಡಿಸಿ ನಮಗೆ ಬೇಕಾದ ಭಾಷೆಯ ಲಿಪಿಯಲ್ಲಿ ಓದಬಹುದಾದ ಸೌಲಭ್ಯವುಳ್ಳ ತಂತ್ರಾಂಶ ಇದು. ‘ಸೇಡಿಯಾಪು’ ಎಂಬುದು ಅವರು ರಚಿಸಿದ ಕನ್ನಡ ಪದಸಂಸ್ಕರಣ ತಂತ್ರಾಂಶ. ಹಾಗೆಯೇ ಕಂಪ್ಯೂಟರ್ ಮೂಲಕ ಸಿಂಧೂ ಲಿಪಿಯನ್ನು ಮುದ್ರಿಸುವ ಪ್ರಯತ್ನದಲ್ಲಿ ಅವರು ನಿರ್ವಹಿಸಿದ ಬಹುಮುಖ್ಯ ಪಾತ್ರವನ್ನೂ ಇಲ್ಲಿ ಉಲ್ಲೇಖಿಸಬೇಕು.

ದಕ್ಷಿಣ ಕನ್ನಡ ಜಿಲ್ಲೆಯ ಕಿನ್ನಿಕಂಬಳದಲ್ಲಿ ಜನಿಸಿ, ಅಮೆರಿಕದ ಪರ್ದೂ ಯೂನಿವರ್ಸಿಟಿಯಲ್ಲಿ ಎಲೆಕ್ಟ್ರಿಕಲ್ ಮತ್ತು ಕಂಪ್ಯೂಟರ್ ಎಂಜಿನಿಯರಿಂಗ್‍ನಲ್ಲಿ ಸ್ನಾತಕೋತ್ತರ ಪದವಿ ಪಡೆದ ಈ ವಿಜ್ಞಾನಿ ಸೇವೆ ಸಲ್ಲಿಸಿದ ಸಂಸ್ಥೆಗಳು ಒಂದೆರಡಲ್ಲ. ಮುಂಬಯಿಯ ಫ್ರೀ ಪ್ರೆಸ್ ಜರ್ನಲ್; ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಫಂಡಮೆಂಟಲ್ ರಿಸರ್ಚ್, ಅದೇ ಸಂಸ್ಥೆಗೆ ಸೇರಿದ ಹೈದರಾಬಾದಿನ ಎಲೆಕ್ಟ್ರಾನಿಕ್ ಕಾರ್ಪೊರೇಷನ್ ಆಫ್ ಇಂಡಿಯಾ; ಮುಂಬಯಿಯ ಟಾಟಾ ಪ್ರೆಸ್; ಬೆಂಗಳೂರಿನ ಮಾನೊಟೈಪ್ ಸಂಸ್ಥೆ ಇತ್ಯಾದಿ. ಧಾರವಾಡದಲ್ಲಿ ಸ್ವತಂತ್ರವಾಗಿ ಒಂದು ಸೆಮಿ ಕಂಡಕ್ಟರ್ ಉತ್ಪಾದನಾ ಘಟಕವನ್ನೂ ಸ್ಥಾಪಿಸಿದ ಅವರು ಮಣಿಪಾಲದ ಎಂಐಟಿ ಶಿಕ್ಷಣ ಸಂಸ್ಥೆಯ ಪ್ರಿಂಟಿಂಗ್ ಟೆಕ್ನಾಲಜಿ ವಿಭಾಗದಲ್ಲಿ ಪ್ರಾಧ್ಯಾಪಕರೂ ಆಗಿದ್ದರು.

ಶಾಲೆಯಲ್ಲಿರುವಾಗಲೇ ಪಂಜೆ ಮಂಗೇಶರಾಯರಿಂದ ಪರೋಕ್ಷವಾಗಿ ಪ್ರಭಾವಿತರಾದ ರಾಯರಿಗೆ ಕನ್ನಡ ಭಾಷೆ, ಸಾಹಿತ್ಯಗಳಲ್ಲಿ ಆಸಕ್ತಿಯುಂಟಾದದ್ದು ಸಹಜವೇ. ಪ್ರಸಿದ್ಧ ಕತೆಗಾರ ಬಾಗಲೋಡಿ ದೇವರಾಯರು ಅವರ ಸಮೀಪದ ಬಂಧು. ವಿಜ್ಞಾನಿ ಹೋಮಿ ಭಾಭಾ ಅವರ ಜೊತೆ ಕೆಲಸ ಮಾಡಿದ ಹೆಗ್ಗಳಿಕೆ ಅವರದು. ‘ನಾನು ಹೋಮಿ ಭಾಭಾ ಅವರನ್ನು ಹತ್ತಿರದಿಂದ ಬಲ್ಲೆ ಎಂಬುದು ನನಗೊಂದು ಹೆಮ್ಮೆ. ಯಾವುದೋ ಕಾರಣಕ್ಕೆ ನಾವು ಹತ್ತಿರವಾದೆವು. ನಾನು ರಕ್ಷಣಾ ಯೋಜನೆಗೆ ಸಂಬಂಧಿಸಿದ ಕರ್ತವ್ಯವೊಂದರಲ್ಲಿ ಭಾಗಿಯಾಗಿದ್ದೆ. ಬಹುಶಃ ಅವರ ಸೂಚನೆಗಳನ್ನು ಪಾಲಿಸಲು ನಿರಾಕರಿಸಿ ಬಚಾವಾದ ಉದ್ಯೋಗಿಗಳಲ್ಲಿ ನಾನೊಬ್ಬನೇ ಆಗಿದ್ದೆ ಎಂದು ಹೇಳಬಹುದೇನೊ. ನನ್ನನ್ನು ಅವರು ಹೊರದೂಡಲಿಲ್ಲ. ಆದರೆ, ಅವರ ಸೂಚನೆಯೇ ಸರಿ ಎಂದು ನನಗೆ ಮನದಟ್ಟು ಮಾಡಿದರು’ ಎಂದವರು ಬರೆದಿದ್ದಾರೆ. ಅವರು ಒಡನಾಡಿದ ಡಿ.ಡಿ. ಕೋಸಾಂಬಿ ಹೆಸರಾಂತ ಗಣಿತಜ್ಞರು ಮತ್ತು ಇತಿಹಾಸಕಾರರು. 

ಸಂಶೋಧನೆ, ಅನ್ವೇಷಣೆಗಳಂತೂ ಸರಿಯೆ. ಆದರೆ ಕೆ.ಪಿ.ರಾಯರ ಆಸಕ್ತಿಗಳು ಹಲವು ಹತ್ತು. ಅವರು ಹದಿನಾಲ್ಕು ಬಾರಿ ಹಿಮಾಲಯದಲ್ಲಿ ಒಬ್ಬಂಟಿಯಾಗಿ ತಿರುಗಾಡಿದವರು, ತಕ್ಷಶಿಲೆ ವಿಶ್ವವಿದ್ಯಾಲಯದ ಬಗ್ಗೆ ತಮ್ಮದೇ ರೀತಿಯಲ್ಲಿ ಸಂಶೋಧಿಸಿ ಅದು ಕಟ್ಟಡಗಳ ಸಂಕೀರ್ಣವಲ್ಲ, ಅದೊಂದು ಭಾಷಾರೂಪಕ ಎಂದು ತೋರಿಸಿಕೊಟ್ಟವರು, ಸನ್ಯಾಸತ್ವವನ್ನು ಬಿಟ್ಟು ಶಿರೂರು ಮಠದಿಂದ ಧಾರವಾಡಕ್ಕೆ ಹೋಗಿ ಅಲ್ಲಿ ಸಿಂಡಿಕೇಟ್‌ ಬ್ಯಾಂಕಿನ ಕಾರಕೂನರಾದ ಆರ್ಯರ ಜೊತೆ ಸೇರಿ ಋಗ್ವೇದದ ಇಪ್ಪತ್ತು ಸಾವಿರ ಪುಟಗಳನ್ನು ಓದಿದವರು.

ತಾವು ಮುಂಬಯಿಯಲ್ಲಿ ಮೊದಲು ಕೆಲಸ ಮಾಡಿದ ಒಂದು ಹೋಟೆಲಿನಲ್ಲಿ ಶ್ರೀಧರ್ ಪಾರ್ಸೇಕರ್ ಎಂಬ ವ್ಯಕ್ತಿಗೆ ಒಂದು ಕಪ್ ಚಹಾ ಕಡ ಕೊಡುವುದರ ಮೂಲಕ ಸಂಗೀತದ ಅದ್ಭುತ ಲೋಕವನ್ನು ಪ್ರವೇಶಿಸಿದವರು. ಅವರು ಸಂಗೀತ ಕಲಿಯತೊಡಗಿದ್ದು ಉಸ್ತಾದ್ ಅಲ್ಲಾವುದ್ದೀನ್ ಖಾನರ ಪುತ್ರಿ, ರವಿಶಂಕರರ ಮೊದಲ ಪತ್ನಿ ಅನ್ನಪೂರ್ಣಾ ಅವರ ಬಳಿ. ಆ ಬಗ್ಗೆ ಅವರೇ ಹೇಳುವುದನ್ನು ಕೇಳಿ: ‘ಕೆಲವು ಸಲ ನನಗೆ ನಾಚಿಕೆಯಾಗುವುದನ್ನು ನಾನು ಹೇಳಬೇಕು. ದೀದಿಯಂಥವರಲ್ಲಿ (ಅನ್ನಪೂರ್ಣಾಜಿಯಂಥವರಲ್ಲಿ) ಸಂಗೀತ ಕಲಿಯಲು ಹೋಗಿ ಸುಮ್ಮನೆ ಬಿಟ್ಟೆವಲ್ಲ; ಹೇಗಾದರೂ ಮಾಡಿ ಮುಂದುವರಿಸಬೇಕಾಗಿತ್ತು ಎಂದು ಈಗಲೂ ಅನಿಸುತ್ತದೆ. ಅಷ್ಟು ದೊಡ್ಡ ಪರ್ವತದ ಹತ್ತಿರ ಹೋಗಿ ನಾವು ಏನೂ ತೆಗೆದುಕೊಂಡು ಬರಲಿಲ್ಲ. ಏನೋ ತಪ್ಪಾಗಿದೆ ಎಂಬ ಭಾವನೆ ಒಮ್ಮೊಮ್ಮೆ ಬರುವುದುಂಟು. ಎಷ್ಟು ಶೂನ್ಯತೆ ಎಂದರೆ, ನಾವು ಅವರ ಶಿಷ್ಯರಾಗಿದ್ದೆವು ಅಂತ ಹೇಳಲಿಕ್ಕೆ ನಾಚಿಕೆಯಾಗುತ್ತದೆ’.

ವರದೇಶ ಹಿರೇಗಂಗೆಯವರು ಬರೆದಿರುವಂತೆ ಕೆ.ಪಿ.ರಾಯರದು, ‘ಬರೇ ತಾಂತ್ರಿಕತೆ ಅಲ್ಲ. ಅದರ ಹಿಂದೆ ಒಂದು ಸಾಂಸ್ಕೃತಿಕ ಮನಸ್ಸಿದೆ. ಹೀಗಾಗಿ ಅವರು ಕನ್ನಡ ಭಾಷೆಯ ಜತೆಗೆ ಒಡನಾಡುತ್ತಾರೆ. ಅವರಿಗೆ ಆಸಕ್ತಿ ಇರುವುದು ಸಾಹಿತ್ಯ, ತತ್ತ್ವಜ್ಞಾನ, ಇತ್ಯಾದಿಗಳಲ್ಲಿ. ತಂತ್ರಜ್ಞಾನವು ಅವರಿಗೊಂದು ಮಾಧ್ಯಮ. ಭಾಷೆ, ಸಾಹಿತ್ಯಗಳು ಈ ಮಾಧ್ಯಮವನ್ನು ಬಳಸಿಕೊಳ್ಳಬೇಕೆಂಬ ಆಶಯ ಅವರದು. ಅವರ ತಾಂತ್ರಿಕ ಕಾಳಜಿಯ ಮೂಲದಲ್ಲಿರುವುದು ಸಾಂಸ್ಕೃತಿಕ ಕಾಳಜಿ’.

ಈ ಪುಸ್ತಕವನ್ನು ರಚಿಸಿರುವ ಎನ್. ತಿರುಮಲೇಶ್ವರ ಭಟ್ಟರು ದಶಕಗಳ ಕಾಲ ಇಂಗ್ಲಿಷ್ ಮತ್ತು ಜರ್ಮನ್ ಭಾಷೆ, ಸಾಹಿತ್ಯಗಳನ್ನು ಬೋಧಿಸಿದವರು. ಅವರಲ್ಲಿ ವಿಚಾರಸ್ಪಷ್ಟತೆಯಿದೆ, ವಿಷಯವನ್ನು ಆಳವಾಗಿ ಪರಿಶೀಲಿಸುವ ಮನೋಧರ್ಮವಿದೆ. ಕೆ.ಪಿ.ರಾಯರ ನಿಕಟವರ್ತಿಗಳಲ್ಲಿ ಒಬ್ಬರಾದ ಕಾರಣ ಅವರ ಈ ಪುಸ್ತಕಕ್ಕೊಂದು ಅಧಿಕೃತತೆಯ ಗುಣವಿದೆ. ಈ ಕೃತಿಯಲ್ಲಿ ಕೆ.ಪಿ.ರಾಯರ ಜೀವನ ವೃತ್ತಾಂತ, ಅವರ ಸಾಧನಾ ಪ್ರಪಂಚ, ಅವರ ‘ಪದುಮನಾಭನ ಧ್ಯಾನ’ ಎಂಬ ಆತ್ಮಕಥನದ ಹಾಗೂ ‘ವರ್ಣ’ ಎಂಬ ಕಾದಂಬರಿಯ ಅವಲೋಕನ ಮುಂತಾದ ಅಧ್ಯಾಯಗಳಲ್ಲದೆ ಸಂಗೀತಕ್ಕೆ ಸಂಬಂಧಿಸಿದಂತೆ ರಾಯರೇ ಬರೆದಿರುವ ಲೇಖನವೂ ಇದೆ. ವೈದೇಹಿ, ವರದೇಶ ಹಿರೇಗಂಗೆ, ಪಾದೇಕಲ್ಲು ವಿಷ್ಣುಭಟ್ಟ ಮುಂತಾದವರು ತಾವು ಕಂಡ ರಾಯರನ್ನು ಚಿತ್ರಿಸಿದ್ದಾರೆ. ಮಹಾಲಿಂಗ ಭಟ್ ಅವರ ನಿರೂಪಣೆಯಲ್ಲಿರುವ ‘ಕೆ.ಪಿ.ರಾವ್ ಅವರ ವೈಚಾರಿಕತೆಯ ಮಾದರಿ: ತಕ್ಷಶಿಲೆ ಎಂಬ ಭಾಷಾ ರೂಪಕ’ ಎಂಬ ವಿಶಿಷ್ಟ ಬರಹವೂ ಇದೆ.

ರಾಯರು ತಾವು ಅಭಿವೃದ್ಧಿಪಡಿಸಿದ ತಂತ್ರಾಂಶಗಳೆಲ್ಲವನ್ನೂ ಮುಕ್ತ ಬಳಕೆಗೆ ನೀಡಿದವರು. ‘ನಿಜವಾಗಿ ಹೇಳುವುದಿದ್ದರೆ ಯಾಕೆ ನಾನು ನನ್ನ ಹಕ್ಕನ್ನು ನೋಂದಾವಣೆ ಮಾಡಿಸಲಿಲ್ಲವೆಂದು ಇತರರು ಪ್ರಶ್ನಿಸಿದಾಗಲೇ ನನಗೆ ಇಂತಹ ವಿಷಯವೊಂದುಂಟಲ್ಲ ಎಂಬ ಅರಿವಾದದ್ದು’ ಎನ್ನುವ ಮುಗ್ಧತೆ ಅವರದು.

ಈ ಪುಸ್ತಕ ಓದುತ್ತಿರುವಾಗ ನನಗೆ ಮತ್ತೆ ಮತ್ತೆ ಡಾ. ಬಿ.ಜಿ.ಎಲ್. ಸ್ವಾಮಿಯವರ, ಡಾ. ಕೃಷ್ಣಾನಂದ ಕಾಮತರ ನೆನಪಾಗುತ್ತಿದ್ದದ್ದು ಆಕಸ್ಮಿಕವೇನೂ ಅಲ್ಲ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು