ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಂವಿಧಾನದ ಕಾಲಾಳು’ ಕೃತಿ ವಿಮರ್ಶೆ | ಹೋರಾಟದ ಹಾದಿಯ ಒದ್ದೆಗಣ್ಣಿನ ಓದು

Last Updated 21 ಸೆಪ್ಟೆಂಬರ್ 2019, 19:30 IST
ಅಕ್ಷರ ಗಾತ್ರ

ಸಂವಿಧಾನದ ಕಾಲಾಳು
ಲೇ:
ತೀಸ್ತಾ ಸೆತಲ್ವಾಡ್‌ ನೆನಪುಗಳು
ಕನ್ನಡಕ್ಕೆ: ಸತ್ಯಾ ಎಸ್‌.
ಪ್ರ: ಕ್ರಿಯಾ ಮಾಧ್ಯಮ ಪ್ರೈ ಲಿಮಿಟೆಡ್‌, ಬೆಂಗಳೂರು
ಮೊ: 97416 13073

**

‘ಐ ವತ್ತರವರೆಗೆ ಬದುಕು, ಆ ಬಳಿಕ ಅದರ ನೆನಪುಗಳು’ ಎನ್ನುವ ಮಾತೊಂದು ಬರಹಗಾರ ವಲಯದಲ್ಲಿದೆ. ಆದರೆ ಹೋರಾಟಗಾರರ ಬದುಕು ಹಾಗಲ್ಲ; ಅದು ಕೊನೆಯುಸಿರಿನವರೆಗೂ ಪಸರಿಸುತ್ತದೆ. ಹೋರಾಟದ ಮಧ್ಯೆಯೇ ನೆನಪುಗಳನ್ನು ಬರೆಯುತ್ತಾ ಹೋಗಬೇಕು. ಗುಜರಾತ್‌ ಮೂಲದ ತೀಸ್ತಾ ಸೆತಲ್ವಾಡ್‌ ಮುಂಬೈಯಲ್ಲಿ ವೃತ್ತಿಬದುಕು ಕಟ್ಟಿಕೊಂಡ ಆಂಗ್ಲ ಪತ್ರಕರ್ತೆ. ದಿ ಡೈಲಿ, ಇಂಡಿಯನ್ ಎಕ್ಸ್‌ಪ್ರೆಸ್‌, ಬಿಸಿನೆಸ್‌ ಇಂಡಿಯಾ ಮುಂತಾದ ಪತ್ರಿಕೆಗಳಲ್ಲಿ ಹಲವು ವರ್ಷ ದುಡಿದು, ಬಾಳಸಂಗಾತಿ ಜಾವೇದ್‌ರೊಂದಿಗೆ ‘ಸಬ್‌ರಂಗ್‌ ಕಮ್ಯುನಿಕೇಷನ್ಸ್‌’ ಸಂಸ್ಥೆ ಸ್ಥಾಪಿಸಿದವರು.

‘ಕಮ್ಯುನಲಿಸಂ ಕೊಂಬ್ಯಾಟ್‌’ ಪತ್ರಿಕೆ ಆರಂಭಿಸಿ, ಈಗ ಅದು ವೆಬ್‌ಪತ್ರಿಕೆಯಾಗಿ (sabrangindia.in) ಮುಂದುವರಿದಿದೆ. ಮುಂಬೈಯ ‘ದಿ ಡೈಲಿ’ಯಲ್ಲಿ ವರದಿಗಾರ್ತಿ ಆದಂದಿನಿಂದಲೇ ಗಲಭೆಗ್ರಸ್ತ ಸಮಾಜವನ್ನು ಹತ್ತಿರದಿಂದ ನೋಡಿ ವರದಿ ಮಾಡಿದ ಅನುಭವ ಅವರದ್ದು. ಮುಂಬೈ ಗಲಭೆ, ಗೋದ್ರಾ ನರಮೇಧ, ಗೋದ್ರೋತ್ತರ ಗಲಭೆ ಎಲ್ಲವನ್ನೂ ನಿಕಶಕ್ಕೆ ಒಡ್ಡಿ ವರದಿ ಮಾಡಿದವರು. ವರದಿಗಾರ್ತಿಯಾಗಿ ದುಡಿಯುತ್ತಲೇ, ಪತ್ರಿಕಾವೃತ್ತಿಯ ಆಚೆಗಿನ ಚಳವಳಿ ಮಾದರಿಯ ಕೆಲಸಗಳ ಮೂಲಕ ಸಾಮಾಜಿಕ ಹೋರಾಟಗಾರ್ತಿಯಾಗಿ ರೂಪುಗೊಂಡವರು. 2002ರ ಗುಜರಾತ್‌ ಗಲಭೆಯ ಸಂತ್ರಸ್ತರಿಗೆ ನ್ಯಾಯ ಮತ್ತು ಪರಿಹಾರ ಒದಗಿಸಲು ಇವರು ಕಳೆದ ಹಲವು ವರ್ಷಗಳಿಂದ ನಡೆಸುತ್ತಿರುವ ಪ್ರಯತ್ನ, ಪತ್ರಕರ್ತೆಯೊಬ್ಬರು ಆ್ಯಕ್ಟಿವಿಸ್ಟ್‌ ಆಗಿ ರೂಪುಗೊಂಡ ಇತಿಹಾಸದ ಹಿನ್ನೋಟವೂ ಹೌದು.

ಗುಜರಾತ್‌ ಹತ್ಯಾಕಾಂಡದ ಘಟನೆಗಳ ಸತ್ಯಾಂಶ ತನಿಖೆಗೆ ನ್ಯಾಯಮೂರ್ತಿಗಳಾದ ಕೃಷ್ಣ ಅಯ್ಯರ್‌, ಪಿ.ಬಿ.ಸಾವಂತ್‌ ಮತ್ತು ಹೊಸಬೆಟ್ಟು ಸುರೇಶ್‌ ನೇತೃತ್ವದಲ್ಲಿ ರಚನೆಯಾದ ‘ಕನ್ಸರ್ನ್‌ಡ್‌ ಸಿಟಿಜನ್ಸ್‌ ಟ್ರಿಬ್ಯೂನಲ್‌’ನ ಸದಸ್ಯೆಯಾಗಿ ಕೆಲಸ ಮಾಡಿದವರು ತೀಸ್ತಾ. 2002ರಲ್ಲಿ ಮುಂಬೈನ ಸಮಾನ ಮನಸ್ಕರೊಂದಿಗೆ ಸೇರಿ ತೀಸ್ತಾ ಸ್ಥಾಪಿಸಿದ ‘ಸಿಟಿಜನ್ಸ್‌ ಫಾರ್‌ ಜಸ್ಟಿಸ್‌ ಆ್ಯಂಡ್‌ ‍ಪೀಸ್‌’ (CJP) ಸಾಮೂಹಿಕ ಗಲಭೆಯ ಸಂತ್ರಸ್ತರಿಗೆ ಅತ್ಯುತ್ತಮ ದರ್ಜೆಯ ಕಾನೂನು ನೆರವನ್ನು ನಿರಂತರವಾಗಿ ನೀಡುತ್ತಾ ಬಂದಿದೆ. 2017ರಲ್ಲಿ ಮೊದಲು ಇಂಗ್ಲಿಷ್‌ನಲ್ಲಿ ಪ್ರಕಟವಾದ ಈ ಕೃತಿ, ಅವರ ವೃತ್ತಿಬದುಕು ಮತ್ತು ಹೋರಾಟದ ಹಾದಿಯನ್ನು ವಿವರವಾಗಿ ಬಿಚ್ಚಿಟ್ಟಿದೆ. ಕನ್ನಡದಲ್ಲಿ ಸ್ವತಃ ತೀಸ್ತಾ ಅವರೇ ಬರೆದಿದ್ದಾರೆಯೋ ಎನ್ನುವಷ್ಟು ಖಚಿತವಾಗಿ ಮತ್ತು ಆಪ್ತವಾಗಿ ಸತ್ಯಾ ಎಸ್‌., ಈ ಪುಸ್ತಕವನ್ನು ಅನುವಾದಿಸಿದ್ದಾರೆ.

‘ಆರಂಭ’ ಎನ್ನುವುದು ಮೊದಲ ಅಧ್ಯಾಯ. 2002 ಗುಜರಾತ್‌ ನರಮೇಧದ ವಿವರಗಳನ್ನು ತೀಸ್ತಾ ಕಣ್ಣಿಗೆ ಕಟ್ಟುವಂತೆ ಇಲ್ಲಿ ವಿವರಿಸಿದ್ದಾರೆ. ‘ಆಳದ ಬೇರುಗಳು’ ಎನ್ನುವ ಎರಡನೇ ಅಧ್ಯಾಯದಲ್ಲಿ ಮುಂಬೈ ಬದುಕು, ವೃತ್ತಿಯ ಸುಖ–ದುಃಖ ಮತ್ತು ಗಲಭೆಯ ಒಳನೋಟಗಳನ್ನು ಒದಗಿಸಿದ್ದಾರೆ. ‘ಹಿಂದೂಗಳ ಪ್ರತೀಕಾರಕ್ಕೆ ಅವಕಾಶ ಕೊಡಿ’ ಎನ್ನುವ ಮೂರನೇ ಅಧ್ಯಾಯ, ಗುಂಪು ಗಲಭೆಯ ಹಿಂಸೆ, ಪೊಲೀಸ್‌ ಮತ್ತು ನ್ಯಾಯಾಲಯದ ವ್ಯವಸ್ಥೆಯ ಅಮಾನವೀಯ ಮುಖ, ಪರಿಹಾರ ಶಿಬಿರದ ಯಾತನೆಗಳನ್ನು ಕಣ್ಣಿಗೆ ಕಟ್ಟುವಂತೆ ವಿವರಿಸಿದೆ.

‘ಅವರ ಕೆಂಗಣ್ಣಿಗೆ ಗುರಿಯಾಗಿ’ ಎನ್ನುವ ನಾಲ್ಕನೇ ಅಧ್ಯಾಯವಂತೂ ಆ್ಯಕ್ಟಿವಿಸ್ಟ್‌ ಪತ್ರಕರ್ತರೊಬ್ಬರು ದುರ್ಬಲರಿಗೆ ನ್ಯಾಯ ಒದಗಿಸಲು ಸೆಣಸಿದಾಗ ಎದುರಿಸಬೇಕಾದ ಸಿಬಿಐ ದಾಳಿ, ವಿದೇಶಿ ದೇಣಿಗೆ ಕಾಯ್ದೆ ಉಲ್ಲಂಘನೆಯ ಕಿರುಕುಳ, ಜೈಲುವಾಸ, ಕೋರ್ಟಿನ ಹೋರಾಟಗಳನ್ನು ಬಿಚ್ಚಿಟ್ಟಿದೆ. ದಿನೇಶ್‌ ಅಮೀನ್‌ ಮಟ್ಟು ಅವರ ಮುನ್ನುಡಿ, ಕೊನೆಯಲ್ಲಿ ಜಿ.ರಾಜಶೇಖರ್, ವಿನಯಾ ಒಕ್ಕುಂದ, ದು.ಸರಸ್ವತಿ ಮತ್ತು ಸತ್ಯಾ ಎಸ್‌. ಅವರ ಟಿಪ್ಪಣಿಗಳು ಇಡೀ ಪುಸ್ತಕದ ಓದಿಗೆ ಪೂರಕವಾಗಿವೆ.

ಈ ಕೃತಿಯ ಮೂಲಕ ತೀಸ್ತಾ ಅವರು– ‘ಫ್ಯಾಸಿಸ್ಟ್‌ ಶಕ್ತಿಗಳು ಒಳ್ಳೆಯ ಜನರನ್ನು ಮೌನಿಗಳನ್ನಾಗಿಸಿ ಬಿಡುತ್ತವೆ. ಸಂವಿಧಾನಾತ್ಮಕ, ಪ್ರಜಾಸತ್ತಾತ್ಮಕ ಸಂಸ್ಥೆಗಳ ಒಳಗೆ ತೂರಿಕೊಂಡು ಅವುಗಳನ್ನೇ ನಾಶಗೊಳಿಸುತ್ತವೆ’ ಎನ್ನುವ ಅನುಭವದ ನುಡಿಯನ್ನು ದಾಖಲಿಸಿದ್ದಾರೆ. 2015ರ ಸಿಬಿಐ ದಾವೆಯ ಪ್ರಕರಣದಲ್ಲಿ ‘ಸರ್ಕಾರವನ್ನು ಟೀಕಿಸಿದರೆ ಅದು ದೇಶಕ್ಕೆ ದ್ರೋಹ ಬಗೆದಂತೆ ಅಲ್ಲ’ ಎಂದು ತೀರ್ಪಿತ್ತ ಬಾಂಬೆ ಹೈಕೋರ್ಟ್‌ ತೀಸ್ತಾ ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡುತ್ತದೆ. ಆದರೆ ಅದಾದ ಬಳಿಕವೂ ದೇಶದಲ್ಲಿ ಸರ್ಕಾರದ ನೀತಿಗಳನ್ನು ಟೀಕಿಸುವವರನ್ನು ದೇಶದ್ರೋಹಿಗಳಂತೆ ಚಿತ್ರಿಸುತ್ತಿರುವ ಆಡಳಿತ ವ್ಯವಸ್ಥೆಯನ್ನು ಗಮನಿಸಿದರೆ, ಈ ಪುಸ್ತಕದ ಓದಿನ ಸಮಕಾಲೀನ ಮಹತ್ವ ಅರಿವಾಗುತ್ತದೆ.

ತೀಸ್ತಾ ಅವರ ಮುತ್ತಾತ ಚಿಮನ್‌ಲಾಲ್‌ ಸೆತಲ್ವಾಡ್‌, ಬಾಬಾಸಾಹೇಬ ಅಂಬೇಡ್ಕರ್‌ರ ನಿಕಟವರ್ತಿಯಾಗಿ ‘ಬಹಿಷ್ಕೃತ್ ಹಿತಕಾರಿಣಿ ಸಭಾ’ ಸ್ಥಾಪಿಸಿದವರು. ಅಜ್ಜ ಮೋತಿಲಾಲ್‌ ಸೆತಲ್ವಾಡ್‌ ಭಾರತದ ಮೊದಲ ಅಟಾರ್ನಿ ಜನರಲ್‌ ಮತ್ತು ಭಾರತದ ಪ್ರಥಮ ಕಾನೂನು ಆಯೋಗದ ಅಧ್ಯಕ್ಷರಾಗಿದ್ದವರು. ಅಪ್ಪ ಅತುಲ್‌ ಖ್ಯಾತ ವಕೀಲರಾಗಿದ್ದವರು. ಹಾಗೆಂದೇ ಎಲ್ಲ ದ್ವೇಷ ರಾಜಕಾರಣದ ಗಲಭೆಗಳ ಸಂತ್ರಸ್ತರಿಗೂ ನ್ಯಾಯಾಂಗ ಹೋರಾಟದ ಮೂಲಕವೇ ಪರಿಹಾರ ಪಡೆಯಲು ತೀಸ್ತಾ ಕಟಿಬದ್ಧರಾಗಿದ್ದಾರೆ.

ಉದ್ದಕ್ಕೂ ಒದ್ದೆಗಣ್ಣಿನಿಂದಲೇ ಓದಿಸಿಕೊಂಡು ಹೋಗುವ ಈ ಪುಸ್ತಕದ ಒಂದೆಡೆ ಅಪ್ಪ ಅತುಲ್‌ರ ಮಾತನ್ನು ತೀಸ್ತಾ ದಾಖಲಿಸುತ್ತಾರೆ– ‘ದ್ವೇಷಪೂರಿತ ವಾತಾವರಣವನ್ನು ಸಹಿಸಲು ಸಾಧ್ಯವಿಲ್ಲ. ಆದರೆ ಅದನ್ನು ನಿಭಾಯಿಸಬಹುದು. ಅದನ್ನು ಒಪ್ಪಿಕೊಂಡು ಅದರ ಜೊತೆಗೇ ಬದುಕುವ ಮಾರ್ಗವನ್ನು ಕಂಡುಕೊಳ್ಳಬೇಕು’ ಎನ್ನುವ ಈ ಮಾತು ಓದುಗರಿಗೆ ಮಾರ್ಗದರ್ಶನದಂತಿದೆ. ಆದರೆ ಆ ಮಾರ್ಗ ಎಷ್ಟು ಯಾತನಾಮಯವಾಗಿದೆ ಎನ್ನುವ ಅನುಭವ ಕಥನ ಓದುಗರನ್ನು ಪದೇ ಪದೇ ವಿಹ್ವಲಗೊಳಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT