ಗುರುವಾರ , ಮಾರ್ಚ್ 23, 2023
30 °C

ಪುಸ್ತಕ ವಿಮರ್ಶೆ | ಕಾಡುವ, ನಾಟುವ ಕವನಲೋಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

‘ಕಾವ್ಯವೆನ್ನುವುದು ಅಮೃತಕ್ಕೆ ಹಾರುವ ಗರುಡ’ ಎಂದಿದ್ದಾರೆ ದ.ರಾ. ಬೇಂದ್ರೆ. ಕಾವ್ಯ ಅಷ್ಟು ಸುಲಭವಾಗಿ ದಕ್ಕುವುದೂ ಇಲ್ಲ. ಹಾಗೆ ಕಾವ್ಯದ ಮೂಲಕ ಓದುಗರನ್ನು ತಣಿಸುವುದೂ ಒಂದು ಸವಾಲಿನ ವಿಷಯ. ಈ ಸವಾಲಿನ ಸಮುದ್ರದಲ್ಲಿ ಈಜಿದ್ದಾರೆ ಸಂತೆಬೆನ್ನೂರು ಫೈಜ್ನಟ್ರಾಜ್‌.

ಶಿಕ್ಷಕ ವೃತ್ತಿಯಲ್ಲಿದ್ದುಕೊಂಡು ಕವಿ,ಕಥೆಗಾರನೊಬ್ಬನನ್ನು ತನ್ನೊಳಗೆ ಸೃಷ್ಟಿಸಿಕೊಂಡ ಫೈಜ್ನಟ್ರಾಜ್ ಅವರು ಓದುಗರ ನಾಡಿ ಮಿಡಿತವನ್ನು ಅರ್ಥೈಸಿಕೊಂಡು ‘ಮತ್ತೆ ಮತ್ತೆ ಹೇಗೆ ಹಾಡಲಿ’ ಎಂಬ ನಲವತ್ತು ಕವಿತೆಗಳ ಗುಚ್ಛದೊಂದಿಗೆ ಬಂದಿದ್ದಾರೆ. ಈಗಾಗಲೇ ‘ಬುದ್ಧನಾಗ ಹೊರಟು’, ‘ಹಬ್ಬಿದಾ ಮಲೆ ಮಧ್ಯದೊಳಗೆ’ ಸೇರಿದಂತೆ ಆರೇಳು ಕೃತಿಗಳನ್ನು ರಚಿಸಿ ಸಾಹಿತ್ಯ ಲೋಕಕ್ಕೆ ಅರ್ಪಿಸಿರುವ ಅವರ ಕವಿತಾ ಲೋಕವೂ ರಮ್ಯವಾಗಿದೆ.

ಫೈಜ್ನಟ್ರಾಜ್ ಅವರೊಳಗಿನ ಕವಿ, ಕವಿತೆಗಳ ಮುಖೇನ ಹೃದಯ ಹಿಗ್ಗಿಸಿದ್ದಾನೆ. ಮಾನವೀಯತೆ ಸಾರಿದ್ದಾನೆ. ಅಲ್ಲಲ್ಲಿ ನಿಡುಸುಯ್ದಿದ್ದಾನೆ. ಎಲ್ಲರೊಳಗೊಂದಾಗಿ ಬದುಕುವ ಇರಾದೆ ತೋರಿದ್ದಾನೆ. ಇಲ್ಲಿನ ಕವನಗಳು ಮತ್ತೆ ಮತ್ತೆ ಕಾಡುತ್ತವೆ. ಒಂದು ಕವಿತೆ ಮತ್ತೊಂದು ಕವಿತೆಯೊಂದಿಗೆ ಪೈಪೋಟಿಗೆ ನಿಲ್ಲುವಂತೆ ಪ್ರಬುದ್ಧವಾಗಿವೆ. ಕವಿತೆಗಳಲ್ಲಿ ಬಳಸಿರುವ ಪದಗಳು, ಹರಿ ಬಿಟ್ಟಿರುವ ಭಾವನೆಗಳು ಎದೆಯನ್ನು ನಾಟುತ್ತವೆ. ಬಹುಮುಖ್ಯವಾಗಿ ಕವನ ಸಂಕಲನದೊಳಗಿನ ಕವಿತೆಗಳು ಕವಿಯ ಕವಿತೆಗಳಲ್ಲ; ಓದುಗನ ಆಪ್ತ ಕವಿತೆಗಳು. ಕವನ ಸಂಕಲನದೊಳಗಿನ ಪ್ರತೀ ಕವಿತೆ ಹದಬೆರೆತ ಕವಿತೆ. ಇಲ್ಲಿರುವುದು ಓದಿ ಇತರರ ಕಿವಿಗೂ ಉಸುರಬಹುದಾದ ಕವಿತೆಗಳು. ಪದೇಪದೇ ಧೇನಿಸುವಂತೆ ಮಾಡುವ ಕವಿತೆಗಳು.

***

ಕೃತಿ: ಮತ್ತೆ ಮತ್ತೆ ಹೇಗೆ ಹಾಡಲಿ
ಲೇ: ಸಂತೆಬೆನ್ನೂರು ಫೈಜ್ನಟ್ರಾಜ್‌
ಪ್ರ: ಅಕ್ಷರ ಮಂಟಪ, ಬೆಂಗಳೂರು
ಸಂ: 9902935999

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು