ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಂಕೇಶ್‌: ಮೋಹ ಮತ್ತು ರೂಪ

Last Updated 22 ಫೆಬ್ರುವರಿ 2020, 19:30 IST
ಅಕ್ಷರ ಗಾತ್ರ

ಕ ನ್ನಡದ ಎರಡು–ಮೂರು ತಲೆಮಾರುಗಳ ಸಾಹಿತ್ಯಕ ಮನಸ್ಸುಗಳನ್ನು ತೀವ್ರವಾಗಿ ಪ್ರಭಾವಿಸಿರುವ ಲೇಖಕರಲ್ಲಿ ಪಿ.ಲಂಕೇಶ್‌ ಅವರಿಗೆ ಮಹತ್ವದ ಸ್ಥಾನವಿದೆ. ಲಂಕೇಶರ ನಿಧನದ ಬಳಿಕ, ಹಲವು ಲೇಖನಗಳು ಮತ್ತು ಕೆಲವು ಪುಸ್ತಕಗಳು ಬಂದಿವೆ. ಆದರೆ ಶೂದ್ರ ಶ್ರೀನಿವಾಸ್‌ ಬರೆದಿರುವ ಈ ಪುಸ್ತಕ ಎಲ್ಲಕ್ಕಿಂತ ವಿಭಿನ್ನವಾದದ್ದು. ಸದಾ ಲಂಕೇಶ್‌ ವರ್ತುಲದೊಳಗೇ ಇದ್ದು, ಅವರ ಬಹುತೇಕ ಮಾತು, ಪ್ರೀತಿ, ಜಗಳ, ಅಸೂಯೆ, ಚಳವಳಿಗಳಿಗೆ ಸಾಕ್ಷಿಯಾಗಿದ್ದವರು ಶೂದ್ರ. ಮುನ್ನುಡಿಯಲ್ಲಿ ರಾಜೇಂದ್ರ ಚೆನ್ನಿಯವರು ಸಹಜವಾಗಿಯೇ ಗುರುತಿಸಿದಂತೆ, ‘ಶೂದ್ರರಿಗೆ ಸ್ವಂತ ಜೀವನವೇ ಇರಲಿಲ್ಲವೆ ಎನ್ನುವಷ್ಟು ಮಟ್ಟಿಗೆ ಲಂಕೇಶರಿದ್ದ ನೂರಾರು ಘಟನೆಗಳಿಗೆ ಇಲ್ಲಿ ಸಾಕ್ಷಿಯಾಗಿದ್ದಾರೆ.’

ಶೂದ್ರ ಶ್ರೀನಿವಾಸರ ನೆನಪಿನ ಶಕ್ತಿ ಅಗಾಧವಾದದ್ದು ಎನ್ನುವುದರಲ್ಲಿ ಎರಡು ಮಾತಿಲ್ಲ. ಹಾಗಾಗಿ ಇಲ್ಲಿ ಬೇಕಾದದ್ದು, ಬೇಡವಾಗಿತ್ತೋ ಅನ್ನಿಸುವಂಥದ್ದು.. ಎಲ್ಲವೂ ಇದೆ. ಸಮಕಾಲೀನ ಲೇಖಕರ ಜೊತೆಗಿನ ಲಂಕೇಶರ ಪ್ರೀತಿ ಮತ್ತು ಜಗಳಗಳನ್ನು ಭಾವುಕ ಮತ್ತು ಆಪ್ತ ರೀತಿಯಲ್ಲಿ ಕಟ್ಟಿಕೊಟ್ಟಿದ್ದಾರೆ. 70, 80 ಮತ್ತು 90ರ ದಶಕಗಳಲ್ಲಿ ಲಂಕೇಶ್‌ ಅವರು ರಾಜ್ಯದ ಸಾಹಿತ್ಯ ಮತ್ತು ಸಾಂಸ್ಕೃತಿಕ ವಲಯದಲ್ಲಿ ವಹಿಸಿದ ಪಾತ್ರದ ಮೇಲೆ ಬೆಳಕು ಚೆಲ್ಲುವ ಹಲವು ಘಟನೆಗಳು ಇಲ್ಲಿವೆ. ಘಟನೆಗಳನ್ನು ವಿವರಿಸುತ್ತಾ, ಅವುಗಳ ಕುರಿತು ತಮ್ಮ ಅಭಿಪ್ರಾಯ ಮತ್ತು ಗ್ರಹಿಕೆಗಳನ್ನು ದಾಖಲಿಸುತ್ತಾ ಸಾಗುವ ಶೂದ್ರ ಅವರ ಬರವಣಿಗೆಯ ಶೈಲಿ ಓದುಗರನ್ನು ಹಿಡಿದು ನಿಲ್ಲಿಸುತ್ತದೆ.

ಜೊತೆಜೊತೆಗೇ ಕರ್ನಾಟಕದ ಸಾಂಸ್ಕೃತಿಕ ಚರಿತ್ರೆಯ ಹಲವು ದೃಶ್ಯಗಳೂ ರೂಪಕಗಳಂತೆ ಎದ್ದು ನಿಲ್ಲುತ್ತವೆ. ಅಬ್ರಾಹ್ಮಣ ಲೇಖಕರ ಒಕ್ಕೂಟ ರಚನೆಯ ಯತ್ನ, ಬಸವಲಿಂಗಪ್ಪನವರ ಬೂಸಾ ಪ್ರಕರಣ, ಬಯಲು ನಾಟಕೋತ್ಸವದ ಜಗಳ, ರೈತ ಸಂಘದ ಹುಟ್ಟು, ಜಾಗೃತ ಸಮಾವೇಶ, ಜಾಣಜಾಣೆಯ ಪತ್ರಿಕೆಯ ಬೆಳವಣಿಗೆ, ಪ್ರಗತಿರಂಗದ ಅವಸಾನ– ಹೀಗೆ ಲಂಕೇಶರ ಬದುಕು ಮತ್ತು ಮನೋಧರ್ಮವನ್ನು ರೂಪಿಸಿದ ಅಸಂಖ್ಯಾತ ಘಟನೆಗಳನ್ನು ಕುರಿತ ಅಪರೂಪದ ನೆನಪುಗಳು ಮತ್ತು ಟಿಪ್ಪಣಿಗಳು ಇಲ್ಲಿವೆ.

ಲಂಕೇಶರನ್ನು ನೆನಪಿಸುತ್ತಲೇ ಶೂದ್ರ ಅವರು ಅವರ ಸಮಕಾಲೀನರಾದ ಜಿಎಸ್‌ಎಸ್, ತೇಜಸ್ವಿ, ಎಂಡಿಎನ್‌, ಚಂಪಾ, ಶ್ರೀರಾಮ್‌, ಎಚ್ಚೆಲ್ಕೆ, ಆಲನಹಳ್ಳಿ, ಬೆಸಗರಹಳ್ಳಿ, ದೇವನೂರ, ಸುಂದರೇಶ್‌, ಶಂಕರಪ್ಪ, ರಾಜಶೇಖರ ಕೋಟಿ ಮುಂತಾದವರ ಕುರಿತ ನೆನಪುಗಳನ್ನೂ ಕೆದಕಿದ್ದಾರೆ.ಪತ್ನಿ ಇಂದಿರಾ ಅವರು, ಲಂಕೇಶ್ ವಿರುದ್ಧ ಸಿಟ್ಟಿಗೇಳುತ್ತಿದ್ದ ರೀತಿ, ಲಂಕೇಶ್‌ ಮಗಳ ಕುರಿತ ಅಪಸ್ವರ ಮುಂತಾದ ಖಾಸಗಿ ವಿಷಯಗಳನ್ನೂ ಶೂದ್ರ ಈ ಕೃತಿಯಲ್ಲಿ ಮುಟ್ಟಿಸಿಕೊಳ್ಳದಂತೆ ಸ್ಪರ್ಶಿಸಿದ್ದಾರೆ.

ಕೆಲವು ಅಧ್ಯಾಯಗಳು ಸ್ವಾರಸ್ಯಕರವಾಗಿದ್ದರೆ, ಇನ್ನು ಕೆಲವೆಡೆ ‘ಹೌದಾ..’ ಎಂಬ ಅನುಮಾನಗಳನ್ನೂ ಮೂಡಿಸುವಂತಿದೆ ನಿರೂಪಣೆ. ಒಂದಂತೂ ನಿಜ– ಪತ್ರಿಕೆ, ಸಿನಿಮಾ, ಭಾಷಣ ಮತ್ತು ಟೀಕೆ ಟಿಪ್ಪಣಿಗಳ ಮೂಲಕವೂ ಕೆಲವೊಮ್ಮೆ ಅರ್ಥವಾಗದ ಲಂಕೇಶರು, ಇಲ್ಲಿನ ಟಿಪ್ಪಣಿಗಳ ಮೂಲಕ ಹೆಚ್ಚು ಅರ್ಥವಾಗುತ್ತಾರೆ.

ಶೂದ್ರ ಅವರ ಬರವಣಿಗೆಯ ಶೈಲಿ ಪಿಸುದನಿಯಂತಿದೆ. ನಿಜಜೀವನದಲ್ಲಿ ಅವರು ಮೆಲುದನಿಯಲ್ಲಿ ಮಾತನಾಡಿದಂತೆಯೇ ಇಲ್ಲಿಯ ಬರವಣಿಗೆಯೂ. ಲಂಕೇಶರ ಕುರಿತು ತಮಗೆ ಬಂದ ಅಸಾಧ್ಯ ಸಿಟ್ಟಿನ ಪ್ರಸಂಗಗಳನ್ನೂ ಅವರು ತಣ್ಣನೆಯ ಗೊಣಗಾಟವೆಂಬಂತೆ ದಾಖಲಿಸಿದ್ದಾರೆ. ‘ಮೋಹಕ ರೂಪಕಗಳ ನಡುವೆ’ ಎನ್ನುವ ಶೀರ್ಷಿಕೆ ಈ ಕೃತಿಗೆ ಸೂಕ್ತವೇ. ಆದರೆ ಕೆಲವೆಡೆ ಶೂದ್ರರ ಗುರುಭಕ್ತಿಯೇ ಹೆಚ್ಚು ವೈಭವೀಕರಣಗೊಂಡು ’ಮೋಹ ಮತ್ತು ರೂಪ’ವೇ ಮುಖ್ಯವಾದಂತಿದೆ.ಲಂಕೇಶರ ಕುರಿತು ಬಹುತೇಕ ಸಣ್ಣ ವಿವರಗಳನ್ನೂ ದಾಖಲಿಸಿರುವ ಈ ಕೃತಿಯಲ್ಲಿ, ಅವರ ಪತ್ರಿಕೆಯಿಂದ ಸಹೋದ್ಯೋಗಿಗಳನ್ನು ಹೊರಹಾಕಿದ ಪ್ರಕರಣ ಶೂದ್ರ ಅವರಿಗೆ ಮಹತ್ವದ್ದು ಅನ್ನಿಸಿಲ್ಲ. ಆ ಘಟನೆಯ ವಿವರಗಳನ್ನು ತೇಲಿಸಿ, ಅದಕ್ಕಾಗಿ ಲಂಕೇಶರು ಪಟ್ಟ ಪಶ್ಚಾತ್ತಾಪವನ್ನು ಉದಾರಮನಸ್ಸಿನಿಂದ ದಾಖಲಿಸುತ್ತಾರೆ. ಲಂಕೇಶರ ಅತಿಯಾದ ಮೋಹದಿಂದ ಬಿಡಿಸಿಕೊಳ್ಳಲಾಗದೆ ಶೂದ್ರರು ಕೆಲವೆಡೆ ಅತಿಶಯೋಕ್ತಿಗಳನ್ನು ಪ್ರಯೋಗಿಸುತ್ತಿರಬಹುದೆ ಎನ್ನುವ ಅನುಮಾನವೂ ಮೂಡುತ್ತದೆ.

ಇದರ ಸಮರ್ಥನೆಯೋ ಎನ್ನುವಂತೆ ಶೂದ್ರ ಅವರು ಕೊನೆಯಲ್ಲಿ ಅನುಬಂಧದ ವಿಭಾಗದಲ್ಲಿ ಡಾ.ಕೆ.ಮರುಳಸಿದ್ಧಪ್ಪ ಅವರ ಕೃತಿಯೊಂದರಿಂದ ‘ಕೋಟ್‌’ ಎತ್ತಿಕೊಳ್ಳುತ್ತಾರೆ. ‘ತೆಂಗಿನ ಕಾಯಿಯಂತೆ ಲಂಕೇಶ್‌ ವ್ಯಕ್ತಿತ್ವ. ಹೊರಗಿನ ನಾರು, ಚಿಪ್ಪು ಎಲ್ಲವನ್ನೂ ಸುಲಿದು ಒಳಹೊಕ್ಕರೆ ತಂಪಾದ ಅಕ್ಕರೆಯ ಎಳನೀರು, ತಿರುಳು ದೊರೆಯುತ್ತಿತ್ತು. ಅದನ್ನು ಸವಿಯುವ ಬಯಕೆಯಿದ್ದವರಿಗೆ ತಾಳ್ಮೆ ಇರಬೇಕಾಗುತ್ತಿತ್ತು. ತಾಳ್ಮೆಯಿಲ್ಲದವರು ಲಂಕೇಶರೊಂದಿಗೆ ಸ್ನೇಹ ಉಳಿಸಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ.’ ತಾಳ್ಮೆ ಕಳೆದುಕೊಂಡ ಲಂಕೇಶ್‌ ಸಮಕಾಲೀನರ ಬಗ್ಗೆಯೂ ಕೃತಿಯಲ್ಲಿ ಹೆಚ್ಚು ವಿವರಗಳು ಇದ್ದಿದ್ದರೆ ಈ ಕೃತಿ ಇನ್ನಷ್ಟು ಮಹತ್ವದ್ದು ಎನ್ನಿಸಿಕೊಳ್ಳುತ್ತಿತ್ತು.

ಕೃತಿ: ಲಂಕೇಶ್‌: ಮೋಹಕ ರೂಪಕಗಳ ನಡುವೆ

ಲೇಖಕ: ಶೂದ್ರ ಶ್ರೀನಿವಾಸ್‌

ಪ್ರ:ಪಲ್ಲವ‍ಪ್ರಕಾಶನ

ಪುಟ 282

ಬೆಲೆ ₹ 250

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT