ಭಾನುವಾರ, 28 ಮೇ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಸ್ತಕ ವಿಮರ್ಶೆ: ತಾಳಮದ್ದಲೆಯೆಂಬ ಆಶುವೈಭವದ ಚಿತ್ರಣ

Last Updated 12 ಮಾರ್ಚ್ 2023, 0:00 IST
ಅಕ್ಷರ ಗಾತ್ರ

ಯಕ್ಷಗಾನದ ವರ್ಣರಹಿತ ಅಂಗ ತಾಳಮದ್ದಲೆ. ಕಥಾನಕವೊಂದನ್ನು ಬಣ್ಣಗಳು, ವೇಷ ಭೂಷಣಗಳಿಲ್ಲದೆಯೇ ಸುಂದರವಾಗಿ ಕಟ್ಟಿಕೊಡುವ ಮಾತಿನ ಮಂಟಪವದು. ವಾಚಿಕ, ವಿಶೇಷತಃ ಆಶು ಸಾಹಿತ್ಯವೇ ಪ್ರಧಾನವಾಗಿರುವ ಯಕ್ಷಗಾನದ ಈ ಅಂಗದಲ್ಲಿ ಪದದ ಸಾಹಿತ್ಯದ ಚೌಕಟ್ಟಿನೊಳಗೆ ತಮ್ಮ ಅನುಭವ ಜ್ಞಾನವನ್ನು, ಮಾಹಿತಿಯನ್ನು ರಂಜನೀಯವಾಗಿ ಪ್ರಸ್ತುತಪಡಿಸುವುದಕ್ಕೆ ಅಧ್ಯಯನ ಬೇಕೇಬೇಕು. ಅಂತಹ ಕಲೆಯೊಂದರಲ್ಲಿ ಸಮರ್ಥವಾಗಿರುವ ಮತ್ತು ಸುಪುಷ್ಟವಾಗಿರುವ ವಾದ ಮಂಡನೆ-ಖಂಡನೆಗಳಿಂದ ಹೆಸರು ಗಳಿಸಿದ ರಾಧಾಕೃಷ್ಣ ಕಲ್ಚಾರ್ ವಿಟ್ಲ ಅವರ ಮೂರು ಕೃತಿಗಳು ನಮಗೆ ಯಕ್ಷಗಾನ ಎಂಬ ಕರ್ನಾಟಕದ ಹೆಮ್ಮೆಯ ಕಲಾಲೋಕವನ್ನು ಒಂದು ರೀತಿಯಲ್ಲಿ ಪರಿಪೂರ್ಣ ಮಟ್ಟಿಗೆ ಎಂಬಷ್ಟರ ಮಟ್ಟಿಗೆ ತೆರೆದಿಡುತ್ತವೆ.

ಅರ್ಥಾಲೋಕ

ತಾಳಮದ್ದಲೆಯೆಂಬ ರಂಗಭೂಮಿಯ ಕುರಿತಾಗಿರುವ ಅರ್ಥಾಲೋಕ ಕೃತಿಯನ್ನು ಓದಿದಾಕ್ಷಣ ಈ ಆಶುಕಲೆಯ ವೈಭವದ ಆಳ-ಅರಿವು ನಮಗಾಗುತ್ತದೆ. ಕಲ್ಚಾರರು ಸ್ವತಃ ಕಲಾವಿದರಾಗಿದ್ದುಕೊಂಡು, ಬರವಣಿಗೆಯಲ್ಲೂ ಸಿದ್ಧಹಸ್ತರಾಗಿರುವುದು ಯಕ್ಷಗಾನ ಲೋಕಕ್ಕೆ ಆದ ಪ್ರಧಾನ ಲಾಭಗಳಲ್ಲಿ ಒಂದು ಎನ್ನುವುದು ಈ ಕೃತಿ ಓದಿದ ಯಾರಿಗೇ ಆದರೂ ಮನದಟ್ಟಾಗುವ ವಿಚಾರ. ತಾಳಮದ್ದಲೆಯೆಂಬ ರಂಗಭೂಮಿಯನ್ನು ಎಲ್ಲ ಆಯಾಮಗಳಿಂದ ಪರಿಚಯಿಸುವ ಮತ್ತದರ ಇತಿಹಾಸದ ಮೇಲೆ ಬೆಳಕು ಚೆಲ್ಲುವ ಕೃತಿ ಇದಾಗಿದ್ದು, ಸಂಶೋಧನಾಕಾಂಕ್ಷಿಗಳಿಗೆ ಸಂಪನ್ಮೂಲವಿದು. ಸಂಸ್ಮರಣಾ ಗ್ರಂಥಗಳು, ಯಕ್ಷಗಾನ ಪತ್ರಿಕೆಗಳು, ಅಭಿನಂದನೆ ಗ್ರಂಥಗಳು, ವಿಚಾರಗೋಷ್ಠಿಗಳಿಗಾಗಿ ಬರೆದ ಲೇಖನಗಳ ಗುಚ್ಛವು ಈ ಕ್ಷೇತ್ರದ ಹೊರಗಿನವರಿಗೂ ತಾಳಮದ್ದಲೆ ಬಗ್ಗೆ ಸಮಗ್ರ ಮಾಹಿತಿ ನೀಡಿ ಆಕರ್ಷಿಸುವಂತೆ ಮಾಡುತ್ತದೆ.

ತಾಳಮದ್ದಲೆ ಎಂಬುದು ಕೇವಲ ಪದ್ಯದ ಅರ್ಥ ಹೇಳುವ ಕಲಾ ಪ್ರಕಾರವಲ್ಲ. ಕವಿಯ ಸಾಹಿತ್ಯದಲ್ಲಿ ಬರುವ ಒಂದು ಪದ, ಅದರ ಅರ್ಥ ಮತ್ತು ಅದರ ಬಗೆಗಿನ ಘಟನಾವಳಿಗಳ ಆಚೀಚಿನ ವಿಚಾರಗಳನ್ನು ತಿಳಿದುಕೊಳ್ಳುವುದು ತುಂಬಾ ಅಗತ್ಯ. ಯಕ್ಷಗಾನ ತಾಳಮದ್ದಲೆ ಕಲಾಪ್ರಕಾರವು ಯಾಕೆ ವಿಶಿಷ್ಟ ಎಂಬುದರಿಂದ ಹಿಡಿದು, ಈ ಕ್ಷೇತ್ರದಲ್ಲಿ ಕೃಷಿ ಮಾಡಲು ಏನೆಲ್ಲ ಅಗತ್ಯ ವಿಚಾರಗಳನ್ನು ಮೈಗೂಡಿಸಿಕೊಳ್ಳಬೇಕು ಎನ್ನುವವರೆಗೆ ತಿಳಿಸಿಕೊಡುವ ಅರ್ಥಾಲೋಕ ಕೃತಿಯು ಯಕ್ಷಗಾನ ಕ್ಷೇತ್ರಾಸಕ್ತರಿಗೆ ಮತ್ತು ಕಲಾವಿದರಾಗಬಯಸುವವರಿಗೆ ಕೈದೀವಿಗೆಯಾಗಬಲ್ಲುದು. ಆಳವಾದ ಅಧ್ಯಯನ ನಡೆಸಿಯೇ ಈ ಲೇಖನಗಳನ್ನು ಬರೆದಿದ್ದಾರೆ ಎಂಬುದು ಕೃತಿಯನ್ನು ಓದಿದರೆ ವೇದ್ಯವಾಗುತ್ತದೆ.

ತಾಳಮದ್ದಲೆಯ ಅರ್ಥಗಾರಿಕೆಯಲ್ಲಿ ತೊಡಗಿಕೊಂಡವರಿಗೆ ಮಾತಿನ ಕ್ಷೇತ್ರದಲ್ಲಿ ಎದುರಾಗಬಹುದಾದ ಬಹುತೇಕ ಎಡರು ತೊಡರುಗಳನ್ನು ದಾಟಲು ಅನುಕೂಲ ಮತ್ತು ಆಶುಪಟುತ್ವಕ್ಕೆ ಗರಿ ಮೂಡಿಸುವಂತಿದೆ ಈ ಕೃತಿ ಎಂದರೂ ತಪ್ಪಲ್ಲ. ಅಲ್ಲದೆ, ಮೂಲ ಕಾವ್ಯಕ್ಕೂ, ಪ್ರಸಂಗ ಸಾಹಿತ್ಯಕ್ಕೂ ಭಿನ್ನತೆಯಿದ್ದಾಗ, ಅರ್ಥಧಾರಿಯು ಪ್ರಸಂಗವನ್ನೇ ನೆಚ್ಚಿಕೊಂಡಿರಬೇಕಾದುದು ರಂಗಧರ್ಮ ಎಂದಿದ್ದಾರೆ ಕಲ್ಚಾರರು. ಅರ್ಥಧಾರಿಯೂ ವಿಜೃಂಭಿಸಬೇಕು, ಆದರೆ ಪ್ರಸಂಗದ ಆಶಯಕ್ಕೆ, ಪಾತ್ರದ ಔಚಿತ್ಯಕ್ಕೆ ಧಕ್ಕೆಯಾಗಲೇಬಾರದೆಂಬ ಸೂಕ್ಷ್ಮ ಪಾಠವು ಈ ಕೃತಿಯಲ್ಲಿದೆ.

ಇದರಲ್ಲಿ ತಾಳಮದ್ದಲೆ ಕ್ಷೇತ್ರದ ಪರಿಚಯದೊಂದಿಗೆ, ಸ್ವಗತಕ್ಕೂ, ಪೀಠಿಕೆಗೂ ಇರುವ ವ್ಯತ್ಯಾಸ, ಅರ್ಥಗಾರಿಕೆಯ ಹಂತಗಳು, ಪಾತ್ರವನ್ನು ಮಾತಿನಲ್ಲೇ ಕಟ್ಟಿಕೊಡುವುದು ಹೇಗೆ, ಪ್ರದರ್ಶನ ಹಾಗೂ ಪ್ರೇಕ್ಷಕರು, ಸಾಂಸ್ಕೃತಿಕ ಪಲ್ಲಟಗಳೇ ಮುಂತಾದ ಒಟ್ಟು 16 ಲೇಖನಗಳೊಂದಿಗೆ, ತಾಳಮದ್ದಳೆ ಪ್ರಸಂಗದ ಪ್ರಯೋಗ ಸಾಧ್ಯತೆಗಳ ಮೇಲೂ ಬೆಳಕು ಚೆಲ್ಲಲಾಗಿದೆ. ಇದಂತೂ ಈಗಿನ ಕಾಲಮಾನಕ್ಕೆ ಅತ್ಯಮೂಲ್ಯ ಕೃತಿಯಾಗಿದೆ. ಅಷ್ಟೇ ಅಲ್ಲ, ಒಬ್ಬ ಕಲಾವಿದನಾಗಿದ್ದುಕೊಂಡು ಪ್ರೇಕ್ಷಕ ಪ್ರಜ್ಞೆಯಿಂದ ಮತ್ತು ವಿಮರ್ಶಕ ಪ್ರಜ್ಞೆಯಿಂದಲೇ ತಾಳಮದ್ದಳೆಯನ್ನು ಈ ರೀತಿಯಾಗಿ ವಿವರಿಸುವುದು ಸುಲಭವಲ್ಲ ಎಂಬುದನ್ನೂ ಗಮನಿಸಬೇಕು. ಎಲ್ಲ ಯಕ್ಷಗಾನ ಕಲಾವಿದರಿಗೆ ಉಪಯುಕ್ತವಾಗಿರುವ ಈ ಕೃತಿಯು ಪ್ರೇಕ್ಷಕರ ಹೊಣೆಯೇನು ಎಂಬುದನ್ನು ವಿವರಿಸುತ್ತಾ ಸಂಘಟಕರಿಗೊಂದಿಷ್ಟು ಸಲಹೆಯನ್ನೂ ನೀಡುತ್ತದೆ.

ಉಲಿಯ ಉಯ್ಯಾಲೆ

ಹೆಸರೇ ಹೇಳುವಂತೆ (ಅರ್ಥ ಹೇಳುವುದು) ಉಲಿಯುವುದೇ ಉಯ್ಯಾಲೆ ಜೀಕಿದ ಅನುಭವ ಎಂದು ವಿವರಿಸುತ್ತಲೇ ಮುಂದೆ ಸಾಗುತ್ತಾರೆ ಲೇಖಕರು. ತಾಳಮದ್ದಲೆ ರಂಗಭೂಮಿಯಲ್ಲಿ ಅವರ ಏರಿಳಿತಗಳ ಪಯಣದ ಕಥನವಿದು. ಇದು ಅವರ ಆತ್ಮಕಥನದಂತಿದ್ದರೂ, ಒಟ್ಟರ್ಥದಲ್ಲಿ ಅರ್ಥಧಾರಿಯ ಆತ್ಮಕಥನವೋ ಮತ್ತು ಒಂದು ಕಲಾ ಪ್ರಕಾರದ ಆತ್ಮಕಥನವೋ ಎಂಬಂತೆಯೂ ಭಾಸವಾಗಬಹುದು. ತಾಳಮದ್ದಲೆಯನ್ನು ಬಾಲ್ಯದಿಂದ ಬೆರಗುಕಂಗಳಿಂದ ನೋಡುತ್ತಲೇ ಬೆಳೆದ ಬಗೆ, ಹೊಸತನಕ್ಕೆ ತೆರೆದುಕೊಳ್ಳುತ್ತಾ ಬಂದ ಈ ಕಲೆಯು ಈಗಿನ ಮಟ್ಟಕ್ಕೆ ಬೆಳೆಯುವಲ್ಲಿನ ಸವಾಲುಗಳನ್ನೂ ತೆರೆದಿಡುತ್ತದೆ. ಕಲಾವಿದನಾದವನಿಗೆ ಪ್ರೇರಣೆ, ಹಿನ್ನಡೆ ಮತ್ತು ಸಾರ್ಥಕ್ಯಭಾವ ಯಾವ ಸಂದರ್ಭಗಳಲ್ಲಾಗುತ್ತದೆ ಎಂಬುದನ್ನು ವಿವರಿಸಿದ್ದಾರೆ ಲೇಖಕರು. ಪತ್ರಿಕೆಯಲ್ಲಿ ಇದೇ ಹೆಸರಿನಲ್ಲಿ ಪ್ರಕಟವಾದ ಅಂಕಣಗಳ ಗುಚ್ಛವಿದು. ಅವರ ಕಲಾಯಾನದ ಸಿಂಹಾವಲೋಕನದಂತಿದ್ದು, ತಾಳಮದ್ದಲೆಯು ಕಂಡ ಸ್ಥಿತ್ಯಂತರವೂ ಕಣ್ಣಿಗೆ ಕಟ್ಟುತ್ತದೆ. ಯಕ್ಷಗಾನ ಅಭಿಮಾನಿಗಳಿಗೆ, ಕಲಾವಿದರಿಗೆ, ಕುತೂಹಲಿಗಳಿಗೆ ಅನುಭವಗಳ ಗುಚ್ಛ ದೊರೆಯುವ ಕೃತಿಯಿದು. ಮತ್ತು ತಾಳಮದ್ದಲೆ ರಂಗಭೂಮಿಯ ಮೂರ್ನಾಲ್ಕು ದಶಕಗಳ ಇತಿಹಾಸದಂತೆಯೂ ಗೋಚರಿಸುತ್ತದೆ.

ಪೀಠಿಕಾ ಪ್ರಕರಣ

ಮೇಲಿನ ಎರಡೂ ಕೃತಿಗಳನ್ನು ಓದಿದ ಬಳಿಕ, ತಾಳಮದ್ದಲೆ ಕ್ಷೇತ್ರಕ್ಕೆ ಧುಮುಕಲು ಕೈಹಿಡಿದು ನಡೆಸುತ್ತದೆ ‘ಪೀಠಿಕಾ ಪ್ರಕರಣ’ ಎಂಬ, 38 ಯಕ್ಷಗಾನ ಪ್ರಸಂಗಗಳಲ್ಲಿ ಬರುವ 140 ಪಾತ್ರಗಳ ಪೀಠಿಕೆಯ ಅರ್ಥವೈಭವವುಳ್ಳ ಕೃತಿ. ಪೀಠಿಕೆ ಎಂದರೆ, ಯಕ್ಷಗಾನ ಪ್ರಸಂಗವೊಂದರ ಪಾತ್ರವು ರಂಗಕ್ಕೆ ಪ್ರವೇಶವಾದ ತಕ್ಷಣ, ಆ ದಿನದ ಕಥಾನಕಕ್ಕೆ ಮುನ್ನುಡಿಯಿಡುವ ಮಾತುಗಳು. ತಾಳಮದ್ದಲೆ ಲೋಕದಲ್ಲಿ ಮಾತುಗಾರಿಕೆಯಲ್ಲಿ ಸುಪ್ರಸಿದ್ಧರಾದ ಶೇಣಿ-ಸಾಮಗ-ತೆಕ್ಕಟ್ಟೆ-ಕುಂಬಳೆ ಮುಂತಾದವರ ಮಾತುಗಳನ್ನು ಕ್ಯಾಸೆಟ್ ಮೂಲಕವಷ್ಟೇ ಕೇಳಿದ್ದರೆ, ಈ ಆಶುವೈಭವವನ್ನು ಕೃತಿಗೆ ಇಳಿಸಿದ ಉದಾಹರಣೆಗಳು ಕಡಿಮೆ. ಇಂತಿರಲಾಗಿ, ತಾಳಮದ್ದಲೆ ಕಲೆಯಲ್ಲಿ ಪಳಗಲು ಹೊರಟವರಿಗೆ, ಅಭ್ಯಾಸಿಗಳಿಗೆ ಅತ್ಯುಪಯುಕ್ತ ಕೃತಿಯಿದು.

ಕೃತಿಗಳು: ಅರ್ಥಾಲೋಕ

ಪುತ್ತೂರಿನ ಜ್ಞಾನಗಂಗಾ ಪುಸ್ತಕ ಮಳಿಗೆ ಹೊರತಂದಿರುವ ಈ ಕೃತಿ 2021ರಲ್ಲಿ ಮೊದಲ ಮುದ್ರಣ ಕಂಡಿದ್ದು, 106 ಪುಟಗಳ ಕೃತಿಯ ಬೆಲೆ ₹105.

ಉಲಿಯ ಉಯ್ಯಾಲೆ

30 ಲೇಖನಗಳುಳ್ಳ 168 ಪುಟಗಳ ಈ ಕೃತಿಯನ್ನು ಹೆಗ್ಗೋಡಿನ ಅಕ್ಷರ ಪ್ರಕಾಶನ ಪ್ರಕಟಿಸಿದ್ದು, ಬೆಲೆ ₹170.

ಪೀಠಿಕಾ ಪ್ರಕರಣ

222 ಪುಟಗಳ ಈ ಕೃತಿಯನ್ನು ವಿಟ್ಲದ ನಿವೇಶ ಪ್ರಕಾಶನ ಪ್ರಕಟಿಸಿದ್ದು, ಬೆಲೆ ₹180.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT