ಬುಧವಾರ, ಮಾರ್ಚ್ 29, 2023
26 °C

ಪುಸ್ತಕ ವಿಮರ್ಶೆ | ವಸ್ತುವಿನಿಂದ ಗಮನ ಸೆಳೆವ ಕವಿತೆಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವೃತ್ತಿಯಲ್ಲಿ ಶಿಕ್ಷಕಿಯಾಗಿರುವ ಕವಯತ್ರಿ ಮಮತ ಅರಸೀಕೆರೆ ಆರು ವರ್ಷಗಳ ಬಳಿಕ ‘ನೀರ ಮೇಲಿನ ಮುಳ್ಳು’ ಎಂಬ ಮತ್ತೊಂದು ಕವನ ಸಂಕಲನದೊಂದಿಗೆ ಬಂದಿದ್ದಾರೆ. ಇದು 50 ಕವನಗಳ ಗುಚ್ಛ.

ಪ್ರತೀ ಕವನದ ವಸ್ತುವಿನ ಆಯ್ಕೆಯೇ ಗಮನ ಸೆಳೆಯುವ ಮೊದಲ ವಸ್ತು. ‘ಅಮ್ಮ’ನಿಂದ ಹಿಡಿದು ‘ಗಾಂಧೀಜಿ’ಯವರೆಗೆ ನಾನಾ ವಿಷಯಗಳು ಕವಯತ್ರಿಯನ್ನು ಕಾಡಿವೆ. ‘ಸದ್ದುಗಳು’ ಎಂಬ ಕವನದಲ್ಲಿ ‘ಕೇಳದ ಸದ್ದುಗಳ’ನ್ನು ಮಮತ ಸೂಕ್ಷ್ಮವಾಗಿ ಆಲಿಸಿದ್ದಾರೆ. ಪಿಡುಗಿನ ತಲ್ಲಣದ ನಡುವೆ ‘ವೈರಸ್ಸಿಗೊಂದು ಮನವಿ’ ಮಾಡಿ ಮತ್ತೆ ನಗಬೇಕಾಗಿದೆ ಈ ಜಗ ನಿರುಮ್ಮಳವಾಗಿ ಎಂದಿದ್ದಾರೆ.

ವ್ಯತ್ಯಾಸವೇನಿಲ್ಲ ಬಿಡಿ, ತಾರತಮ್ಯವೂ ಇಲ್ಲ
ಎಲ್ಲರೂ ಒಂದೆ ನಾವಿಲ್ಲಿ, ಜಾತಿ ವರ್ಗ ಧರ್ಮವೂ
ತೂಗುತ್ತದೆ ಒಂದೇ ಸಮಾನತೆಯ ತಕ್ಕಡಿಯಲ್ಲಿ
ನಿತ್ಯ ಹೊಡೆದಾಟ ಸಂಘರ್ಷದ ಹೊಂದಾಣಿಕೆಯಲ್ಲಿ

ಹೀಗೆನ್ನುತ್ತಾ ‘ಗಾಂಧಿಯ ಹೊಸ ಕನ್ನಡಕ’ ದೇಶದ ಪ್ರಸಕ್ತ ಸ್ಥಿತಿಯನ್ನು, ಅಭಿವೃದ್ಧಿಯ ತಾರತಮ್ಯವನ್ನು ವಿವರಿಸುವ ಪ್ರಯತ್ನವಾಗಿದೆ. ಹೀಗಾಗಿಯೇ ಇಲ್ಲಿನ ಕವಿತೆಗಳು ಆರೋಗ್ಯಕರವಾದ ಚರ್ಚೆಗೆ ಒಳಗಾಗಗಲಿ ಎನ್ನುತ್ತಾರೆ ಬೆನ್ನುಡಿ ಬರೆದ ಕವಯತ್ರಿ ಎಚ್‌.ಎಲ್‌.ಪುಷ್ಪ. ರೈತರ ಜೀವನ, ಸಂಕಷ್ಟ, ಆತ್ಮಹತ್ಯೆಯನ್ನು ಪ್ರಶ್ನಿಸುತ್ತಾ ಸಾಗುವ ‘ಜಗದ ಕಣಜ’ ಕವನ ರೈತನ ಜೀವನ ಸುಭದ್ರವಾಗಲಿ ಎನ್ನುವ ಆಶಯ ಹೊತ್ತಿದೆ. ನಗರೀಕರಣ, ತಂತ್ರಜ್ಞಾನದ ಹಸಿವನ್ನು ಪ್ರಶ್ನಿಸುವ ‘ಹಟ್ಟಿ ಮತ್ತು ಆತ್ಮ’ ಆರ್ಥಿಕ ಸ್ಥಿತ್ಯಂತರದ ಪರಿಣಾಮಗಳನ್ನು ನಿರೂಪಿಸಿದೆ. ಇಲ್ಲಿನ ಪದ್ಯಗಂಧಿ ಭಾಷೆ ಗಮನಸೆಳೆಯುತ್ತದೆ. ಕವಿತೆ ಕಟ್ಟುವಲ್ಲಿ ರೂಪಕಗಳ ಧಾರಾಳ ಬಳಕೆಯನ್ನು ಇಲ್ಲಿ ಕಾಣಬಹುದು. ವೈಯಕ್ತಿಕ ಯೋಚನೆಗಳಿಂದ ಹಿಡಿದು ಸಾಮಾಜಿಕ ಸ್ವರೂಪದ ರಚನೆಗಳು ಇಲ್ಲಿ ಅಡಕವಾಗಿದೆ. ‘ಕೃತಿಯ ಶೀರ್ಷಿಕೆ ಇಲ್ಲಿನ ಬಹುಪಾಲು ಕವಿತೆಗಳ ವಸ್ತುವಿನ್ಯಾಸವನ್ನು ಪ್ರತಿನಿಧೀಕರಿಸುತ್ತದೆ’ ಎನ್ನುತ್ತಾರೆ ಮುನ್ನುಡಿ ಬರೆದ ಬರಗೂರು ರಾಮಚಂದ್ರಪ್ಪ.

***

ಕೃತಿ: ನೀರ ಮೇಲಿನ ಮುಳ್ಳು
ಲೇ: ಬಿ.ಎ.ಮಮತ ಅರಸೀಕೆರೆ
ಪ್ರ: ಸಪ್ನ ಇಂಕ್‌
ಸಂ: info@sapnaink.com

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು