ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಸ್ತಕ ವಿಮರ್ಶೆ: ಒಂದೇ ಮಣ್ಣಿನ ಮಡಿಕೆಗಳು

Last Updated 21 ನವೆಂಬರ್ 2020, 19:30 IST
ಅಕ್ಷರ ಗಾತ್ರ

ಕೇಶವ ಮಳಗಿಯವರು ಅನುವಾದಿಸಿರುವ ‘ದೈವಿಕ ಹೂವಿನ ಸುಗಂಧ’ (ಭಕ್ತಿಲೀಲೆಯ ವಿಶ್ವರೂಪ) ಕೃತಿಯು ಮಧ್ಯಯುಗದ ಭಾರತ ಉಪಖಂಡದ ಇಪ್ಪತ್ತಾಲ್ಕು ಭಕ್ತಿ ಕವಿಗಳ ಕವಿತೆಗಳನ್ನು ಹಾಗೂ ಪರ್ಶಿಯಾದ ಸೂಫಿ ಕವಿಗಳ ಇಪ್ಪತ್ತು ಕವಿತೆಗಳನ್ನು ಒಳಗೊಂಡಿರುವ ಮಹತ್ವದ ವಾಚಿಕೆ. ಹಿಂದೆ ಇಲ್ಲಿನ ಭಕ್ತಿ ಕವಿಗಳನ್ನು ಕೆಲವರು ಅನುವಾದ ಮಾಡಿದರೂ ಒಬ್ಬನೇ ಅನುವಾದಕ ಇಷ್ಟೊಂದು ಬಹುರೂಪಿಯಾಗಿ ಕನ್ನಡದಲ್ಲಿ ತಂದಿದ್ದು ಕಡಿಮೆ. ಶೈವ, ವೈಷ್ಣವ, ಬೌದ್ಧ, ಸಿಖ್, ಸೂಫಿ ಭಕ್ತಿಯ ಕವಿಗಳು ಒಟ್ಟಿಗೆ ಕನ್ನಡದಲ್ಲಿ ನುಡಿದಿದ್ದಾರೆ.

ಮಳಗಿಯವರ ಈ ಅನುವಾದದಲ್ಲಿ ಒಂದು ಕೇಂದ್ರವಸ್ತು ಹಲಬಗೆಯಲ್ಲಿ ಕೆಲಸ ಮಾಡಿದೆ, ಅದು ‘ಪ್ರೇಮತತ್ವ’. ಈ ಪ್ರೇಮತತ್ವವೇ ಈ ಕವಿಗಳ ತಾತ್ವಿಕತೆಯಾಗಿ, ದಾರ್ಶನಿಕ ತತ್ವವಾಗಿ ಹೇಗೆ ಸದ್ಯದ ತಾಕಲಾಟಗಳಿಗೆ ಮರುರೂಪಿಯಾಗಿ ಕಾಣಿಸಿದೆ ಎಂಬುದನ್ನು ಗ್ರಹಿಸಬೇಕಾಗಿದೆ. ಇದೇ ತತ್ವ ಭಾರತೀಯ ದರ್ಶನಗಳಲ್ಲಿ ಕಾಣಿಸುವ ದ್ವೈತ, ಅದ್ವೈತ ಮುಂತಾದ ಧಾರೆಗಳಿಗಿಂತ ಭಿನ್ನವಾಗಿ ಉಪಖಂಡದ ಕವಿಗಳನ್ನು ಜನಮುಖಿಯಾಗಿಸಿದ್ದು; ಸೂಫಿಗಳು ಪ್ರೇಮವೇ ಧರ್ಮವೆಂದು ಭಾವಿಸಿ ಜನರ ಬಳಿಗೆ ಧಾವಿಸಿದ್ದರ ಹಿಂದೆಯೂ ಅದೇ ತತ್ವ ಕೆಲಸ ಮಾಡಿದೆ. ಇವರಿಬ್ಬರ ದೈವವು ಪ್ರೇಮ ಸ್ವರೂಪಿಯೇ ಹೊರತು ರಾಜಕಾರಣದ ಹಿಂಸಾರೂಪಿಯಲ್ಲ.

ಬಹುರೂಪಿ ಭಾರತವನ್ನು ಕಾಡುತ್ತಿರುವ ದೊಡ್ಡ ಸಂಕಟ ದೈವಕೇಂದ್ರಿತ ರಾಜಕಾರಣ. ಆದರೆ, ಸೂಫಿಗಳು ಮತ್ತು ಭಕ್ತಿ ಕವಿಗಳು ಅನುಸರಿಸಿದ್ದು ಮನುಷ್ಯತ್ವಕೇಂದ್ರಿತ ದೈವವನ್ನು. ಈ ಬಗೆಯ ದೈವನಲ್ಲಿ ನಿರ್ಗುಣ, ಸಗುಣ ತತ್ವಗಳು ಅಡಗಿದರೂ ತಲುಪುವ ನಿಲ್ದಾಣ ಒಂದೇ. ಹಾಗಾಗಿಯೇ ಇವರನ್ನು ಒಂದೇ ಮಣ್ಣಿನ ಮಡಿಕೆಗಳು ಎಂದು ಕರೆದೆ (ಇವು ಕಬೀರನ ನುಡಿಗಳು). ಇವರ ತಾತ್ವಿಕತೆಯನ್ನು ಕೊಂಚ ವಿವರಿಸಿಕೊಳ್ಳಬಹುದು.

ಶೃಂಗಾರ ಕಾವ್ಯದ ಭಕ್ತಿ ಕೇವಲ ದೈವದ ಜೊತೆಗಿನ ಉತ್ಕಟಸುಖವನ್ನು ಪಡೆಯುವುದಿಲ್ಲ. ಅಂತಹ ಭಕ್ತನಲ್ಲೂ ಎರಡು ಬಗೆಯ ಕೋನಗಳಿವೆ. ಒಂದು ಶರಣಾಗತಿ ಮುಖ; ಇದು ಶೃಂಗಾರದ ಮೂಲಕ. ಮತ್ತೊಂದು, ಅನುಭಾವಿ ಮುಖ. ಈ ಧಾರೆ ದೈವನನ್ನು ಕೇವಲ ಸಖ ಎಂದು ಪರಿಭಾವಿಸಿಕೊಳ್ಳದೇ ಆಂತರ್ಯದಲ್ಲೇ ಭಕ್ತ ಧ್ಯಾನಸ್ಥಸ್ಥಿತಿಗೆ ಜಾರಿರುತ್ತಾನೆ. ಆ ದಾರಿಯಲ್ಲೇ ಯೋಗಿಯೂ ಆಗಿಬಿಡುತ್ತಾನೆ. ಇದಕ್ಕೆ ದೊಡ್ಡ ನಿದರ್ಶನಗಳು ಮಿಲರೇಪ, ಲಲ್ಲಾ, ಅಕ್ಕ, ಉತ್ಪಲದೇವ, ರಾಬಿಯ ಮುಂತಾದವರನ್ನು ಮತ್ತು ಕನ್ನಡದ ಅನೇಕ ತತ್ವಪದಕಾರರು, ವಚನಕಾರರು, ದಾಸರನ್ನು ಸೇರಿಸಬಹುದು.

ಅದ್ವೈತ ಭಕ್ತಿಗೆ ದ್ವೈತಕ್ಕಿಂತ ಹೆಚ್ಚಿನ ಮಹತ್ವ ಬರುವುದು ಇಲ್ಲಿಯೇ. ದೇಹದ ಪ್ರತಿಮೆ ಮತ್ತು ಪ್ರಜ್ಞೆಯ ತತ್ವ ಇಲ್ಲಿ ಒಂದಾಗಿಬಿಡುತ್ತವೆ. ಹಾಗಾಗಿ ಅನೇಕರಲ್ಲಿ ಮಾನಸಿಕ ಪ್ರಜ್ಞೆಯ ಜಿಗಿತಗಳ ಕೇಂದ್ರ ‘ದೈವ’ನಾದರೂ ಆತನನ್ನು ಒಳಗುಮಾಡಿಕೊಳ್ಳುವ ಮತ್ತು ಅಂತರಂಗದಲ್ಲಿ ದರ್ಶಿಸಿಕೊಳ್ಳುವ ಮಾರ್ಗಗಳು ಭಿನ್ನವಾಗುತ್ತವೆ. ಶೈವ ಭಕ್ತರಿಗೂ ಸರಹ ಮುಂತಾದ ಬೌದ್ಧ ಚಿಂತಕರಿಗೆ ಪ್ರಜ್ಞೆಯ ವಿಚಾರದಲ್ಲಿ ಕೊಂಚ ಸಾಮೀಪ್ಯ ಮತ್ತು ಭಿನ್ನತೆ ಎರಡೂ ಇವೆ. ಮಾಣಿಕ್ಕ ಎಂಬ ಕವಿ ‘ಮನಸ್ಸು ಇಷ್ಟೊಂದು ನಿಃಸತ್ವವಾಗಲುಂಟೆ/ ಇದರ ಅಂತ್ಯವನು ನಾ ನೋಡಲಾರೆ’ ಎಂದರೆ, ಸರಹಪಾದ ‘ಚಿತ್ತ ಅಸ್ತಿತ್ವದಲ್ಲಿಲ್ಲವೆಂದು ಅರಿಯರೀ ಜೀವಿಗಳು’ ಎಂದ. ಈ ಬಗೆಯ ನುಡಿಗಳನ್ನು ಎತ್ತಿಕೊಂಡು ಅಲ್ಲಮನೊಂದಿಗೆ ಜೋಡಿಸಿ ಚರ್ಚೆ ಮಾಡಬಹುದು.

ಸರಹಪಾದ ಮೂಲತಃ ‘ಚಿತ್ತ’ ಪ್ರತಿಪಾದಕ. ಇದು ಅಸ್ತಿತ್ವದಲ್ಲಿ ಇಲ್ಲ ಎಂದು ಯಾಕೆ ಹೇಳಿದ? ಚಿತ್ತ ಸದಾ ಬದಲಾಗುತ್ತಲೇ ಇರುತ್ತದೆ. ಲೋಕದೊಂದಿಗಿನ ಅದರ ಸಂಬಂಧ ಸದಾ ಚಲನಶೀಲ. ಹೀಗಾಗಿ ‘ಮನಸ್ಸು’ ಸದಾ ವರ್ತಮಾನಕ್ಕೆ ತಾಕುತ್ತಲೇ ಕೊಳಕನ್ನು ಬರಿದು ಮಾಡಿ ಶುಭ್ರತೆಯನ್ನು ತುಂಬಿಕೊಳ್ಳುತ್ತಲೇ ಇರುತ್ತದೆ. ಸರಹ ಈ ನಿಟ್ಟಿನಲ್ಲಿ ‘ಸದ್ಯ’ದ ಚಿಂತಕ. ಮತ್ತೊಬ್ಬ ಬೌದ್ಧ ಚಿಂತಕ ಮಿಲರೇಪ ಲೋಕವನ್ನು ಗ್ರಹಿಸುವುದು ಬುದ್ಧನ ಸರಳ ತತ್ವಗಳಿಂದ. ಲೋಕ ಶಾಶ್ವತ ಅಲ್ಲ ನಿಸ್ಸಾರವೆಂದು ನೇರವಾಗಿಯೇ ಹೇಳುತ್ತಾನೆ. ಆದರೆ, ಮಿಲರೇಪನನ್ನು ಒಳಗೊಂಡಂತೆ ಗೋರಖ ಮುಂತಾದವರು ಅಸ್ತಿತ್ವ ನಿರಾಕರಣೆಯ ಧೋರಣೆಯಿಂದ ಕಾಣುತ್ತಾರೆ. ಸದ್ಯವನ್ನೇ ಹೆಚ್ಚು ನಂಬುತ್ತಾರೆ. ಇವರ ಭಕ್ತಿ ಚಿಂತನಶೀಲ.

ಬೌದ್ಧಚೌಕಟ್ಟಿನ ಕರುಣೆ, ದಯೆ, ಪ್ರೀತಿಗಳ ತತ್ವಗಳನ್ನು ನಾವು ಭಕ್ತಿಯ ರೂಪದಲ್ಲಿ ಮತ್ತು ಜೀವ-ದೈವಗಳ ಸಂಯೋಗದ ಹಿನ್ನೆಲೆಯಲ್ಲಿ ಸೂಫಿ ಕವಿಗಳಲ್ಲಿ ಗ್ರಹಿಸಬಹುದು. ಇವರಲ್ಲಿ ಪ್ರೇಮತತ್ವ ಮತ್ತು ದೈವತತ್ವಗಳು ಅಭಿನ್ನ. ಪ್ರೇಮವೇ ಧರ್ಮವಾಗಿಬಿಡುತ್ತದೆ. ಸೂಫಿ ಕವಿಗಳ ಕೇಂದ್ರ ‘ಹೃದಯ’. ಇದು ಕೇವಲ ಮಾಂಸದ ಮುದ್ದೆಯಲ್ಲ. ಒಡೆದ ಸಮಾಜಗಳನ್ನು, ಧರ್ಮಗಳನ್ನು, ಮನಸ್ಸುಗಳನ್ನು ಕರುಣೆಯ ಮೂಲಕ ಜೋಡಿಸುವ ಸೇತುವೆ. ರೂಮಿ ಹೇಳುತ್ತಾನೆ: ‘ಯಾತನೆ ನಿನ್ನನ್ನು ಹುಡುಕಿಕೊಂಡು ಬಂದಾಗ/ ಹೃದಯದಲಿ ಅನುರಾಗವನ್ನು ಹುಡುಕುವುದು’. ಮತ್ತೊಬ್ಬ ಸೂಫಿ ಕವಿ ಶೇಕ್ ಅಲ್- ಅಕ್ಬರ್ ‘ಹೃದಯದ ಹುಲ್ಲುಗಾವಲಿಗೆ ದೈವಿಕ ಮೋಡಗಳು ಮಳೆಗರೆದವು’ ಎಂದು ಪ್ರತಿಮಾತ್ಮಕವಾಗಿ ನುಡಿಯುತ್ತಾನೆ.

ಉಪಖಂಡದ ಅನೇಕ ಭಕ್ತಿಗಳು ಮತ್ತು ಸೂಫಿಗಳು ನಿಸರ್ಗ ಮತ್ತು ದೈವಗಳನ್ನು ಅದ್ವೈತ ರೂಪಕ್ಕೆ ತರುತ್ತಾರೆ. ಸೂಫಿಗಳ ದೇಹತತ್ವವನ್ನು ನಮ್ಮ ತತ್ವಪದಕಾರರ ಶರೀರ ತತ್ವಗಳ ಜತೆಯಲ್ಲಿ ತೌಲನಿಕವಾಗಿ ಅಭ್ಯಾಸ ನಡೆಸಬಹುದು. ಈ ಬಗೆಯ ಅವಕಾಶಗಳಿಗೆ ಈ ಕೃತಿಯು ಅನೇಕ ದಾರಿಗಳನ್ನು ತೋರಿಸುತ್ತದೆ. ಮಳಗಿಯವರ ಅನುವಾದದ ಗದ್ಯ ರೂಪಕಾತ್ಮಕವಾಗಿರುತ್ತದೆ. ಇದರಲ್ಲಿ ಮುಕ್ತ ಛಂದಸ್ಸಿಗೆ ಹೆಚ್ಚು ಒತ್ತು ನೀಡಿದ್ದಾರೆ. ಹಿಂದಿನ ಅವರ ‘ಹಂಸ ಏಕಾಂಗಿ’ಗೂ (ಕಬೀರನ ಪದಗಳು) ಈ ಕೃತಿಗೂ ಆಶಯಗಳ ದೃಷ್ಟಿಯಿಂದ ಸಾತತ್ಯವಿದೆ. ‘ಹಂಸ ಏಕಾಂಗಿ’ಯಲ್ಲಿ ಮಳಗಿ ಕನ್ನಡದ ಹಲ ಬಗೆಯ ಒಳನುಡಿಗಳ ಲಯಗಳನ್ನು ಬಳಸಿಕೊಂಡಿದ್ದರು. ‘ದೈವಿಕ ಹೂವಿನ ಸುಗಂಧ’ದ ಮೊದಲ ಭಾಗದಲ್ಲಿ ಆ ಪ್ರಯೋಗ ನಡೆಸಬಹುದಿತ್ತು. ಸೂಫಿ ಕಾವ್ಯಕ್ಕೆ ಗದ್ಯಲಯವನ್ನು ಪ್ರತಿಮಾತ್ಮಕವಾಗಿ ಬಳಸಿಕೊಂಡಿದ್ದಾರೆ. ಮುಖ್ಯವಾಗಿ ಎರಡು ಭಾಗಗಳಿಗೂ ಅವರು ಬರೆದಿರುವ ದೀರ್ಘ ಪ್ರಸ್ತಾವನೆಗಳು ಸಾಕಷ್ಟು ಅಭ್ಯಾಸಪೂರ್ಣವಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT