ಬುಧವಾರ, ಮಾರ್ಚ್ 29, 2023
26 °C

ಪುಸ್ತಕ ವಿಮರ್ಶೆ | ‘ಮಾರ್ಗ’ಕಾರನ ಬದುಕಿನ ಪಕ್ಷಿನೋಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸಂಶೋಧಕ, ಚಿಂತಕ ಡಾ.ಎಂ.ಎಂ.ಕಲಬುರ್ಗಿ ಅವರ ಬದುಕು–ಬರೆಹ ಕುರಿತ ಕೃತಿ ಇದು. ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಲೇಖಕರ ಪರಿಚಯಾತ್ಮಕ ಗ್ರಂಥಮಾಲೆಯ ಭಾಗವಾಗಿ ಈ ಕೃತಿಯನ್ನು ನವಕರ್ನಾಟಕ ಪ್ರಕಾಶನ ಹೊರತಂದಿದೆ. 

2001ರಲ್ಲಿ, ಕನ್ನಡ ವಿಶ್ವವಿದ್ಯಾಲಯದ ಕುಲಪತಿಗಳಾಗಿದ್ದಾಗ ಈ ಮಾಲೆಯ ಮೊದಲ ಕಂತಿನ 12 ಕೃತಿಗಳನ್ನು ಕಲಬುರ್ಗಿಯವರೇ ಲೋಕಾರ್ಪಣೆ ಮಾಡಿದ್ದರು. ಕಲಬುರ್ಗಿಯವರ ಸಮಗ್ರ ಲೇಖನಗಳ ಸಂಗ್ರಹಗಳಾದ ಎಂಟು ಮಾರ್ಗ ಸಂಪುಟಗಳಲ್ಲಿನ ‘ಮಾರ್ಗ–4’ ಸಂಪುಟವು 2006ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗೆ ಭಾಜನವಾಯಿತು. ಈ ಕೃತಿಗೆ ಇಲ್ಲಿ ವಿಶೇಷವಾದ ಗಮನ ನೀಡಲಾಗಿದೆ. ‘ಕಲಬುರ್ಗಿಯವರ ಬರಹಕ್ಕೆ ನಾನು ಬರಹಾರಣ್ಯ ಎಂದು ಕರೆಯುತ್ತೇನೆ. ಕಾರಣ, ಇಲ್ಲಿ ಹಲವಾರು ಸಾಹಿತ್ಯ, ಸಂಶೋಧನಾ ಪ್ರಕಾರದ ವೈವಿಧ್ಯಮಯ ಬರಹಗಳಿವೆ. ಅವೆಲ್ಲವನ್ನೂ ವಿಶ್ಲೇಷಿಸುವುದು, ವ್ಯಾಖ್ಯಾನಿಸುವುದು ಈ ಕೃತಿಯ ಉದ್ದೇಶವಲ್ಲ. ಅವರ ಬದುಕು, ಬರಹಗಳ ಮೇಲೆ ಒಂದು ಪಕ್ಷಿನೋಟವಷ್ಟೇ ಇಲ್ಲಿನ ಪ್ರಯತ್ನ’ ಎಂದಿದ್ದಾರೆ ಕೃತಿ ಕಟ್ಟಿಕೊಟ್ಟಿರುವ ಸಿದ್ದನಗೌಡ ಪಾಟೀಲ. 

‘ಮೊಗ್ಗು ಹೂವಾದ ಪರಿ’ಯಲ್ಲಿ ಕಲಬುರ್ಗಿಯವರ ಬದುಕಿನ ಹೆಜ್ಜೆಗಳಿವೆ. ಅವರ ದಣಿವರಿಯದ ಕಾಯಕವನ್ನೂ ಪ್ರತ್ಯೇಕ ಅಧ್ಯಾಯದಲ್ಲಿ ಕಟ್ಟಿಕೊಡಲಾಗಿದೆ. ಜೊತೆಗೆ ಕಲಬುರ್ಗಿಯವರ ಬದುಕಿನ ರೂಪಕವಾಗಿರುವ ‘ಮಾರ್ಗ’ದ ವಿಶ್ಲೇಷಣೆಯೂ ಇಲ್ಲಿದೆ. ಅದು ಅವರೇ ನಡೆ ನಡೆದು ನಿರ್ಮಿಸಿದ ‘ಮಾರ್ಗ’ವಾಗಿದೆ. ‘ಮಿತಿಗಳಾಚೆಯೂ ಅವರು ಪ್ರತಿಪಾದಿಸಿದ ತತ್ವ, ತತ್ವಮಂಡನೆಯ ವಿಧಾನ ಮಹತ್ವದ್ದು. ಅವರು ತಾತ್ವಿಕ ಕಾರಣಕ್ಕಾಗಿಯೇ ಪ್ರಾಣತೆತ್ತಿದ್ದರಿಂದ ಆ ತಾತ್ವಿಕ ಹಿನ್ನೆಲೆಯನ್ನು ಪ್ರಧಾನವಾಗಿ ಈ ಕೃತಿಯಲ್ಲಿ ಗುರುತಿಸಲು ಪ್ರಯತ್ನಿಸಿದ್ದೇನೆ’ ಎನ್ನುವ ಸಿದ್ದನಗೌಡ ಅವರು, ‘ಮುಸ್ಸಂಜೆಯಾದ ಮುಂಜಾವು’ ಅಧ್ಯಾಯದಲ್ಲಿ ‘ಇದು ವ್ಯಕ್ತಿಗಳ ಹತ್ಯೆಯೇ ಹೊರತು ವ್ಯಕ್ತಿತ್ವದ ಹತ್ಯೆಯಲ್ಲ. ಜೀವಪರ, ಜನಪರ ಚಿಂತಕರಿಗೆ ಸಾವಿಲ್ಲ’ ಎಂದು ವ್ಯಾಖ್ಯಾನಿಸಿದ್ದಾರೆ. ಕರುಳ ಭಾಷೆಯ ಗುರುವಿನ ಮಹತ್ವವನ್ನೂ ದಾಖಲಿಸುವ ಕೆಲಸ ಮಾಡಿದ್ದಾರೆ. ಗಾತ್ರದಲ್ಲಿ ಈ ಕೃತಿ ಚಿಕ್ಕದಾದರೂ ಕಲಬುರ್ಗಿ ಎಂಬ ವಿಶಾಲವಾಗಿ ರೆಂಬೆ ಕೊಂಬೆಗಳನ್ನು ಹರಡಿದ, ಫಲಭರಿತ ಮರದ ಪಕ್ಷಿನೋಟವೊಂದು ಈ ಕೃತಿಯಿಂದ ದಕ್ಕುತ್ತದೆ ಎನ್ನುವುದು ಉತ್ಪ್ರೇಕ್ಷೆಯ ಮಾತಲ್ಲ.

***

ಕೃತಿ: ಎಂ.ಎಂ.ಕಲಬುರ್ಗಿ
ಲೇ: ಡಾ.ಸಿದ್ದನಗೌಡ ಪಾಟೀಲ
ಸಂ: ಪ್ರಧಾನ್‌ ಗುರುದತ್ತ
ಪ್ರ: ನವಕರ್ನಾಟಕ ಪ್ರಕಾಶನ
ಸಂ: 080–22161900

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು