ಭಾನುವಾರ, ಜನವರಿ 16, 2022
28 °C

ಪುಸ್ತಕ ವಿಮರ್ಶೆ: ಸಹನಾ ಕಾಂತಬೈಲು ಅವರ ‘ಇದು ಬರಿ ಮಣ್ಣಲ್ಲ’– ರಘುನಾಥ್ ಚ.ಹ

ರಘುನಾಥ ಚ.ಹ. Updated:

ಅಕ್ಷರ ಗಾತ್ರ : | |

Prajavani

‘ಇದು ಬರಿ ಮಣ್ಣಲ್ಲ’ ಸಹನಾ ಕಾಂತಬೈಲು ಅವರು ಮೂರನೇ ಕೃತಿ. ‘ಸಿಂಚನ’ ಎಂಬ ಹನಿಗವನ ಸಂಕಲನ ಹಾಗೂ ‘ಆನೆ ಸಾಕಲು ಹೊರಟವಳು’ ಲೇಖನ ಸಂಕಲನ ಅವರ ಉಳಿದೆರಡು ಕೃತಿಗಳು. ‘ಇದು ಬರಿ ಮಣ್ಣಲ್ಲ’ ಶೀರ್ಷಿಕೆಯನ್ನು ‘ಇದು ಬರಿ ಬರಹವಲ್ಲ’ ಎಂದು ಬದಲಿಸುವುದಾದರೆ, ಆ ವಿಶೇಷಣ ಸಹನಾ ಅವರ ಕೃತಿಗೂ ಬದುಕಿಗೂ ಅನ್ವಯವಾಗುವಂತಿದೆ.

ಸಹನಾ ಅವರ ಬರಹಗಳ ಬಹು ದೊಡ್ಡ ಆಕರ್ಷಣೆ, ಸರಳತೆಯಲ್ಲಿನ ಸಹಜ ಚೆಲುವನ್ನು ಬರವಣಿಗೆ ಒಳಗೊಂಡಿರುವುದು. ಈ ಚೆಲುವು ಭಾಷೆಯ ಬಗ್ಗೆ ಅಕ್ಕರೆ ಉಕ್ಕಿಸುವುವಂತಹದ್ದು; ಭಾಷೆಯೊಂದಿಗೆ ತಳಕು ಹಾಕಿಕೊಂಡ ಭಾವಜಗತ್ತಿನ ಬೆರಗನ್ನು ಓದುಗನ ಅನುಭವಕ್ಕೆ ತರುವಂತಹದ್ದು. ‘ಶುದ್ಧ ಕನ್ನಡದಲ್ಲಿ ಮಾತನಾಡುವ ಸ್ಪರ್ಧೆ’ಯನ್ನು ಮಾಡಲು ಹೊರಟು ಶುದ್ಧ–ಅಶುದ್ಧ ಚರ್ಚೆಯ ಇರುವೆಯನ್ನು ಮೈಮೇಲೆ ಬಿಟ್ಟುಕೊಂಡಿರುವ ಸರ್ಕಾರವೇನಾದರೂ, ಬರವಣಿಗೆಯಲ್ಲಿ ಕನ್ನಡದ ಚೆಲುವನ್ನು ಗುರ್ತಿಸುವ ಸ್ಪರ್ಧೆಯನ್ನು ಮಾಡಲು ಹೊರಟರೆ, ಸಹನಾ ಅವರ ಕೃತಿ ಒಳ್ಳೆಯ ಸ್ಪರ್ಧೆ ನೀಡಬಲ್ಲದು. ಸಹನಾ ಅವರದು ಹೆಸರಿಗೆ ತಕ್ಕಂತೆ ಸಾವಧಾನದ ಭಾಷೆ. ಜೀವವೊಂದು ತನ್ನ ಮನಸ್ಸಿಗೆ ಆಪ್ತವಾದ ಮತ್ತೊಂದು ಜೀವದೆದುರು ತನ್ನ ಒಳಗನ್ನು ತೋಡಿಕೊಳ್ಳುವ ಬಗೆ ಇಲ್ಲಿನ ಬರಹಗಳಲ್ಲಿದೆ.

‘ಇದು ಬರಿ ಮಣ್ಣಲ್ಲ’ ಕೃತಿಯ ಬರಹಗಳಲ್ಲಿನ ಸರಳತೆ ಬರಹದ ವಸ್ತುವಿಗೆ ಸಂಬಂಧಿಸಿದ್ದು ಹಾಗೂ ಭಾಷೆಗೂ ಸಂಬಂಧಿಸಿದ್ದು. ಸಹನಾ ತಮ್ಮ ಬರವಣಿಗೆಗೆ ಆರಿಸಿಕೊಳ್ಳುವ ವಸ್ತುಗಳು ವಿದ್ವಜ್ಜನರು ಘನವೆಂದು ಭಾವಿಸುವ ಸಂಗತಿಗಳೇನಲ್ಲ. ಊರದನಗಳು, ಮಜ್ಜಿಗೆ, ಬೆಕ್ಕು, ಉಪ್ಪಿನಕಾಯಿ, ಗಂಜಿ, ಒಗ್ಗರಣೆ, ಸೀರೆ, ಅವಲಕ್ಕಿ – ಹೀಗೆ ದೈನಿಕದಲ್ಲಿ ಎಡತಾಕುವ ಪುಟ್ಟ ಪುಟ್ಟ ಸಂಗತಿಗಳು ಲೇಖಕಿಗೆ ಬರೆಯಲು ಸ್ಫೂರ್ತಿ ನೀಡಬಲ್ಲವು. ಈ ಪುಟ್ಟ ಸಂಗತಿಗಳ ಬಗ್ಗೆ ಸಹನಾ ಅದೆಷ್ಟು ಆಪ್ತವಾಗಿ ಬರೆಯುತ್ತಾರೆಂದರೆ, ಆ ಹಿತ್ತಲ ಜಗತ್ತು ನಮ್ಮದೂ ಹೌದಲ್ಲವೇ ಎಂದು ಓದುಗನಿಗೆ ಅನ್ನಿಸುವಷ್ಟು. ರೈತಾಪಿ ಮಹಿಳೆಯ ದಿನಚರಿ ಪುಸ್ತಕದ ಪುಟಗಳಂತೆ ನೋಡಬಹುದಾದ ಈ ಬರಹಗಳಲ್ಲಿ ಓದುಗನಿಗೆ ತನ್ನೂರು, ಅಜ್ಜಿ, ಅಜ್ಜ, ಅಕ್ಕ, ಗೆಳೆಯ ಗೆಳತಿಯರ ಜ್ಞಾಪಕ ಚಿತ್ರಶಾಲೆ ಕಂಡರೆ ಆಶ್ಚರ್ಯವೇನಿಲ್ಲ.

ಅಡುಗೆಮನೆ ಮತ್ತು ಹೊಲಗಳ ನಡುವೆ ಹಂಚಿಹೋಗಿರುವ ಕನ್ನಡದ ರೈತ ಮಹಿಳೆಯರ ಪ್ರತಿನಿಧಿಯಂತೆ ಸಹನಾ ಅವರನ್ನೂ ಅವರ ಬರಹ
ಗಳನ್ನೂ ಕಾಣಬಹುದು. ವ್ಯತ್ಯಾಸ ಇರುವುದು, ತುದಿಮೊದಲಿಲ್ಲದ ದಂದುಗದಲ್ಲಿ ಬಹುತೇಕ ರೈತ ಹೆಣ್ಣುಮಕ್ಕಳು ಖಾಸಗಿ ಬದುಕು ಹಾಗೂ ಉಲ್ಲಾಸವನ್ನು ಕಳೆದುಕೊಂಡಿದ್ದರೆ, ಈ ಲೇಖಕಿ ಮನೆವಾರ್ತೆಯಲ್ಲಿಯೂ ಜೀವನಪ್ರೀತಿಯನ್ನು ಹಿಂಡಿ ತೆಗೆಯಬಲ್ಲರು ಹಾಗೂ ಸಹೃದಯರಿಗೂ ಹಂಚಬಲ್ಲರು.

ಗೃಹಕೃತ್ಯದ ನಡುವೆಯೂ ಬರವಣಿಗೆಯ ತುಡಿತವನ್ನು ಉಳಿಸಿಕೊಳ್ಳಲು ಹಂಬಲಿಸುವುದು ಹಾಗೂ ಬರವಣಿಗೆಯ ಮೂಲಕ ಮತ್ತೊಂದು ಜಗತ್ತನ್ನು ಸೃಷ್ಟಿಸಿಕೊಳ್ಳುವ ಸೃಜನಶೀಲ ಪ್ರಯತ್ನ ‘ಬರಹಗಾರ್ತಿಯ ತಳಮಳ’ ಬರಹದಲ್ಲಿದೆ. ‘ದೈನಂದಿನ ಒತ್ತಡದಲ್ಲಿ ಮುಳುಗಿದ ನನ್ನನ್ನು ಬದುಕಿಸುವುದು ಬರವಣಿಗೆಯೊಂದೇ’ ಎನ್ನುವ ಲೇಖಕಿಯ ಮಾತು, ಸಾಹಿತ್ಯವನ್ನೋ ಅಥವಾ ಸಾಹಿತ್ಯದಂಥ ಮತ್ತಾವುದೋ ಕಲೆಯನ್ನೋ ಎಲ್ಲ ಹೆಣ್ಣುಮಕ್ಕಳು ರೂಢಿಸಿಕೊಳ್ಳಬೇಕಾದ ಅಗತ್ಯವನ್ನು ಸೂಚಿಸುವಂತಿದೆ. ಅನುದಿನದ ದಂದುಗದಲ್ಲೇ ನಮ್ಮ ಅಜ್ಜಿಯರು, ಅಮ್ಮಂದಿರ ಬದುಕು ಸವೆದುಹೋಗುವುದನ್ನು ನೋಡಿದರೆ, ಕಲೆಯ ಸಖ್ಯ ಹೆಣ್ಣಿಗೆ ಎಷ್ಟು ಮುಖ್ಯ ಎನ್ನುವುದು ಮನದಟ್ಟಾಗುತ್ತದೆ.

ಹಿತ್ತಲಲ್ಲಿ ನಿಂತೂ ಜಗತ್ತನ್ನು ಕಾಣುವುದು, ಸಮಕಾಲೀನ ವಿದ್ಯಮಾನಗಳಿಗೆ ತಮ್ಮ ಮಿತಿಯಲ್ಲಿಯೇ ಸ್ಪಂದಿಸುವುದು ಸಹನಾ ಅವರಿಗೆ ಸಾಧ್ಯವಾಗಿದೆ. ‘ಇದು ಬರಿ ಮಣ್ಣಲ್ಲ’ ರಚನೆ ಮಣ್ಣಿನ ಜೀವಪರ ಗುಣ ಹಾಗೂ ಸುಟ್ಟಷ್ಟೂ ಫಲವತ್ತಾಗುವ ಅದರ ಸೃಜನಶೀಲ ಶಕ್ತಿಯ ಬಗ್ಗೆಯಷ್ಟೇ ಹೇಳುತ್ತಿಲ್ಲ; ಮನುಷ್ಯನ ಬಕಾಸುರ ಬಯಕೆಗಳು ಮಣ್ಣನ್ನು ಬರಡಾಗಿಸುತ್ತಿರುವ ವಿಪರ್ಯಾಸದ ಕುರಿತೂ ಹೇಳುತ್ತಿದೆ. ‘ಬದುಕುವ ದಾರಿ’ ಬರಹದಲ್ಲಿ, ಚಾಪೆ ಹೆಣೆಯುವ ಅಜ್ಜಿಗೆ ತನ್ನ ಕಸುಬನ್ನು ಮುಂದಿನ ತಲೆಮಾರಿಗೆ ದಾಟಿಸಬೇಕೆಂದು ಒತ್ತಾಯಿಸುವ ಲೇಖಕಿಗೆ, ತನ್ನ ಮಕ್ಕಳು ನಗರ ಸೇರಿ ಮಣ್ಣಿಗೆ ಬೆನ್ನು ಹಾಕಿರುವ ಅರಿವೂ ಇದೆ. ಗ್ರಾಮೀಣ ಜಗತ್ತು, ವಿಶೇಷವಾಗಿ ಕಾಡಂಚಿನ ಪರಿಸರದಲ್ಲಿ ಆಗುತ್ತಿರುವ ಬದಲಾವಣೆಗಳ ಬಗ್ಗೆ ಸಹನಾ ಅವರ ಬರಹಗಳು ಗಮನಸೆಳೆಯುತ್ತವೆ.

ಸಹನಾ ಅವರ ಎಲ್ಲ ಬರಹಗಳ ಸಾಮಾನ್ಯ ಅಂಶ ಜೀವನಪ್ರೀತಿ. ಆನೆಗಳಿಗಾಗಿ ಕಲ್ಲುಬಾಳೆ ನೆಡುವುದು, ದಣಿದು ಅಂಗಳಕ್ಕೆ ಬಂದವರಿಗೆ ಮಜ್ಜಿಗೆ ನೀಡುವುದು, ಗೋವಾ ಪ್ರವಾಸವನ್ನು ಸಂಭ್ರಮಿಸುವುದು, ತನ್ನ ಜಗತ್ತಲ್ಲಿ ಜೇನುಹುಳುಗಳಿಗೂ ಜಾಗ ಕೊಡುವುದು – ಹೀಗೆ, ಬದುಕಿನ ಪ್ರತಿಕ್ಷಣವನ್ನೂ ಅನುಭವಿಸುವ ಲೇಖಕಿಯ ಮನೋಧರ್ಮ ಅವರ ಬರಹಗಳಲ್ಲೂ ಇದೆ. ಓದುಗರ ತುಟಿಗಳಲ್ಲಿ ಮಂದಹಾಸವನ್ನು ಮೂಡಿಸುತ್ತಲೇ ಅಂತಃಕರಣವನ್ನು ತಾಕುವ ಗುಣ ಅವರ ಬರವಣಿಗೆಯದು.

‘ಇದು ಬರಿ ಮಣ್ಣಲ್ಲ’ ಕೃತಿಯ ಬರಹಗಳನ್ನು ‘ಲಲಿತ ಪ್ರಬಂಧಗಳು’ ಎಂದು ಕರೆಯಲಾಗಿದೆ. ಈ ಬರಹಗಳಲ್ಲಿ ಲಾಲಿತ್ಯವಿದೆ; ಪ್ರಬಂಧ ಗುಣವಿಲ್ಲ. ಹಾಗಾಗಿ, ಇವುಗಳನ್ನು ರೈತ ಮಹಿಳೆಯ ಅನುಭವ ಕಥನಗಳು ಎಂದು ಕರೆಯುವುದೇ ಸೂಕ್ತ. ಪ್ರಬಂಧಗಳ ಆಳ ಅಗಲ ಎರಡೂ ಇಲ್ಲಿಲ್ಲ ಎನ್ನುವುದು ಸಹನಾ ಅವರ ಬರಹಗಳ ಹೊಳಪನ್ನೇನೂ ಕಡಿಮೆ ಮಾಡುವುದಿಲ್ಲ. ಅಂತಃಕರಣದಿಂದ ತುಳುಕುವ ಈ ರಚನೆಗಳು, ಗ್ರಾಮೀಣ ಕೃಷಿ ಬದುಕಿನ ಜೀವಂತಿಕೆಯನ್ನೂ ಘನತೆಯನ್ನೂ ತಮ್ಮದಾಗಿಸಿಕೊಂಡಿವೆ. ಮುಗ್ಧತೆ, ಕುತೂಹಲ ಮತ್ತು ಉತ್ಸಾಹ ಸಹನಾ ಅವರ ಬರಹಗಳಿಗೆ ನೀರು, ಕಾವು, ಗೊಬ್ಬರವಾಗಿ ಪರಿಣಮಿಸಿವೆ.

‘ಆನೆ ಸಾಕಲು ಹೊರಟವಳು’ ಹಾಗೂ ‘ಇದು ಬರಿ ಮಣ್ಣಲ್ಲ’ ಕೃತಿಯ ಮೂಲಕ ಸಹನಾ ತಮ್ಮದೇ ಆದ ಆಪ್ತ ಭಾಷೆಯ ಕಥನಶೈಲಿಯೊಂದನ್ನು ರೂಢಿಸಿಕೊಂಡಿದ್ದಾರೆ. ತಮಗೆ ಸುಲಭ ಸರಾಗವಾಗಿರುವ ಜನಪ್ರಿಯ ಶೈಲಿಯನ್ನು ಮೀರುವ ಹಾಗೂ ಚುಟುಕು ಅನುಭವಗಳನ್ನು ಇನ್ನಷ್ಟು ಶೋಧನೆಗೆ ಒಡ್ಡುವ ಸವಾಲು ಅವರ ಮುಂದಿದೆ.

ಇದು ಬರಿ ಮಣ್ಣಲ್ಲ

ಲೇ: ಸಹನಾ ಕಾಂತಬೈಲು

ಪು: 120; ಬೆ: ರೂ. 120

ಪ್ರ: ಅಹರ್ನಿಶಿ, ಶಿವಮೊಗ್ಗ. ಫೋನ್: 9449174662.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು