ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಳನೋಟ: ಸಾಹಿತ್ಯ ಮೀಮಾಂಸೆಯ ವಿರಾಟ್‌ ರೂಪ

Last Updated 23 ಏಪ್ರಿಲ್ 2022, 19:30 IST
ಅಕ್ಷರ ಗಾತ್ರ

ರೆನಿ ವೆಲೆಕ್, ಆಸ್ಟಿನ್ ವಾರೆನ್ ಅವರ ‘ಥಿಯರಿ ಆಫ್ ಲಿಟರೇಚರ್’ ಕೃತಿಯು ಕನ್ನಡ ಸಾಹಿತ್ಯ ವಿಮರ್ಶಕರಿಗೆ ಮೊದಲಿನಿಂದಲೂ ಆಕರ ಗ್ರಂಥವಾಗಿ ಬಳಕೆಯಾಗುತ್ತಾ ಬಂದಿದೆ. ಅದರಲ್ಲಿನ ಕೆಲವು ಲೇಖನಗಳನ್ನು ಅನುವಾದಿಸಿ ‘ಸಾಹಿತ್ಯ ತತ್ವ’ ಎಂಬ ಹೆಸರಿನಲ್ಲಿ ಈಗಾಗಲೇ ಪುಸ್ತಕ ರೂಪದಲ್ಲಿ ಪ್ರಕಟಿಸಲಾಗಿದೆ. ‘ಥಿಯರಿ ಆಫ್ ಲಿಟರೇಚರ್’ ಕೃತಿಯನ್ನು ಇಂದಿನ ಓದುಗ ಮತ್ತು ವಿಮರ್ಶಕರನ್ನು ಗಮನದಲ್ಲಿಟ್ಟುಕೊಂಡು ಜೆ.ಎನ್. ಶಾಮರಾವ್ ಅವರು ‘ಸಾಹಿತ್ಯ ಮೀಮಾಂಸೆ’ ಎಂಬ ಶೀರ್ಷಿಕೆಯಡಿಯಲ್ಲಿ ಅನುವಾದಿಸಿದ್ದಾರೆ.

ಅನುವಾದ ಮಾಡುವಾಗ ಕನ್ನಡದ ಸಂದರ್ಭಕ್ಕೆ ಒಗ್ಗದ ಇಂಗ್ಲಿಷ್ ಸಾಹಿತ್ಯ ಕೃತಿಗಳ ಅನಗತ್ಯ ಉದ್ದರಣೆಗಳನ್ನು, ಕೆಲವು ಭಾಗಗಳನ್ನು ಬಿಟ್ಟು ಕನ್ನಡ ಓದುಗರಿಗೆ ಅಗತ್ಯವಾದ ಲೇಖಕರ ಕೃತಿಗಳ ಭಾಗಗಳನ್ನು ಉಳಿಸಿಕೊಂಡು, ಮೂಲ ಲೇಖನಗಳ ಆಶಯಗಳಿಗೆ ಚ್ಯುತಿ ಬರದಂತೆ ನಿರೂಪಣೆ ಮಾಡಲಾಗಿದೆ. ಇದನ್ನು ಅನುವಾದಕರೇ ಅರಿಕೆಯಲ್ಲಿ ಹೇಳಿಕೊಂಡಿದ್ದಾರೆ. ಜೊತೆಗೆ ಇಲ್ಲಿನ ಅನುವಾದದ ಬಗ್ಗೆ ಹೇಳುವಾಗ ಸಂಗ್ರಹ-ಕನ್ನಡ ನಿರೂಪಣೆ ಎಂದು ಕರೆದು ಈ ಕೃತಿಯನ್ನು ಮೂಲಕೃತಿಯ ಯಥಾವತ್‌ ಅನುವಾದವೆಂಬಂತೆ ನಿರೂಪಿಸಿರುವುದಿಲ್ಲ ಎಂದೂ ಹೇಳಿದ್ದಾರೆ. ಇಲ್ಲಿನ ಲೇಖನಗಳನ್ನು ಓದಿದಾಗ ಅವರ ಅನುವಾದದ ಕ್ರಮ ಸರಿಯಾಗಿದೆ ಎಂಬುದು ಸ್ಪಷ್ಟವಾಗುತ್ತದೆ.

ಈ ಕೃತಿಯಲ್ಲಿ ನಾಲ್ಕು ಭಾಗಗಳಿವೆ. 1. ಸಾಹಿತ್ಯದ ಲಕ್ಷಣ ನಿರೂಪಣೆ ಹಾಗೂ ವೈಶಿಷ್ಟ್ಯ 2. ಸಾಹಿತ್ಯಕ ಅಧ್ಯಯನದ ಪೂರ್ವಸಿದ್ಧತೆ 3. ಬಾಹ್ಯ ದೃಷ್ಟಿಕೋನದಿಂದ ಸಾಹಿತ್ಯದ ಅಧ್ಯಯನ 4. ಸಾಹಿತ್ಯದ ಆಂತರಿಕ ಸ್ವರೂಪದ ಅಧ್ಯಯನ.

ಮೊದಲನೆಯ ಭಾಗದಲ್ಲಿ ಸಾಹಿತ್ಯ ಮತ್ತು ಸಾಹಿತ್ಯದ ಅಧ್ಯಯನ, ಸಾಹಿತ್ಯದ ಸ್ವರೂಪ, ಸಾಹಿತ್ಯದ ಪ್ರಯೋಜನ, ಮೀಮಾಂಸೆ, ವಿಮರ್ಶೆ ಮತ್ತು ಸಾಹಿತ್ಯಚರಿತ್ರೆ, ಸಾಮಾನ್ಯ ಸಾಹಿತ್ಯ, ತೌಲನಿಕ ಸಾಹಿತ್ಯ ಮತ್ತು ರಾಷ್ಟ್ರೀಯ ಸಾಹಿತ್ಯ ಎಂಬ ಐದು ಲೇಖನಗಳಿದ್ದು ಆಯಾ ಶೀರ್ಷಿಕೆಗೆ ಅನುಗುಣವಾಗಿ ವಿವರಣೆಗಳಿವೆ.
ಲೇಖಕ ತನ್ನ ಕೃತಿಯಲ್ಲಿ ಏನನ್ನು ಹೇಳುತ್ತಿದ್ದಾನೆ, ಯಾವ ಬಗೆಯ ಬದುಕಿನ ಅನುಭವಗಳನ್ನು ನಿರೂಪಿಸುತ್ತಿದ್ದಾನೆ, ತತ್ಕಾಲೀನತೆ ಸಾರ್ವತ್ರಿಕ ಸಾರ್ವಕಾಲಿಕತೆಯನ್ನು ಅವನು ಬಳಸಿರುವ ಭಾಷೆಯಲ್ಲಿ ಹಿಡಿದಿಡಲು ಹೇಗೆ ಸಾಧ್ಯವಾಗಿದೆ, ಯಾವ ಯಾವ ವಿಶಿಷ್ಟವಾದ ಅಂಶಗಳು ಕೂಡಿ ಆ ಕೃತಿಯನ್ನು ಕಲಾತ್ಮಕಗೊಳಿಸಿವೆ, ಕಲಾತ್ಮಕಗೊಂಡಿರುವ ಬಗೆ ಹೇಗೆ, ಕಲಾತ್ಮಕಗೊಂಡಿರುವ ಕಲಾವಿಧಾನಗಳು ಯಾವುವು, ಕಲಾತ್ಮಕತೆಯ ಮೂಲಕ ಓದುಗನಿಗೆ/ವಿಮರ್ಶಕನಿಗೆ ಆ ಕೃತಿ ಕೊಡುವ ತಾತ್ವಿಕ ವಿಚಾರಗಳು ಯಾವುವು, ತೌಲನಿಕ ಅಧ್ಯಯನದ ಸ್ವರೂಪ, ಪ್ರಯೋಜನ ಏನು ಇತ್ಯಾದಿ ವಿಚಾರಗಳನ್ನು ಆಪ್ತವಾಗಿ ಓದುಗರಿಗೆ ಕಟ್ಟಿಕೊಡುತ್ತದೆ.

‘ಬಾಹ್ಯ ದೃಷ್ಟಿಕೋನದಿಂದ ಸಾಹಿತ್ಯದ ಅಧ್ಯಯನ’ ಎಂಬ ಮೂರನೇ ಭಾಗದಲ್ಲಿ ಅನ್ಯ ಜ್ಞಾನಶಿಸ್ತುಗಳ ಮೂಲಕ ಸಾಹಿತ್ಯದ ಅಧ್ಯಯನ ಮಾಡುವ ವಿಧಾನ ಕುರಿತು ಐದು ಲೇಖನಗಳಿವೆ. ಸಾಹಿತ್ಯವನ್ನು ಜೀವನ ಚರಿತ್ರೆ, ಮನೋವಿಜ್ಞಾನ, ಸಮಾಜ, ತತ್ವಶಾಸ್ತ್ರ ಮತ್ತು ಇತರೆ ಮಾನವಿಕಗಳು ಹಾಗೂ ಇತರ ಕಲೆಗಳ ಜೊತೆ ಯಾವ ಬಗೆಯಲ್ಲಿ ಅನುಸಂಧಾನಗೊಳಿಸಿ ಅಧ್ಯಯನ ಮಾಡಬೇಕೆಂಬ ವಿವರಗಳಿವೆ. ಸಾಹಿತ್ಯ/ಕಾವ್ಯವು ಸಾಮಾಜಿಕ, ಧಾರ್ಮಿಕ ಸಾಂಸ್ಕೃತಿಕ, ವಿಜ್ಞಾನ, ಮಾನವಿಕಗಳನ್ನು ಸಹಜವಾಗಿಯೇ ಯುಗಧರ್ಮಕ್ಕೆ ಅನುಗುಣವಾಗಿ ಅಂತರ್ಗತವಾಗಿಸಿಕೊಂಡಿರುತ್ತದೆ. ಅವುಗಳು ಭಾಷೆಯಲ್ಲಿ ಕಲಾತ್ಮಕಗೊಂಡಿರುವ ಬಗೆಗಳನ್ನು ನಾವು ಅಂದರೆ ಓದುಗರು ವಿಮರ್ಶಕರು ವಿವರಿಸಿಕೊಳ್ಳಬೇಕು.

ಕಲಾತ್ಮಕತೆಯ ಜೊತೆಯಲ್ಲಿಯೇ ಇದನ್ನು ನಾವು ವಿಶ್ಲೇಷಣೆ ಮಾಡಬೇಕಾಗುತ್ತದೆ. ಕಲಾತ್ಮಕತೆಯ ಅರಿವಿಲ್ಲದೆ ಕೃತಿಯಲ್ಲಿ ಅನ್ಯಜ್ಞಾನಗಳನ್ನು ಹುಡುಕಿದರೆ ಸಾಹಿತ್ಯಕ್ಕೆ ಅಲ್ಲಿ ಬೆಲೆ ಇಲ್ಲ. ಆಯಾ ಜ್ಞಾನ, ವಿಜ್ಞಾನಗಳ ಕೃತಿಗಳನ್ನೇ ಓದಿಕೊಳ್ಳಬಹುದು. ಇತರೆ ಜ್ಞಾನ, ವಿಜ್ಞಾನಗಳು ಒಂದು ಸಾಹಿತ್ಯ ಕೃತಿಯಲ್ಲಿ ಅಂತರ್ಗತವಾಗಿದ್ದರೆ ಕಲಾತ್ಮಕತೆಗೆ ಚ್ಯುತಿ ಬರುವುದಿಲ್ಲ. ಕಲಾತ್ಮಕತೆ ಆಯಾ ಲೇಖಕನ ಸಾಮರ್ಥ್ಯವನ್ನು ಅವಲಂಬಿಸಿರುತ್ತದೆ. ಅನ್ಯ ಜ್ಞಾನಶಿಸ್ತುಗಳ ಮೂಲಕ ಸಾಹಿತ್ಯವನ್ನು ಪ್ರವೇಶಿಸುವ ಬಗೆಗಳನ್ನು ಅದರ ಸಾಧಕ ಬಾಧಕಗಳನ್ನು ಈ ಭಾಗದಲ್ಲಿರುವ ಲೇಖನಗಳು ತಿಳಿಸಿಕೊಡುತ್ತವೆ.

ಸಾಹಿತ್ಯದ ಆಂತರಿಕ ಸ್ವರೂಪದ ಅಧ್ಯಯನ ಎಂಬ ವಿಭಾಗದಲ್ಲಿ ಪ್ರಸ್ತಾವನೆಯೂ ಸೇರಿದಂತೆ ಎಂಟು ಲೇಖನಗಳಿವೆ. ಸಾಹಿತ್ಯ ಕಲಾಕೃತಿಯ ಅಸ್ತಿತ್ವ, ಶಬ್ದ ಮಾಧುರ್ಯ, ಲಯ, ಛಂದಸ್ಸು, ಶೈಲಿ, ಶೈಲಿಶಾಸ್ತ್ರ, ಪ್ರತಿಮೆ, ರೂಪಕ ಸಂಕೇತ, ಪುರಾಣ, ಸಾಹಿತ್ಯ ಪ್ರಕಾರ, ಸಾಹಿತ್ಯ ಚರಿತ್ರೆ ಇತ್ಯಾದಿ ವಿಚಾರಗಳನ್ನು ಸ್ಥೂಲವಾಗಿ ಚರ್ಚಿಸುವ ಇಲ್ಲಿನ ಲೇಖನಗಳಿಗೂ ಮೂರನೇ ಭಾಗದ ಲೇಖನಗಳಿಗೂ ಅನ್ಯೋನ್ಯ ಸಂಬಂಧವಿರುವುದನ್ನು ಗುರುತಿಸಬಹುದು.

ಸಾಹಿತ್ಯವು ಭಾಷಿಕ ಅಭಿವ್ಯಕ್ತಿ. ಆದ್ದರಿಂದ ಆಕೃತಿಯು ಮುಖ್ಯವಾಗುತ್ತದೆ. ಆಕೃತಿಯಲ್ಲಿ ಪದಗಳು, ಅದರ ಮಾಧುರ್ಯ, ಲಯ, ಛಂದಸ್ಸು, ಶೈಲಿ, ಪ್ರತಿಮೆ, ರೂಪಕ, ಸಂಕೇತ ಪುರಾಣ, ಪ್ರಕಾರ, ಮುಂತಾದ ಭಾಷೆಗೆ ಸಂಬಂಧಿಸಿದ ಪರಿಕರಗಳು ಇರುತ್ತವೆ. ವಸ್ತುವಿನಲ್ಲಿ ಮನುಷ್ಯನ ಎಲ್ಲಾ ಬಗೆಯ ಭಾವನೆಗಳ ಜೊತೆಗೆ ಜ್ಞಾನ, ವಿಜ್ಞಾನಗಳು ಒಳಗೊಂಡಿರುತ್ತವೆ. ಆದ್ದರಿಂದ ಇವು ಒಂದಕ್ಕೊಂದು ಪೂರಕ ಮತ್ತು ಪೋಷಕ. ಸಾಂಸ್ಕೃತಿಕ ಪರಿಸರವೊಂದನ್ನು ಕಟ್ಟಿಕೊಡುವ ಕೃತಿಯ ಆಕೃತಿಯು ತನ್ನಲ್ಲಿ ಒಂದು ಕ್ರಿಯಾತ್ಮಕತೆಯನ್ನು ಒಳಗೊಂಡಿರುತ್ತದೆ. ಇದನ್ನೇ ಕಲಾತ್ಮಕತೆಯೆಂದು ಗುರುತಿಸಲಾಗುತ್ತದೆ.

ಎಲ್ಲಿ ಕಲಾತ್ಮಕತೆ ಇರುತ್ತದೋ ಅಲ್ಲಿ ಜೀವಂತಿಕೆ ಇರುತ್ತದೆ. ಆ ಜೀವಂತಿಕೆ ಕೃತಿಯನ್ನು ದೇಶ ಕಾಲ ಮೀರಿಸುತ್ತಾ ಹೋಗುತ್ತದೆ. ಪಂಪನ ಕಾವ್ಯಗಳನ್ನು ನಾವು ಈ ಕಾರಣದಿಂದಲೇ ಇಂದು ಓದುತ್ತಿದ್ದೇವೆ. ಈ ಜೀವಂತಿಕೆ, ಕ್ರಿಯಾಶೀಲತೆ ಸಾಹಿತ್ಯ ಕೃತಿಯಲ್ಲಿ ಪ್ರಕಟವಾಗುವುದು ಆಕೃತಿಯ ಮೂಲಕ. ಆದ್ದರಿಂದಲೇ ಯೇಟ್ಸ್ ಕವಿಯು ‘ನರ್ತಕಿಯಿಂದ ನರ್ತನವನ್ನು ಹೇಗೆ ಬೇರ್ಪಡಿಸಲಾಗುವುದಿಲ್ಲವೋ ಹಾಗೇ ಆಕೃತಿಯನ್ನು ಆಶಯದಿಂದ ಬೇರ್ಪಡಿಸಲಾಗುವುದಿಲ್ಲ’ ಎಂದು ಹೇಳುತ್ತಾನೆ. ಸುಂದರ ಪದಗಳ ಸಂಗ್ರಹ, ಆ ಪದಗಳ ಜೋಡಣೆಯ ವಾಕ್ಯಗಳು ಸೃಜನಾತ್ಮಕ ಪ್ರಕ್ರಿಯೆಯ ಭಾಷೆಯಾಗಿರುವುದಿಲ್ಲ ಎಂಬುದನ್ನು ನಾವು ನೆನಪಿಡಬೇಕು. ಆಗ ಬಾಹ್ಯದ ಅನ್ಯಶಿಸ್ತುಗಳ ಮೂಲಕವಾಗಲಿ, ಆಂತರಿಕ ಸ್ವರೂಪದ ಅಧ್ಯಯನಕ್ಕಾಗಲಿ ಒಳಪಡಿಸಿದಾಗ ಕೃತಿ ಗೆಲ್ಲುತ್ತದೆ.

ಸಾಹಿತ್ಯ ಅಧ್ಯಯನ ಮಾಡುವ ವಿದ್ಯಾರ್ಥಿಗಳಿಗೆ, ಸಾಹಿತ್ಯ ವಿಮರ್ಶೆಯಲ್ಲಿ ಪ್ರವೇಶ ಪಡೆಯುವ ಆಸಕ್ತರು ಈ ಕೃತಿಯನ್ನು ಕೈಪಿಡಿಯಂತೆ ಬಳಸಬಹುದು. ಶಾಮರಾವ್ ಅವರ ಅನುವಾದ ಎಲ್ಲಿಯೂ ತೊಡಕನ್ನು ಉಂಟುಮಾಡುವುದಿಲ್ಲ. ಸರಾಗ ಓದಿಗೆ ಪೂರಕವಾಗಿದೆ.

ಕೃತಿ: ರೆನಿ ವೆಲೆಕ್‌, ಆಸ್ಟಿನ್‌ ವಾರೆನ್‌ರ ಸಾಹಿತ್ಯ ಮೀಮಾಂಸೆ

ಸಂಗ್ರಹ–ಕನ್ನಡ ನಿರೂಪಣೆ: ಜೆ.ಎನ್‌. ಶಾಮರಾವ್‌

ಪ್ರ: ದಿವ್ಯಾ ಪ್ರಕಾಶನ

ಸಂ: 9945002444

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT